ನಿನ್ನ ಹೆಸರೇನು?’ ‘ಆಜಾದ್!

ನಿನ್ನ ಹೆಸರೇನು?’
‘ಆಜಾದ್!

 

 

 

 

 

 

 

 

 

ಚಂದ್ರಶೇಖರ್ ಆಜಾದರ ನೆನಪಿನಲ್ಲಿ

(1906-1931)

ಚಂದ್ರಶೇಖರ್ ಆಜಾದ್ ಅವರನ್ನು ಸಾಮಾನ್ಯವಾಗಿ ತೆರೆದೆದೆಯಲ್ಲಿ ಮೀಸೆ ತಿರುವುತ್ತಾ ಜನಿವಾರ ಧರಿಸಿ ನಿಂತಿರುವ, ರಾಷ್ಟ್ರೀಯತೆಯ ವೀರತ್ವದ ಚಿಹ್ನೆಯಂತಿರುವ ಭಾವಚಿತ್ರದೊಂದಿಗೆ ಸ್ಮರಿಸಲಾಗುತ್ತದೆ.

ಅವರ ಬದುಕು ಮತ್ತು ರಾಜಕೀಯ ಜೀವನದ ಬಗೆಗಿನ ಆಳವಾದ ಅಧ್ಯಯನವು ಕೇವಲ ಈ ಭಾವಚಿತ್ರದ ಹಿಂದಿನ ಸತ್ಯವನ್ನು ಬಹಿರಂಗಪಡಿಸುವುದಷ್ಟೇ ಅಲ್ಲದೆ, 1928 ಸೆಪ್ಟೆಂಬರ್ ನಲ್ಲಿ ಭಗತ್ ಸಿಂಗ್ ಮುಂತಾದವರು ಸೇರಿ ಸ್ಥಾಪಿಸಿದ ಕ್ರಾಂತಿಕಾರಿ ಸಮಾಜವಾದಿ ಸಂಘಟನೆ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ನಿನ ನಾಯಕತ್ವ ವಹಿಸಿದ್ದ ಆಜಾದರ ಪ್ರಗತಿಪರ ರಾಜಕೀಯ ವಿಚಾರಗಳನ್ನು ಬಹಿರಂಗಪಡಿಸುತ್ತದೆ.

ಚಂದ್ರಶೇಖರ್ ತಿವಾರಿಯವರು ಜನಿಸಿದ್ದು ಬಡ ಕಾರ್ಮಿಕ (ಸಂಬಳಕ್ಕಾಗಿ ತಮ್ಮ ಶ್ರಮಶಕ್ತಿಯನ್ನು ಮಾರುವ ಜನ) ಕುಟುಂಬದಲ್ಲಿ. ಅವರ ತಂದೆ ಒಬ್ಬ ಮಾಲಿಯಾಗಿದ್ದರು ಮತ್ತು ಅವರ ತಾಯಿ ಮನೆಗೆಲಸ ಮಾಡುತ್ತಿದ್ದರು. ಕೇಂದ್ರ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಿಂದ ಅವರು ಮಧ್ಯಪ್ರದೇಶದ ಝಬುವಾಗೆ ವಲಸೆ ಬಂದಿದ್ದರು. ಅಲ್ಲಿಯೇ 23 ಜುಲೈ 1906ರಂದು ಮುಂದೆ ಆಜಾದ್ ಎಂದು ಖ್ಯಾತನಾಗುವ ಬಾಲಕ ಹುಟ್ಟಿದ್ದು.

ಅಲ್ಲಿ ತಮ್ಮ ಹಳ್ಳಿಗೆ ಹತ್ತಿರದಲ್ಲಿ ವಾಸಿಸುತ್ತಿದ್ದ ಬಿಲ್ಲ ಸಮುದಾಯದ ಹುಡುಗರೊಂದಿಗೆ ಅವನು ಬೆಳೆದನು. ಆಜಾದ್ ಮತ್ತು ಅವರ ಅಣ್ಣನಿಗಾಗಿ ಅವರ ತಂದೆ ಒಬ್ಬ ಮನೆಪಾಠದ ಮೇಷ್ಟ್ರನ್ನು ನೇಮಿಸಿದ್ದರು, ಆದರೆ ಆಜಾದ್ ಗೆ ಅಧ್ಯಯನದಲ್ಲಿ ಅಷ್ಟೇನು ಆಸಕ್ತಿ ಇರಲಿಲ್ಲ. ತಾರುಣ್ಯದಲ್ಲಿ ಅವನು ಸರ್ಕಾರಿ ಕಚೇರಿಯೊಂದರಲ್ಲಿ ಗುಮಾಸ್ತನ ಹುದ್ದೆಗೆ ಸೇರಿದನು, ಆದರೆ ಅಧಿಕಾರಿಗಳ ವರ್ತನೆಯಿಂದಾಗಿ ಅವನು ಆ ಕೆಲಸಕ್ಕೆ ರಾಜೀನಾಮೆ ನೀಡಬೇಕಾಯಿತು.

ಮುಂಗೋಪಿ ತಂದೆಯಿಂದ ಬಹುವಾಗಿ ನಿಂದಿಸಿಕೊಂಡ 14 ವರ್ಷದ ಹುಡುಗ ಮನೆಯಿಂದ ಓಡಿಹೋಗಿ ದೂರದ ಪ್ರದೇಶದಲ್ಲಿ ತನ್ನ ಅದೃಷ್ಟ ಹುಡುಕುವ ನಿರ್ಧಾರ ಕೈಗೊಂಡನು. ತಮ್ಮ ಊರಿಗೆ ಬರುತ್ತಿದ್ದ ವಜ್ರದ ವ್ಯಾಪಾರಿಯೊಂದಿಗೆ ಅವನು ಓಡಿ ಹೋದನು ಮತ್ತು ಅವರಿಬ್ಬರೂ ಬಾಂಬೆ ತಲುಪಿದರು. ಅಲ್ಲಿ ಹಡಗು ತಯಾರಿಸುವ ಸ್ಥಳದಲ್ಲಿ ಅವನು ಒಂದು ಕೆಲಸಕ್ಕೆ ಸೇರಿದನು, ಮತ್ತು ದೈಹಿಕ ದುಡಿಮೆಗಾರರ ಮೇಲಿನ ಶೋಷಣೆಯನ್ನು ಕಣ್ಣಾರೆ ಕಂಡನು.

ಆಜಾದರು ಹಲವು ದಿನಗಳನ್ನು ಹಡಗು ತಯಾರಿಕೆಯಲ್ಲಿ ಕಳೆದರು ಆದರೆ ಅಲ್ಲಿನ ಜೀವನದ ಏಕತಾನತೆಯಿಂದ ಬಹುಬೇಗ ನಿರಾಸೆ ಹೊಂದಿದರು. ಮತ್ತೆ ಅಧ್ಯಯನವನ್ನು ಮುಂದುವರಿಸುವ ನಿರ್ಧಾರವನ್ನು ಕೈಗೊಂಡ ಅವರು ತಮ್ಮ ಕುಟುಂಬದೊಂದಿಗೆ ಸಂಪರ್ಕ ಬೆಳೆಸಿಕೊಂಡರು ಮತ್ತು 1920 ರಲ್ಲಿ ಬನಾರಸ್ ತಲುಪಿ ಅಲ್ಲಿನ ಕಾಶಿ ವಿದ್ಯಾಪೀಠದ ಸಂಸ್ಕೃತ ವಿದ್ಯಾಲಯದಲ್ಲಿ ಪ್ರವೇಶ ಪಡೆದರು .

ಅಂದಿನ ದಿನಗಳಲ್ಲಿ ಅಲ್ಲಿ ಬ್ರಾಹ್ಮಣ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅಲ್ಲಿ ಅವರು ರಾಷ್ಟ್ರವಾದಿ ಮನೋಭಾವವನ್ನು ಹೊಂದಿದ್ದ ಮನ್ಮಥನಾಥ ಗುಪ್ತ, ರಾಜೇಂದ್ರ ಲಾಹಿರಿ, ಪ್ರಣವೇಶ ಚಟರ್ಜಿ ಮುಂತಾದವರೊಂದಿಗೆ ಸ್ನೇಹ ಬೆಳೆಸಿಕೊಂಡರು.

ಅಮೃತಸರದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಲು ಮತ್ತು ಬ್ರಿಟನ್ನಿನವರು ಟರ್ಕೀಯ ಸದಸ್ಯತ್ವವನ್ನು ರದ್ದು ಮಾಡಿದ್ದನ್ನು ಖಂಡಿಸಿ ನಡೆದ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಅವರೆಲ್ಲ ಜೊತೆಗೂಡಿ ಭಾಗವಹಿಸಿದರು. ಆಜಾದರು ಕಾಂಗ್ರೆಸ್ಸಿನ ಸ್ವಯಂಸೇವಕರು ಮತ್ತು ಮದ್ಯದ ಅಂಗಡಿಗಳನ್ನು ಪ್ರತಿರೋಧಿಸಿ ನಡೆದ ಒಂದು ಪ್ರತಿಭಟನೆಯಲ್ಲಿ ತಮ್ಮ ಸ್ನೇಹಿತರೊಂದಿಗೆ ಅವರು ಬಂದಿಸಲ್ಪಟ್ಟರು: ನಂತರ ಅವರನ್ನು ಮ್ಯಾಜಿಸ್ಟ್ರೇಟರ ಮುಂದೆ ಪ್ರಸ್ತುತಪಡಿಸಲಾಯಿತು. ಅಲ್ಲಿ ಮ್ಯಾಜಿಸ್ಟ್ರೇಟರು ಕೇಳಿದರು:

“ನಿನ್ನ ಹೆಸರೇನು?”
“ಆಜಾದ್!” [ಸ್ವತಂತ್ರ!]

“ನಿನ್ನ ತಂದೆಯ ಹೆಸರೇನು?”
“ಸ್ವಾಧೀನತೆ.” [ವಿಮುಕ್ತಿ]

“ನಿನ್ನ ವಾಸಸ್ಥಳ?”
“ಸೆರೆಮನೆಯಲ್ಲಿ.”

ಅವರಿಗೆ ಹದಿನೈದು ದಿನಗಳ ಕಾರಾಗೃಹ ಶಿಕ್ಷೆ ಮತ್ತು 15 ಚಡಿಯೇಟು ಶಿಕ್ಷೆಯನ್ನು ನೀಡಲಾಯಿತು. ಅವರು ಶಿಕ್ಷೆಯನ್ನು ಅತ್ಯಂತ ಧೀರೋದ್ಧಾತವಾಗಿ ಎದುರಿಸಿದರು ಮತ್ತು ನಗರದಲ್ಲಿ ಅವರ ಕೀರ್ತಿಯು ಹರಡಿತು.

ಅನಿರೀಕ್ಷಿತವಾಗಿ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದು ಆಜಾದ್ ಮತ್ತವರ ಸ್ನೇಹಿತರಲ್ಲಿ ಆಘಾತವನ್ನುಂಟುಮಾಡಿತು ಹಾಗೂ ಅವರು ಪರ್ಯಾಯದ ಹುಡುಕಾಟದಲ್ಲಿ ತೊಡಗಿದರು. ಸಶಸ್ತ್ರ ಬಂಡಾಯದ ಮೂಲಕ ಬ್ರಿಟಿಷ್ ಆಡಳಿತವನ್ನು ಕಿತ್ತೊಗೆಯುವ ಗುರಿಯನ್ನು ಹೊಂದಿದ್ದ ಗುಪ್ತ ಕ್ರಾಂತಿಕಾರಿ ಚಳುವಳಿಯಲ್ಲಿ ಅವರು ತಮ್ಮ ದಾರಿಯನ್ನು ಕಂಡುಕೊಂಡರು.

ಅಂದಿನ ದಿನಗಳಲ್ಲಿ ಬನಾರಸನಲ್ಲಿ ಕ್ರಾಂತಿಕಾರಿಗಳು ಅತ್ಯಂತ ಸಕ್ರಿಯರಾಗಿದ್ದರು, ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಅವರು ರಹಸ್ಯವಾಗಿ ಕೆಲಸ ಮಾಡುತ್ತಿದ್ದರು. ಆಜಾದರು ಅಂತಹ ಒಂದು ಗುಪ್ತಗಾಮಿ ಸಂಘಟನೆಯಾದ ಹಿಂದುಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ನಿನ ಸದಸ್ಯರಾದರು. ಅದರ ಸಂಸ್ಥಾಪಕ ರಾಗಿದ್ದ ಸಚಿಂದ್ರ ನಾಥ್ ಸನ್ಯಾಲರು ರಷ್ಯಾದ ಕ್ರಾಂತಿಯಿಂದ ಅತ್ಯಂತ ಪ್ರಭಾವಿತರಾಗಿದ್ದರು.ಅವರ ಪಕ್ಷದ ‘ಕ್ರಾಂತಿಕಾರಿ’ ಎಂಬ ಪ್ರಣಾಳಿಕೆಯಲ್ಲಿ ಅವರು ಹೀಗೆ ಬರೆದರು:

“ಮನುಷ್ಯನಿಂದ ಮನುಷ್ಯನ ಶೋಷಣೆಯನ್ನು ಅಂತ್ಯ ಗೊಳಿಸುವುದೇ ನಮ್ಮ ಅಂತಿಮಗುರಿ… ಕೈಗಾರಿಕೆಗಳು, ರೈಲು, ಗಣಿಗಳ ರಾಷ್ಟ್ರೀಕರಣ, ಅಡಲ್ಟ್ ಪ್ರಾಂಚೈಸ್, ಮತ್ತು ಚುನಾಯಿತ ಪ್ರತಿನಿಧಿಗಳನ್ನು ವಾಪಸ್ ಕರೆಯುವ ಹಕ್ಕು.., ಇವೆಲ್ಲದರ ಪರವಾಗಿ ನಾವು ನಿಲ್ಲುತ್ತೇವೆ.”

ಕೆಲವು ವರ್ಷಗಳ ನಂತರ, ಸನ್ಯಾಲರು ತಮ್ಮ ಆತ್ಮಕತೆ ಯಾದ ‘ಬಂಧಿ ಜೀವನ’ದಲ್ಲಿ ಬರೆಯುತ್ತ ಮಾರ್ಕ್ಸ್ ವಾದದೊಂದಿಗೆ ಸಂಪೂರ್ಣ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಭಾವನಾವಾದಿಯಾಗಿ, ಭಾರತೀಯ ಸಮಾಜದಲ್ಲಿ ಧರ್ಮವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅವರು ನಂಬಿದ್ದರು, ಹೀಗಾಗಿ ಸಂಘಟನೆಯ ಹೆಸರಿನಲ್ಲಿ ಸೋಷಲಿಸ್ಟ್ ಪದವನ್ನು ಅವರು ಸೇರಿಸಲಿಲ್ಲ.

ಮನ್ಮಥನಾಥ ಗುಪ್ತ, ರಾಜೇಂದ್ರ ಲಾಹಿರಿ ಮತ್ತು ಮುಂತಾದ ಪಕ್ಷದ ಯುವ ಪೀಳಿಗೆಯವರು ಸ್ವಲ್ಪಕಾಲದಲ್ಲೇ ಈ ಅಭಿಪ್ರಾಯಗಳನ್ನು ಮೀರಿ ಬಂದು ಬಹಿರಂಗವಾಗಿ ನಾಸ್ತಿಕವಾದ, ಮಾರ್ಕ್ಸ್ವಾದ ಮುಂತಾದವುಗಳನ್ನು ಚರ್ಚಿಸತೊಡಗಿದರು. ಹಿರಿತಲೆಗಳಾದ ಸನ್ಯಾಲ್ ಹಾಗೂ ರಾಮ್ ಪ್ರಸಾದ್ ಬಿಸ್ಮಿಲ್ಲ ರ ಬಂಧನದ ನಂತರವಷ್ಟೇ ಪಕ್ಷದಲ್ಲಿ ಈ ಬದಲಾವಣೆ ಬಂದಿದ್ದು. ಬಂಧನಕ್ಕೊಳಗಾಗದೆ ಉಳಿದಿದ್ದ ಆಜಾದ್, ಭಗತ್ ಸಿಂಗ್ ಮುಂತಾದವರು ಗಣೇಶ್ ಶಂಕರ್ ವಿದ್ಯಾರ್ಥಿ, ಮೌಲಾನಾ ಹಜರತ್ ಮೋಹಾನಿ, ಸತ್ಯಭಕ್ತ್ ಮತ್ತು ರಾಧಾ ಮೋಹನ್ ಗೋಕುಲ್ ಮುಂತಾದ ಸಮಾಜವಾದಿ ಚಿಂತಕರ ಪ್ರಭಾವಕ್ಕೆ ಒಳಗಾದರು.

ಭಾರತದಲ್ಲಿ ಬೆಳೆಯುತ್ತಿದ್ದ ಕಮ್ಯುನಿಸ್ಟ್ ಚಳುವಳಿ ಮತ್ತು ಮತ್ತು ದೇಶದ ಹಲವು ಭಾಗಗಳಲ್ಲಿ ಬೆಳೆಯುತ್ತಿದ್ದ ಐತಿಹಾಸಿಕ ಕಾರ್ಮಿಕ ಚಳುವಳಿಯಿಂದ ಬಹುವಾಗಿ ಪ್ರಭಾವಿತರಾದ ಈ ಯುವ ಕ್ರಾಂತಿಕಾರಿಗಳು ಮುಂದುವರೆದು ಮಾರ್ಕ್ಸ್ ವಾದದ ಅಧ್ಯಯನ ಮತ್ತು ಚರ್ಚೆಯಲ್ಲಿ ತೊಡಗಿದರು. ಹಲವಾರು ಚರ್ಚೆಗಳ ನಂತರ, ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಅನ್ನು 1928ರಲ್ಲಿ ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಶಿಯೇಶನ್ ಎಂದು ಬದಲಾಯಿಸಲಾಯಿತು ಮತ್ತು ಅದರ ದಂಡನಾಯಕರಾಗಿ ಆಜಾದರು ಅವಿರೋಧವಾಗಿ ಚುನಾಯಿತರಾದರು.

ಅಷ್ಟಾಗಿ ಉನ್ನತ ವ್ಯಾಸಂಗವನ್ನು ಮಾಡಿರದಿದ್ದರೂ ಆಜಾದರು ಪಕ್ಷದ ಒಳಗಡೆ ಸೈದ್ಧಾಂತಿಕ ಚರ್ಚೆಗಳು ಮತ್ತು ಪ್ರಚಾರಕಾರ್ಯಕ್ಕೆ ವಿಶೇಷ ಗಮನ ಹರಿಸುತ್ತಿದ್ದರು. ಅವರ ಆಪ್ತ ಸಂಗಾತಿ ಶಿವ ವರ್ಮಾರ ಪ್ರಕಾರ, ಆಜಾದರು ಅವರಿಗೆ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಗಟ್ಟಿಯಾಗಿ ಒಂದೊಂದೇ ಸಾಲು ಓದಿ ಹೇಳುತ್ತಾ, ದುಡಿಮೆಯಾಳಾಗಿ ಗಳಿಸಿದ ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ಮಾರ್ಕ್ಸ್ ಮತ್ತು ಎಂಗೆಲ್ಸ್ ರವರ ಅಭಿಪ್ರಾಯಗಳಿಗೆ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಿದ್ದರು.

2 ಕರಾಳ ಕಾರ್ಮಿಕ ಕಾನೂನುಗಳ ವಿರುದ್ಧ 1929ರ ಏಪ್ರಿಲ್ 8ರಂದು ಕೇಂದ್ರ ಶಾಸಕಾಂಗ ಸಭೆಯಲ್ಲಿ, ಭಗತ್ ಸಿಂಗ್ ಹಾಗೂ ಬಿ.ಕೆ ದತ್ತ ರವರು ಎರಡು ಬಾಂಬುಗಳನ್ನು ಎಸೆದಾಗ ಆಜಾದ್ ರ ಬಲರಾಜ್ ಎಂಬ ಗುಪ್ತ ಹೆಸರಿನಲ್ಲಿ ಪಿಂಕ್ ಪಾಂಪ್ಲೆಟ್ ಹೆಸರಿನ ಪ್ರಕಟಣೆಯನ್ನು ನೀಡಲಾಯಿತು. ಪ್ರಕಟಣೆಯು ಘೋಷಿಸಿದಂತೆ:

“ಭಾರತೀಯ ಬಂಡವಾಳಿಗರ ಮಿತ್ರಕೂಟದೊಂದಿಗೆ ಬ್ರಿಟಿಷರು ಬಡ ಕಾರ್ಮಿಕರು ಮತ್ತು ರೈತರ ರಕ್ತವನ್ನು ಹೀರಿ ನಮ್ಮ ದೇಶವನ್ನು ನಾಶ ಗೈದಿದ್ದಾರೆ.ಈ ದೇಶದ ಜನರು ಹಸಿವು ಮತ್ತು ಅಸಮಾನತೆಗೆ ಅಂತ್ಯ ಹಾಡುವ ಸಮಾಜವಾದಿ ಸರಕಾರವನ್ನು ಸ್ಥಾಪಿಸುವವರೆಗೂ ನಮ್ಮ ಹೋರಾಟವು ನಿರಂತರವಾಗಿ ಮುಂದುವರೆಯುತ್ತದೆ.”

ತಮ್ಮ ಎದೆಗಾರಿಕೆಯ ಕೃತ್ಯಕ್ಕಾಗಿ ಸಿಂಗ್ ಮತ್ತು ದತ್ತರನ್ನು ಬಂಧಿಸಲಾಯಿತು. ನಂತರ ಸಂಘಟನೆಯು ಭಾರತದ ವೈಸರಾಯ್ ಅನ್ನು ಕೊಲ್ಲಲು ನಡೆಸಿದ ಪ್ರಯತ್ನಿವು ಸ್ವಲ್ಪದರಲ್ಲೇ ವಿಫಲವಾಯಿತು. ಗಾಂಧೀಜಿಯವರ ಬಾಂಬಿನ ಆರಾಧಕರು ಎಂಬ ತಮ್ಮ ಲೇಖನದ ಮೂಲಕ ಈ ಕೃತ್ಯವನ್ನು ಖಂಡಿಸಿ ದಾಗ ಪ್ರತಿಯಾಗಿ ಕ್ರಾಂತಿಕಾರಿಗಳು ‘ಬಾಂಬಿನ ಸಿದ್ಧಾಂತ’ ಎಂಬ ಕರಪತ್ರದ ಮೂಲಕ ಪ್ರಬಲ ಉತ್ತರ ನೀಡಿದರು.

“ಅಹಿಂಸೆಯು ಸ್ವಾತಂತ್ರ್ಯವನ್ನು ಕಳಿಸಿಕೊಡುತ್ತದೆ ಎಂಬುದು ಒಂದು ಅಸಾಧ್ಯವಾದ ರಮ್ಯ ಕಲ್ಪನೆ.. ಒಂದು ಸಶಸ್ತ್ರ ಕ್ರಾಂತಿಯ ಮೂಲಕ ಮಾತ್ರವೇ ನಾವು ಬ್ರಿಟಿಷರನ್ನು ಕಿತ್ತೆಸೆದು ಈ ದೇಶದಲ್ಲಿ ಸಮಾಜವಾದವನ್ನು ಸ್ಥಾಪಿಸಲು ಸಾಧ್ಯ.”

1930ರ ಮೇನಲ್ಲಿ ಆಜಾದ್ ಮತ್ತವರ ಕಾಮ್ರೇಡ್ ಅರು ಭಗತ್ ಸಿಂಗ್ ಹಾಗೂ ದತ್ತ ದತ್ತ ಅವರನ್ನು ಜೈಲಿನಿಂದ ಮಾಡಲು ಯತ್ನಿಸಿದರು ಈ ಪ್ರಯತ್ನದಲ್ಲಿ ಪಕ್ಷದ ಪ್ರಮುಖ ಸದಸ್ಯರಾಗಿದ್ದರು ಭಗವತಿಚರಣ್ ವೋಹ್ರಾ ರವರು ಹುತಾತ್ಮರಾದರು. ಆಜಾದರು ಇದರಿಂದ ಅಪಾರ ದುಃಖಕ್ಕೆ ಈಡಾದರು. ಆದರೂ ಕೂಡ ಭರವಸೆಯನ್ನು ಕೈಬಿಡದೆ ಬಾಂಬೆ ಮತ್ತು ಮದ್ರಾಸಿನಲ್ಲಿ ಪಕ್ಷವನ್ನು ವಿಸ್ತರಿಸಲು ಯತ್ನಿಸಿದರು. ಆದರೆ 1930ರಲ್ಲಿ ಪಕ್ಷದೊಳಗಿನ ಕಲಹಗಳಿಂದ ಅವರು ಕೇಂದ್ರ ಸಮಿತಿಯನ್ನು ವಿಸರ್ಜಿಸಿ ಬೇಕಾಯಿತು, ಮತ್ತು ಸ್ಥಳೀಯ ಸಮಿತಿಗಳು ಪರಸ್ಪರ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸೂಚಿಸಬೇಕಾಯಿತು.

ಈ ಹೊತ್ತಿಗಾಗಲೇ ಕ್ರಾಂತಿಕಾರಿಗಳು ಕಮ್ಯುನಿಸ್ಟ್ ಚಳುವಳಿಗೆ ಬಹಳ ಹತ್ತಿರ ಬಂದಿದ್ದರು, ಮತ್ತು ಕೆಲವು ಕ್ರಾಂತಿಕಾರಿಗಳನ್ನು ರಾಜಕೀಯ ಮತ್ತು ಮಿಲಿಟರಿ ತರಬೇತಿಗಾಗಿ ಸೋವಿಯತ್ ಒಕ್ಕೂಟಕ್ಕೆ ಕಳುಹಿಸುವ ಪ್ರಯತ್ನ ನಡೆಸಿದ್ದರು. ಪಂಜಾಬ್ ಉತ್ತರ ಪ್ರದೇಶ ಹಾಗೂ ವಿಭಜಿತ ಬಂಗಾಳದ ರೈತ ಸಂಘಟನೆಗಳು ಮತ್ತು ಟ್ರೇಡ್ ಯುನಿಯನ್ನುಗಳೊಂದಿಗೆ ಅವರು ನಿಕಟವಾಗಿ ಕೆಲಸ ಮಾಡುತ್ತಿದ್ದರು. ಯುವ ರಾಜಕೀಯ ಕಾರ್ಯಕರ್ತರಿಗೆ ಕರೆ ನೀಡುತ್ತಾ 1931ರ ಫೆಬ್ರುವರಿಯಲ್ಲಿ ಭಗತ್ ಸಿಂಗರು ಜೈಲಿನಿಂದ ಒಂದು ಪತ್ರ ಬರೆದರು:

“ಗುಪ್ತ ಹಾಗೂ ಬಹಿರಂಗ ಚಟುವಟಿಕೆಗಳನ್ನು ನಡೆಸುವ ಒಂದು ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಬೇಕು … ಅದು ಬಹಿರಂಗ ಚಟುವಟಿಕೆಗಳನ್ನು ಮಾಡಿದರೆ ಉತ್ತಮ … ಕಾರ್ಖಾನೆ ಕಾರ್ಮಿಕರು ಮತ್ತು ರೈತರ ಮಧ್ಯೆ ಕೆಲಸ ಮಾಡಬೇಕು… ಅವರೇ ನಿಜವಾದ ಕ್ರಾಂತಿಕಾರಿ ಶಕ್ತಿಗಳು… ಅವರನ್ನು ನಾವು ಅವರ ವರ್ಗ ಆಧಾರಿತ ಬೇಡಿಕೆಗಳೊಂದಿಗೆ ಸಂಘಟಿಸಲು ಸಾಧ್ಯವಾದರೆ ಮಾತ್ರ ಬ್ರಿಟಿಷರು ಹಾಗೂ ಭಾರತೀಯ ಬಂಡವಾಳಶಾಹಿಗಳ ವಿರುದ್ಧ ಕ್ರಾಂತಿಯನ್ನು ಸಂಘಟಿಸಲು ಸಾಧ್ಯ.”

ಭಗತ್ ಸಿಂಗರು ಈ ಪತ್ರ ಬರೆದ ಕೆಲವು ವಾರಗಳಲ್ಲೇ ಅಲಹಾಬಾದಿನ ಒಂದು ಪಾರ್ಕಿನಲ್ಲಿ ಪೊಲೀಸರು ಆಜಾದರನ್ನು ಸುತ್ತುವರೆದರು. ಪ್ರಾಯಶಃ ಅವರ ಪಕ್ಷದ ಒಬ್ಬ ಸದಸ್ಯರು ಬ್ರಿಟಿಷ್ ಮಾಹಿತಿದಾರರಾಗಿರಬಹುದು. ಗಾಯಗಳಿಗೆ ತುತ್ತಾಗುವ ಮೊದಲು ಅವರು ಎರಡು ಗಂಟೆಗಳ ಕಾಲ ಪೊಲೀಸರ ವಿರುದ್ಧ ಒಬ್ಬರೇ ಹೋರಾಡಿದರು.

1931 ಫೆಬ್ರುವರಿ 27ರಂದು ಆಜಾದರು ತಮ್ಮ 24ನೇ ವಯಸ್ಸಿನಲ್ಲಿ ಹುತಾತ್ಮರಾದರು. ಒಂದು ತಿಂಗಳು ನಂತರ ಬ್ರಿಟಿಷ್ ಸರ್ಕಾರವು ಭಗತ್ ಸಿಂಗ್ ಹಾಗೂ ಅವರ ಇನ್ನಿಬ್ಬರು ಕಾಮ್ರೇಡರನ್ನು ಗಲ್ಲಿಗೇರಿಸಿತು.

ಈ ಯುವ ಕ್ರಾಂತಿಕಾರಿಗಳ ತ್ಯಾಗಗಳು ನಿರುಪಯುಕ್ತವಾಗದೆ ಭಾರತೀಯರಲ್ಲಿ ತೀವ್ರ ಬದಲಾವಣೆ ತರಲು ಸಾಕಷ್ಟು ಪಾತ್ರ ವಹಿಸಿವೆ. ಈ ಕ್ರಾಂತಿಕಾರಿಗಳ ಅತ್ಯಂತ ಯಶಸ್ವಿ ಪ್ರಚಾರದಿಂದಾಗಿ ವಸಾಹತುಶಾಹಿ ವಿರೋಧಿ ಚಳುವಳಿಯು ಸೈದ್ಧಾಂತಿಕವಾಗಿ ಎಡವಾದದತ್ತ ತಿರುವು ಪಡೆಯಿತು.

ಇಷ್ಟಾಗಿಯೂ, ಈ ಮಾರ್ಕ್ಸ್ ವಾದಿ ಕ್ರಾಂತಿಕಾರಿಗಳ ಕಾಂಗ್ರೆಸ್ ವಿರೋಧಿ ರಾಜಕೀಯ ಮತ್ತು ಹಿಂಸೆಯ ಬಳಕೆಯನ್ನಷ್ಟೇ ಪ್ರಚಾರ ಮಾಡಿ ಅದನ್ನು ಗಾಂಧೀಜಿಯ ಅಚಲ ಅಹಿಂಸೆಯ ನಂಬಿಕೆಗೆ ವಿರುದ್ಧವಾಗಿ ಬಳಸಿಕೊಳ್ಳಲು ಸ್ವಾತಂತ್ರ್ಯನಂತರದಲ್ಲಿ ಹಿಂದುತ್ವ ಶಕ್ತಿಗಳು ಯತ್ನಿಸಿವೆ. ತಮ್ಮ ಹಿತಾಸಕ್ತಿಗಾಗಿ ಆಜಾದ್ ಮತ್ತು ಭಗತ್ ಸಿಂಗ್ ಅವರಂತ ಕ್ರಾಂತಿಕಾರಿಗಳ ವಿಚಾರಗಳನ್ನು ತಿಳಿಗೊಳಿಸಿದ್ದಾರೆ. ಕಾಂಗ್ರೆಸ್ಸಿನ ನಿರಾಸಕ್ತಿ ಮತ್ತು ತಮ್ಮನ್ನು ತಾವೇ ಎಡ ವಾದಿಗಳು ಎಂದು ಕರೆದುಕೊಳ್ಳುವವರ ಕಕ್ಕಾಬಿಕ್ಕಿ ತನದಿಂದ ಯಾವ ಉಪಯೋಗವಾಗಿಲ್ಲ.

ಹಾಗೆ ತೆಗೆದುಕೊಂಡರೆ, ಆಜಾದರು ಜನಿವಾರವನ್ನು ಧರಿಸಿರುವ ಭಾವಚಿತ್ರ ವನ್ನು ಯಾವ ಸಂದರ್ಭದಲ್ಲಿ ತೆಗೆದದ್ದು ಎಂಬುದರ ಕುರಿತು ಯಾವ ಇತಿಹಾಸಕಾರರೂ ಗಮನಹರಿಸಿಲ್ಲ. ಪಿ ಎಚ್ ಡಿ ಕ್ಷೇತ್ರ ಚಟುವಟಿಕೆಯಲ್ಲಿ ತಿಳಿದುಬಂದದ್ದು, ಈ ಭಾವಚಿತ್ರವನ್ನು ಸೆರೆಹಿಡಿದಾಗ, ಕಾಕೋರಿ ಪ್ರಕರಣದ ವಿಷಯವಾಗಿ ಆಜಾದರು ಪೋಲಿಸರಿಂದ ತಲೆಮರೆಸಿಕೊಂಡು, ಒಂದು ಹಳ್ಳಿಯಲ್ಲಿ ಮಕ್ಕಳಿಗೆ ರಾಮಾಯಣ ಬೋಧಿಸುವ ಒಬ್ಬ ಸಾಧುವಿನ ವೇಷದಲ್ಲಿದ್ದರು!

ಸತ್ಯಾಂಶವೆಂದರೆ, HSRAಯ 1928 ರ ಐತಿಹಾಸಿಕ ಸಭೆಯಲ್ಲಿ ಕ್ರಾಂತಿಕಾರಿಗಳು ಜಾತಿ ಮತ್ತು ಧರ್ಮದ ಎಲ್ಲ ಕುರುಹುಗಳಿಂದ ಮುಕ್ತರಾಗುವ ಸಂಕಲ್ಪ ತೆಗೆದುಕೊಂಡರು. ಆದ್ದರಿಂದಲೇ ಭಗತ್ ಸಿಂಗರು ತಮ್ಮ ಉದ್ದ ಕೂದಲು ಮತ್ತು ಗಡ್ಡವನ್ನು ಕತ್ತರಿಸಿಕೊಂಡರು, ಮತ್ತು ಆಜಾದರು ತಮ್ಮ ಜನಿವಾರವನ್ನು ಕಿತ್ತೊಗೆದರು. ನಮ್ಮ ಕ್ರಾಂತಿಕಾರಿಗಳ ಪೂರೋಗಾಮಿ ಇತಿಹಾಸವನ್ನು ತಿಳಿದುಕೊಳ್ಳುವ ಅವಶ್ಯಕತೆ ಬಹಳಷ್ಟು ಇದೆ!

Don`t copy text!