ನನ್ನ ಧ್ವನಿ ಕೇಳದು
ಗೆಳೆಯರೇ
ನಾನು ಒದರುತ್ತಿದ್ದೆನೆ
ಚೀರುತ್ತಿದ್ದೆನೆ ಕೂಗುತ್ತಿದ್ದೆನೆ
ನಿಮಗೇಕೆ ಕೇಳಲೊಲ್ಲದು
ನೀವು ಸದ್ದು ಗದ್ದಲದ
ಸಂತೆಯಲ್ಲಿರಬಹುದು
ನನ್ನ ಧ್ವನಿ ಕೇಳದು
ನೀವು ಗಾಢ ನಿದ್ರೆಯಲ್ಲಿ
ಗೊರಕೆ ಹೊಡೆಯುತ್ತಿರಬಹುದು
ನನ್ನ ಧ್ವನಿ ಕೇಳದು
ನೀವು ಜಾತ್ರೆಯ ಕುಣಿತದಲ್ಲಿ
ಸೋಗು ವೇಷವ ಹಾಕಿದ್ದೀರಿ
ನನ್ನ ಧ್ವನಿ ಕೇಳದು
ಕಳೆದು ಹೋಗಿರುವಿರಿ
ಜೀವನ ಸಮಸ್ಯೆಗಳಲ್ಲಿ
ನನ್ನ ಧ್ವನಿ ಕೇಳದು
ನೀವು ಸತ್ತಿರ ಬಹುದು
ಮಸಣದ ಗೋರಿಯಲ್ಲಿ
ನನ್ನ ಧ್ವನಿ ಕೇಳದು
ನೀವು ಕಿವುಡರಿರಬುದು
ಕಿಟಕಿಯಾಚಿನ ಶಬ್ದ
ನನ್ನ ಧ್ವನಿ ಕೇಳದು
ಎಷ್ಟೋ ವರುಷವಾಯಿತು
ನಾನು ಕೂಗುತ್ತಿದ್ದೆನೆ ನಿರಂತರ
ನನ್ನ ಧ್ವನಿ ಕೇಳದು
ಇಂಕಿಲಾಬ್ ಜಿಂದಾಬಾದ
ವಿಶ್ವಪಥಕೆ ಹೆಜ್ಜೆ ಹಾಕಿ
ನನ್ನ ಧ್ವನಿ ಕೇಳದು
ನನ್ನ ಗಟ್ಟಿ ಧ್ವನಿಗೆ
ನಿಮ್ಮ ಧ್ವನಿ ಕೂಡಬೇಕು
ಬುದ್ಧ ಬಸವರ ಕ್ರಾಂತಿ ನೆನೆಯಬೇಕು