ಚಿತ್ ಜ್ಯೋತಿ

ನಾ ಓದಿದ ಪುಸ್ತಕ

 

 

 

 

 

 

 

 

 

 

 

ಚಿತ್ ಜ್ಯೋತಿ
ಕೃತಿಕಾರರು : ಡಾ.ಸರ್ವಮಂಗಳ ಸಕ್ರಿ

ಪ್ರಕಾಶಕರು : ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ, ಮಸ್ಕಿ

ಶ್ರೀಮತಿ ಸರ್ವಮಂಗಳ ಸಕ್ರಿ ಅವರ ಅನುಭಾವದ ಒಟ್ಟು ೧೫ ಲೇಖನಗಳ ಸಂಗ್ರಹದ ಕೃತಿಯಾದ “ಚಿತ್ ಜ್ಯೋತಿ” ಪ್ರತಿಯೊಬ್ಬ ಓದುಗನನ್ನು ಚಿಂತನೆಗೆ ಹಚ್ಚುವಂತಹುದಾಗಿದೆ. ಶರಣರ ವಚನ ಸಾಹಿತ್ಯ, ಆ ಸಂದರ್ಭದಲ್ಲಿನ ಸ್ತ್ರೀ ಸ್ವಾತಂತ್ರ್ಯ, ವೈಜ್ಞಾನಿಕ ಪ್ರಜ್ಞೆ, ಮೂಢನಂಬಿಕೆಯ ವಿರುದ್ಧದ ನಡೆಗಳು, ಲಿಂಗ ಮತ್ತು ಜಾತಿ ಸಮಾನತೆಗೆ‌ ನೀಡಿದ ಒತ್ತು, ಶೋಷಣೆಯ‌ ವಿರುದ್ಧದ ಧ್ವನಿ ಎಲ್ಲವನ್ನೂ ಒಂದೇ ದರ್ಪಣದಲ್ಲಿ ಕಾಣಬಹುದಾದಂತಹ ಕೃತಿ “ಚಿತ್ ಜ್ಯೋತಿ”.

 

ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಅಜಗಣ್ಣ, ಸತ್ಯಕ್ಕ, ಚಂದಿಮರಸ, ನೀಲಮ್ಮ, ಚಾಮರಸನ ಪ್ರಭುಲಿಂಗಲೀಲೆಯ ಕಥಾನಕದ ವಿಮರ್ಶೆಯನ್ನು, ಹರಿಹರನ ರಗಳೆಯ ಪ್ರಸಂಗಗಳನ್ನು ಉಲ್ಲೇಖಿಸುತ್ತ ಎಲ್ಲ ಲೇಖನಗಳನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ಪ್ರತಿಯೊಂದು ಲೇಖನಗಳು ಕೃತಿಕಾರರ ಅಧ್ಯಯನ, ಅವರ ವಿದ್ವತ್ತು, ತಾರ್ಕಿಕ ಮತ್ತು ಸೂಕ್ಷ್ಮ ಮತಿಯ ಚಿಂತನೆ, ವಚನಗಳನ್ನು ಸಮಕಾಲೀನ ಬದುಕಿಗೆ ಅರ್ಥೈಸಿಕೊಂಡ ಪರಿಯನ್ನು ಸಾರಿ ಸಾರಿ ತಿಳಿಸುತ್ತವೆ.

ಲೌಕಿಕ ಬದುಕಿನಲ್ಲಿ ಸ್ತ್ರೀಯರಿಗಿದ್ದ ಸಂಕೋಲೆಗಳನ್ನು ಶರಣರು ಯಾವ ರೀತಿ ಕಳಚಿದರು, ಸೂತಕದ ಛಾಯೆಯಿಂದ ಹೇಗೆ ಹೆಣ್ಣನ್ನು ಹೊರತರಲು ಪ್ರಯತ್ನಿಸಿದರು ಎಂಬುದಾಗಿ ಪ್ರಾರಂಭದ ಲೇಖನಗಳಲ್ಲಿ ಪ್ರಸ್ತುತಪಡಿಸುತ್ತಾರೆ.

ಸ್ತ್ರೀ ಸಂವೇದನೆ ಮಾಯೆ ಮೌಲ್ಯ ಪ್ರಜ್ಞೆ”
“ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ”,
– ಜೇಡರ ದಾಸಿಮಯ್ಯ
“ಹೊಲೆ ಗಂಡನಿಗಲ್ಲದೆ ಪಿಂಡನೆಲೆಗೆ ಆಶ್ರಯವಿಲ್ಲ
ಬಸವಣ್ಣ
ಹೀಗೆ ಶರಣರ ಸನ್ಮಾರ್ಗದ ಸಂದೇಶವನ್ನು ಸಾರುವ ಸಾಲುಗಳನ್ನು ಉಲ್ಲೇಖಿಸಿ ಸ್ತ್ರೀ ಎಲ್ಲ ವಿಧದಲ್ಲೂ ಸಮಾನಳು, ಗಂಡಿಗಿಲ್ಲದ ಸೂತಕ ಸಂಕೋಲೆಗಳು ಹೆಣ್ಣಿಗೇಕೆ? ಧರ್ಮದ ಹಾದಿಯಲ್ಲಿ ಸಾಗುವ ಗುರುಗಳೇ ಹೆಣ್ಣನ್ನು ಸಮಾನತೆಯ ನೆಲೆಯಲ್ಲಿ ಕಂಡು, ಸ್ತ್ರೀ ಮುಖೇನ ರಚಿತವಾದ ವಚನ ಸಾಹಿತ್ಯವನ್ನು ಆದರಿಸಿ, ಅನುಕರಿಸಿ ಗೌರವಿಸುವಾಗ ನಾವೆಲ್ಲ ಹುಲು ಮಾನವರು, ಇನ್ನೂ ಸಮಾನತೆ ನೀಡಲು ಹಿಂದೇಟ್ಹಾಕುತ್ತಿರುವುದನ್ನು ಕೃತಿಕಾರರು ಖಂಡಿಸುತ್ತಾರೆ.

ಹೆಣ್ಣಿಗೆ ಸಮಾನತೆ ನೀಡದಿರುವುದು ಗಂಡಿನ ದುರ್ಬಲತೆ, ದುರ್ಬುದ್ಧಿಯ ಸಂಕೇತ ಎನ್ನುತ್ತಾರೆ. ಮನೋವ್ಯಾಕುಲತೆಯ ಅಂಶವಾಗಿ ಹೆಣ್ಣು ಮಾಯೆ ಎಂದು ಹೊನ್ನು ಮತ್ತು ಮಣ್ಣಿನ ಜೊತೆಗೆ ಸೇರ್ಪಡಿಸಿದ್ದಾರೆ, ಆದರೆ ಸ್ತ್ರೀ ಲೌಕಿಕ ಬದುಕಲ್ಲಿ ಚಾರಿತ್ರಿಕ ಶಕ್ತಿ ಎಂಬುದು ವಚನಗಳು ಸ್ಪಷ್ಟಪಡಿಸುತ್ತವೆ.
ಮುಂದುವರೆದು “ಹೆಣ್ಣು, ಹೊನ್ನು, ಮಣ್ಣು ಇವು ಮಾಯೆಯಲ್ಲ, ಮನದ ಮುಂದಣ ಆಶೆಯೇ ಮಾಯೆ” ಎಂಬ ಅಲ್ಲಮ ಪ್ರಭುವಿನ ಉಕ್ತಿಯನ್ನು ಹೇಳಿ ಓದುಗನ ಮನಃಪರಿವರ್ತನೆಗೆ ಕೃತಿಕಾರರು ಮುಂದಾಗುತ್ತಾರೆ. ಗಂಡಿನ ಬದುಕಲ್ಲಿ ಹಲವಾರು ಪಾತ್ರಗಳಾಗಿ ಬರುವ ಹೆಣ್ಣು ಗಂಡಿಗಿಂತಲೂ ದೈಹಿಕವಾಗಿ, ಮಾನಸಿಕವಾಗಿ ಸಬಲಳು ಎಂದು ಪ್ರಥಮ ಲೇಖನದಲ್ಲಿ ತಳಿಸುತ್ತಾರೆ.

ಶರಣರ ಮಹಿಳಾ ಸಬಲೀಕರಣ ಮತ್ತು ಧಾರ್ಮಿಕ ಸ್ವಾತಂತ್ರ್ಯ”

“ಸ್ತ್ರೀಯರಿಗೆ ಧಾರ್ಮಿಕ ಸ್ವಾತಂತ್ರ್ಯ ಕೊಟ್ಟವರಲ್ಲಿ, ಸ್ತ್ರೀಯರಿಗೆ ಅಕ್ಷರ ಸಂಸ್ಕೃತಿಯಲ್ಲಿ ಅವಕಾಶಕೊಟ್ಟವರಲ್ಲಿ ಬಸವಣ್ಣನವರೇ ಮೋದಲಿಗರು” ಎಂಬ ಅಂಶವುಳ್ಳ ಲೇಖನ ಇದಾಗಿದೆ.
* “ಸ್ತ್ರೀ ಕುರಿತು ಪುರುಷನ ಸಂವೇದನೆ ಪುರುಷನ ಕುರಿತು ಸ್ತ್ರೀ ಸಂವೇದನೆಗಳು ಬದಲಾಗಬೇಕು”
“ಆತ್ಮದ ನೆಲೆಯಲ್ಲಿ ಹೆಣ್ಣು-ಗಂಡು ಇಬ್ಬರೂ ಸಮಾನರು”
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಸಮಾಜದಲ್ಲಿ ಹೆಣ್ಣಿನ ಮೇಲೆ ದೈಹಿಕ, ಇದಕ್ಕೂ ಮಿಗಿಲಾಗಿ ಮಾನಸಿಕ ಅತ್ಯಾಚಾರವನ್ನು ಭೀಕರವಾಗಿ ಎಸಗುತ್ತಿರುವುದು ಕಂಡ ಶರಣರು ಮೊದಲ ಆದ್ಯತೆಯಾಗಿ ಸ್ತ್ರೀ ಸಮಾನತೆಗೆ ಒತ್ತುಕೊಟ್ಟಿದ್ದಾರೆ ಎಂಬ ಕೃತಿಕಾರರ ಮಾತು ಓದುಗನಲ್ಲಿ ಅಚ್ಚಳಿಯದೇ ಉಳಿಯುವಂತಾಗಿವೆ.
ಈ ಲೇಖನದಲ್ಲಿ, “ಸ್ತ್ರೀ ಶಕ್ತಿಯ ವ್ಯಾಖ್ಯಾನ”, “ಸೂತಕಗಳು”, “ಸತಿಪತಿ ಭಾವದ ಅಭಿವ್ಯಕ್ತತೆ”, “ಮಾಯೆಯೆಂಬ ಮಹಾ ಪಾಶನದಲ್ಲಿ”, “ಶರಣರ ಆಧ್ಯಾತ್ಮ ಪಥದ ನಿಯಮ ಕಾಯಕ” ಶೀರ್ಷಿಕೆಗಳಡಿಯಲ್ಲಿ, ಅಂದಿನ ಕಾಲಮಾನದಲ್ಲಿ ಸ್ತ್ರೀಯರನ್ನು ಹೇಗೆ ಹತ್ತಿಕ್ಕುತ್ತಿದ್ದರು, ಸ್ತ್ರೀಯರನ್ನು ಹೇಗೆ ಅಪನಂಬಿಕೆಯಿಂದ ಕಾಣಲಾಗುತ್ತಿತ್ತು, ಪುರುಷನ ಕೆಡುಕಿಗೆ ಸ್ತ್ರೀಯೇ ಕಾರಣ ಎಂಬುದನ್ನು ಹೇಗೆ ನಂಬಿಸಿದ್ದರು ಎಂಬಿತ್ಯಾದಿ ಅಂಶಗಳನ್ನು ಉಲ್ಲೇಖಿಸಿ ಇದನ್ನು ಕಂಡ ಅಕ್ಕ, “ಕಾಯದೊಳಗಿನ ಕಾಮವನ್ನು ಗೆದ್ದು ಕಾಮ ಹರನನ್ನು ಆಕೆ ಕೂಡಿದಳು” ಎಂದು ಕಾಮುಕ ಕಣ್ಣುಗಳಿಗೆ ಪ್ರತ್ಯುತ್ತರ ನೀಡಿದಳು, ಸ್ತ್ರೀ ಗೆ ಬೆಂಬಲವಾಗಿ ಶರಣೆ ಅಕ್ಕ ನಿಂತರೆ, ಶರಣ ಸಿದ್ಧರಾಮ “ಹೆಣ್ಣು ಸಾಕ್ಷಾತ್ ಕಪಿಲ ಸಿದ್ಧ ಮಲ್ಲಿಕಾರ್ಜುನ” ಎಂದು ಹೆಣ್ಣನ್ನು ದೇವತೆಗೆ ಹೋಲಿಸಿದ್ದಾರೆ ಎಂದು ತಿಳಿಸುತ್ತಾರೆ.
ಮುಂದೆ ಪಂಚಸೂತಕಗಳೆಲ್ಲವೂ ಹೆಣ್ಣಿಗೆ ಅನ್ವಯಿಸಿದ್ದನ್ನು ಕೂಡ ಶರಣರು ವಿರೋಧಿಸಿದರು, ಅವುಗಳನ್ನು ನಿರಾಕರಿಸಿ, ಅಂಜುವುದು ಕೂಡಲಸಂಗಮನ ನಾಮಕಕ್ಕೆ ಹೊರತು ಸೂತಕಗಳಿಗಲ್ಲ, ಶಿವಲಿಂಗ ದೀಕ್ಷೆಯಾದ ಬಳಿಕ ಎಲ್ಲರೂ ಶರಣರೇ, ಸಾಕ್ಷಾತ್ ಶಿವಸ್ವರೂಪಿಗಳೇ ಎಂಬ ಶರಣರ ನಿಲುವನ್ನು ಓದುಗನ ಮನದಲ್ಲಿ ನಿಲ್ಲುವಂತೆ ಕೃತಿಕಾರರು ವ್ಯಾಖ್ಯಾನಿಸಿದ್ದಾರೆ.

ಸತಿಪತಿಗಳು ಒಂದಾದ ಭಕ್ತಿ ಹಿತವಪ್ಪುದು ಶಿವಂಗೆ”
“ವ್ಯತ್ಯಾಸ ಇರುವುದು ದೇಹದಲ್ಲಿಯೇ ಹೊರತು ಅಂತರಂಗದಲ್ಲಿರುವ ಸುಜ್ಞಾನದಲ್ಲಿ, ಆತ್ಮ ಚೈತನ್ಯದಲ್ಲಿ ಅಲ್ಲ”
 “ಶರಣಸತಿ ಲಿಂಗಪತಿ”
 “ಸತಿಪತಿ ಭಾವಗಳೆಂದರೆ ಹೆಣ್ಣು ಗಂಡಾಗುವ ಪರಿ ಗಂಡು ಹೆಣ್ಣಾಗುವ ಪರಿ”
 “ಗಂಡೆಂಬ ಅಹಂನಿಂದ ಶಿವನನ್ನು ಒಲಿಸಿಕೊಳ್ಳಲು ಅಸಾಧ್ಯ”
ಪುರುಷ ತನ್ನ ಅಹಂ ಅನ್ನು ಸುಟ್ಟುಕೊಂಡು ತನ್ನೊಳಗಿನ ಸ್ತ್ರೀಸತ್ವವನ್ನು ಆಹ್ವಾನಿಸಿಕೊಳ್ಳಬೇಕು, ತನ್ಮೂಲಕ ಆತ್ಮದ ನೆಲೆಯಲ್ಲಿ ಇಬ್ಬರೂ ಸಮಾನರಾಗಬೇಕು ಎಂಬುದು ಶರಣರ ಅಂಬೋಣ, “ಸತಿಪತಿಗಳು ಒಂದಾಗದ ಭಕ್ತಿ| ಅಮೃತದೊಳು ವಿಷಬೆರೆಸಿದಂತೆ ||ರಾಮನಾಥ ಎಂಬ ಜೇಡರ ದಾಸಿಮಯ್ಯನ ವಚನ ಉಲ್ಲೇಖಿಸಿ, ಸತಿಪತಿಗಳು ಕೇವಲ ಲೌಕಿಕಕ್ಕೆ ಸೀಮಿತವಾಗಿರದೆ ಧಾರ್ಮಿಕವಾಗಿಯೂ ಗಟ್ಟಿಯಾಗಿರಬೇಕು ಎಂದು ಕೃತಿಕಾರರು ತಿಳಿಸುತ್ತಾರೆ.
ಮುಂದೆ ಚೆನ್ನಮಲ್ಲಿಕಾರ್ಜುನನ್ನೇ ಆಧ್ಯಾತ್ಮದ ಪತಿಯಾಗಿ ಸ್ವೀಕರಿಸಿದ ಅಕ್ಕನೂ ಸಹ ಸತಿಪತಿ ಭಾವಕ್ಕೆ ನಿದರ್ಶನವಾಗಿ ನಿಲ್ಲುತ್ತಾರೆ ಎಂದಿದ್ದಾರೆ.
**
ಕಾಯಕದ ವಿಷಯಕ್ಕೆ‌ ಬಂದರೆ “ಮನೆ ಮನೆಗೆ ತಿರುಗಿ ಕೂಲಿಯನ್ನಾದರೂ ಮಾಡುತ್ತೇನೆ ಅದು ನನ್ನ ಒಡಲ ಅವಸರಕ್ಕಲ್ಲ, ಕೂಡಲ ಸಂಗಮದೇವರ ಒಡಲ ನಿಲುವಿಗೆ” ಎಂದು ಬಸವಣ್ಣನವರ ಮತ್ತು “ಕಾಯಕವೆನ್ನುವುದು ಶ್ರಮಿಕ ಧ್ವನಿಯ ಆತ್ಮಾಭಿಮಾನದ ಕೆಲಸ” ಎಂಬ ಚೌಡಯ್ಯನ ನುಡಿಗಳನ್ನು ಹೇಳಿ, ತೆರಿಗೆ ಪದ್ಧತಿಯ ವಿರುದ್ಧವಾಗಿ ಅಂದು ಶರಣರು ನಡೆದ ನಡೆಯ ಬಗೆಗೆ ತಿಳಿಸಿ ಶರಣರು ಈ ಶೋಷಿತ ವರ್ಗದವರ ಪರ ಹೇಗೆ ಧ್ವನಿ ಎತ್ತಿದ್ದರು ಎಂದು ವಿಸ್ತಾರವಾಗಿ ಹೇಳುತ್ತಾರೆ

ಬಸವ ಭಕ್ತಿಯ ಬೀಜಕ್ಕೆ ಅಲ್ಲಮನೆಂಬ ಮಹಾವೃಕ್ಷ

“ಶರಣ ಸಾಹಿತ್ಯದಲ್ಲಿ ಅಲ್ಲಮ ಮತ್ತು ಬಸವಣ್ಣನವರ ಅನುಸಂಧಾನದ ಪ್ರಭೆ ಗುರು ಶಿಷ್ಯ ಸಂಭ್ರಮದ ಆಕರ್ಷಣೆ”
“ಅಂಗದಲ್ಲಿ ಆಚಾರವ ಸ್ವಾಯತವ ಮಾಡಿಕೊಂಡನಯ್ಯ ಬಸವಣ್ಣ”
” ಬ‌ವನೆಂದರೆ ಒಬ್ಬ ವ್ಯಕ್ತಿ ಚೈತನ್ಯ ಎನ್ನಲಾಗದು, ದಿವ್ಯ ಚೈತನ್ಯದ ಪುಂಜ”
“ಮನವೇ ಲಿಂಗ ಬಸವನಾದಾಗ ನೆನೆಯುವುದು ಇನ್ನಾರನ್ನ”
“ಸಂಗನ ಬಸವಣ್ಣ ನೀನೇ ದಿವ್ಯಶಕ್ತಿ ಎನ್ನ ಭಕ್ತಿ ಮಾರ್ಗದ ಪೋಷಕ ನೀನೇ‌ ವಾಹಕ”
“ಬಸವ ನಿನ್ನ ಮುಟ್ಟಿದಂತೆಲ್ಲಾ ಆನು ಪರಮಾತ್ಮನ ಸ್ವರೂಪನಾದೆ”
ಹೀಗೆ ಹತ್ತಾರು ವಚನಗಳು, ಸಾಲುಗಳನ್ನು ಪ್ರಸ್ತುತ ಪಡಿಸುತ್ತ ಕೃತಿಕಾರರು ಅಲ್ಲಮರು ಹೇಗೆ ಬಸವಣ್ಣನವರ ಮತ್ತು ಬಸವಣ್ಣನವರ ಪ್ರತಿ ಅಕ್ಷರ, ನಡೆ, ನುಡಿಯಲ್ಲಿ ಲೀನರಾಗಿ ಅನುಭಾವಿಸಿದುದನ್ನು ಲೇಖನಪೂರ್ತಿ ಪ್ರಚುರಪಡಿಸುತ್ತಾರೆ.
ಮುಂದೆ ಕೃತಿಕಾರರು ಪ್ರಭು ಕಲ್ಯಾಣದ ಸಂಕೀರ್ಣ ಸತ್ಯ ಅರಿಯಲು ಬರುವ ಸಂದರ್ಭದಲ್ಲಿ ಅಲ್ಲಮನ ಬರುವಿಕೆಗಾಗಿ ಬಸವಣ್ಣ ಶೂನ್ಯ ಸಿಂಹಾಸನ ರಚಿಸಿ, ಕಲ್ಯಾಣವನ್ನು ಶೃಂಗರಿಸಿ ಕಾದು ಆನಂದ ಪುಳಕಿತರಾಗುತ್ತಾರೆ ಎಂದೂ, ಅಲ್ಲಮನಿಗೆ ಕಲ್ಯಾಣ ಜ್ಞಾನದ ಪ್ರಣತಿಯಾಗಿ ಕಾಣುತ್ತದೆ ಎಂದೂ ವಿವರಿಸುತ್ತಾರೆ. ಶರಣ ಧರ್ಮದಲ್ಲಿ ಅಲ್ಲಮ ಎಷ್ಟು ಅಗತ್ಯವೋ, ಬಸವಣ್ಣನೂ ಅಷ್ಟೇ ಪ್ರಮುಖನೆಂದು ಹೇಳಿ ಓದುಗರಿಗೆ ಇಬ್ಬರ ಪ್ರಾಮುಖ್ಯತೆಯನ್ನು ಈ ಲೇಖನದಲ್ಲಿ ಅರ್ಥೈಸುತ್ತಾರೆ.

ಸೂತಕಗಳನ್ನು ನಿರಾಕರಿಸಿದ ಶರಣರು”

ಸಮಾಜದಲ್ಲಿ ಇಂದಿಗೂ ಸೂತಕ ಎನ್ನುವುದು ಹಾಸುಹೊಕ್ಕಾಗಿದೆ. ಒಬ್ಬ ವ್ಯಕ್ತಿ ಸತ್ತಾಗ ಸೂತಕವಾದರೆ, ಮಗು ಜನ್ಮಿಸಿದಾಗ ವೃದ್ಧಿ ಎಂದಾಗುತ್ತದೆ. ಒಂದು ಸಾವು ಒಂದು ಹುಟ್ಟು, ಎರಡೂ ಸೂತಕಗಳೇ ಆಗಿವೆ. ಇವು ಮನುಷ್ಯನ ವ್ಯಕ್ತಿತ್ವಕ್ಕೆ ಸಂಬಂಧಿಸಿದ್ದು ಮತ್ತು ಇವು ಮಾನವ ನಿರ್ಮಿತವಾದವುಗಳಾಗಿವೆ. ಶರಣರು ಶರಣ ಪರಂಪರೆಯಲ್ಲಿ ಸೂತಕಕ್ಕೆ ಮೂರನೇ ಸ್ಥಾನ ನೀಡಿದ್ದಾರೆ.
ಈ ಸೂತಕ, ಮಾದಾರ ಚೆನ್ನಯ್ಯನನ್ನು ಶೋಷಣೆಗೆ ಒಳಪಡಿಸಿತ್ತು. ಇದರಿಂದ ಮುಕ್ತ ಮಾರ್ಗ ಪಡೆಯಲು ಚೆನ್ನಯ್ಯನಿಗೆ ಅಸಾಧ್ಯವಾಗಿ ಆಧ್ಯಾತ್ಮದ ನೆಲೆಯಲ್ಲಿ ಪರಿಹಾರ ಕಾಣುತ್ತಾನೆ.
ಚೆನ್ನ ಬಸವಣ್ಣ ಈ ಸೂತಕದ ಕುರಿತಾಗಿಯೇ ೬೦ ವಚನಗಳನ್ನು ಬರೆದಿದ್ದಾರೆ ಮತ್ತು ಐದು ಸೂತಕಗಳ ಬಗ್ಗೆ ವಿವರಣೆ ನೀಡಿದ್ದಾಗಿ ಉಲ್ಲೇಖಿಸಿದ್ದಾರೆ. ಆದರೆ ಸೂತಕಗಳು ದೇಹಕ್ಕೆ ಸಂಬಂಧಿಸಿದವುಗಳಾಗಿವೆ, ಭಕ್ತನಾದವನಿಗೆ ಇವು ಸಂಬಂಧಿಸಿರುವುದಿಲ್ಲ, ಇವುಗಳ ಆಚರಣೆಯಿಂದ ಹೊರಬರದವ ಭಕ್ತನೂ ಆಗುವುದಿಲ್ಲ ಎಂದು ಚೆನ್ನಬಸವಣ್ಣನವರು ಹೇಳಿರುವುದನ್ನು ಕೃತಿಕಾರರು ತಿಳಿಸಿರುತ್ತಾರೆ.
‌ ಮುಂದೆ ಜಾತಿ ಸೂತಕ, ಜನನ ಸೂತಕ, ರಜ ಸೂತಕ, ಪ್ರೇತ ಸೂತಕ, ಎಂಜಲು ಸೂತಕ, ಸಾವಿನ ಸೂತಕ ಇವುಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತಾರೆ.

ಪ್ರಕೃತಿಯ ಆರಾಧಕಳು ಅಕ್ಕ”
ಸಾಂಸಾರಿಕ ಜೀವನ ಮತ್ತು ಆಧ್ಯಾತ್ಮಿಕ ಭಕ್ತಿಯನ್ನು ಬದಲಿಸಲು ಸಾಧ್ಯವಾಗದ ಅನುಭಾವದ ಅನುಬಂಧವೇ ಪ್ರಕೃತಿಯ ಆರಾಧನೆ ಎನ್ನುವ ಅಕ್ಕ, ಅಕ್ಕಳ ವಚನಗಳ ವಿಶ್ಲೇಷಣೆಯ ಲೇಖನ, ಲೇಖನದ ಕೇಂದ್ರ ಬಿಂದು ಅಕ್ಕ ಓದುಗನಿಗೆ ಅತ್ಯಂತ ಆಪ್ತವಾಗುತ್ತವೆ.
ಅಕ್ಕನ ಆಂತರಿಕ ಹೋರಾಟ ಮತ್ತು ಲೌಕಿಕದ ಹೊಯ್ದಾಟ, ಈ ಎರಡು ರೀತಿಯ ಹೋರಾಟಗಳು, ಶ್ರೀಶೈಲದ ಮಾರ್ಗದಲ್ಲಿ ಗುರುವನ್ನು ಅರಸುತ್ತಾ ಹೋಗುವ ಪಯಣದಲ್ಲಿ ಅನುಭವಿಸಿದ ಕಷ್ಟಗಳು, ಪ್ರಕೃತಿಯಲ್ಲಿ ಅಕ್ಕ ವೈಜ್ಞಾನಿಕ ಸತ್ಯ ಮತ್ತು ಸೌಂದರ್ಯವನ್ನು ಅರಸಿ ಮಾಡುವ ಹುಡುಕಾಟ ಇವುಗಳ ಬಗೆಗೆ ಓದುಗನಿಗೆ ಕೃತಿಕಾರರು ಮನಮುಟ್ಟುವಂತೆ ಅರ್ಥೈಸಿಕೊಡುತ್ತಾರೆ.
ಹೃದಯ ಕಮಲದಲ್ಲಿ ಲಿಂಗಾತ್ಮನಾದ ಚೆನ್ನಮಲ್ಲಿಕಾರ್ಜುನನನ್ನು ಸ್ಥಾಪಿಸಿಕೊಂಡು ಲೌಕಿಕ ಬದುಕಲ್ಲಿ ಸ್ವಾತಂತ್ರ್ಯ ಕಳೆದುಕೊಂಡ ಸ್ಥಿತಿ. ಈ ಸ್ಥಿತಿಗೆ ಬೇಸತ್ತು ಕಾಡನ್ನು ಪ್ರವೇಶಿಸಿ ವಚನ ರಚನೆಗೆ ಪ್ರಾರಂಭಿಸುತ್ತಾಳೆ, ಆಗ ಉತ್ಪತ್ತಿಯಾದ ವಚನವೇ, “ಬೆಟ್ಟದಾ ಮೇಲೊಂದು| ಮನೆಯ ಮಾಡಿ||.. ಎಂಬ ಸಂಗತಿ ನಿಜಕ್ಕೂ ಓದುಗನಿಗೆ ಹೊಸ ವಿಷಯ ಅರಿತ ಭಾವ ಮೂಡುತ್ತದೆ. ಇದರ ಜೊತೆಗೆ ಕೃತಿಕಾರರು ಅಕ್ಕನ ವಚನಗಳನ್ನು ಸಂದರ್ಭ ಸಹಿತ ಬಹಳ ಅದ್ಭುತವಾಗಿ ಪರಿಚಯಿಸಿದ್ದು ಓದ ಬಹಳ ಸಂತೃಪ್ತಿ ನೀಡುತ್ತದೆ.

ಚಂದಿಮರಸನ ವೈಚಾರಿಕ ಪ್ರಜ್ಞೆಯ‌ ಅನುಸಂಧಾನ”

ಸಿಮ್ಮಲಿಗೆಯ ಚೆನ್ನರಾಮ ಅಂಕಿತಾಂಕಿತರಾದ ಚಂದಿಮರಸರು, ಬಸವಣ್ಣನವರಿಗಿಂತಲೂ ೧೪೦ ವರ್ಷ ಹಿರಿಯರು‌. ಗುರುಗಳಾದ ನಿಜಗುಣರಿಂದ ದೀಕ್ಷೆ ಪಡೆದು ೧೬೦ ಆಧ್ಯಾತ್ಮ ಅನುಭಾವ ಆತ್ಮ ತತ್ವ ಶರಣ ಸ್ತುತಿಯ ವಚನಗಳನ್ನು ಬರೆದು ಶರಣ ಸಾಹಿತ್ಯದಲ್ಲಿ ಭದ್ರ ಸ್ಥಾನ ಪಡೆದ ಈ ಶರಣರ ಬಗೆಗೆ ಈ ಲೇಖನದಲ್ಲಿ ಕೃತಿಕಾರರು ವಿಸ್ತೃತವಾಗಿ ವಿವರಿಸದ್ದಾರೆ.
ಚಂದಿಮರಸನ ಕುರಿತಾದ ಲೇಖನದಲ್ಲಿ, ಚಂದಿಮರಸ ಬ್ರಾಹ್ಮಣನಾಗಿದ್ದ, ಅದರಲ್ಲೂ ದ್ವೈತಿಯಾಗಿದ್ದ ನಂತರ ಶರಣನಾಗಿ ಅಂಗ ಲಿಂಗ ಸಂಬಂಧದಲ್ಲಿ ದೇವರನ್ನು ಕಂಡು ಅದ್ವೈತ ತತ್ವವನ್ನು ಹೇಳಿದರು ಎಂದು ಉಲ್ಲೇಖಿಸಿದ್ದಾರೆ. ಬಸವಣ್ಣನವರ ಕಾಲ ೧೨ ನೇ ಶತಮಾನ, ಮಧ್ವಾಚಾರ್ಯರ ಕಾಲ ೧೩ ನೇ ಶತಮಾನ‌ ಬಸವಣ್ಣನವರಿಗಿಂತಲೂ ೧೪೦ ವರ್ಷ ಹಿಂದಿನ ಚಂದಿಮರಸರು ದ್ವೈತಿಗಳಾದದ್ದು ಹೇಗೆ ಎಂಬ ಗೊಂದಲವು ಓದುಗನಲ್ಲಿ ಉಳಿಯುತ್ತದೆ.
ಇಲ್ಲಿ ತೃತೀಯ ಲಿಂಗಿಗಳನ್ನು ಆತ್ಮದ ನೆಲೆಗಟ್ಟಿನಲ್ಲಿ ಕಾಣಬೇಕು ಎನ್ನುತ್ತಾರೆ. ಗಂಡು ವಂಶೋದ್ಧಾರಕ, ಹೆಣ್ಣು ವಂಶೋದ್ಧಾರಕಕ್ಕಲ್ಲ, ತೃತೀಯ ಲಿಂಗಿಗಳಂತೂ ಅನುಪಯೋಗಿಗಳೆಂಬಂತೆ ಕಾಣದೆ ಎಲ್ಲರಲ್ಲಿರುವ ಆತ್ಮ ಒಂದೇ, ಎಲ್ಲರ ಆತ್ಮಗಳೂ ಪರಮಾತ್ಮನ ಸ್ವರೂಪಿಗಳೇ
ಎಂಬ ಸಂದೇಶ ಉತ್ತಮವಾದ ಸಮಾನತೆಯ ಮಾತುಗಳನ್ನು ತೋರಿಸುವ ಲೇಖನ ಆಪ್ತವಾಗುತ್ತದೆ.

ಅಕ್ಕನ ಸಮರ್ಪಣಾ ಭಾವ

“ಲೌಕಿಕ ಪ್ರಿತಿಯ ಮೂಲಕ ಆಧ್ಯಾತ್ಮಿಕ ಮಾರ್ಗದ ಅನ್ವೇಷಣೆಯಲ್ಲಿ ಒಂದಾಗಿದೆ”
“ಈ ಅಲೌಕಿಕ ಕನ್ಯೆಗೆ ಆ ಅಲೌಕಿಕ ಪುರುಷನೇ ನಿತ್ಯ ಪತಿ, ಹರನೇ ನೀನೆನಗೆ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡ”
ಹೀಗೆ ಅಕ್ಕ, ಚೆನ್ನಮಲ್ಲಿಕಾರ್ಜುನನನ್ನು ಅಲೌಕಿಕ ಪತಿಯನ್ನಾಗಿ ಸ್ವೀಕರಿಸಿ, ಕಂಡ ಕನಸುಗಳನ್ನು ಮತ್ತು ಆತನನ್ನು ಅರಸಿ ಹೊರಟು ಆತನ ಧ್ಯಾನದಲ್ಲೇ ರಚಿಸಿದ ವಚನಗಳ ಕುರಿತಾಗಿ‌ ಕೃತಿಕಾರರು ಯಥಾವತ್ತಾಗಿ ಉತ್ತಮವಾದ ವಿವರಣೆಯನ್ನು ಈ ಲೇಖನದಲ್ಲಿ ನೀಡುತ್ತಾರೆ.
“ಈ ಭೂಮಂಡಲಕ್ಕೆ ಅರಿವಿನ ತವನಿಧಿಯ ಒಡೆಯನಾಗಿ ಪುರುಷ ನೀನು ಸತಿ ನಾನು” ಎನ್ನುವ ಅಕ್ಕನ ಮನಸನ್ನು ಕೃತಿಕಾರರು ಸಂಪೂರ್ಣವಾಗಿ ಅಧ್ಯಯನ ಮುಖೇನ ಅರಿತು ಅವಳಿಗೆ ಚೆನ್ನಮಲ್ಲಿಕಾರ್ಜುನನಲ್ಲಿದ್ದ ಸಮರ್ಪಣಾ ಭಾವವನ್ನು ಸಮರ್ಪಕವಾಗಿ ಓದುಗನ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ.
ಅಕ್ಕ ಶಿವನ ಜೊತೆ ಒಂದಾಗುವ ತವಕದಲ್ಲಿರುತ್ತಾಳೆ, ಆತನ ದಿವ್ಯ ರೂಪ ಕಂಡು ಮೈಮರೆಯುವಷ್ಟು ಪ್ರೇಮ ತುಂಬಿಕೊಂಡಿರುತ್ತಾಳೆ, ಲೌಕಿಕದಲ್ಲಿ ಒಂಟಿಯಾಗಿ ಬದುಕಿದರೂ ತನುಮನದಿಂದ ಚೆನ್ನಮಲ್ಲಿಕಾರ್ಜುನನಲ್ಲಿ ಅನುಭಾವದ ಸಂಗಕ್ಕಾಗಿ ಹಾತೊರೆಯುತ್ತಾಳೆಂದರೆ ಅವಳಿಗೆ ಚೆನ್ನಮಲ್ಲಿಕಾರ್ಜುನನಲ್ಲಿ ಉತ್ಕಟ ಪ್ರೇಮ, ಅನನ್ಯ ಭಕ್ತಿ ಎಷ್ಟಿತ್ತು ಎಂಬುದು ಈ ಲೇಖನದಲ್ಲಿ ನಮಗೆ ದಕ್ಕುತ್ತದೆ.

ಯುಗ ಪ್ರವರ್ತಕ ಬಸವಣ್ಣ”
ಹೌದು ಬಸವ ಮಹಾನ್ ಮಾನವತಾವಾದಿ ಶರಣ. ಬಸವ ಅವರವತಾರದಿಂದ ಸಮಾಜದ ಸ್ವಾಸ್ಥ್ಯ ಸುಸ್ಥಿತಿಗೆ ಬಂದಿದೆ. ಲಿಂಗ ಸಮಾನತೆಯಿಂದ ಹಿಡಿದು, ಜಾತಿ ಸಮಾನತೆಯವರೆಗೆ ಪರಿವರ್ತನಾ ಬೀಜವನ್ನು ಬಿತ್ತಿದ ಬಸವಣ್ಣ ಪ್ರಸ್ತುತ ಮತ್ತು ಭವಿಷ್ಯಕ್ಕೂ ಭಾರತಕ್ಕೆ ಕಳಶಪ್ರಾಯನಾಗಿದ್ದಾನೆ.
ಬಸವಣ್ಣನವರ ಅನುಯಾಯಿಗಳಾಗಿ ಅನೇಕ ಶರಣರು ಅವರ ಕಾಯಕ ನಿಷ್ಠೆಯನ್ನು ಜಗತ್ತಿಗೆ ಸಾರಿದರು. ಅವರನ್ನು ಸ್ತುತಿಸಿ ವಚನಗಳನ್ನು, ಹಾಡುಗಳನ್ನು ಬರೆದರು. ಬಸವಣ್ಣನವರು ವಿಶ್ವ ಮಾನವರಾದುದಕ್ಕೆ ಸಾಕ್ಷಿಯಾಗಿ ಪಾಶ್ಚಾತ್ಯ ವಿದ್ವಾಂಸರ ಹೇಳಿಕೆಗಳನ್ನೂ ಸಾಕ್ಷಿಯಾಗಿ ಈ ಲೇಖನದಲ್ಲಿ ಕೃತಿಕಾರರು ಉಲ್ಲೇಖಿಸುತ್ತಾರೆ.
ಬಸವಣ್ಣ ಹೇಳುವುದು ಒಂದೇ ಧರ್ಮ ಅದು ಮಾನವ ಧರ್ಮ. ಅವರು ಹೇಳಿದ ತತ್ವಗಳೇ ಇಂದು ಬಸವ ಧರ್ಮದ ಹೆಸರಿನಲ್ಲಿ ಅನುಪಾಲನೆ ಆಗುತ್ತಿವೆ. ಲೇಖಕಿಯವರು ಶಿವಯೋಗ ಸಾಧನೆಯಲ್ಲಿ ತೊಡಗಿಕೊಳ್ಳಬೇಕಾದರೆ ಆ ವ್ಯಕ್ತಿ ಸತ್ಯ, ನಿಷ್ಠೆ, ಪ್ರಾಮಾಣಿಕತನಗಳನ್ನು ರೂಢಿಸಿಕೊಂಡಿರಬೇಕು ಎಂದು ಬಸವಣ್ಣನವರು ಹೇಳಿದ್ದಾರೆ ಎನ್ನುತ್ತಾರೆ. ಮುಂದೆ, ಬಸವಣ್ಣನವರು ಹೇಳಿದ ಧರ್ಮವನ್ನು ‘ಲಿಂಗಾಯಧರ್ಮ” ಎನ್ನುವುದಕ್ಕಿಂತ ‘ವಿಶ್ವಧರ್ಮ’ ಎನ್ನುವುದು ಸೂಕ್ತ ಎಂದು ಲೇಖಕಿ ಅಭಿಪ್ರಾಯಪಡುತ್ತಾರೆ. ಈ ಅಭಿಪ್ರಾಯ ಸೂಕ್ತವೂ, ಅನುಸರಿಸಲು ಒಪ್ಪಿತವೂ ಆಗಿದೆ. ಏಕೆಂದರೆ ವಿಶ್ವ ಮಾನವರನ್ನು, ಅವರು ಹೇಳಿದ ಧರ್ಮದ ತತ್ವಗಳನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸುವುದು ದೇಶದ ಹಿತದೃಷ್ಟಿಯಿಂದ, ಮೌಲ್ಯಗಳನ್ನು ರೂಢಿಸಿಕೊಳ್ಳುವ ದೃಷ್ಟಿಯಿಂದ ಉಚಿತವಲ್ಲ. ಬಸವ ಧರ್ಮ ವಿಶ್ವ ಧರ್ಮವಾದಾಗ ಮಾತ್ರ ಅವರು ಬಯಸಿದ ಲಿಂಗ ಸಮಾನತೆ, ಸಾಮಾಜಿಕ ಅನ್ಯೋನ್ಯತೆ, ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲ, ಇವನಮ್ಮವ ಇವನಮ್ಮವ ಎನ್ನುವ ಭಾವ, ಅಂತರಂಗ ಬಹಿರಂಗ ಶುದ್ಧಿ, ನಮ್ಮ ನಮ್ಮ ತನು ಮನವ ಸಂತೈಸಿಕೊಳ್ಳುವಿಕೆ ಎಲ್ಲವೂ ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಈ ಲೇಖನ ಓದುಗರ ಕಣ್ತೆರೆಸುವಲ್ಲಿ ಪ್ರಭಾವಿತವಾಗುತ್ತದೆ.

ರವಿಯೊಳಡಗಿದ ಪ್ರತಿಬಿಂಬದಂತೆ”

ಅಲ್ಲಮನ ಪ್ರಶ್ನೆಗಳಿಗೆ ಎದುರಿಸಿ ಸವಾಲು ಹಾಕಿದ ವೈಚಾರಿಕ ದಿಟ್ಟ ಶರಣೆ, ಮುಕ್ತಾಯಕ್ಕನ ಕುರಿತಾದ ಈ ಲೇಖನ ವಿಶೇಷವಾಗಿದೆ. ಚಿಕ್ಕ ಲೇಖನದಲ್ಲೇ ಮುಕ್ತಾಯಕ್ಕನ ವ್ಯಕ್ತಿತ್ವ ದರ್ಶನವನ್ನು ಮಾಡಿಸಿದ್ದಾರೆ.
ತನ್ನ ಅಣ್ಣನನ್ನು ಗುರುವೆಂದು ನಂಬಿ, ಅಣ್ಣನ ವ್ಯಕ್ತಿತ್ವ ರವಿಯೊಳಡಗಿದ ಪ್ರಕಾಶತೆ, ಅದು ಜ್ಞಾನ ಪ್ರಕಾಶತೆ ಎಂದು ಅಣ್ಣನ ವ್ಯಕ್ತಿತ್ವವನ್ನು ತತ್ವವಾಗಿಸಿದ ಶರಣೆ ಎಂದು ಕೃತಿಕಾರರು ಸ್ಪಷ್ಟವಾಗಿ ಹೇಳಿದ್ದಾರೆ.
ಮುಂದುವರೆದು ಅಣ್ಣನ ಜ್ಞಾನವನ್ನು ಅದ್ವೈತ ನೆಲೆಯಲ್ಲಿ ಕಂಡು ಅಣ್ಣನ ಅಧ್ಯಾತ್ಮಿಕ ಮೌಲ್ಯವನ್ನು ಮಕ್ತಾಯಕ್ಕ ಗೌರವಿಸುತ್ತಾಳೆ ಎಂದೂ, ಮುಕ್ತಾಯಕ್ಕನಿಗೆ ಅಜಗಣ್ಣ ಎಷ್ಟು ಮುಖ್ಯವಾಗಿತ್ತೋ, ಆತ್ಮದರ್ಶನದಲ್ಲಿ ಅವನ ಸಾಂಸ್ಥಿಕ ರೂಪವೂ ಅಷ್ಟೇ ಮುಖ್ಯವಾಗಿತ್ತು ಎನ್ನುತ್ತಾರೆ.
ಮುಕ್ತಾಯಕ್ಕನ ಕೆಲ ವಚನಗಳನ್ನು ಉಲ್ಲೇಖಿಸಿ ಅವುಗಳ ಅರ್ಥ ಸಾರವನ್ನು ಓದುಗನಿಗೆ ಉಣಬಡಿಸಿ ಧ್ಯಾನಾಸಕ್ತರನ್ನಾಗಿಸುತ್ತಾರೆ.

ಗುರುವೆಂಬ ದಾರ್ಶನಿಕ ಅಜಗಣ್ಣ”
ಒಬ್ಬ ಗುಪ್ತ ಶರಣ ಅಜಗಣ್ಣ, ಬ್ರಹ್ಮನ ಸ್ಥಾನವನ್ನು ಪಡೆದವನು, ಪೂರ್ವಜನ್ಮದಲ್ಲಿ ಕೈಲಾಸದಲ್ಲಿ ಅಮರಗಣಗಳಲ್ಲಿ ಒಬ್ಬನಾಗಿದ್ದ ಅಜಗಣ್ಣ ಈ ಜನ್ಮದಲ್ಲಿ ಬಾಲ್ಯದಲ್ಲಿಯೇ ಲಿಂಗವನ್ನು ಅಂತರಂಗದಲ್ಲಿಟ್ಟುಕೊಂಡು ಆಟವಾಡುತ್ತಿದ್ದ. ಗೆಳೆಯರು ಲಿಂಗವನ್ನು ಕೇಳಿದರೆ ಅದನ್ನು ನುಂಗಿ ಹೃದಯ ಕಮಲದಲ್ಲಿಟ್ಟುಕೊಂಡ ಎಂಬಲ್ಲಿ ಅಂಗಲಿಂಗದ ಸಂಬಂಧದ ಪ್ರಜ್ಞೆ ಸ್ಪಷ್ಟತೆಯನ್ನು ಲೇಖಕರು ದಾಖಲಿಸಿದ್ದಾರೆ.
ಗುರು ಮುಖದಿಂದ ಬಂದದ್ದು ಶುದ್ಧ ಪ್ರಸಾದ, ಲಿಂಗ ಮುಖದಿಂದ ಬಂದದ್ದು ಸಿದ್ದ ಪ್ರಸಾದ. ಶುದ್ಧ ಪ್ರಸಾದದಿಂದ ದೇಹ ಶುದ್ಧಿಯಾದರೆ, ಸಿದ್ದ ಪ್ರಸಾದದಿಂದ ಪ್ರಾಣ ಶುದ್ಧಿಯಾಗುತ್ತದೆ. ಅಂಗಗುಣಗಳಿದು ಲಿಂಗಗಳಾದಾಗ ಸ್ವೀಕರಿಸುವ ಆಹಾರದಿಂದ ಹಿಡಿದು ಇತರ ಎಲ್ಲಾ ಕ್ರಿಯೆಗಳು ಪ್ರಸಾದಿ ಭಾವವನ್ನು ಕಾಣುತ್ತವೆ ಎಂಬ ಅಜಗಣ್ಣನ ಮಾತನ್ನು ಮತ್ತು ಇದಕ್ಕೆ ಸಂಬಂಧಿಸಿದಂತೆ ಅಲ್ಲಮ ಪ್ರಭುವಿನ ಹೇಳಿಕೆಯನ್ನು ಲೇಖಕಿಯರು ಬಹಳ ಸೊಗಸಾಗಿ ಈ ಲೇಖನದಲ್ಲಿ ವಿವರಿಸಿ ಅಜಗಣ್ಣನ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿದಿದ್ದಾರೆ.

ಜಂಗಮಕ್ಕೆ ರುಚಿಯ ಸಲ್ಲಿಸುವೆ
ಈ ಲೇಖನದಲ್ಲಿ ಜಂಗಮ ವ್ಯಕ್ತಿತ್ವದ ನಿರ್ಮಾಣಕ್ಕೆ ಅಕ್ಕನ ಕೊಡುಗೆಯನ್ನು ವಿವರಿಸುತ್ತಾ, “ನಾನು ತೊಡಿಗೆಯ ತೊಡದ ಮುನ್ನವೇ ಜಂಗಮಕ್ಕೆ ತೊಡಿಗೆಯ ತೊಡಿಸುವೆ ಎನ್ನುವ ಅಕ್ಕನ ಸಾಲುಗಳನ್ನು ಉಲ್ಲೇಖಿಸಿ, ಜಂಗಮನಿಷ್ಟ ಸಾಧನೆ ಹೇಗಿರಬೇಕು ಅದರಿಂದ ಹೇಗೆ ಆಧ್ಯಾತ್ಮಿಕ ನಿಲುವನ್ನು ಪಡೆಯಬಹುದು ಎಂದು ವಿವರಿಸುತ್ತಾರೆ.

“ಸ್ತ್ರೀ ವಾದಿ ಶರಣೆ ಸತ್ಯಕ್ಕ”

12 ನೇ ಶತಮಾನದ ಶ್ರೇಷ್ಠ ನಿಷ್ಠುರ ಅಭಿವ್ಯಕ್ತಿಗೆ ಹೆಸರಾದ ಶರಣೆ ಸತ್ಯಕ್ಕ ತಮ್ಮ ಆಶಯವನ್ನು ವಚನಗಳ ಮೂಲಕ ಎಚ್ಚರಿಸಿದ್ದಾರೆ ಮತ್ತು ಆತ್ಮ ಗೌರವದ ಪ್ರಶ್ನೆ ಬಂದಾಗ ಮೌನ ಮುರಿಯಬೇಕೆಂಬುದಕ್ಕೆ ನಿದರ್ಶನ ಈ ಶರಣೆ ಸತ್ಯಕ್ಕ ಎಂಬುದು ಈ ಲೇಖನದಿಂದ ಓದುಗನಿಗೆ ಮನವರಿಕೆ ಆಗುತ್ತದೆ.
ಕೃತಿಕಾರರು ಈ ಲೇಖನದಲ್ಲಿ ಸತ್ಯಕ್ಕನ ಪರಿಚಯ, ಅವರ ವಚನಗಳ ಭಾವಾರ್ಥವನ್ನು ಅರ್ಥ ಮಾಡಿಕೊಡುವದರೊಂದಿಗೆ, ಕಾಯಕ ನಿಷ್ಠೆ, ಶಿವ ಭಕ್ತಿ ಎಷ್ಟಿತ್ತು ಎಂಬುದನ್ನು ಹೇಳುವುದರ ಜೊತೆಗೆ ಸತ್ಯಕ್ಕ ಈ ಸಮಾಜಕ್ಕೆ ಹೆಣ್ಣಿನ ಅವಶ್ಯಕತೆ ಮತ್ತು ಅನಿವಾರ್ಯತೆ ಎಷ್ಟಿದೆ ಎಂಬುದನ್ನು ವಿವರಣಾತ್ಮಕವಾಗಿ ತಿಳಿಸುತ್ತಾರೆ.
ಅಕ್ಕಮಹಾದೇವಿಯನ್ನು ಬಿಟ್ಟರೆ ಸ್ತ್ರೀ ಪ್ರಧಾನ ನೆಲೆಯಿಂದ ಪ್ರಶ್ನಿಸಲ್ಪಟ್ಟವಳು ಸತ್ಯಕ್ಕ. ಕಾಯಕದಲ್ಲಿ ಶಿವನನ್ನು ಕಂಡಂಥಹ ಸತ್ಯಕ್ಕ ದುಡಿಯುವ ವರ್ಗದ ಪ್ರತಿನಿಧಿಯಾಗಿದ್ದನ್ನು, ಕಾರ್ಮಿಕ ವರ್ಗದವರ ಪರವಾಗಿ ದನಿ ಎತ್ತಿದ್ದನ್ನು ಕೃತಿಕಾರರು ಉತ್ತಮವಾಗಿ ಬರೆದಿದ್ದಾರೆ.

ಚಾಮರಸನ ಪ್ರಭುಲಿಂಗ ಲೀಲೆ”
ಹರಿಹರನಿಗೆ ಅಲ್ಲಮ ಪ್ರಭುದೇವನ ರಗಳೆಯಾದರೆ, ಚಾಮರಸನಿಗೆ ಪ್ರಭುಲಿಂಗ ಲೀಲೆಯಾಗಿದೆ. ಇಬ್ಬರೂ ಒಂದೇ ಕಥನವನ್ನು ಹೇಳಿದರೂ ಅವರವರ ವಿಚಾರವಂತಿಕೆಗೆ ತಕ್ಕಂತೆ ಕೆಲವು ಸಾಮ್ಯತೆಗಳು, ಕೇಲವು ವಿಭಿನ್ನತೆಗಳು ಇವೆ ಎಂಬುದು ಈ ಲೇಖನ ತಿಳಿಸುತ್ತದೆ. ಕೃತಿಕಾರರು ಚಾಮರಸನ ಪ್ರಭುಲಿಂಗಲೀಲೆ ಕಥೆಯನ್ನು ಆಕರ್ಷಕವಾಗಿ ವಮರ್ಶಿಸಿದ್ದಾರೆ‌. ಅಲ್ಲಿ ಬರುವಂತಹ ಪ್ರಸಂಗಗಳನ್ನು ತುಲನಾತ್ಮಕವಾಗಿ ಓದುಗರಿಗೆ ಪರಿಚಯಿಸುತ್ತಾ ಕಾವ್ಯದ ಪ್ರೌಢಿಮೆಯನ್ನು ತಿಳಿಸಿದ್ದಾರೆ.
ಈ ಕೃತಿಯಲ್ಲಿ ಅತಿ ಹೆಚ್ಚು ನನ್ನನ್ನು ಆವರಿಸಿಕೊಂಡ ಲೇಖನ ಈ ಪ್ರಭುಲಿಂಗಲೀಲೆಯ ದರ್ಶನ.

ಬಸವ ಶಕ್ತಿಯ ಅಂಗಳದಲ್ಲಿ ಆರದ ದೀಪ

ಸತಿ-ಪತಿ ಭಾವದ ಆತ್ಮಗೌರವದ ಜೊತೆಗೆ ಸ್ತ್ರೀ ಪರ ಕಾಳಜಿಯ ಸ್ಪಷ್ಟತೆಯನ್ನು ಬಿಂಬಿಸುವ ವಚನಗಳನ್ನು ನೀಡಿದ ಮಹಾಮಹಿಳಾದ ನೀಲಮ್ಮ ತಾಯಿಯವರ ಕುರಿತಾದ ಈ ಲೇಖನ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
ನನ್ನನ್ನು ಬೊಂಬೆಯಾಗಿಸಿ ಹಿಂದೆ ಮುಂದೆ ಇರುವವರು ಗೊಂಬೆಯ ಕಂಡು ಹರ್ಷ ಪಡುವ ಪ್ರತಿಷ್ಠೆಯ ಜನರು. ಇಲ್ಲಿ ನಮ್ಮನ್ನು ಅಸ್ವಾತಂತ್ರ್ಯದಲ್ಲಿ ‌ಸಿಲುಕಿಸಿದ್ದಾರೆ ಎಂಬರ್ಥದಲ್ಲಿ ಆಡಿದ ಮಾತು ನೀಲಮ್ಮನವರ ಮನೋವೇದನೆಯನ್ನು ತೋರಿಸುತ್ತದೆ ಎಂದು ಲೇಖಕಿಯವರು ಅಭಿಪ್ರಾಯಪಟ್ಟಿದ್ದಾರೆ.
ಬದುಕಲ್ಲಿ ಆನಂದದ ಮುಖವಾಡಗಳು ಎಂಬುದು ಪ್ರಸ್ತುತ ಸಮಾಜದ ಪ್ರತಿಬಿಂಬ ಎನ್ನುವಂತಿವೆ. ಕಾಯದ ಆಮಿಷಗಳನ್ನು ಬದಿಗೊತ್ತಿ ಬಸವ ತತ್ವ ಚಿಂತನೆಗೆ ತಮ್ಮ ಚೈತನ್ಯವನ್ನು ಅರ್ಪಿಸಿದ ನೀಲಮ್ಮ ಬಸವ ಶಕ್ತಿಯ ಅಂಗಳದಲ್ಲಿ ಆರದ ದೀಪವಾಗಿ ಪ್ರಜ್ವಲಿಸಿ ಇಂದು ಅವರ ಚರಿತ್ರೆ ಮತ್ತು ವಚನಗಳ ಮೂಲಕ ನಮ್ಮ ಮಧ್ಯೆಯೂ ನಂದಾದೀಪವಾಗಿ ಬೆಳಗುತ್ತಿದ್ದಾರೆ ಎಂಬುದು ಲೇಖನದಲ್ಲಿ ನಾವು ಕಾಣುತ್ತೇವೆ.
ನೀಲಮ್ಮನವರ ವಚನಗಳನ್ನು ಕೃತಿಕಾರರು ವಿವರಿಸುತ್ತ ಲೌಕಿಕ ಮತ್ತು ಆಧ್ಯಾತ್ಮಿಕ ಬದುಕಿನಲ್ಲಿ ಮನಸ್ಸನ್ನು ಶುಭ್ರಗೊಳಿಸುವ ಕಾರ್ಯ ಇವರಿಂದ ಆಗಿದೆ ಎನ್ನುತ್ತಾರೆ.

ಒಡಲಿಲ್ಲದ ಬಯಲಲ್ಲಿ ಸತ್ಯದ ಹುಡುಕಾಟ”

ಬಯಲು ಎಂದರೆ “ಸತ್ಯದ ಪವಿತ್ರತೆಯನ್ನು ಮುಂದು ಮಾಡುವ ವಿಶೇಷ ರೂಪಕದ ಅವಲೋಕನಕ್ಕೆ ಒಳಪಡಿಸುವ ಮನಸ್ಥಿತಿಯಾಗಿದೆ” ಎನ್ನುವ ಕೃತಿಕಾರರು, ಮುಂದೆ ಈ ಬಯಲು ಎಂಬ ಸಂವೇದನೆಯನ್ನು ವಚನ ಸಾಹಿತ್ಯದಲ್ಲಿ ಮಾತ್ರ ಕಾಣಲು ಸಾಧ್ಯ ಎನ್ನುತ್ತಾರೆ.
ನಂತರ ಅಂಬಿಗರ ಚೌಡಯ್ಯ, ಬಸವಣ್ಣ, ಅಕ್ಕಮಹಾದೇವಿ, ಆಮುಗೆ ರಾಯಮ್ಮ, ಮಡಿವಾಳ ಮಾಚಿದೇವ, ಅಲ್ಲಮ ಪ್ರಭುಗಳ “ಬಯಲ” ಕುರಿತಾದ ವಚನಗಳನ್ನು ಪ್ರಚುರ ಪಡಿಸುತ್ತ ಅವರವರ ಅನುಭಾವದಲ್ಲಿ ಬಯಲಿನ ಭಾವನೆ ಹೇಗಿತ್ತು ಎಂಬುದನ್ನು ಸೂಕ್ಷ್ಮ ದೃಷ್ಟಿಕೋನದಿಂದ ಅರ್ಥೈಸಿದ್ದಾರೆ.

ಒಟ್ಟಾರೆ ೧೫ ಲೇಖನಗಳುಳ್ಳ ಈ ಚಿತ್ ಜ್ಯೋತಿ ಕೃತಿ ಪಾಮರರ ಜೀವನಕ್ಕೆ ಜ್ಯೋತಿಯಾಗುತ್ತದೆ. ಬಸವಣ್ಣರಾದಿಯಾಗಿ ಶರಣರ ವಚನ ಸಾಹಿತ್ಯದ ಸಮಗ್ರ ಅಧ್ಯಯನದಿಂದ ಉದ್ಭವಿಸಿದ ಕೂಸು ಈ ಕೃತಿ. ಮೇಲ್ನೋಟಕ್ಕೆ ಒಂದು ಕಥೆ, ಕಾದಂಬರಿಯನ್ನು ಓದಿದಂತೆ ಈ ಕೃತಿಯನ್ನು ಓದಲು ಸಾಧ್ಯವಿಲ್ಲ. ಪ್ರತೀ‌ಲೇಖನದ ಪ್ರತೀ ಸಾಲುಗಳನ್ನು ಚಿಂತನಾಶೀಲವಾಗಿಯೇ ಓದಬೇಕು. ವಚನ ಸಾಹಿತ್ಯಿಕ ಪ್ರಬಂಧ, ಭಾಷಣ ಮಾಡಬೇಕಾದ ಸಂದರ್ಭದಲ್ಲಿ ಈ ಕೃತಿ ಒಳ್ಳೆಯ ಆಕರ ಗ್ರಂಥವಾಗುವಲ್ಲಿ ಮುನ್ನೆಲೆಯಲ್ಲಿರುತ್ತದೆ.

ಈ ಚಿತ್ ಜ್ಯೋತಿಯ ಬೆಳಕಲ್ಲಿ ವಿಹರಿಸುವ, ಅನುಭಾವಿಸುವ ಮನಸುಳ್ಳವರು ಖಂಡಿತವಾಗಿ ಈ ಕೃತಿಯನ್ನು ಓದಬೇಕು.. ಇಂತಹ ಕೃತಿಯನ್ನು ಲೋಕಕ್ಕೆ ಅರ್ಪಿಸುವಲ್ಲಿ ನಿರತವಾದ “ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ, ಮಸ್ಕಿ” ಮತ್ತು ಇದರ ಪ್ರಕಾಶನದ ಜವಾಬ್ದಾರಿ ವಹಿಸಿದ ಶ್ರೀ ವೀರೇಶ ಸೌದ್ರಿ ಅವರ ಕಾರ್ಯ ಶ್ಲಾಘನೀಯವಾದುದು. ಪ್ರಸ್ತುತ ಕಾಲಮಾನದಲ್ಲಿ ಇಂತಹ ಔದಾರ್ಯತೆ ಕೃತಿಕಾರರಿಗೆ, ಓದುಗರಿಗೆ ಮತ್ತು ಸಮಾಜಕ್ಕೆ ಅವಶ್ಯವಾಗಿ ಬೇಕಾಗಿದ್ದು ನಮ್ಮ ಭಾಗದಲ್ಲಿ ಅದು ದಕ್ಕಿರುವುದು ಖುಷಿ ಮತ್ತು ಹೆಮ್ಮೆಯ ವಿಚಾರಾಗಿದೆ.

ವರದೇಂದ್ರ ಕೆ ಮಸ್ಕಿ
9945253030

 

 

ಕೃತಿಗಳಿಗಾಗಿ ಸಂಪರ್ಕಿಸಿ
—– ಶ್ರೀ ವೀರೇಶ ಸೌದ್ರಿ 9448805067

ಪ್ರಕಾಶಕರು
ದೇವನಾಂಪ್ರಿಯ ಪ್ರಕಾಶನ ಮತ್ತು ಓದುಗರ ಸಂಘ, ಮಸ್ಕಿ

Don`t copy text!