ಕರ್ನಾಟಕ ಮಾಧ್ಯಮ ಪ್ರಶಸ್ತಿ ಪುರಸ್ಕೃತ ಸುಶೀಲೇಂದ್ರ ನಾಯಕ್
ನಾನು ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸುತ್ತಿದ್ದ ಮೊದಲ ದಿನಗಳಲ್ಲಿ ನನಗೆ ಆಗಾಗ ಸಲಹೆ ಸೂಚನೆಗಳನ್ನು ನೀಡಿ ಸಂದೇಶ ಕಳುಹಿಸುತ್ತಿದ್ದವರು, ಪತ್ರಿಕಾ ರಂಗದಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸುತ್ತಿದ್ದ ಅವರ ಹೆಸರನ್ನು ಹೊತ್ತ ಮೊಬೈಲ್ ಕರೆಯನ್ನು ನೋಡಿ ಡವಡವಿಸುತ್ತಿದ್ದ ಎದೆಯನ್ನು ಸಂಭಾಳಿಸಿಕೊಂಡು ಕರೆಯನ್ನು ಸ್ವೀಕರಿಸಿ ಮಾತನಾಡಿದರೆ ಅತ್ತಲಿಂದ ಕೇಳಿಸಿದ್ದು ಅತ್ಯಂತ ಮೃದು ದನಿಯ,ತಾಯಿ ಹೃದಯದ ಆಪ್ತ ದ್ವನಿಯ ಪತ್ರಕರ್ತರೂ, ಸಂಪಾದಕರೂ ಆದ ಸುಶೀಲೇಂದ್ರ ನಾಯಕ್. ಮುಂದೆ ಅವರ ಜೊತೆಗಿನ ಕೆಲವೇ ನಿಮಿಷಗಳ ಮಾತುಕತೆಯಲ್ಲಿ ನನ್ನ ಭಯ, ಹಿಂಜರಿಕೆಗಳನ್ನು ಓಡಿಸಿ ಭರವಸೆಯನ್ನು ತುಂಬಿದವರು ಅವರು. ಈಗಲೂ ಆಗಾಗ ಕರೆ ಮಾಡಿ ಲೇಖನಗಳ ಕುರಿತು ಸಲಹೆ ಸೂಚನೆಗಳನ್ನು ಅವರು ನೀಡುತ್ತಾರೆ. ಪತ್ರಿಕೆಯ ಆ ದಿನದ ಅತ್ಯುತ್ತಮ ಲೇಖನಗಳ ಪಟ್ಟಿ ಮಾಡುವ ಪತ್ರಿಕೆಯ ಓದುಗರೊಬ್ಬರ ಆಯ್ಕೆಯಲ್ಲಿ ಹಲವಾರು ಬಾರಿ ಪ್ರಥಮ ದ್ವಿತೀಯ ಸ್ಥಾನಗಳನ್ನು ಗಳಿಸಿರುವ ನನಗೆ ಅಭಿನಂದನೆಗಳನ್ನು ತಿಳಿಸುತ್ತಾರೆ.
ಒಂದು ಪತ್ರಿಕೆಯ ಸಂಪಾದಕರಾಗಿ ಒತ್ತಡದ ಕಾರ್ಯ ಬಾಹುಳ್ಯವನ್ನು ಹೊಂದಿರುವ ಅವರ ಈ ನಡೆ ಆದರ್ಶ ಪ್ರಾಯವಾದದ್ದು.. ಹೊಸ ಲೇಖಕರಿಗೆ ದಾರಿ ತೋರುವಂಥದ್ದು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಘನ ಸರ್ಕಾರದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು
ಇತ್ತೀಚೆಗೆ ಕಲ್ಪವೃಕ್ಷ ನಗರಿ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಕನ್ನಡ ಪತ್ರಕರ್ತರ ಸಮ್ಮೇಳನದಲ್ಲಿ 2023 ನೇ ಸಾಲಿನ ಕನ್ನಡ ಪತ್ರಿಕಾ ರಂಗದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸುಶೀಲೇಂದ್ರ ನಾಯಕ್ ರವರೇ ಈ ಸಂಪಾದಕರು.
ಪತ್ರಿಕಾರಂಗದ ಭೀಷ್ಮ ಎಂದೇ ಹೆಸರಾದ ಮೊಹರೆ ಹಣಮಂತರಾಯರ ಮೊಮ್ಮಗನಾದ ಸುಶೀಲೇಂದ್ರ ನಾಯಕ ಅವರು ಪತ್ರಿಕೋದ್ಯಮವನ್ನು ಬಳುವಳಿಯಾಗಿ ಪಡೆದಿದ್ದಾರೆ ಎಂದರೆ ತಪ್ಪಿಲ್ಲ. 1961ರ ಸಪ್ಟಂಬರ್ 4ರಂದು ಜನಿಸಿದ ನಾಯಕ್ ಅವರು ಪ್ರಾಥಮಿಕ, ಪ್ರೌಢ ಮತ್ತು ಪಿಯು ವಿದ್ಯಾಭ್ಯಾಸವನ್ನು ವಿಜಯಪುರದಲ್ಲಿ ಪೂರೈಸಿ ಮುಂದೆ ವಾಣಿಜ್ಯ ಪದವಿಯನ್ನು ವಿಜಯಪುರದ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದಿಂದ ಪಡೆದರು.ಪದವಿಯನ್ನು ಪೂರೈಸುತ್ತಲೇ ಉದ್ಯೋಗಕ್ಕಾಗಿ ಅರಸದೆ ತಮ್ಮ ಮನೆತನದ ಮೂಲವೃತ್ತಿಯಾದ ಪತ್ರಿಕಾ ರಂಗಕ್ಕೆ ಕಾಲಿಟ್ಟರು.
ಪತ್ರಿಕೋದ್ಯಮದ ವಾತಾವರಣದಲ್ಲಿಯೇ ಬೆಳೆದಿದ್ದ ಸುಶೀಲೇಂದ್ರ ಅವರ ತಂದೆ ಟಿ ಕೆ ನಾಯಕ ಅವರು ಕನ್ನಡದ ಅತ್ಯಂತ ಹಳೆಯ ವಾರಪತ್ರಿಕೆ ‘ಕರ್ನಾಟಕ ವೈಭವ’ದ ಸಂಪಾದಕರಾಗಿದ್ದರು ಮತ್ತು ದೊಡ್ಡಪ್ಪ ವಿ ಬಿ ನಾಯಕ್ ಅವರು ಸಂಯುಕ್ತ ಕರ್ನಾಟಕದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸಹೋದರ ಗೋಪಾಲ ನಾಯಕ್ ಅವರು ಕೂಡ ಸಂಯುಕ್ತ ಕರ್ನಾಟಕದ ಅವಿಭಜಿತ ವಿಜಯಪುರ ಆವೃತ್ತಿಯ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೀಗೆ ಅಜ್ಜ ತಂದೆ, ಚಿಕ್ಕಪ್ಪರ ನಡುವೆ ಬೆಳೆದ ಸುಶೀಲೇಂದ್ರ ಮತ್ತು ಅವರ ಸಹೋದರ ಗೋಪಾಲ ನಾಯಕ್ ಅವರು ತಾವು ಕೂಡ ಪತ್ರಿಕೋದ್ಯಮದ ತಿರುಗಣೆಯಲ್ಲಿ ಇಳಿದದ್ದು ಅಚ್ಚರಿಯ ವಿಷಯವೇನಾಗಿರಲಿಲ್ಲ.
ಸಂದರ್ಶನ ಪತ್ರಿಕೆಯಲ್ಲಿ 1982 ರಿಂದ 90ರವರೆಗೆ ಪತ್ರಕರ್ತರಾಗಿ ಕಾರ್ಯನಿರ್ವಹಿಸಿದ ಅವರು 1990 ರಿಂದ 94ರ ಅವಧಿಯಲ್ಲಿ ಸಂಯುಕ್ತ ಕರ್ನಾಟಕದ ಪ್ರಾದೇಶಿಕ ವರದಿಗಾರರಾಗಿ ಕಾರ್ಯನಿರ್ವಹಿಸಿದರು.
ಮುಂದೆ 1994 ರಿಂದ 96 ರ ಅವಧಿಗೆ ಸಂದರ್ಶನ ಪತ್ರಿಕೆಯ ಉಪಸಂಪಾದಕರಾಗಿ, 2000ನೇ ಇಸವಿಯಿಂದ ಇಲ್ಲಿಯವರೆಗೂ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿಜಯಪುರದ ಯುವಕ ವಿಕಾಸ ಕೇಂದ್ರ ಎಂಬ ಸ್ವಯಂ ಸೇವಾ ಸಂಸ್ಥೆಯೊಂದು ಹೊರಡಿಸುವ ‘ವಿಕಾಸ ಮಾಲೆ’ ಎಂಬ ಪತ್ರಿಕೆಯ ಸಂಪಾದಕರಾಗಿಯೂ ಕೆಲ ಕಾಲ ಕಾರ್ಯನಿರ್ವಹಿಸಿದರು. ಬೆಳಗಾವಿಯ ನಾಡೋಜ ಪತ್ರಿಕೆಗೆ ಬಿಜಾಪುರ ಆವೃತ್ತಿಯ ಸ್ಥಾನೀಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ ಇವರು ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಟೈಮ್ಸ್ ಆಫ್ ಇಂಡಿಯಾದ ವಿಜಯಪುರ ಆವೃತ್ತಿಯ ಸ್ಥಾನೀಯ ಸಂಪಾದಕತ್ವವನ್ನು 2007ರಿಂದ 2022ರವರೆಗೆ ವಹಿಸಿಕೊಂಡು, ಪದ ಜೋಡಣಕಾರರಾಗಿ ಅವಿಭಜಿತ ವಿಜಯಪುರ ಜಿಲ್ಲೆಯ ಸಮಗ್ರ ಮಾಹಿತಿಯು ಇಡಿ ದೇಶಕ್ಕೆ ಲಭ್ಯವಾಗುವಂತೆ ಮಾಡಿದರು. ಆಂಧ್ರಪ್ರದೇಶದ ಈನಾಡು ಪತ್ರಿಕೆಗೆ ಆವೃತ್ತಿ ಸಂಗ್ರಾಹಕರಾಗಿಯೂ ಸುದೀರ್ಘ ಕಾಲ ಇವರು ಕಾರ್ಯ ನಿರ್ವಹಿಸಿದರು.
ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳನ್ನು ಬಲ್ಲ ಸುಶೀಲೇಂದ್ರ ನಾಯಕರು ಮುದ್ರಣ ಕಾರ್ಯಕ್ಕೆ ಅವಶ್ಯಕವಾದ ಟೈಪ್ ರೈಟಿಂಗ್, ಟೆಲಿ ಪ್ರಿಂಟಿಂಗ್ ಮತ್ತು ಮತ್ತು ಕಂಪ್ಯೂಟರ್ ಆಪರೇಟಿಂಗ್ ನಲ್ಲಿಯೂ ಕೂಡ ಪರಿಣಿತರಾಗಿದ್ದಾರೆ.
ಪತ್ರಿಕಾ ವರದಿಗಳ ಪ್ರಕಟಣೆಗಳ ಜೊತೆ ಜೊತೆಗೆ ಲೇಖನಗಳನ್ನು ವ್ಯಕ್ತಿ ವಿಶೇಷಗಳನ್ನು ಬರೆಯುವ ಇವರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮತ್ತು ಸ್ಟ್ಯಾಂಪ್ ಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದಾರೆ.
ಪತ್ರಿಕೋದ್ಯಮದಲ್ಲಿ ತಾತನಿಂದ ಆರಂಭವಾದ ಈ ಸರಪಳಿ ಸುಶೀಲೇಂದ್ರ ನಾಯಕರ ಪುತ್ರಿ ಸುಷ್ಮಾ ನಾಯಕರವರೆಗೆ ಮುಂದುವರೆದಿದ್ದು ಆಕೆಯೂ ಕೂಡ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಇತ್ತೀಚಿಗೆ ಪಿ ಎಚ್ ಡಿ ಯನ್ನು ಚಿನ್ನದ ಪದಕದೊಂದಿಗೆ ಪೂರೈಸಿ ತಮ್ಮ ಹಿರಿಯರ ಪರಂಪರೆಯನ್ನು ಎತ್ತಿ ಹಿಡಿದಿದ್ದು ಕುಟುಂಬದ ನಾಲ್ಕನೇಯ ತಲೆಮಾರಿನ ಪತ್ರಿಕೋದ್ಯಮಿಯಾಗಿ ಹೊರಹೊಮ್ಮಲಿದ್ದಾರೆ.
ಪತ್ರಿಕೋದ್ಯಮಕ್ಕೆ ಬೇಕಾದ ಶಿಸ್ತು, ಸತ್ಯಪರತೆ,, ಪ್ರಾಮಾಣಿಕತೆ, ಕಾರ್ಯ ಕೌಶಲ ಮತ್ತು ಪತ್ರಿಕೆಗಳ ಸುದ್ದಿ ಸಂಪಾದನೆಯಲ್ಲಿ ಎತ್ತಿದ ಕೈಯಾಗಿರುವ ನಾಯಕರವರು ಕುಟುಂಬದ ಹಿರಿಯಣ್ಣನಂತೆ ಸಾಕಷ್ಟು ಜನ ಲೇಖಕರನ್ನು ಬರೆಯಲು ಪ್ರೋತ್ಸಾಹಿಸಿ ಅವರ ಲೇಖನಗಳನ್ನು ಪ್ರಕಟಿಸಿ ಬೆನ್ನು ತಟ್ಟಿದ್ದಾರೆ.. ಕಳೆದ 42 ವರ್ಷಗಳಿಂದ ಪತ್ರಿಕೋದ್ಯಮವನ್ನೇ ಹಾಸಿ ಹೊದ್ದಿರುವ, ಪತ್ರಿಕೋದ್ಯಮವನ್ನೇ ಬದುಕಿನ ಉಸಿರಾಗಿಸಿಕೊಂಡಿರುವ ಸುಶೀಲೇಂದ್ರ ನಾಯಕರದು ಸತ್ಯ ಶುದ್ಧವಾದ ಕಾಯಕ.
ತಮ್ಮ ಪತ್ರಿಕಾ ವರದಿಗಾರಿಕೆ ಮತ್ತು ಪತ್ರಿಕಾ ಸಂಪಾದಕ
ವೃತ್ತಿಯಿಂದ ಸಾಕಷ್ಟು ಜನ ಮೆಚ್ಚುಗೆ ಗಳಿಸಿರುವ ನಾಯಕ ರವರು ತಮ್ಮ 63 ನೇ ವಯಸ್ಸಿನಲ್ಲಿಯೂ ಸಕ್ರಿಯವಾಗಿ ಪತ್ರಿಕಾ ಪ್ರಕಟಣೆಯಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚಿಗೆ ಕರ್ನಾಟಕ ರಾಜ್ಯದ ಮಾಧ್ಯಮ ಪ್ರಶಸ್ತಿ ಪುರಸ್ಕಾರವು ಲಭಿಸಿದ್ದು ಅವರ ಕಾರ್ಯದಕ್ಷತೆಗೆ ಹಿಡಿದ ಕನ್ನಡಿಯಾಗಿದೆ.
ಸುಶೀಲೇಂದ್ರ ನಾಯಕ ಅವರು ಇನ್ನೂ ಹೆಚ್ಚು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಸಕ್ರಿಯರಾಗಿ ಕಾರ್ಯ ನಿರ್ವಹಿಸಿ ಯುವ ಲೇಖಕರಿಗೆ ಬರಹಗಾರರಿಗೆ ದಾರಿ ತೋರಿಸಲಿ ಎಂದು ಆಶಿಸುವ
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್