ವಚನಕಾರುಣ್ಯ ನಿವಾಸದ ವಾಸ
ನಮ್ಮ ದಾಖಲೆ ನಾವೇ ಮುರಿಯಬೇಕು
ನಾವು ಹೀಗೆ ಅಂದುಕೊಂಡಾಗ ಮಾತ್ರ ಯಶಸ್ಸು ಸಾಧ್ಯ. ಏನಂತ ? ನಾವೇ ನಿರ್ಮಿಸಿದ ದಾಖಲೆಗಳ ಮುರಿಯುತ್ತ ಸಾಗಬೇಕು. ಹತ್ತು ಹಲವು ವಿಷಯಗಳಲ್ಲಿ ಹೀಗೆ ಪುಟ್ಟ ಪುಟ್ಟ ಹೆಜ್ಜೆ ಇಡುವುದೇ ಬದುಕು.
ಈಗ ಎರಡು ವರ್ಷಗಳ ಹಿಂದೆ ಬಸವಾದಿ ಶರಣರ ತತ್ವಗಳನ್ನು ಆಧರಿಸಿ discourse ಅರ್ಥಾತ್ ಪ್ರವಚನ ಆರಂಭಿಸುವ ಮನಸಾಗಿ ಅನೇಕರಿಗೆ ಅಭಿಪ್ರಾಯ ರವಾನಿಸಿ, ಯಾವುದೇ ಪ್ರತಿಕ್ರಿಯೆ ಬರದ ಕಾರಣ ನಾನೇ ಅಂತಹ ವಾತಾವರಣ ಸೃಷ್ಟಿ ಮಾಡಿಕೊಂಡು, ಹತ್ತು ದಿನಗಳ ಕಾಲ ಬೀದರಿನ ವಚನ ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ‘ನೆಮ್ಮದಿಯ ಬದುಕಿಗಾಗಿ ವಚನಾನುಸಂಧಾನ’ ಪೂರೈಸಿದ್ದು ಈಗ ಇತಿಹಾಸ.
ಈಗ ಸೇವಾ ನಿವೃತ್ತಿಯ ನಂತರ 23 ದಿನಗಳ ಕಾಲ ಬೀದರಿನ ಬಸವ ಕೇಂದ್ರದ ಶ್ರಾವಣ ಮಾಸದ ‘ಜೀವನ ದರ್ಶನ’ ಪ್ರವಚನದ ಜವಾಬ್ದಾರಿ ಒಪ್ಪಿಕೊಳ್ಳಲು ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ ಅವರ ಪ್ರೀತಿ ವಾತ್ಸಲ್ಯವೇ ಮೂಲ ಕಾರಣ.
ಈ ಸಂದರ್ಭದಲ್ಲಿ ಅನೇಕ ವಿಷಯಗಳು ಚರ್ಚೆಗೆ ಬಂದಾಗ ಮುಖ್ಯ ಸಮಸ್ಯೆ ಎದುರಾಗಿದ್ದು, ಅಷ್ಟು ಕಾಲ ಎಲ್ಲಿ ಉಳಿಯಬಹುದು ಎಂಬುದು!
ಮಠಗಳಲ್ಲಿ, ಯಾರದಾದರು ಮನೆಯಲ್ಲಿ ಉಳಿಯಲು ನಾನು ಸನ್ಯಾಸಿ ಅಥವಾ ಬ್ರಹ್ಮಚಾರಿಯೂ ಅಲ್ಲ. ಪ್ರವಚನದ ಸಂದರ್ಭದಲ್ಲಿ ಲಾಜಿಂಗ್ ವಸತಿ ಸೂಕ್ತವಲ್ಲ.
ಹಾಗಿದ್ದರೆ? ಬೀದರ ವಚನ ಸಮೂಹಗಳ ಒಡೆಯ ಅಲ್ಲಮಪ್ರಭು ನಾವದಗೆರೆ ಹಾಗೂ ಲಿಂಗಾರತಿ ದಂಪತಿಗಳು ಅಪ್ಪಟ ಶರಣ ಜೀವಿಗಳು. ಅವರ ಒಡನಾಟದ ಮಹತ್ವ ಅರಿತಿದ್ದ ಎಲ್ಲರೂ ಅವರ ನೂತನ ಮಹಾಮನೆ ‘ವಚನ ಕಾರುಣ್ಯ’ದಲ್ಲಿ ವಾಸಿಸಲು ಸೂಚಿಸಿದಾಗ ಖುಷಿಯಿಂದ ಒಪ್ಪಿಕೊಂಡೆ. ಆದರೆ… ಒಂದೆರಡು ದಿನವಾದರೆ ಓಕೆ… ಸರಿ ಸುಮಾರು ಒಂದು ತಿಂಗಳು?! ಆತಂಕ ಶುರುವಾಯಿತು.
ಆದರೆ ನಾನು ಆ ಮನೆಯಲ್ಲಿ ನೆಲೆಗೊಂಡ ಪ್ರತಿಕ್ಷಣವೂ ಆಹ್ಲಾದಕರ. ಪ್ರೀತಿ, ವಿಶ್ವಾಸ, ಶರಣರ ಮೌಲ್ಯಗಳ ದಿವ್ಯಾನುಭವ. ಶರಣೆ ಲಿಂಗಾರತಿ, ಮಕ್ಕಳಾದ ಚಿನ್ಮಯಿ, ಬಸವಯೋಗಿ ಹಾಗೂ ಚಿನ್ನಿಧಿ ಅವರೊಂದಿಗೆ ಅಪ್ಪಟ ಮಗುವಿನಂತೆ ಆಡಿಕೊಂಡು ಕಾಲ ಕಳೆದೆ.
ಎರಡು ಹೊತ್ತು ಪ್ರಶಾಂತ ಧ್ಯಾನ ಮಾಡಲು ನೆಲಮಾಳಿಗೆಯ ಧ್ಯಾನ ಮಂದಿರ ನನ್ನ ನೆಮ್ಮದಿಯ ಕೇಂದ್ರ. ಅಲ್ಲಿ ಹೊತ್ತು ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಪ್ರವಚನ ತಯಾರಿಗೆ ನೂರಾರು ಉಪಯುಕ್ತ ಗ್ರಂಥಗಳನ್ನು ಹೊಂದಿದ ಓದುವ ಮನೆ, ನನ್ನ ಜೀವನಶೈಲಿಯನ್ನು ಬದಲಿಸಿದವು.
ಮಾತುಕತೆಗೆ ಮೀಸಲಾದ ವಚನಗಳು ನಿಜಾಚರಣೆಯಲ್ಲಿ ರೂಪಿತವಾಗಬೇಕು, ಅಂದಾಗ ಮಾತ್ರ ನಮ್ಮ ಮನೆಗಳು ಮಹಾಮನೆಗಳಾಗುತ್ತವೆ. ಇಲ್ಲದೆ ಹೋದರೆ ದಾಸೋಹ, ಮಹಾಮನೆ, ಶರಣ ದಾಂಪತ್ಯ ಎಂಬ ಶಬ್ದ ಸೂತಕದಲ್ಲಿ ನಾವು ಕಳೆದು ಹೋಗುತ್ತೇವೆ.
ಒಮ್ಮೊಮ್ಮೆ ತಡರಾತ್ರಿಯ ಚರ್ಚೆಗಳಲ್ಲಿ ಭಾಗವಹಿಸುವಾಗ ಲಿಂಗಾರತಿ- ಅಲ್ಲಮಪ್ರಭು ದಂಪತಿಗಳ ಶರಣತ್ವದ ಹಿರಿಮೆಯನ್ನು ಸೂಕ್ಷ್ಮವಾಗಿ ಗಮನಿಸಿ, ಕೆಣಕುತ್ತ ಕಾಲ ಹಾಕಿದ್ದು ಇದೆ. ರುಚಿಯಾದ ದೇಸಿ, ಸಾತ್ವಿಕ ಊಟ, ಓದಲು ಪುಸ್ತಕಗಳು, ಅದ್ಭುತ ಧ್ಯಾನ ಮಂದಿರ ಹಾಗೂ ನಿತ್ಯ ಶರಣು ಶರಣಾರ್ಥಿ ಎಂದು ಕೈ ಮುಗಿಯುವ ಜಾಣ ಮಕ್ಕಳ ಸಂಗದಲ್ಲಿ ಹೊತ್ತು ಹೋದದ್ದು ಗೊತ್ತಾಗಲೇ ಇಲ್ಲ.
ಊರೂರು ಸುತ್ತುವುದು, ಜನಗಳ ಭಾವನೆ ಅರಿಯುವುದು, ಎಲ್ಲರನ್ನು ಪ್ರೀತಿ, ಗೌರವದಿಂದ ಕಾಣುವುದು ನಿಜವಾದ ಶಿವಯೋಗ.
ಕಾಯಕ-ದಾಸೋಹ-ಅನುಭಾವಗಳ ತವರು ‘ವಚನ ಕಾರುಣ್ಯ’ದಿಂದ ಹೊರಡುವ ಮೊದಲು ಧ್ಯಾನ ಮಂದಿರದಲ್ಲಿ ನನ್ನ ಇಡೀ ವಾಸ್ತವ್ಯದ ನೆನಪುಗಳಿಂದ ಕೆಲ ಕ್ಷಣ ಭಾವುಕನಾದೆ. ವಿಪಶ್ಯನ ಧ್ಯಾನದ ಅರಿವಿನ ಅಂತರಂಗ ಎಚ್ಚರಿಸಿದಾಗ ಭಾವನೆಗಳ ದೂರ ಸರಿಸಿ, ಅನಿತ್ಯ, ಅನಿತ್ಯ ಎಂದು ನನ್ನ ನಾ ರಮಿಸಿಕೊಂಡೆ. ‘ನಗಬೇಕು, ನಸು ನಗಬೇಕು ನೋವ ನುಂಗಿ’ ಎಂಬ ಭಾವದೊಂದಿಗೆ ಹೊರಟಾಗ ನಿಶಬ್ದದೊಳಗಣ ಶಬ್ದದ ನಿನಾದವ ಆಲಿಸುತ್ತ ಹೊರಟು ಬಂದೆ…
ಕೊನೆಯಿರದ ಪಯಣವ ಅರಸುತ್ತ ಸಾಗಿದೆ.
–ಸಿದ್ದು ಯಾಪಲಪರವಿ