ಗುರುವಿನ ಕರುಣೆಯ ಕಡಲಲಿ ನಿಂದು…

ಗುರುವಿನ ಕರುಣೆಯ ಕಡಲಲಿ ನಿಂದು…

ಹುಟ್ಟಿನಿಂದ ಸಾಯೋತನಕ ಒಂದಿಲ್ಲ ಒಂದು ವಿಷಯದ ಕುರಿತು ಕಲಿಯುತ್ತಲೇ ಇರುತ್ತೆವೆ.      ನಮ್ಮ ಜೀವನದಲ್ಲಿ ಗುರುಗಳು, ತಂದೆತಾಯಿಗಳು,ಹಿರಿಯರು ಸಾಕಷ್ಟು ರೀತಿಯಲ್ಲಿ ಪ್ರೇರಣೆ ನೀಡಿ ಪ್ರೋತ್ಸಾಹ ನೀಡಿ ಕಲಿಸುತ್ತಲೆ ಇರುತ್ತಾರೆ.ತಪ್ಪು ಮಾಡಿದಾಗ ಬೈದು ಬುದ್ಧಿ ಹೇಳಿ ತಿದ್ದುತ್ತಾರೆ. ಮಣ್ಣಿನ ಮುದ್ದೆಗೆ ಸುಂದರ ರೂಪ ನೀಡುತ್ತಾರೆ. ಕಾಡುಗಲ್ಲನ್ನು ಮೂರ್ತಿಯನ್ನಾಗಿಸುವಲ್ಲಿ ಸಾಕಷ್ಟು ಶ್ರಮಿಸುತ್ತಾರೆ. ಕೆಲವು ಸಮಯದಲ್ಲಿ ಬೈದು, ಕೋಪಮಾಡಿಕೊಂಡು ನಮ್ಮ ಜೀವನದ ಸುಧಾರಣೆಗೆ ಸದಾ ನೆರವಾಗುತ್ತಾರೆ.” ಗುರು ಬ್ರಹ್ಮ ಗುರುರ್ವಿಷ್ಣುಃ ಗುರುದೇವೋ ಮಹೇಶ್ವರ.
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ”ಎಂಬ ಗುರುವಿನ ಮಹತ್ವವನ್ನು ಸಾರುವ ಈ ಶ್ಲೋಕ ಸದಾ ಎಲ್ಲರ‌ ಮನದಲಿ ಅನುರಣಿಸುತ್ತಲೇ ಇರುತ್ತದೆ.ಮುಂದೆ ಗುರಿ ಹಿಂದೆ ಗುರು ಇದ್ದಾಗ ಮಾತ್ರ ಜೀವನ ಯಶಸ್ಸು ಪಡೆಯಲು ಸಾಧ್ಯ. ಪ್ರತಿಯೊಬ್ಬರ ಜೀವನದಲ್ಲಿ ಭಿನ್ನ- ಭಿನ್ನ ರೂಪಗಳಲ್ಲಿ ಗುರು ಜೀವನ ಪಾವನ ಮಾಡುತ್ತಾನೆ.
ಅಂತ ಶ್ರೇಷ್ಠ ಗುರುಗಳನ್ನು ಪಡೆದ ನಾವೆಲ್ಲರೂ ಧನ್ಯರು. ಅಕ್ಷರ ಮಾತ್ರಂ ಕಲಿಸಿದಾತ ಗುರು. ಗುರುವಿನ ಕರುಣೆಯ ಸಾಗರದಲ್ಲಿ ನಾವೆಲ್ಲರೂ ಮಿಂದೆದ್ದವರು. ಅಂತಹ ಒಬ್ಬ ಉತ್ತಮ ಗುರುವಿನ ಕುರಿತು ನಾನಿಲ್ಲಿ ಹೇಳಹೊರಟಿರುವೆ.
ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿಯಲ್ಲಿದ್ದಾಗ ನಾವು ಒಟ್ಟು 27 ಜನ ಹುಡುಗಿಯರಿದ್ದೆವು. ನಮ್ಮ ಕ್ಲಾಸ್ ಟೀಚರ್ ಆಯ. ಎಸ್. ಹಿರೇಮಠ್ ಅಂತ ಇದ್ದರು ಅವರು ಸದಾ ಬಿಳಿಯ ಧೋತರ ಹಾಗೂ ಬಿಳಿಯ ಶರ್ಟ್ ತಲೆಗೆ ಬಿಳಿಯ ಟೋಪಿ ಹಾಕಿಕೊಂಡು ಶಾಲೆಗೆ ಬರುತ್ತಿದ್ದರು.ದೇಶಿಯ ದಿರಿಸಿನಲ್ಲಿ ತುಂಬಾ ಚೆನ್ನಾಗಿಕಾಣುತ್ತಿದ್ದರು. ತರಗತಿಯ ಎಲ್ಲಾ ವಿಷಯಗಳನ್ನು ಒಬ್ಬರೇ ಕಲಿಸುತ್ತಿದ್ದರು. ಒಂದು ದಿನ ಕಪ್ಪುಹಲಗೆಯ ಮೇಲೆ ಬೀಜ ಗಣಿತದ ಒಂದು ಸಮೀಕರಣ ಲೆಕ್ಕ ಕೊಟ್ಟು ನಮಗೆ ಮಾಡಲು ಹೇಳಿದರು. ಸರದಿಯ ಪ್ರಕಾರ ಒಬ್ಬೊಬ್ಬರಾಗಿ ಲೆಕ್ಕ ಬಿಡಿಸಲು ಹೋಗಿ ಉತ್ತರ ಬಾರದೆ ವಾಪಸ್ ಬರುತ್ತಿದ್ದೆವು. ಲೆಕ್ಕ ಎಲ್ಲರೂ ಬಿಡಿಸುತ್ತಿದ್ದರು ಆದರೆ ಉತ್ತರ ಮಾತ್ರ ಸರಿ ಬರಲಿಲ್ಲ. ಗುರುಗಳಿಗೆ ಕೆಂಡದಂತಹ ಕೋಪ ಬಂತು. ದಿನಾನೂ ಲೆಕ್ಕ ಹೇಳಿ ಕೊಟ್ಟರೂ ಇಂಥ ಸರಳ ಲೆಕ್ಕ ನಿಮಗೆ ಉತ್ತರ ಸಿಗುತ್ತಿಲ್ಲ ಎಂದರೆ ಏನರ್ಥ, ಎಲ್ಲರನ್ನೂ ಏಕಕಾಲಕ್ಕೆ ಎದ್ದು ನಿಲ್ಸಿದರು.ಅವರ ಕೋಪಕ್ಕೆ ನಾವೆಲ್ಲಾ ಗುರಿಯಾಗಿದ್ದೆವು. ತರಗತಿಯ ಪ್ರಥಮ ಸಾಲಿನಲ್ಲಿ ಪ್ರಥಮವಾಗಿ ಕುಳಿತಿದ್ದ ನನಗೆ ಬಲಗೈಗೆ ಜೋರಾಗಿ ಬೆತ್ತದ ಪೆಟ್ಟು ಬಿತ್ತು. ಕೈ ಪಟ್ಟಂತ ಅವಾಜ್ ಬಂತು. ನಂತರ ಉಳಿದವರ ಎಲ್ಲರಿಗೂ ಬೆತ್ತದ ರುಚಿ ಸಿಕ್ಕಿತ್ತು. ಅವರ ಶ್ರಮಕ್ಕೆ ನಾವೆಲ್ಲಾ ತನ್ನಿರೆರಚಿದಂತಾಗಿತ್ತು. ಹೀಗಾಗಿ ಅವರ ಸಿಟ್ಟು ಸಹಜವೇ ಸರಿ. ನಂತರ ಗುರುಗಳು ಬೋರ್ಡ್ ಮೇಲೆ ಲೆಕ್ಕವನ್ನು ಬಿಡಿಸಿ ಸರಿ ಉತ್ತರ ತೋರಿಸಿದರು. ಇವತ್ತಿಗೂ ನನ್ನ ಬಲಗೈ ಜಾಡಿಸಿದರೆ ಛಟ್ಟಂತ ಆವಾಜ್ ಬರುತ್ತೆ. ಆಗ ನನ್ನ ಗುರುಗಳ ನೆನಪು ತೇಲಿ ಬರುತ್ತದೆ. ಬೆತ್ತದ ರುಚಿ ನನ್ನನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಲು ಪ್ರೇರೇಪಿಸಿದ್ದು ಮಾತ್ರ ಸತ್ಯ.”  ಛಮ್ ಛಮ್ ಛಡಿವಿದ್ಯಾ ಘಂ ಘಂ“ಎಂಬ ಮಾತು ಸತ್ಯವೆನಿಸಿತು.

ಘಟನೆ-2_
ಸಿಲೆಬಸ್ ಎಲ್ಲಾ ಮುಗಿಸಿ ನಮ್ಮ೭ ನೇ ತರಗತಿ ಪಬ್ಲಿಕ್ ಪರೀಕ್ಷೆ ಹತ್ತಿರ ಬಂತು. ಎರಡು ಮೂರು ಸಲ ರಿವಿಜನ್  ಕೂಡ ಆಗಿತ್ತು. ಪಬ್ಲಿಕ್ ಪರೀಕ್ಷೆಯ ನಮ್ಮೂರಲ್ಲಿಯೇ ಇತ್ತು. ಆದರೂ ಶಾಲೆಯಿಂದ ನಮ್ಮ ಮನೆ ಒಂದು ಕಿಲೋಮೀಟರ್ ದೂರ ಇತ್ತು. ಆಗ ಎರಡು ಹೊತ್ತಿನ ಶಾಲೆ ಇತ್ತು. ಮುಂಜಾನೆ ಏಳುವರೆ ಇಂದ ಮಧ್ಯಾಹ್ನ ಹನ್ನೊಂದುವರೆ ತನಕ ಒಂದು ಶಿಪ್ಟ. ಮಧ್ಯಾಹ್ನ 2ರಿಂದ ಸಂಜೆವರೆಗೆ ಮತ್ತೊಂದು ಶಿಫ್ಟ್. ಹೀಗೆ ಎರಡೆರಡು ಸುತ್ತು ಶಾಲೆಗೆ ನಡೆದು ಬರುತ್ತಿದ್ದೆ. ಪಬ್ಲಿಕ್ ಪರೀಕ್ಷೆಯ ಮೊದಲ ದಿನ ಮೊದಲ ಪೇಪರ್ 10-30ಕ್ಕೆ ಇತ್ತು. ನಾನು ಇನ್ನೂ ರೆಡಿಯಾಗಿರಲಿಲ್ಲ. ಹಾಲ್ ಟಿಕೆಟ್, ರಟ್ಟಪ್ಯಾಡ,.ಕಂಫಾಸ ಜೋಡಿಸುತ್ತಾ ಲೇಟಾಗಿತ್ತು. ಹಣೆಗೆ ಕುಂಕುಮ ಹಚ್ಚುತ್ತಾ ಕನ್ನಡಿ ಮುಂದೆ ನಿಂತಿದ್ದೆ. ಅಷ್ಟೊತ್ತಿಗೆ ಸೈಕಲ್ ಟ್ರೈನ್ ಟ್ರೈನ್ ಶಬ್ದ ಆಯ್ತು. ನನ್ನ ಹಿರೇಮಠ ಗುರುಗಳು ಕೋಪದಿಂದ ಬಂದಿದ್ದರು.ಏ,.. ಗಣಾಚಾರಿ ಟೈಂ ನೋಡಿಯನ ಅಂತ ಬೈದರು. (ನನ್ನ ತವರುಮನೆ ಅಡ್ಡಹೆಸರು ಗಣಾಚಾರಿ) ನಿನ್ನ ನಂಬರ್ ಎಲ್ಲಿ ಬಂದದ ಅಂತ ನೋಡಿಕೊಂಡು ಬಂದಿ ಏನು? ನೀನು ಇನ್ನು ಯಾವಾಗ ಬರಾಕಿ ಅಂತ ಅನ್ನುತ್ತ ಬೈದರು. ಅವರ ದಿನನಿತ್ಯದ ಸಾಥಿ ಸೈಕಲ್ಲು ತಂದಿದ್ದರು. ನಮ್ಮ ತಂದೆಗೆ ಏನ್ರೀ ಸರ್ ನೀವ ಆದರೂ ಹೇಳಬಾರದ… ಟೈಮ್ ಆಗಿದೆ ಎಂದು. ಹಿಂದಿನ ಸೀಟಿನಲ್ಲಿ ನನ್ನನ್ನು ಕೂರಿಸಿಕೊಂಡು ಪರೀಕ್ಷಾ ಸೆಂಟರಿಗೆ ಬಂದರು. ಕೊಠಡಿಯ ಮಧ್ಯದಲ್ಲಿದ್ದ ನನ್ನ ನಂಬರ್ ತೋರಿಸಿ ಕೂಡಲು ಹೇಳಿದರು. ಗಾಬರಿಯಾಗಬೇಡ ಚೆನ್ನಾಗಿ ಬರೆ. ನನ್ನ ಸಿಟ್ಟಿನಿಂದ ಬೇಜಾರು ಮಾಡ್ಕೋಬೇಡ ಓದಿದ್ದನ್ನು ನೆನಪಿಸಿಕೊಂಡು ಪೇಪರನ್ನು ಸರಿಯಾಗಿ ಮಾಡು ಅಂತ ಪ್ರೀತಿಯಿಂದ ತಲೆ ನೇವರಿಸಿ ಹೊರನಡೆದರು.”ಎಲ್ಲಿ ಸಿಟ್ಟು ಇರುತ್ತೋ, ಅಲ್ಲಿ ಪ್ರೀತಿ,ಮಮತೆ ಇರುತ್ತೆ”ಇದು ನಾನು ನನ್ನ ಗುರುಗಳಿಂದ ಕಲಿತ ಪಾಠ. ಆ ವರ್ಷ ಪಬ್ಲಿಕ್ ಪರೀಕ್ಷೆಯಲ್ಲಿ ಸೆಂಟರಿಗೆ ನಾನು ದ್ವಿತೀಯಳಾಗಿ ಉತ್ತೀರ್ಣನಳಾದೆ. ನನ್ನ ಗುರುಗಳು ತುಂಬಾ ಖುಷಿಪಟ್ಟರು.
ಹೀಗೆ ನೆನಪಿನ ಸುರಳಿಗಳನ್ನು ಬಿಚ್ಚುತ್ತಾ ಹೋದರೆ ಅದೆಷ್ಟೂ ನೆನಪುಗಳು ಇನ್ನೂ ಮಾಸದೆ ಸೃತಿಪಟಲದಲ್ಲಿ ಹಾಗೆ ಉಳಿದಿವೆ.” ಶಿಕ್ಷಕರ ದಿನಾಚರಣೆ” ಆಚರಿಸುತ್ತಿರುವ ಈ ಸಮಯದಲ್ಲಿ ಯಾಕೋ ಇದನ್ನೆಲ್ಲಾ ಬರೆಯಬೇಕೆನಿಸಿತು. ಆ ನನ್ನ ಪೂಜ್ಯ ಗುರುಗಳು ನನ್ನ ನೆನಪಿನಿಂದ ಎಂದಿಗೂ ದೂರ ಹೋಗಲಾರರು.” ಹರ ಮುನಿದರೆ ಗುರು ಕಾಯುವನು” ಎನ್ನು ತ್ತಾರೆ. ಗುರು ಮುನಿದರೆ….. ಎಂಬುದಕ್ಕೆ ಉತ್ತರ ಕಂಡುಕೊಂಡಿದ್ದೆ.   ಕಾಯುವವ ಅವನೇ ಕಟ್ಟುವವ ಅವನೇ ನನಗೆ ಅಂದೇ ತಿಳಿಯಿತು. ಗುರುವಿನ ಕರುಣೆಯ ಜಲದಲಿ ನಿಂದು ಪುನೀತಳಾದೆ.ಭಾವಿ ಜೀವನದ ಯಶೋಗಾಥೆ ಬರೆದ ಆ ನನ್ನ ಗುರುವನ್ನು ಮರೆಯಲಾರೆ. ನನ್ನ ಜೀವನದ ದಿಕ್ಕನ್ನು ಬದಲಿಸಿದ ನನ್ನ ಗುರುವಿಗೆ ನಮೋ ನಮಃ. ,”ಗುರುವೇನ ಮಹಾ”,ಎನ್ನುವ ಇಂದಿನ ಪೀಳಿಗೆಗೆ,ಏನು ಗುರು ಎಂದು ಸಲೀಸಾಗಿ ಮಾತಾಡುವ ಇಂದಿನ ಯುಗದಲ್ಲಿ ತುಂಬಾ ಬೇಜಾರು ಆಗುತ್ತೆ. ಏಕಲವ್ಯನಂಥ ಗುರು ಭಕ್ತಿ ಇಂದು ಬೇಕಿದೆ.  ವಿದ್ಯಾರ್ಥಿಗಳು ಜೀವನ ಪ್ರೀತಿ ಬೆಳೆಸಿಕೊಳ್ಳಬೇಕಿದೆ., ,”ಜೀವನ ನಿಂತ ನೀರಾಗಿದೆ ಸದಾ ಹರಿಯುವ ನೀರಿನಂತಿರಬೇಕು” ಎಂಬ ಗುರುವಿನ ಮಾತು ನನ್ನ ಕಿವಿಯಲ್ಲಿ ಇಂದೂ ಅನುರಣಿಸುತ್ತಿದೆ. ನನ್ನ ಗುರುಗಳಿಗೆ ಸದಾ ಚಿರಋಣಿಯಾಗಿರುವೆ.
ಹಿಂದಿಯ ಒಂದು ದೋಹಾ ಇಲ್ಲಿ ನೆನಪಿಗೆ ಬರುತ್ತಿದೆ.” ಗುರು ತೊ ಐಸಾ ಹೋನಾ ಚಾಹಿಯೇ ಸಿಖ ಸೆ ಕುಚ್ ನಹಿ ಲೆಯ*, ಸಿಕ ತೊ ಐಸಾ ಹೋನಾ ಛಾಹಿಯೆ ಗುರು ಕೋ ಸಬ ಕುಚ್ ದೇಯ” ಅರ್ಥಾತ್ ಗುರು ಶಿಷ್ಯನಿಂದ ಏನನ್ನು ಕೇಳಬಾರದು, ಹಾಗೆಯೇ ಶಿಷ್ಯನು ಗುರುವಿಗೆ ಎಲ್ಲವನ್ನು ಕೊಡುವಂತಿರಬೇಕು ಇದು ಗುರು ಶಿಷ್ಯರ ನಿಜವಾದ ಭಾಂಧವ್ಯ

 

 

 

ಜಯಶ್ರೀ.ಭ.ಭಂಡಾರಿ.
ಬಾದಾಮಿ.

Don`t copy text!