ಶರಣ ಬಂಧುಗಳೇ ,
ಶ್ರಾವಣ ಮಾಸ ಪೂರ್ತಿ ಡಾ.ಸಾವಿತ್ರಿ ಮಹಾದೇವಪ್ಪ ಕಮಲಾಪೂರ ಇವರು ಶ್ರಾವಣ ಶರಣರು ಮಾಲಿಕೆಗೆ ಇಂದಿನಿಂದ ಲೇಖನ ಬರೆಯುತ್ತಾರೆ. ಓದಿ, ಅಭಿಪ್ರಾಯಿಸಿ
ಸಂಪಾದಕ
e-ಸುದ್ದಿ ಅಂತರಜಾಲ ಪತ್ರಿಕೆ
—————————————————————
ಶ್ರಾವಣ ಶರಣರ ಮಾಲಿಕೆ-೧
ಕೋಲ ಶಾಂತಯ್ಯ
ಕಟ್ಟಿಗೆ ಇಲ್ಲವೇ ಕೋಲನ್ನು ಹಿಡಿದು ಕಾಯಕವನ್ನು ಮಾಡುವ ಕೋಲ ಶಾಂತಯ್ಯನವರು 12ನೇ ಶತಮಾನದಲ್ಲಿದ್ದು ದೊರೆತಿರುವ ವಚನಗಳು: 103
ವಚನಗಳ ಅಂಕಿತನಾಮ ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ ಇವರ ಒಂದು ವಚನವನ್ನು ನೋಡಲಾಗಿ
ಜಡೆ ಮುಡಿ ಬೋಳು ಹೇಗಿದ್ದರೇನೊ
ನಡೆ ನುಡಿ ಸಿದ್ಧಾಂತವಾದಡೆ ಸಾಕು
ಆತ ಪರಂಜ್ಯೋತಿ ಗುರುವಹ ಆ ಇರವ ನಿನ್ನ ನೀನರಿ ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
ಜಡೆ ಮುಡಿ ಬೋಳು ಹೇಗಿದ್ದರೇನೊ
ಒಬ್ಬ ವ್ಯಕ್ತಿಯ ಜಡೆ ಮತ್ತು ಮುಡಿಯನ್ನು ನೋಡಿ ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯಬಾರದೆಂದು ಈ ನುಡಿಯು ಹೇಳುತ್ತದೆ.
ಜನರು ತಾವು ಎಲ್ಲಾ ಬಗೆಯ ಕಾಮನೆಗಳನ್ನು, ಬಯಕೆಗಳನ್ನು, ಆಸೆಗಳನ್ನು ತೊರೆದವರು. ಎಂಬುದರ ಸಂಕೇತವಾಗಿ ಬಹು ಬಗೆಯ ಆಚರಣೆಗಳಲ್ಲಿ ತೊಡಗಿ, ಅದಕ್ಕೆ ತಕ್ಕಂತೆ ಉಡುಗೆ ತೊಡುಗೆಗಳನ್ನು ತೊಡುತ್ತಾರೆ. ಕೆಲವರು ತಲೆಗೂದಲನ್ನು ಹೆಣೆದು ಉದ್ದನೆಯ ಜಡೆಯನ್ನಾಗಿ ಬಿಟ್ಟಿರುತ್ತಾರೆ.ಮತ್ತೆ ಕೆಲವರು ತಲೆಗೂದಲನ್ನು ಗಂಟುಹಾಕಿ, ತಲೆಯ ಮೇಲೆ ಉದ್ದಕ್ಕೆ ಎತ್ತಿಕಟ್ಟಿರುತ್ತಾರೆ ,ಇನ್ನು ಕೆಲವರು ತಲೆಗೂದಲನ್ನು ತೆಗೆಸಿ, ಮಂಡೆ ಬೋಳಾಗಿರುತ್ತಾರೆ. ಇನ್ನೂ ಕೆಲವರು ಉದ್ದ ಕೂದಲನ್ನು ಚಿಕ್ಕದಾಗಿ ಮಾಡಿಕೊಂಡಿರುತ್ತಾರೆ ಈ ರೀತಿ ತಲೆಗೂದಲನ್ನು ಗಂಟಕಟ್ಟುವ ಇಲ್ಲವೇ ತಲೆಗೂದಲನ್ನು ತೆಗೆಸುವ ರೀತಿಯು ಸಂಪ್ರದಾಯದ ಆಚರಣೆಯೇ ಹೊರತು, ಇದಕ್ಕೂ ವ್ಯಕ್ತಿಯ ಒಳ್ಳೆಯ ನಡೆ ನುಡಿಗೂ ಯಾವುದೇ ನಂಟಿಲ್ಲ.
ಅಂದರೆ ವ್ಯಕ್ತಿಯ ಕೂದಲನ್ನು ನೋಡಿ ವ್ಯಕ್ತಿಯ ಗುಣಗಳನ್ನು ಅಳೆಯಬಾರದೆಂದು ಈ ನುಡಿಯು ತಿಳಿಸುತ್ತದೆ .
ನಡೆ ನುಡಿ ಸಿದ್ಧಾಂತವಾದಡೆ ಸಾಕು
12ನೇ ಶತಮಾನದ ಶಿವಶರಣರು ನುಡಿದಂತೆ ನಡೆದವರು. ನಡೆದಂತೆ ನುಡಿದವರು ಅವರ ನಡೆ ಮತ್ತು ನುಡಿಗಳು ಯಾವತ್ತೂ ಒಂದಾಗಿದ್ದವು .
ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನ ಮತ್ತು ಅವನ ಕುಟುಂಬದ ಹಿತವನ್ನು ಕಾಪಾಡುವಂತೆಯೇ ಮಾನವರ ಮತ್ತು ಸಮಾಜದ ಹಿತವನ್ನು ಕಾಪಾಡುವುದು .
ವ್ಯಕ್ತಿಯು ತನ್ನ ನಿತ್ಯ ಜೀವನದಲ್ಲಿ ತನ್ನ ಮತ್ತು ತನ್ನ ಕುಟುಂಬದ ಒಲವು, ನಲಿವು, ನೆಮ್ಮದಿಗಾಗಿ ಬಾಳುವಂತೆಯೇ ಸಹಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳಬೇಕು. ಎಂಬ ಗಟ್ಟಿಯಾದ ನಿಲುವನ್ನು ತಳೆದು, ಅದರಂತೆಯೇ ಬಾಳುತ್ತಿದ್ದರೆ, ಅದು ಬಹು ದೊಡ್ಡದು. ಮಾನವ ಸಮುದಾಯದ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಜನರ ಒಳ್ಳೆಯ ನಡೆನುಡಿಗಳೇ ಹೊರತು, ಸಂಪ್ರದಾಯದ ಆಚರಣೆಗಳಲ್ಲವೆಂಬ ವಾಸ್ತವವನ್ನು ಈ ನುಡಿಗಳು ಸೂಚಿಸುತ್ತಿವೆ.
ಆತ ಪರಂಜ್ಯೋತಿ ಗುರುವಹ
ಬಸವಣ್ಣನವರು ಇಡೀ ಜಗತ್ತಿಗೆ ಜಗಜ್ಯೋತಿ ಯಾಗಿ ಬೆಳಗಿದವರು
ಅವರ ಆದರ್ಶಗಳು ನಮ್ಮಬದುಕಿಗೆ ಮಾರ್ಗ ಬದುಕು ಬೆಳಗಿದ ಜ್ಯೋತಿ ಬಸವಣ್ಣನವರು .
ಆತ ಪರಂಜ್ಯೋತಿ ಗುರುವಹ ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡಿವೆ. ಉಪಮಾನ ಮತ್ತು ಉಪಮೇಯ ಗಳಿಂದ ಕೂಡಿದ ಈ ವಚನದ ಸಾಲುಗಳನ್ನು ನೋಡಲಾಗಿ ಯಾವ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಜಗತ್ತಿನಲ್ಲಿರುವ ಎಲ್ಲರಿಗೂ ವಾಸಿಸಲು ಮನೆಯನ್ನು, ತಿನ್ನಲು ಅನ್ನ, ತೊಡಲು ಬಟ್ಟೆ, ಮತ್ತು ,ಶಿಕ್ಷಣ ಅಂದರೆ ವಿದ್ಯೆ ಉದ್ಯೋಗ,ಆರೋಗ್ಯವನ್ನು ನೀಡುವುದಕ್ಕೆ ಸಹಾಯ ಅಂದರೆ ನೆರವಾಗುತ್ತದೆಯೋ ಅಂತಹ ವ್ಯಕ್ತಿಯ ನಡೆ ನುಡಿಗಳೇ ಲೋಕಕ್ಕೆ ಒಳಿತಿನ ದಾರಿ ದೀಪವಾಗುತ್ತವೆ.ಎನ್ನುವ ಅರ್ಥವನ್ನು ನಾವು ಇಲ್ಲಿ ಕಂಡು ಕೊಳ್ಳಬಹುದು. ನೊಂದವರ ಬಾಳಿಗೆ ಬೆಳಕಾಗುವುದು. ಎಂದರ್ಥ. ಹಸಿದವರ ಹೊಟ್ಟೆಯನ್ನು ತುಂಬಿಸುವುದು ಬಳಲಿ ಬಂದವರಿಗೆ ದಾರಿ ತೋರುವುದು .ನೋವಿಗೆ ಸ್ಪಂದಿಸಿ ಅಭಿವ್ಯಕ್ತಪಡಿಸುವುದು .ಎಂದರ್ಥ.
ಆ ಇರವ ನಿನ್ನ ನೀನರಿ
ಯಾವುದೇ ವ್ಯಕ್ತಿಯ ಬಹಿರಂಗದ ವೇಷ ಭೂಷಣಕ್ಕೆ ಮಾರುಹೋಗಬಾರದು.
ಆ ರೀತಿಯ ಸತ್ಯವನ್ನು ನಾವು ತಿಳಿಯಬೇಕಾಗಿದೆ.. ಅಂದರೆ ಬಹಿರಂಗದ ಉಡುಗೆ ತೊಡುಗೆ ಮತ್ತು ಸಂಪ್ರದಾಯದ ಆಚರಣೆಗಳನ್ನು ಕಂಡು ಯಾವುದೇ ವ್ಯಕ್ತಿಯನ್ನು ಒಳ್ಳೆಯವನೆಂದು ತಿಳಿಯಬಾರದು .
ಜೀವನದಲ್ಲಿ ಜಾತಿ, ಮತ, ದೇವರ ಸಂಪ್ರದಾಯದ ಆಚರಣೆಗಳನ್ನು ಪಾಲಿಸುವುದು ದೊಡ್ಡದಲ್ಲ .
ನಮ್ಮ ನಡೆ ನುಡಿಗಳೇ ಸಿದ್ಧಾಂತವಾಗಬೇಕು ತನ್ನ ನಿತ್ಯ ಜೀವನದಲ್ಲಿ ತನ್ನ ಮತ್ತು ತನ್ನ ಕುಟುಂಬದ ಒಲವು, ನಲಿವು, ನೆಮ್ಮದಿಗಾಗಿ ಬಾಳುವಂತೆಯೇ ಮಾನವರ ಮತ್ತು ಸಮಾಜದ ಒಳಿತಿಗಾಗಿ ಬಾಳಬೇಕು ಎಂಬ ಗಟ್ಟಿಯಾದ ನಿಲುವನ್ನು ತಳೆದು, ಅದರಂತೆಯೇ ನಾವು ಬಾಳುತ್ತಿದ್ದರೆ, ಅದೇ ಬಹು ದೊಡ್ಡದು. ಮಾನವ ಸಮುದಾಯದ ನೆಮ್ಮದಿಯ ಬದುಕಿಗೆ ಬೇಕಾಗಿರುವುದು ಜನರ ಒಳ್ಳೆಯ ನಡೆ ನುಡಿಗಳೇ ಹೊರತು, ಸಂಪ್ರದಾಯದ ಆಚರಣೆಗಳಲ್ಲವೆಂಬ ವಾಸ್ತವವನ್ನು ನಾವು ತಿಳಿಯಬೇಕಾಗಿದೆ.
ಒಟ್ಟಿನಲ್ಲಿ
ವ್ಯಕ್ತಿಯು ಜಗತ್ತಿನಲ್ಲಿರುವ ಯಾವುದೇ ಜಾತಿ, ಮತ, ದೇವರ ಬಗೆಗಿನ ಸಂಪ್ರದಾಯದ ಆಚರಣೆಯಲ್ಲಿ ತೊಡಗಿದ್ದರೂ, ತನ್ನ ನಿತ್ಯ ಜೀವನದಲ್ಲಿ ಸಾಮಾಜಿಕವಾಗಿ ಒಳ್ಳೆಯ ನಡೆ ನುಡಿಯಿಂದ ಬಾಳುವುದು ಎಲ್ಲಕ್ಕಿಂತ ದೊಡ್ಡದು. ಎಂಬ ಸಂಗತಿಯನ್ನು ಈ ವಚನದಲ್ಲಿ ಕಂಡು ಬರುವ ಅರ್ಥವಾಗಿದೆ.
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಗಮನಿಸಿ
e-ಸುದ್ದಿಯಲ್ಲಿ ಪ್ರಕಟವಾಗುವ ಲೇಖನ, ಕತೆ, ಕವಿತೆ, ಬರಹಗಳ ಅಭಿಪ್ರಾಯಗಳು ಲೇಖಕರದಾಗಿರುತ್ತವೆ.
-ಸಂಪಾದಕ
e-ಸುದ್ದಿ ಅಂತರಜಾಲ ಪತ್ರಿಕೆ