ಕನಕದಾಸರ ಸಾಹಿತ್ಯ ಬಂಗಾರ : ವೆಂಕಣ್ಣ ಜೋಶಿ
e- ಸುದ್ದಿ ಸಿಂಧನೂರು
ಪ್ರಕೃತಿಯ ಶಕ್ತಿಯೇ ದೇವರು ಎಂದ ಕನಕದಾಸರ ಸಾಹಿತ್ಯ ಅಸಾಧ್ಯವಾದದು. ಕನಕ ಎಂದರೆ ಬಂಗಾರ ಅವರ ಸಾಹಿತ್ಯ ಬಂಗಾರದಂತದ್ದು, ಅಪಾರ ಬೆಲೆ ಉಳ್ಳದ್ದು, ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳಲ್ಲಿ ಎಂದ ಅವರು ಭಗವಂತ ಶ್ರೀ ಕೃಷ್ಣಗೆ
ಇಷ್ಟವಾದವರು ಎಂದು ಹಿರಿಯ ಅನುಭಾವಿಗಳು ಹಾಗೂ ಚಿಂತಕರಾದ ವೆಂಕಣ್ಣ ಜೋಶಿ ಹೇಳಿದರು.
ನಗರದ ಬಸವ ವೃತ್ತದ ಹತ್ತಿರವಿರುವ ಅನಿಕೇತನ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹಮ್ಮಿಕೊಂಡ 2024-25 ನೇ ಸಾಲಿನ ದಿ.ಕೆ.ನಾಗಪ್ಪ ಸ್ಮಾರಕ ದತ್ತಿ, ಲಕ್ಷ್ಮಮ್ಮ ಬಸಪ್ಪ ಬರಸಿ ನಂದಿಹಳ್ಳಿ ದತ್ತಿ, ಹಾಗೂ ರುದ್ರಮುನಿಸ್ವಾಮಿ ಸಿದ್ದಾಂತಿಮಠ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದತ್ತಿ ದಾನಿಗಳಾದ ಬಿಜೆಪಿ ಮುಖಂಡ ಕೆ.ಕರಿಯಪ್ಪ ಮಾತನಾಡಿ, ಪ್ರತಿಯೊಬ್ಬರಿಂದಲೂ ಕನ್ನಡ ನಾಡು ನುಡಿ ಜಲ ಭಾಷೆ ಉಳಿಸುವಂತಹ ಕೆಲಸವಾಗಬೇಕು. ಯುವ ವಿದ್ಯಾರ್ಥಿಗಳು ಸಹ ತಾವು ಏನೇ ಕಲಿತರು ನಮ್ಮ ಮಣ್ಣಿನ ಕನ್ನಡ ಭಾಷೆ ಮಾತ್ರ ಮರೆಯಬಾರದು. ಯುವ ಸಮೂಹ ಈ ದೇಶದ ಆಸ್ತಿ ದೇಶವನ್ನು ಕಟ್ಡುವಂತಹ ಸದ್ಗುಣಗಳನ್ನು ಬೆಳಿಸಿಕೊಳ್ಳಬೇಕೆಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ನಂತರ ಹಿರಿಯ ಹೋರಾಟಗಾರ ಎಚ್.ಎನ್.ಬಡಿಗೇರ್ ಮಾತನಾಡಿ, ವಿದ್ಯಾರ್ಥಿಗಳು ಶಕ್ತಿಯುತವಾಗಿ ಹೊರ ಹೊಮ್ಮಿದಾಗ ದೇಶದಲ್ಲಿರುವ ಮಾನವ ಕುಲಕ್ಕೆ ಕಂಟಕವಾದ ಅನಾಚಾರಗಳು ತೊಲಗುತ್ತವೆ. ಕನ್ನಡ ಭಾಷೆ ಶ್ರೇಷ್ಠ, ಅಷ್ಟೇ ಸರ್ವ ಭಾಷೆಗಳು ಕೂಡ ಶ್ರೇಷ್ಠ. ಯಾವಾಗಲೂ ನಮ್ಮನ್ನು ನಾವು ಅರಿತುಕೊಳ್ಳಲಿಕ್ಕೆ ಪ್ರಯತ್ನಿಸಬೇಕು ಸದ್ಗುಣಗಳನ್ನು ಹೊಂದಬೇಕೆಂದರು.
ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ್ ಮಾತನಾಡಿ, ಶಿಕ್ಷಣದ ಜೊತೆಗೆ ಸಮಾಜದ ಮೌಲ್ಯಗಳ ಪರಿಜ್ಞಾನ ಹೊಂದಬೇಕು. ಅಸಮಾನತೆ ಹೋಗಲಾಡಿಸಿ ಸಮಾನತೆಗೆ ಗೌರವ ತರಬೇಕು. ಈಗಿನ ಕಾಲದಲ್ಲಿ ಶಿಕ್ಷಣ ದುಬಾರಿಯಾಗಿದೆ. ಮುಖ್ಯಮಂತ್ರಿ
ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಡ್ಡಾಯ ಉಚಿತ ಶಿಕ್ಷಣ ನೀತಿ ಯೋಜನೆ ಜಾರಿಗೆ ತರಲು ನಿರ್ಧರಿಸಿತ್ತು. ಆದರೆ ಕೆಲವು ಅಡೆತಡೆಗಳು ಬಂದ ಕಾರಣ ಅದನ್ನು ಕೈಬಿಟ್ಟಿತು ಮತ್ತು ಯಾವೊಬ್ಬ ಕನ್ನಡಪರ ಸಂಘಟಕರು ಹೋರಾಟಗಾರರು ಇದರ ಬಗ್ಗೆ ಧ್ವನಿ ಎತ್ತದ ಕಾರಣ ಆ ಯೋಜನೆ ನೆನಗುದಿಗೆ ಬಿದ್ದಿದೆ ಎಂದರು.
ಜೀವನದಲ್ಲಿ ಬೆಂದ್ರೆ ದ.ರಾ.ಬೆಂದ್ರೆ, ಕನ್ನಡದ ಆಯಸ್ಕಾಂತ ಶಿವರಾಮ ಕಾರಂತ, ಕನ್ನಡದ ನಾಯಕ ವಿ.ಕೃ.ಗೋಕಾಕ, ಕನ್ನಡದ ಕೀರ್ತಿ ಯು.ಆರ್.ಅನಂತ ಮೂರ್ತಿ, ಕನ್ನಡದ ಆಸ್ತಿ ಮಾಸ್ತಿ, ಕನ್ನಡದ ಬಂಗಾರ ಚಂದ್ರಶೇಖರ ಕಂಬಾರ ಈ ದಿಗ್ಗಜರು ಕನ್ನಡದ ಉಳಿವಿಗಾಗಿ ಹೋರಾಟ ಮಾಡುತ್ತಾ ಸಾಹಿತ್ಯ ರಚಿಸಿ ಇಡೀ ನಾಡಿಗೆ ಹೆಸರುವಾಸಿಯಾದವರು. ಹಾಗೆ ಕನಕದಾಸರು ಕೂಡ ಕವಿಯಾಗಿ, ಸಾಹಿತಿಯಾಗಿ, ಸೈನಿಕನಾಗಿ, ಹೀಗೆ ಅನೇಕಾನೇಕ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕನಕದಾಸರು ವಿಶೇಷವಾದರು ಎಂದು ಕನಕದಾಸರ ಸಾಹಿತ್ಯ ಚಿಂತನೆಗಳು ಮತ್ತು ಕುರುಬ ಸಮಾಜ ಕುರಿ ಸಾಕಾಣಿಕೆ ರೈತರ ಕುರಿತು ಚುಟುಕು ಸಾಹಿತ್ಯ ಜಿಲ್ಲಾಧ್ಯಕ್ಷ ಬೀರಪ್ಪ ಶಂಭೋಜಿ ವಿಷಯ ಮಂಡನೆ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಧ್ಯಕ್ಷೀಯ ಭಾಷಣ ಮಾಡಿದರು.
ಈ ವೇಳೆ: ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಇ.ಎಚ್.ಕಂಬಳಿ, ಪೃಥ್ವಿರಾಜ್ ಸಿದ್ದಾಂತಿಮಠ, ಕಾಲೇಜ್ ಪ್ರಿನ್ಸಿಪಲ್ ನಾಗರಾಜ ಮುಕ್ಕುಂದ, ನಮ್ಮ ಕರ್ನಾಟಕ ಸೇನೆ ಜಿಲ್ಲಾ ಸಂಚಾಲಕ ಹುಸೇನ್ ಭಾಷಾ, ಸೇರಿದಂತೆ ಶಿಕ್ಷಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.