ಚಿಂತೆಗೆ ತಡೆಗೋಡೆ ಕಟ್ಟಿ

ಚಿಂತೆಗೆ ತಡೆಗೋಡೆ ಕಟ್ಟಿ

ಎಮ್ಮೆಗೊಂದು ಚಿಂತೆ, ಸಮ್ಮಗಾರಗೊಂದು ಚಿಂತೆ.
ಧರ್ಮಿಗೊಂದು ಚಿಂತೆ, ಕರ್ಮಿಗೊಂದು ಚಿಂತೆ.
ಎನಗೆ ಎನ್ನ ಚಿಂತೆ, ನಿನಗೆ ನಿನ್ನ ಕಾಮದ ಚಿಂತೆ.
ಒಲ್ಲೆ ಹೋಗು, ಸೆರಗ ಬಿಡು ಮರುಳೆ.
ಎನಗೆ ಚೆನ್ನಮಲ್ಲಿಕಾರ್ಜುನದೇವರು
ಒಲಿವರೊ ಒಲಿಯರೊ ಎಂಬ ಚಿಂತೆ!

ಅಕ್ಕಮಹಾದೇವಿ ಅವರ ವಚನ

ಕೌಶಿಕನಿಂದ ತನಗೆ ಆದ ಅವಮಾನದ ಹಿಂಸೆಯನ್ನು ಸಹಿಸದ ಅಕ್ಕನವರು ತಮ್ಮ ಮುಂದಿನ ಬದುಕಿನ ಆಗುಹೋಗುಗಳ ಬಗ್ಗೆ ಚಿಂತೆಯನ್ನು ಇದರಲ್ಲಿ ಉಲ್ಲೇಖಿಸಿ ಹೇಳಿದ್ದಾರೆ .ಇಲ್ಲಿ ಚಿಂತೆ ಮತ್ತು ಚಿತೆ ಬರಿ ಸೊನ್ನೆ ಮಾತ್ರ ವ್ಯತ್ಯಾಸ ಆಗಿ ಕಂಡು ಬಂದರೂ, ನಮ್ಮ ನಮ್ಮ ಬದುಕಿಗೆ ಚಿಂತೆ ಚಿತೆಯಾಗಿ ಸುಡುವುದು . ಈ ಸುಡುವ ಚಿತೆ ಚಿಂತನವಾಗಿ ಮನವನ್ನು ತಣಿಸಬೇಕು. ಭಾವ ಮಲಿನವಾಗದೆ ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಳ್ಳುವ ನೆಲೆಯ ಹುಡುಕಾಟ ಈ ವಚನದಲ್ಲಿ ಕಂಡುಬಂದಿದೆ.

ಮಾನವನಿಗೆ ಹಲವಾರು ಚಿಂತೆಗಳ ಒಳನುಸುಳಿಕೆಗಳಲ್ಲಿ ಚಿಂತನದಿಂದ ಮನ ಪವಿತ್ರವಾಗಿ, ಚಿಂತೆಯಿಂದ ದೂರಾಗಿ, ಭಾವ ನಿರ್ಮಲವಾಗಿ ಅಮೃತದ ಅನ್ನ ಉಂಡಂತೆ ಆಗುವುದು ಅದೇ ಆತ್ಮತೃಪ್ತಿ. ಚಿಂತೆಗೆ ತಡೆಗೋಡೆ ಕಟ್ಟಿ ನಿಲ್ಲುವ ಬದುಕಿನ ಸತ್ಯದ ಅರಿವು ಈ ವಚನದ ಹಿನ್ನೆಲೆ.

ಶರಣರು ಶಾಂತಿ ಪ್ರಿಯರು. ಅವರ ಮನಸ್ಸಿನಲ್ಲಿ ಯಾರನ್ನೂ ಕೊಲ್ಲುವ ಯೋಚನೆ ಇರಲಾರದು. ತಮ್ಮ ಜೀವಂತ ದೇಹದ ತೊಡೆಗಳನ್ನೇ ಕತ್ತರಿಸಿ ತೊಗಲು ತೆಗೆದು ಪಾದರಕ್ಷೆ ಮಾಡಿ ಬಸವಣ್ಣನವರ ಪಾದಕ್ಕೆ ಮುಡಿಪಾಗಿಟ್ಟ ಶರಣರ ಕುಲವಾದ ಸಮಗಾರ ಅದು ಹೇಗೆ ಪ್ರಾಣಿಯನ್ನು ಕೊಲ್ಲುವ ಯೋಚನೆಯನ್ನು ಮಾಡುತ್ತಾನೆ. ಇದು ನನ್ನ ವೈಯಕ್ತಿಕ ಆಲೋಚನೆ ಮತ್ತು ಸಂಶೋಧನಾತ್ಮಕ ಚಿಂತನೆಯೂ ಕೂಡ ಆಗಿದೆ .

ಎಮ್ಮೆಗೊಂದು ಚಿಂತೆ
ಈ ಸಮಾಜದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಚಿಂತೆ ಇದ್ದೇ ಇರುತ್ತದೆ.

ಇವತ್ತಿನ ವಚನ ಓದಿದಾಗ ನನಗೆ ಎಮ್ಮೆ ಅದಾವ ಚಿಂತೆ ಮಾಡುತ್ತದೆ? ಅದಾವ ಚಿಂತನ ಅದು ಮಾಡುತ್ತದೆ?
ಅದು ದನ ,ಲಂಗೂ ಲಗಾಮು ಇಲ್ಲದೆ ತಿರುಗುವ ಎಮ್ಮೆಗೆ ಅದಾವ ಚಿಂತೆ? ಅದಕ್ಕೆ ತನ್ನ ಹೊಟ್ಟೆಯದೇ ಚಿಂತೆ.
ಎಮ್ಮೆ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಮಾತ್ರ ಬಯಸುತ್ತದೆ .ಅದಕ್ಕೆ ತಾನು ತಿಂದು ತನ್ನ ಹೊಟ್ಟೆ ತುಂಬಿಸಿಕೊಂಡ ಚಿಂತೆ ಇರಲಾರದು .
ಬೆಳೆ ಇದ್ದ ಹೊಲದಲ್ಲಿ ನೇರವಾಗಿ ನುಗ್ಗಿ ಚೆನ್ನಾಗಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವುದು .
ಎಮ್ಮೆಗೆ ಬೆವರಿನ ಶ್ರಮದ ಬಗ್ಗೆ ಅರಿವು ಇರದು.ತಾನು ಹೊಲಕ್ಕೆ ನುಗ್ಗಿ ಬೆಳೆದ ಫಸಲನ್ನು ಹಾಳು ಮಾಡಿದ ಅರಿವು ರೈತ ನ ಚಿಂತೆ ಅದಕ್ಕೆ ಬಾರದು . ಬರೀ ಬೆಳೆ ಕಂಡಲ್ಲಿ ನುಗ್ಗಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುವ ಚಿಂತೆ ಅದಕ್ಕೆ,ಆ ಎಮ್ಮೆಯನ್ನು ಹೊಡೆದರೂ ಬಡಿದರೂ,ಬೈದರೂ ಅದರ ಮೈಗೆ ಹತ್ತದು . ಎಮ್ಮೆಯದು ದಪ್ಪ ಚರ್ಮ ಇನ್ನೊಬ್ಬರ ನೋವೂ, ಆ ಎಮ್ಮೆಗೆ ತಿಳಿಯದು . ಹೀಗಾಗಿ ಏ ದನ ಅದಿಯೋ, ಮನುಷ್ಯ ಅದಿಯೋ ಅಂತಾ ಬೈಯ್ಯುವ ಬುದ್ಧಿಗೇಡಿ ಜನಕ್ಕೆ .
ತಾನು ಕಸ ತಿಂದರೂ ಮನುಷ್ಯರಿಗೆ ಹಾಲನ್ನೇ ಕೊಡುವುದು.ಅದಕ್ಕೆ ಬಸವಣ್ಣನವರು ಸಕಲ ಜೀವ ರಾಶಿ ಗಳಲ್ಲಿ ಕರುಣೆ ಇರಬೇಕು ಅಂತಾ ಹೇಳಿದ್ದು.ನಾವು ಬದುಕುವುದರ ಜೊತೆಗೆ ಇನ್ನೊಂದು ಜೀವಿಯನ್ನು ಬದುಕಿಸೋಣ ಎಂದು ಹೇಳಿದವರು.
ಅಕ್ಕನವರ ಈ ಸಂದೇಶ .
ಮಾನವೀಯ ಗುಣ ಮರೆತು ಎಮ್ಮೆಯ ಹಾಗೆ ನುಗ್ಗಿ ತನ್ನ ಕಾಮ ಎನ್ನುವ ಬಯಕೆಯ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಬಯಸಿದ ಕೌಶಿಕ ನಮಗೆ ಇಲ್ಲಿ ಎಮ್ಮೆಯಂತೆ ಕಂಡು ಬಂದಿದ್ದಾನೆ .ಅದನ್ನೇ ಅಕ್ಕ ಇಲ್ಲಿ ಎಮ್ಮೆ ಅನ್ನುವ ಪದ ಬಳಕೆ ಮಾಡಿದ್ದೀರಬೇಕು ಎನ್ನುವುದು ನನ್ನ ಅಭಿಪ್ರಾಯ.

ಸಮಗಾರನಿಗೆ ಒಂದು ಚಿಂತೆ
(ಈ ಎಮ್ಮೆಯ ಹಾಗೆ ಇರುವ ಕೌಶಿಕನ ಮೈ ,ಮನ,ಆತನ ಕಾಮದ ಬಯಕೆ ಪ್ರಾಣಿಗೆ ಹೋಲಿಕೆಯಾಗಿದ್ದಿರಬೇಕು.)

ಯಾರು ಸಮಗಾರ ,?
ನಮಗೆ ನಿಮಗೆ ಗೊತ್ತಿರುವ ಹಾಗೆ ಸಾಮಾನ್ಯವಾಗಿ ಪಾದರಕ್ಷೆಯನ್ನು ಮಾರುವ ಹಾಗೂ ತಯಾರಿಸುವರು ಸಮಗಾರರು .ಅಲ್ಲವೇ ?
ಈಗ ಸಮಗಾರರು ಸಮಗಾರ ರಾಗಿ ಉಳಿದಿಲ್ಲ.ಇದೇ ಸಮಗಾರ ಉದ್ಯೋಗವನ್ನು ಇಂದು . ಇಸ್ಲಾಂ (ಖನಗಾಂವದಲ್ಲಿ) ಧರ್ಮದವರು . ಲಿಂಗಾಯತರಲ್ಲಿ ಪಂಚಮಸಾಲಿ ಮಾರವಾಡಿ ,ಮಾದರ,ಡೋಹರ,ಹೊಲೆಯರು ( ಮೂಡಲಗಿಯಲ್ಲಿ)
ಇಂದು ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದು ಕಂಡು ಬಂದಿದೆ.
ಸಾಮಾನ್ಯವಾಗಿ ನಮ್ಮ ಪಾದಗಳಿಗೆ ಮುಳ್ಳು, ಕಲ್ಲು, ಸುಡುವ ಬೆಂಕಿಯಿಂದ ರಕ್ಷಿಸಲು, ಚಂದ ಚಂದದ ಅಲಂಕಾರ ಮಾಡಿ ನಮ್ಮ ಕಾಲುಗಳಿಗೆ ಎಮ್ಮೆ ಅಥವಾ ಆಕಳ ಚರ್ಮದಿಂದ ಪಾದಕ್ಕೆ ರಕ್ಷೆ ಗಾಗಿ ತಯಾರಿಸುವ ಕಾಯಕ ಜೀವಿಗಳು ಸಮಗಾರ ವೃತ್ತಿ ಜನಾಂಗದವರು .

೧೨ ನೇ ಶತಮಾನದಲ್ಲಿ ಅನೇಕ ಶರಣರು ತಮ್ಮ ಕಾಯಕವನ್ನು ಆಯ್ಕೆ ಮಾಡಿಕೊಂಡು ,ಮುಂದೆ ಅದೇ ಕಾಯಕದಲ್ಲಿಯೇ ಮುಂದುವರೆದು , ತಮ್ಮ ವೃತ್ತಿ ಜೀವನವನ್ನು ಕಟ್ಟಿಕೊಂಡು ಬದುಕು ನಡೆಸಿದರು .
ಅಂಥಹ ಒಂದು ವೃತ್ತಿ ಕಾಯಕ ನಡೆಸುವ ಸಮಗಾರನಿಗೆ ಕಾಯಕ
ಮಾಡಲು ದನಗಳ ಚರ್ಮದ ಅವಶ್ಯಕತೆ ಉಂಟಾಯಿತು.ಹೆಚ್ಚು ತಾಳಿಕೆ ಬರುವ ,ಹಾಗೂ ದಪ್ಪ ಮೈ ಚರ್ಮ ಅಂದರೆ ಎಮ್ಮೆಯದು.
ಹಾಗಾದರೆ ,ಈ ಕಾಯಕ ನಡೆಸಲು ,ನನ್ನ ಬದುಕು ,ನನ್ನ ಕುಟುಂಬ ನಡೆಯಲು ಈ ಎಮ್ಮೆಯ ಚರ್ಮವನ್ನು ಹುಡುಕುವುದು ಎಲ್ಲಿಂದ,? ಅನ್ನುವ ಚಿಂತೆ ಸಮಗಾರನಿಗೆ.

ಶರಣರು ಪ್ರಾಣಿ ಹಿಂಸೆಯನ್ನು ಮಾಡಲಾರರು .ಹಾಗೂ ಪ್ರಾಣಿಗಳ ಹತ್ಯೆ ಮಾಡಲಾರರು .ನಾನು ನೋಡಿದಂತೆ ,

ಅಕಸ್ಮಾತ್ ಒಂದು ಎಮ್ಮೆ ಸತ್ತರೆ ಅದನ್ನು ಸಮಗಾರರು ಮುಟ್ಟಲಾರರು. ಮತ್ತು ಹೊತ್ತೆಯ್ದು ಅದರ ಚರ್ಮವನ್ನು ಸುಲಿಯಲಾರರು .

ಈ ಸತ್ತ ಎಮ್ಮೆ
ಈ ದನವನ್ನು ಹೊತ್ತು ಕೊಂಡು ಹೋಗಿ ಅದರ ಚರ್ಮವನ್ನು ಸುಲಿಯುವವರೇ ಬೇರೆ ಜನಾಂಗ
ಅಂದರೆ ಓಣಿಯಲ್ಲಿ ಕಸ ಗೂಡಿಸಿ ಸ್ವಚ್ಛ ಮಾಡುವ ತಳಸಮುದಾಯದ ಜನರಾದರೆ,

ಆ ಎಮ್ಮೆಯ ಚರ್ಮವನ್ನು ಹದ ಮಾಡಿ ಕೊಡುವ ಕಾಯಕ ಜೀವಿಗಳು ಮತ್ತೊಂದು ಜನಾಂಗ ಡೋಹರದು.

ಡೋಹರರಿಂದ ಚರ್ಮವನ್ನು ಕೊಂಡುಕೊಂಡು ನಾಲ್ಕಾರು ಪಾದರಕ್ಷೆ ಹೊಲಿದುಕೊಡುವ ಕಾಯಕ ಸಮಗಾರ ವೃತ್ತಿ ಅವರದು.

ಬಸವಣ್ಣನವರು ಎಲ್ಲ ಕಾಯಕ ಜೀವಿಗಳನ್ನು ಸಮಾನವಾಗಿ ಕಂಡು ಅನುಭವ ಮಂಟಪದಲ್ಲಿ ಹಾಗೂ ಮಹಾಮನೆಯಲ್ಲಿ ಮುಕ್ತವಾದ ಅವಕಾಶ ನೀಡಿ.ಅವರವರ ವೃತ್ತಿಯಲ್ಲಿ ಪ್ರಾಮಾಣಿಕತೆ, ಶ್ರದ್ಧೆಯಿಂದ ಕಾಯಕ ಮಾಡುತ್ತ .ತಾವು ದುಡಿದ ಹಣದಲ್ಲಿ ಒಂದಿಷ್ಟು ದಾಸೋಹಕ್ಕೆ ವಿನಿಯೋಗಿಸಿ ಬದುಕುವ ಶರಣರ ಬಳಗದಲ್ಲಿ ಇದ್ದ ಸಮಗಾರ ಹರಳಯ್ಯ ನವರ ಕುಲದ ವ್ಯಕ್ತಿ ತನಗೆ ತನ್ನ ಕಾಯಕದ ಚಿಂತೆಯಲ್ಲಿ ತೊಡಗುತ್ತಾನೆ.

ಆ ದಿನ ಅಕಸ್ಮಾತ್ ಚರ್ಮ ಸಿಗದೇ ಹೋದರೆ, ಆ ದಿನದ ಕಾಯಕ ತಪ್ಪಿ ಹೋಗುವುದು .ಅಲ್ಲದೇ ಆ ದಿನದ ಸಂಪಾದನೆಯು ಶೂನ್ಯ.ಹೀಗಾಗಿ ಸಮಗಾರ ಚಿಂತೆ ಮಾಡುವುದು ಸಹಜ.

ಆದರೆ ಅಧ್ಯಾತ್ಮಿಕ ಹಾಗೂ ತಾತ್ವಿಕ ವಿಚಾರಗಳ ಹಿನ್ನೆಲೆಯಲ್ಲಿ ಸಮಗಾರ ಚಿಂತೆ ಮಾಡುವುದು.
ಸಮಾಜದಲ್ಲಿ ನಡೆಯುವ ಹಿಂಸೆಯ ವಿರುದ್ಧವಾಗಿ ಚಿಂತಿಸುತ್ತಾನೆ ಹಾಗೂ ಪ್ರತಿಭಟನಾತ್ಮಕ ಧೋರಣೆಮಲ್ಲಿ ತೊಡಗುತ್ತಾನೆ.
ಸಮಾಜದಲ್ಲಿ ಇರುವ ಪ್ರಾಣಿ ಹಿಂಸೆಯನ್ನು ತಡೆದು . ಪ್ರಾಣಿಗಳನ್ನು ಪೋಷಿಸುವ ಜವಾಬ್ದಾರಿ ೧೨ ನೇ ಶತಮಾನದಲ್ಲಿ ಇದ್ದ ಶರಣ ಶರಣೆಯರದಾಗಿತ್ತು .

ಪ್ರಾಣಿಗಳನ್ನು ಕೊಲ್ಲುವ ಕಾಯಕ ಸಮಗಾರನದು ಆಗಿರದೇ ಹದಮಾಡಿದ ಚರ್ಮ ಸಿಗುವುದೋ ,ಇಲ್ಲವೋ ಎನ್ನುವ ಚಿಂತೆ ಸಮಗಾರನಿಗೆ ಹೊರತು .ಅದು ಬಿಟ್ಟು ಒಂದು ಎಮ್ಮೆ ದಾಟಿ ಹೊರಟರೆ ಅದನ್ನು ಕಡಿದು ಪಾದರಕ್ಷೆ ಮಾಡುವ ಆಲೋಚನೆ ಶರಣರಿಗೆ ಇರದು .

ಓಣಿಯಲ್ಲಿ ದಾಟಿ ಹೋಗುವಾಗ ಎದುರಿಗೆ ಬರುವಾಗ ಬಸವಣ್ಣನವರನ್ನು ಕಂಡು
ಶರಣು ತಂದೆ ಬಸವಣ್ಣ ಎಂದಾಗ, ಶರಣು ಶರಣಾರ್ಥಿ ಗಳು ಹರಳಯ್ಯನವರೆ ಎಂದು ಹೇಳಿದಾಗ ,
ಅಯ್ಯೋ ಒಂದು ಶರಣು ಹೆಚ್ಚಾಯಿತು. ಈ ಭಾರವನ್ನು ನಾನು ಯಾವುದರಿಂದ ಇಳಿಸಿಕೊಳ್ಳಬೇಕು ಎನ್ನುವ ಚಿಂತೆಗೆ ಒಳಗಾದ ಸಮಗಾರ ಹರಳಯ್ಯನವರು ,

ಬಸವಣ್ಣನವರಿಗೆ ತಮ್ಮ ತೊಡೆಯ ಚರ್ಮವನ್ನೇ ಕಿತ್ತು ಬಸವಣ್ಣನವರಿಗೆ ಪಾದುಕೆ ಮಾಡಿ ಭಾರವನ್ನು ಇಳಿಸಿಕೊಳ್ಳುವ ಚಿಂತೆಯಲ್ಲಿ ಸಮಗಾರ ಹರಳಯ್ಯನವರು,
ಚಿಂತೆಗೆ ಒಳಗಾದಾಗ ಆ ಚಿಂತೆಯನ್ನು ಹೋಗಲಾಡಿಸಿ, ತಮ್ಮ ತೊಡೆಯ ಚರ್ಮವನ್ನೇ ಕೊಯ್ದು ಕೊಟ್ಟು, ಶರಣ ಕುಲಕ್ಕೆ ಮಾದರಿ ಆಗಿ ನಿಂತ ದಿಟ್ಟ ಶರಣೆ ಕಲ್ಯಾಣಮ್ಮ ಮತ್ತು ಹರಳಯ್ಯನವರು ಆಗಿದ್ದಾರೆ .

ಇವರಿಗೆ ತಮ್ಮ ಬದುಕಿನ ಚಿಂತೆ ಗಿಂತ ಸಮಾಜವನ್ನು ಸುಧಾರಣೆ ಮಾಡುವ, ಸಮಾಜದಲ್ಲಿ ಪ್ರಾಣಿ ಹಿಂಸೆಯನ್ನು ತಡೆಯುವ ಆಲೋಚನೆ .ಕಾಯಕ ಜೀವಿಗಳಾದ ಶರಣ ಸಮಗಾರ ಹರಳಯ್ಯನವರದಾಗಿತ್ತು.

ಧರ್ಮಿಗೊಂದು ಚಿಂತೆ ಕರ್ಮಿಗೊಂದು ಚಿಂತೆ
ಚಿಂತೆ ಇಲ್ಲದೆ ಮನುಷ್ಯರೇ ಇಲ್ಲ ಈ ಸಮಾಜದಲ್ಲಿ.

ಆತ ಧರ್ಮಿ ಆದರೂ ಸರಿ ಕರ್ಮಿ ಆದರೂ ಸರಿ .
ಧರ್ಮಿಗೆ ತನ್ನ ಧರ್ಮದ ಚಿಂತೆ . ಧರ್ಮ ಸುಧಾರಣೆ ,ಪ್ರಚಾರ ಮತ್ತು ಪ್ರೋತ್ಸಾಹ.ಹೀಗೆ ನಾನಾ ವಿಧಗಳಲ್ಲಿ ಸಮಾಜದಲ್ಲಿ ಕಂಡು ಬರುವ ಕಷ್ಟಗಳು, ನೋವುಗಳ ಬಗ್ಗೆ ಚಿಂತಿಸುತ್ತಾನೆ .
ತನ್ನ ಪರಿಶುದ್ಧ ಕಾಯಕ ದಾಸೋಹ ಇದರ ಆಲೋಚನೆ ಧರ್ಮಿಗೆ ಇರುತ್ತದೆ.ಸ್ವಹಿತ ಹಾಗೂ ಪರಹಿತ ಎರಡನ್ನೂ ಸಾಧಿಸುವ ಕಾಯಕ ಧರ್ಮಿಗೆ ಇರುತ್ತದೆ.
ಎಲ್ಲ ಧರ್ಮದ ಜನರನ್ನು ಸಮಾನವಾಗಿ ಕಂಡು ಮಾನವ ಮಾನವರಾಗಿ ಉಳಿಯದೇ .ದೇವರಾಗಿ ಸಾಕ್ಷಾತ್ ಶಿವಸ್ವರೂಪಿಯಾಗಿ ನಿಂತು .ದೇವರೇ ಆಗಿ ತಮ್ಮ ಅನುಭವದ ಅಮೃತ ನುಡಿಗಳಿಂದ ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದುವ , ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ವ್ಯಕ್ತಿಗಳೇ ನಮಗಿಂದು ದೇವರಂತೆ ಕಂಡಾಗ ಭಕ್ತಿ ಭಾವಗಳಿಂದ ಭಾವ ಪರವಶರಾಗಿ ದೀರ್ಘ ದಂಡ ಪ್ರಣಾಮಗಳನ್ನು ಸಲ್ಲಿಸಿ .ಅನ್ನ ದಾಸೋಹಕ್ಕೆ ಅಡಿ ಟಿಪ್ಪಣಿ ಹಾಕಿ ನಿಲ್ಲುತ್ತೇವೆ .ಅಂತಹ ಅಡಿ ಟಿಪ್ಪಣಿ ಹಾಕಿದ ನನ್ನ ಅರಿವಿನ ಗಂಡ ಶ್ರೀ ಶೈಲ ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಭಕ್ತಿಯಿಂದ ಶರಣೆಂದು ಬೇಡಿಕೊಳ್ಳುವೆ ಎನ್ನುವರು ಅಕ್ಕ.

ಕರ್ಮಿಗೊಂದು ಚಿಂತೆ

ಧರ್ಮಕ್ಕೆ ವಿರುದ್ಧ ಕೆಲಸ ಮಾಡುವ ವನೇ ಕರ್ಮಿ. ಅಂದರೆ ಕೌಶಿಕ.
ರಾಜನಾಗಿ ರಾಜ ನೀತಿ ಪಾಲಿಸದ ಕರ್ಮಿ ಈ ಕೌಶಿಕ ಮಹಾರಾಜ .ಅಕ್ಕಳ ಮೂರು ವಚನಗಳನ್ನು ಪಾಲಿಸದೇ
ವಚನ ಭ್ರಷ್ಟನಾಗಿ ನಿಂತ ಪಾಪಿ ಕೌಶಿಕ ನಮಗಿಲ್ಲಿ ಕರ್ಮಿ ಅಂತೆ ಕಂಡು ಬರುವ ವ್ಯಕ್ತಿ.

ನಾನೇನು ಕರ್ಮ ಮಾಡಿದೆ .ನನ್ನ ಪಾಪ ಯಾವುದು? ನನ್ನ ಪುಣ್ಯದ ಕೆಲಸ ಯಾವುದು ,?ಎನ್ನುವ ಆಲೋಚನೆ ಕರ್ಮಿಯದು .
ತಾನು ಮಾಡಿದ ಪಾಪವನ್ನು ಕಳೆದುಕೊಳ್ಳಲು ಚಿಂತಿಸುತ್ತಾನೆ.
ಅಕ್ಕಳ ಭಾವದ ತುಂಬಾ ಚೆನ್ನಮಲ್ಲಿಕಾರ್ಜುನನೇ ತುಂಬಿರುವಾಗ .ಪಾಪಿ ಕೌಶಿಕ ಮಹಾರಾಜ ಅಕ್ಕಳಿಗೆ ಪಾಪದ ಕೆಲಸ ಮಾಡಿ ನಿಂತ ಒಬ್ಬ ಕರ್ಮಿಯಂತೆ ಕಂಡು ಬರುತ್ತಾನೆ.
ಕರ್ಮಿ ಗೆ ಒಂದೇ ಚಿಂತೆ.ತನ್ನ ಬಯಕೆಯ ಕಾಮವನ್ನು ತೀರಿಸಿಕೊಳ್ಳಲು ಸದಾ ಯೋಚನೆಯಲ್ಲಿ ತೊಡಗಿದ ವ್ಯಕ್ತಿ.
ಆತನಿಗೆ ಗುರು , ಲಿಂಗ, ಜಂಗಮ ದ ಅರಿವು ಇರಲಾರದು .
ತನ್ನ ಮನಸ್ಸಿಗೆ ಕಂಡಿದ್ದೆಲ್ಲ ದೋಚುವ ಕೆಟ್ಟ ಆಲೋಚನೆಗಳಲ್ಲಿ ತೊಡಗಿದ ವ್ಯಕ್ತಿ.
ಸಮಾಜದ ವ್ಯಕ್ತಿಗಳನ್ನು ಮರಳು ಮಾಡಿ ವಶಪಡಿಸಿಕೊಂಡು , ಬಣ್ಣದ ವೇಷಗಳನ್ನು ಹಾಕಿ ಕುಣಿಯುವ ವ್ಯಕ್ತಿಗೆ ತನ್ನ ಪಾಪ ಕರ್ಮದೇ ಚಿಂತೆ.ಇಂಥಹ ಚಿಂತೆಯಲ್ಲಿ ತೊಡಗಿದ ಕರ್ಮಿ ಗಳಿಗೆ ಅಕ್ಕನ ಭಾವ,ಅವಳಲ್ಲಿರುವ ನಿರ್ಮಲ ಭಕ್ತಿ ಯಾವುದೂ ಅರಿವಿಗೆ ಬಾರದು ಅದಕ್ಕಾಗಿ ಅಕ್ಕಳು ಎನಗೆ ಎನ್ನ ಚಿಂತೆ ಎನ್ನುವರು .

ಎನಗೆ ಎನ್ನ ಚಿಂತೆ

ಎನಗೆ ಎನ್ನ ಚಿಂತೆ ಕೌಶಿಕ ಮಹಾರಾಜ ನನಗೆ ನನ್ನ ಲಿಂಗದ ಚಿಂತೆ .ಈ ಲಿಂಗ ನನಗೆ ಒಲಿಯುವುದೋ ಅಥವಾ ಇಲ್ಲವೋ ಎನ್ನುವ ಚಿಂತೆ ನನಗೆ.
ಅರಿವಿನ ಜ್ಞಾನ ಸ್ವರೂಪಿ .ಹೇ ಪರಮಾತ್ಮ ಸ್ವರೂಪಿ ಚೆನ್ನಮಲ್ಲಿಕಾರ್ಜುನಾ ನನಗೆ ಒಲಿಯುವನೋ ,ಒಲಿಯಲಾರನೋ ಎನ್ನುವ ಚಿಂತೆಯಲ್ಲಿ ನಾನಿರುವೆ.

ಈ ಸಮಾಜದಲ್ಲಿ ಹೆಣ್ಣು,ಹೊನ್ನು ಹಾಗೂ ಮಣ್ಣಿಗಾಗಿ ಬಡಿದಾಡುವ ಮರುಳ ಮಾನವ ನನ್ನ ಸೆರಗ ಬಿಡು .ನಿನಗೆ ನಿನ್ನ ಕಾಮದ ಬಯಕೆ ಅಲ್ಲವೇ ?

ಚೆನ್ನ ಮಲ್ಲಿಕಾರ್ಜುನ ಎನ್ನುವ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ ಉಡಿಗೆ ತೊಡಿಗೆಗಳ ಹಂಗೇಕೋ ಮರುಳೇ ಸೆರಗ ಬಿಡು ಮರುಳೆ ಎನ್ನುವರು ಅಕ್ಕ.

ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ,
ನಮಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?

ಆ ಚೆನ್ನಮಲ್ಲಿಕಾರ್ಜುನನ ಚಿಂತೆ ನನಗೆ. ಆತ ಒಲಿಯುವನೋ ,ಒಲಿಯಲಾರನೋ ಎನ್ನುವ ಚಿಂತೆ ನನಗೆ ಆಗಿದೆ ಎನ್ನುವರು ಅಕ್ಕ.

ಒಟ್ಟಿನಲ್ಲಿ ಮಾನವನಾಗಿ ಹುಟ್ಟಿದ ಮೇಲೆ ಶಿವನ ಚಿಂತೆಯಲ್ಲಿ ನಾವು ತೊಡಗಬೇಕು .ದೇವರ ಹಾಗೆ ಆಗದಿದ್ದರೂ ಸಮಾಜದಲ್ಲಿ ಒಳ್ಳೆಯ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಮಾನವರಾಗೋಣ ಹೊರತು ದಾನವರಾಗುವುದು ಬೇಡ . ಎನ್ನುವ ಸತ್ಯ ಮಾರ್ಗವನ್ನು ಅನುಸರಿಸಿ . ಸಹಬಾಳ್ವೆ.ಸವಿ ನುಡಿ ಸವಿನಯ , ಸದ್ವಿಚಾರಗಳನ್ನು ಪಾಲಿಸಿ , ಸಂಸ್ಕೃತಿ ಸಂಸ್ಕಾರ ದ ನಡೆ ನುಡಿ ಗಳು ಜೀವಂತ ಸಾಕ್ಷಿ ಯಾಗಿ ನಿಲ್ಲಲಿ ಎಂದು ಅನುಭಾವ ನುಡಿಗೆ ವಿರಾಮ ನೀಡುವೆ .
ಶರಣು ಶರಣಾರ್ಥಿಗಳು.

 

ಡಾ ಸಾವಿತ್ರಿ ಕಮಲಾಪೂರ
ಬೆಳಗಾವಿ 

Don`t copy text!