ಇಂದು ವಿಶ್ವ ಪುಸ್ತಕ ದಿನ…..
(ಪುಸ್ತಕದ ಸ್ವಗತ)
ಸಖ
ಓ ನನ್ನ ಸಖನೇ….
ಎಲ್ಲಿ ಮರೆಯಾಗಿ ಹೋದೆ ?
ಅದೆಷ್ಟು ಪ್ರೀತಿಸುತ್ತಿದ್ದೆ ,
ಮೋಹಿಸುತ್ತಿದ್ದೆ ?
ನಾನಿಲ್ಲದ ನಿನ್ನ ಚಡಪಡಿಕೆ
ನೀರಿಲ್ಲದ ಮೀನಿನಂತಿತ್ತು !!
ಅಡಿಯಿಂದ ಮುಡಿವರೆಗೆ
ಹೊರಳಿಸಿ, ಮರಳಿಸಿ
ಕಚಗುಳಿಯಿಡುವ,
ಎದೆಗವಚಿಕೊಂಡು
ನಿದ್ರಿಸುವ ದಿನಗಳು
ಎಲ್ಲಿ ಹೋದವು ಸಖ ?
ಮಡಿಲಲ್ಲಿ ಮಗುವಾಗಿ
ತಲೆಗೆ ದಿಂಬಾಗಿ
ಹೃದಯಕ್ಕೆ ಬಡಿತವಾಗಿ
ನೋವಿಗೆ ನಲಿವಾಗಿ
ಸೌಖ್ಯದ ಸಖಿಯಾಗಿ
ಭಾವಗಳಿಗೆ ಜೀವವಾಗಿ
ನಿನ್ನಂತರಂಗದಲ್ಲಿದ್ದ ದಿನಗಳು
ಎಲ್ಲಿ ಹೋದವು ಸಖ ?
ಸವಾಲಿಗೆ ಜವಾಬಾಗಿ
ಅರಿಯದಿರಲು ಅರಿವಾಗಿ
ಜ್ಞಾನದ ಭಂಡಾರವಾಗಿ
ನಿನ್ನಾಸೆ- ಕನಸುಗಳನ್ನೆಲ್ಲ
ಈಡೇರಿಸುತ್ತಿದ್ದ ದಿನಗಳು
ಎಲ್ಲಿ ಹೋದವು ಸಖ ?
ಅದ್ಯಾವ ಘಳಿಗೆಯೋ…
ಬಿಂಕ – ಬಿನ್ನಾಣದ
ಮೊಬೈಲ್, ಕಂಪ್ಯೂಟರ್
ಕಾಲಿಟ್ಟಿದ್ದೆ ತಡ
ಮೋಹಜಾಲ ಬೀಸಿ
ಹೃದಯವನ್ನು ಕದ್ದುಬಿಟ್ಟರು
ನನ್ನ ಕಪಾಟಿಗೆ
ಸೇರಿಸಿಬಿಟ್ಟರು
ಧೂಳಿಡಿದ ನಾನು
ನಿಂಗೆ ಕಾಣದಾದೆ
ಥಳಕುತ್ತ – ಬಳಕುತ್ತ
ಬಣ್ಣ -ಬಣ್ಣದ
ವಯ್ಯಾರ ಮಾಡುತ್ತ
ಜಗತ್ತಿಗೆ ಜಾದು
ಮಾಡಿಬಿಟ್ಟರು
ಇತಿಮಿತಿಯಿರಲಿ
ಅತಿ ಮೋಹ ಒಳಿತಲ್ಲ
ಮರಳಿ ಬಾ ಸಖನೇ
ಮತ್ತೆ ಸಂಗ ಬೆಳೆಸು
ಕಪಾಟಿನಿಂದ
ಹೊರತೆಗೆ …
ಕಪಾಟಿನಿಂದ
ಹೊರತೆಗೆ…..
–ಉಷಾ ಗೊಬ್ಬೂರ