ಮಡಿವಾಳ ಮಾಚಯ್ಯ..ಶಿವಶರಣ ಮಾಚಿ ತಂದೆಯಾದದ್ದು
( ಫೆಬ್ರುವರಿ 1 ಮಡಿವಾಳ ಮಾಚಿದೇವ ಜಯಂತಿಯ ನಿಮಿತ್ತ)
ಆತ ಓರ್ವ ಮಡಿವಾಳ… ಆತನ ಕಾಯಕ ನಿಷ್ಠೆ ಮತ್ತು ಭಕ್ತಿಯ ಶಕ್ತಿಯನ್ನು ಪರೀಕ್ಷಿಸಲು ಸಾಕ್ಷಾತ್ ಪರಶಿವನು ತನ್ನ ಪತ್ನಿ ಪಾರ್ವತಿಯೊಂದಿಗೆ ವೃದ್ಧ ದಂಪತಿಗಳ ಮಾರುವೇಷದಲ್ಲಿ ಭೂಲೋಕಕ್ಕೆ ಬಂದು ದೇವಸ್ಥಾನದ ಅಂಗಳದಲ್ಲಿ ವಿಶ್ರಾಂತಿ ಪಡೆಯುತ್ತಿದ್ದನು. ದೇಗುಲಕ್ಕೆ ಬಂದು ಲಿಂಗ ದರ್ಶನ ಮಾಡಿ ನಮಸ್ಕರಿಸಿ ಹೊರಗೆ ಬಂದ ಆ ಭಕ್ತ ವೃದ್ಧ ದಂಪತಿಗಳನ್ನು ಕಂಡು ತಾನು ಭಕ್ತರ ಬಟ್ಟೆಗಳನ್ನು ಒಗೆಯುವ ಮಡಿವಾಳ ವೃತ್ತಿಯವನು ಏನಾದರೂ ಸೇವೆ ಮಾಡಲಿಕ್ಕಿದೆಯೇ ಎಂದು ಕೇಳಿದನು. ಅದಕ್ಕೆ ಉತ್ತರವಾಗಿ ಆ ವೃದ್ಧ ದಂಪತಿಗಳು ತಮ್ಮ ಬಟ್ಟೆಗಳನ್ನು ಆತನಿಗೆ ಕೊಟ್ಟರು. ಬಹಳವೇ ಮಲಿನವಾಗಿರುವ ಈ ಬಟ್ಟೆಗಳನ್ನು ವೃದ್ಧರಾದ ತಮಗೆ ಒಗೆದುಕೊಳ್ಳಲು ಸಾಧ್ಯವಿಲ್ಲದ ಕಾರಣ ಸ್ವಚ್ಛವಾಗಿ ಒಗೆದುಕೊಡಲು ಆ ದಂಪತಿಗಳು ಹೇಳಿದರು. ಅಭಿಮಾನದಿಂದ ಇಂದು ಹೊತ್ತು ಕಂತುವ ಮುನ್ನ ಅತ್ಯಂತ ಶುಭ್ರವಾಗಿ ಒಗೆದ ಬಟ್ಟೆಗಳನ್ನು ನಿಮಗೆ ತಂದು ಕೊಡುವೆ ಎಂದು ಹೇಳಿದ ಆ ಅಗಸ ಹಳ್ಳದ ದಂಡೆಗೆ ಬಂದು ತಾನು ಸದಾ ಒಗೆಯುತ್ತಿದ್ದ ಜಾಗದಲ್ಲಿ ವೃದ್ಧ ದಂಪತಿಗಳ ಬಟ್ಟೆಯನ್ನು ಒಗೆಯಲಾರಂಭಿಸಿದ. ಅದಷ್ಟೇ ನೊರೆ ಪುಡಿಯನ್ನು ಹಾಕಿ ಉಜ್ಜಿ ಒಗೆದರೂ ಕೂಡ ಬಟ್ಟೆಯಿಂದ ಕೊಳೆ ಹೋಗಲೇ ಇಲ್ಲ.
ನಿರಾಶನಾದ ಮಡಿವಾಳ ‘ಹೊತ್ತು ಮುಳುಗುತ್ತ ಬಂತು ಸತ್ಯ ನನ್ನದು ಹುಸಿಯಾಯ್ತು, ಕಾಯಕದ ಬುತ್ತಿ ತೀರಿತು ಈ ದಿನಕೆ‘ ಎಂದು ನೊಂದು ನುಡಿಯುತ್ತಾನೆ.
ಆತನಷ್ಟೇ ಕಾಯಕ ನಿಷ್ಠಳಾದ ಆತನ ಪತ್ನಿಯು ‘ಚಿಂತಿಸಬೇಡಿ ಎನ್ನೊಡೆಯ, ನನ್ನೆದೆಯ ಬಸಿದ ರಕ್ತದಿಂದ ಈ ಬಟ್ಟೆಗಳು ಶುದ್ಧವಾದಾವು… ಅಂಜದೆ ಅಳುಕದೆ ನನ್ನ ಎದೆಯನ್ನು ಸೀಳಿ ಆ ರಕ್ತದಿಂದ ಈ ವಸ್ತ್ರಗಳನ್ನು ತೊಳೆದು ಕೊಡಿ.. ಹಿಂಜರಿಯದಿರಿ. ಎಂದು ಗಂಡನಿಗೆ ಹೇಳುತ್ತಾಳೆ.
ಒಲ್ಲದ ಮನಸ್ಸಿನಿಂದ ಪತ್ನಿಯನ್ನು ಇರಿದ ಆ ಮಡಿವಾಳ ಅಲ್ಲಿ ಸಂಗ್ರಹವಾದ ರಕ್ತದಿಂದ ವೃದ್ಧ ದಂಪತಿಗಳ ಬಟ್ಟೆಗಳನ್ನು ತೊಳೆದಾಗ ಎಲ್ಲಾ ಬಟ್ಟೆಗಳು ಶುಭ್ರವಾಗಿ ಲಕ ಲಕಿಸುತ್ತವೆ. ಮನದಲ್ಲಿ ಕಡು ದುಃಖವಿದ್ದರೂ ಹಾಗೆ ಒಗೆದು ಒಣಗಿಸಿದ ಬಟ್ಟೆಗಳನ್ನು ತಂದು ದೇವಸ್ಥಾನದ ಶಿಲಾಮಂಟಪದಲ್ಲಿ ಕುಳಿತ ಆ ದಂಪತಿಗಳಿಗೆ ತಂದುಕೊಟ್ಟ ಮಡಿವಾಳನನ್ನು ಆ ದಂಪತಿಗಳು ಬಟ್ಟೆಗಳು ಹೇಗೆ ಶುಭ್ರವಾದವು ಎಂದು ಕೇಳಲು ಸತ್ಯವನ್ನು ಹೇಳಲು ಆತನ ನಾಲಿಗೆ ಹಿಂಜರಿಯುತ್ತದೆ. ಅದೇನು ನಿನ್ನ ಪತ್ನಿಯೊಂದಿಗೆ ಬಂದು ಮಡಿ ಮಾಡಲು ಬಟ್ಟೆಗಳನ್ನು ತೆಗೆದುಕೊಂಡು ಹೋಗಿದ್ದೆ ಒಬ್ಬನೇ ಬಂದಿರುವೆಯಲ್ಲ, ಆಕೆಯನ್ನು ಕರೆದುಕೊಂಡು ಬರಲಿಲ್ಲವೇ? ಎಂದು ವೃದ್ಧ ದಂಪತಿಗಳು ಪ್ರಶ್ನಿಸಿದಾಗ ಅನಿವಾರ್ಯವಾಗಿ ನಡೆದ ವಿಷಯವನ್ನು ಹೇಳುತ್ತಾನೆ ಆ ಮಡಿವಾಳ ಕೂಡಲೇ ತಮ್ಮ ಮೂಲ ರೂಪದಲ್ಲಿ ಪ್ರತ್ಯಕ್ಷರಾದ ಆ ಶಿವ ದಂಪತಿಗಳನ್ನು ಕಂಡು ಭಕ್ತಿ ಭಾವದಿಂದ ಕೈ ಮುಗಿದ ಆತನನ್ನು ತೋರಿದ ಶಿವ ‘ನೋಡಿದೆಯಾ ಪಾರ್ವತಿ, ಇದು ನಮ್ಮ ಮಾಚಿದೇವನ ಕಾಯಕ ನಿಷ್ಠೆ ಮತ್ತು ಭಕ್ತಿಯ ಶಕ್ತಿ‘ ಎಂದು ಹೇಳಿ ಆತನನ್ನು ಆಶೀರ್ವದಿಸಿ ನಿನ್ನ ಪತ್ನಿಯನ್ನು ಕರೆ ಎಂದು ಅಗಸನಿಗೆ ಹೇಳುತ್ತಾನೆ.
ಜಗದ್ರಕ್ಷಕ ದಂಪತಿಗಳಿಗೆ ಕೈಮುಗಿದು ತನ್ನ ಪತ್ನಿಯನ್ನು
ಕರೆದ ಆತನ ದನಿ ಕೇಳಿ ಆತನ ಪತ್ನಿ ಜೀವಂತವಾಗಿ ಮರಳಿ ಬರುತ್ತಾಳೆ ಎಂಬ ಪೌರಾಣಿಕ ಕಥೆಯ ಹಿನ್ನೆಲೆಯ ಕಥಾನಾಯಕನೇ ನಮ್ಮ ಇಂದಿನ ಲೇಖನದ ಮೂಲಪುರುಷ…. ಮಡಿವಾಳ ಮಾಚಯ್ಯ.
ಪೌರಾಣಿಕವಾಗಿ ಹೇಳುವುದಾದರೆ ಶಿವನ ಅಂಶವಾಗಿ ಉದ್ಭವಿಸಿದ ವೀರಭದ್ರನು ದಕ್ಷ ಸಂಹಾರ ಮಾಡಿ ಅತ್ಯುತ್ಸಾಹದಿಂದ ಆ ವಿಷಯವನ್ನು ಹೇಳಲು ಶಿವನ ಬಳಿ ಧಾವಿಸಿ ಬರುವಾಗ ಆತನ ಉತ್ತರೀಯ ಶಿವಭಕ್ತನೊಬ್ಬನಿಗೆ ಬಡಿದುದನ್ನು ಕೂಡ ಗಮನಿಸದೇ
ಹೋದ ಪರಿಣಾಮವಾಗಿ ಆ ಶಿವ ಭಕ್ತನ ಶಾಪಕ್ಕೆ ಗುರಿಯಾದನು. ತನ್ನ ತಪ್ಪನ್ನು ಮನ್ನಿಸೆಂದು ಶಿವನನ್ನು ವೀರಭದ್ರನು ಬೇಡಿಕೊಳ್ಳಲು ಕಲ್ಯಾಣದ ಶರಣರ ಮೈಲಿಗೆ ಬಟ್ಟೆಯನ್ನು ಮಡಿ ಮಾಡುವ ಕಾಯಕವನ್ನು ಮಾಡಿ ಶಾಪ ಮುಕ್ತನಾಗಿ ಮತ್ತೆ ಕೈಲಾಸಕ್ಕೆ ಬರುವಂತೆ ಶಿವನು ಸಲಹೆ ನೀಡಿದನು. ಹೀಗೆ ಶಿವನ ಅಂಶವನ್ನು ಹೊಂದಿದ ವೀರಭದ್ರನ ಅಪರಾವತಾರವೇ ಮಾಚಿದೇವ ಎಂದು ಪುರಾಣಗಳು ಹೇಳುತ್ತವೆ.
ಮಾಚಿ ತಂದೆ, ವೀರ ಮಾಚಿದೇವ ಮಾಚಯ್ಯ, ಮಾಚಿ ದೊರೆ ಎಂದು ವಿವಿಧ ಶರಣರಿಂದ ಹಲವಾರು ಬಗೆಯಲ್ಲಿ ಕರೆಸಿಕೊಂಡ ಮಡಿವಾಳ ಮಾಚಯ್ಯನವರ ಜನ್ಮಸ್ಥಳ ಇಂದಿನ ಬಿಜಾಪುರ ಜಿಲ್ಲೆಯ ಹಿಪ್ಪರಗಿ ಗ್ರಾಮ… ಮಾಚಯ್ಯನವರ ದೆಸೆಯಿಂದ ಈ ಗ್ರಾಮವನ್ನು ಇದೀಗ ದೇವರ ಹಿಪ್ಪರಗಿ ಎಂದು ಕರೆಯಲ್ಪಡುತ್ತಿದೆ.ಈ ಗ್ರಾಮದ ಕಲ್ಲಿನಾಥ ದೇವರ ಕೃಪೆಯಿಂದ, ಮಲ್ಲಿಕಾರ್ಜುನ ಗುರುಗಳ ಆಶೀರ್ವಾದದಿಂದ ಶಿವಭಕ್ತ ಪರುವತಯ್ಯ ಮತ್ತು ಸುಜ್ಞಾನವ್ವ ದಂಪತಿಗಳ ಕಂದನಾಗಿ ಜನಿಸಿದಾತ ಮಾಚಯ್ಯ.
ದಂಪತಿಗಳ ಪ್ರೀತಿ, ಅಕ್ಕರೆ, ಭಕ್ತಿಯ ಭಾವದಲ್ಲಿ ಮಿಂದ ಮಗು ಗುರುಗಳಾದ ಮಲ್ಲಿಕಾರ್ಜುನ ದೇವರ ನಿಷ್ಠನಾಗಿ ಕಲ್ಲಿನಾಥ ದೇವರ ಭಕ್ತನಾಗಿ ಬೆಳೆದ. ಯುದ್ಧ ಕಲೆಗಳಲ್ಲಿ ಆಸಕ್ತಿ ಹೊಂದಿದ ಮಾಚಯ್ಯ ಕುದುರೆ ಸವಾರಿ,ಕತ್ತಿ ವರಸೆ, ಕೋಲು ಭರ್ಜಿಗಳನ್ನು ಬಳಸುವ ಮತ್ತು ಗರಡಿ ಮನೆಯ ಕುಸ್ತಿಯ ಪಟ್ಟುಗಳನ್ನು ಕರಗತ ಮಾಡಿಕೊಂಡು ವೀರಯೋಧನಾಗಿ ಬೆಳೆದ.
ಶೂದ್ರರಿಗೆ ಶಿಕ್ಷಣ ನಿಷೇಧಿಸಲ್ಪಟ್ಟ ಕಾಲದಲ್ಲಿ ಆತನಿಗೆ ಅಕ್ಷರ ಜ್ಞಾನವನ್ನು, ಪುರಾಣ ಶಾಸ್ತ್ರಗಳನ್ನು ಕಲಿಸಿ ಉತ್ತಮ ಶಿಕ್ಷಣವನ್ನು ನೀಡಿದ್ದು ಕಲ್ಲಿನಾಥನ ಆರಾಧಕರಾದ ಮಲ್ಲಿಕಾರ್ಜುನ ಸ್ವಾಮಿಗಳು.
ಮುಂದೆ ವಿವಾಹ ಯೋಗ್ಯ ವಯಸ್ಸಿಗೆ ಬಂದಾಗ ಪಕ್ಕದ ಗ್ರಾಮದ ಮಲ್ಲಿಗೆಮ್ಮನನ್ನು ತಂದು ಪಾಲಕರು ವಿವಾಹ ಮಾಡಿದಾಗ ದಾಂಪತ್ಯ ಜೀವನದಲ್ಲಿ ಮುಳುಗಿ ಹೋದ ಮಾಚಯ್ಯ ತನ್ನೆಲ್ಲ ಕರ್ತವ್ಯಗಳಿಂದ ವಿಮುಖನಾಗಿದ್ದ. ಮತ್ತೆ ಆತನನ್ನು ಎಚ್ಚರಿಸಿದ್ದು ಆತನ ಗುರುಗಳೇ.
ಶಿವಶರಣರ ಬಟ್ಟೆಗಳನ್ನು ಮಡಿ ಮಾಡಿ ಒಣಗಿದ ನಂತರ ಅವುಗಳನ್ನು ಮಡಚಿ ಗಳಿಗೆ ಮಾಡಿ ಮತ್ತೆ ಗಂಟು ಕಟ್ಟಿ ಅವುಗಳನ್ನು ಹೆಗಲ ಮೇಲಿಟ್ಟುಕೊಂಡು ವೀರ ಘಂಟೆಯನ್ನು ಬಾರಿಸುತ್ತಾ ಸಾಗುತ್ತಿದ್ದ ಮಡಿವಾಳ ಮಾಚಯ್ಯ ‘ಅರಸತನ ಮೇಲಲ್ಲ ಅಗಸತನ ಕೀಳಲ್ಲ’ ಎಂದು ಸಾರಿದ ಮಹಾನ್ ಶರಣನಾಗಿದ್ದ.
ಬಸವಣ್ಣನ ಕೀರ್ತಿ, ಶರಣರ ಕುರಿತ ಮಾತು ಕಥೆಗಳು ಎಲ್ಲರಂತೆಯೇ ಆತನನ್ನು ಕಲ್ಯಾಣಕ್ಕೆ ಬರುವಂತೆ ಕೈ ಬೀಸಿ ಕರೆಯುತ್ತಿತ್ತು. ಪತ್ನಿ ಮತ್ತು ತಂದೆ-ತಾಯಿಗಳ ಒಪ್ಪಿಗೆ, ಗುರುವಿನ ಆಶೀರ್ವಾದವನ್ನು ಪಡೆದ ಮಾಚಯ್ಯ ಕಲ್ಯಾಣಕ್ಕೆ ನಡೆದ. ಹಿಪ್ಪರಗಿಯಿಂದ ಕಲ್ಯಾಣಕ್ಕೆ ಬರುವಾಗ ಮಾರ್ಗ ಮಧ್ಯದಲ್ಲಿ ಭೀಮಾ ರತಿ ನದಿಯು ಉಕ್ಕಿ ಹರಿಯುತ್ತಿತ್ತು. ನದಿಯ ಉಕ್ಕು ಇಳಿಯುವ ತನಕ ನಿಲ್ಲಲು ಸಾಧ್ಯವಾಗದೆ ಬಸವಣ್ಣನವರು ಭಕ್ತಿಯ ಸೆಲೆಯಲ್ಲಿ ನದಿಯನ್ನು ದಾಟಲು ಪ್ರಯತ್ನಿಸಿದಾಗ ನದಿಯು ಇಬ್ಬಾಗವಾಗಿ ಮಾಚಯ್ಯನವರಿಗೆ ದಾರಿ ಮಾಡಿಕೊಟ್ಟಿತು.ಹೀಗೆ ಬಂದ ಮಾಚಯ್ಯನ ಕುರಿತು ಈ ಮೊದಲೇ ಅರಿತಿದ್ದ ಬಸವಣ್ಣನವರು ಉಳಿದವರಿಗೆ ಅವರ ಭಕ್ತಿಯ ಶಕ್ತಿಯನ್ನು ಪರಿಚಯಿಸಿ ನಂತರ ಆತ್ಮೀಯ ಸ್ವಾಗತ ನೀಡಿ ಶರಣ ಗಣದಲ್ಲಿ ಒಂದಾಗಿಸಿದರು. ಮುಂದಿನ ಕೆಲವೇ ದಿನಗಳಲ್ಲಿ ಕಲ್ಯಾಣದ ಶರಣರ ಬಟ್ಟೆಗಳನ್ನು ಮಡಿ ಮಾಡುವ ಕಾಯಕದಲ್ಲಿ ತೊಡಗಿದ ಮಡಿವಾಳ ಮಾಚಯ್ಯನವರು ಕಾಯಕ ನಿಷ್ಠೆ, ಲಿಂಗ ನಿಷ್ಠೆ, ಶ್ರದ್ದೆಯಿಂದಾಗಿ ಎಲ್ಲರ ಮನೆ ಮನಗಳನ್ನು ಗೆದ್ದಿದ್ದರು. ನಿಷ್ಠುರವಾದಿಯೂ ಆಗಿದ್ದ ಮಡಿವಾಳ ಮಾಚಯ್ಯ ‘ಬೇಡುವವರಿಲ್ಲದೆ ಬಡವಾದೆನಯ್ಯ’ ಎಂದ ಬಸವಣ್ಣನವರನ್ನು ಕೂಡ ‘ನೀವೊಬ್ಬರೇ ದಾನ ಮಾಡಲು ಹುಟ್ಟಿದವರು ಉಳಿದ ಶರಣರೆಲ್ಲ ಬಡವರೇ‘ ಎಂದು ನಿಷ್ಟುರವಾಗಿ ಪ್ರಶ್ನಿಸಿದ್ದನು.
ನುಲಿಯ ಚಂದಯ್ಯ ತನ್ನ ಕೊರಳಿನ ಲಿಂಗ ಜಾರಿ ನೀರಲ್ಲಿ ಬಿದ್ದಿದ್ದು ಅದನ್ನು ಮರಳಿ ಕಟ್ಟಿಕೊಳ್ಳಲು
ಹೋದಾಗ
‘ಹಣ್ಣಿನ ಸವಿ ಬೇಕು ಹಣ್ಣು ಬೇಡ ಎಂದರೆ ಹೇಗೆ? ಗುರು ಪೂಜೆಯ ಅರಿವಿದೆ ಎಂದ ಮಾತ್ರಕ್ಕೆ ಲಿಂಗ ಪೂಜೆ ಬೇಡ ಎನ್ನಲು ಸಾಧ್ಯವೇ’
ಎಂದು ಅವರಿಗೆ ತಿಳಿ ಹೇಳಿದ ಘಟನೆಯು ಅವರ ಲಿಂಗ ಪೂಜಾ ನಿಷ್ಠೆಗೆ ಸಾಕ್ಷಿಯಾಗಿದೆ.
ಮುಂದೆ ಬಸವಣ್ಣನವರ ಶರಣಗಣಕ್ಕೆ ಸೇರಲು ದೇಶದ ವಿವಿಧೆಡೆಗಳಿಂದ ಬರುತ್ತಿದ್ದ ಭಕ್ತರನ್ನು ಕಲ್ಯಾಣ ಪುರವನ್ನು ಪ್ರವೇಶಿಸಲು ಮಡಿವಾಳ ಮಾಚಯ್ಯನವರ ಪರೀಕ್ಷೆಯಲ್ಲಿ ಉತ್ತೀರ್ಣರಾಗಲೇಬೇಕಿತ್ತು. ಹಾಗೆ ತಮ್ಮೆಲ್ಲ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ ನಿಜ ಶರಣರಿಗೆ ಮಾತ್ರ ಒಗೆದ ಮಡಿಯನ್ನು ಹಾಸಿ ಕಲ್ಯಾಣದ ಒಳಗೆ ಬರ ಮಾಡಿಕೊಳ್ಳುತ್ತಿದ್ದ ಮಾಚಯ್ಯನವರ ಘನತೆ ಮಹತ್ತರವಾದದ್ದು.
ಮಾಚಯ್ಯನವರು ಕೇವಲ ಶರಣರ ಬಟ್ಟೆಗಳನ್ನು ಮಡಿ ಮಾಡಿಕೊಡುವುದನ್ನು ಸಹಿಸದ ಕೆಲ ಕುಹಕಿಗಳು ಈ ಕುರಿತು ಬಿಜ್ಜಳ ಮಹಾರಾಜನಿಗೆ ದೂರು ಹೇಳಿದರು. ಇದರಿಂದ ತುಸು ಖತಿಗೊಂಡ ಬಿಜ್ಜಳನು ಮಡಿವಾಳ ಮಾಚಯ್ಯನವರನ್ನು ಕರೆಸಿ ತನ್ನ ಬಟ್ಟೆಗಳನ್ನು ಮಡಿ ಮಾಡಿಕೊಡಲು ಆದೇಶಿಸಿದನು.. ‘ ತಾನು ಕೇವಲ ಶರಣರ ಬಟ್ಟೆಗಳನ್ನು ಮಾತ್ರ ಮಡಿ ಮಾಡುತ್ತೇನೆ, ಭವಿಗಳ ಬಟ್ಟೆಗಳನ್ನಲ್ಲ’ ಎಂದು ವಿನಯದಿಂದಲೇ ಮಡಿವಾಳ ಮಾಚಿದೇವರು ಹೇಳಿದಾಗ ಕ್ರೋಧಿತನಾದ ಬಿಜ್ಜಳನು ತನ್ನ ಬಟ್ಟೆಗಳನ್ನು ಒಗೆದುಕೊಡಲೇಬೇಕು ಎಂದು ಒತ್ತಾಯಿಸಿದನು. ಹಾಗೆ ಒತ್ತಾಯಪೂರ್ವಕವಾಗಿ ಮಾಚಯ್ಯನವರಿಂದ ಬಟ್ಟೆಗಳನ್ನು ಮಡಿ ಮಾಡಿಸಿ ಧರಿಸಿದ ಬಿಜ್ಜಳ ಮಹಾರಾಜರಿಗೆ ಮೈಯಲ್ಲೆಲ್ಲ ನವೆ ಪ್ರಾರಂಭವಾಯಿತು… ಇದು ಮಾಚಯ್ಯನ ಶರಣ ಶಕ್ತಿಯ ಪ್ರಭಾವ ಎಂಬುದನ್ನು ಅರಿತರೂ ಪಟ್ಟು ಬಿಡದೆ ಆತನನ್ನು ಹಿಡಿದು ಕರೆ ತರಲು ಕುರುಡು ಕುಂಟರ ಸೇನೆಯನ್ನು ಕಳುಹಿಸಿದ ಬಿಜ್ಜಳ ಮಹಾರಾಜ. ತನ್ನನ್ನು ಸೆರೆಹಿಡಿಯಲು ಬಂದ ಕುರುಡರಿಗೆ ಕಣ್ಣನ್ನು, ಕುಂಟರಿಗೆ ಕಾಲನ್ನು ತನ್ನ ಭಕ್ತಿಯಿಂದ ದಯಪಾಲಿಸಿದ ಮಾಚಯ್ಯ ಉಳಿದ ಸೈನಿಕರನ್ನು ಮತ್ತು ಮದೋನ್ಮತ್ತ ಆನೆಯನ್ನು ಕೂಡ ಸದೆ ಬಡಿದನು. ತನ್ನ ಕ್ರಿಯೆಯಿಂದ ಪಶ್ಚಾತಾಪಗೊಂಡ ಬಿಜ್ಜಳ ಮಹಾರಾಜನು ಮಡಿವಾಳ ಮಾಚಯ್ಯನ ಕಾಯಕ ನಿಷ್ಠೆ, ಶರಣ ಧರ್ಮದಲ್ಲಿನ ಶ್ರದ್ದೆ ಮತ್ತು ವೀರತ್ವವನ್ನು ಕಂಡ ಬಿಜ್ಜಳ ಮಹಾರಾಜನು ವೀರ ಮಾಚಿದೇವ ಎಂದು ಆತನನ್ನು ಕರೆದು ಗೌರವಿಸಿದನು.
ಮುಂದೆ ಕಲ್ಯಾಣದ ಶರಣ ಗಣದಲ್ಲಿ ಒಬ್ಬನಾಗಿದ್ದ ಮಾಚಿದೇವ ತನ್ನ ಗುರುಗಳಾದ ಮಲ್ಲಿಕಾರ್ಜುನ ದೇವರ ಅಂತ್ಯಕಾಲದಲ್ಲಿ ಅವರ ಬಳಿ ಇರಲು ಒಂದೆರಡು ವಾರಗಳ ಕಾಲ ಕಲ್ಯಾಣದಿಂದ ಹಿಪ್ಪರಗಿಗೆ ಹೋಗಿದ್ದರು. ಅದೇ ಸಮಯದಲ್ಲಿ ಕಲ್ಯಾಣದಲ್ಲಿ ಉಂಟಾದ ಕ್ಲೇಶದಲ್ಲಿ ಮಂತ್ರಿ ಪದವಿಗೆ ರಾಜೀನಾಮೆಯಿತ್ತು ಬಸವಣ್ಣನವರು ಕೂಡಲಸಂಗಮದತ್ತ ಹೊರಟರೆ ಹರಳಯ್ಯ ಮತ್ತು ಮಧುವರಸರ ಮಕ್ಕಳ ವರ್ಣಸಂಕರ ವಿವಾಹ ನಡೆಯಿತು.
ಬಿಜ್ಜಳ ಮಹಾರಾಜನ ಅರಿವಿಗೆ ಬರುವ ಮುನ್ನವೇ ಆತನ ಮಗ ಸೋಮಿ ದೇವನು ಮಂತ್ರಿ ಕೊಂಡೆಯ ಮಂಚಣ್ಣನವರ ಮಾತಿಗೆ ಮರುಳಾಗಿ ವಧು-ವರರ ಪಾಲಕರನ್ನು ಮತ್ತು ವಧು ವರರನ್ನು ಎಳೆಹೂಟೆ ಶಿಕ್ಷೆಗೆ ಗುರಿಪಡಿಸಿದನು. ಇದನ್ನು ವಿರೋಧಿಸಿ ಬಿಜ್ಜಳನ ಬಳಿ ನ್ಯಾಯ ಕೇಳಲು ಬಂದ ಶರಣ ಗಣವೇ ಬಿಜ್ಜಳನನ್ನು (ಬೇರೆಯವರು ಬಿಜ್ಜಳ ಮಹಾರಾಜನನ್ನು ಹತ್ಯೆ ಮಾಡಲು ಪ್ರಯತ್ನಿಸಿ ಯಶಸ್ವಿಯಾದಾಗ) ಹತ್ಯೆಗೈದರು ಎಂದು ಎಲ್ಲ ತಪ್ಪನ್ನು ಶರಣದ ಮೇಲೆ ಹಾಕಿ ಅವರ ಮಾರಣಹೋಮ ಮಾಡಲು ಆದೇಶಿಸಿದನು.
ಅದೇ ಸಮಯಕ್ಕೆ ಕಲ್ಯಾಣಕ್ಕೆ ಮರಳಿದ ಮಾಚಿದೇವರು ಶರಣರ ಉಳಿವಿಗಾಗಿ ಕಂಕಣಬದ್ಧರಾಗಿ ನಿಂತರು. ಚನ್ನಬಸವಣ್ಣ, ಅಕ್ಕ ನಾಗಮ್ಮನವರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಯ ಕಡೆಗೆ ಹೊರಟ ಶರಣ ಗಣವನ್ನು, ವಚನಗಳ ಕಟ್ಟನ್ನು ಸಂರಕ್ಷಿಸುವ ನಿಟ್ಟಿನಲ್ಲಿ, ಎಲ್ಲರನ್ನು ಕಾಪಾಡುವ ಭಾರವನ್ನು ಹೊತ್ತರು.
ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮಾಚಿದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಉಳವಿಗೆ ತಲುಪಿಸಿದ ಸಾಹಸಿ ಮಾಚಯ್ಯ ವೀರ ಸೇನಾನಿ ಮಾಚಿದೇವ…. ಮಾಚಿ ತಂದೆ ಎನಿಸಿಕೊಂಡರು.
ಮಂಗಳವೇಡೆಯ ಮಹಾರಾಜರ ಆಶ್ರಯ ಪಡೆದು ಉಳವಿಯಲ್ಲಿಯೇ ವರ್ಣಕುಟಿಗಳನ್ನು ಕಟ್ಟಿಕೊಂಡು
ವಾಸಿಸಿದ ಎಲ್ಲಾ ಶರಣರು ತಮ್ಮ ಬಳಿ ಇರುವ ವಚನಗಳ ಕಟ್ಟುಗಳನ್ನು ನೂರಾರು ಪ್ರತಿಗಳನ್ನಾಗಿ ಮಾಡಿ ನಾಲ್ಕು ದಿಕ್ಕುಗಳಲ್ಲಿ ಕೊಂಡೊಯ್ಯಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲು ನೆರವಾದ ಮಡಿವಾಳ ಮಾಚಿದೇವರು ಒಂದೊಂದು ಗುಂಪುಗಳನ್ನು ಆಂಧ್ರ ಮಹಾರಾಷ್ಟ್ರ ಕರ್ನಾಟಕದ ಮೂಲೆ ಮೂಲೆಗಳಲ್ಲಿ ತಲುಪುವಂತೆ ಶರಣರನ್ನು ನಾಲ್ಕು ಗುಂಪುಗಳಲ್ಲಿ ಒಡೆದು ಎಲ್ಲರನ್ನೂ ತಂಡವಾಗಿ ಕಳುಹಿಸಿ ಕೊಟ್ಟರು.
ಮುಂದೆ ಚೆನ್ನಬಸವಣ್ಣನವರು ಉಳವೆಯಲ್ಲಿ ಲಿಂಗೈಕ್ಯರಾಗಲು ತಮ್ಮ ಮಹಾನ್ ಕರ್ತವ್ಯ ಪೂರೈಸಿ ಸಿಂದಗಿ ತಾಲೂಕಿನ ಕಲಿಪುರದಲ್ಲಿ ತಮ್ಮ ಗುರುವಾದ ವೀರಗಂಟೆಯರ ಜೊತೆ ಜೀವಂತ ಸಮಾಧಿಯಾದರು ಇಂದಿಗೂ ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯ ದಿನ ಮೂಲಾ ನಕ್ಷತ್ರದ ಸಮಯದಲ್ಲಿ ರಥೋತ್ಸವ ನಡೆಯುತ್ತದೆ. ಸುಮಾರು ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ. ವರ್ಷದಲ್ಲಿ ಎರಡು ಸಲ ಅಗ್ನಿ ಉತ್ಸವ ನಡೆಯತ್ತದೆ.
ಇಂತಿಪ್ಪ ಮಡಿವಾಳ ಮಾಚಿದೇವರು 345 ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ಕಲಿ ದೇವರ ದೇವ ಎಂಬ ಅಂಕಿತನಾಮವನ್ನು ಹೊಂದಿದ್ದಾರೆ. ಇವರು ತಮ್ಮ ವಚನಗಳಲ್ಲಿ ಸಮಾಜದಲ್ಲಿ ಹಾಸು ಹೊಕ್ಕಾಗಿರುವ ಮೌಡ್ಯ, ಅನಿಷ್ಟ ಆಚಾರಗಳನ್ನು ಖಂಡಿಸಿದ್ದು, ಭಕ್ತ ಮತ್ತು ಭವಿಯ ನಡುವಣ ವ್ಯತ್ಯಾಸಗಳನ್ನು ಹೇಳಿದ್ದಾರೆ.
ಮಾನವೀಯ ಸಂಬಂಧಗಳ ಮೌಲ್ಯಗಳ ಅವಶ್ಯಕತೆಯನ್ನು ಒತ್ತಿ ಹೇಳಿರುವ ಅವರು ತುಸು ನಿಷ್ಠುರವಾಗಿಯೇ ಸಮಾಜದ ಕಂದಾಚಾರಗಳನ್ನು, ದುರ್ಬಲರ ಶೋಷಣೆಯನ್ನು, ಶೈಕ್ಷಣಿಕವಾಗಿ ಅವಕಾಶ ನೀಡದೆ ಇರುವ ಸಮಾಜದ ಮೇಲ್ವರ್ಗದ ಜನರ ರೀತಿ ನೀತಿಗಳನ್ನು, ಮೇಲು ಕೀಳು ತಾರತಮ್ಯಗಳನ್ನು ಖಂಡಿಸಿ ಬರೆದಿದ್ದಾರೆ.
12ನೇ ಶತಮಾನದಲ್ಲಿ ಆಗಿ ಹೋದ ಶರಣರ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬರುವ ಮಡಿವಾಳ ಮಾಚಿದೇವರು ತಮ್ಮ ನೇರ ಮತ್ತು ನಿಷ್ಠುರ ನಡೆ-ನುಡಿಗಳಿಂದ ಜನರ ಮನದ ಕೊಳೆಯನ್ನು ತೊಳೆಯುವ ಮಡಿವಾಳ ಮಾಚಿದೇವರಾದರು, ಆದ್ದರಿಂದಲೇ ಬಸವಣ್ಣನವರು ಅವರನ್ನು ಮಾಚಿ ತಂದೆ ಎಂದು ಸಂಬೋಧಿಸಿ ಗೌರವಿಸಿದರು. ಶರಣರು ಕೇವಲ ಭಕ್ತಿ ದಾಸೋಹ ಲಿಂಗಪೂಜಾ ನಿಷ್ಠರು ಮಾತ್ರವಲ್ಲ ಸಮಯ ಬಂದಾಗ ವೀರಸೇನಾನಿಗಳೂ ಆಗಬಲ್ಲರು ಎಂದು ಸಮಸ್ತ ಜಗತ್ತಿಗೆ ಸಾರಿದ ಮಡಿವಾಳ ಮಾಚಿದೇವರಿಗೆ ಶರಣು ಶರಣಾರ್ಥಿ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ