ತನ್ನ ಭವಿಷ್ಯವ ತಾನೇ ಬರೆದ ಶೀತಲ್ ದೇವಿ
ವಿಧಿ ಲಿಖಿತವ ನೆನೆದು ನೋಯದಿರು, ಬೇಯದಿರು, ಜೀವನದಲ್ಲಿ ಎಂದೂ ದುಃಖಿಯಾಗದಿರು… ನಿನ್ನ ಅಂಗೈ ರೇಖೆಗಳನೇಕೆ ನಂಬುವೆ, ಕೈಗಳೇ ಇಲ್ಲದ ಹೆಳವನಿಗೂ ಕೂಡ ಭವಿಷ್ಯವಿದೆ…. ಎಂಬ ಸಾಲುಗಳನ್ನು ಎಲ್ಲೋ ಓದಿದ ನೆನಪು
2024 ರಲ್ಲಿ ಪ್ಯಾರಿಸ್ ನಲ್ಲಿ ನಡೆದ ಪ್ಯಾರಾಲಂಪಿಕ್ ನಲ್ಲಿ ಕೈಗಳೇ ಇಲ್ಲದ ಶೀತಲ್ ದೇವಿ ಎಂಬ ಯುವತಿ ತನ್ನ ಕಾಲುಗಳನ್ನು ಬಳಸಿ ಬಿಲ್ಗಾರಿಕೆಯಲ್ಲಿ ಪದಕ ವಿಜೇತಳಾಗಿರುವುದನ್ನು ಕಂಡ ಭಾವುಕ ಕ್ಷಣಗಳಲ್ಲಿ ನೆನಪಾದ ಸಾಲುಗಳು ಇವು.
ಅಷ್ಟಕ್ಕೂ ಆಕೆಗೆ ಇರುವ ಗರಿಮೆಗಳು ಏನು ಗೊತ್ತೆ?
* ಕೇವಲ 17 ವರ್ಷದ ಅತ್ಯಂತ ಕಿರಿಯ ವಯಸ್ಸಿನ ಜಗತ್ತಿನ ಶ್ರೇಷ್ಠ ಬಿಲ್ಗಾರಿಕೆಯ ಪಟು.
* ವಿಶ್ವ ದಾಖಲೆಯನ್ನು ಹೊಂದಿದಾಕೆ
ಕೈಗಳೇ ಇಲ್ಲದ ಮೊದಲ ಬಿಲ್ಗಾರಳು
* ಪ್ಯಾರಿಸ್ ನಲ್ಲಿ ನಡೆದ ಪ್ಯಾರಾ ಒಲಿಂಪಿಕ್ 2024ರ ಡಬಲ್ಸ್ ಪಂದ್ಯದಲ್ಲಿ ಕಂಚಿನ ಪದಕ ಗಳಿಸಿದ ಆರ್ಚರ್
*2022ರ ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕವನ್ನು ಪಡೆದ ಈಕೆ ಅರ್ಜುನ ಪ್ರಶಸ್ತಿ ಪುರಸ್ಕೃತಳು.
ಭಾರತ ದೇಶದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಕಿಸ್ತವಾರ ಜಿಲ್ಲೆಯ ಲೊಯ್ಧರ್ ಎಂಬ ಊರಿನಲ್ಲಿ ಜನವರಿ 10 -2007 ರಲ್ಲಿ ಶೀತಲ್ ದೇವಿಯ ಜನನವಾಯಿತು. ಹುಟ್ಟುವಾಗಲೇ ಫೋಕೋಮೇಲಿಯ ಎಂಬ ಅತ್ಯಂತ ವಿರಳವಾದ ವೈದ್ಯಕೀಯ ತೊಂದರೆಯಿಂದ ಬಳಲುತ್ತಿದ್ದ ಶೀತಲದೇವಿ ಎರಡು ಕೈಗಳಿಲ್ಲದ ಸ್ಥಿತಿಯಲ್ಲಿಯೇ ಜನಿಸಿದಳು.
ಎಲ್ಲ ಸಾಮಾನ್ಯ ಮಕ್ಕಳಂತೆ ಆಕೆಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗದೇ ಹೋದರೂ ಮನೆಯವರ ಸಹಕಾರ ಮತ್ತು ಬೆಂಬಲ ಆಕೆಗಿತ್ತು.ಸಾಮಾನ್ಯವಾಗಿ ಕೈಗಳಿಂದ ಮಾಡುವ ಎಲ್ಲಾ ಕೆಲಸಗಳಿಗೂ ತನ್ನ ಕಾಲುಗಳನ್ನೇ ಆಕೆ ಅವಲಂಬಿಸಿದ್ದಳು.
2019ರಲ್ಲಿ ಭಾರತೀಯ ಸೇನೆಯವರು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಆಕೆ ಭಾರತೀಯ ಸೇನೆಯ ರೈಫಲ್ಸ್ ಯೂನಿಟ್ ನವರ ಸಹಕಾರದಿಂದ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಪಡೆದಳು. ಶೀತಲ್ ಳ ಆಸಕ್ತಿ, ಶ್ರದ್ಧೆ ಮತ್ತು ಆತ್ಮವಿಶ್ವಾಸವನ್ನು ಕಂಡು
ಆಕೆಯ ತರಬೇತುದಾರರಾದ ಅಭಿಲಾಷ ಚೌದ್ರಿ ಮತ್ತು ಕುಲದೀಪ್ ವಾದ್ವಾನ್ ಪ್ರಾರಂಭದಲ್ಲಿ ಆಕೆಗೆ ಕೃತಕ ಅಂಗಗಳನ್ನು ಜೋಡಿಸಿ ಆಕೆಗೆ ತರಬೇತಿ ನೀಡಲು ಪ್ರಯತ್ನಿಸಿದರು. ಆದರೆ ಆಕೆಯ ಕಾಲುಗಳ ಬಲವನ್ನು ಗಮನಿಸಿದ ವೈದ್ಯರು ಆಕೆ ಕಾಲುಗಳನ್ನು ಬಳಸಿಯೇ ಪರ್ವತಗಳನ್ನು ಏರಲು ಪ್ರೋತ್ಸಾಹ ನೀಡಲು ಹೇಳಿದರು.
ಇದುವರೆಗೂ ಕೈಗಳಿಲ್ಲದ ವ್ಯಕ್ತಿಗೆ ಬಿಲ್ಗಾರಿಕೆಯನ್ನು ಹೇಳಿಕೊಟ್ಟಿರದ ಆಕೆಯ ತರಬೇತುದಾರರು ಮ್ಯಾಟ್ ಸ್ಟಡ್ಜ್ ಮ್ಯಾನ್ ಎಂಬ ವ್ಯಕ್ತಿ ಕಾಲುಗಳಿಂದಲೇ ಬಿಲ್ಗಾರಿಕೆಯನ್ನು ಮಾಡುತ್ತಿರುವುದನ್ನು ಅರಿತು ಅಂತೆಯೇ ಆಕೆಯ ತರಬೇತಿಯನ್ನು ಪ್ರಾರಂಭಿಸಿದರು. ಮುಂದಿನ 11 ತಿಂಗಳ ಸತತ ತರಬೇತಿಯ ನಂತರ ಆಕೆ ಮೊದಲ ಬಾರಿಗೆ 2022 ರಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ನ ಮಿಶ್ರ ಡಬಲ್ಸ್ ಬಿಲ್ಗಾರಿಕೆ ಆಟದಲ್ಲಿ ಮೊದಲ ಚಿನ್ನದ ಪದಕವನ್ನು, ಮಹಿಳೆಯರ ಬಿಲ್ಗಾರಿಕೆಯಲ್ಲಿ ಮತ್ತೊಂದು ಚಿನ್ನದ ಪದಕವನ್ನು ಗಳಿಸಿದಳು. ಅದೇ ಪ್ಯಾರ ಗೇಮ್ಸ್ ನಲ್ಲಿ ಬೆಳ್ಳಿಯ ಪದಕವನ್ನು ಮಹಿಳೆಯರ ಮಿಶ್ರ ಡಬಲ್ಸ್ ನಲ್ಲಿ ಗಳಿಸಿದ ಆಕೆ ವಿಶ್ವದ ಅಂಗವಿಕಲ ಬಿಲ್ಗಾರಿಕೆಯ ಪಟ್ಟಿಯಲ್ಲಿ ಮೇಲ್ದರ್ಜೆಯ ಸ್ಥಾನವನ್ನು ಗಳಿಸಿದಳು.
ಏಷಿಯನ್ ಪ್ಯಾರಾಲಂಪಿಕ್ ಕಮಿಟಿಯು ಆಕೆಗೆ 2023ರಲ್ಲಿ ವರ್ಷದ ಅತ್ಯುತ್ತಮ ಯುವ ಆಟಗಾರ್ತಿ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ತನ್ನ ಈ ಸಾಧನೆಗೆ 2023ರ ಸಾಲಿನ ಅರ್ಜುನ ಪ್ರಶಸ್ತಿಯನ್ನು 2024 ಜನವರಿ 9ರಂದು ಸ್ವೀಕರಿಸಿದಳು. ಆ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಆಕೆ ಚುನಾವಣಾ ಯುತ ಐಕಾನ್ ಆಗಿ ಎಲ್ಲರಿಗೂ ಮತ ಹಾಕಲು ಕೋರಿಕೊಂಡಳು.
2024ರ ಪ್ಯಾರಿಸ್ ಪ್ಯಾರಾ ಒಲಂಪಿಕ್ ನಲ್ಲಿ ಅತ್ಯಂತ ಕಿರಿಯ ವಯಸ್ಸಿನ ಆಟಗಾರ್ತಿಯಾಗಿ ದಾಖಲಾದ ಶೀತಲ್ ದೇವಿ ಈ ಹಿಂದೆ ದಾಖಲಾದ 698 ಪಾಯಿಂಟ್ ಗಳನ್ನು ಹಿಂದಿಕ್ಕಿ 703 ಪಾಯಿಂಟ್‌ಗಳನ್ನು ಪಡೆದು1/16 ರ ಅರ್ಹತಾ ಸುತ್ತಿಗೆ ಪ್ರವೇಶ ಪಡೆದಳು. ಮುಂದುವರೆದು 1/8 ರಲ್ಲಿ ಕೇವಲ ಒಂದು ಅಂಕದಿಂದ ಹಿಂದೆ ಸರಿದ ಆಕೆ ಮಿಕ್ಸ್ಡ್ ಟೀಮ್ ಕಾಂಪೌಂಡ್ ಓಪನ್ ಕೆಟಗರಿಯಲ್ಲಿ ರಾಕೇಶ ಕುಮಾರ್ ಅವರೊಂದಿಗೆ ಭಾಗವಹಿಸಿ ಕಂಚಿನ ಪದಕವನ್ನು ಪಡೆದಳು.
ತನ್ನ ಸಾಧನೆಗೆ ತನ್ನ ಕೋಚ್ ಅಭಿಲಾಷ ಚೌದ್ರಿ ಮತ್ತು ಕುಲದೀಪ್ ವಾದ್ವಾನ್ ಅವರ ನಿರಂತರ ತರಬೇತಿ ಮತ್ತು ತನ್ನ ಕುಟುಂಬದ ಪ್ರೋತ್ಸಾಹ ವೇ ಕಾರಣ ಎಂದು ಹೇಳುವ ಶೀತಲ್ ದೇವಿಗೆ ಮುಖ್ಯವಾಗಿ ತನ್ನ ತಾಯಿ ಸದಾ ತನ್ನ ಜೊತೆಗಿದ್ದು ಬೆಂಬಲ ನೀಡುತ್ತಿರುವುದು ಅತಿ ದೊಡ್ಡ ಬಲವಾಗಿದೆ.
ಕೇವಲ 17ರ ಹರೆಯದ ಶೀತಲ್ ದೇವಿ ಭವಿಷ್ಯದಲ್ಲಿ ಪ್ಯಾರಾ ಒಲಿಂಪಿಕ್ ನ ಆರ್ಚರಿ ವಿಭಾಗದಲ್ಲಿ ಹಲವಾರು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಳ್ಳಲಿ, ಆ ಮೂಲಕ ಭಾರತದ ಕೀರ್ತಿಯನ್ನು ಜಗತ್ತಿನೆಲ್ಲೆಡೆ ಹರಡಲಿ. ಭಾರತದ ಯುವ ಸಮುದಾಯ ಆಕೆಯ ಈ ಸಾಧನೆಯಿಂದ ಸ್ಫೂರ್ತಿಯನ್ನು ಪಡೆದು, ಸಣ್ಣಪುಟ್ಟ ತೊಂದರೆಗಳಿಗೆ ಅಂಜದೆ ಅಳುಕದೆ ಮಹತ್ತರವಾದ ಸಾಧನೆಗೈಯಲಿ ಎಂದು ಹಾರೈಸುವ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್