ಹಗೆಯ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರೇಮಕಥೆ

ನಾ ಓದಿದ ಪುಸ್ತಕ

 

 

 

 

 

 

 

 

ಟ್ರಾಯ್ (ಕಾದಂಬರಿ)
ಹಗೆಯ ಬೆಂಕಿಯಲ್ಲಿ ಸುಟ್ಟು ಕರಕಲಾದ ಪ್ರೇಮಕಥೆ
ಕೃತಿಕಾರರು:- ಗಾಯತ್ರಿ ರಾಜ್

“ಆಮ್ರಪಾಲಿ” ಕಾದಂಬರಿಯ ಪ್ರಖ್ಯಾತ ಕೃತಿಕಾರರು, ಆತ್ಮೀಯರೂ ಆದ ಸಹೃದಯಿ ಸಹೋದರಿ ಗಾಯತ್ರಿ ರಾಜ್ ಅವರದು ಸಾಧನೆಯ ಹಾದಿ. ಕೇವಲ ಕಾಲ್ಪನಿಕ ಕಥೆ, ಕಾದಂಬರಿಗಳನ್ನು ಬಹುತೇಕರು ರಚಿಸುತ್ತಾರೆ; ಆದರೆ ಐತಾಹಾಸಿಕ ಕ್ಷಣಗಳನ್ನು ಅಧ್ಯಯನ ಮಾಡಿ, ಸ್ಥಳ ಭೇಟಿ, ಅನ್ವೇಷಣೆ ಮಾಡಿ ಅದಕ್ಕೆ ಧಕ್ಕೆಯಾಗದಂತೆ ಕಾದಂಬರಿ ರೂಪದಲ್ಲಿ ವ್ಯಕ್ತಪಡಿಸುವುದು ಮತ್ತು ವರ್ಣಿಸುವುದು ಸೋಜಿಗವೂ ಹೌದು, ಹೆಚ್ಚುಗಾರಿಕೆಯೂ ಹೌದು. ಆಗಿನ ಪೌರಾಣಿಕ, ಐತಿಹಾಸಿಕ, ಸ್ಮರಣೀಯ ಘಟನೆಗಳನ್ನು ಅಕ್ಷರಕ್ಕಿಳಿಸುವುದರ ಜೊತೆಗೆ ಅದಕ್ಕೆ ಪೂರಕವಾಗಿ ತಮ್ಮ ಸೃಜನಶೀಲ ಸನ್ನಿವೇಶಗಳನ್ನೂ ಅಭಿವ್ಯಕ್ತಿಸಿ ಕಾದಂಬರಿಗೆ ಮತ್ತು ಅಲ್ಲಿನ ಪಾತ್ರಗಳಿಗೆ ಮೆರುಗನ್ನು ನೀಡುವಲ್ಲಿ ಗಾಯತ್ರಿ ರಾಜ್ ಅವರದು ಎತ್ತಿದ ಕೈ.
ಇದು ಒಂದು ಯುದ್ಧ ಎಂದಷ್ಟೇ ಕೈ ಬಿಡಬಹುದಿತ್ತು,(ಅವರೇ ಹೇಳಿದಂತೆ) ಆದರೆ ಆ ಯುದ್ಧದ ಹಿಂದೆ ಒಂದು ಮರೆಯಲಾಗದ ಪ್ರೇಮ ಕಥೆ ಇದೆ ಎಂದು ಗುರುತಿಸಿ ಅದನ್ನು ವಿಜೃಂಭಿಸಿ ಈ ಕಾದಂಬರಿಯನ್ನು ಬರೆದಿದ್ದಾರೆ‌. ಗಾಯತ್ರಿ ರಾಜ್ ಅಂತಹ ಪ್ರೇಮ ತುಂಬಿದ ಹೃದಯದವರಿಗೆ ಮಾತ್ರ ಯುದ್ಧವನ್ನು ಬದಿಗಿರಿಸಿ ಪ್ರೇಮವನ್ನು ಗುರುತಿಸಲು ಸಾಧ್ಯ. ಓದುಗರ ಹೃದಯವೂ ಕಾದಂಬರಿಯ ಓದಿನ ಅಂತ್ಯದ ಹೊತ್ತಿಗೆ ಪ್ರೇಮವನ್ನು ತುಂಬಿಕೊಳ್ಳುತ್ತಾರೆ.
ಇಂತಹ ಸುಂದರ ಹೃದಯಿ ಸಹೋದರಿ ಗಾಯತ್ರಿ ರಾಜ್ ಅವರ ಕೃತಿಗಳನ್ನು ಓದುಗನಿಗೆ ತಲುಪಿಸುವ ನಿಟ್ಟಿನಲ್ಲಿ “ವೀರಲೋಕ”(ಇದು ಪುಸ್ತಕ ಪ್ರಪಂಚ)ದ ಕಾರ್ಯ ಶ್ಲಾಘನೀಯ ಮತ್ತು ಸ್ಮರಣೀಯ.

ಅತ್ಯಂತ ಮುತವರ್ಜಿಯಿಂದ ಗುಣಮಟ್ಟಕ್ಕೆ, ಕೃತಿಯ ಅಂದಕ್ಕೆ ಯಾವ ರಾಜಿಯಿಲ್ಲದೆ ಅತ್ಯಂತ ಸೊಗಸಾದ ಮುಖಪುಟದೊಂದಿಗೆ ಕೃತಿಯನ್ನು ಓದುಗರಿಗೆ ನೀಡಿದೆ.
ಇಂತಹ ಉತ್ತಮ ಕೃತಿಯನ್ನು ಓದಲು ನನಗೆ ಅವಕಾಶ ಸಿಕ್ಕಿರುವುದೇ ಭಾಗ್ಯ ಎನಿಸುತ್ತದೆ. ಕೃತಿಕಾರರಿಗೆ ಮತ್ತು ವೀರಲೋಕ ಬಳಗಕ್ಕೆ ಅಭಿವಂದನೆಗಳನ್ನು ಅರ್ಪಿಸುತ್ತ ಕೃತಿಯನ್ನು ನನ್ನ ವಿವೇಚನೆಗೆ ತಕ್ಕಷ್ಟು ಪರಿಚಯಿಸುತ್ತಿದ್ದೇನೆ. ಬರಹದ ಜೊತೆಗೆ ಕೃತಿಯನ್ನೂ ಕೊಂಡು ಓದಿ ಎಂಬ ವಿನಂತಿಯಮೂಲಕ.
*****

ಗ್ರೀಕರು ಟ್ರಾಯ್ ನಗರವನ್ನು ವಶಪಡಿಸಿಕೊಳ್ಳುವ ಸಂಚಿನಲ್ಲಿ ಕಾದಂಬರಿಯ ನಾಯಕಿ, ಓದುಗನ ಮನಸಿನಲ್ಲಿ ಅಪ್ಸರೆಯಾಗಿ, ಪ್ರೇಮದ ವ್ಯಾಖ್ಯಾನವಾಗಿ, ಓದುಗ ತನ್ನ ಪ್ರೇಮಿಯಲ್ಲೂ ಕಾಣಬಹುದಾದಂತಹ ಸ್ಫುರದ್ರೂಪ ಗೊಂಬೆಯಾಗಿ, ಮನದಣಿಯ ನೋಡಿದರೂ ಕಣ್ಣು, ಅರೆಕ್ಷಣವೂ ಬಿಟ್ಟಗಲದಂತೆ ಮನಸೂರೆಗೊಂಡ ದಂತದ ಬೊಂಬೆ
“ಹೆಲೆನ್” ಭಾಗಿಯಾಗಿದ್ದಳು ಎಂಬುದು ಸಹಿಸಲಸಾಧ್ಯವಾದುದು. ಕೃತಿ ಓದಿದ ನಂತರ ಇದನ್ನು ಓದುಗನು ಊಹಿಸಿಕೊಳ್ಳಲೂ ಇಷ್ಟಪಡುವುದಿಲ್ಲ ಎಂದಾದ ಮೇಲೆ ಈ ತರಹದ ವಾದವೂ ಕೂಡ ಒಂದಿದೆ, ಒಂದಿತ್ತು ಎಂಬುದನ್ನು ನೇರಾನೇರ ಮೊದಲೇ ನಾನು ತಳ್ಳಿಹಾಕಿಬಿಡುತ್ತೇನೆ.
ಕೊಳದಲ್ಲಿ ತನ್ನ ಪ್ರತಿಬಿಂಬ ಕಾಣುವ ಬದಲಿಗೆ; ಇನ್ನು ನೋಡದೇ ಇರುವ ತನ್ನ ಪ್ರೇಮಿಯನ್ನು ಕಾಣುವುದೆಂದರೆ‌ ಇದು ಯುದ್ಧದ ಸಂಚಿನಲ್ಲಿ ಅಥವಾ ಒಂದು ದೇಶವನ್ನು ವಶಪಡಿಸಿಕೊಳ್ಳಲು, ಸರ್ವನಾಶ ಮಾಡಲು ರೂಪಿಸಿದ ಸಂಚಿನಲ್ಲಿ ಭಾಗಿಯಾಗುವಂತಹ ಹೃದಯವಲ್ಲ ಎಂಬುದು ಸುಸ್ಪಷ್ಟ.
ಒಂದೇ ನೋಟದಲ್ಲೇ ಮನಸೋತು ತನ್ನ ಚಂದ್ರಮುಖಿ, ಬೆಳದಿಂಗಳ ಬಾಲೆಯನ್ನು ಮನತುಂಬಿಕೊಂಡ ಕಥಾ ನಾಯಕ “ಪೆರಿಸ್” ಇಡೀ ಟ್ರಾಯ್ ಸುಟ್ಟು ಕರಕಲಾದರೂ, ಅಕ್ಷರಶಃ ಪತನವಾದರೂ ಓದುಗನ ಮನಸಲ್ಲಿ ಕೊನೆಯವರೆಗೂ ಮುಗ್ಧನಾಗಿಯೇ ಉಳಿಯುತ್ತಾನೆ.
ಬರೊಬ್ಬರಿ ಹತ್ತು ವರ್ಷಗಳ ಘನ ಘೋರ ಯುದ್ಧವೆನ್ನುವುದು ಕಲ್ಪನೆಗೂ ಮೀರಿದಂತದ್ದು. ಹತ್ತು ವರ್ಷಗಳ ಕಾಲ ಗ್ರೀಕರು ತಮ್ಮೆಲ್ಲಾ ಕುಟುಂಬ, ಮನೆ, ಮಠ, ರಾಜ್ಯವನ್ನು ತೊರೆದು ಯುದ್ಧದಲ್ಲಿ ಭಾಗಿಯಾಗುತ್ತಾರೆಂದರೆ ಇದೂ ಕೂಡ ಪ್ರೇಮದ ಪರಿಯೇ ಹೌದು. ಹೆಲೆನ್ ಮತ್ತು ಪೆರಿಸ್ನದು ಮಾನವ, ವಯೋ ಸಹಜ ಪ್ರೇಮವಾದರೆ, ಸಹಸ್ರೋಪಾದಿಯಲ್ಲಿ ಯುದ್ಧದಲ್ಲಿ ಭಾಗವಹಿಸಿದ ಜನರದ್ದು ದೇಶ ಪ್ರೇಮ ಎನ್ನಬಹುದು,

ರಾಜ್ಯ-ರಾಜಭಕ್ತಿಯೂ ಹೌದು.
ಇಲ್ಲಿ ಹೆಲೆನ್ ಪೆರಿಸ್ ನ ಪ್ರೇಮ, ಎಷ್ಟು ಮನಕೆ ತಾಕುತ್ತದೆಯೋ, ಕೊನೆಯಲ್ಲಿ ಅಖಿಲೀಸ್, ಬ್ರೈಸೀಯಸ್ನ ಪ್ರೇಮವೂ ಓದುಗನೆದೆಗೆ ತುಸು ಹೆಚ್ಚೇ ಎನ್ನುವಷ್ಟು ತಾಕಿ,ಕಣ್ಣಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಹುಟ್ಟಿನಲ್ಲೇ ದೇಶದ ಅವನತಿಯ ಸಂದೇಶ ನೀಡಿದ್ದ ಪೆರಿಸ್ (ಅಲೆಕ್ಸಾಂಡರ್) ನನ್ನು ಕೊಲ್ಲಲು ಆದೇಶವಿತ್ತ ತಂದೆ, ಮುಂದೆ ಮಗ ಬದುಕುಳಿದು ಬಂದು, ನಂತರ ಅವನಿಂದಲೇ ಯುದ್ಧ ಪ್ರಾರಂಭವಾಗುವ ಸಂದರ್ಭದಲ್ಲಿ ಪ್ರೇಮಕ್ಕಾಗಿ ಯುದ್ಧ ಮಾಡಿದ ಇತಿಹಾಸವಿಲ್ಲ, ಇದು ಸರ್ವಶ್ರೇಷ್ಟವಾದ ಯುದ್ಧ ಎನ್ನುವಂತೆ ಮಾತನಾಡುತ್ತನೆ. ಹೆಣ್ಣು, ಹೊನ್ನು, ಮಣ್ಣಿಗಾಗಿ ಕಲಹಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ಗ್ರೀಕ್ ಮತ್ತು ಟ್ರೋಜಾನ್ ಗಳ ಕಲಹಕ್ಕೆ ಕಾರಣ ಹೆಣ್ಣು ಎಂದರೆ ಮನಕೆ ಕಸಿವಿಸಿಯಾಗುತ್ತದೆ.
ಹೆಲೆನ್ ಕಟ್ಟಿಗೊಂಡ ಗಂಡನನ್ನು ಬಿಟ್ಟು ಪೆರಿಸ್ ನ ಜೊತೆಗೆ ಓಡಿ ಬಂದದ್ದು ತಪ್ಪು ತಪ್ಪು ಅಂತ ಅನಿಸ್ತಾ ಅನಿಸ್ತಾ… ಏನ್ ತಪ್ಪಿಲ್ಲ ಅನಿಸಿಬಿಡುತ್ತದೆ.
ರಾಜರ ಆಳ್ವಿಕೆಯಲ್ಲಿ ಹೆಣ್ಣಿಗೆ ಸ್ವಾತಂತ್ರ್ಯ ಇರಲಿಲ್ಲ. ಅಣ್ಣ(ಅಗಮೆಮ್ನನ್) ಹೆಲೆನ್ ಳನ್ನು ಗೆದ್ದು ತಮ್ಮ(ಮೆನೆಲೀಯಸ್)ನೊಂದಿಗೆ ವಿವಾಹ‌ ಮಾಡಿಸುತ್ತಾನೆ. ಆದರೆ ಮೆನೆಲೀಯಸ್ ಹೆಲೆನ್ ಳನ್ನು ಕೇವಲ ವೈಭೋಗದ ವಸ್ತು ಎಂದು ಸ್ವೀಕರಿಸುತ್ತಾನೆ. ಅಪ್ಸರೆಯಂತಹ ತನ್ನ ಸ್ವಂತ ಹೆಂಡತಿಯನ್ನು ಅರೆನಗ್ನ ಸ್ಥಿತಿಯಲ್ಲಿ ಪ್ರದರ್ಶನಕ್ಕಿಟ್ಟು ಇಂತಹ ಅಪ್ಸರೆ ನನ್ನ ಸ್ವತ್ತು. ನನ್ನಲ್ಲಿರುವ ವಜ್ರ, ವೈಢೂರ್ಯ, ಅಮೂಲ್ಯ ರತ್ನಗಳಲ್ಲಿ ಇದೂ ಒಂದು ಎಂದು ನೆರೆದ ಸರ್ವರಿಗೂ ತೋರಿ‌ಸುವ, ಹೀಗೆ ತೋರಿಸುವುದು ತನ್ನ ಪ್ರತಿಷ್ಠೆ ಎಂದುಕೊಂಡ ಗಂಡನನ್ನು ಹೇಗೆ ತಾನೆ ಹೆಣ್ಣು ಪ್ರೇಮಿಸಲು ಸಾಧ್ಯ, ಕೇವಲ ದೈಹಿಕ ವಾಂಛೆಗೆ ಬಳಸಿ ಕೀಲುಗೊಂಬೆಯಂತೆ ಹೆಂಡತಿಯನ್ನು ನಡೆಸಿಕೊಳ್ಳುವ ಗಂಡ ಕೇವಲ ಗಂಡಸಷ್ಟೇ‌ ಆಗುತ್ತಾನೆಯೇ ಹೊರತು ಹೆಂಡತಿಗೆ ಯಾವತ್ತಿಗೂ ಪುರುಷೋತ್ತಮ ಪತಿ ಎನಿಸಿಕೊಳ್ಳಲಾರ. ಇಂತಹ ವಿಷಯಗಳಿಂದಲೇ ಹೆಲೆನ್ ನ ಪುರುಷಾಂತರ ಕಾರ್ಯ ತಪ್ಪೇನಲ್ಲ ಅನಿಸಿಬಿಡುತ್ತದೆ.
ಮೋದಲೇ ದೇವತೆಗಳ ಸಂಕಲ್ಪವೂ ಇತ್ತಾದುದರಿಂದ ಪೆರಿಸ್ ನೊಂದಿಗೆ ಸ್ಪಾರ್ಟ್ ನಗರ ತೊರೆದು ಟ್ರಾಯ್ ಗೆ ಹೆಲೆನ್ ಬಂದುಬಿಡುತ್ತಾಳೆ. ಆ ನಂತರ ನಡೆಯುವುದೆಲ್ಲಾ ಒಳಸಂಚು, ಯುದ್ಧ, ಸಾವು, ನೋವುಗಳು. ತಮ್ಮಿಂದನೇ ಇದೆಲ್ಲಾ ಜರಗುತ್ತಿದೆ ಎನ್ನುವ ನೋವು ಪೆರಿಸ್, ಹೆಲೆನ್ ದಂಪತಿಗಳಿಗಿದ್ದರೂ ದಿನದಿಂದ ದಿನಕ್ಕೆ ಯುದ್ಧ ತಪ್ಪಿಸಲು ಅಸಾಧ್ಯವಾಗುವ ಸ್ಥಿತಿ ಉಂಟಾದುದನ್ನು ಕಂಡು ಮರಗುತ್ತಾರೆ.
ಘನಘೋರ ಯುದ್ಧದಲ್ಲಿ ಲೆಕ್ಕವಿಲ್ಲದಷ್ಟು ಸಾವುಗಳಾಗುತ್ತವೆ. ದೇವತೆಗಳೂ ಕೂಡ ತಮ್ಮ ತಮ್ಮ ಭಕ್ತರ ಪರವಾಗಿ ನಿಂತು ಕಾದಾಡುತ್ತಾರೆ. ಈ ಕಾದಾಟದಲ್ಲಿ ಓದುಗನನ್ನು ಕಾಡುವುದು, ಹೆಕ್ಟರ್, ಅಖಿಲೀಸ್, ಪೆಟ್ರೋಕ್ಲಸ್ ಎಂಬ ಮಹಾವೀರರು. ಕೃತಿಕಾರರಾದ ಸಹೋದರಿ ಗಾಯತ್ರಿ ರಾಜ್ ಅವರು ಕಣ್ಣಿಗೆ ಕಟ್ಟುವಂತೆ ಯುದ್ಧದ ಚಿತ್ರಣವನ್ನು ನಿರೂಪಿಸಿದ್ದಾರೆ. ಓದುತ್ತಾ ಹೋದಂತೆ ಕಣ್ಣಮುಂದೆ ಚಿತ್ರಗಳಾಗಿ ಪಾತ್ರಗಳು ಹರಿದಾಡುತ್ತವೆ.
ಒಂದೇ ಹೊತ್ತಿನಲ್ಲಿ ಓದಿಸಿಕೊಂಡು ಹೋಗುವ ಈ ಹೊತ್ತಿಗೆ ಕಣ್ಣು ಮಿಟುಕಿಸಲೂ ಬಿಡುವುದಿಲ್ಲ. ಪುಸ್ತಕವನ್ನು ಸಂಪೂರ್ಣವಾಗಿ ಓದಿ ಮುಗಿಸಿದರೂ ಮಸ್ತಕದಲ್ಲಿ ಸೃಷ್ಟಿಯಾದ ಭಾವತರಂಗಗಳು ನಮ್ಮನ್ನು ಕೃತಿಯಿಂದ ಹೊರಬರಲು ಬಿಡುವುದಿಲ್ಲ.
ಮತ್ತೆ ಪ್ರಯಾಮ್, ಹೆಕೆಬೆ, ಕಸಾಂಡ್ರ, ಆಂಡ್ರೋಮುಖಿ, ಪ್ರಯಾಮ್ ರಾಜನ ಖಾಸಾ ಭಂಟ ಅಜಿಲೇಯಸ್, ಒಡೆಸಿಸ್, ಸಿನೋನ್, ಎಲ್ಲರೂ ತಮ್ಮ ತಮ್ಮ ಪಾತ್ರಗಳಿಂದ ಓದುಗನನ್ನು ಆವರಿ‌ಸಿಕೊಳ್ಳುತ್ತಾರೆ.

ಅಖಿಲೀಸ್ ನ ಜನ್ಮ ರಹಸ್ಯ ಮತ್ತು ತಾಯಿ ಮಾಡಿದ ಒಂದು ತಪ್ಪಿನಿಂದ ಅಮರತ್ವದಿಂದ ವಂಚಿತನಾದದ್ದು,
ಅಗೆಮೆಮ್ನನ್ ನ ಕಚ್ಚೆ ಹರುಕ ಬುದ್ಧಿ ಮತ್ತು ಇವನ ವಶದಲ್ಲಿದ್ದ ಅಪೋಲೋ ದೇವತೆಯ ಪೂಜಾರಿ ಖ್ರೈಸಿಸ್ ನ ಮಗಳು ಖ್ರೈಸೀಯಿಸಳನ್ನು ಬಂಧನದಲ್ಲಿರಿಸಿಕೊಂಡದ್ದು, ಅಪೋಲೋ ದೇವತೆಗೆ ಮಾಡಿದ ಅವಮಾನ, ಇದರಿಂದಾಗಿ ಬಂದ ಪ್ಲೇಗ್ ರೋಗ ಎಲ್ಲವನ್ನೂ ಕೃತಿಕಾರರು ಬಹಳ‌ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ.
ಈ ಯುದ್ಧದ ಕಥೆ‌ ಮಹಾಭಾರತದಂತೆಯೇ ಇದೆ ಎಂಬ ಕೃತಿಕಾರರ ಮಾತು ನಿಜ ಎಂದು ಕೃತಿಯ ಮುಕ್ತಾಯದಲ್ಲಿ ನಮಗೂ ಖಂಡಿತ ಅನಿಸುತ್ತದೆ.
ಇದರಲ್ಲಿ ಯುದ್ಧದ ಸಂದರ್ಭಗಳು ಎಷ್ಟು ರೋಚಕ ಅನಿಸುತ್ತವೆಯೋ, ಹೆಲೆನ್ ಳ ಸೌಂದರ್ಯದ ವರ್ಣನೆ, ಹೆಲೆನ್ ಮತ್ತೆ ಪೆರಿಸ್ ನ ಪ್ರೇಮ, ಪ್ರಣಯದ ವಿವರಣೆ ಕೂಡ ಅಷ್ಟೇ ಆಪ್ತವಾಗುತ್ತದೆ, ಜೊತೆಗೆ ಓದುಗನನ್ನು ಉನ್ಮಾದಗೊಳಿಸುತ್ತದೆ.
ಹತ್ತು ವರ್ಷಗಳ ಯುದ್ಧದ ನಂತರವೂ ಎಷ್ಟೇ ಸೈನ್ಯ ಬಲವಿದ್ದರೂ ಸೋಲಿಸಲಾಗದ, ಸೋಲಿಸೋದಿರಲಿ ಕೋಟೆಯೊಳಗೂ ಪಾದ ಇಡಲು ಸಾಧ್ಯವಾಗದೇ ಇದ್ದದ್ದು, ಕೊನೆಗೆ ಬೇಧಿಸಲಾಗದ ಟ್ರಾಯ್ನ ಭದ್ರ ಕೋಟೆಯೊಳಗೆ ಹೇಗೆ ಗ್ರೀಕರು ಪ್ರವೇಶಿಸಿದರು ಎಂಬುದೇ ಕುತೂಹಲದ ಅಂಶ. ಶಕ್ತಿಯಿಂದ ಆಗದ್ದು ಯುಕ್ತಿಯಿಂದ ಮಾಡಬೇಕೆನ್ನುವ ಯುದ್ಧ ತಂತ್ರ ಸಫಲತೆ ನೀಡಿತ್ತು. ಏನದು ಯುದ್ಧ ತಂತ್ರ, ಅದೇ “ಮರದ ಕುದುರೆ”. ಓದಿ ಟ್ರಾಯ್…
ಇನ್ನೂ ಈ ಕೃತಿಯ ಕುರಿತಾಗಿ ಬರೆಯುವ ಹವಣಿಕೆ ನನ್ನಲ್ಲಿದೆ. ಆದರೆ ಕೈಯಲ್ಲಿರುವ ಚಿಪ್ಸ್ ಅನ್ನು ಇಡಿಯಾಗಿ ತಿಂದರೆ ಎಲ್ಲಿ ಖಾಲಿ ಆಗುತ್ತದೋ, ಅದರ ರುಚಿಯಿಂದ ಎಲ್ಲಿ ವಂಚಿತರಾಗುತ್ತೇವೆಯೋ ಎಂದು ಹೇಗೆ ಚೂರು ಚೂರೇ ಮುರಿದು ತಿನ್ನುತ್ತ ಅದು ಮತ್ತು ಅದರ ಸವಿ ಖಾಲಿಯಾಗದಂತೆ ನೋಡಿಕೊಳ್ಳುತ್ತೇವೆಯೋ, ತಿಂದ ಮೇಲೂ ಕೈ ತೊಳೆಯದೆ ಬೆರಳುಗಳನ್ನು ರುಚಿಸುತ್ತೇವೆಯೋ, ಅದರ ನಂತರವೂ
ಬಾಯಿ ತೊಳೆದರೆ ಹೇಗೆ ರುಚಿ ಹೋಗಿ ಬಿಡುತ್ತದೆ ಎಂದು ಚಿಂತಿಸುತ್ತೇವೆಯೋ ಅದರಂತೆ ಈ “ಟ್ರಾಯ್” ಕುರಿತಾಗಿ ಎದ್ದ ಅನುರಾಗ ಮತ್ತು ರೋಚಕತೆಯನ್ನು ಅಕ್ಷರ ರೂಪಕ್ಕಿಳಿಸಿಬಿಟ್ಟರೆ ಎಲ್ಲಿ ಹೃದಯ ಬರಿದಾಗುತ್ತದೆಯೋ ಎಂದು ಹೆದರಿ, ಇನ್ನೂ ಕೆಲ ಸಮಯ, ಕೆಲ ದಿನಗಳು ಈ ಓದಿನ ಸ್ವಾದಿಷ್ಟತೆಯನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಬರಹಕ್ಕೆ ಇಲ್ಲಿ ಅಲ್ಪವಿರಾಮ ನೀಡುತ್ತಿದ್ದೇನೆ.
ನೀವೂ ಈ‌ ಅನುರಾಗ, ಭಯಾನಕ, ರೋಮಾಂಚನವನ್ನು ಅನುಭವಿಸಬೇಕೆಂದರೆ ಖಂಡಿತ ಈ ಕೃತಿಯನ್ನು ಓದಲೇ ಬೇಕು. ಓದುತ್ತೀರಿ ಎಂದು ಭಾವಿಸುತ್ತೇನೆ.

“ಧನ್ಯವಾದಗಳು”


ವರದೇಂದ್ರ ಕೆ ಮಸ್ಕಿ
—- 9945253030
ಕೃತಿಗಳಿಗಾಗಿ ಸಂಪರ್ಕಿಸಿ
ಗಾಯತ್ರಿ ರಾಜ್
—- 9148568846
ಮತ್ತು
ವೀರಲೋಕ (ಇದು ಪುಸ್ತಕ ಪ್ರಪಂಚ)
—- 7022122121

Don`t copy text!