ಮಾರ್ಕಂಡೇಯ ಋಷಿಗಳು…

ಮಾರ್ಕಂಡೇಯ ಋಷಿಗಳು…

 

 

 

 

 

 

 

 

ಹಿಂದೆ ಮೃಕಂಡು ಎಂಬ ಋಷಿಗಳು ಇದ್ದರು. ಅವರು ಗುರುಕುಲವನ್ನು ನಡೆಸುತ್ತಿದ್ದರು, ಅವರ ಆಶ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿಯುತ್ತಿದ್ದರು. ಆಗ ಈ ರೀತಿಯ ಗುರುಕುಲಗಳನ್ನು ನಡೆಸುವ ಗುರುಗಳ ಖರ್ಚು ವೆಚ್ಚಗಳನ್ನು ರಾಜನು ನೋಡಿಕೊಂಡು ಅಂತಹ ಗುರುಗಳನ್ನು ಪೋಷಿಸಿ ಅವರ ಸೇವೆಯನ್ನು ಮಾಡುತ್ತಿದ್ದನು. ಇಂತಹ ವಿದ್ಯಾವಂತ ಮತ್ತು ಮಹಾನ್‌ ಗುರುಗಳಾದ ಮೃಕಂಡು ಮುನಿಗಳಿಗೆ ಪುತ್ರ ಸಂತಾನವಿರಲಿಲ್ಲ. ಋಷಿಪತ್ನಿ ಮರುದ್ವತಿಗೆ ಮಕ್ಕಳಿಲ್ಲದ ಕಾರಣ ಖಿನ್ನಳಾಗಿರುತ್ತಿದ್ದಳು, ಒಮ್ಮೆ ಪತಿಯ ಬಳಿ ” ಸ್ವಾಮಿ ನಮಗೂ ಕೂಡ ಒಂದೇ ಒಂದು ಮಗುವಿದ್ದರೆ ಎಷ್ಟು ಚಂದವಿರುತ್ತಿತ್ತು” ಎಂದು ದುಖಃದಿಂದ ಹೇಳಿದಾಗ ಮುನಿಗಳಿಗೆ ತಾವು ಕೂಡ ಸಂತಾನ ಪ್ರಾಪ್ತಿಗಾಗಿ ತಪಸ್ಸನ್ನು ಮಾಡಬಬೇಕೆಂಬ ವಿಚಾರವು ಬಂದಿತು.

ಋಷಿ ಹಾಗೂ ಪತ್ನಿ ಇಬ್ಬರೂ ಸೇರಿ ಸತ್‌ ಸಂತಾನಕ್ಕಾಗಿ ಈಶ್ವರನನ್ನು ಕುರಿತು ತಪಸ್ಸನ್ನು ಆಚರಿಸಲು ಆರಂಭಿಸಿದರು. ಅನೇಕ ವರ್ಷಗಳ ಕಾಲ ಪುಷ್ಪಭದ್ರ ನದಿಯ ತೀರದಲ್ಲಿ ಕಠಿಣ ತಪಸ್ಸನ್ನು ಆಚರಿಸಿದರು, ಇವರ ತಪಸ್ಸಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ” ನಿಮಗೆ ಸಂತಾನ ಭಾಗ್ಯವಿರಲಿಲ್ಲ ಆದರೆ ನಿಮ್ಮ ಕಠಿಣ ತಪಸ್ಸಿಗೆ ಮೆಚ್ಚಿ ಸಂತಾನವನ್ನು ಕರುಣಿಸುತ್ತಿದ್ದೇನೆ. ಬುದ್ಧಿವಂತನಾದ ಅಲ್ಪಾಯುಷಿ ಮಗನನ್ನು ಬೇಡುತ್ತೀರೋ ಅಥವಾ ಮೂರ್ಖನಾದ ದೀರ್ಘಾಯುಷಿ ಮಗನನ್ನು ಬೇಡುತ್ತೀರೋ” ಎಂದು ಕೇಳಿದಾಗ ದಂಪತಿಗಳು ಬುದ್ಧಿವಂತನಾದ ಅಲ್ಪಾಯುಷಿ ಮಗನನ್ನೇ ಬೇಡಿದರು.

ಋಷಿ ದಂಪತಿಗಳಿಗೆ ಬುದ್ಧಿವಂತನೂ ನೋಡಲು ಚಂದ್ರನಂತೆ ಸುಂದರನೂ ಆದ ಮಗನು ಜನಿಸಿದನು. ಮಾರ್ಕಂಡೇಯನೆಂದು ಅವನನ್ನು ಕರೆದರು. ಸಣ್ಣ ವಯಸ್ಸಿನಲ್ಲಿಯೇ ಉಪನಯನವನ್ನು ಮಾಡಿ ಶಾಸ್ತ್ರ ಪುರಾಣ ವೇದಗಳ ಅಧ್ಯಯನವನ್ನು ಮಾಡಿಸಿದರು. ಮಾರ್ಕಂಡೇಯನು ಬುದ್ಧಿವಂತನಾದ ಕಾರಣ ಬಹಳ ಸೊಗಸಾಗಿ ಕಲಿತು ಎಲ್ಲರ ಮನಕ್ಕೂ ಆನಂದವನ್ನುಂಟು ಮಾಡುತ್ತಲಿದ್ದನು. ಮೃಕಂಡು ಮುನಿಗಳು ಮಗನಿಗೆ ಮೃತ್ಯುಂಜಯ ಜಪವನ್ನು ತಪ್ಪದೇ ಮಾಡಲು ಮತ್ತು ಜ್ಞಾನಿಗಳಾದ ಪಂಡಿತರು ಬಂದಾಗ ಅವರ ಸೇವೆಯನ್ನು ಮಾಡುವುದನ್ನು ತಪ್ಪಿಸಬೇಡವೆಂದು ಹೇಳಿದ್ದರು. ಆಶ್ರಮದ ಹಿಂಬದಿಯಲ್ಲಿ ರುದ್ರನ ಲಿಂಗವನ್ನು ಸ್ತಾಪಿಸಿ ತಪ್ಪದೇ ಜಪ ತಪಗಳನ್ನು ಮಾಡುತ್ತಾ ಅಲ್ಲಿನಿಂದ ಹಾದು ಹೋಗುವ ಪಂಡಿತರಿಗೆ ಬ್ರಾಹ್ಮಣರಿಗೆ ಮತ್ತು ಋಷಿಮುನಿಗಳಿಗೆ ಸೇವೆಯನ್ನು ಮಾಡುತ್ತಾ ಇರುತ್ತಿದ್ದನು. ಒಂದು ಬಾರಿ ಸಪ್ತರ್ಷಿಗಳು ಆ ಮಾರ್ಗದಲ್ಲಿ ಹೋಗುತ್ತಿದ್ದರು. ಮಾರ್ಕಂಡೇಯನು ಅವರನ್ನು ಕರೆದು ಅವರ ಸೇವೆಯನ್ನು ಮಾಡಿ ಆಶೀರ್ವಾದ ಪಡೆದನು. ಅವರೆಲ್ಲರೂ ಅವನಿಗೆ “ದೀರ್ಘಾಯುಷ್ಯವಂತನಾಗು” ಎಂದು ಆಶೀಋವದಿಸಿದರು. ಏಳು ಜನ ಋಷಿಗಳು ಈ ಆಶೀರ್ವಾದವನ್ನು ಮಾಡಿದರು. ಭರದ್ವಾಜರು ಆಶೀರ್ವಾದ ಮಾಡುವಾಗ ಅವನ ಹಣೆಯಲ್ಲಿ ಅಲ್ಪ ಆಯುಷ್ಯದ ಗೆರೆಯನ್ನು ಗುರುತಿಸಿದರು. ತಮ್ಮ ಜೊತೆಗೆ ಇದ್ದ ಇತರ ಋಷಿಗಳಿಗೆ ಹೇಳಿದರು. “ಇವನ ಹಣೆಯ ಬರಹವನ್ನು ಓದಿದರೆ ಇವನ ಆಯುಷ್ಯವು ಮುಗಿಯಲು ಕೇವಲ ಮೂರು ದಿನಗಳ ಕಾಲ ಮಾತ್ರ ಇದೆ. ನಮ್ಮ ಮಾತುಗಳು ಎಂದಿಗೂ ಸುಳ್ಳಾಗಿಲ್ಲ ಈ ಆಶೀರ್ವಾದವೂ ಸತ್ಯವಾಗಬೇಕೆಂದು” ಹೇಳಿದರು ಮತ್ತು ಅವನನ್ನು ತಮ್ಮೊಂದಿಗೆ ಬ್ರಹ್ಮಲೋಕಕ್ಕೆ ಕರೆದುಕೊಂಡು ಹೋದರು.

ಬ್ರಹ್ಮನು ಸಪ್ತರ್ಷಿಗಳೊಂದಿಗೆ ಬಂದ ಬಾಲಕನನ್ನು ನೋಡಿ ಅವರ ಮಾತನ್ನು ಕೇಳಿ “ನಿಮ್ಮ ಆಶೀರ್ವಾದವು ಸುಳ್ಳಾಗಲು ಸಾಧ್ಯವಿಲ್ಲ. ನೀವುಗಳು ಚಿಂತಿಸದಿರಿ. ಬಾಲಕನು ಶಿಭಕ್ತನಾಗಿದ್ದಾನೆ. ಶಿವನೇ ಅವನ ರಕ್ಷಣೆಯನ್ನು ಮೃತ್ಯು ದೇವತೆಯಿಂದ ತಪ್ಪಿಸಬಹುದು ಬಾಲಕನನ್ನು ಪುನಃ ಆಶ್ರಮದಲ್ಲಿ ಬಿಟ್ಟು ಬಿಡಿ” ಎಂದು ಬ್ರಹ್ಮನು ಹೇಳಿದನು. ಸಪ್ತರ್ಷಿಗಳು ಬಾಲಕನಿಗೆ ಆಶ್ರಮಕ್ಕೆ ತಂದು ಬಿಟ್ಟು ಮತ್ತೊಮ್ಮೆ ಶಿವಪೂಜೆಯ ವಿಧಿಯನ್ನು ಉಪದೇಶಿಸಿ ಆಶೀರ್ವದಿಸಿ ಹೊರಟರು. ಮಾರ್ಕಂಡೇಯನ ಮೃತ್ಯುವಿನ ಸಮಯ ಹತ್ತಿರ ಬರುತ್ತಿದ್ದಂತೆ ತಂದೆ ಮೃಕಂಡು ಋಷಿ ಚಿಂತಿತರಾಗಿ ಮಗನನ್ನು ತಮ್ಮ ಪಕ್ಕದಲ್ಲಿಯೇ ಕುಳ್ಳಿರಿಸಿಕೊಂಡು ಶಿವಾರಾಧನೆಯನ್ನು ಮಾಡತೊಡಗಿದರು.

ಸಮಯ ಹತ್ತಿರ ಬಂದಂತೆ ಮೃತ್ಯು ದೇವತೆ ತನ್ನ ಪಾಶವನ್ನು ಹಿಡಿದು ಬಂದಾಗ ಹೆದರಿದ ಬಾಲಕನಾದ ಮಾರ್ಕಂಡೇಯರು ಶಿವಲಿಂಗವನ್ನು ಗಟ್ಟಿಯಾಗಿ ಅಪ್ಪಿ ನಿಂತರು. ತನ್ನ ಕಾರ್ಯ ಮಾಡಲು ಬಂದ ಮೃತ್ಯು ದೇವತೆಯು ಶಿವಲಿಂಗ ಸಮೇತನಾಗಿ ಬಾಲಕನಿಗೆ ತನ್ನ ಪಾಶದಿಂದ ಎಳೆಯಲು ಆರಂಭಿಸಿದನು. ಆಗ ಶಿವನು ಸ್ವತಃ ಪ್ರತ್ಯಕ್ಷನಾಗಿ ಬಂದನು. ಶಿವನ್ನು ಕಂಡು ನಮಿಸಿದ ಮೃತ್ಯುದೇವತೆಗೆ ಶಿವನು “ಬಾಲಕನ ಪ್ರಾಣವನ್ನು ಕೊಂಡಯ್ಯದಂತೆ ಆಶೀರ್ವಾದವನ್ನು ನೀಡಿದನು. ಜೊತೆಗೆ ಪಾರ್ವತಿ ದೇವಿ ಕೂಡ ಪ್ರತ್ಯಕ್ಷಳಾಗಿ ಪ್ರಸನ್ನಚಿತ್ತದಿಂದ ಮೃಕಂಡು ಮಹರ್ಷಿ ಮತ್ತು ಬಾಲಕ ಮಾರ್ಕಂಡೇಯರಿಗೆ ಆಶೀರ್ವದಿಸಿ ಶತಾಯುಷಿಯಾಗೆಂದು ವರವನ್ನು ನೀಡಿದರು.

ನೀತಿ : ಇಂದಿಗೂ ಕೂಡ ಸಣ್ಣ ಮಕ್ಕಳಿಗೆ ಮಾರ್ಕಂಡೇಯ ಆಯಷ್ಯವಂತನಾಗು ಎಂದು ಹಿರಿಯರು ಆಶೀರ್ವಾದವನ್ನು ಮಾಡುತ್ತಾರೆ. ನಾವು ಸ್ವತಃ ಇಂತಹ ಪುರಾಣ ಇತಿಹಾಸಗಳ ಕಥೆಗಳನ್ನು ತಿಳಿದು ನಮ್ಮ ಮಕ್ಕಳಿಗೆ ಕೂಡ ಹೇಳಬೇಕು. ಗುರುಹಿರಿಯರ ಆಶೀರ್ವಾದವು ಸತ್ಯವಾಗುವ ಕಾರಣ ಕಿರಿಯರು ನಮಸ್ಕರಿಸಿದಾಗ ದೀರ್ಘ ಆಯಸ್ಸು ಮತ್ತು ಅಭಿವೃದ್ಧಿಯ ಆಶೀರ್ವಾದವನ್ನು ನೀಡುವ ಪ್ರತಿ ನಿತ್ಯ ತಪ್ಪದೇ ಗುರುಹಿರಿಯರ ಆಶೀರ್ವಾದವನ್ನು ಪಡೆಯ ಬೇಕು ಅವರಿಗೆ ನಮಿಸ ಬೇಕು. ಗುರುಹಿರಿಯರು ಹಾಗೂ ದೇವತೆಗಳ ಆಶೀರ್ವಾದವನ್ನು ಪರಮಾತ್ಮನು ನೆರವೇರಿಸುತ್ತಾನೆ ಆದ ಕಾರಣ ನಾವು ಗುರುಹಿರಿಯರಿಗೆ ನಮಿಸಿ ಆಶೀರ್ವಾದ ಪಡೆಯುವ ಅಭ್ಯಾಸ ಇಟ್ಟುಕೊಳ್ಳ ಬೇಕು ಜೊತೆಗೆ ಭಕ್ತಿಯ ಮಾರ್ಗವನ್ನು ಎಂದಿಗೂ ಬಿಡಬಾರದು

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!