ಗುಳೇದಗುಡ್ಡ ಖಣ
ಜಗತ್ತಿನಲ್ಲಿ ಭಾರತೀಯರೇ ಪ್ರಪ್ರಥಮ ಬಟ್ಟೆ ಉತ್ಪಾದಕರು ಎಂದು ಇತಿಹಾಸಕಾರರು ಒಮ್ಮತದಿಂದ ಒಪ್ಪಿಕೊಂಡಿದ್ದಾರೆ. ಹಾಗೆಯೇ ಭಾರತದೇಶವು ಹತ್ತಿಬಟ್ಟೆಯ ತಯಾರಿಕೆಯ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿದೆ. ಭಾರತ ದೇಶದಲ್ಲಿ ಪ್ರಾರಂಭಕಾಲದಿಂದಲೂ ಗುಡಿ ಕೈಗಾರಿಕೆಗಳಲ್ಲಿ ಕೈಮಗ್ಗ ಉದ್ದಿಮೆ ಪ್ರಮುಖವಾಗಿದ್ದು, ಹೆಚ್ಚು ಜನರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ.
ಭಾರತದಲ್ಲಿ ಸಿದ್ಧಗೊಂಡ, ಅದರಲ್ಲೂ ಪ್ರಮುಖವಾಗಿ ಕರ್ನಾಟಕದಲ್ಲಿ ಉತ್ಪಾದಿಸಲ್ಪಟ್ಟ ಬಟ್ಟೆಗಳನ್ನು ಗ್ರೀಕ್ ದೇಶಕ್ಕೆ ರಪ್ತು ಮಾಡಲಾಗುತ್ತಿತ್ತು ಎಂದು ತಿಳಿದುಬರುತ್ತದೆ. ಭಾರತಕ್ಕೆ ಭೇಟಿ ಕೊಟ್ಟ ವಿದೇಶಿ ಪ್ರವಾಸಿಗರಾದ ಪಾಹಿಯಾನ್, ಹುಯೆನತ್ಸಾಂಗ್, ವಾರ್ತಯನ್, ಬರ್ಮಿಲ್ ಮತ್ತು ಮಾರ್ಕೊಪೋಲೊ ಮುಂತಾದವರು ತಮ್ಮ ಪ್ರವಾಸ ಕಥನಗಳಲ್ಲಿ ಭಾರತೀಯರ ಕೈಮಗ್ಗ ಉದ್ದಿಮೆಯ ವೈಭವವನ್ನು ಪ್ರಸ್ತಾಪಿಸಿದ್ದಾರೆ.
ಭಾರತದಲ್ಲಿ ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳ, ಬಿಹಾರ ಒರಿಸ್ಸಾ, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕೈಮಗ್ಗದಿಂದ ನೇಯ್ದ ಬಟ್ಟೆಗಳು ತಯಾರಾಗುತ್ತವೆ. ಕರ್ನಾಟಕದಲ್ಲಿ ರೇಷ್ಮೆ ಮತ್ತು ನೂಲಿನ ಬಟ್ಟೆಗಳು ಹೆಚ್ಚಿನ ಪ್ರಮಾಣದಲ್ಲಿ ತಯಾರಾಗುತ್ತವೆ. ಹೀಗೆ ಕರ್ನಾಟಕದಲ್ಲಿ ತಯಾರಾಗುವ ರೇಷ್ಮೆ ಹಾಗೂ ನೂಲಿನ ವಿಶೇಷ ಬಟ್ಟೆಗಳಲ್ಲಿ ಬಾಗಲಕೋಟ ಜಿಲ್ಲೆಯ ಬಟ್ಟೆಗಳು ಪ್ರಮುಖವಾದವು.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆ ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತವಾಗಿದೆ.
ಚಾಲುಕ್ಯರ ನಾಡಾದ ಇದು ಕೆಲವು ವಿಶೇಷ ವಸ್ತುಗಳ ಉತ್ಪನ್ನದಿಂದ ಪ್ರಸಿದ್ಧವಾಗಿದೆ. ಅಮೀನಗಡ ಕರದಂಟು, ಗಲಗಲಿ ಪೇಡೆ,ಗುಳೇದಗುಡ್ಡ ರಬಡಿ ಇಲ್ಲಿಯ ವಿಶೇಷ ಪ್ರಸಿದ್ಧ ತಿನಿಸುಗಳು. ಅಂತೆಯೇ ವಸ್ತ್ರಗಳ ಉತ್ಪಾದನೆಯಲ್ಲಿಯೂ ಬಾಗಲಕೋಟೆ ಜಿಲ್ಲೆ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಗುಳೇದಗುಡ್ಡ ಅಮೀನಗಡ,ಸೂಳಿಭಾವಿ,ನಾಗರಾಳ, ರಬಕವಿ, ಬನಹಟ್ಟಿ ಮತ್ತು ಕಮತಗಿ ಈ ಜಿಲ್ಲೆಯ ವಸ್ತ್ರೋದ್ಯಮದ ಪ್ರಮುಖ ನೆಲೆಗಳಾಗಿವೆ. ಇಲಕಲ್ಲ ಸೀರೆ ಬನಹಟ್ಟಿಯ ಪತ್ತಲಗಳು, ಕಮತಗಿ ಪಟಗಾ, ಹವೇಲಿ ಟವೆಲ್ ಈ ಜಿಲ್ಲೆಯ ಪ್ರಸಿದ್ಧ ವಸ್ತ್ರಗಳು. ಇವುಗಳ ಸಾಲಿಗೆ ಸೇರುವ ಇನ್ನೊಂದು ಪ್ರಸಿದ್ಧ ವಸ್ತ್ರವೇ ಗುಳೇದಗುಡ್ಡ ಖಣ
ಉತ್ತರ ಕರ್ನಾಟಕದ ಜನ ತಮ್ಮದೇ ಆದ ವಿಶಿಷ್ಟ ವಸ್ತ್ರವಿನ್ಯಾಸಗಳನ್ನು ಹೊಂದಿದ್ದಾರೆ. ಪುರುಷರು ಧೋತರ ಉಟ್ಟು, ನಿಲುವಂಗಿ ತೊಟ್ಟು, ತಲೆಗೆ ರುಮಾಲು ಸುತ್ತುತ್ತಾರೆ. ಹೆಣ್ಣುಮಕ್ಕಳು ಇಲಕಲ್ಲ ಸೀರೆಯುಟ್ಟು, ಗುಳೇದಗುಡ್ಡ ಖಣದ ಕುಪ್ಪಸ ಧರಿಸುತ್ತಾರೆ. ಗ್ರಾಮೀಣ ಭಾಗದ ಹಳೆತಲೆಮಾರಿನ ಜನರು ಇಂದಿಗೂ ಈ ಉಡುಪುಗಳನ್ನೇ ಧರಿಸುತ್ತಾರೆ. ಹೆಣ್ಣುಮಕ್ಕಳು ಧರಿಸುವ ಇಲಕಲ್ಲ ಸೀರೆ ಮತ್ತು ಗುಳೇದಗುಡ್ಡ ಖಣ ಕೇವಲ ಉತ್ತರ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿಯೂ ಬೇಡಿಕೆಯನ್ನು ಹೊಂದಿದ ವಸ್ತ್ರಗಳಾಗಿವೆ.
ಇಲಕಲ್ಲ ಸೀರೆಯ ಜೊತೆಗೆ ಅತ್ಯಂತ ಹೊಂದಾಣಿಕೆಯಾಗುವಂತೆ ಧರಿಸಲು ಗುಳೇದಗುಡ್ಡದ ಖಣವೇ ಬೇಕು . ಹಾಗಾಗಿ ಇಲಕಲ್ಲ ಸೀರೆ ಮತ್ತು ಗುಳೇದಗುಡ್ಡದ ಖಣಕ್ಕೆ ಅವಿನಾಭವ ಸಂಬಂಧವಿದೆ. ಅದನ್ನು ಕುರಿತು ಈ ಭಾಗದಲ್ಲಿ ” ಉಟ್ಟರೆ ಇಲಕಲ್ಲ ಸೀರೆ ಉಡಬೇಕು ತೊಟ್ಟರೆ ಗುಳೇದಗುಡ್ಡ ಖಣ ತೊಡಬೇಕು “ ಎಂಬ ಗಾದೆ ಮಾತೊಂದು ಪ್ರಚಲಿತದಲ್ಲಿದೆ.ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಇವೆರಡು ವಸ್ತ್ರಗಳು ಸಂಸ್ಕೃತಿಯ ಪ್ರತೀಕಗಳಾಗಿವೆ. ಹೀಗಾಗಿ ಇಲಕಲ್ಲ ಸೀರಿಯಂತೆಯೇ ಗುಳೇದಗುಡ್ಡ ಖಣಕ್ಕು ಕರ್ನಾಟಕದ ಹಲವು ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬೇಡಿಕೆ ಹೆಚ್ಚು.
ಮಹಾರಾಷ್ಟ್ರದ ಪೂನಾ, ಸೋಲಾಪುರ್, ನಾಸಿಕ್, ಮುಂಬೈ, ಅಕ್ಕಲಕೋಟೆ, ಪಂಡರಾಪುರ, ಸೂರತ್ ನಗರಗಳಲ್ಲಿ ಗುಳೇದಗುಡ್ಡ ಖಣಗಳಿಗೆ ಹೆಚ್ಚು ಬೇಡಿಕೆ ಇದೆ.
ಇಂತಹ ಪ್ರಸಿದ್ಧತೆಯನ್ನು ಪಡೆದ ಗುಳೇದಗುಡ್ಡದ ಖಣಗಳು ತಯಾರಾಗುವುದು ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದಲ್ಲಿ. ಇಷ್ಟು ಖ್ಯಾತಿಯನ್ನು ಪಡೆದ ಗುಳೇದಗುಡ್ಡದ ಖಣಕ್ಕೆ ೫ ಶತಮಾನಗಳಿಗಿಂತಲೂ ಹೆಚ್ಚು ವರ್ಷಗಳ ಇತಿಹಾಸ ಪರಂಪರೆ ಇದೆ. ಇಲ್ಲಿಯ ನೂರಕ್ಕೆ ತೊಂಬತ್ತೈದರಷ್ಟು ಕುಟುಂಬಗಳು ನೇಕಾರಿಕೆಯಲ್ಲಿ ತೊಡಗಿಕೊಂಡಿವೆ. ಜೊತೆಗೆ ನೇಕಾರಿಕೆಗೆ ಸಂಬಂಧಪಟ್ಟಂತೆ ಪರಿಕರಗಳನ್ನು ಸಿದ್ಧಪಡಿಸಲು ಚಮ್ಮಾರ,ಕಮ್ಮಾರ,ಬಡಿಗೇರ,ಸಿಂಪಿಗೇರ,ಕುಂಬಾರ,ಹಗ್ಗ ಮಾಡುವವರು,ತಟ್ಟುಕಟ್ಟುವವರು,ಹಣಗಿಕಟ್ಟುವವರು ಎಲ್ಲ ಕಸಬುದಾರರು ನೆರವು ಬೇಕಾಗುತ್ತದೆ. ಇವರೆಲ್ಲರ ಸಮನ್ವಯದ ಕಾಯಕ ಸಹಕಾರದಿಂದ ಗುಳೇದಗುಡ್ಡದ ಖಣಗಳು ಸಿದ್ಧವಾಗುತ್ತವೆ. ಹೀಗಾಗಿ ಇಡೀ ಊರಿನ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಿಂದ ಖಣದ ತಯಾರಿಕೆಯಲ್ಲಿಯೇ ತೊಡಗಿರುತ್ತಾರೆ. ಹಾಗಾಗಿಯೇ ಗುಳೇದಗುಡ್ಡ ಎಂದ ತಕ್ಷಣ ” ಗುಳೇದಗುಡ್ಡಕ್ಕೊಮ್ಮೆ ಅಕ್ಕವ್ವ ನೀ ಬಾರ ಬರುವಾಗ ಖಣಗಳಿಗೆ ರೂಪಾಯಿ ತಾರ” ಎಂಬ ಕವಿವಾಣಿ ನೆನಪಾಗುತ್ತದೆ.
ಇಂತಹ ಈ ಖಣಗಳು ತಯಾರಾಗುವುದು ಅಪ್ಪಟ ರೇಷ್ಮೆ ಮತ್ತು ಹತ್ತಿ ಬಟ್ಟೆಯಿಂದ. ಖಣಗಳಲ್ಲಿ ಸಿಂಗಲ್ ದಡಿ ಮತ್ತು ಡಬಲ್ ದಡಿ ಖಣಗಳು ದೊರೆಯುತ್ತವೆ. ಇಲ್ಲಿ ಸಿಂಗಲ್ ದಡಿ ಮತ್ತು ಡಬಲ್ ದಡಿ, ದಡಿಪೇಟಿ,ಪೇಟಿ ಮತ್ತು ಭೂಮಿ (ವಡ್ಡಲ) ಇವುಗಳಲ್ಲಿ ಬೇರೆಬೇರೆ ತೂಕದ ರೇಷ್ಮಗಳನ್ನು ಬಳಸುತ್ತಾರೆ. ಜೊತೆಗೆ ಚಮಕ ಮತ್ತು ಮಸರಾಯಿ ದಡಿಗಳನ್ನು ಹೊಂದಿರುವ ಖಣಗಳನ್ನು ತಯಾರಿಸುತ್ತಾರೆ. ಖಣದ ವಿನ್ಯಾಸಗಳಲ್ಲಿ ಸೂಜಿಮಲ್ಲಿಗೆ, ಸಿದ್ದೇಶ್ವರ ಮುಕುಟ, ನವಿಲುಗರಿ, ಚೆಂಡುಹೂವು, ರುದ್ರಾಕ್ಷಿ, ಕೇದಗೆ, ನಯಾಪೈಸೆ,ಅಡ್ಡವಾರ ಸಾಲು, ಸೂರ್ಯನಾರಾಯಣ ತೇರು, ಕ್ಯಾದಗಿ ಬಳ್ಳಿ ,ಗುಂಡಫೂಲ್, ಕಳವಾರ, ಆನೆ, ನವಿಲು ಬಾತಕೋಳಿ, ರಾಷ್ಟ್ರಧ್ವಜ, ಗಾಂಧೀಜಿ ಐದಮನಿ ವಾರಸಾಲು, ಏಳಮನಿ ವಾರಸಾಲು, ಮೂರಮನಿ ವಾರಸಾಲು, ಈಶ್ವರ, ಬಸವಣ್ಣ ಕವಳಿ ಹೂ, ಹೊನ್ನುಹೂವು ಮುಂತಾದ ವಿನ್ಯಾಸಗಳನ್ನು ಬಿಡಿಸಿರುತ್ತಾರೆ.
ಇಷ್ಟೆಲ್ಲಾ ವೈವಿಧ್ಯಮಯ ಸುಂದರ ಚಿತ್ತಾರಗಳ ಕಣಗಳನ್ನು ನೋಡಲು ಎರಡು ಕಣ್ಣು ಸಾಲದು.ಇವು ನೋಡುವ ಹೆಣ್ಣುಮಕ್ಕಳ ಕಣ್ಣುಗಳನ್ನು ತಣಿಸಿ ಅವರ ಮನಸ್ಸನ್ನು ಖರೀದಿಸಲು ಮೋಹಕಗೊಳಿಸುತ್ತವೆ.
ಹೀಗೆ ವಿವಿಧ ವಿನ್ಯಾಸದ 20 ಮೀಟರ್ ಬಟ್ಟೆಯನ್ನು ನೆಯ್ದಾಗ ಒಂದ ಹೊರಿ ಸಿದ್ದವಾಗುತ್ತದೆ. ಒಂದು ಹೊರಿ ಬಟ್ಟೆಯಲ್ಲಿ ೪೦ ರಿಂದ ೪೧ ಖಣಗಳನ್ನು ತಯಾರಿಸುತ್ತಾರೆ. ಒಂದು ಖಣ ಅರ್ಧಮೀಟರ್ ಬಟ್ಟೆ ಹೊಂದಿರುತ್ತದೆ. ಹಳೆತಲೆಮಾರಿನವರು ಈ ಅರ್ಧಮೀಟರ್ ಬಟ್ಟೆಯಲ್ಲಿ ಕಂಕುಳಿಗೆ ಬೇರೆ ಬಟ್ಟೆಯನ್ನು ಕೊಟ್ಟು ಕುಪ್ಪಸವನ್ನು ಸಿದ್ಧಪಡಿಸುತ್ತಿದ್ದರು. ಇಂದಿನವರು ತಮ್ಮ ರವಿಕೆಗೆ ಬೇಕಾಗುವಷ್ಟು ಬಟ್ಟೆಯನ್ನು ಮೀಟರ್ ಲೆಕ್ಕದಲ್ಲಿ ಕೊಳ್ಳುತ್ತಾರೆ. ಹೀಗಾಗಿ ಕಾಲಕ್ಕೆ ತಕ್ಕಂತೆ ಖಣದ ಬದಲಾಗಿ ಬಟ್ಟೆಯನ್ನು ಮೀಟರ್ ಲೆಕ್ಕದಲ್ಲಿ ಕೊಡುವಂತ ಪದ್ಧತಿಯನ್ನು ಇವತ್ತಿನ ನೇಕಾರರು ರೂಢಿಸಿಕೊಂಡಿದ್ದಾರೆ. ಜೊತೆಗೆ ಇವತ್ತಿನ ಪಾಲಿಸ್ಟರ್ ರವಿಕೆಗಳೊಂದಿಗೆ ಖಣಗಳು ಸ್ಪರ್ಧಿಸಬೇಕಾಗುವುದರಿಂದ ನೇಕಾರರು ಹೊಸ ಹೊಸ ಮಾದರಿಗಳನ್ನು ಆರಿಸಿಕೊಳ್ಳುತ್ತಾ ಎಲ್ಲ ವರ್ಗದ ಎಲ್ಲ ವಯಸ್ಸಿನ ಮಹಿಳೆಯರಿಗೆ ಆಕರ್ಷಿಸುವಂತೆ ಖಣಗಳನ್ನು ಸಿದ್ಧಪಡಿಸುತ್ತಿದ್ದಾರೆ
ಗುಳೇದಗುಡ್ಡದ ಖಣಗಳು ಇಷ್ಟು ಪ್ರಖ್ಯಾತಿಯನ್ನು ಪಡೆಯಲು ಕಾರಣ ಇವುಗಳನ್ನು ಶುದ್ಧ ರೇಶಿಮೆ ಹಾಗೂ ನೂಲಿನ ಬಟ್ಟೆಗಳಿಂದ ತಯಾರಿಸುವುದು ಹಾಗೂ ನೈಸರ್ಗಿಕ ಬಣ್ಣವನ್ನು ಬಳಸುವುದು. ಇಲ್ಲಿಯ ನೆಲ-ಜಲ ಇವರು ತಯಾರಿಸುವ ಖಣಗಳಿಗೆ ಬೇಕಾಗುವ ಬಣ್ಣಗಳನ್ನು ಸ್ವಾಭಾವಿಕ ಬಣ್ಣಗಳ ನಾಗಿ ಪರಿವರ್ತಿಸುತ್ತವೆ. ಇವರು ತಯಾರಿಸುವ ನೀಲಿಬಣ್ಣ ಸ್ವಾಭಾವಿಕವಾಗಿದ್ದು ಇಂದಿಗೂ ಇವರ ‘ಟ್ರೇಡ್ ಸೀಕ್ರೆಟ್‘
ಆಗಿ ಬಳಕೆಯಾಗುತ್ತದೆ. ಇದು ಗ್ಯಾರಂಟಿ ಬಣ್ಣವಾಗಿದ್ದು ನೀರಲ್ಲಿ ಬಿಸಿಲಲ್ಲಿ ಬಣ್ಣ ಬಿಡುವುದಿಲ್ಲ. ಇವುಗಳನ್ನು ಎಂತಹ ಬಿಸಿಲಲ್ಲಿ ತೊಟ್ಟರು ಮೈ ಚರ್ಮಕ್ಕೆ ಹಾಗೂ ಆರೋಗ್ಯಕ್ಕೆ ಯಾವುದೇ ಅಪಾಯ ಇರುವುದಿಲ್ಲ. ತೊಡುವ ಹೆಣ್ಣುಮಗಳದು ಉಪ್ಪಿನ ಮೈ ಇದ್ದರು ಬಣ್ಣದ ಅಂದ ಕೆಡುವುದಿಲ್ಲ. ಜೊತೆಗೆ ಇಲಕಲ್ಲ ಸೀರೆ ಹಾಗೂ ಗುಳೇದಗುಡ್ಡದ ಖಣಗಳನ್ನು ತೊಡುವ ಮಹಿಳೆಯರನ್ನು ನೋಡುವುದೇ ಒಂದು ಅಂದ. ಇವನ್ನು ತೊಟ್ಟ ಮಹಿಳೆಯರು ಅತ್ಯಂತ ಗೌರವಪೂರ್ಣವಾಗಿ ಕಾಣುತ್ತಾರೆ. ಹೀಗಾಗಿ ಗುಳೇದಗುಡ್ಡದ ಖಣಕ್ಕೆ ಇವತ್ತಿಗೂ ಮಹತ್ವವಿದೆ.
ಆಧುನಿಕ ಯುಗದಲ್ಲಿ ಕಾಲಕ್ಕೆ ತಕ್ಕಂತೆ ಮಹಿಳೆಯರ ವಸ್ತ್ರವಿನ್ಯಾಸಗಳು ಬದಲಾಗುತ್ತಿವೆ.
ಆಧುನಿಕ ಮಹಿಳೆಯರು ಸೀರೆಯಿಂದಲೇ ದೂರ ಸರಿಯುತ್ತಿದ್ದಾರೆ. ಪಾಶ್ಚಾತ್ಯ ಶೈಲಿಯ ಉಡುಪುಗಳಿಗೆ ಮಾರುಹೋಗುತ್ತಿದ್ದಾರೆ. ಹೀಗಾಗಿ ಸೀರೆಯೊಂದಿಗೆ ಕುಪ್ಪಸ, ರವಿಕಗಾಗಿ ಬಳಕೆಯಾಗುತ್ತಿದ್ದ ಖಣಗಳ ಪ್ರಮಾಣವು ಕಡಿಮೆಯಾಗಿದೆ. ಆದರೆ ಗುಳೇದಗುಡ್ಡ ಖಣಗಳು ಇಂದು ಬೇರೆ ಬೇರೆ ರೀತಿಯಿಂದ ಬಳಕೆಯಾಗುತ್ತಿವೆ. ಇಂದು ಖಣಗಳಿಂದ ಚೂಡಿದಾರ, ಲಂಗಾದಾವಣಿ, ತಲೆದಿಂಬು ಹೊದಿಕೆ, ಬೆಡ್ ಶೀಟ್, ಪರ್ಸ್, ಜಂಭದಚೀಲ ಆಕಾಶಬುಟ್ಟಿ, ಪೀಠೋಪಕರಣ ಹೊದಿಕೆ,ಐಪ್ಯಾಡ್ ಹೊದಿಕೆ,ಚಿಕ್ಕಮಕ್ಕಳ ಬಟ್ಟೆ ಮುಂತಾದವುಗಳನ್ನು ತಯಾರಿಸಲಾಗುತ್ತಿದೆ. ಮರುಬಳಕೆಗೆ ಬಳಸಲು ಬರುವ ರೀತಿಯಲ್ಲಿ ಇವನು ತಯಾರಿಸಲಾಗುತ್ತಿದೆ. ಜೊತೆಗೆ ಕಲಬುರ್ಗಿ ಜಿಲ್ಲೆ ಅಫಜಲ್ಪೂರ್ ತಾಲೂಕಿನ ಬೈರನಮಡಗಿಯ ಗೀತಾ ಪಾಟೀಲ ಎಂಬ ವಸ್ತ್ರವಿನ್ಯಾಸಕಿ ಇಲ್ಲಿಯ ಕುಶಲಕಲೆಯನ್ನು ಉಳಿಸಬೇಕು, ನೇಕಾರಿಕೆಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಕಳೆದ ವರ್ಷದಿಂದ ಗುಳೇದಗುಡ್ಡದಲ್ಲಿ ನೆಲೆಸಿ ಕುಪ್ಪಸವನ್ನು ಸೀರೆಯನ್ನಾಗಿ ಪರಿವರ್ತಿಸುವ ಪ್ರಯೋಗಕ್ಕಿಳಿದು ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇಂದು ಗುಳೇದಗುಡ್ಡ ಖಣಗಳಿಂದ ತಯಾರಿಸಿದ ಸೀರೆಗಳು ‘ಖಣದ ಸೀರೆ’ ಗಳೆಂದು ಪ್ರಚಲಿತದಲ್ಲಿದ್ದು ಇಂದು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಆಧುನಿಕ ಕಾಲಕ್ಕೆ ತಕ್ಕಂತೆ ಆನ್ಲೈನ್ ಮೂಲಕ ಖಣಗಳ, ಸೀರೆಗಳ ಮತ್ತು ಅದರಿಂದ ಸಿದ್ಧಗೊಂಡ ಇನ್ನಿತರ ವಸ್ತ್ರಗಳ ಮಾರಾಟ ಭರದಿಂದ ಸಾಗಿದೆ.
ಆಧುನಿಕ ಭರಾಟೆಗೆ ಸಿಕ್ಕಿ ತನ್ನ ಅಸ್ತಿತ್ವನ್ನು ಕಳೆದುಕೊಳ್ಳಬೇಕಾಗಿದ್ದ ಗುಳೇದಗುಡ್ಡ ಖಣಗಳು ಪರಿವರ್ತನೆಯಿಂದ ಮತ್ತೆ ಜೀವಕಳೆಯನ್ನು ಪಡೆದುಕೊಂಡಿವೆ. ತಾವು ಉಳಿದು ಬೆಳೆಯುವುದರೊಂದಿಗೆ ತಮ್ಮನ್ನು ನಂಬಿರುವ ನೇಕಾರರನ್ನು ಮತ್ತು ಇತರ ಸಹಾಯಕರನ್ನು ಬದುಕಿಸುತ್ತಿವೆ.
ಪರಿವರ್ತನೆ ಜಗದ ನಿಯಮ ಪರಿವರ್ತನೆಯನ್ನು ಹೊಂದುವ ಯಾವ ವಸ್ತುವಾದರೂ ಯಾವತ್ತು ನಶಿಸುವುದಿಲ್ಲ ಎಂಬುದಕ್ಕೆ ಗುಳೇದಗುಡ್ಡ ಖಣಗಳು ಅತ್ಯುತ್ತಮ ಉದಾಹರಣೆಯಾಗಿವೆ.
-ಡಾ.ರಾಜೇಶ್ವರಿ ವೀ.ಶೀಲವಂತ
ಉಪನ್ಯಾಸಕರು ಬೀಳಗಿ