ವಚನಗಳುಮನುಷ್ಯನ ಅರಿವಿಗೆ ಮಹಾ ಬೆಳಕು
ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ವೇದಿಕೆ ಕಾರ್ಯಕ್ರಮ
ಕಾರ್ಯಕ್ರಮದ ಮೊದಲಿಗೆ ಶರಣೆ ವಿದ್ಯಾ ಮುಗ್ದುಮ್ ಅವರು ಸ್ವಾಮಿ ನೀನು ಶಾಶ್ವತ ನೀನು ಎನ್ನುವ ಶರಣರ ವಚನ ಪ್ರಾರ್ಥನೆ ಮಾಡಿದರು.
ನಂತರ ಡಾ. ಸರಸ್ವತಿ ಪಾಟೀಲ ಅವರು ಶ್ರಾವಣಮಾಸದ ಪ್ರಾಮುಖ್ಯತೆಯನ್ನು ಹೇಳುತ್ತಾ, ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವೇದಿಕೆಯ ಬಗೆಗೆ ಅತ್ಯಂತ ಅಭಿಮಾನದ ನುಡಿಗಳನ್ನಾಡಿದರು.
ಮೊದಲಿಗೆ ಗಿರಿಜಾ ಮುಳುಗುಂದ ಅವರು ಶರಣೆ ಅಕ್ಕನಾಗಮ್ಮ ಅವರ ಬಗೆಗೆ ಹೇಳುತ್ತಾ , ಕ್ರಾಂತಿಗಂಗೋತ್ರಿ ಅಕ್ಕನಾಗಲಾoಬಿಕೆ ಎಂಬ ಬಿರುದು ಪಡೆದ ಅಕ್ಕನಾಗಮ್ಮ ಬಸವಣ್ಣನವರ ಅಕ್ಕ ಮತ್ತು ಪ್ರತಿಹೆಜ್ಜೆಯಲ್ಲಿ ಅವರನ್ನು ಪ್ರೋತ್ಸಾಹಿಸುತ್ತಿದ್ದರು ಎನ್ನುವುದನ್ನು ಅಭಿಮಾನದಿಂದ ಹೇಳಿದರು. ತಮ್ಮ ತಮ್ಮ ಅನುಭವದಿಂದ ಮೂಡಿಬಂದ ಅನುಭಾವದ ಚಿಂತನೆಯನ್ನು ವಚನಗಳ ಮೂಲಕ ಹಂಚಿಕೊಳ್ಳಲು ಅನುಭವ ಮಂಟಪಕ್ಕೆ ಪ್ರತಿನಿತ್ಯ ಬರುವ ಎಲ್ಲ ಶರಣರ ಪ್ರಸಾದದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು, ಅವರಿಗೆ ಬಸವಣ್ಣನವರೇ ತಂದೆ, ಗುರು,
ಧರ್ಮದ ನೇತಾರ ಎಲ್ಲವೂ ಆಗಿದ್ದರು. ವಿಷಯಾದಿ ವಿಷಯಗಳನ್ನು ತ್ಯಜಿಸಬೇಕು, ಸದ್ಗುಣ ಸಂಪನ್ನರಾಗಿ ಸದಾಚಾರಿಯಾಗಬೇಕು, ಭವ ಬಂಧನವನ್ನು ಕಳೆದುಕೊಳ್ಳುವ ದಾರಿ ಗುರು ತೋರಿಸುತ್ತಾನೆ, ಯಾರು ಏನೇ ಅಂದರೂ ನಮ್ಮ ಕಾಯಕವನ್ನು ನಾವು ಮಾಡುತ್ತಾ ಹೋಗಬೇಕು, ದೇವನೊಬ್ಬನೆ ನಮ್ಮ ಸಂಗಾತಿ, ಸಾಧನೆಯಿಂದ ಅವನಲ್ಲಿ ಕೂಡಿಕೊಳ್ಳಬೇಕು ಎನ್ನುವ ಅವರ ಹಲವಾರು ನುಡಿಗಳ ಮೇಲೆ ಬೆಳಕು ಚೆಲ್ಲಿದರು.
ಕಡೆಯವರೆಗೂ ವಚನಕಟ್ಟುಗಳ ಸಂವರಕ್ಷಣೆಗಾಗಿ ಹೋರಾಡಿದರು, ಮಗ ಚೆನ್ನಬಸವಣ್ಣ, ಗಂಗಾoಬಿಕೆ ಮತ್ತು ಹಲವಾರು ಶರಣರು ಕಣ್ಣ ಮುಂದೆ ಮಡಿದರೂ ಅಕ್ಕನಾಗಮ್ಮ ಕಡೆಯವರೆಗೂ ವೀರತನದಿಂದ ಹೋರಾಡಿದ ಮಹಿಳೆ ಎನ್ನುವುದನ್ನು ಅತ್ಯಂತ ಅಭಿಮಾನದಿಂದ ನಮಗೆಲ್ಲ ತಿಳಿಸಿಕೊಟ್ಟರು. ಎನ್ನ ಭವದ ಬೇರು ಹರಿದಿತ್ತಯ್ಯ ಮತ್ತು ಮನದೊಡೆಯ ಮಹಾದೇವ ಎನ್ನುವ ಅವರ ವಚನ ವಿಶ್ಲೇಷಣೆಗಳನ್ನು ಅರ್ಥಗರ್ಭಿತ ವಾಗಿ ಮಾಡಿದರು.
ಇನ್ನೊಬ್ಬ ಶರಣೆ ಅಕ್ಕಮಹಾದೇವಿ ತೆಗ್ಗಿ ಅವರು ಶರಣ ಚಂದಿಮರಸರ ಬಗೆಗೆ ಹೇಳುತ್ತಾ, ಅವರ ವಚನಗಳ ಅಂಕಿತನಾಮ ಸಿಮ್ಮಲಿಗೆಯ ಚೆನ್ನರಾಮ, ಇವರ ವಚನಗಳು ಸರಳವೂ, ಅರ್ಥಪೂರ್ಣವೂ, ಭಾವಪೂರ್ಣವೂ ಆಗಿದ್ದವು ಎನ್ನುವುದನ್ನು ನೆನಪು ಮಾಡಿಕೊಟ್ಟರು.ಕೆಂಭಾವಿಯ ಅರಸರಾಗಿದ್ದ ಚಂದಿಮರಸರು ಒಂದು ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ನಡೆದು ಎಷ್ಟು ದೂರ ಹೋದರೆಂದರೆ , ಈಗಿನ ಬಸವನ ಬಾಗೇವಾಡಿ ತಾಲೂಕಿನ ಚಿಮ್ಮಲಿಗೆವರೆಗೆ ಹೋದರು. ಅಲ್ಲಿ ನಿಜಗುಣ ದೇವರಿಂದ ಲಿಂಗದೀಕ್ಷೆ ಪಡೆದು ಷಟ್ ಸ್ಥಲ ಮಾರ್ಗ ಪತಿಕರಾದರು.ಆಧ್ಯಾತ್ಮ ಅಧಿಪತಿಯಾದರು ಎಂದು ತಿಳಿಸಿದರು.
ತಮ್ಮ ಅರಿವೇ ತಮಗೆ ಗುರು, ಅಂಗ -ಲಿಂಗ ಸಾಮರಸ್ಯ, ಯಾವುದು ತಪ್ಪು, ಯಾವುದು ಸರಿ ಎಂದು ತಿಳಿದು ನಡೆಯಬೇಕು, ಪಾರಮಾರ್ಥ ಮತ್ತು ಸಂಸಾರ ಎರಡನ್ನೂ ಸರಿಸಮನಾಗಿ ತೂಗಿಸಿಕೊಂಡು ಹೋಗಬೇಕು, ಅವಿಚಾರಾತ್ಮಕ ಘಟನೆಗಳು ಜೀವನದಲ್ಲಿ ನಡೆಯುತ್ತವೆ, ಅವನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕು ಎನ್ನುವ ಅವರ ವಚನಗಳ ಅರ್ಥದ ಸಾರಾಂಶವನ್ನು ನಮಗೆಲ್ಲ ಮನದಟ್ಟು ಮಾಡುತ್ತಾ, ಅತ್ಯಂತ ಅರ್ಥಪೂರ್ಣವಾಗಿ ತಮ್ಮ ಉಪನ್ಯಾಸ ನೀಡಿದರು.
ಇವತ್ತಿನ ಮಾರ್ಗದರ್ಶಕರಾದ ಕೆ. ಸಿ. ಪಾಟೀಲ ಸರ್ ಅವರು ಇವತ್ತಿನ ವಿಷಯದ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ನಂತರ ನಮ್ಮ ವಚನ ಅಧ್ಯಯನ ವೇದಿಕೆಯ ರೂವಾರಿಯಾದ ಡಾ. ಶಶಿಕಾಂತ ಪಟ್ಟಣ ಸರ್ ಮಾತನಾಡಿ, ಅಕ್ಕನಾಗಮ್ಮನವರ ಹಾಗೆ ಇಂದಿನ ಸಹೋದರಿಯರು ವಚನದ ಉಳಿವಿಗಾಗಿ ಸತತವಾಗಿ ಅಧ್ಯಯನ ಶೀಲರಾಗಿ, ವೈಚಾರಿಕತೆಯ ನಿಲುವಿನಲ್ಲಿ ತಮ್ಮನ್ನು ಗಟ್ಟಿಗೊಳಿಸಬೇಕು, ಕನ್ನಡ ನಶಿಸಿಹೋಗುತ್ತಿರುವ ಭಾಷೆ ಆಗಲಾರದಂತೆ ನೋಡಿಕೊಳ್ಳಬೇಕು ಎನ್ನುವ ಕಿವಿ ಮಾತನ್ನು ಹೇಳಿದರು. ಪ್ರಕ್ಷಿಪ್ತ ವಚನಗಳ ಪರಿಷ್ಕರಣೆಗೆ ತಾವೆಲ್ಲರೂ ಕೈಜೋಡಿಸಬೇಕು ಎನ್ನುವ ಕಳಕಳಿಯ ವಿನಂತಿ ಮಾಡಿಕೊಂಡರು. ಸಂವಾದದಲ್ಲಿ ಪಾಲ್ಗೊಂಡ ಎಲ್ಲರೂ ಪಟ್ಟಣ ಸರ್ ಅವರು ಮಾಡುವ ಕಾರ್ಯಗಳಿಗೆ ತಾವು ಸದಾ ಕೈಜೋಡಿಸುತ್ತೇವೆ ಎನ್ನುವ ಭರವಸೆ ನೀಡಿದರು.
ಶರಣೆ ತ್ರಿವೇಣಿ ವಾರದ ಅವರ ಶರಣು ಸಮರ್ಪಣೆ,
ಬಬಿತಾ ಪಂಚಣ್ಣವರ ಅವರ ವಚನಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಇವತ್ತಿನ ಕಾರ್ಯಕ್ರಮ ನಿರ್ವಹಣೆಯನ್ನು ಡಾ. ಶೈಲಜಾ ಪವಾಡಶೆಟ್ಟರ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಶ್ರಾವಣ ಮಾಸದಲ್ಲಿ ಇಂಥಹ ಅನುಭವಪೂರ್ಣ ಉಪನ್ಯಾಸಗಳನ್ನು ಏರ್ಪಡಿಸಿ ನಮ್ಮೆಲ್ಲರ ಜ್ಞಾನವನ್ನು ಇನ್ನೂ ಎತ್ತರದ ಮಟ್ಟಕ್ಕೇರಿಸುತ್ತಿರುವ ಡಾ. ಶಶಿಕಾಂತ ಪಟ್ಟಣ ಸರ್ ಅವರಿಗೆ ಅನಂತ ಧನ್ಯವಾದಗಳು.
ಸುಧಾಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ- ಪುಣೆ