ಅಕ್ಕಮಹಾದೇವಿಯವರ ವಚನ 5
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಭಾವ ಶುಧ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವ ನಿಂಬುಗೊಂಡೆ
ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ
ನ-ಅಕ್ಕ ಮಹಾದೇವಿ
12ನೇ ಶತಮಾನದ ಅಕ್ಕಮಹಾದೇವಿಯು ನನ್ನ ಚೆನ್ನಮಲ್ಲಿಕಾರ್ಜುನನು ಎಂಥಹವರಿಗೆ ಒಲಿಯುತ್ತಾನೆ ಎಂಬುವುದನ್ನು ಬಹಳಷ್ಟು ಅರ್ಥ ಪೂರ್ಣವಾಗಿ ಈ ಒಂದು ವಚನದಲ್ಲಿ ಉಲ್ಲೇಖಿಸಿದ್ದಾಳೆ ಅಕ್ಕ.
ವಲ್ಲದ ಗಂಡನಾದ ಕೌಶಿಕನನ್ನು ತೊರೆದು ಕಲ್ಯಾಣಕ್ಕೆ ಬಂದ ಅಕ್ಕಳ ಭಾವ ತುಂಬ ಆ ಚೆನ್ನಮಲ್ಲಿಕಾರ್ಜುನನೇ ತುಂಬಿಕೊಂಡಿರುತ್ತಾನೆ .ಹಾಗಾದರೆ ಆ ನನ್ನ ಚೆನ್ನಮಲ್ಲಿಕಾರ್ಜುನ ಎಂಥಹ ಮನದವರಿಗೆ ಒಲಿಯಲಾರ ಎಂಥಹ ಮನದವರಿಗೆ ಒಲಿಯುತ್ತಾನೆ ಎಂಬುವುದನ್ನು ಈ ರೀತಿಯಾಗಿ ಅಕ್ಕಳು ಹೇಳುತ್ತಾರೆ.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಶರಣರು ಕಾಯಕ ಜೀವಿಗಳು. ದುಡಿದು ತಿನ್ನುವ, ತಾವು ಮಾಡುವ ಶ್ರದ್ಧಾ ಭಕ್ತಿಯ ಕಾಯಕದಲ್ಲಿಯೇ ಕೈಲಾಸವನ್ನು ಕಂಡವರು .
ಶರಣರಾದವರು ಮೈ ಮುರಿದು ಕೆಲಸ ಮಾಡಬೇಕು .ಅದು ಯಾವುದೇ ಕೆಲಸ ಇರಲಿ ಅದೇ ಕೆಲಸದಲ್ಲಿಯೇ ಶ್ರದ್ಧಾ ಭಕ್ತಿಯಿಂದ ದುಡಿಯಬೇಕು.ಸೋಂಬೇರಿ ಯಾಗದೇ ಕಾಯಕ ತತ್ವವನ್ನು ಮೈ ಗೂಡಿಸಿಕೊಳ್ಳಬೇಕು .
ಯಾರು ಮೈ ಮುರಿದು ಕಾಯಕ ಮಾಡುವುದಿಲ್ಲವೋ ,ಅಂಥವರಿಗೆ ನನ್ನ ಚೆನ್ನಮಲ್ಲಿಕಾರ್ಜುನನು ಒಲಿಯಲಾರ .
ಅವರು ಮಾಡುವ ಅಭಿಷೇಕ, ಮಜ್ಜನವನ್ನು ಸ್ವೀಕರಿಸಲಾರ.
ಶರಣರು ಪೂಜೆ ಪುನಸ್ಕಾರ, ಗುಡಿ ಗುಂಡಾರ ಈ ಪೂಜೆಯನ್ನು ನಂಬದವರು. ಆದರೆ ಅಕ್ಕನವರ ಭಾವ ದ ಪೂಜೆಯೇ ಬೇರೆಯಾಗಿದೆ.
ಅಕ್ಕನವರಿಗೆ ತನ್ನ ಗಂಡ ಚೆನ್ನಮಲ್ಲಿಕಾರ್ಜುನನೇ ಗುಡಿ, ಗುಂಡಾರ, ದೇವಸ್ಥಾನ, ಮೂರುತಿ .ಇಂಥಹ ಮೂರ್ತಿಗೆ ಅಭಿಷೇಕ. ಅದು ಹಾಲು ,ನೀರು ಎಂಥಹದೇ ಇರಲಿ ಅಂಥಹ ಮಜ್ಜನವನ್ನು ಸ್ವೀಕರಿಸಲಾರ. ಎನ್ನುವ ಅಕ್ಕನವರ ಮನ ನಿಜಕ್ಕೂ ಅಚ್ಚರಿಯೇ ಸರಿ .
ಮನಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು
ಈ ಸಮಾಜದಲ್ಲಿರುವ ಜೀವಿಗಳಿಗೆ ಒದಗಿದ ಕಷ್ಟವನ್ನು ನೋಡಿ ನಮ್ಮ ಮನ ಕರಗಬೇಕು. ಇತರರಿಗೆ ಒದಗಿದ ತೊಂದರೆ ,ಕಷ್ಟ ,ನೋವು ಸಂಕಟ,ವ್ಯಥೆ ಇವೆಲ್ಲವುಗಳನ್ನು ನೋಡಿ ನಾವು ಮರುಗಬೇಕು .ಅಯ್ಯೋ ಪಾಪ ಎಂದು ಮನ ಕರಗಬೇಕು.
ಪಶುವಿನ ನಡತೆಯಂತೆ ಕ್ರೂರ ಮನೋಭಾವನೆಯನ್ನು ಹೊಂದದೇ ಮಾನವೀಯ ಮಿಡಿತ ಇರಬೇಕು. ಮಾನವೀಯ ತುಡಿತ ಇರಬೇಕು ,ಇದನ್ನೇ ಶರಣರು ಬಯಸಿದ್ದು ,
ಶರಣರಲ್ಲದವರ ಹಾದಿಯನ್ನು ನಾವು ಯಾವತ್ತೂ ತುಳಿಯಬಾರದು .
ಇತರರಿಗೆ ಒದಗಿದ ಸಂಕಟ ನನ್ನದೇ ಎಂದು ತಿಳಿದು ಮನದಲ್ಲಿ ಮರುಕ ಪಟ್ಟು ನಡೆಯುವವರಿಗೆ ಭಗವಂತ, ಆ ನನ್ನ ಚೆನ್ನಮಲ್ಲಿಕಾರ್ಜುನನು ಕಣ್ಣು ತೆರೆದು ಒಲಿದು .ಅವರು ಏರಿಸುವ ಹೂವುಗಳನ್ನು ನನ್ನ ಚೆನ್ನಮಲ್ಲಿಕಾರ್ಜುನನು ಸ್ವೀಕರಿಸುವನು .ಎಂದು ಅಕ್ಕನವರು ಹೇಳುತ್ತಾರೆ.
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು
ಸಮಾಜದಲ್ಲಿರುವ ಜನರ ಮೇಲೆ ಸ್ನೇಹ ಬಳಗದೊಂದಿಗೆ, ಬಂಧು-ಬಳಗದೊಂದಿಗೆ ನಾವು ಇಟ್ಟ ನಂಬಿಕೆ ,ಪ್ರೀತಿ ವಿಶ್ವಾಸ, ದಯೆ ,ಕರುಣೆ ಇವುಗಳನ್ನು ಉಳಿಸಿಕೊಂಡು ,ಬೆಳೆಸಿಕೊಂಡು ಹೋಗುವ ಗುಣ ಶರಣರದು .ಅಂತಹ ಪ್ರೀತಿಯನ್ನು ನಾನು ನನ್ನ ಚೆನ್ನಮಲ್ಲಿಕಾರ್ಜುನನ ಮೇಲೆ ಹೊಂದಿರುವೆ .ಆತ ನಂಬಿಕೆಗೆ ಯೋಗ್ಯರಲ್ಲದವರನ್ನು ನಂಬಲಾರ.
ನಂಬಿಕೆಗೆ ಯೋಗ್ಯರಲ್ಲದವರು ಒಳ್ಳೆಯ ನಡೆ ನುಡಿಯನ್ನು ಪಾಲಿಸಲಾರರು. ಅವರ ನಡೆ ಒಂದು ಪರಿ. ನುಡಿ ಒಂದು ಪರಿ .ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು ನಡೆಯುವವರಲ್ಲಿ ಮಾತ್ರ ನನ್ನ ಚೆನ್ನಮಲ್ಲಿಕಾರ್ಜುನನು ಇರುತ್ತಾನೆ .ಇಂಥಹ ನಡೆ ಮತ್ತು ನುಡಿಗಳನ್ನು ಮರೆತು ನಡೆಯುವವರಿಗೆ ಒಲಿಯಲಾರ.
ಅವರು ನಂಬಿಕೆಗೆ ಯೋಗ್ಯರಲ್ಲ. ಯೋಗ್ಯರಲ್ಲದವರ ಗಂಧಾಕ್ಷತೆಯನ್ನು ನನ್ನ ಚೆನ್ನಮಲ್ಲಿಕಾರ್ಜುನನು ಸ್ವೀಕರಿಸಲಾರ .ಎನ್ನುವ ಅರ್ಥವನ್ನು ಈ ಒಂದು ನುಡಿಯಲ್ಲಿ ನಾನು ಕಂಡುಕೊಂಡಿರುವೆ.
ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು
ಅರಿವೆ ಗುರು ,ಆಚಾರವೇ ಲಿಂಗ, ಅನುಭಾವವೇ ಜಂಗಮ ಎಂದು ನಂಬಿ ನಡೆಯುವ, ಶರಣರ ಮನ ಪುರುಷ ನುಡಿ ಪುರುಷ .
ನಡೆ ಮತ್ತು ನುಡಿಗಳನ್ನು ಒಂದಾಗಿಸಿಕೊಂಡು .ಒಳ್ಳೆಯ ತಿಳುವಳಿಕೆಯನ್ನು ಹೊಂದಿ .ಸಮಾಜದ ಶರಣರ ಪ್ರೀತಿ, ವಿಶ್ವಾಸ ಗಳಿಸಿದವರು.
ಸಮಾಜದ ಉಳುವಿಗಾಗಿ ಬದುಕು ಸವೆಸಿದವರು .
ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವ, ಕೆಟ್ಟ ನಡೆ ನುಡಿಗಳನ್ನು ಹೊಂದಿರುವ, ಒಳ್ಳೆಯ ತಿಳುವಳಿಕೆಯನ್ನು ಹೊಂದದೇ ಇರುವವರಲ್ಲಿ ನನ್ನ ಚೆನ್ನಮಲ್ಲಿಕಾರ್ಜುನನು ಅವರು ಬೆಳಗುವ ಆರತಿಯನ್ನು ಸ್ವೀಕರಿಸಲಾರ. ಎನ್ನುವರು ಅಕ್ಕ.
ಭಾವ ಶುದ್ಧವಿಲ್ಲದವರಲ್ಲಿ ಧೂಪವ ನೊಲ್ಲೆಯಯ್ಯಾ ನೀನು
ಶರಣರು ಭಾವ ಜೀವಿಗಳು .
ಯಾರ ಭಾವನೆಗಳು ಕೆಟ್ಟದ್ದನ್ನು ಆಲೋಚಿಸುತ್ತವೆಯೋ. ಯಾರ ಭಾವನೆಗಳು ಇತರರಿಗೆ ಕೆಟ್ಟದ್ದನ್ನು ಬಯಸುತ್ತವೆಯೋ ಅಂಥವರ ಧೂಪವನ್ನು ನನ್ನ ಚೆನ್ನಮಲ್ಲಿಕಾರ್ಜುನನು ಸ್ವೀಕರಿಸಲಾರ ಎಂದು ಹೇಳುವರು ಅಕ್ಕ.
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯ್ಯಾ ನೀನು
ಶರಣರ ಮನ ಶಾಂತ ನಿರ್ಮಲ. ಸಿಟ್ಟು ,ರೋಷ ,ಉದ್ರೇಕ ,ಅಹಂಕಾರ ಇರದವರು.
ಯಾರು ಆವೇಶದಿಂದ ತಮ್ಮ ನಡೆ ಮತ್ತು ನುಡಿಗಳಿಂದ ಸಮಾಜಕ್ಕೆ ಹಾನಿಯನ್ನುಂಟು ಮಾಡುವರೋ
ಅಂಥವರು ನನ್ನ ಚೆನ್ನಮಲ್ಲಿಕಾರ್ಜುನನಿಗೆ ತೋರಿಸುವ ನೈವೇದ್ಯವನ್ನು ಸ್ವೀಕರಿಸಲಾರ ಎಂದು ಅಕ್ಕನವರು ಹೇಳುತ್ತಾರೆ.
ತ್ರಿಕರಣ ಶುದ್ಧವಿಲ್ಲದವರಲ್ಲಿ
ತಾಂಬೂಲವನೊಲ್ಲೆಯಯ್ಯಾ ನೀನು
ತ್ರಿಕರಣ ಎಂದರೆ, ಕಾಯಾ ,ವಾಚಾ ,ಮನಸಾ ,
ದೇಹ ,ಮಾತು, ಮನಸ್ಸು
ಯಾವಾಗಲೂ ಒಂದಾಗಿರಬೇಕು .ಬೇರೆ ಬೇರೆಯಾಗಿ ನಡೆ ನುಡಿಗಳನ್ನು ಹೊಂದಿ ಮಾತಿಗೆ ತಪ್ಪಿ ನಡೆಯುವವರು. ಅವರ ಮೈ ,ಮನ,ಮಾತುಗಳೆಲ್ಲವು ಅಸತ್ಯದಿಂದ ಕೂಡಿದ್ದರೆ ಅಂಥವರು ಕೊಡುವ ತಾಂಬೂಲವನ್ನು ನನ್ನ ಚೆನ್ನಮಲ್ಲಿಕಾರ್ಜುನನು ಸ್ವೀಕರಿಸಲಾರನು .
ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಶರಣರ ಮನ ಸ್ವಚ್ಛ ತಿಳಿನೀರಿನಂತೆ .ಶುಭ್ರ ಸುಕೋಮಲ .
ಯಾರ ಮನವು ಸಂಕುಚಿತವಾಗಿರುತ್ತದೆಯೋ ಯಾರ ಮನವು ಇತರರ ಏಳ್ಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುತ್ತದೆಯೋ ಯಾರ ಮನಸ್ಸು ಸಮಾಜದ ಹಿತವನ್ನು ಬಯಸುವುದಿಲ್ಲವೋ ಅಂಥಹ ಮಲೀನ ಮನದವರಲ್ಲಿ ನನ್ನ ಚೆನ್ನಮಲ್ಲಿಕಾರ್ಜುನನು ಇರಲು ಬಯಸುವುದಿಲ್ಲ.
ಎನ್ನಲ್ಲಿ ಏನುಂಟೆಂದು ಕರಸ್ಥಲವ ನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
ಅಕ್ಕನಲ್ಲಿ ಮೇಲಿನ ಎಲ್ಲ ಸಾತ್ವಿಕ ಗುಣಗಳು ಇದ್ದುದರಿಂದಲೇ ಆ ಪರಮಾತ್ಮ ಚೆನ್ನಮಲ್ಲಿಕಾರ್ಜುನನು ಅಕ್ಕನ ಕರಸ್ಥಲದಲ್ಲಿ ಇಂಬುಗೊಂಡಿದ್ದಾನೆ,ನೆಲೆಸಿದ್ದಾನೆ.
ಆದರೂ ತನಗೆ ಇವೆಲ್ಲ ಸಾತ್ವಿಕ ಗುಣಗಳು ಭಕ್ತಿ ಸಹಜ ಗುಣಗಳು ಇವೆ ಎಂಬ ಅಭಿಮಾನವಿಲ್ಲ .ಅಕ್ಕನವರಿಗೆ ಈ ಅಭಿಮಾನವಿದ್ದರೆ ಅದು ಮಾಯೆಯೇ ! ಅಂತೆಯೇ ಅಕ್ಕ ಎನ್ನಲ್ಲಿ ಏನುಂಟೆಂದು ಕರಸ್ಥಲವ ನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನನಯ್ಯಾ ?ಎಂದು ಕೇಳುವುದು ಅರ್ಥಪೂರ್ಣವಾಗಿದೆ.
ಅಕ್ಕನವರ ಇಲ್ಲಿನ ನಿರಂಭಾವ
,ಸ್ವವಿಮರ್ಶೆ ಮೆಚ್ಚತಕ್ಕದ್ದು.ಅಕ್ಕ ತನ್ನಲ್ಲಿ ಏನೆಲ್ಲ ಭಕ್ತಿ ಪರಿಕರಗಳಿದ್ದರೂ,
ಇಲ್ಲ ಎಂಬ ನಿರಾಭಿಮಾನವನ್ನು ತೋರುವುದರ ಮೂಲಕ ,ತನ್ನ ಸ್ವವಿಮರ್ಶೆಗೆ ಮುಂದಾಗುತ್ತಾಳೆ. ತನ್ನಲ್ಲಿ ಏನೆಲ್ಲ ಭಕ್ತಿ ಪರೀಕರಗಳಿದ್ದೂ ,ಇಲ್ಲವೆಂದು ತಿರು ತಿರುಗಿ ನೋಡುವುದು ಶರಣತ್ವದ ವಿಶಿಷ್ಟ ಲಕ್ಷಣ. ಇದು ಆತ್ಮವಿಮರ್ಶೆಯ ಒಂದು ವಿಶಿಷ್ಟ ಬಗೆ. ಅಕ್ಕನವರಲ್ಲಿ ಈ ಬಗೆ ಹೇರಳವಾಗಿದೆ .ಅಂತೆಯೇ ಅಕ್ಕನವರದು ಪುಟಕ್ಕಿಟ್ಟ ಚಿನ್ನದಂಥ ಪರಿಶುದ್ಧ ಭಕ್ತಿ .ಇದು ಅಕ್ಕನವರ ಅಂತರಂಗದ ಭಕ್ತಿಯ ಪರಿ.
–ಡಾ ಸಾವಿತ್ರಿ ಮಹಾದೇವಪ್ಪ ಕಮಲಾಪೂರ
ಸಾಹಿತಿಗಳು