ಶರಣರ ವಚನಗಳಲ್ಲಿ ಬಸವಣ್ಣ ಗುರು ಲಿಂಗ ಜಂಗಮ

ಶರಣರ ವಚನಗಳಲ್ಲಿ ಬಸವಣ್ಣ ಗುರು ಲಿಂಗ ಜಂಗಮ

 

 

 

 

 

 

 

 

ಶರಣ ಚಳುವಳಿಯು ಮಹಾಮಾನವನ ಯಾತ್ರೆಯ ಮಹತ್ತರವಾದ ಸಾಧನ ಪಥವಾಗಿದೆ.ನಡೆನುಡಿಗಳ ಸಮನ್ವಯ ಲಿಂಗವೆಂಬುದು ಅರಿವಿನ ಅನುಸಂಧಾನ .ಏಕಕಾಲಕ್ಕೆ ಕಾಯ ಮತ್ತು ಕಾಯಕವನ್ನು ಶುದ್ಧೀಕರಿಸಿ ದಾಸೋಹದ ಮೂಲಕ ಸಾರ್ಥಕತೆ ಹೆಚ್ಚಿಸುವ ಸಾಧನ .ಲಿಂಗವನ್ನು ಗುರು ಜಂಗಮದ ಬಗೆಗಿನ ಹಲವು ಶರಣರ ಭಿನ್ನಭಿನ್ನ ಅನುಭವವನ್ನು ಇಲ್ಲಿ ನೋಡೋಣ .
ಬಸವಣ್ಣನವರಂತೂ ಲಿಂಗವ ಪೂಜಿಸಿ ಫಲವೇನು ಸಮರತಿ ಸಮಕಳೆ ಸಮಸುಖವನರಿಯದನ್ನಕ್ಕ ನದಿಯೊಳಗೆ ನದಿ ಬೆರೆಸಿದಂತೆ ಕೂಡಲಸಂಗಮ .
ಚೈತನ್ಯದ ಚಿತ್ಕಳೆ ಇಷ್ಟಲಿಂಗವು ನಿರಾಕಾರ ತತ್ವವ ಅರಿಯುವ ಸಾಕಾರ ಮೂರ್ತಿ ಅಷ್ಟೇ. ಅದನ್ನು ಅರ್ಚನೆ ನೇಮ ಧೂಪ ದೀಪಕ್ಕೆ ಒಳಪಡಿಸಿದರೆ ಅದು ಕೂಡ ಸ್ಥಾವರವೆನಿಸುತ್ತದೆ.
ಬಸವಣ್ಣನವರು ಹೇಳಿದಂತೆ ಎರೆದರೆ ನೆನೆಯದು ಮರೆದರೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆಗೆ ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು.ಎಂದು ಹೇಳಿ ಲಿಂಗ ನಿರಾಕಾರದ ಸಾಕಾರ ಕುರುಹು ಮಾತ್ರ ಎಂದು ಹೇಳಿ ಲಿಂಗವವು ಜ್ಞಾನ ಕ್ರಿಯೆಯ ಸಮನ್ವಯತೆ ಎಂದು ಹೇಳಿದರು. ಇದನ್ನೇ ಬೇರೆ ಬೇರೆ ಶರಣರು ತಮ್ಮ ವಿಚಾರವನ್ನು ಪ್ರಭುದ್ಧವಾಗಿ ಸಾದರ ಪಡಿಸಿದ್ದಾರೆ .

ಶರಣರ ಚಳುವಳಿಯ ಮಹಾ ಜ್ಞಾನಿ ಅಲ್ಲಮರು ಇಷ್ಟಲಿಂಗದ ಕುರಿತಾಗಿ ಎಂದೆನ್ನತ್ತಾರೆ.

ಕಾಣಬಾರದ ಲಿಂಗವು

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ
ಎನಗಿದು ಸೋಜಿಗ ಎನಗಿದು ಸೋಜಿಗ
ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು.
                                   -ಅಲ್ಲಮ ಪ್ರಭುಗಳು

ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದಡೆ

ಲಿಂಗವೆನ್ನುವುದು ಜ್ಞಾನ ಸಮಷ್ಟಿಯ ಭಾವ ಕಾಣಲಾಗದ ಆನುಪಮ ಅವಿರಳ ಅವ್ಯಕ್ತ ಪ್ರಜ್ಞೆ. ಅದು ಕಾಣಲಾಗದು ಕೇವಲ ಭಕ್ತನ ಮನುಷ್ಯನ ಅರಿವಿಗೆ ಬರುವ ಸೂಕ್ಷ್ಮ ಭಾವ .
ಅಂತಹ ಸ್ವಾನುಭಾವದ ಜ್ಞಾನ ಅರಿವಿನ ಕುರುಹು ಲಿಂಗವಾಗಿ ಕರಸ್ಥಲಕ್ಕೆ ಬಂದಡೆ .ಇಲ್ಲಿ ಕಾರಣ ತತ್ವವವು ಸೂಕ್ಶ್ಮ ತತ್ವವನ್ನು ಹೊತ್ತುಕೊಂಡು ಸ್ಥಾವರ ಅಥವಾ ಸ್ಥೂಲ ಲಿಂಗವಾಗುತ್ತದೆ . ಕಾರಣ ಸೂಕ್ಷ್ಮತೆಯ ಸಂಕೇತವಾಗಿ ಅರಿವಿನ ಕುರುಹಾಗಿ ಲಿಂಗವು ಕರಸ್ಥಲಕ್ಕೆ ಬಂದಿತು ಎಂದೆನ್ನುತ್ತಾರೆ ಅಲ್ಲಮರು.

ಎನಗಿದು ಸೋಜಿಗ ಎನಗಿದು ಸೋಜಿಗ
ಎನಗಿದು ಸೋಜಿಗ ಎನಗಿದು ಸೋಜಿಗ ತಮಗೆ ಲಿಂಗವೂ ಕೂಡಾ ಸ್ಥಾವರವಾಗುತ್ತದೆ ಜಡವಾಗುತ್ತದೆ ಲಿಂಗವೆಂಬ ಪ್ರಜ್ಞೆ ಅಂತರಂಗದಲ್ಲಿ ನಿರಂತರವಾಗಿ ಅನುಸಂಧಾನ ಮಾಡುವಾಗ ಹೊರಗಿನ ಕರಸ್ಥಲದ ಲಿಂಗವು ಬೇಕೇ ? ಎಂದು ಪ್ರಶ್ನಿಸುತ್ತಾ ನನಗೆ ಇದು ಸೋಜಿಗವೆನಿಸುತ್ತದೆ. ಅಲ್ಲಮರ ಇನ್ನೊಂದು ವಚನದಲ್ಲಿ ಹೊಟ್ಟೆಯೊಗರದ ಮೇಲೆ ಕಲ್ಲು ಕಟ್ಟಿದಡೆ ಅದು ಲಿಂಗವೇ ಕಟ್ಟಿದಾತ ಗುರುವೇ ಕಟ್ಟಿಸಿಕೊಂಡಾತ ಶಿಷ್ಯನೇ ? ಅಂದರಷ್ಟೇ ಲಿಂಗ ದೀಕ್ಷೆ ಷೋಡಶೋಪಚಾರಕ್ಕೆ ಮತ್ತೆ ಹತ್ತಿರವಾಗುವ ಆಚರಣೆಗಳನ್ನು ಅಲ್ಲಮರು ಸಂಪೂರ್ಣ ಅಲ್ಲಗಳೆದಿದ್ದಾರೆ. ಶರಣರು ಪ್ರಗತಿಪರರು ತಮ್ಮ ಕಾಲ ಘಟ್ಟದಲ್ಲೂ ಇಂತಹ ಚರ್ಚೆಗೆ ಮುಂದಾಗಿದ್ದರು.

ಅಹುದೆನಲಮ್ಮೆನು ಅಲ್ಲೆನಲಮ್ಮೆನು
ಇಷ್ಟಲಿಂಗವು ಅಪ್ರಮೇಯ ಅಪ್ರಮಾಣ ಅಪ್ರತಿಮ ಅಗೋಚರ ಅಗಮ್ಯ ಹೀಗೆ ಲಿಂಗ ಭಾವವನ್ನು ಶರಣರು ಮಹಾಗುರು ಬಸವಣ್ಣನವರು ಹೇಳಿ ಒಪ್ಪಿಕೊಂಡಾಗ ಈ ಸ್ಥೂಲ
ಗುಣ ಸಹಿತ ಇಂದ್ರಿಯ ವ್ಯವಹಾರಕ್ಕೆ ಒಳಪಡುವ ಲಿಂಗ ಕ್ರಿಯೆ ಲಿಂಗಾನುಭಾವವನ್ನು ಅಹುದು ಎಂದೆನ್ನಲಾಗದು ಅಥವಾ ಅಲ್ಲವೆಂದೆನ್ನಲಾಗದು.
ಅಲ್ಲಮರು ಬಸವಣ್ಣನವರು ಸೃಷ್ಟಿಸಿದ ಇಷ್ಟಲಿಂಗದ ಉದ್ದೇಶದಿಂದ ಲಿಂಗವನ್ನು ಒಪ್ಪಿಕೊಂಡರೂ ಸಹಿತ ಅದು ಆಚರಣೆಗೆ ಬಾಹ್ಯ ಆಡಂಭರಕ್ಕೆ ಸಿಲುಕಿದಾಗ ಅದು ತನ್ನ ಮೂಲ ಉದ್ದೇಶ ಹಾಗು ಸಾರ್ಥಕತೆಯನ್ನು ಕಳೆದುಕೊಳ್ಳುತ್ತದೆ ಎಂದೆನ್ನುವ ಅಲ್ಲಮರು ಒಮ್ಮೊಮ್ಮೆ ಕರಸ್ಥಲಕ್ಕೆ ಲಿಂಗವಾಗಿ ಬರುವ ಪ್ರಕ್ರಿಯೆಯನ್ನುಒಪ್ಪುವದಿಲ್ಲ ಅಲ್ಲಗಳೆಯುವರು .
ಅರಿಯದಂತಿರಲೊಲ್ಲದೆ, ಅರಿದು ಕುರುಹಾದೆಯಲ್ಲಾ ! ಅರಿವು ಅನುಭವಿಸಿ ಅರಿಯದಂತಿರಬೇಕು ಅದನ್ನು ಮತ್ತೆ ಮತ್ತೆ ಅರಿಯಲು ಹೋದಾಗ ಅದು ಹೊರಗಿನ ಜಗತ್ತಿಗೆ ಕರಸ್ಥಲದ ಲಿಂಗವಾಗುತ್ತದೆ ಇಂತಹ ನಿಲುವನ್ನು ಅಲ್ಲಮರು ಸಾರಾಸಗಟಾಗಿ ಒಪ್ಪುವದಿಲ್ಲ. ಲಿಂಗಯೋಗದ ಆಶಯವನ್ನು ತುಂಬಿದ ಮನದಿಂದ ಬರಮಾಡಿಕೊಳ್ಳುವ ಅಲ್ಲಮರು ಅದರ ಜೊತೆಗೆ ಜೋತು ಬಿದ್ದು ಕಾಯಕ್ಕೆ ಲಿಂಗವಾಗಿ ಕಾಯಕ ಮರೆಯುವದನ್ನು ಅರಿವಿನ ಅನುಸಂಧಾನವನ್ನು ಮಾಡದಿದ್ದರೆ ಲಿಂಗವು ಕಲ್ಲಾಗುತ್ತದೆ ಅದನ್ನು ಒಪ್ಪಿಕೊಳ್ಳಲಾಗುವದಿಲ್ಲ ಎಂದಿದ್ದಾರೆ.

ಗುಹೇಶ್ವರ ಲಿಂಗವು ನಿರಾಳ ನಿರಾಕಾರ ಬಯಲು.
ಕಾಣದ ವಸ್ತು, ವಿಷಯ ಅನುಭವ ಕೈಗೆ ಬರುವುದು ಎಷ್ಟು ಸೋಜಿಗವೋ ಅಷ್ಟೇ ಅದನ್ನು ನಿರಾಕಾರ ತತ್ವದಲ್ಲಿ ನೋಡಬೇಕೆನ್ನುವುದು ಅಲ್ಲಮರ ಹಂಬಲ. ಲಿಂಗವೆಂಬುದು ಅಂತರಂಗ ಬಹಿರಂಗ ಶುಚಿಗೊಳಿಸುವ ಸಾಧನವಾಗಿದೆ.ಇಂದ್ರಿಯ ಚಪಲತೆಯನ್ನು ನಿಗ್ರಹಿಸುವ ತನ್ನೊಳಗಿರುವ ಅಗಾಧವಾದ ಜಂಗಮಚೇತನವನ್ನು ಗಟ್ಟಿಗೊಳಿಸುವ ವ್ಯವಧಾನ . ಆಧ್ಯಾತ್ಮಿಕ ಸಾಧನೆ ಮಾಡುವವನಿಗೆ ಲಿಂಗವು ನಿರಾಕಾರ ನಿರಾಳ ಮತ್ತು ಬಯಲು. ನಿರಾಳವೆಂಬ ಕೂಸಿಂಗೆ ಬೆಣ್ಣಿಯನಿಕ್ಕಿ ಹೆಸರನ್ನಿಟ್ಟವರಾರು ಅಕಟಕಟಾ ಅದು ಶಬ್ದದ ಲಜ್ಜೆ ನೋಡಾ ಎಂದಿದ್ದಾರೆ ಅಲ್ಲಮರು .ಇದು ಜಗತ್ತಿನ ಅತ್ಯಂತ ಉತ್ಕೃಷ್ಟವಾದ ಅದಾತ್ತೀಕರಣದ ( Sublimation )ಅನುಭಾವವು.
ಕರಸ್ಥಲದ ಇಷ್ಟಲಿಂಗವನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಅದರ ಹಿಂದಿನ ಆಶಯಕ್ಕೆ ಮುಖ ಮಾಡಲು ಭಕ್ತನಿಗೆ ಸೂಚಿಸಿದಂತಿದೆ ಈ ವಚನ .

ಕಾಣಬಾರದ ಗುರು

ಅರಿವೇ ಗುರು ಆಚಾರವೆ ಲಿಂಗ ಅನುಭಾವವೆ ಜಂಗಮ
ಗುರು ವ್ಯಕ್ತಿ ಅಲ್ಲ ಲಿಂಗ ವಸ್ತು ಅಲ್ಲ ಜಂಗಮ ಜಾತಿ ಅಲ್ಲ

ಕಾಣಬಾರದ ಗುರು ಕಣ್ಗೆ ಗೋಚರವಾದಡೆ
ಹೇಳಲಿಲ್ಲದ ಬಿನ್ನಪ, ಮುಟ್ಟಲಿಲ್ಲದ
ಹಸ್ತಮಸ್ತಕಸಂಯೋಗ.
ಹೂಸಲಿಲ್ಲದ ವಿಭೂತಿ ಪಟ್ಟ,
ಕೇಳಲಿಲ್ಲದ ಕರ್ಣಮಂತ್ರ.
ತುಂಬಿ ತುಳುಕದ ಕಲಶಾಭಿಷೇಕ,
ಆಗಮವಿಲ್ಲದ ದೀಕ್ಷೆ,
ಪೂಜೆಗೆ ಬಾರದ ಲಿಂಗ,
ಸಂಗವಿಲ್ಲದ ಸಂಬಂದ.
ಸ್ವಯವಪ್ಪ ಅನುಗ್ರಹ,
ಆನುಗೊಂಬಂತೆ ಮಾಡಾ ಗುಹೇಶ್ವರಾ.

ಅಲ್ಲಮ ಪ್ರಭುದೇವರ ವಚನ
ಸವಸಂ : 2, ವಚನ-1076 ಪುಟ-320.

ಗುರು ಶಿಷ್ಯರ ಸಂಬಂಧ ಅರಿವು ಆಚಾರವೆ ಹೊರತು ಗೊಡ್ದು ಸಂಪ್ರದಾಯ ಅಲ್ಲ ಎಂಬುದುಅಲ್ಲಮರ ಸ್ಪಷ್ಟವಾದ ನಿಲುವು

ಶಿವ ಗುರುವೆಂದು ಬಲ್ಲಾತನೇ ಗುರು
ಶಿವ ಲಿಂಗವೆಂದು ಬಲ್ಲಾತನೇ ಗುರು
ಶಿವ ಜಂಗಮವೆಂದು ಬಲ್ಲಾತನೇ ಗುರು
ಶಿವ ಪ್ರಸಾದವೆಂದು ಬಲ್ಲಾತನೇ ಗುರು
ಶಿವ ಆಚಾರವೆಂದು ಬಲ್ಲಾತನೇ ಗುರು
ಇಂತಿ ಪಂಚವಿಧ ಪಂಚ ಬ್ರಹ್ಮವೆಂದು
ತಿಳಿದ ಮಹಾ ಮಣಿಹ ಸಂಗನ ಬಸವಣ್ಣ
ಎನಗೆಯೂ ಗುರು ನಿನಗೂ ಗುರು
ಜಗಕೆಲ್ಲಾ ಗುರು ಕಾಣಾ ಗುಹೇಶ್ವರಾ

ಅಲ್ಲಮರು ಬಸವಣ್ಣನವರ ವ್ಯಕ್ತಿತ್ವವನ್ನ ಮತ್ತು ಅವರೊಳಗಿನ ಅಸಾಧಾರಣ ದಾರ್ಶನಿಕತ್ವವನ್ನ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.
ಬಸವಣ್ಣ ಮತ್ತು ಅವರ ಸಮಕಾಲೀನ ಶರಣರು ವೈಚಾರಿಕತೆ ವೈಜ್ಞಾನಿಕತೆ ನೈಜ ಬದುಕಿನ ಪ್ರತಿಪಾದನೇಮಾಡಿ ಸೃಷ್ಟಿ ಸಮಷ್ಟಿ ವ್ಯಕ್ತಿಯ ಜವಾಬ್ದಾರಿಗಳನ್ನು ಗೊತ್ತು ಮಾಡಿಕೊಟ್ಟಿದ್ದಾರೆ.ಶಿವನೆಂಬುದು ಶರಣ ದೃಷ್ಟಿಯಲ್ಲಿ ಮಂಗಲ ಕಲ್ಯಾಣ ಜ್ಞಾನ ಎಂಬ ಪಾರಿಭಾಷಿಕ ಅರ್ಥಗಳು . ಶಿವ ಶಂಕರನಲ್ಲ ಶರಣರ ಶಿವ ಭಕ್ತನ ಹೃದಯದಲ್ಲಿ ಇರುವ ಅಗಾಧ ಜಂಗಮ ಚೈತನ್ಯವಾಗಿದೆ.
ಅಂತ ಪ್ರಜ್ಞೆಯೆ ಗುರು ಎಂದು ನಂಬಿರುವವನೇ ನಿಜವಾದ ಗುರು ಎಂದಿದ್ದಾರೆ. ಅರಿವಿನ ಆರಂಭವೇ ಗುರು .
ಕಲ್ಯಾಣದಲ್ಲಿ ವರ್ಗ ವರ್ಣ ಆಶ್ರಮ ಲಿಂಗ ಭೇದ ಹೊಡೆದು ಹಾಕಿ ಸಾರ್ವಕಾಲಿಕ ಸಮಕಾಲೀನ ಸಮತೆಯನ್ನು ನೀಡಿದ ಬಸವಣ್ಣ ಈ ನೆಲವು ಕಂಡ ಜಗತ್ತಿನ ಶ್ರೇಷ್ಠ ಸಮಾಜವಾದಿ ಚಿಂತಕ

ಶಿವ ನೆಂಬುದು ಚೈತನ್ಯ -ಅರಿವು ಜ್ಞಾನ ಮಂಗಳ ಎಂಬ ಪಾರಿಭಾಷಿಕ ಪದಗಳಲ್ಲಿ ಶರಣರು ಕಂಡಿದ್ದಾರೆ .

ಇನ್ನು ಚೆನ್ನ ಬಸವಣ್ಣನವರು ಸಾಧನೆಯ ಹಾದಿಯಲ್ಲಿ ಭಕ್ತ ಹೇಗೆ ಜಡವಾಗುವನು ಎಂದು ವಿಡಂಬಿಸಿದ್ದಾನೆ .
ಕವಿತ್ವ ಸಾಧಕರೆಲ್ಲ ಕಳವಳಿಸಿ ಹೋದರು
ವಿದ್ಯಾಸಾಧಕರೆಲ್ಲ ಬುದ್ದಿಗೆಟ್ಟರು
ತತ್ವ ಸಾಧಕರೆಲ್ಲ ಭಕ್ತಿಹೀನರಾದರು
ಲಿಂಗ ಸಾಧಕರೆಲ್ಲ ಭೂಭಾರಕರಾದರು
ಕೂಡಲಚೆನ್ನ ಸಂಗಮ ದೇವಾ
ನಿಮ್ಮ ಬಸವಣ್ಣ
ಜಂಗಮ ಸಾಧಕರಾಗಿ ಸ್ವಯಂಲಿಂಗವಾದನು ಎಂದೆನ್ನುತ್ತಾ ಕೂಡಲಚೆನ್ನ ಸಂಗಮ ದೇವಾ
ನಿಮ್ಮ ಬಸವಣ್ಣಜಂಗಮ ಸಾಧಕರಾಗಿ ಸ್ವಯಂಲಿಂಗವಾದ

ಕಾವ್ಯ ರಚನೆ ಕವಿತ್ವ ಸಾಧಕರು ಭಾವನೆಗಳ ಗಲಿಬಿಲಿಯಲ್ಲಿ ಕಳವಳಿಸಿ ಹೋದರು .ವಿದ್ಯಾಸಾಧಕರೆಲ್ಲ ವಿದ್ಯಾ ಸಾಧನೆ ಮಾಡುತ್ತಾ ಬುದ್ಧಿ ಭ್ರಷ್ಟರಾದರು ಬುದ್ದಿಗೆಟ್ಟರು ಎಂದು ಹೇಳುತ್ತಾ ತತ್ವ ಸಾಧಕರೆಲ್ಲ ಭಕ್ತಿಹೀನರಾದರು ತತ್ವ ಸಾಧನೆ ಮಾಡುತ್ತೇನೆ ಎಂದು ಹೊರಟವರು ಭಕ್ತಿಹೀನರಾದರು ,ಭಕ್ತಿ ಮರೆತು ಸ್ಥಾವರಿಕರಣಗೊಳಿಸಿ ಅನುಪಮಾ ತತ್ವವಾಗಲೇ ವಿರೂಪಗೊಳಿಸಿ ಭಕ್ತಿ ಮಾರ್ಗಕ್ಕೆ ದ್ರೋಹ ಬಗೆಯುವ ಹೀನ ಮನುಜರು ಎಂದೆನ್ನುತ್ತಾರೆ .ಲಿಂಗ ಸಾಧಕರೆಲ್ಲ ಭೂಭಾರಕರಾದರು -ಲಿಂಗವನ್ನು ಕಟ್ಟಿಕೊಂಡು ಲಿಂಗ ಸಾಧನೆ ಮಾತ್ರ ಮಾಡುತ್ತೇನೆ ಎಂದೆನ್ನುವ ಸಾಧಕರು ಭೂಮಿಗೆ ಭಾರವಾದರು ಎಂದು ಟೀಕಿಸಿದ್ದಾರೆ ಚೆನ್ನಬಸವಣ್ಣನವರು .ಕೂಡಲಚೆನ್ನ ಸಂಗಮ ದೇವಾ ನಿಮ್ಮ ಬಸವಣ್ಣಜಂಗಮ ಸಾಧಕರಾಗಿ ಸ್ವಯಂಲಿಂಗವಾದ- ಕಾಯವನ್ನು ಸತ್ಯ ಶುದ್ಧ ಕಾಯಕ ಮೂಲಕ ಲಿಂಗಮಯ ಮಾಡಿದವನು ಬಸವಣ್ಣ ಮಾತ್ರ ಎಬುದು ಹೆಮ್ಮೆ ಪಡುತ್ತಾರೆ ಚೆನ್ನ ಬಸವಣ್ಣ .

ವೈರಾಗ್ಯ ಮೂರ್ತಿ ಅಕ್ಕ ಮಹಾದೇವಿ ಕಲ್ಯಾಣಕ್ಕೆ ಬಂದು ಎಲ್ಲ ಶರಣರ ಭಾವಗಳಲ್ಲಿ ಬೆರೆತು ಮಹಾ ಮನೆಯ ಮಗಳಾಗಿ ತಾನು ಕಂಡ ಶರಣರ ದಿವ್ಯ ವ್ಯಕ್ತಿತ್ವವನ್ನು ಹರುಷದಿಂದ ಕೊಂಡಾಡಿದ್ದಾಳೆ.

ಬಸವಣ್ಣನೆ ಗುರು, ಪ್ರಭುದೇವರೆ ಲಿಂಗ,
ಸಿದ್ಧರಾಮಯ್ಯನೆ ಜಂಗಮ,
ಮಡಿವಾಳಯ್ಯನೆ ಜಂಗಮ,
ಚೆನ್ನಬಸವಣ್ಣನೆನ್ನ ಪರಮಾರಾಧ್ಯರು.
ಇನ್ನು ಸುಖಿಯಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯಾ. .

ಬಸವಣ್ಣ ತನ್ನ ಅರಿವಿನ ಗುರು,ಅಲ್ಲಮರು ತನ್ನ ಯೋಗದ ಲಿಂಗ ಸ್ವರೂಪಿಗಳು, ಸಿದ್ಧರಾಮರು ಮತ್ತು ಮಡಿವಾಳಯ್ಯನವರು ತನಗೆ ಜಂಗಮ ಸ್ವರೂಪಿಗಳು ಜ್ಞಾನ ಮತ್ತು ಕ್ರಿಯೆಗಳನ್ನು ಸಮನ್ವಯಿಸಿದವರು.ಚೆನ್ನ ಬಸವಣ್ಣ ತನಗೆ ಪರಮಾರಾಧ್ಯ ಎಂದು ತನ್ನ ಪರಮ ಸುಖದ ಬದುಕನ್ನು ಹೇಳುತ್ತಾಳೆ.

ದಿಟ್ಟ ಶರಣೆ ಆಯ್ದಕ್ಕಿ ಲಕ್ಕಮ್ಮ ಕಲ್ಯಾಣದಲ್ಲಿ ಬಂದು ಶರಣರ ಸಂಕುಲದಲ್ಲಿ ತಾನು ಕಂಡುಕೊಂಡ ಬೇರೆ ಬೇರೆ ಭಾವಗಳನ್ನು ಈ ರೀತಿಯಾಗಿ ಹೇಳಿದ್ದಾಳೆ.

ಬಸವಣ್ಣನ ಪ್ರಸಾದವಕೊಂಡು ಎನ್ನ ಕಾಯ ಶುದ್ಧವಾಯಿತ್ತಯ್ಯಾ.
ಚೆನ್ನಬಸವಣ್ಣನ ಪ್ರಸಾದವಕೊಂಡು ಎನ್ನ ಜೀವ ಶುದ್ಧವಾಯಿತ್ತಯ್ಯಾ.
ಮಡಿವಾಳಯ್ಯನ ಪ್ರಸಾದವಕೊಂಡು ಎನ್ನ ಭಾವ ಶುದ್ಧವಾಯಿತ್ತಯ್ಯಾ.
ಶಂಕರದಾಸಿಮಯ್ಯನ ಪ್ರಸಾದವಕೊಂಡು ಎನ್ನ ತನು ಶುದ್ಧವಾಯಿತ್ತಯ್ಯಾ.
ಸಿದ್ಧರಾಮಯ್ಯನ ಪ್ರಸಾದವಕೊಂಡು ಎನ್ನ ಮನ ಶುದ್ಧವಾಯಿತ್ತಯ್ಯಾ.
ಘಟ್ಟಿವಾಳಯ್ಯನ ಪ್ರಸಾದವಕೊಂಡು ಎನ್ನ ಪ್ರಾಣ ಶುದ್ಧವಾಯಿತ್ತಯ್ಯಾ.
ಅಕ್ಕನಾಗಾಯಮ್ಮನ ಪ್ರಸಾದವಕೊಂಡು ಎನ್ನ ಅಂತರಂಗ ಶುದ್ಧವಾಯಿತ್ತಯ್ಯಾ.
ಮುಕ್ತಾಯಕ್ಕಗಳ ಪ್ರಸಾದವಕೊಂಡು ಎನ್ನ ಬಹಿರಂಗ ಶುದ್ಧವಾಯಿತ್ತಯ್ಯಾ.
ಪ್ರಭುದೇವರ ಪ್ರಸಾದವಕೊಂಡು ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯಾ.
ಇವರು ಮುಖ್ಯವಾದ ಏಳುನೂರೆಪ್ಪತ್ತು ಅಮರಗಣಂಗಳ
ಪ್ರಸಾದವಕೊಂಡು ಬದುಕಿದೆನಯ್ಯಾ
ಮಾರೇಶ್ವರಪ್ರಿಯ ಅಮರೇಶ್ವರ .ನಿಮ್ಮ ಶರಣರ ಪಾದಕ್ಕೆ ಅಹೋರಾತ್ರಿಯಲ್ಲಿ ನಮೋ ನಮೋ ಎನುತಿರ್ದೆನು.

ಮೇಲಿನ ವಚನದಲ್ಲಿಯೂ ಕೂಡ ಆಯ್ದಕ್ಕಿ ಲಕ್ಕಮ್ಮ ಮಹಾಜ್ಞಾನಿ ಅಲ್ಲಮರಂತೆ ಮಡಿವಾಳ ಮಾಚಿದೇವನಲ್ಲಿ ತನ್ನ ಭಾವ ಶುದ್ಧಿಯನ್ನು ಕಾಣುತ್ತಾಳೆ ಎಂದರೆ ಮಡಿವಾಳ ಮಾಚಿದೇವರು ಎಷ್ಟೊಂದು ಶುದ್ಧವಾಗಿದ್ದರು ಎಂದು ತಿಳಿದು ಬರುತ್ತದೆ.

ಮಡಿವಾಳ ಮಾಚಿದೇವ ಅತ್ಯಂತ ದಿಟ್ಟ ಗಣಾಚಾರಿಯಾಗಿ ಕಲ್ಯಾಣದ ಎಲ್ಲ ಶರಣರ ಪ್ರೀತಿ ವಿಶ್ವಾಸ ಗಳಿಸಿದರು. ನಿತ್ಯ ನಿತ್ಯ ಬಸವನ ಮಹಾ ಮನೆಗೆ ಅನುಭವ ಮಂಟಪಕೆ ಬೇಕಾಗ ಹತ್ತಿದನು. ಮಡಿವಾಳ ಮಾಚಿದೇವರಿಗೆ ಬಸವಣ್ಣ ಅತ್ಯಂತ ಮೌಲಿಕ ಪ್ರೀತಿಯ ವ್ಯಕ್ತಿ . ಬಸವಣ್ಣ ಲಿಂಗ ತತ್ವದ ರೂವಾರಿ ಎಂದು ಭಕ್ತಿಪೂರ್ವಕ ನಿವೇದನೆ ಮಾಡಿಕೊಂಡಿದ್ದಾನೆ ಮಡಿವಾಳ ಮಾಚಿದೇವರು.

ಎತ್ತೆತ್ತ ನೋಡಿದಡೆ ಅತ್ತತ್ತ ಬಸವನೆಂಬ ಬಳ್ಳಿ.
ಎತ್ತಿ ನೋಡಿದಡೆ ಲಿಂಗವೆಂಬ ಗೊಂಚಲು.
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ.
ಆಯತ ಬಸವಣ್ಣನಿಂದ, ಸ್ವಾಯತ ಬಸವಣ್ಣನಿಂದ.
ಸನ್ನಹಿತವು ಬಸವಣ್ಣನಿಂದ,
ಗುರು ಬಸವಣ್ಣನಿಂದ, ಲಿಂಗ ಬಸವಣ್ಣನಿಂದ.
ಜಂಗಮ ಬಸವಣ್ಣನಿಂದ.
ಪಾದೋದಕ ಬಸವಣ್ಣನಿಂದ, ಪ್ರಸಾದ ಬಸವಣ್ಣನಿಂದ.
ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.
ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,
ಶೂನ್ಯ ಕಾಣಾ, ಕಲಿದೇವರದೇವಾ.

ಕಲ್ಯಾಣದ ತುಂಬೆಲ್ಲ ಬಸವನೆಂಬ ಬಳ್ಳಿ ಪಸರಿಸಿದೆ . ಆ ಬಳ್ಳಿಗೆ ಲಿಂಗವೆಂಬ ಅನೇಕ ತಾತ್ವಿಕ ಗೊಂಚಲಗಳು . ಒತ್ತಿ ಹಿಂಡಿದರೆ ಭಕ್ತಿ ಎಂಬ ರಸವು .
ಆಯತ ,ಸ್ವಾಯತ ,ಸನ್ನಿಹಿತ ,ಗುರು ,ಲಿಂಗ ,ಜಂಗಮ ,ಪಾದೋದಕ ಪ್ರಸಾದ ಬಸವಣ್ಣನಿಂದ ಹುಟ್ಟಿಕೊಂಡಿವೆ . ಅತ್ತ ಬಲ್ಲಡೆ ನೀವು ಕೇಳಿರೆ, ಇತ್ತ ಬಲ್ಲಡೆ ನೀವು ಕೇಳಿರೆ.ಬಸವಾ ಬಸವಾ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ,ಶೂನ್ಯ ಕಾಣಾ, ಕಲಿದೇವರದೇವಾ ಎಂದು ಸಮಗ್ರ ಸಮತೆಯ ಕ್ರಾಂತಿಯ ರೂವಾರಿ ಬಸವಣ್ಣ ಎಂದು ಮಡಿವಾಳ ಮಾಚಿದೇವ ಹೇಳಿಕೊಂಡಿದ್ದಾರೆ.

ಶರಣರು ಸ್ಥಿತಪ್ರಜ್ಞರು .ಅವರಿಗೆ ಸುಖ ಕಷ್ಟಗಳು ಬಿಸಿಲು ನೆರಳಿನಂತೆ , ಹೀಗಾಗಿ ಮಡಿವಾಳ ಮಾಚಿದೇವರು ತಮಗೆ ಸುಖ ಬಂದಲ್ಲಿ ದುಃಖ ಬಂದಲ್ಲಿ ಬಸವಣ್ಣನಾ ನೆನೆವೆನು ,ಲಿಂಗಾರ್ಚನೆ , ಜಂಗಮಾರ್ಚನೆ ಮಾಡುವಲ್ಲಿ ಬಸವಣ್ಣನ ನೆನಹು ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.ಇದು ಕಾರಣ, ಬಸವಣ್ಣ ಬಸವಣ್ಣಎನುತಿರ್ದೆನು ಕಾಣಾ, ಕಲಿದೇವಯ್ಯ ಎಂದು ಹೇಳುತ್ತಾ ಮಡಿವಾಳ ಮಾಚಿದೇವ ಬಸವಣ್ಣ ವ್ಯಕ್ತಿ ಮಾತ್ರವಾಗಿರದೆ ಶರಣ ಸಂಕುಲಕೆ ಶಕ್ತಿಯಾಗಿದ್ದರು ಮಂತ್ರ ಪುರುಷರಾಗಿದ್ದರು ಎಂದು ಅಭಿಮಾನದಿಂದ ಹೇಳುತ್ತಾನೆ.

ಸುಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ದುಃಖವೊಂದು ಕೋಟ್ಯಾನುಕೋಟಿ ಬಂದಲ್ಲಿ ಬಸವಣ್ಣನ ನೆನೆವೆ.
ಲಿಂಗಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಜಂಗಮಾರ್ಚನೆಯ ಮಾಡುವಲ್ಲಿ ಬಸವಣ್ಣನ ನೆನೆವೆ.
ಬಸವಣ್ಣನ ನೆನೆದಲ್ಲದೆ ಭಕ್ತಿಯಿಲ್ಲ. ಬಸವಣ್ಣನ ನೆನೆದಲ್ಲದೆ ಮುಕ್ತಿಯಿಲ್ಲ.
ಇದು ಕಾರಣ, ಬಸವಣ್ಣ ಬಸವಣ್ಣ
ಎನುತಿರ್ದೆನು ಕಾಣಾ, ಕಲಿದೇವರ ದೇವಾ .

ದಲಿತರ ಬಡವರ ಶ್ರಮಿಕರ ಅಸ್ಪ್ರಶ್ಯರ ಕಾರ್ಮಿಕರ ನೇತಾರ ಬಸವಣ್ಣ ಅವರಲ್ಲಿ ಆತ್ಮಶಕ್ತಿಗೆ ಭರವಸೆ ತುಂಬುವ ತನ್ನ ತಾನು ಅರಿಯುವ ಅನುಸಂಧಾನಕ್ಕೆ ಸಜ್ಜಾಗಲು ಇಷ್ಟಲಿಂಗವೆಂಬ ಅರಿವಿನ ಸಾಧನ ನೀಡಿದ ಮಹಾಮಣಿಹ ಎಂದು ಕೊಂಡಾಡಿದ್ದಾರೆ .

ತಾನು ಕಲ್ಯಾಣ ಬಿಟ್ಟು ಕದಳಿಯ ಕಡೆಗೆ ಹೊರಟಾಗ .” ಲಿಂಗವೆನ್ನೆ ಲಿಂಗೈಕ್ಯವೆನ್ನೆ ,ಸಂಗವೆನ್ನೆ ಸಮರಸವೆನ್ನೆ ,ಆಯಿತ್ತೆನ್ನೆ ಆಗದೆನ್ನೆ, ಚೆನ್ನಮಲ್ಲಿಕಾರ್ಜುನ ನಿಮ್ಮೊಳಗಾದ ಬಳಿಕ ನಾನು ಏನೂ ಎನ್ನೆ.”
ಪ್ರಾಯಶ ಅಕ್ಕ ಸೃಷ್ಟಿಯ ರಹಸ್ಯ ಸತ್ಯವನ್ನು ಅರಿಯುತ್ತಾ ಅರಿಯುತ್ತಾ ತಾನೇ ಸೃಷ್ಟಿಯೊಳಗಿನ ಜಂಗಮ ಚೇತವಾದಳು ತಾನೇ ಲಿಂಗವಾದಳು ,ಅಂಗದ ಹಂಗು ತೊರೆದು ಲಿಂಗವಾದಳು ಅಕ್ಕ ಮಹಾದೇವಿ ಅಂಗ ಲಿಂಗವೊಂದಾದ ಬಳಿಕ ಲಿಂಗೈಕ್ಯವೆಂಬ ಪದಕ್ಕೆ ಅರ್ಥವುಂಟೆ ಎಂದು ಪ್ರಶ್ನಿಸಿ ಇಡೀ ಶರಣ ಸಮೂಹಕ್ಕೆ ಮಾದರಿಯಾಗಿ ನಿಲ್ಲುವಳು ಅಕ್ಕ ಮಹಾದೇವಿ. ತಾನೇ ಲಿಂಗವಾಗುವ ತಾನೇ ಚೆನ್ನ ಮಲ್ಲಿಕಾರ್ಜುನವಾಗುವ ಇಂತಹ ಸಾಧನೆಯನ್ನು ಸಂಗಮವೆಂದೆನ್ನುತ್ತೇವೆ . ಸಂಸ್ಕೃತದಲ್ಲಿ ಯುಜ್ ,ಕನ್ನಡದಲ್ಲಿ ಯೋಗ ಮತ್ತು ಅನುಭಾವಿಕ ಪದಗಳಲ್ಲಿ ಸಂಗಮ (UNIFICATION )
ಅಕ್ಕ ಮಹಾದೇವಿ ತನ್ನ ಕಲ್ಯಾಣದ ನೆನಪನ್ನು ಈ ರೀತಿಯಾಗಿ ಹೇಳುತ್ತಾಳೆ

ದೇವಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮೇರು ಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ ಬಸವಣ್ಣನೇ ದೇವರು
ಚೆನ್ನ ಮಲ್ಲಿಕಾರ್ಜುನಯ್ಯಾ
ನಿಮಗೂ ಎನಗೂ ನಿಮ್ಮ ಶರಣರಿಗೂ ಬಸವಣ್ಣನೇ ದೇವರು

ಬಸವಣ್ಣ ಮೌಲ್ಯಗಳ ಮೊತ್ತ .ಸತ್ಯ ಸಂದೇಶದ ಸಾರ .ಹೀಗಾಗಿ ದೇವರೆಂಬ ಭ್ರಮೆಯಿಂದ ಹೊರ ಬಂದು ಸೃಷ್ಟಿಯೊಳಗಿನ ಸತ್ಯ ಶುದ್ಧ ಜೀವನ ದರ್ಶನವನ್ನು ಹೊಂದುವ ಸಕಲ ಜೀವಾತ್ಮರ ಆತ್ಮವೇ ಚೈತನ್ಯ ದೇವರೆಂದು ಹೇಳಿದ ಗಟ್ಟಿ ಅನುಭವಿ ಸತ್ಯ ಶೋಧಕಿ ಮರ್ತ್ಯ ಸಾಧಕಿ ಅಕ್ಕ ಮಹಾದೇವಿ ಬಸವಣ್ಣನವರ ಲಿಂಗ ತತ್ವವಾದ ನಿಷ್ಪತ್ತಿ ಮತ್ತು ಉದಾತ್ತೀಕರಣದ ರೀತಿಯನ್ನು ಅರ್ಥಪೂರ್ಣವಾಗಿ ಬಿಂಬಿಸಿದ್ದಾಳೆ.

ಬಯಲು ಲಿಂಗವೆಂಬೆನೆ?
ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ?
ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ?
ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ
ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
– ಅಕ್ಕಮಹಾದೇವಿ
ಅಲ್ಲಮರ ನಿರಾಳ ಶೂನ್ಯವೇ ಲಿಂಗ ಎಂಬ ಸಿದ್ಧಾಂತವನ್ನು ಪ್ರಶ್ನಿಸುವ ತರ್ಕಿಸುವ ಕಾರ್ಯವನ್ನು ಅಕ್ಕ ಮಹಾದೇವಿ ಮಾಡಿದ್ದಾಳೆ.
ಬಯಲು ಲಿಂಗವೆಂದು ತಿಳಿದರೆ ಬಗೆದು ನಡೆಯುತ್ತಾ ಹೊರಟರೆ ಬಯಲು ಮಾಯವಾಗುವದು. ಬೆಟ್ಟ ಲಿಂಗವೆಂದು ಬಗೆದೊಡೆ ಅದನ್ನು ಹತ್ತಿ ಅದರ ತುದಿಯನ್ನು ಮೆಟ್ಟಿದೊಡೆ ಅದು ಲಿಂಗ ಹೇಗಾಗುವುದು . ತರುಮರಾದಿಗಳು ಲಿಂಗವೆಂಬೆನೆ?
ತರಿದಲ್ಲಿ ಹೋಯಿತ್ತು-ಸಸ್ಯ ಮರ ಗಿಡ ಬಳ್ಳಿ ಲಿಂಗವೆಂದೊಡೆ ಅವುಗಳನ್ನು ತೆರೆದರೆ ಕೊಚ್ಚಿಡೋದೇ ಅವುಗಳ ಅಸ್ತಿತ್ವವೇ ಉಳಿಯದು ಅದು ಹೇಗೆ ಲಿಂಗವಾಗುವದು .ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ ಮಾತು ಕೇಳದೆ ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ -ಲಿಂಗ ಇದು ಕೇವಲ ಒಂದು ವಸ್ತುವೆನಿಸದೆ ಜಂಗಮದ ಪದ ಜ್ಞಾನದ ಆರಂಭ ಎಂದು ಅರಿತ ಬಸವಣ್ಣನವರ ಮಾತನ್ನು ಕೇಳದೆ ಕೇವಲ ಭೌತಿಕ ಲಿಂಗವನ್ನು ನಂಬಿ ಹಾಳಾದೆನು ಎಂದು ಕನವರಿಸುತ್ತಾಳೆ.

ಸಿದ್ಧರಾಮರು ಕಲ್ಯಾಣಕ್ಕೆ ಅಲ್ಲಮ ಪ್ರಭುದೇವರ ಜೊತೆಗೆ ಬಂದಾಗ ಅನುಭವ ಮಂಟಪ ಶರಣರ ಬಸವಣ್ಣನವರ ದಿವ್ಯ ವ್ಯಕ್ತಿತ್ವಕ್ಕೆ ಮಾರು ಹೋಗಿ ಸಿದ್ಧರಾಮರು ಬಸವಣ್ಣನೇ ಗುರು ಲಿಂಗ ಜಂಗಮ ಎಂಬ ಭಾವನೆಗೆ ಒಳಗಾಗುತ್ತಾನೆ 
ಶರಣರ ವಚನಗಳ ಸಾಧನೆಯ ಶಕ್ತಿ ಅಗಾಧವಾಗಿದ್ದು, ಅಂಥ ವಚನದ ಒಂದು ಪಾರಾಯಣಕ್ಕೆ ವ್ಯಾಸನ ಪುರಾಣ ಓದುವಿಕೆ ಸಮಬಾರದು. ಶತ ರುದ್ರಿಯಾಗವು ಸನಾತನಿಗಳ ಶ್ರೇಷ್ಠ ಭವ್ಯ ಯಜ್ಞ. ಅದು ವಚನಗಳ ಮೌಲ್ಯಕ್ಕೆ ಹೋಲಿಸಿದರೆ ಕಡಿಮೇನೆ. ಅದೇ ರೀತಿ ವಚನದ ಸಾವಿರ ಪಾರಾಯಣಕ್ಕೆ ಗಾಯತ್ರಿ ಲಕ್ಷ ಜಪ ಸಮಬಾರದೆನ್ನುವ ಮೂಲಕ ಸಮಗ್ರ ವೈದಿಕ ವ್ಯವಸ್ಥೆಯನ್ನು ಧಿಕ್ಕರಿಸಿ ಅದಕ್ಕಿಂತ ಅರ್ಥಪೂರ್ಣವಾದ ಶರಣರ ವಚನಗಳನ್ನು, ಅವುಗಳ ಅರ್ಥವನ್ನು ವಿವರಿಸುವಲ್ಲಿ ಸಿದ್ಧರಾಮರು ಸಂತಸ ಕಂಡಿದ್ದಾರೆ.

ಸಿದ್ಧರಾಮ ಶಿವಯೋಗಿಗಳು ಬಸವಣ್ಣನವರ ಸಾಮೀಪ್ಯಕ್ಕೆ ಬಂದ ಮೇಲೆ ಅವರ ವ್ಯಕ್ತಿತ್ವಕ್ಕೆ ಮಾರು ಹೋಗಿ ತನು ಮನ ಪ್ರಾಣ ಶುದ್ಧೀಕರಿಸಿ ಬಸವಾಕ್ಷರ ಮಂತ್ರವನ್ನೇ ಬದುಕಿದರು. ಅವರಿಗೆ ಬಸವಣ್ಣನವರೇ ಸರ್ವಸ್ವ. ಅವರೇ ಗುರು ಲಿಂಗ ಜಂಗಮದ ಪ್ರತೀಕ. ಅವರ ಕೆಲ ವಚನಗಳನ್ನು ನೋಡೋಣ:

ಪಾವನವಾದೆನು ಬಸವಣ್ಣಾ,
ನಿಮ್ಮ ಪಾವನಮೂರ್ತಿಯ ಕಂಡು.
ಪರತತ್ವವನೈದಿದೆ ಬಸವಣ್ಣಾ,
ನಿಮ್ಮ ಪರಮಸೀಮೆಯ ಕಂಡು.
ಪದ ನಾಲ್ಕು ಮೀರಿದೆ ಬಸವಣ್ಣಾ,
ನಿಮ್ಮ ಪರುಷಪಾದವ ಕಂಡು
ಕಪಿಲಸಿದ್ಧಮಲ್ಲಿಕಾರ್ಜುನಯ್ಯನ ಕೂಡಿದೆ;
ಬಸವಣ್ಣಾ, ಬಸವಣ್ಣಾ, ಬಸವಣ್ಣಾ,
ನೀನು ಗುರುವಾದೆಯಾಗಿ.

ಇಲ್ಲಿ ಬಸವಣ್ಣನವರು ಆವಿಷ್ಕರಿಸಿದ ಲಿಂಗವೇ ಪಾವನ ಮೂರ್ತಿ. ಇದು ಜ್ಞಾನದ ಸಂಕೇತ. ಗುರು ಲಿಂಗ ಜಂಗಮದ ಹೊಸ ಸೂತ್ರ ಸಿದ್ಧಪಡಿಸಿದ ಬಸವಣ್ಣನವರ ಕ್ರಾಂತಿಯ ಕಂಡು ಬೆರಗಾದ ಸಿದ್ಧರಾಮರು, “ಪಾವನವಾದೆನು ಬಸವಣ್ಣ” ಎಂದು ಉದ್ಗರಿಸಿದ್ದಾರೆ. ಪರತತ್ವವನ್ನು ಲಿಂಗ ಮುಖೇನ ಹೇಳಿದ ಬಸವಣ್ಣನವರ ವೈಚಾರಿಕ ನಿಲುವಿನ ಸೀಮೆ ಅಗಾಧವಾದದ್ದು. ನಾಲ್ಕು ಪದ ಅಂದರೆ ಧರ್ಮ ಕಾಮ ಅರ್ಥ ಮೋಕ್ಷ, ಇವುಗಳನ್ನು ಮೀರಿದ ಅನಂತದ ಅರಿವು ಬಸವಣ್ಣ. ಇಂತಹ ಪರುಷ ಮಣಿಯಾದ ಜ್ಞಾನಿಯ ಕಂಡು, ದೈವವ ಕೂಡಿ ಬಸವಣ್ಣ ಬಸವಣ್ಣ ನೀವೆನ್ನ ಗುರುವಾದಿರಿ ಎಂದು ಹೇಳಿಕೊಂಡಿದ್ದಾರೆ.

ಬಸವನ ಮೂರ್ತಿಯೇ ಧ್ಯಾನಕೆ ಮೂಲ
ಬಸವನ ಕೀರ್ತಿಯೇ ಧ್ಯಾನಕೆ ಮೂಲ
ಬಸವ ಬಸವ ಬಸವ ಎಂಬುವದು ಭಕ್ತಿ ಕಾಣಾ
ಕಪಿಲ ಸಿದ್ದ ಮಲ್ಲಿಕಾರ್ಜುನ

ಬಸವನ ಮೂರ್ತಿ ಎಂದರೆ ಲಿಂಗ, ಸಮಾಜ. ಅದುವೇ ಸುಂದರ ಪರಿಕಲ್ಪನೆ. ಅಂತಹ ಸಮಾಜದ ಚಿಂತನೆಯೇ ಧ್ಯಾನಕ್ಕೆ ಮೂಲ. ಬಸವನ ಕೀರ್ತಿಯೇ ಧ್ಯಾನಕ್ಕೆ ಮೂಲ. ಸಮಾಜವನ್ನು ಸಂಘಟಿಸಿ ಕಾಯಕ ದಾಸೋಹದ ಸೂತ್ರಗಳನ್ನು ಅಳವಡಿಸಿದ ಬಸವಣ್ಣನವರು ಭಕ್ತಿಯ ಪ್ರತಿರೂಪವಾಗುತ್ತಾರೆ. “ಬಸವನ ಮೂರ್ತಿಯೇ ಧ್ಯಾನಕ್ಕೆ ಮೂಲ” ಎಂಬುದನ್ನು ಲಿಂಗವೆಂದೆನ್ನದೆ ಬಸವಣ್ಣನವರ ಸ್ಥಾವರ ಮೂರ್ತಿ ಸ್ಥಾಪನೆಗೆ ಮುಂದಾಗಿದ್ದು ದುರಂತವೇ ಸರಿ.
ಒಟ್ಟಾರೆ ಲಿಂಗ ಅರಿವಿನ ಆಂದೋಲನದ ಪ್ರಮುಖ ಅಸ್ತ್ರವಾಗಿದೆ .ನಡೆನುಡಿಗಳ ಸಂಕೇತ ಸ್ಥಾವರವನ್ನು ವಿರೋಧಿಸುವ ಪ್ರಜ್ಞೆ . ಇದನ್ನು ಬಸವಣ್ಣನವರು ಮಾಡಿ ಮಾಡಿ ಕೆಟ್ಟೋರೋ ಮನವಿಲ್ಲದೆ ನೀಡಿ ನೀಡಿ ಕೆಟ್ಟೋರೋ ನಿಜವಿಲ್ಲದೆ ಮಾಡುವ ನೀಡುವ ನಿಜಗುಣಯುಳ್ಳೊಡೆ ಕೂಡಿಕೊಂಡಿಪ್ಪ ನಮ್ಮ ಕೂಡಲ ಸಂಗಮದೇವ .ಅದೇ ರೀತಿ ಮಾಡುವಂತಿರಬೇಕು ಮಾಡದಂತಿರಬೇಕು ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು . ಕೂಡಲ ಸಂಗಮನ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು . ಮಾತಾ ಕೂಟದೊಳಗೆ ತಾನೇ ಇಲ್ಲದಂತಿರುವ ಅವಿರಳ ಜ್ಞಾನ ಸಿದ್ಧಾಂತವೇ ಶರಣ ಸಿದ್ಧಾಂತ .
ಇಂದು ಮಠಾಧೀಶರು ಸ್ವಾಮಿಗಳು ಅಕ್ಕ ಮಾತೆಯರು ಜಂಗಮ ಚೇತನ ಬಸವಣ್ಣನನ್ನು ಸ್ಥಾವರಿಕೋಳಿಸಿ ಅವನ ಮೂರ್ತಿಗಾಗಿ ಸರಕಾರಕ್ಕೆ ಕೈ ಚಾಚುವುದು ದುರಂತ . ಬಸವ ಪ್ರಜ್ಞೆ ಇಷ್ಟಲಿಂಗವೇ ಅರುವಿನ ಮೂರ್ತಿ ಅದನ್ನು ಕಂಡು ಪಾವನವದೇನು ಎಂದು ನಮ್ರವಾಗಿ ಹೇಳುತ್ತಾನೆ ಸಿದ್ಧರಾಮರು .

 

 

 

 

 

 

 

 

 

 

ಡಾ.ಶಶಿಕಾಂತ ಪಟ್ಟಣ ಪುಣೆ ರಾಮದುರ್ಗ- 9552002338

Don`t copy text!