ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ
ಅಕ್ಷರದ ಹಾದಿಗೆ ಹಸಿವು ಹಂಬಲ
ಕಲಿವ ಮನಸ್ಸು ಅದಮ್ಯ ಛಲ
ಅದಕೆ ಸಂಗಾತಿಯ ಬೆಂಬಲ
ಆದರೆ ಮೇಲು ಜಾತಿಯ ಕಿರುಕುಳ
ಕಲಿವ ದಾರಿಗೆ ಅಡ್ಡ ಕಲ್ಲು ಮುಳ್ಳು
ಗಟ್ಟಿಗಿತ್ತಿ ನೀ ಛಲಬಿಡದೆ ಆ ಹಾದಿಯಲಿ
ಹೂವಿನ ಬಳ್ಳಿ ಹಬ್ಬಿಸಿ
ಮಹಿಳೆಯ ಮನೋಭಾವ ಬೆಳೆಸಿ
ಸಮಾನತೆಯ ಬಡಿದೆಬ್ಬಿಸಿ
ಭವ್ಯ ಭಾರತದ ಸ್ತ್ರೀ ಶಕ್ತಿಯಾಗಿ
ಯಶೋಗಾಥೆ ಬರೆದ ಸಾವಿತ್ರಿ ತಾಯಿ
ನಾರಿ ಶಕ್ತಿಗೆ ಸ್ಪೂರ್ತಿ ತುಂಬಿದ ನೀನು
ಕಾಮದಾಹ ತೀರಿಸಿ ಹೆರುವ
ಯಂತ್ರವಲ್ಲ ಮಹಿಳೆ
ದಿವ್ಯ ಶಕ್ತಿ ಮಂತ್ರ ಅವಳು
ಜ್ಞಾನ ಗಂಗೆಯ ಭಂಡಾರ
ಎಂಬುದು ಸಾಬೀತುಪಡಿಸಿ
ಮಮತೆ ಪ್ರೀತಿ ಮಧುರ ಮನದ
ಭಾವದೊಲುಮೆಯ ಐಸಿರಿ
ಸಮಾನತೆಯ ದಾರಿಗೆ ನಿಂತು
ನಿತ್ಯ ಹೋರಾಟಗಾರ್ತಿ
ಸ್ತ್ರೀ ಅಂತರಾಳದ ಮಿಡಿತಕೆ
ಶತಮಾನಗಳ ಹಿಂದೆಯೇ ನಿನ್ನ
ಕೂಗು ಸ್ವಾತಂತ್ರ್ಯಕ್ಕಾಗಿ, ಅದಕಾಗಿ ಅವಮಾನ
ಅಪಮಾನ ನುಂಗಿ
ಶಿಕ್ಷಣ ಕ್ಷೇತ್ರದಲ್ಲಿ ನಾರಿ ಶಕ್ತಿಗೆ
ನಾಂದಿ ಬರೆದ ನಂದಾದೇವಿ
ಅಕ್ಷರದವ್ವಳಾದ ಸಾವಿತ್ರಿ ಬಾಯಿ
ಮೇಲುವರ್ಗದವರ ಬಾಯಿ ಮುಚ್ಚಿಸಿ
ಇತಿಹಾಸದ ಪುಟದಲಿ
ಸುವರ್ಣಾಕ್ಷರ ಬರೆದು ಸದಾ ಮಿನುಗುವ ನಕ್ಷತ್ರವಾಗಿ
ರಾರಾಜಿಸುವೆ ಅವ್ವ
ನಾರಿ ಶಕ್ತಿಯ ನರನರದಲೂ ನೀನೆ
ಸ್ಪೂರ್ತಿ ಅವ್ವ.
–ಲಲಿತಾ ಪ್ರಭು ಅಂಗಡಿ
ಮುಂಬಯಿ
ದಿನಾಂಕ:-೦೩-೦೧-೨೦೨೫