ಅಂಬಾನಿ ಮಗನ 5000 ಕೋಟಿ ಮದುವೆಯಿಂದ ಸಮಾಜಕ್ಕೆ ಏನು ಪ್ರಯೋಜನ?
ಜೈಲಿನಲ್ಲಿರುವ ಸೆಲೆಬ್ರಿಟಿ ಉಪ್ಪಿಟ್ಟು ತಿಂದರೇನು? ಚಿತ್ರಾನ್ನ ತಿಂದರೇನು- ಕೆ.ವಿ.ಪ್ರಭಾಕರ್ ವ್ಯಂಗ್ಯ
e-ಸುದ್ಹಿ ಹರಿಹರ
ಸರ್ಕಾರ ಮತ್ತು ಸಂಘಟನೆ ಒಟ್ಟಿಗೆ ಹೋದಾಗ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ತಾಲ್ಲೂಕು ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಶ್ರೀಮಂತರ ಮನೆಯ ಮಕ್ಕಳು ಪತ್ರಿಕಾ ವೃತ್ತಿಗೆ ಬರುವುದು ಕಡಿಮೆ. ಉಳಿದ ಎಲ್ಲಾ ವರ್ಗದ ಜನತೆ ಸರ್ಕಾರದ ಸವಲತ್ತುಗಳನ್ನು ಕೇಳಿ ಪಡೆದುಕೊಳ್ಳುವ ಹಾಗೆಯೇ, ಪತ್ರಕರ್ತರೂ ಕೂಡ ಸರ್ಕಾರದ ಕಾರ್ಯಕ್ರಮಗಳನ್ನು ತಮ್ಮ ಹಕ್ಕು ಎಂದು ಭಾವಿಸಿ ಪಡೆದುಕೊಳ್ಳಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಪತ್ರಕರ್ತರು ಅನುಭವಿಸಿದ ಸಂಕಷ್ಟಗಳನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಆದ್ದರಿಂದ ಸರ್ಕಾರದ ಜನಪರ ಕಾರ್ಯಕ್ರಮಗಳ ಅನುಕೂಲ ಪಡೆದುಕೊಳ್ಳಲು ಪತ್ರಕರ್ತರು ಹಿಂಜರಿಯಬಾರದು ಎಂದರು.
ದಾವಣಗೆರೆ ಪತ್ರಕರ್ತರ ಸಮ್ಮೇಳನದ ಫಲಪ್ರದದಿಂದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸಿಗುವಂತಾಗಿದೆ. ಕಾರ್ಯನಿರತ ಮತ್ತು ಕಾರ್ಯಮರೆತ ಪತ್ರಕರ್ತರಿಬ್ಬರೂ ಬಸ್ ಪಾಸ್ ಕೇಳುತ್ತಿದ್ದಾರೆ. ಇದು ಸಾಧ್ಯವಿಲ್ಲ. ಏಕೆಂದರೆ ಸರ್ಕಾರದ ಸವಲತ್ತು ದುರುಪಯೋಗ ಆಗಬಾರದು. ಈ ಬಗ್ಗೆ ಪತ್ರಕರ್ತರೂ ಸ್ವಯಂ ತೀರ್ಮಾನ ಮಾಡಿಕೊಳ್ಳಬೇಕು ಎಂದರು.
ತಾಲ್ಲೂಕು ಪತ್ರಕರ್ತರಿಗೆ ಉಚಿತ ಲ್ಯಾಪ್ ಟಾಪ್ ವಿತರಿಸುವ ಕುರಿತ ಪತ್ರಕರ್ತರ ಬೇಡಿಕೆಗಳ ಬಗ್ಗೆ ಈಗಾಗಲೇ ಜಿಲ್ಕಾಧಿಕಾರಿಗಳ ಜೊತೆ ಮಾತಾಡಿದ್ದೇನೆ. ಸಮಗ್ರ ಮಾಹಿತಿ ಪಡೆದು ತೀರ್ಮಾನ ಮಾಡಲಾಗುವುದು ಎಂದರು.
ಫೇಕ್ ನ್ಯೂಸ್ ಗಳಿಂದ ಮರ್ಯಾದೆ ಬರಲ್ಲ
ಫೇಕ್ ನ್ಯೂಸ್ ಫ್ಯಾಕ್ಟರಿಗಳೇ ಶುರುವಾಗಿದೆ. ಫೇಕ್ ನ್ಯೂಸ್ ಸುದ್ದಿಗಳಿಂದ ಪತ್ರಕರ್ತರಿಗೆ, ಪತ್ರಿಕಾ ವೃತ್ತಿಗೆ ಮರ್ಯಾದೆ ಬರುವುದಿಲ್ಲ. ಆದ್ದರಿಂದ ಜನರಿಗೆ ಅಗತ್ಯವಾದ ಸುದ್ದಿಗಳನ್ನು ಜನರಿಗೆ ನೀಡಿ ಎಂದು ಕರೆ ನೀಡಿದರು.
ಅಂಬಾನಿ ಮಗನ 5000 ಕೋಟಿ ಮದುವೆಯಿಂದ ಸಮಾಜಕ್ಕೆ ಏನು ಪ್ರಯೋಜನ? ಜೈಲಿನಲ್ಲಿರುವ ಸೆಲೆಬ್ರಿಟಿ ಉಪ್ಪಿಟ್ಟು ತಿಂದರೇನು? ಚಿತ್ರಾನ್ನ ತಿಂದರೇನು? ಇದೂ ಒಂದು ಸುದ್ದಿಯಾಗಿ ಪ್ರಸಾರ ಮಾಡೋದಾ? ಇಂಥಾ ಪತ್ರಿಕೋದ್ಯಮ ಪತ್ರಕರ್ತರ ಯೋಗ್ಯತೆಯನ್ನು ನಿರ್ಧರಿಸುತ್ತವೆ ಎಂದು ಕಿವಿ ಹಿಂಡಿದರು.
ಸತ್ಯ, ಸುಳ್ಳು ಪರಿಶೀಲಿಸದೆ ಬ್ರೇಕ್ ಮಾಡುವ ಸುದ್ದಿಗಳು ಪತ್ರಕರ್ತರಿಗೂ,ಪತ್ರಿಕಾ ವೃತ್ತಿಗೂ ಮರ್ಯಾದೆ ಬರಲ್ಲ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಶಾಸಕ ಹರೀಶ್, ತಾಲ್ಲೂಕು ಪತ್ರಕರ್ತರ ಸಂಘದ ಮುಖಂಡರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಎಂ.ಸಿ