ಬದುಕಿನ ಪಯಣದಲ್ಲಿ ವೃತ್ತಿಯ ಸೊಗಡು- ಗ್ರಂಥ ಲೋಕಾರ್ಪಣೆ
೨೩-೩-೨೦೨೫, ರವಿವಾರ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಆರ್. ಎಂ. ನಾಯನೇಗಲ ಇವರು ಬರೆದ “ಬದುಕಿನ ಪಯಣದಲ್ಲಿ ವೃತ್ತಿಯ ಸೊಗಡು” ಗ್ರಂಥ ಲೋಕಾರ್ಪಣಿಗೊಳ್ಳುವುದರ ತನ್ನಿಮಿತ್ತ್ ಈ ಲೇಖನ
ಬಾಗಲಕೋಟೆಯ ಬಿ.ವಿ.ವಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಬಸವೇಶ್ವರ ವಾಣಿಜ್ಯ
ಮಹಾವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಕರಾಗಿ ನಿವೃತ್ತಿಹೊಂದಿ ವಿಶ್ರಾಂತ ಜೀವನ ನಡೆಸುತ್ತಿರುವ
ಪ್ರೊ. ಆರ್. ಎಮ್. ನಾಯನೇಗಲ ಇವರು ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಹುಟ್ಟಿ, ಪ್ರಾಥಮಿಕ ಹಾಗೂ
ಪ್ರೌಢ ಶಿಕ್ಷಣವನ್ನು ಅಲ್ಲಿಯೇ ಪೂರೈಸಿ, ಪಿ.ಯು.ಸಿ. ಹಾಗೂ ಪದವಿ ಶಿಕ್ಷಣಕ್ಕಾಗಿ ಬಾಗಲಕೋಟೆಗೆ ಬಂದು,
ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪದವಿ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ
ಅರ್ಥಶಾಸ್ತ್ರ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ಪಡೆದವರು.
ಇಲ್ಲಿಯ ಸ್ನಾತಕೋತ್ತರ ಪದವಿ ಪಡೆದ ಕೆಲವೇ ದಿನಗಳಲ್ಲಿ ಅವರು ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿರುವ
ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಎಸ್. ಎಸ್. ಖೂಬಾ ಬಸವೇಶ್ವರ
ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದವರು. ಆರು ವರ್ಷ ಬಸವಕಲ್ಯಾಣದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ, ಬಾಗಲಕೋಟೆಗೆ ಬಂದು ಅ.ವಿ.ವಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ
ಕಾರ್ಯನಿರ್ವಹಿಸಿದವರು. ಈ ಮಧ್ಯೆ ಅದೇ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.
ತಾವು ಪದವಿ ಶಿಕ್ಷಣ ಪಡೆದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುವ ಸುವರ್ಣಾವಕಾಶ ಪಡೆದ
ಭಾಗ್ಯವಂತರೆಂದು ಹೇಳಬಹುದು ಅವರು ಒಬ್ಬ ಶ್ರೇಷ್ಠ ಅರ್ಥಶಾಸ್ತ್ರ ಪ್ರಾಧ್ಯಾಪಕರೆಂದು ಅವರ ವಿದ್ಯಾರ್ಥಿಗಳೇ
ದಶಕಗಳಕಾಲ ಹೇಳುವ ಮಾತು.
ಪ್ರೊ. ಆರ. ಎಮ್. ನಾಯನೇಗಲ ಅವರು ಒಬ್ಬ ದಕ್ಷ ಪ್ರಾಧ್ಯಾಪಕರಷ್ಟೇ ಅಲ್ಲದೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ
ಗುರುಗಳೆನಿಸಿದವರು. ಶಿಸ್ತು ಸಮಯಪ್ರಜ್ಞೆ ದಕ್ಷತೆ, ಹಾಗೂ ಪ್ರಾಮಾಣಿಕತೆಗೆ ಮಾದರಿಯಾದವರು.
ಅರ್ಥಶಾಸ್ತ್ರ ವಿಷಯದಲ್ಲಿ ಅಪಾರ ಜ್ಞಾನಪಡೆದಿರುವ ಅವರು ತಮ್ಮ ಜ್ಞಾನದ ಬುತ್ತಿಯನ್ನು ಪ್ರಾಮಾಣಿಕವಾಗಿ
ವಿದ್ಯಾರ್ಥಿಗಳಗೆ ಹಂಚಿದವರು. ಅವರು ತಮ್ಮ ಬದುಕಿನ ಪಯಣದಲ್ಲಿ ಪಟ್ಟ ಕಷ್ಟ, ಕಂಡುಂಡ ನೋವು,
ಬೋಧನೆಯಲ್ಲಿ ಅನುಭವಿಸಿದ ಆನಂದದ ಕ್ಷಣವನ್ನೆಲ್ಲ ಒಂದೆಡೆ ಸಂಗ್ರಹಿಸಿ “ಬದುಕಿನ ಪಯಣದಲ್ಲಿ ವೃತ್ತಿಯ
ಸೊಗಡು” ಎಂಬ ಗ್ರಂಥ ಬರೆದು ಅದನ್ನು ಜ್ಞಾನಲೋಕಕ್ಕೆ ಅರ್ಪಿಸಿರುವುದು ಒಬ್ಬ ಪ್ರಾಧ್ಯಾಪಕನ
ಮನದಾಳದ ಭಾವನೆಯ ದ್ಯೋತಕವೆಂಬುದರಲ್ಲಿ ಅನ್ಯಮಾತಿಲ್ಲ.
ಒಬ್ಬ ಪ್ರಧ್ಯಾಪಕ ತಾನು ಸಂಪಾದಿಸಿದ ಜ್ಞಾನವನ್ನು ವಿದ್ಯಾರ್ಥಿವೃಂದಕ್ಕೆ ಹಂಚಿ, ಆ ಅನುಭವವನ್ನು
ಅಕ್ಷರರೂಪಕ್ಕಿ, ಗ್ರಂಥಸ್ಥಗೊಳಿಸಿ, ಪ್ರಕಟಿಸುವುದು ಪ್ರಾಧ್ಯಾಪಕ ಪರಿವಾರಕ್ಕೆ ಒಂದು ಮಾದಲಿ.
ಅವರ ಈ ಸಾಧನೆ, ಬೋಧನೆ ಹಾಗೂ ಗ್ರಂಥ ರಚನೆಗೆ ನೂರೊಂದು ನಮನ.
-ಡಾ. ಸಿದ್ಧರಾಮಯ್ಯ ಮಠಪತಿ, ಗೊರಬಾ