ನಾವು-ನಮ್ಮವರು
ಪುಸ್ತಕಗಳ ಆರಾಧಕರಾದ “ಪುಸ್ತಕದ ಸ್ವಾಮೀಜಿಯವರು”
ಡಾ. ಶ್ರೀ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು
ಪುಸ್ತಕ ಪುಸ್ತಕ ಪುಸ್ತಕ ಎಂದು ಹಗಲಿರುಳೂ ಹಂಬಲಿಸುವ ಸ್ವಾಮಿಗಳು ಯಾರಾದರೂ ಇದ್ದರೆ ಅವರೇ ಇಂದಿನ ಗದಗ-ಡಂಬಳ ತೋಂಟದಾರ್ಯ ಸಂಸ್ಥಾನ ಮಠದ ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು. ತಮ್ಮ ಆಪ್ತ ವಲಯದಲ್ಲಿಯೇ ಸಹಸ್ರ ಸಹಸ್ರಗಟ್ಟಳೇ ಪುಸ್ತಕಗಳನ್ನು ಕೊಂಡು ತಂದು ಅವುಗಳಿಗಾಗಿಯೇ ಒಂದು ಭವ್ಯ ಭವನವನ್ನು ಕಟ್ಟಿಸಿ ಗ್ರಂಥಾಲಯ ವಿಜ್ಞಾನಿಗಳಾದ ಡಾ. ಎಸ್. ಆರ್. ಗುಂಜಾಳ ಅವರಿಂದ ವ್ಯವಸ್ಥಿತವಾಗಿ ಸಂಘಟಿಸಿ ಆಸಕ್ತರಿಗೆ, ಅಧ್ಯಯನಶೀಲರಿಗೆ ಹಾಗೂ ಸಂಶೋಧಕರಿಗೆ ಉಚಿತವಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದನ್ನು ನಾವು ಇಂದಿಗೂ ಬೆಳಗಾವಿಯ ಶ್ರೀ ನಾಗನೂರು ರುದ್ರಾಕ್ಷಿ ಮಠದಲ್ಲಿ ಕಾಣಬಹುದು.
ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಬೆಳೆದು ಬಂದ ದಾರಿಯೇ ಒಂದು ರೋಚಕ ಮತ್ತು ಅನುಕರಣೀಯ ಕಥಾನಕ. ಇವರ ಪೂರ್ವಾಶ್ರಮದ ಹೆಸರು “ಕರಿವೀರಯ್ಯ”. ಶರಣ ರುದ್ರಯ್ಯ ಮತ್ತು ಶರಣೆ ಶಾಂತಮ್ಮ ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಸಮೀಪವಿರುವ “ಹಲಗಲಿ” ಗ್ರಾಮದಲ್ಲಿ ವಾಸವಾಗಿದ್ದಂಥ ದಂಪತಿಗಳು. ಇಂಥ ಶರಣ ಸಂಸ್ಕೃತಿಯೇ ಮೈವೆತ್ತಂಥ ದಂಪತಿಗಳ ಸುಪುತ್ರರು ಕರಿವೀರಯ್ಯ. ದಿನಾಂಕ 12.12.1958 ರಲ್ಲಿ ಹುಟ್ಟಿದ ಬಾಲಕ ಕರಿವೀರಯ್ಯ, ಹುಟ್ಟಿದ ಕೆಲವೇ ದಿನಗಳಲ್ಲಿ ತಾಯಿಯನ್ನು ಕಳೆದುಕೊಂಡನು. ಬಾಲಕನನ್ನು ಸಾಕಿ ಬೆಳೆಸಿದ್ದು ಬೀಳಗಿ ಪಟ್ಟಣದ ಸಮೀಪವಿರುವ “ಹಲಗಲಿ” ಗ್ರಾಮದಲ್ಲಿ ವಾಸವಾಗಿದ್ದಂತ ಹಡಪದ ಸಮಾಜದ ತಾಯಿ ಗಂಗಮ್ಮನವರು.
ಬಾಲಕ ಕರಿವೀರಯ್ಯ ಗಂಗಮ್ಮನವರ ಸುಪರ್ದಿಗೆ ಬಂದ ಕಥೆ ಎಂಥವರನ್ನು ಒಂದು ಕ್ಷಣ ಮೂಕವಿಸಿತರನ್ನಾಗಿ ಮಾಡುವುದರಲ್ಲಿ ಸಂಶಯವೇ ಬೇಡ. ಕಿತ್ತು ತಿನ್ನುವ ಬಡತನ ಮತ್ತು ಧರ್ಮಪತ್ನಿಯನ್ನು ಕಳೆದುಕೊಂಡು ಒಂಟಿಯಾಗಿದ್ದಂತ ಶರಣ ರುದ್ರಯ್ಯನವರು ಈ ಜೀವನವೇ ಬೇಡ ಎನ್ನುವಷ್ಟರ ಮಟ್ಟಿಗೆ ರೋಸಿ ಹೋಗಿದ್ದರಂತೆ. ಇಂಥ ರುದ್ರಯ್ಯನವರು ಮಗನನ್ನು ಕರೆದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದಾಗ ಗಮನಿಸಿದ ಶರಣೆ ಗಂಗಮ್ಮ ಶರಣ ರುದ್ರಯ್ಯನವರಿಗೆ ಬುದ್ಧಿ ಹೇಳಿ ವಾಪಸ ಕರೆದು ತಂದರು ಮತ್ತು ಬಾಲಕ ಕರಿವೀರಯ್ಯನನ್ನು ತಾವೇ ಸಾಕಿ ಸಲುಹಿದರು. ಗಂಗಮ್ಮನ ಮನೆಯಲ್ಲಿ ಬೆಳೆದ ಪುಟ್ಟ ಬಾಲಕ ಮುಂದೆ ಬೀಳಗಿಯ ಕಲ್ಮಠದ ಶಾಖಾ ಮಠಕ್ಕೆ ಪೀಠಾಧಿಪತಿಯಾದಾಗ ಗುರುಪಾದ ದೇವರು ಎಂದು ನಾಮಕರಣಗೊಂಡು ನೇಮಕಗೊಂಡನು. ಹೀಗೆ ಲಿಂಗಾಯತ ಸಮಾಜಕ್ಕೆ ಕೊಡುಗೆಯಾಗಿ ಕೊಟ್ಟ ಹಿರಿಮೆ ಹಡಪದ ಸಮಾಜದ ಶರಣೆ ಗಂಗಮ್ಮನವರಿಗೆ ಸಲ್ಲುತ್ತದೆ.
ಬಾಲಕ ಗುರುಪಾದ ದೇವರು ಪ್ರಾಥಮಿಕ ವಿದ್ಯಾಭ್ಯಾಸ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಬೀಳಗಿಯ ಹಲಗಲಿಯಲ್ಲಿ ಪೂರೈಸಿದನು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಗುರುಪಾದ ದೇವರು ಬಾದಾಮಿಯ ಹತ್ತಿರವಿರುವ “ಶಿವಯೋಗ ಮಂದಿರ” ದಲ್ಲಿ ಧಾರ್ಮಿಕ ಪ್ರಶಿಕ್ಷಣವನ್ನೂ ಸಹ ಪಡೆದಿದ್ದಾರೆ. ಬಿ. ಎ ಪದವಿಯನ್ನು ಬನಾರಸ್ ವಿಶ್ವ ವಿದ್ಯಾಲಯದಿಂದ ಹಿಂದಿ ಹಾಗೂ ಸಂಸ್ಕೃತದಲ್ಲಿ ಮತ್ತು ಕರ್ನಾಟಕ ವಿಶ್ವ ವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಎಮ್. ಎ ಪದವಿಯನ್ನು ಪಡೆದರು. 2013 ರಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿದೆ.
ವಿದ್ಯಾರ್ಥಿಯಾಗಿದ್ದಾಗಲೇ ಬಾಲಕ ಗುರುಪಾದ ದೇವರು ಸಾಹಿತ್ಯ ಚಟುವಟಿಕೆಗಲ್ಲಿ ತೊಡಗಿಸಿಕೊಂಡದನ್ನು ನಾವು ಕಾಣಬಹುದು. ಅವರು ರಚಿಸಿದ ಪ್ರಮುಖ ಕೃತಿಗಳಲ್ಲಿ ಹಿಂದಿಯಲ್ಲಿ ವಿನೋಭಾ ಭಾವೆಯವರ ಕೃತಿಯನ್ನು ಕನ್ನಡಕ್ಕೆ “ಕೃತಯುಗಿ ವಿನೋಬ” ಎಂದು ಭಾಷಾಂತರಿಸಿದ್ದಾರೆ, ಇಷ್ಟಲಿಂಗ ಪೂಜಾವಿಧಾನ, ಧರ್ಮಜ್ಯೋತಿ ಚಿಂತನ, ವಚನಾರ್ಥ ಚಿಂತನ, ಇಸ್ಲಾಂ ಧರ್ಮ ಸಂದೇಶ ಪ್ರಮುಖವಾದವು.
ಬೆಳಗಾವಿಯ ನಾಗನೂರ ರುದ್ರಾಕ್ಷಿಮಠದ ಡಾ. ಶ್ರೀ ಶಿವಬಸವ ಮಹಾ ಸ್ವಾಮೀಜಿಯವರ ನೆಚ್ಚಿನ ಶಿಷ್ಯರಾಗಿದ್ದಂಥ ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರನ್ನು “ಶ್ರೀ ಸಿದ್ಧರಾಮ ಮಹಾಸ್ವಾಮಿ” ಗಳೆಂದು ನಾಮಕರಣ ಮಾಡಿ 10.11.1989 ರಂದು ತಮ್ಮ ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡರು. ಡಾ. ಶ್ರೀ ಶಿವಬಸವ ಮಹಾಸ್ವಾಮೀಜಿಯವರು 1994 ರಲ್ಲಿ ಲಿಂಗೈಕ್ಯರಾದಾಗ ಶ್ರೀ ಸಿದ್ಧರಾಮ ಮಹಾಸ್ವಾಮಿಗಳನ್ನು 9 ನೇ ಪೀಠಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ನಂತರ ಐತಿಹಾಸಿಕವಾಗಿ ನಾಗನೂರು ರುದ್ರಾಕ್ಷಿ ಮಠದಲ್ಲಿ ಸುಮಾರು 70 ವರ್ಷಗಳಿಂದ ನಡೆಯುತ್ತಿದ್ದ ದಾಸೋಹವನ್ನು ಮುಂದುವರೆಸಿಕೊಂಡು ಬಂದರು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಇಂಜನೀಯರಿಂಗ್ ವ್ಯಾಸಂಗದವರೆಗೂ ಶಿಕ್ಷಣವನ್ನು ವಿಸ್ತಾರಗೊಳಿಸಿದ್ದಾರೆ.
1990 ರಲ್ಲಿ ನಾಗನೂರ ರುದ್ರಾಕ್ಷಿ ಮಠದಲ್ಲಿ “ಲಿಂಗಾಯತ ಅಧ್ಯಯನ ಅಕಾಡೆಮಿ” ಯನ್ನು ಸ್ಥಾಪಿಸಿದರು. ಈ ಮೂಲಕ 85 ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಾಶನ ಮಾಡಿದ್ದಾರೆ. “ಸಿದ್ಧರಾಮೇಶ್ವರ ಮಾರ್ಗದರ್ಶನ ಸಂಸ್ಥೆ” ಯ ಮೂಲಕ IAS / KAS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅಧ್ಯಯನ ಸೌಲಭ್ಯಗಳನ್ನು ಮತ್ತು ವಸತಿಯನ್ನು ಕಲ್ಪಿಸಿ ಕೊಟ್ಟಿದ್ದಾರೆ. ದೆಹಲಿಯಲ್ಲಿ “ನಿರಂಜನ ಶಿವಬಸವ ಸ್ವಾಮಿಗಳ ಕಲ್ಯಾಣ ಕೇಂದ್ರ” ಎನ್ನುವ ಸಂಸ್ಥೆಯನ್ನು ಕಟ್ಟಿ IAS ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಅಧ್ಯಯನ ಸೌಲಭ್ಯಗಳನ್ನು ಮತ್ತು ವಸತಿಯನ್ನು ಕಲ್ಪಿಸಿ ಕೊಟ್ಟಿದ್ದಾರೆ.
ಸಂಶೋಧನಾ ಗ್ರಂಥಾಲಯವನ್ನು ಸ್ಥಾಪಿಸಿ ಧರ್ಮ, ಸಾಹಿತ್ಯ, ಸಂಸ್ಕೃತಿ ಸಂಬಂದಿಸಿದಂತೆ ಒಂದು ಸಾವಿರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ 300 ಕ್ಕೂ ಅಧಿಕ ತಾಡೋಲೆಗಳು ಇರುವುದನ್ನು ನಾವು ಗಮನಿಸಬೇಕು. ಈ ಗ್ರಂಥಾಲಯದಲ್ಲಿ 15 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಸಂಗ್ರಹಿದ್ದಾರೆ ಎಂದರೆ ಪರಮ ಪೂಜ್ಯರ ಇಚ್ಛಾಶಕ್ತಿ ಎಂಥ ಅಗಾಧವಾಗಿದೆ ಎನ್ನುವುದರ ಅರಿವು ನಮಗಾಗುತ್ತದೆ. ಈ ಮೂಲಕ ಜ್ಞಾನದ ಬೆಳಕನ್ನು ಪಸರಿಸುವ ಕೆಲಸವನ್ನು ಮಾಡಿದ್ದಾರೆ. ಈ ಸಂಶೋಧನಾ ಗ್ರಂಥಾಲಯ ದೇಶ ವಿದೇಶಗಳ ಸಂಶೋಧನಾಸಕ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವುದರ ಜೊತೆಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಧಿಕೃತ ಅನುಮೋದನೆ ಪಡೆದ ಗ್ರಂಥಾಲಯವಾಗಿದೆ. ಈ ಗ್ರಂಥಾಲಯದ ಸರ್ವಕಾಲಿಕ ಶೈಕ್ಷಣಿಕ ಸೇವೆಗಾಗಿ ಕರ್ನಾಟಕ ಸರ್ಕಾರವು 2017 ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಶ್ರೀ ಸಿದ್ಧರಾಮೇಶ್ವರ ಟ್ರಸ್ಟ್ ಸ್ಥಾಪಿಸಿ, ಅದರ ಮೂಲಕ ಶಾಲಾ ಕಾಲೇಜುಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವುದರ ಮೂಲಕ ಮುಂದಿನ ಪೀಳಿಗೆಗೆ ಸಮರ್ಥ ನಾಗರೀಕರನ್ನಾಗಿ ತಯಾರು ಮಾಡುತ್ತಿದ್ದಾರೆ. ಇವರ ಸತತ ಪರಿಶ್ರಮದಿಂದ ಕರ್ನಾಟಕ ಅಷ್ಟೇ ಅಲ್ಲಾ ಹೊರದೇಶಗಳಲ್ಲಿಯೂ ಕೂಡ ನಾಗನೂರು ರುದ್ರಾಕ್ಷಿಮಠ ಪ್ರಖ್ಯಾತಿಯನ್ನು ಪಡೆದುಕೊಂಡಿತು.
ಪರಿಸರ ಪ್ರೇಮಿಗಳಾದ ಪೂಜ್ಯರು “ವನ ಸಂವರ್ಧನಾ ಟ್ರಸ್ಟ್” ಸ್ಥಾಪಿಸಿ ಪರಿಸರದ ಸಮತೋಲನೆ ಕಾಯ್ದುಕೊಳ್ಳುವತ್ತ ಜನರನ್ನು ಆಕರ್ಷಿಸುವಂತೆ ಮಾಡಿದ್ದಾರೆ. ಬೆಳಗಾವಿ ಮತ್ತು ಬಾಗಲಕೋಟೆಗಳಲ್ಲಿ 50 ಲಕ್ಷಕ್ಕೂ ಸಸಿಗಳನ್ನು ಜನರ ಸಹಾಯದ ಮೂಲಕ ನೆಡುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಸಾರ್ವಜನಿಕರಲ್ಲಿ ಮೂಡಿಸಿದ್ದಾರೆ.
ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠ ಕರುನಾಡಿನಲ್ಲಿ ಅತ್ಯಂತ ಪ್ರಸಿದ್ಧ ಮಠಗಳಲ್ಲೊಂದು. 15 ನೇ ಶತಮಾನದಲ್ಲಿದ್ದ ಯೆಡೆಯೂರು ತೋಂಟದ ಸಿದ್ಧಲಿಂಗ ಯತಿಗಳಿಂದ ಸ್ಥಾಪಿತವಾದ ಮಠ. ಶ್ರೀ ತೋಂಟದಾರ್ಯ ಮಠ ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತ ಉತ್ಕೃಷ್ಠ ಕೊಡುಗೆಗಳನ್ನು ನೀಡುತ್ತಲಿದೆ. ಸಾಹಿತ್ಯಿಕವಾಗಿ ಉತ್ಕೃಷ್ಟ ಪ್ರಕಟಣೆಗಳನ್ನು ಹೊರತರಲಾಗಿದೆ. ಅದರಲ್ಲಿ ಪುಣ್ಯ ಪುರುಷರ ಪರಿಚಯ ಪುಸ್ತಕಗಳು, ಪುರಾತನ ಶರಣ ಸಾಹಿತ್ಯ ಪುಸ್ತಕಗಳು ಮಹತ್ತರ ಕೊಡುಗೆಗಳಾಗಿವೆ.
ಇಂಥ ಐತಿಹಾಸಿಕ ಹಿನ್ನಲೆಯುಳ್ಳ ಮಠವನ್ನು ಅಭೂತಪೂರ್ವವಾಗಿ ಮುನ್ನಡೆಸಿದ ಕೀರ್ತಿ 19 ನೇ ಪೀಠಾಧಿಪತಿಗಳಾಗಿದ್ದಂಥ ಜಗದ್ಗುರು ಡಾ. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಡಾ. ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳವರು ಇತ್ತೀಚೆಗೆ ನಡೆದ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಜೊತೆಗೆ ಬಸವ ತತ್ವ ಪ್ರಚಾರದಲ್ಲಿ ಡಾ. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೊತೆಗೆ ಭಾಗವಹಿಸಿದ್ದರು ಮತ್ತು ಉತ್ತಮ ಒಡನಾಟ ಹೊಂದಿದ್ದರು.
ದಿನಾಂಕ 20.10.2018 ರಂದು ಡಾ. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಹಠಾತ್ ಲಿಂಗೈಕ್ಯರಾದ ಸುದ್ದಿ ಬರಸಿಡಿಲಿನಂತೆ ಬಂದೆರಗಿದಾಗ ಭವ್ಯ ಇತಹಾಸವಿರುವ ಶ್ರಿಮಠವನ್ನು ಮುನ್ನಡೆಸುವು ಯಾರು ಎನ್ನು ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಡಾ. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ತಮ್ಮದೇ ಆದ ರೀತಿಯಲ್ಲಿ ಪರಿಹಾರ ಸೂಚಿಸಿದ್ದರು.
ನಾವು ಪೀಠಾಧ್ಯಕ್ಷರಾದ ಬಳಿಕ ಹಲವು ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ನಮ್ಮ ಮಠ, ಅದರ ಪರಂಪರೆ ಪ್ರಕಾರ ಬಸವ ತತ್ವ ಪ್ರಚಾರಕ್ಕಾಗಿ ರುದ್ರಾಕ್ಷಿ ಮಠದ ಶ್ರೀ ಸಿದ್ದರಾಮ ಮಹಾಸ್ವಾಮಿಯವರನ್ನು 20 ನೇ ಪೀಠಾಧಿಕಾರಿಯಾಗಿ ನೇಮಕ ಮಾಡಬೇಕು ಎಂದು 10 ವರ್ಷಗಳ ಹಿಂದೆ ಲಕೋಟೆಯಲ್ಲಿ ವಿಲ್ ಮಾಡಿಟ್ಟಿದ್ದರು.
ಡಾ. ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರು ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಮಹಾಸ್ವಾಮಿ ಅವರನ್ನು ನೇಮಿಸಬೇಕೆಂದು ಸೂಚಿಸಿದ್ದರಿಂದ 20 ನೇ ಪೀಠಾಧಿಪತಿಗಳನ್ನಾಗಿ “ಶ್ರೀ ತೋಂಟದ ಸಿದ್ಧರಾಮ ಮಾಹಾಸ್ವಾಮಿಗಳು” ಎಂದು ನಾಮಕರಣ ಮಾಡಿ ಪೀಠಾಧಿಪತಿಗಳನ್ನಾಗಿ ನೇಮಿಸಿದರು.
ಒಂದು ವಿಶ್ವ ವಿದ್ಯಾಲಯ ಮಾಡುವುದಕ್ಕಿಂತಲೂ ಹೆಚ್ಚು ಕೆಲಸವನ್ನು ಪೂಜ್ಯರು ಮಾಡಿದ್ದಾರೆ ಮತ್ತು ಈ ಅಭಿಯಾನವನ್ನು ಮುಂದುವರೆಸಿದ್ದಾರೆ. ಅಪ್ರತಿಮ ಮತ್ತು ಅನುಪಮ ಪುಸ್ತಕ ಓದುವ ಹವ್ಯಾಸವಿರುವ, ಉತ್ತಮ ಬರಹಗಾರ ಮತ್ತು ಭಾಷಾಂತರಕಾರರಾಗಿರುವ, ಅಭಿವೃದ್ಧಿಯ ಚಿಂತಕರು, ಅಸ್ಖಲಿತ ಪ್ರವಚನಕಾರರು ಶೈಕ್ಷಣಿಕ ನೇತಾರರು ಮತ್ತು ಪರಿಸರ ಪ್ರೇಮಿಗಳೂ ಅಗಿರುವ ಶ್ರೀ ತೋಂಟದ ಸಿದ್ಧರಾಮ ಮಾಹಾಸ್ವಾಮಿಗಳು ಸಮಾಜಮುಖಿ ಚಿಂತನೆ ನಮ್ಮಗೆಲ್ಲಾ ಆಶಿರ್ವಾದವಾಗಲಿ .
———————————————————–
ಇಂದಿನ ವೈಜ್ಞಾನಿಕ ಯುಗದಲ್ಲಿ ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅವುಗಳನ್ನು ಓದುಗರಿಗೆ ಒದಗಿಸುವಲ್ಲಿ ನಾನಾ ರೀತಿಯ ತಂತ್ರಜ್ಞಾನಗಳು ಬಳಕೆಯಲ್ಲಿ ಬಂದಿವೆ. ಅವುಗಳ ಸೌಲಭ್ಯ ಪಡೆದುಕೊಂಡು ಜ್ಞಾನ ಬೆಳೆಸಿಕೊಳ್ಳಬೇಕು
– ಡಾ. ಶ್ರೀ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು.”
——————————————_——————-_——-
ಸಂಗ್ರಹ ಮತ್ತು ಲೇಖನ :
ವಿಜಯಕುಮಾರ ಕಮ್ಮಾರ
ತುಮಕೂರು
ಮೋಬೈಲ್ ಸಂ. 9741 357 132