ಸತ್ಯ ಅಹಿಂಸೆ ಪ್ರದಾತರು
ಮಹಾವೀರ ತೀರ್ಥಂಕರರು
ವೈಶಾಲಿ ನಗರದ ಕುಂಡಲಗ್ರಾಮ
ಬೆಳಗಿದ ಪುಣ್ಯಪ್ರದರು
ಸಿದ್ಧಾರ್ಥ ತ್ರಿಶಾಲಿಯವರ ಸುಪುತ್ರ
ಜ್ಞಾನಿ ವರ್ಧಮಾನರು
ಜಗವನುದ್ಧರಿಸಲು ಬಂದ ಆಪ್ತಮಿತ್ರ
ಮಹಾವೀರ ತೀರ್ಥಂಕರರು//
ಭೋಗಮಯ ಜೀವನವಲ್ಲವೆಂದು
ಬೋಧಿಸಿ ತೋರಿದವರು
ಸತ್ಯ ಅಹಿಂಸಾ ತ್ಯಾಗಮಯ ಬದುಕು
ನಿಜ ಸತ್ಯವೆಂದರಿತವರು
ಪಂಚಶೀಲತತ್ವಗಳನು ಆಚರಿಸಿ
ಪುದ್ಗಲಶೂನ್ಯರಾಗಿರೆಂದರು//
ಸಂವರಣ, ಮಾತು ಮನ ನಿಗ್ರಹದಿ
ಕೇವಲಜ್ಞಾನವೆಂದರು
ಅಷ್ಟ ಸೋಪಾನಗಳಿಂದ ಜೀವನ
ಸಮೃದ್ಧಿಯಾಗುವದೆಂದರು
ಮತಿಶೃತಿ ಮನಃಪರ್ಯಾಯ ಕೇವಲ
ಜ್ಞಾನದಿಂದ ಮುಕ್ತಿಯೆಂದರು//
ಇಂಥ ಪುಣ್ಯವಂತರು ಮತ್ತೆ ಮತ್ತೆ
ಹುಟ್ಟಿಬರಲಿ ಈ ದೇಶದಲಿ
ಹಿಂಸೆಯತ್ತ ಜಾರುತಿರುವ ಜಗದಲಿ
ಅಹಿಂಸೆಯ ದೀಪ ಬೆಳಗಲಿ
ಮಹಾತ್ಮ ಮಹಾವೀರರಿಗೆ ಈ ನುಡಿ
ನಮನ ಶ್ರೀಚರಣಕೆ ಅರ್ಪಿಸುವೆ//
–ಅನ್ನಪೂರ್ಣ ಸಕ್ರೋಜಿ ಪುಣೆ