ಸಂತೆಯೊಳಗಿನ ಸಂತ -ಮಹಾಕವಿ ವೇಮನ

ಸಂತೆಯೊಳಗಿನ ಸಂತ -ಮಹಾಕವಿ ವೇಮನ

 

 

 

 

 

 

 

 

 

 

(ಜನವರಿ 19ರ ವೇಮನ ಜಯಂತಿಯ ನಿಮಿತ್ತ)

ದಾನ ಕೇಳುವವನು ಧರಣಿಗಧಮನು
ದಾನ ಕೇಳದವನು ದೈವಸಮನು
ದಾನ ಕೊಡದಿರುವವ ಧನ್ಯನಲ್ಲ ನೋಡು
ವಿಶ್ವದಾಭಿರಾಮ ಕೇಳು ವೇಮ

ಎಂದು ಜಗದ ಜನರ ಮನಸ್ಥಿತಿಯನ್ನು
ಚಾಟಿಯೇಟಿನಂತೆ ಖಂಡಿಸಿದವನು ಮಹಾಕವಿ ವೇಮನ. ಉಳ್ಳವರು ದಾನ ಮಾಡಿದರೆ ತಪ್ಪಲ್ಲ ದಾನ ಕೇಳದಿದ್ದರೆ ಅವರು ಒಳ್ಳೆಯವರು, ದಾನ ಕೇಳುವವನು ಭೂಮಿಯಲ್ಲಿ ಪಾಪಿಷ್ಟನು ಎಂದು ಮಹಾಕವಿ ವೇಮನ ಅತ್ಯಂತ ಮಾರ್ಮಿಕವಾಗಿ ಹೇಳಿದ್ದಾನೆ. ವೇಮನ ಕನ್ನಡದ ಸರ್ವಜ್ಞ ಕವಿ ತಮಿಳಿನ ತಿರುವಳ್ಳುವರನಂತೆ ಆಂಧ್ರದ ಸಮಾಜ ಚಿಂತಕ, ತತ್ವಜ್ಞಾನಿ, ಮಹಾಕವಿ ಎಂದೆನಿಸಿದವನು
ವೇಮನನನ್ನು ರೆಡ್ಡಿ ಕುಲದ ಮಹಾತಾಯಿ ಮಲ್ಲಮ್ಮಾಂಬೆಯ ಮೈದುನ ಎಂಬ ಹಿನ್ನೆಲೆಯಲ್ಲಿ ನೋಡಿದಾಗ ವೇಮನ 15ನೇ ಶತಮಾನದಲ್ಲಿ ಇಂದಿನ ಆಂಧ್ರಪ್ರದೇಶದ ಕುಮಾರಗಿರಿಯ ಸಿದ್ದಾಪುರದಲ್ಲಿ ಜನಿಸಿದನು. ತಂದೆ ವೇಮರೆಡ್ಡಿ. ವೇಮನ ಕುರಿತು ಸಂಶೋಧಿಸಿದ ಸಿ. ಪಿ . ಬ್ರೌನ್ ರ ಪ್ರಕಾರ ವೇಮನ 17ನೇ ಶತಮಾನದವನು ಎಂದು ಕೂಡ ಹೇಳುತ್ತಾರೆ.

ತಾಯಿ ಮತ್ತು ಅಕ್ಕಂದಿರ ಅತಿಯಾದ ಪ್ರೀತಿ ವೇಮನನನ್ನು ಹದಗೆಡಿಸಿತ್ತು. ಅರಿಯದ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಬಲಿಯಾಗಿದ್ದ ವೇಮನ ಮುಂದೆ ಹರೆಯಕ್ಕೆ ಬಂದಾಗ ವೇಶ್ಯಾ ಸ್ತ್ರೀಯರ ಸಹವಾಸವನ್ನು ಮಾಡಿದ. ಆತನ ಕಾರಣದಿಂದಲೇ ಮನೆಯಲ್ಲಿನ ಸಂಪತ್ತು ಬರಿದಾಗತೊಡಗಿತ್ತು.

ವೇಮನರ ಸೋದರ ಭರಮರೆಡ್ಡಿಯನ್ನು ಮದುವೆಯಾಗಿ ಬಂದ ಅತ್ತಿಗೆ ಮಲ್ಲಮ್ಮ ವೇಮನನಿಗೆ ಹಲ ಬಾರಿ ತಿಳಿ ಹೇಳಲು ಪ್ರಯತ್ನಿಸಿದಳು. ಆದರೆ ತಾಯಿ ಮತ್ತು ಸಹೋದರಿಯರ ಶ್ರೀರಕ್ಷೆಯಲ್ಲಿ ಸೊಂಪಾಗಿದ್ದ ವೇಮನ ಯಾರ ಮಾತನ್ನು ಕೇಳದವನಾಗಿದ್ದ.

ಒಂದು ದಿನ ದೇವಸ್ಥಾನದಲ್ಲಿ ಹೇಮರೆಡ್ಡಿ ಮಲ್ಲಮ್ಮನ ಮೂಗಿನಲ್ಲಿ ಹೊಳೆಯುತ್ತಿರುವ ಮೂಗುತಿಯನ್ನು ನೋಡಿದ ವೇಮನನ ವೇಶ್ಯಾ ಸ್ತ್ರಿ ತನಗೆ ಆತನ ಅತ್ತಿಗೆಯ ಮೂಗಿನಲ್ಲಿರುವ ಮೂಗುತಿಯನ್ನೇ ತಂದು ಕೊಡು ಎಂದು ದುಂಬಾಲು ಬಿದ್ದಳು. ಅದು ಸಾಧ್ಯವಾಗುವುದಿಲ್ಲ ಎಂದು ವೇಮನ ಎಷ್ಟು ಹೇಳಿದರು ಆಕೆ ಕೇಳಲಿಲ್ಲ. ಆಕೆಯ ವ್ಯಾಮೋಹದಲ್ಲಿ ಮುಳುಗಿದ ವೇಮನ ಮನೆಗೆ ಮರಳಿ ಅತ್ತಿಗೆಯ ಬಳಿ ಆಕೆಯ ತವರಿನ ಉಡುಗೊರೆಯಾದ ಮೂಗುತಿಯನ್ನು ಕೇಳಿದ. ಎಲ್ಲವನ್ನು ತನ್ನ ದಿವ್ಯ ದೃಷ್ಟಿಯಿಂದ ಅರಿತ ಮಲ್ಲಮ್ಮ ಮೂಗುತಿಯನ್ನು ಕೊಡಲು ಒಪ್ಪಿ ಒಂದು ಶರತ್ತನ್ನು ಹಾಕಿದಳು. ಆ ಶರತ್ತಿನ ಪ್ರಕಾರ ವೇಶ್ಯಾ ಸ್ತ್ರೀ ನಿರ್ವಾಣ ಸ್ಥಿತಿಯಲ್ಲಿ ವೇಮನನನ್ನು ಮೂರು ಸುತ್ತು ಹಾಕಿ ಬಾಗಿ ಹಿಂಬದಿಯಿಂದ ಆ ಮೂಗುತಿಯನ್ನು ಪಡೆಯಬೇಕು ಮತ್ತು ಹಾಗೆ ಪಡೆಯುವಾಗ ವೇಮನನು ಆ ಸ್ತ್ರೀಯನ್ನು ತದೇಕ ಚಿತ್ತದಿಂದ ನೋಡಬೇಕು. ಈ ಷರತ್ತಿಗೆ ಒಪ್ಪಿದ ವೇಮನ ತನ್ನ ಸಂಗಿನಿಯ ಮನೆಗೆ ಮೂಗುತಿಯೊಂದಿಗೆ ತೆರಳಿ ಅತ್ತಿಗೆಯ ಶರತ್ತನ್ನು ವಿವರಿಸಿದ. ಮಲ್ಲಮ್ಮನ ಹೇಳಿಕೆಯಂತೆ ನಿರ್ವಾಣ ಸ್ಥಿತಿಯಲ್ಲಿ ಆಸ್ತಿಯು ಮೂಗುತಿಯನ್ನು ಪಡೆಯುವಾಗ ಆಕೆಯನ್ನು ತದೇಕಚಿತ್ತದಿಂದ ನೋಡಿದ ವೇಮನ ಆಕೆಯ ನಗ್ನತೆಯಿಂದ ತೀವ್ರ ಜಿಗುಪ್ಸೆಗೊಳಗಾಗಿ, ಅಸಹ್ಯಭಾವನೆ ಆವರಿಸಿದಂತಾಗಿ ಗಾಬರಿಗೊಂಡು ಮುಖವನ್ನು ತನ್ನ ಎರಡು ಕೈಗಳಿಂದ ಮುಚ್ಚಿಕೊಂಡ.

ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳು ವೇಮ||

-ಎಂದು ತತ್ವ್ತಜ್ಞಾನ ಹೇಳುತ್ತಾ, ನಗ್ನನಾಗಿ ವೈರಾಗಿಯಂತೆ ಮನೆ ಬಿಟ್ಟು ಹೊರಟನು. ಆತನ ವೈರಾಗ್ಯ, ಸಾಮಾಜಿಕ ನಿಲುವುಗಳು ಆತನನ್ನು ಸಂಪೂರ್ಣ ಬದಲಾಯಿಸಿ ಸಮಾಜಮುಖಿ ಚಿಂತನೆಯ ತತ್ವಜ್ಞಾನಿಯಾಗಿ ವೇಮನ ಬದಲಾದನು.
ಆತನ ನೂರಾರು ವಚನಗಳು ಇಂದಿಗೂ ತೆಲುಗು ಭಾಷೆಯಲ್ಲಿ ಪ್ರಚಲಿತದಲ್ಲಿವೆ. ಕೇಳುಗರಿಗೆ ಸಿಡಿಗುಂಡಿನಂತೆ, ಚಾಟಿ ಏಟಿನಂತೆ ತೋರುವ ಆತನ ವಚನಗಳಲ್ಲಿ ಮಾರ್ಮಿಕತೆಯಡಗಿದೆ.

ಆತ್ಮಶುದ್ಧಿ ಇರದ ಆಚಾರವೇತಕೆ?
ಮಡಕೆ ಶುದ್ಧಿ ಇರದ ಅಡಿಗೆ ಯಾತಕೆ?
ಚಿತ್ತಶುದ್ಧಿ ಇರದ ಶಿವನ ಪೂಜೆ ಯಾಕೆ?
ವಿಶ್ವದಾಭಿರಾಮ ಕೇಳು ವೇಮ

ತನ್ನೊಳಗಿನ ವ್ಯಾಪಾರ ಸ್ವಚ್ಛವಿರದ ಆಚಾರ, ಸ್ವಚ್ಛವಾಗಿ ತೊಳೆಯದ ಮಡಕೆಯ ಆಹಾರ ಮನಸುಗಳು ಸ್ವಚ್ಛವಿರದ ಶಿವನಪೂಜೆ ಮಾಡುವುದು ಸಲ್ಲದು ಎಂಬುದು ವೇಮನನ ಮಾತು.

ಧ್ವಜವೆತ್ತಿ ಸಾರು ದೇವನೊಬ್ಬನೆಂದು
ನಿಜವಿಹುದು ಒಳಗೆ ನಿಂತಿರುವನು ಚೊಕ್ಕ
ನೋಡುವವನು ಸಂತಸದಿ ಮುಳುಗುವೆ
ವಿಶ್ವದಾಭಿರಾಮ ಕೇಳು ವೇಮ

ಎಂದು ಏಕದೇವೋಪಾಸನೆಯ ಮಹತ್ವವನ್ನು ಜಗಕ್ಕೆ ಸಾರಿದವನು ವೇಮನ. ದೇವರು ಮತ್ತು ದೈವದ ಮಹತ್ವವನ್ನು ಜಗತ್ತಿಗೆ ತಿಳಿಸಿದ ವೇಮನ ತನ್ನ ಒಂದು ವಚನದಲ್ಲಿ ದೇವರು ನಮ್ಮನ್ನೆಲ್ಲ ಆಡಿಸುವ ಸೂತ್ರಧಾರ ಎಂದು ಹೇಳುತ್ತಾನೆ. ಆ ಸೂತ್ರಧಾರನ ಇರುವಿಕೆಯನ್ನು ಮನುಷ್ಯ ಕಾಣಬೇಕು ಎಂದು ಹೇಳುತ್ತಾನೆ.

ಒಂದು ತೊಗಲು ತಂದು ಚೆಂದ ಗೊಂಬೆಯ ಮಾಡಿ
ಕುಣಿವಂತೆ ಮಾಡಿ ಹಾಗೆ ಇಡುವ
ತನ್ನ ಆಡಿಸುವವನ ತಾನೇಕೆ ಕಾಣನೊ
ವಿಶ್ವದಾಭಿರಾಮ ಕೇಳು ವೇಮ.

ಮುಕ್ತಿ’ ಎನ್ನುವುದು ಹತ್ತು ಲಕ್ಷಗಳ ಗಾವುದ ದೂರದಲ್ಲಿ ಇಲ್ಲ. ತ್ರಿಕರಣಶುದ್ಧಿ ಎಂಬುದು ಮೊದಲನೆಯ ಮೆಟ್ಟಿಲು. ಧ್ಯಾನ ಎಂಬುದು ಎರಡನೆಯ ಮೆಟ್ಟಲು. ನಿಜವಾಗಲೂ ನಾವು ಮುಕ್ತಿಯನ್ನು ಕೋರುವವರಾದರೆ ನಾವು ನಿಜವಾಗಲೂ ಧ್ಯಾನ ಮಾಡುತ್ತೇವೆ ಎಂದು
ವೇಮನ ಹೇಳಿದ್ದಾನೆ

ಏತಕ್ಕಯ್ಯಾ ಮಾನವ ಜನ್ಮ ?”

ಮನಸ್ಸನ್ನು ಮರೆಸುವುದೇ ಧ್ಯಾನ. ಮನಸ್ಸನ್ನು ಮರೆಸಿದಾಗಲೇ ಆತ್ಮ ಪ್ರತ್ಯಕ್ಷವಾಗುತ್ತದೆ. ಒಂದು ಕಡೆ ಸಂಗೀತ ಇರುತ್ತದೆ, ಮತ್ತೊಂದು ಕಡೆ ಧ್ಯಾನ ಇರುತ್ತದೆ. ಇದರ ಹೆಸರೇ ಸಂಗೀತ ಧ್ಯಾನ ಯಜ್ಞ. ಎಲ್ಲಿ ’ನಿನ್ನದು’, ’ನನ್ನದು’ ಎಂಬ ಭಾವನೆ ಇಲ್ಲದೆ ಎಲ್ಲ ಮರೆತು ಹೋಗುತ್ತೇವೆಯೋ ಅಲ್ಲಿ ಆತ್ಮ ಪ್ರತ್ಯಕ್ಷವಾಗುತ್ತದೆ. ಆಧ್ಯಾತ್ಮಿಕತೆ ಎಂದರೆ ನಾನು ನನ್ನದು ಎಂಬ ಮೋಹವನ್ನು ದೊರೆಯುವುದು ಎಂದು ವೇಮನ ಹೇಳಿದ್ದಾನೆ.

ಯೋಗಿ ವೇಮನರ ಕವಿತೆಗಳ ಹಲವು ಸಾಲುಗಳು ಈಗ ತೆಲುಗು ಭಾಷೆಯ ಆಡುಮಾತಿನ ನುಡಿಗಟ್ಟುಗಳಾಗಿವೆ. ಅವು
ವಿಶ್ವದಾಭಿರಾಮ ವಿನೂರ ವೇಮ” ಎಂಬ ಸಹಿ ಯೊಂದಿಗೆ ಕೊನೆಗೊಳ್ಳುತ್ತವೆ.

ಕಾಲಾಂತರದಲ್ಲಿ ಕದಿರಿ ಅನಂತಪುರ ಜಿಲ್ಲೆಯ
ಕೊಠಾರಪಲ್ಲಿಯಲ್ಲಿ ವೇಮನ ಮರಣ ಹೊಂದಿದನು. ಸಂತ ವೇಮನನ ಸಮಾಧಿಯನ್ನು ಹೋಲುವ ಶಿಲಾ ಶ್ರೇಣಿಯನ್ನು ಇಲ್ಲಿ ಕಾಣಬಹುದು. ಜನ
ವೇಮನನನ್ನು ಪೂಜಿಸುತ್ತಾರೆ

1947 ರಲ್ಲಿ ಕೆ ವಿ ರೆಡ್ಡಿ ಅವರು ತೆಲುಗಿನಲ್ಲಿ ಯೋಗಿವೇಮನ ಎಂಬ ಹೆಸರಿನಲ್ಲಿ
ವೇಮನನ ಕುರಿತು ಚಲನಚಿತ್ರ ನಿರ್ಮಿಸಿದರು. 1986 ರಲ್ಲಿ ಸಿ.ಎಸ್.ರಾವ್ ರವರು ‘ವೇಮನ ಚರಿತ್ರ‘ ಎಂಬ ಚಲನಚಿತ್ರವನ್ನು ತೆಲುಗಿನಲ್ಲಿ ನಿರ್ಮಿಸಿದರು. ಆಂಧ್ರ ಪ್ರದೇಶ ಸರ್ಕಾರವು ಯೋಗಿ ವೇಮನರ ಅಂಚೆ ಚೀಟಿಯನ್ನು ಕೂಡ ಬಿಡುಗಡೆ ಮಾಡಿದೆ. ರೆಡ್ಡಿ ಸಮುದಾಯದ ಜನ ಹೇಮರೆಡ್ಡಿ ಮಲ್ಲಮ್ಮ ಮತ್ತು ವೇಮನರನ್ನು ತಮ್ಮ ಸಮಾಜದ ಮೂಲಪುರುಷರು ಎಂದು ಪೂಜಿಸುತ್ತಾರೆ. ಸಮಾಜದ ಚಿಂತಕ, ಕವಿ ವೇಮನನ ಜಯಂತಿಯನ್ನು ಪ್ರತಿ ವರ್ಷ ಜನವರಿ 19ರಂದು ಆಚರಿಸಲಾಗುತ್ತದೆ.

ವೇಮನನ ಆಶಯಗಳನ್ನು ಪೂರೈಸುವ, ಸಮಾಜಮುಖಿ ಚಿಂತನೆಗಳನ್ನು ಅರ್ಥೈಸಿಕೊಂಡು ಮುನ್ನಡೆಯುವ ಸ್ವಸ್ಥ ಸಮಾಜದ ಪ್ರಜೆಗಳು ನಾವಾಗೋಣ ಎಂಬ ಆಶಯದೊಂದಿಗೆ

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Don`t copy text!