ಮುಂಡರಗಿಯಲ್ಲಿ 14ನೇ ಶರಣ ಚಿಂತನ ಮಾಲಿಕೆ
e- ಸುದ್ದಿ ಮುಂಡರಗಿ
ಶರಣ ಚಿಂತನೆಯಂತಹ ಕಾರ್ಯಕ್ರಮಗಳು ಕಟ್ಟಡಗಳಲ್ಲಿ ಭವನಗಳಲ್ಲಿ ನಡೆಯುವುದಕ್ಕಿಂತ ಹೆಚ್ಚಾಗಿ ಪ್ರತಿ ವಾರ್ಡ್ಗಳಲ್ಲಿ ನಡೆದರೆ ಅಲ್ಲಿ ತಮ್ಮ ಪಾಲಕರ ಜೊತೆ ಮಕ್ಕಳು ಕೂಡ ಆಲಿಸುತ್ತಾರೆ. 25 ವರ್ಷದ ಮಕ್ಕಳಿಗೆ ಬುದ್ಧಿ ಹೇಳುವುದಕ್ಕಿಂತ ಚಿಕ್ಕವರಿದ್ದಾಗಲೇ ಒಳ್ಳೆಯ ವಿಷಯಗಳನ್ನು ಮಕ್ಕಳ ಕಿವಿಗೆ ಹಾಕುವ ಮೂಲಕ ಮೌಲ್ಯಗಳನ್ನು ಜೀವಂತವಾಗಿರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಗದಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ, ಕವಯತ್ರಿಯೂ ಆಗಿರುವ ಶೋಭಾ ಬಸವರಾಜ್ ಮೇಟಿ ಅವರು ಹೇಳಿದರು.
ಮುಂಡರಗಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಶರಣ ಚಿಂತನ ಮಾಲಿಕೆ 14ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಸುತ್ತಣ ಜಿಲ್ಲೆಗಳಿಗಿಂತ ಹೆಚ್ಚು ಕ್ರಿಯಾಶೀಲವಾಗಿರುವ ಲೇಖಕರು, ಸಾಹಿತಿಗಳು, ಕವಿಗಳು ಮತ್ತು ಸಾಹಿತ್ಯಾಸಕ್ತರು ಮುಂಡರಗಿಯಲ್ಲಿ ಇದ್ದು ಕೂಡ ಕನ್ನಡ ಸಾಹಿತ್ಯ ಪರಿಷತ್ ಭವನದ ನಿರ್ಮಾಣ ಕಾರ್ಯ ತಡವಾಗಿಯಾದರೂ ಇದೀಗ ಮುಕ್ತಾಯದ ಹಂತಕ್ಕೆ ಬಂದಿರುವುದು ಸಂತಸದ ವಿಷಯ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪೇಕ್ಷಿತ ಶರಣರ ಮಾಲಿಕೆಯಲ್ಲಿ ಸ್ವಾನುಭವದ ಸ್ವತಂತ್ರ ಶರಣೆ ಬೊಂತಾದೇವಿಯವರ ಕುರಿತು ಪ್ರತಿಭಾ ಹೊಸಮನಿ ಅವರು ಉಪನ್ಯಾಸ ನೀಡುತ್ತಾ ಕಾಶ್ಮೀರದ ರಾಜನಾಗಿದ್ದ ಮಹಾದೇವ ಭೂಪಾಲನ ಸಹೋದರಿ ನಿಜದೇವಿ ವಾಸ್ತವದಲ್ಲಿ ಅತ್ಯಂತ ಕರುಣಾಮಯಿ ಯಾಗಿದ್ದು ಸ್ನೇಹಿತರೊಂದಿಗೆ ವನವಿಹಾರಕ್ಕೆ ಹೋದಾಗ
ಅತ್ಯವಶ್ಯಕವಾದ ಬಟ್ಟೆಗಳಿಲ್ಲದೆ ಚಳಿಯಿಂದ ನಡುಗುತ್ತಿದ್ದ ವೃದ್ಧ ಬಡ ವ್ಯಕ್ತಿಗೆ ತನ್ನ ದೇಹದ ಮೇಲಿದ್ದ ಶಾಲನ್ನು ಮಾತ್ರವಲ್ಲವೇ ಎಲ್ಲ ಬಟ್ಟೆಗಳನ್ನು ಕೊಟ್ಟು ರಕ್ಷಿಸಿದ್ದನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದರು.
ಸ್ವಂತ ಅನುಭವಗಳಿಂದ ಪರಿಪಕ್ವವಾಗಿದ್ದ, ಗುಪ್ತ ಶರಣಳೂ ವೀರ ವಿರಾಗಿಣಿಯೂ ಆಗಿದ್ದ ಬೊಂತಾ ದೇವಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದ ಅನುಭವ ಮಂಟಪದ ಅಧ್ಯಕ್ಷರಾಗಿದ್ದ ನಿಷ್ಠುರ ಮತ್ತು ನೇರ ನಡೆ ನುಡಿಗಳನ್ನು ಹೊಂದಿದ್ದ ಅಲ್ಲಮ ಪ್ರಭುದೇವರು ಕದಳಿಯ ಕರ್ಪೂರ ಅಕ್ಕಮಹಾದೇವಿಯಷ್ಟೇ ಆತ್ಮಿಕ ಬಲ, ಶರಣ ತತ್ವ ಗಳನ್ನು ಬೊಂತಾ ದೇವಿಯು ಕೂಡ ಹೊಂದಿದ್ದಾಳೆಂದು ಘೋಷಿಸಿದ್ದರು ಎಂದರೆ ನಮಗೆ ಆಕೆಯ ಮಹತ್ವದ ಅರಿವಾದೀತು ಎಂದು ಹೇಳಿದ ಅವರು ಬೀಡಾಡಿ ಎಂಬ ಅಂಕಿತನಾಮದಲ್ಲಿ ಆರು ವಚನಗಳನ್ನು ಆಕೆ ರಚಿಸಿದ್ದು ಅವುಗಳಲ್ಲಿ ಒಂದೆರಡು ವಚನಗಳನ್ನು ಕೂಡ ವಿಶ್ಲೇಷಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ
ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರಾದ ಆರ್ ಎಲ್ ಪೊಲೀಸ್ ಪಾಟೀಲ್ ಗುರುಗಳು ಶರಣ ಚಿಂತನ ಮಾಲಿಕೆಯ ಈ ಕಾರ್ಯಕ್ರಮ ಕಳೆದ ವಾರವೇ ನಿಗದಿಯಾಗಿದ್ದು ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿತು. ಭಗವಾನ್ ಶಿವನು ತನ್ನ ಪತ್ನಿ ಪಾರ್ವತಿಗೆ ತನ್ನ ದೇಹದ ಅರ್ಧ ಭಾಗವನ್ನು ಪತ್ನಿಗೆ ನೀಡಿ ಅರ್ಧನಾರೀಶ್ವರ ತತ್ವವನ್ನು ಪ್ರತಿಪಾದಿಸಿದನು.
ಎಡಭಾಗದಲ್ಲಿ ಹೃದಯವೇ ಮೊದಲಾದ ಮಹತ್ವದ ಅಂಗಗಳು ಇದ್ದು ಪತಿಯ ಜೀವನಕ್ಕೆ ಪತ್ನಿಯ ಕೊಡುಗೆ ಅಪಾರವಾದದ್ದು ಹೆಣ್ಣು ಮಕ್ಕಳು ಈ ಸಂಸಾರದ ಅತ್ಯವಶ್ಯಕ ಜೀವದಾಯಿನಿಯರು, ಹೆಣ್ಣು ಮಕ್ಕಳು ಯಾವ ರೀತಿಯಲ್ಲೂ ಕಡಿಮೆ ಇಲ್ಲ,ಅವರು ಸರ್ವ ಗುಣ ಸಂಪನ್ನರು ಎಂದು ಬಣ್ಣಿಸಿದರು. ಕನ್ನಡ ಸಾಹಿತ್ಯ ಪರಿಷತ್ ಭವನ ಮುಕ್ತಾಯದ ಹಂತದಲ್ಲಿರುವುದರಿಂದ ತಮ್ಮ ಕನಸಿನ, ಆಶಯದ ಕೂಸಾದ ಸಾಹಿತ್ಯ ಪರಿಷತ್ ಭವನವು ಶೀಘ್ರದಲ್ಲೇ ಸಂಪೂರ್ಣವಾಗಿ ಲೋಕಾರ್ಪಣೆಗೊಳ್ಳಲಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಹೇಮಂತ್ ಗೌಡ ಪಾಟೀಲ್ ಅವರು ಬೊಂತಾ ದೇವಿಯ ಮತ್ತೊಂದು ವಚನವನ್ನು ವಿಶ್ಲೇಷಿಸಿ ಬಿಡಾಡಿ ಎಂದರೆ ಸರ್ವತಂತ್ರ ಸ್ವತಂತ್ರನಾದ ಪರಶಿವ. ಆತನೇ ಆದಿ ಅನಂತ, ಅಗಮ್ಯ, ಅಜೇಯ… ಆದ್ದರಿಂದಲೇ ಚತುರ್ವೇದಗಳಲ್ಲಿ, ಹದಿನಾರು ಶಾಸ್ತ್ರಗಳಲ್ಲಿ, ಹದಿನೆಂಟು ಪುರಾಣಗಳಲ್ಲಿ, ಇಪ್ಪತ್ತೆಂಟು ಆಗಮಗಳಲ್ಲಿ
ಆ ಶಿವನೇ ಇದ್ದು ಆತನೇ ಶಬ್ದ,ನಾದ, ಬಿಂದು ಆತನೇ ಬ್ರಹ್ಮ ಎಂದು ಬೊಂತಾದೇವಿಯು ಸರ್ವಜೀವಿಗಳಲ್ಲಿಯೂ ಶಿವನ ಅಂಶವಿದೆ ಎಂಬ ಪರಮ ಸತ್ಯವನ್ನು ತನ್ನ ವಚನಗಳಲ್ಲಿ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದರು.
ವೀರಶೈವ ಮಹಾಸಭಾ ಕಾರ್ಯಕಾರಿ ಮಂಡಳಿಯ ನಿರ್ದೇಶಕರಾಗಿ ಒಂದು ಅವಧಿಗೆ ಕಾರ್ಯನಿರ್ವಹಿಸಿದ ಕ ರಾ ಬೆಲ್ಲದ್ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಡಾಕ್ಟರ್ ಎಸ್ ಎಸ್ ಹಿರೇಮಠ ಅವರು ಕೈಗೊಂಡ ಸಾಮಾಜಿಕ ಮತ್ತು ಶೈಕ್ಷಣಿಕ ವಲಯದ ಸೇವಾ ಕಾರ್ಯಕ್ಕೆ ಚೆನ್ನೈ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ದೊರೆತಿದ್ದು ಅವರಿಗೆ ಮೂರು ಸಂಸ್ಥೆಗಳ ಪರವಾಗಿ ಗೌರವ ಸನ್ಮಾನ ಸಲ್ಲಿಸಲಾಯಿತು.
ಪ್ರಾರಂಭದಲ್ಲಿ ಶ್ರೀಮತಿ ಹುಲಿಗೆಮ್ಮ ಭಜಂತ್ರಿ ಅವರು ಪ್ರಾರ್ಥನೆಗೈದರೆ,ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ ಜಿ ಗಚ್ಚಣ್ಣವರ್ ಎಲ್ಲರಿಗೂ ವಂದಿಸಿದರು.
ಕಾರ್ಯಕ್ರಮದಲ್ಲಿ ರತ್ನಾಕಾಗನೂರ್ ಮಠ, ಜಯಶ್ರೀ ಅಳವಂಡಿ, ಅಕ್ಕಮಹಾದೇವಿ ಕೊಟ್ಟೂರ್ ಶೆಟ್ಟರ್, ಉಮಾ ದೊಡ್ಡಮನಿ, ಪಾರ್ವತಿ ಕುಬಸದ,
ಎಸ್ ಕೆ ಕರಿ ಭರಮಗೌಡ್ರು,, ಆರ್ ಕೆ ರಾಯನ್ ಗೌಡ್ರು ವಿ.ಕೆ.ಗುಡದಪ್ಪನವರ್, ಹನುಮರೆಡ್ಡಿ ಇಟಗಿ, ಮಂಜುನಾಥ್ ಮುಧೋಳ್, ಶಂಕರ್ ಕುಕನೂರ್, ಕೃಷ್ಣ ಸಾಹುಕಾರ್, ಎಂ ಎಸ್ ಶೀರನಹಳ್ಳಿ, ಎನ್ ಎನ್ ಕಲಕೇರಿ, ಎಂ ಐ ಮುಲ್ಲಾ ಮುಂತಾದವರು ಹಾಜರಿದ್ದರು.