ಸಹಜ ಬದುಕಿನ ಸಾಧಕ ಸಾಹಿತಿ ಶ್ರೀ ಅಯ್ಯಪ್ಪಯ್ಯ ಹುಡಾ

ಸಹಜ ಬದುಕಿನ ಸಾಧಕ ಸಾಹಿತಿ ಶ್ರೀ ಅಯ್ಯಪ್ಪಯ್ಯ ಹುಡಾ

ನಿಸರ್ಗ ಸಹಜ ಬದುಕು, ವಿನಯದ ಮೂರ್ತ ಸ್ವರೂಪ, ಶಿಖರದೆತ್ತರದ ಸಾಹಿತ್ಯ, ಸಂಸ್ಕೃತಿಯ ಕಂಪು ಬದುಕಿನುದ್ದಕ್ಕೂ ಪಸರಿಸಿದ ಸಾಹಿತ್ಯ ಭೂಷಣ, ನಿಷ್ಕಳಂಕ ವ್ಯಕ್ತಿತ್ವದ ಸಾಕಾರ ರೂಪ. ಶ್ರೀ ಅಯ್ಯಪ್ಪಯ್ಯನವರ ವ್ಯಕ್ತಿತ್ವದ ಕೈಗನ್ನಡಿ.

ನಮ್ಮ ರಾಯಚೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದ ಪುಟಗಳನ್ನು ತಿರುವಿದಾಗ 2003ರ ಏಪ್ರಿಲ್ 6 ರಂದು ನಡೆದ ಪ್ರಥಮ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ ರಾಯಸಿರಿ ಅದ್ಭುತ ಕೃತಿಯ ಪ್ರಧಾನ ಸಂಪಾದಕರಾಗಿ ಸೇವೆಗೈದ ಮಹನೀಯರು ಇಂದು 2025 ಮಾರ್ಚ್ 6ರಂದು ನಡೆಯುವ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ರಥದ ಸಾರಥಿಯಾಗಿದ್ದಾರೆ. ನಾವೆಲ್ಲ ಸಂಭ್ರಮದಿಂದ ಆಚರಿಸುತ್ತಿರುವ ಆರನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡದ ಮನಸ್ಸುಗಳೆಲ್ಲ ಒಟ್ಟುಗೂಡಿ ಸರ್ವಾನುಮತದಿಂದ ಆಯ್ಕೆಯಾಗಿರುವ ಸಮ್ಮೇಳನಾಧ್ಯಕ್ಷರಾದ ಶ್ರೀ ಅಯ್ಯಪ್ಪಯ್ಯ ಹುಡಾರವರ ಸಾಹಿತ್ಯ ಸಾಧನೆ ಹೆಜ್ಜೆಗಳನ್ನು ಪರಿಚಯಿಸುವ ಪ್ರಯತ್ನವೇ ಈ ಬರಹ

ಸರಳ ಸಜ್ಜನಿಕೆಯ ಸಾಹಿತಿಗಳು ಶ್ರೀ ಅಯ್ಯಪ್ಪಯ್ಯ ಹುಡಾ ರವರು. ಸ್ವಯಂ ಸೃಜನಶೀಲ ಸಾಹಿತಿಯಾಗಿರುವ ಇವರು ಗಂಭೀರ ಚಿಂತಕರು. ಪ್ರಧಾನವಾಗಿ ಕವನ ಸಂಕಲನ, ಮಕ್ಕಳ ಕವನಗಳ ಭೀಷ್ಮರಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಅವರ ಸಾಹಿತ್ಯಿಕ ಬರಹಗಳು ನಿರಂತರವಾಗಿ ಪ್ರಕಟಗೊಂಡಿವೆ. ಇವರು ಪ್ರಬುದ್ಧ ಲೇಖಕರಾಗಿದ್ದಂತೆ ಉತ್ತಮ ವಾಗ್ಮಿಗಳು ಹೌದು. ವಿಶೇಷವಾಗಿ ಉದಯೋನ್ಮುಖ ಬರಹಗಾರರಿಗೆ ಅನೇಕ ಒಳ್ಳೆಯ ವಿಚಾರಗಳ ಮಾರ್ಗದರ್ಶನ ಮಾಡುವಲ್ಲಿ ಅಗ್ರಗಣ್ಯರು.

ಬದುಕು ಬರಹದೆಡೆಗೆ
ಶ್ರೀ ಅಯ್ಯಪ್ಪಯ್ಯ ಬಸಯ್ಯ ಹುಡಾ ಅವರು ಹುಟ್ಟಿದ್ದು 02/04/ 1952 ರಲ್ಲಿ. ಮೂಲತಃ ರಾಯಚೂರ ಜಿಲ್ಲೆಯ ಸಿಂಧನುರ ತಾಲ್ಲೂಕು ಹುಡಾ ಗ್ರಾಮದವರು.

ಎಂ ಎ ಹಾಗೂ ಬಿಎಡ್ ಪದವಿಗಳನ್ನು ಪಡೆದ ಇವರು ಪತ್ರಿಕೋದ್ಯಮ ವಿಷಯದ ಡಿಪ್ಲೋಮಾ ಪದವಿ ಪಡೆದಿದ್ದಾರೆ. ವೃತ್ತಿಯಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ ಶಕ್ತಿನಗರದ ಕಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಬೆಳೆದು ಬಂದ ಕನ್ನಡ ಭಾಷೆಯ ಅಭಿಮಾನ ಬರಹರೂಪ ಪಡೆದು ಇಂದು ಸಾಧನೆಯ ಹೆಮ್ಮರವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ವರ್ತಿಗಳಾಗಿ ನಿರಂತರ ಸೇವೆಗೈದ ರಾಯಚೂರಿನ ಹೆಮ್ಮೆಯ ಸಾಹಿತಿಗಳಲ್ಲಿ ಒಬ್ಬರಾಗಿರುವುದು ಅಭಿಮಾನದ ಸಂಗತಿ.

ಸಾಹಿತ್ಯ ಭೂಷಣ
ಶ್ರೀಯುತ ಅಯ್ಯಪ್ಪಯ್ಯರವರು ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ 1986 ರಿಂದ 1993ರವರೆಗೆ ಏಳು ವರ್ಷಗಳ ಸೇವೆ, ಹೈದ್ರಾಬಾದ ಕರ್ನಾಟಕ ಕನ್ನಡ ಸಾಹಿತ್ಯ ಮಂಟಪದ ತಾಲೂಕು ಅಧ್ಯಕ್ಷರಾಗಿ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಹತ್ತಾರು ವರ್ಷಗಳಿಂದ ಕನ್ನಡ ಭಾಷೆ ಸಾಹಿತ್ಯ ಬೆಳವಣಿಗೆಯಲ್ಲಿ ಇವರ ಪಾತ್ರ ಸ್ಮರಣೀಯವಾದದ್ದು. ಜಿಲ್ಲೆಯ ಪ್ರತಿ ಸಾಹಿತ್ತಿಕ ಸಭೆ ಸಮಾರಂಭ ಉತ್ಸವ, ಸಮ್ಮೇಳನಗಳಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಭಾಗವಹಿಸುವವರು. ಸಿಂಧನೂರಿನ ಪ್ರಥಮ ಕನ್ನಡ ಸಮ್ಮೇಳನ, 2006 ರಲ್ಲಿ ಗಡಿನಾಡು ಉತ್ಸವದ ಕವಿಗೋಷ್ಠಿ ಅಧ್ಯಕ್ಷರಾಗಿ ಅಖಿಲ ಭಾರತ 73ನೇ ಕನ್ನಡ ಸಾಹಿತ್ಯ ಸಮ್ಮೇಳನ ಶಿವಮೊಗ್ಗದಲ್ಲಿ ಭಾಗವಹಿಸಿ ವಚನ ವಾಚಸಿದ ಹೆಮ್ಮೆ ಕರ್ನಾಟಕ ಸರ್ಕಾರದ 5ನೇ ತರಗತಿ ಪಠ್ಯಪುಸ್ತಕದಲ್ಲಿ ಇವರ ಮಕ್ಕಳ ಕವನ ನವಿಲು ಪ್ರಕಟವಾಗಿ ಇಡೀ ರಾಜ್ಯದ ಎಲ್ಲ ಮಕ್ಕಳ ಮನ ಗೆದ್ದಿದೆ. ರಾಜ್ಯಮಟ್ಟದ ಪತ್ರಿಕೆಗಳು ಮಾಸಿಕಗಳು ಸುಧಾ, ತರಂಗ, ಸುದ್ದಿ ಸಂಗಾತಿ, ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಸುದ್ದಿಮೂಲ, ರಾಯಚೂರು ವಾಣಿ ಮುಂತಾದ ಪತ್ರಿಕೆಗಳಲ್ಲಿ ನಿರಂತರವಾಗಿ ಕಥೆ, ಕವನ, ವಿಮರ್ಶೆಗಳು ಪ್ರಕಟವಾಗಿವೆ.

ಶಿಖರದೆತ್ತರದ ಸಾಹಿತ್ಯ – ಪ್ರಕಟಿತ ಕೃತಿಗಳು

ಚರಿತ್ರೆ, ಕವನ ಸಂಕಲನ, ಜೀವನ ಚರಿತ್ರೆ, ಮಕ್ಕಳ ಕವನ ಸಂಕಲನ, ಕಾದಂಬರಿ, ಹಾಸ್ಯ ಪ್ರಬಂಧಗಳು, ಹೈಕು ಸಂಕಲನ, ಪ್ರಬಂಧ ಸಂಕಲನ, ನಾಟಕ, ವಿಮರ್ಶೆ ಹೀಗೆ ಹತ್ತು ಹಲವು ಸಾಹಿತ್ಯ ಪ್ರಕಾರಗಳು ಅತ್ಯಂತ ಹುಲುಸಾಗಿ ಬೆಳೆದಿವೆ. ಜಿಲ್ಲೆಯ ಸಾಹಿತ್ಯ ಸಂಪತ್ತು ಶ್ರೀಮಂತಗೊಂಡಿದೆ.
ಕವನ ಸಂಕಲನಗಳು ಒಟ್ಟು 11 ಕವನ ಸಂಕಲನಗಳು ಪ್ರಕಟವಾಗಿದ್ದು ಅವುಗಳಲ್ಲಿ ಪ್ರಮುಖವಾಗಿ ಕವಿ ಕಿರಣ, ಕಾವ್ಯ ಕಿನ್ನರಿ, ಕಾವ್ಯ ಸೌರಭ, ಕಾವ್ಯ ಸುಪ್ರಭೆ, ಸಾವಿರದ ಸಾವಿರ ದ್ವಿಪದಿಗಳು, ನಮ್ಮ ಹೆಮ್ಮೆ ನಮ್ಮ ಮಸ್ಕಿ ಇತ್ಯಾದಿ. ಚಿಕ್ಕಸಗೂರಿನ ಚತ್ಕಳೆ ಮತ್ತು ಸಗರನಾಡಿನ ಶರಣ ಮಹಾತ್ಮ ಶ್ರೀ ಚರಬಸವೇಶ್ವರ ಎರಡು ಕಾದಂಬರಿಗಳು, ಅಂದ ಕಂದ, ಮಗು ನಗು ಎರಡು ಮಕ್ಕಳ ಕವನ ಸಂಕಲನಗಳು, ಅಂಕುರ, ಮಂದಾರ ಎರಡು ಹೈಕು ಸಂಕಲನಗಳು, ಪುಸ್ತಕ ಸಂಪದ, ಅವಲೋಕನ ಎರಡು ವಿಮರ್ಶೆಗಳು, ಕಂಗ್ಲೀಷ್ ಕರಾಮತ್ತು ಪ್ರಬಂಧ ಸಂಕಲನ, ಬಸವ ಮಹಾಮಾನವ, ಪ್ರಾಣ ವಾಯುವೆ ಪ್ರಾಣೇಶ ನಾಟಕಗಳು, ದೇವಸೂಗೂರು ಶ್ರೀ ಸೂಗೂರೇಶ್ವರ ದರ್ಶನ, ಮನ್ಸಲಾಪುರ ಶ್ರೀ ಸಿದ್ದಲಿಂಗೇಶ್ವರ ದರ್ಶನ, ಎರಡು ಚರಿತ್ರೆಗಳು, ಒಳಬಳ್ಳಾರಿ ಚನ್ನಬಸವ ತಾತ, ಶ್ರೀ ಸದ್ಗುರು ಮುಳ್ಳೂರು ಸಂಗಯ್ಯನವರು ಪಗಡದಿನ್ನಿ ಪುರಾಣ ಮಠ ಎರಡು ಜೀವನ ಚರಿತ್ರೆಗಳು, ರಸಾಯನ ಸಿಂಚನ ಹಾಸ್ಯ ಪ್ರಬಂಧಗಳು ಒಟ್ಟು 30 ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ ಹಿರಿಮೆ ಇವರಾದ್ದಾಗಿದೆ.

ಧ್ವನಿ ಸುರುಳಿಗಳು
ಮನಸಿರಿಯ ಬನದೇಶ -2003
ದೇವಸೂಗೂರು ಚಿನ್ಮಯ-2005
ಬನದೇಶನ ನಾಮಧ್ಯಾನ-2005
ಶರಣಮಾತೆ ಭೀಮಾಂಬೆ-2006
ಚಿನ್ಮಯಿ ಸ್ವರೂಪ ಕಲ್ಮಲಾ ಕರಿಯಪ್ಪ-2006
ಸುಕ್ಷೇತ್ರ ರಾಮಗಡ್ಡೆ ಭಕ್ತಿ ಕಿರಣ-2006
ಸೂಗೂರು ಸಂಭ್ರಮ-2007
ಕಸ್ತೂರಿಪ್ರಿಯ ಸೂಗುರಯ್ಯ-2009
ಗುಂಡಗುರ್ತಿ ಗುರುವರರು-2014
ಹೆಂಡತಿ ಚೆಲುವಿಗೆ ಗಂಡನು ಮರುಳಾದ-2015
ಶ್ರೀ ಸಿದ್ದಲಿಂಗೇಶ್ವರ ಸ್ವರ ಭಾವ ಸಂಗಮ-2016
ಶಿವನ ಕರುಣೆಯ ಕಂದ ಹೆಮ್ಮೆಡಗಿ ಬಸವಣ್ಣ-2019
ಶ್ರೀ ಮಮದಾಪುರ ಮಾತಾ ಮಾರಿಕಾಂಬ ಸುಪ್ರಭಾತ ಮತ್ತು ಭಕ್ತಿಗೀತೆಗಳು-2024

ಗೌರವ ಸಜ್ಜನಿಕೆಯ ಪ್ರತಿರೂಪ
ಪ್ರಶಸ್ತಿ ಪುರಸ್ಕಾರಗಳು
1) ಸ್ವಾಮಿ ವಿವೇಕಾನಂದರ 155ನೇ ಜಯಂತೋತ್ಸವದ ಪ್ರಯುಕ್ತ ರಾಜ್ಯಮಟ್ಟದ ಸದ್ಭಾವನಾ ಪ್ರಶಸ್ತಿ,
2) ಶ್ರೀ ಮಹಾಂತಯ್ಯ ಸ್ವಾಮಿ ಮಹಾಂತಮ್ಮ ಮುಂಡರಗಿ ಮಠ ಪ್ರತಿಷ್ಠಾನದಿಂದ “ಮಹಾಂತ ಶ್ರೀ” ಪ್ರಶಸ್ತಿ
3) ಕರ್ನಾಟಕ ರಕ್ಷಣಾ ವೇದಿಕೆ ರಾಯಚೂರು ಜಿಲ್ಲಾ ಘಟಕದಿಂದ ಕರವೇ “ಸೇವಾ ರತ್ನ “ಪ್ರಶಸ್ತಿ
4) ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ರಾಯಚೂರು. ವಿದ್ಯಾರ್ಥಿಗಳ ಸಂಘದಿಂದ 2024ರ “ಸಾಹಿತ್ಯ ಕ್ಷೇತ್ರದ ಸಾಧಕ” ಪ್ರಶಸ್ತಿ
1992 ರಲ್ಲಿ ಧಾರ್ವಾಡದ ರಾಜ್ಯಮಟ್ಟದ ಸಂಕ್ರಮಣ ವಾರ್ಷಿಕ ಸಾಹಿತ್ಯ ಕಾವ್ಯಸ್ಪರ್ಧೆಯಲ್ಲಿ ಪ್ರಶಸ್ತಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ 2020ರ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ, ಶಕ್ತಿ ವಾಹಿನಿ ಕನ್ನಡ ಬಳಗ ಬೆಂಗಳೂರು ಸಾಕ್ಷರತಾ ಸುಗ್ರಾಮ ಸಮಿತಿ ರಾಯಚೂರು ಅವರಿಂದ ಸನ್ಮಾನ ಹಾಗೂ ಅಭಿನಂದನಾ ಪತ್ರ ಹೀಗೆ ನಾಡಿನ ಮತ್ತು ಜಿಲ್ಲೆಯ ಸಾಹಿತ್ಯ ಪರ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆವಹಿಸಿ ಯುವ ಸಾಹಿತಿಗಳಿಗೆ ತಮ್ಮ ಅನುಭವದ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ.

ಮಾಗಿದ ಜೀವದ ನಿಷ್ಕಳಂಕ ವ್ಯಕ್ತಿತ್ವ

ಶ್ರೀ ಅಯ್ಯಪ್ಪಯ್ಯನವರು ಕುಟುಂಬ ಜೀವಿಗಳು, ಅವರಿಗೆ ತಮ್ಮ ತಂದೆ ತಾಯಿಗಳ ಬಗೆಗೆ ಅತ್ಯಂತ ಭಕ್ತಿ ಭಾವ. ಯಾರೇ ಹಿರಿಯರ ಬಗೆಗೂ ಅಷ್ಟೇ ಗೌರವ. ಪತ್ನಿ ಮಕ್ಕಳೊಂದಿಗೆ ಮೊಮ್ಮಕ್ಕಳೊಂದಿಗೆ ಸದಾ ಸಂತೋಷ ಸಂಭ್ರಮದಿಂದ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ತುಂಬಾ ಸ್ನೇಹಜೀವಿಗಳು. ತಮ್ಮ ಸರಳ ಜನಪದ ಆಡುಭಾಷೆಯಿಂದ ಸರ್ವರ ಮನೆಗೆಲ್ಲುವವರು. ಜನಬಳಕೆಯ ವ್ಯಕ್ತಿಯಾಗಿ ಸದಾ ಜನರ ಮಧ್ಯೆ ಜೀವಿಸುವವರು. ಅವರ ಸರಳ ಸಜ್ಜನಿಕೆ ಸದ್ವಿನಯವೇ ಅವರ ವಿಶೇಷತೆ. ಆಧುನಿಕ ವಿಚಾರಧಾರೆಯಲ್ಲು ಒಬ್ಬ ಸಾತ್ವಿಕ ಜೀವಿಯಾಗಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇವರು ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿರುವುದು ನಿಜಕ್ಕೂ ಸಾರ್ಥಕತೆ ಪಡೆದಿದೆ.

 

 

 

 

 

 

 

 

 

 

ಶ್ರೀಮತಿ ರೇಖಾ ಪಾಟೀಲ
ರಾಯಚೂರು

Don`t copy text!