ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ

ಅಜಾತ ಶತ್ರುಅಟಲ್ ಬಿಹಾರಿ ವಾಜಪೇಯಿ

ಅಜಾತ ಶತ್ರುಅಟಲ್ ಬಿಹಾರಿ ವಾಜಪೇಯಿ( 25 ಡಿಸೆಂಬರ್ 1924 – 16 ಆಗಸ್ಟ್ 2018)ಯವರು ಭಾರತದ ಮಾಜಿ ಪ್ರಧಾನಮಂತ್ರಿ, ರಾಜಕಾರಣಿ, ಶ್ರೇಷ್ಠ ಸಂಸದೀಯ ಪಟು, ವಾಗ್ಮಿ, ಕವಿ, ನೇತಾರ ಹಾಗೂ ಜನನಾಯಕ. ಮೂರು ಬಾರಿ ಭಾರತದ ಪ್ರಧಾನಮಂತ್ರಿಯಾಗಿ ಇದಕ್ಕೂ ಮುಂಚೆ ವಿದೇಶಾಂಗ ಸಚಿವರಾಗಿ, ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ತಮ್ಮ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಮತ್ತು ನಡವಳಿಕೆಗಳಿಂದ ಅತ್ಯಂತ ಜನಪ್ರಿಯ ನಾಯಕರಾಗಿದ್ದರು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಕೂಟದ ಅಧ್ಯಕ್ಷರಾಗಿದ್ದರು.

ಅವರು ಮೂರು ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದರು, ಮೊದಲ ಬಾರಿಗೆ 1996 ರಲ್ಲಿ 13 ದಿನಗಳ ಅವಧಿಗೆ, 1998 ರಿಂದ 1999 ರವರೆಗೆ ಹನ್ನೊಂದು ತಿಂಗಳ ಅವಧಿ, ಮತ್ತು ನಂತರ 1999 ರಿಂದ 2004 ರವರೆಗಿನ ಪೂರ್ಣಾವಧಿಗೆ.ಲೋಕಸಭೆ, ಕೆಳಮನೆಗೆ ಹತ್ತು ಬಾರಿ ಮತ್ತು ಮೇಲ್ಮನೆಗೆ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾದ ಅವರು ನಾಲ್ಕು ದಶಕಗಳ ಕಾಲ ಭಾರತೀಯ ಸಂಸತ್ ಸದಸ್ಯರಾಗಿದ್ದರು. 2009 ರವರೆಗೆ ಉತ್ತರ ಪ್ರದೇಶದ ಲಖನೌದ ಸಂಸತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಆರೋಗ್ಯದ ಕಾರಣದಿಂದಾಗಿ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತರಾದರು. 1968 ರಿಂದ 1972 ರವರೆಗೆ ನೇತೃತ್ವ ವಹಿಸಿದ್ದ ಹಿಂದಿನ ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ವಾಜಪೇಯಿ ಒಬ್ಬರಾಗಿದ್ದರು. ಪ್ರಧಾನಿ ಮೊರಾರ್ಜಿ ದೇಸಾಯಿಯ ಕ್ಯಾಬಿನೆಟ್ನಲ್ಲಿ ವಿದೇಶಾಂಗ ಸಚಿವರಾಗಿದ್ದರು. ಅವರೊಬ್ಬ ಕವಿ, ಪತ್ರಕರ್ತ, ವಾಗ್ಮಿ, ಚಿಂತಕ, ದಾರ್ಶನಿಕ, ರಾಜಕಾರಣಿಯಾಗಿದ್ದರು.

1951ರ ಅನಂತರ ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಡಾ. ಶ್ಯಾಮಪ್ರಸಾದ ಮುಖರ್ಜಿಯವರ ನಿಕಟವರ್ತಿ-ಆಪ್ತ ಕಾರ್ಯದರ್ಶಿ. ಜನಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖಪಾತ್ರ ವಹಿಸಿದರು(1951). ಅನಂತರ ಸಂಸತ್ತಿನ ಸದಸ್ಯರಾದರು.

ಜನಸಂಘ ಪಾರ್ಲಿಮೆಂಟರಿ ಪಕ್ಷದ ನಾಯಕರಾಗಿ (1955-77) ಕಾರ್ಯ ನಿರ್ವಹಿಸಿದರು. ಇವರು 5-7 ಮತ್ತು 10-13 ಲೋಕಸಭಾ ಅವಧಿಯಲ್ಲಿ ಸಂಸತ್ ಸದಸ್ಯರಾಗಿದ್ದರು.

ಲೋಕಸಭೆಗೆ 1957ರಲ್ಲಿ ಮೊದಲು ಆಯ್ಕೆಯಾದರು. [೪]1977ರಲ್ಲಿ ಜನತಾ ಪಕ್ಷ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು.

ಇವರು ರಾಜ್ಯಸಭಾ ಸದಸ್ಯರಾಗಿಯೂ (1962, 86 ಮತ್ತು 88) ಕಾರ್ಯ ನಿರ್ವಹಿಸಿದ್ದಾರೆ. ಲಖನೌದಿಂದ ಸತತವಾಗಿ ಐದು ಬಾರಿ ಸಂಸತ್ತಿಗೆ ಚುನಾಯಿತರಾದುದು ಇವರ ಹೆಗ್ಗಳಿಕೆ. ಸಂಸತ್ತಿನ ಇತಿಹಾಸದಲ್ಲಿ ವಿವಿಧ ರಾಜ್ಯಗಳಿಂದ ಅನೇಕ ಬಾರಿ ಚುನಾಯಿತರಾದ ಸದಸ್ಯರೂ ಇವರೆಂಬ ಹೆಗ್ಗಳಿಕೆ ಇದೆ (ಉತ್ತರಪ್ರದೇಶ, ಗುಜರಾತ್, ಮಧ್ಯಪ್ರದೇಶ ಹಾಗೂ ದೆಹಲಿ). ಎರಡು ಬಾರಿ ರಾಜ್ಯಸಭಾ ಸದಸ್ಯರೂ ಆಗಿದ್ದರು.

ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. 1968 ಹಾಗೂ 1973ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು.

ಇವರು ಜನತಾ ಪಕ್ಷದ ಸ್ಥಾಪಕ ಸದಸ್ಯರೂ ಆಗಿದ್ದರು(1977-80). ಭಾರತೀಯ ಜನತಾ ಪಕ್ಷ ಹಾಗೂ ಈ ಪಕ್ಷದ ಸಂಸದೀಯ ನಾಯಕರೂ ಆಗಿದ್ದರು. ನಾಲ್ಕು ದಶಕಗಳ ಕಾಲ ನಿರಂತರ ಸಂಸತ್ ಸದಸ್ಯರಾಗಿದ್ದ ಇವರು ಅಪಾರ ಅನುಭವ ಗಳಿಸಿದ್ದಾರೆ. ಹನ್ನೊಂದನೆಯ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಮೊರಾರ್ಜಿದೇಸಾಯಿಯವರ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಖ್ಯಾತಿಗಳಿಸಿದರು(1977-79). ಚೀನದೊಡನೆ ಮುರಿದು ಹೋಗಿದ್ದ ರಾಜತಾಂತ್ರಿಕ ಸಂಪರ್ಕವೇರ್ಪಡಿಸಿದ್ದು ಇವರ ಸಾಧನೆ.

ಶ್ರೀ ವಾಜಪೇಯಿ ಯವರು ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ 1977 ರಿಂದ ಜುಲೈ 1979 ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. 1980ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌.ಎಸ್‌.ಎಸ್‌ ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ.

ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು 1980ರಿಂದ 1984 ರವರೆಗೆ ಹಾಗೂ 1986 ರಿಂದ 1993 ಮತ್ತು 1996ರಲ್ಲಿ ಕಾರ್ಯ ನಿರ್ವಹಿಸಿದರು. 11ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು. ೨೦೧೫ರ ಇಂಡಿಯಾ ಟುಡೇ ಪತ್ರಿಕೆಯ ಸರ್ವೆಯ ಅನ್ವಯ ವಾಜಪೇಯಿ ಭಾರತದ ೨ ಜನಪ್ರಿಯ ಪ್ರಧಾನಮಂತ್ರಿಯಾಗಿದ್ದರು.

ಪ್ರಧಾನಮಂತ್ರಿಯಾಗಿ ಮೊದಲ ಕಾರ್ಯಾವಧಿ

1996ರಲ್ಲಿ ನಡೆದ ಲೋಕ ಸಭಾ ಚುನಾವಣೆಯಲ್ಲಿ ಬಿ ಜೆ ಪಿ ಹೆಚ್ಚು ಮತಗಳನ್ನು ಪಡೆದ ಏಕ ಪಕ್ಷವಾಗಿ ಹೊರ ಹೊಮ್ಮಿತು. 519 ಸೀಟುಗಳ ಪೈಕಿ ಬಿ ಜೆ ಪಿ 187 ಸೀಟುಗಳನ್ನು ಗೆದ್ದರೆ ಕಾಂಗ್ರೆಸ್ 140 ಹಾಗು ಬಿ ಜೆ ಪಿಯೇತರ, ಕಾಂಗ್ರೆಸ್ಸೇತರ ಪಕ್ಷಗಳ ಸಂಘ ಯುನೈಟೆಡ್ ಫ್ರಂಟ್ 192 ಸೀಟುಗಳನ್ನು ಗೆದ್ದುಕೊಂಡಿತು. ಹೆಚ್ಚು ಸೀಟು ಪಡೆದ ಏಕೈಕ ಪಕ್ಷವಾದ ಕಾರಣ ಬಿ ಜೆ ಪಿ ಗೆ ಸರ್ಕಾರ ರಚಿಸಲು ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಆಹ್ವಾನವಿತ್ತರು.

ಸ್ಥಳೀಯ ಹಾಗೂ ಕಾಂಗ್ರೆಸ್ಸೇತರ ಪಕ್ಷಗಳು ಬಿ ಜೆ ಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಬಹುದೆಂದು ಭಾವಿಸಿ ವಾಜಪೇಯಿ ಭಾರತದ ಹತ್ತನೇ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿ ಜೆ ಪಿ ನಾಯಕತ್ವದಲ್ಲಿ ಸರ್ಕಾರ ರಚನೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಆದರೆ ಯುನೈಟೆಡ್ ಫ್ರಂಟ್ ಬಹುಮತ ಸಾಧಿಸಲು ಕಾಂಗ್ರೆಸ್ ಅನ್ನು ಬಾಹ್ಯ ಬೆಂಬಲಕ್ಕಾಗಿ ಯಾಚಿಸಿತು.

ಕಾಂಗ್ರೆಸ್ ಇದಕ್ಕೆ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದರಿಂದ ವಾಜಪೇಯಿ ಕೇಂದ್ರದಲ್ಲಿ ಬಹುಮತ ಸಾಧಿಸಲು ಸಾಧ್ಯವಾಗಲಿಲ್ಲ. ಯುನೈಟೆಡ್ ಫ್ರಂಟ್ H.D.ದೇವೇಗೌಡರ ಮುಂದಾಳತ್ವದಲ್ಲಿ ಸರ್ಕಾರ ರಚನೆ ಮಾಡಲು ಮುಂದಾದಾಗ ಕೇವಲ ಹದಿಮೂರು ದಿನವಾಗಿದ್ದ ವಾಜಪೇಯಿ ಸರ್ಕಾರ ಪತನಗೊಂಡಿತು.

ಪ್ರಧಾನಮಂತ್ರಿಯಾಗಿ ಎರಡನೇ ಕಾರ್ಯಾವಧಿ

1998 ರಲ್ಲಿ ಚುನಾವಣೆಗಳು ನಡೆದಾಗ ಮತ್ತೆ ಬಿ ಜೆ ಪಿ ಯೇ ಮಿಕ್ಕ ಪಕ್ಷಗಳಿಗಿಂತ ಮುನ್ನಡೆ ಸಾಧಿಸಿತಾದರೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಕೂಡಲೇ ಸಮಾನ ಮನಸ್ಕ ಪಕ್ಷಗಳ ಒಡಗೂಡಿ ಎನ್ ಡಿ ಎ ಮೈತ್ರಿ ಕೂಟ ರಚಿಸಿತು.ಮೈತ್ರಿ ಕೂಟದ ಮೂಲಕ ಬಹುಮತ ಸಾಧಿಸಿದ ಕಾರಣ 10 ಮಾರ್ಚ್ 1998 ರಂದು ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಲಾಯಿತು.

ಈ ಅವಧಿಯಲ್ಲಿಯೇ ದೇಶ ಕಾರ್ಗಿಲ್ ಯುದ್ಧವನ್ನು ಎದುರಿಸಿತು. ಎನ್ ಡಿ ಎ ಮೈತ್ರಿ ಕೂಟದಲ್ಲಿದ್ದ ಒಂದು ಮುಖ್ಯ ಪಕ್ಷ ತಮಿಳುನಾಡಿನ ಎ ಐ ಎ ಡಿ ಎಂ ಕೆ. 1999 ರಲ್ಲಿ ಬಿ ಜೆ ಪಿ ಪಕ್ಷವು ಜಯಲಲಿತಾ ಕೆಲವು ಭ್ರಷ್ಟಾಚಾರ ಸಂಬಂಧಿ ದೂರುಗಳಲ್ಲಿ ನಿಯಂತ್ರಣ ಕಾಯ್ದುಕೊಳ್ಳಲು ಹವಣಿಸಿರುವ ಬಗ್ಗೆ ಗಂಭೀರ ಆರೋಪ ಮಾಡಿತು. ಎನ್ ಡಿ ಎ ಮೈತ್ರಿ ಕೂಟ ಸರ್ಕಾರ ಪತನವಾಗುವಂತಹ ಯಾವ ಒಪ್ಪಂದಗಳಿಗೂ ಅವಕಾಶವಿಲ್ಲ ಎಂದಿತು.

ಕೂಡಲೇ ಜಯಲಿತಾ ಸರ್ಕಾರಕ್ಕೆ ಕೊಟ್ಟಿದ್ದ ತಮ್ಮ ಬೆಂಬಲವನ್ನು ಹಿಂಪಡೆದರು. ಸರ್ಕಾರ ರಚಿಸಲು ಬೇಕಾದಷ್ಟು ಸೀಟುಗಳ ಸಂಖ್ಯೆಯನ್ನು ವಾಜಪೇಯಿ ಸರ್ಕಾರ ಹೊಂದಿಲ್ಲದ ಕಾರಣ ವಿಶ್ವಾಸ ಮತಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾಗಿ ನಿರ್ಧರಿಸಲಾಯಿತು. ಆದರೆ ವಿಶ್ವಾಸ ಮತಗಳಲ್ಲಿಯೂ ಅವಶ್ಯ ಸಂಖ್ಯೆಯನ್ನು ತಲುಪಲು ಸಾಧ್ಯವಾಗದ ಕಾರಣ ವಾಜಪೇಯಿ ಸರ್ಕಾರ ಪತನವಾಯಿತು.

ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರಿಗೆ ಸರ್ಕಾರ ರಚಿಸಲು ಸಾಧ್ಯವಾದ ಪಕ್ಷದಲ್ಲಿ ಮತ್ತೊಂದು ಸರ್ಕಾರ ರಚನೆ ಮಾಡಲು ಸೂಚಿಸಿದರು, ಆದರೆ ಕಾಂಗ್ರೆಸ್ ಪಕ್ಷವು ಬಹುಮತಗಳ ಕೊರತೆಯಿಂದ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದಿತು.

ಯಾವ ಪಕ್ಷಗಳಿಗೂ ಬಹುಮತವಾಗದ ಕಾರಣ ಹನ್ನೆರಡನೆ ಲೋಕಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆದೇಶ ಹೊರಡಿಸಿದರು. ಹಾಗೂ ಮುಂದಿನ ಚುನಾವಣೆಗಳು ನಡೆದು ಫಲಿತಾಂಶ ಪ್ರಕಟವಾಗುವ ವರೆವಿಗೂ ವಾಜಪೇಯಿ ಕಾರ್ಯ ನಿರ್ವಾಹಕ ಪ್ರಧಾನಿಯಾಗಿ ಮುಂದುವರೆಯಲು ಸೂಚಿಸಿದರು.

ಅಣ್ವಸ್ತ್ರ ಪರೀಕ್ಷೆ  ಫೋಖ್ರಾನ್ 

ಮೇ 1998 ರಲ್ಲಿ ಭಾರತ ತನ್ನ ಸೇನಾ ಬಲವನ್ನು ಎಲ್ಲ ವಿಧದಿಂದಲೂ ಹೆಚ್ಚಿಸಿಕೊಳ್ಳಲು ತೀರ್ಮಾನಿಸಿ ಆಪರೇಷನ್ ಶಕ್ತಿ ಹೆಸರಿನ ಅಣು ಬಾಂಬ್ ಪರೀಕ್ಷೆ ನಡೆಸಿತು. 1974 ರಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಭಾರತವು ಮೊದಲ ಬಾರಿಗೆ ಅಣು ಸ್ಫೋಟವನ್ನು ಪರೀಕ್ಷಾರ್ಥವಾಗಿ ನಡೆಸಿ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿತ್ತು.

1999 ರಲ್ಲಿ ವಾಜಪೇಯಿ ಪ್ರಧಾನಿ ಯಾದ ಕೇವಲ ಎರಡೇ ತಿಂಗಳಲ್ಲಿ ರಾಜಸ್ತಾನದ ಫೋಖ್ರಾನ್ ಎಂಬಲ್ಲಿ ಸುಧಾರಿತ ಅಣ್ವಸ್ತ್ರಗಳನ್ನು ಪರೀಕ್ಷಿಸಲು ಉತ್ಸುಕರಾಗಿದ್ದ ವಿಜ್ಞಾನಿಗಳಿಗೆ ವಾಜಪೇಯಿಯವರಿಂದ ಹಸಿರು ನಿಶಾನೆ ದೊರೆಯಿತು. ಆದರೆ ನಿಜವಾಗಿ ಸಾಧಿಸಿ ತೋರಿಸುವುದು ಬಹಳ ಕಷ್ಟಕರವಾಗಿತ್ತು. ದೇಶದ ತುಂಬಾ ಹರಡಿಕೊಂಡಿದ್ದ ಪಾಕಿಸ್ತಾನಿ ಬೇಹುಗಾರಿಕೆ ವ್ಯಕ್ತಿಗಳು ಹಾಗೂ ಅಮೇರಿಕಾ ಗುಪ್ತಚರ ಇಲಾಖೆಯ (ಸಿ ಐ ಎ) ಏಜೆಂಟ್ ಗಳು ವಿಷಯ ಸೋರಿಕೆ ಮಾಡುವ ಆತಂಕವಿದ್ದೇ ಇತ್ತು. 1974 ರ ನಂತರದ ದಿನಗಳಲ್ಲಿ ಕೆಲವಾರು ಬಾರಿ ಭಾರತದ ಅಣ್ವಸ್ತ್ರ ಪರೀಕ್ಷೆಗೆ ಅಮೇರಿಕಾ ಗುಪ್ತಚರ ಇಲಾಖೆಯ ಏಜೆಂಟ್ ಗಳು ಸುದ್ದಿ ಸೋರಿಕೆ ಮಾಡಿ ತಣ್ಣೀರೆರಚಿದ್ದರು.

ಈ ಬಾರಿ ಪರೀಕ್ಷೆಯನ್ನು ಇವರಾರಿಗೂ ತಿಳಿಯದಂತೆ ನಡೆಸಬೇಕಾಗಿತ್ತು. ಗುಪ್ತಚರ ಇಲಾಖೆಯ ಏಜೆಂಟ್ ಗಳಷ್ಟೇ ಅಲ್ಲದೆ ಅಮೇರಿಕಾ ದೇಶದ ಉಪಗ್ರಹವೊಂದು ಭಾರತದ ಅಂತರಾಷ್ಟ್ರೀಯ ಗಡಿಗಳ ಮೇಲೆ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಗಾವಲಿಟ್ಟಿತ್ತು. ಆ ಉಪಗ್ರಹ ಎಷ್ಟು ಕರಾರುವಕ್ಕಾಗಿತ್ತು ಎಂದರೆ ಭಾರತದ ಗಡಿಯಲ್ಲಿ ನಿಂತಿರುವ ಯೋಧನೊಬ್ಬನ ಕೈಗೆ ಕಟ್ಟಿದ ಗಡಿಯಾರದ ಫೋಟೋ ತೆಗೆದು ಅದರಲ್ಲಿ ಸಮಯವೆಷ್ಟು ಎಂದು ಹೇಳಬಹುದಿತ್ತಂತೆ.

ಇಂತಹ ಬಿಗಿಯಾದ ಹದ್ದಿನ ಕಣ್ಣು ಇರಿಸಿರುವ ಸಮಯದಲ್ಲಿ ಅಣು ಬಾಂಬ್ ಪರೀಕ್ಷೆ ನಡೆಸುವುದು ದೊಡ್ಡ ಸಾಹಸವೇ ಆಯಿತು. ಅಣು ಪರೀಕ್ಷೆ ನಡೆಸಬೇಕಾಗಿದ್ದ ಜಾಗದಲ್ಲಿ “ನೀರಾವರಿ ಕಾಮಗಾರಿ ನಡೆಯುತ್ತಿದೆ” ಎಂದು ಬೋರ್ಡು ಹಾಕಲಾಗಿತ್ತಂತೆ. ವಿಜ್ಞಾನಿಗಳಿಗೆ ಹಾಗೂ ಭೂಮಿಯನ್ನು ಅಗೆಯುತ್ತಿದ್ದ ಭಾರತೀಯ ಸೈನಿಕರಿಗೆ ಸಾರ್ವಜನಿಕ ಇಲಾಖೆಯ ಕಾಮಗಾರಿ ಕಾರ್ಮಿಕರಿಗೆ ಕೊಡಲಾಗುವಂತಹ ಮಾದರಿಯ ಬಟ್ಟೆ ಕೊಡಲಾಗಿತ್ತಂತೆ.

ಇನ್ನು ಯಾವ ಕಾರಣಕ್ಕೂ ಯಾರಿಗೂ ಅನುಮಾನ ಬರದಿರುವಂತೆ ನೋಡಿಕೊಳ್ಳಲು ಸ್ಫೋಟಕ್ಕೆ ಸಂಬಂಧಿಸಿದ ಕಾರ್ಯವೆಲ್ಲವೂ ಬರೀ ರಾತ್ರಿ ವೇಳೆ ನಡೆಯುತ್ತಿತ್ತಂತೆ. ಅಣು ಬಾಂಬ್ ಸ್ಫೋಟವಾದ ವಿಷಯ ತಿಳಿದಿದ್ದು ಖುದ್ದು ವಾಜಪೇಯಿಯವರು ಪ್ರಧಾನಮಂತ್ರಿ ಗೃಹದಲ್ಲಿ ಪತ್ರಕರ್ತರ ಸಭೆ ಕರೆದು ಫೋಖ್ರಾನ್ ಬಾಂಬ್ ಸ್ಫೋಟದ ಬಗ್ಗೆ ಅಧೀಕೃತವಾಗಿ ಧೃಡಪಡಿಸಿದಾಗಲೇ.

ಫೋಖ್ರಾನ್ ಸಮೀಪದಲ್ಲಿದ್ದ ಹಳ್ಳಿಯೊಂದರ ಜನಗಳನ್ನು ಬಾಂಬ್ ಸ್ಫೋಟಕ್ಕೂ ಕೆಲವು ಗಂಟೆಗಳ ಮುನ್ನ ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿತ್ತಂತೆ. ಆದರೆ ಸ್ಥಳಾಂತರಗೊಂಡ ಜನರಿಗೂ ಕಾರಣವೇನು ಎನ್ನುವುದು ತಿಳಿದಿರಲಿಲ್ಲವಂತೆ. ಸ್ಫೋಟಾನಂತರ ರಷ್ಯಾ ಹಾಗೂ ಫ್ರಾನ್ಸ್ ದೇಶಗಳು ಭಾರತದ ಸೇನೆಯು ಸೇನಾ ಬಲ ಹೆಚ್ಚಿಸಿಕೊಳ್ಳುವ ಸಲುವಾಗಿ ಅಣ್ವಸ್ತ್ರ ಹೊಂದುವ ಹಾಗೂ ಅದರ ಶಕ್ತಿಯನ್ನು ಖಾತ್ರಿ ಪಡಿಸಿಕೊಂಡ ನಿಲುವನ್ನು ಸಮರ್ಥಿಸಿಕೊಂಡರೆ, ಅಮೇರಿಕಾ, ಕೆನಡಾ, ಜಪಾನ್, ಬ್ರಿಟನ್ ಹಾಗೂ ಯೂರೋಪ್ ಒಕ್ಕೂಟದ ದೇಶಗಳು ಭಾರತದ ನಿಲುವಿಗೆ ಹರಿಹಾಯ್ದವು.

ಭಾರತದೊಂದಿಗೆ ಇನ್ನು ಮುಂದೆ ನವೀನ ತಂತ್ರಜ್ಞಾನದ ಮಾಹಿತಿಗಳನ್ನು ಹಾಗೂ ಯಾವುದೇ ರೀತಿಯ ಸಂಪನ್ಮೂಲಗಳನ್ನು ಹಂಚಿ ಕೊಳ್ಳದಂತೆ ತಮ್ಮ ತಮ್ಮಲ್ಲೇ ಒಪ್ಪಂದ ಮಾಡಿಕೊಂಡವು. ಭಾರತದ ಅಣ್ವಸ್ತ್ರ ಪರೀಕ್ಷೆಯ ವಿಷಯ ಅಂತರಾಷ್ಟ್ರೀಯ ವೇದಿಕೆಯಲ್ಲಿ ಬಾರೀ ಚರ್ಚೆಗೆ ಗ್ರಾಸವಾಯಿತು. ಹಲವಾರು ದೇಶಗಳು ಭಾರತದಲ್ಲಿ ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿದವು.

ಮತ್ತೆ ಕೆಲವು ರಾಷ್ಟ್ರಗಳು ಭಾರತಕ್ಕೆ ಯಾವ ಸಹಾಯಧನವನ್ನು ಕೊಡದಂತೆ ವಿಶ್ವಸಂಸ್ಥೆಯಲ್ಲಿ ದೂರಿ ಭಾರತದ ಮೇಲೆ ಆರ್ಥಿಕ ನಿರ್ಬಂಧ ಹೇರಿಸಿದರು. ವಾಜಪೇಯಿ ನೇತೃತ್ವದಲ್ಲಿ ಇಂತಹ ಕ್ಲಿಷ್ಟ ಪರಿಸ್ತಿತಿಯನ್ನು ಬಗೆಹರಿಸಿಕೊಳ್ಳಲಾಯಿತು. ವಾಜಪೇಯಿ ಮೇಲೆ ಜನರಿಗಿದ್ದ ನಂಬಿಕೆ ಇಮ್ಮಡಿಯಾಗಲು ಇದೂ ಒಂದು ಕಾರಣವಾಯಿತು.

ಆರ್ಥಿಕ ಸಂಕಷ್ಟಗಳಲ್ಲಿಯೂ ಯಶಸ್ವಿಯಾಗಿ ದೇಶ ಮುನ್ನಡೆಸಿದ್ದನ್ನು ಅಂತರಾಷ್ಟ್ರೀಯ ನಾಯಕರೂ ಕೊಂಡಾಡಿದರು, ಒಟ್ಟಿನಲ್ಲಿ ವಾಜಪೇಯಿಯವರ ರಾಜಕೀಯ ಚತುರತೆಯನ್ನು, ಇಚ್ಚಾ ಶಕ್ತಿಯನ್ನು, ಆಡಳಿತ ವೈಖರಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಸರಿಸಲು ಫೋಖ್ರಾನ್ ಸ್ಫೋಟವೂ ಮುಖ್ಯ ಪಾತ್ರ ವಹಿಸಿತು.

ಕಾರ್ಗಿಲ್ ಯುದ್ಧ

ಜಮ್ಮು ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ತಾನಿ ಸೈನಿಕರು ಅಂತರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999 ನೇ ಇಸವಿಯ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರ ಕಣ್ಣು ಕೆಂಪಗಾಗಿಸಲು ಒಂದು ಕಾರಣವಾಯಿತು.

ಬರಿಯ ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್ ಪೋಸ್ಟ್ ಗಳ ಮುಖಾಂತರ ಸಿಯಾಚಿನ ಗಡಿವರೆವಿಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ತಾನಿ ನಾಯಕರ ಹೇಳಿಕೆಗಳು ಪಾಕಿಸ್ತಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು.

ಕೇಂದ್ರ ಸರ್ಕಾರ ಜೂನ್ 1999 ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡುಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ತಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು. * ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ೫೨೭ ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ತಾನ ಬಣದಲ್ಲಿ ಸುಮಾರು ೬೦೦-೪೦೦೦ ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಯಿತು.

ಇದರಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಆಗಷ್ಟೇ ತಾನೇ ಸಿದ್ಧಪದಿಸಿಕೊಂಡಿದ್ದ ಅಣು ಬಾಂಬ್ ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಭಿಸಿದವು. ವಿಷಯ ತಿಳಿದ ಆಗಿನ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣು ಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ತಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೇರಿಕಾ ಹಾಗು ಚೀನಾ ತಾವು ಮಧ್ಯ ಪ್ರವೇಶಿಸುವುದಕ್ಕೆ ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನು ನಿಂತಿರಲಿಲ್ಲ, ಪಾಕಿಸ್ತಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.

ಕೂಡಲೇ ಪಾಕಿಸ್ತಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ರಲ್ಲಿ ಪಾಕಿಸ್ತಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ತಾನದಲ್ಲಿ ಸರ್ಕಾರಕ್ಕೂ ಹಾಗು ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆ ಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು.

ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞೆಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ ಅಷ್ಟರಲ್ಲಾಗಲೇ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ತಾನದ ಒಂದು ಸೇನಾ ತುಕಡಿ(ಏನ್ ಎಲ್ ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕಿಸ್ತಾನಿ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು.

ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕಿಸ್ತಾನ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗು ಹಲವಾರು ಸಾವು ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕಿಸ್ತಾನದ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು.

ಈ ಯುದ್ಧ ಆಗಿನ ಪ್ರಧಾನ ಮಂತ್ರಿ ವಾಜಪೇಯಿ ಯವರ ವ್ಯಕ್ತಿತ್ವವನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಹಕಾರಿಯಾಯಿತು. ದೇಶದಲ್ಲಿ ಅಸಂಖ್ಯಾತ ಜನಗಳು ವಾಜಪೇಯಿಯವರ ಧೈರ್ಯವಾಗಿ ತೀರ್ಮಾನ ತೆಗೆದುಕೊಳ್ಳುವ ಹಾಗು ಎಷ್ಟೇ ಕಷ್ಟವಾದರೂ ಅದಕ್ಕೆ ಬದ್ಧರಾಗಿ ಗೆಲ್ಲುವ ಛಾತಿಯನ್ನು ಮೆಚ್ಚಿಕೊಂಡರು ಹಾಗು ಅವರ ಅಭಿಮಾನಿಗಳು ಆದರು.

ಕಾರ್ಗಿಲ್ ಯುದ್ಧ ಅಷ್ಟೊಂದು ಪ್ರಚಾರ ಪಡೆಯಲು ಇದ್ದ ಒಂದೇ ಒಂದುಕಾರಣವೆಂದರೆ ಅದು ಎರಡು ಅಣ್ವಸ್ತ್ರ ರಾಷ್ಟ್ರಗಳು ಮುಖಾಮುಖಿಯಾಗಿ ಯುದ್ಧ ಮಾಡುತ್ತಿರುವುದು. ದಕ್ಷಿಣ ಏಷಿಯಾದ ಈ ಎರಡೂ ಸಹೋದರ ರಾಷ್ಟ್ರಗಳೇ ಅಣ್ವಸ್ತ್ರಗಳಿಂದ ಬಡಿದಾಡಿ ಕೊಂಡರೆ ಜಗತ್ತಿಗೆ ಕೆಟ್ಟ ಅರ್ಥ ರವಾನೆಯಾಗುವುದಾಗಿ ಎಲ್ಲ ರಾಷ್ಟ್ರಗಳಿಗೂ ಆತಂಕ ಮನೆ ಮಾಡಿತ್ತು. ಆದರೆ ಅಂದಿನ ಭಾರತದ ಪ್ರಧಾನಿ ವಾಜಪೇಯಿ ಅಷ್ಟೇ ಸಮಾಧಾನದಿಂದ ಪರಿಸ್ಥಿತಿ ತಿಳಿಯಾಗಿಸಲು ಯತ್ನಿಸಿದರು .

ಯುದ್ಧಕ್ಕಿಂತಲೂ ಮುಂಚೆ ಪಾಕಿಸ್ತಾನದೊಂದಿಗೆ ಶಾಂತಿ ಮಾತು ಕತೆ ನಡೆಸಿದ್ದರು. ಎರಡೂ ರಾಷ್ಟ್ರಗಳ ಶಾಂತಿಯ ಹಾಗೂ ಸ್ನೇಹದ ಧ್ಯೋತಕವಾಗಿ ಭಾರತದಿಂದ ಪಾಕಿಸ್ತಾನದ ಲಾಹೋರ್ ಗೆ ಬಸ್ ಸೇವೆಯನ್ನು ಆರಂಭಿಸಿದ್ದರು. ಯುದ್ಧ ಕಾಲದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಡ ಸೃಷ್ಟಿಯಾದರೂ ತುರ್ತು ಪರಿಸ್ತಿತಿ ಘೋಷಿಸದೆ ಸೇನೆಯನ್ನು ಹುರಿದುಂಬಿಸಿದರು. ಯುದ್ಧ ಸಮಯದಲ್ಲಿ ಸೈನಿಕರಿಗೆ ಹಿಂದೆಂದಿಗಿಂತಲೂ ಹೆಚ್ಚು ಅಧಿಕಾರ ಕೊಟ್ಟರು.

ಸಣ್ಣ ಪುಟ್ಟ ವಿಚಾರಗಳಿಗೂ ಮೇಲಧಿಕಾರಿಗಳ ಅಪ್ಪಣೆಗಾಗಿ ಅಲೆಯುತ್ತಿದ್ದ ಸೇನೆಯ ವಕ್ತಾರರಿಗೆ ಕೊಂಚ ಸಮಾಧಾನವೆನಿಸಿದ್ದೆ ಆಗ. ಇವೆಲ್ಲವುಗಳ ಮುಖಾಂತರ ವಾಜಪೇಯಿ ಶತ್ರು ಯಾರೇ ಆಗಿದ್ದರು ನಮ್ಮವರಲ್ಲಿ ಹುರುಪು ಮೂಡಿಸಿದರೆ ಯುದ್ಧವನ್ನು ಅರ್ಧ ಗೆದ್ದಂತೆ ಎಂಬ ಸ್ಪಷ್ಟ ಸಂದೇಶವನ್ನು ಸಾರಿದರು. ಈ ಎಲ್ಲ ಕಾರಣಗಳಿಂದಲೇ ವಾಜಪೇಯಿ ಜನ ಮಾನಸಗಳಲ್ಲಿ ನಿಂತರು.

ಪ್ರಧಾನಮಂತ್ರಿಯಾಗಿ ಮೂರನೇ ಅವಧಿ

ಕಾರ್ಗಿಲ್ ಯುದ್ಧ ನಡೆದ ಕೆಲವೇ ತಿಂಗಳುಗಳಲ್ಲಿ ನಡೆದ ಹದಿಮೂರನೇ ಲೋಕಸಭಾ ಚುನಾವಣೆಗಳು ನಡೆದು ಮತ್ತೆಯೂ ಬಿ ಜೆ ಪಿ ಪಕ್ಷ ಮುನ್ನಡೆ ಸಾಧಿಸಿತು. ಯುನೈಟೆಡ್ ಫ್ರಂಟ್ ಪಕ್ಷಗಳೂ ಕೂಡ ಮುನ್ನಡೆ ಸಾಧಿಸಿದವು.ಬಿ ಜೆ ಪಿ ನೇತೃತ್ವದ ಎನ್ ಡಿ ಎ 270 ಸೀಟುಗಳನ್ನು ಪಡೆಯಿತು, ಕಾಂಗ್ರೆಸ್ 156 ಸೀಟುಗಳಿಗೆ ತೃಪ್ತಿ ಪಟ್ಟುಕೊಂಡು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.

ಎನ್ ಡಿ ಎ ಸಮಾನ ಮನಸ್ಕ ಪಕ್ಷಗಳನ್ನು ಒಟ್ಟುಗೂಡಿಸಿ ಬಹುಮತ ಸಾಧಿಸಿತು.ಇದರ ಫಲವಾಗಿ ವಾಜಪೇಯಿ ನೇತೃತ್ವದಲ್ಲಿ ಸರ್ಕಾರ ರಚನೆಯಾಯಿತು. ಅಕ್ಟೋಬರ್ 1999 ರಲ್ಲಿ ವಾಜಪೇಯಿ ಮೂರನೇ ಬಾರಿಗೆ ಪ್ರಧಾನಿಯಾದರು.ಸಂಪೂರ್ಣ ಐದು ವರ್ಷ ಅವಧಿಯನ್ನು ಪೂರೈಸಿದ ಕಾಂಗ್ರೆಸ್ಸೇತರ ಮೊದಲ ಸರಕಾರವೆಂಬ ಪಾತ್ರಕ್ಕೂ ವಾಜಪೇಯಿ ಸರ್ಕಾರ ಭಾಜನವಾಯಿತು.

ಇಂಡಿಯನ್ ಏರ್ ಲೈನ್ಸ್ ಹೈಜಾಕ್

ಡಿಸೆಂಬರ್ 1999 ರಲ್ಲಿ ನೇಪಾಳದ ರಾಜಧಾನಿ ಕಠ್ಮಂಡುವಿನಿಂದ ನವದೆಹಲಿಗೆ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಅನ್ನು ತಾಲಿಬಾನಿ ಉಗ್ರರು ಪ್ರಯಾಣಿಕರ ಸಮೇತ ಅಪಹರಿಸುವ ಮೂಲಕ ರಾಷ್ಟ್ರೀಯ ಬಿಕ್ಕಟ್ಟಿಗೆ ನಾಂದಿ ಹಾಡಿದರು. ದೆಹಲಿಯಲ್ಲಿ ಇಳಿಯಬೇಕಾದ ವಿಮಾನವನ್ನು ತಾಲಿಬಾನ್ ಮುಷ್ಟಿಯಲ್ಲಿದ್ದ ಆಫ್ಘಾನಿಸ್ಥಾನಕ್ಕೆ ಕೊಂಡೊಯ್ದು ವಿಮಾನದ ಸಿಬ್ಬಂದಿ ಹಾಗು ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡರು.

ವಿಮಾನವನ್ನು ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ ತಮ್ಮ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಬೇಡಿಕೆಗಳನ್ನಿಟ್ಟರು. ಆಗ ಭಾರತ ಸರ್ಕಾರಕ್ಕೆ ಸಿಕ್ಕಿಬಿದ್ದು ಸೆರೆಯಾಗಿದ್ದ ಉಗ್ರ ‘ಮೌಲಾನ ಮಸೂದ್ ಅಝರ್’ ನ ಬಿಡುಗಡೆಯೂ ಸೇರಿ ಭಯೋತ್ಪಾದನೆಗೆ ಅನುಕೂಲವಾಗುವಂತಹ ಅನೇಕ ಬೇಡಿಕೆಗಳು ಈಡೇರುವ ವರೆವಿಗೂ ಪ್ರಯಾಣಿಕರ ಬಿಡುಗಡೆ ಸಾಧ್ಯವಿಲ್ಲವೆಂದು ವಾಜಪೇಯಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ದೇಶದಾದ್ಯಂತ ಆತಂಕ ಮನೆ ಮಾಡುವಂತೆ ಮಾಡಿದ್ದರು.

ಉಗ್ರರ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಲ ಪ್ರಯೋಗ ಮಾಡುವ ಮೂಲಕ ಪ್ರಯಾಣಿಕರನ್ನು ಮರಳಿ ಪಡೆಯುವ ಮಾರ್ಗ ಸುಲಭವಾಗಿರಲಿಲ್ಲ ಹಾಗೂ ನೈಜತೆಗೆ ಹತ್ತಿರವೂ ಆಗಿರಲಿಲ್ಲ. ಈ ಕಾರಣದಿಂದ ಸರ್ಕಾರ ಉಗ್ರರ ಮಾತಿಗೆ ಮಣಿಯಲೇ ಬೇಕಾಯಿತು. ಆಗ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಜಸ್ವಂತ್ ಸಿಂಗ್ ಜವಾಬ್ದಾರಿ ಮೆರೆದು ಭಾರತದ ಜೈಲಿನಲ್ಲಿದ್ದ ತಾಲಿಬಾನಿ ಉಗ್ರ ಪ್ರಮುಖರನ್ನು ತಮ್ಮೊಂದಿಗೆ ಕರೆದುಕೊಂಡು ಆಫ್ಘಾನಿಸ್ತಾನಕ್ಕೆ ಹೋಗಿ ಭಾರತೀಯ ಪ್ರಯಾಣಿಕರನ್ನು ಹಾಗೂ ಉಗ್ರರನ್ನು ವಿನಿಮಯ ಮಾಡಿಕೊಂಡು ಭಾರತಕ್ಕೆ ಹಿಂದಿರುಗಿದರು.

2001ರ ಸಂಸತ್ ಭವನದ ಮೇಲಿನ ದಾಳಿ

2001ರ ಡಿಸೆಂಬರ್ 13 ರಂದು ಮುಖಮರೆಸಿಕೊಂಡ ಶಸ್ತ್ರಧಾರಿ ವ್ಯಕ್ತಿಗಳಿಂದ ಭಾರತದ ಆಡಳಿತ ಕೇಂದ್ರ ಸಂಸತ್ ಭವನದ ಮೇಲೆ ದಾಳಿ ನಡೆಯಿತು.ಕಾರುಗಳ ಮೇಲೆ ಕೇಂದ್ರ ಗೃಹ ಇಲಾಖೆ ಹಾಗು ಸಂಸತ್ ಸದಸ್ಯರು ಎಂಬ ಪಟ್ಟಿಗಳನ್ನು ಬಳಸಿಕೊಂಡು ಸಂಸತ್ ಭವನದ ಆವರಣ ಪ್ರವೇಶಿಸಿಸಿ ಹಠಾತ್ ಗುಂಡಿನ ದಾಳಿ ನಡೆಸಲು ಶುರು ಮಾಡಿದ ಉಗ್ರರು ಸಂಸತ್ ಭವನದ ಹಲವಾರು ಭದ್ರತಾ ಸಿಬ್ಬಂದಿಗಳನ್ನು ಆಹುತಿ ಪಡೆದರು. ದಾಳಿಗೂ ಮುನ್ನ ಕೇವಲ 40 ನಿಮಿಷಗಳ ಮುಂಚೆ ರಾಜ್ಯ ಸಭಾ ಹಾಗು ಲೋಕ ಸಭಾ ಅಧಿವೇಶನಗಳು ಮುಗಿದಿದ್ದವು.ಆದ್ದರಿಂದ ಬಹುತೇಕ ಸಂಸದರು, ಮಂತ್ರಿಗಳು ಹಾಗು ಅಧಿಕಾರಿ ವರ್ಗದವರು ಸಂಸತ್ ಭವನದಲ್ಲಿ ಇರಲಿಲ್ಲ. ಆದರೂ ಆಗಿನ ಗೃಹ ಮಂತ್ರಿಗಳಾಗಿದ್ದ ಎಲ್.ಕೆ ಅಡ್ವಾಣಿ ಹಾಗು ಕೇಂದ್ರದ ರಾಜ್ಯ ರಕ್ಷಣಾ ಸಚಿವ ಹರಿನ್ ಪಾಠಕ್ ಸಂಸತ್ ಭವನದ ಒಳಗೆ ಇದ್ದರು ಎಂಬ ವರದಿಗಳಿವೆ. 100 ಜನಕ್ಕೂ ಮಿಗಿಲಾಗಿ ರಾಜಕಾರಣಿಗಳು ಆ ಸಮಯದಲ್ಲಿ ಸಂಸತ್ ಒಳಗಿದ್ದರು. ಏಕಾಏಕಿ ದಾಳಿ ಮಾಡಿದ ಉಗ್ರರು ಎ ಕೆ 47, ಗ್ರೆನೇಡು ಉದಾಹಕಗಳು, ಗ್ರೆನೇಡುಗಳು ಹಾಗು ಪಿಸ್ತೂಲುಗಳನ್ನು ಹೊಂದಿದ್ದರು ಎಂಬ ವರದಿ ದೆಹಲಿ ಪೋಲಿಸ್ ರಿಂದ ಬಹಿರಂಗವಾಗಿದೆ. ಶೀಘ್ರ ತ್ವರೆ ಮಾಡಿದ ಭಾರತೀಯ ರಕ್ಷಣಾ ಪಡೆಗಳು ಸಂಸತ್ ಭವನದ ಪ್ರಮುಖ ದ್ವಾರಗಳನ್ನು ಬಂದ್ ಮಾಡಿಸಿ ಸತತ ಪ್ರಯತ್ನ ಪಟ್ಟು ಉಗ್ರರನ್ನು ಆಹುತಿ ಪಡೆದರು. ಮುಂದೆ ಹತರಾದ ಅಷ್ಟೂ ಉಗ್ರರರು ಪಾಕಿಸ್ತಾನಿ ಪ್ರಜೆಗಳು ಎಂಬುದು ಸಾಬೀತಾಯಿತು. ಅಮೇರಿಕಾದ ಮೇಲೆ ದಾಳಿ ನಡೆದು ಕೇವಲ ಮೂರು ತಿಂಗಳ ಒಳಗೆ ಭಾರತದ ಮುಖ್ಯ ಕಟ್ಟಡದ ಮೇಲೆ ನಡೆದ ಈ ದಾಳಿ ಇಡೀ ದೇಶವನ್ನು ಆತಂಕಕ್ಕೆ ಸಿಲುಕುವಂತೆ ಮಾಡಿತು ಹಾಗೂ ಇತರ ದೇಶಗಳೂ ಭಯೋತ್ಪಾದನೆಯ ಹೆಸರು ಕೇಳಿ ಬೆಚ್ಚುವಂತೆ ಮಾಡಿತು.

ಸುಮಾರು 5 ಲಕ್ಷ ಸೇನಾ ಸಿಬ್ಬಂದಿ ಪಂಜಾಬ್, ರಾಜಸ್ತಾನ, ಗುಜರಾತ್ ಹಾಗು ಜಮ್ಮು ಕಾಶ್ಮೀರ ಪ್ರಾಂತ್ಯಗಳ ಅಂತರಾಷ್ಟ್ರೀಯ ನಿಯಂತ್ರಣ ರೇಖೆಯಲ್ಲಿ ಕಾವಲಿಗೆ ನಿಂತರು. ಪಾಕಿಸ್ತಾನ ವು ಇದಕ್ಕೆ ಪ್ರತ್ಯುತ್ತರವೆಂಬಂತೆ ತನ್ನ ಸೈನಿಕರನ್ನು ಅಂತರಾಷ್ಟ್ರೀಯ ಗಡಿಯಲ್ಲಿ ತಂದು ನಿಲ್ಲಿಸಿತು. ಅದೇ ಸಮಯಕ್ಕೆ ಕಾಶ್ಮೀರದಲ್ಲಿ ಭಯೋತ್ಪಾದಕರು ಹಾಗು ಸೇನೆಯ ನಡುವೆ ಆಗಾಗ ಕದನಗಳು ಮರುಕಳಿಸುತ್ತಲೇ ಇದ್ದವು.

ಭಯೋತ್ಪಾದನೆಯನ್ನು ಹತ್ತಿಕ್ಕುವ ಸಲುವಾಗಿ ವಾಜಪೇಯಿ ಆಡಳಿತ ಭಯೋತ್ಪಾದನಾ ನಿಷೇಧ ಕಾಯ್ದೆ ಯನ್ನು ಸಿದ್ಧಪಡಿಸಿ ಜಾರಿ ಮಾಡಿತು. ಯಾರನ್ನು ಬೇಕಾದರೂ ಭಯೋತ್ಪಾದಕರು ಎಂದು ಹಿಡಿದು ಶಿಕ್ಷಿಸುವ ಅವಕಾಶಗಳು ಆ ಕಾಯ್ದೆ ಯಲ್ಲಿ ಇರುವುದರಿಂದ ಈ ಕಾಯ್ದೆ ಜಾರಿಯಾಗ ಕೂಡದು ಎಂದು ಮಾನವ ಹಕ್ಕುಗಳ ಹೋರಾಟದ ಗುಂಪುಗಳು ವಿರೋಧ ತೋರಿದವು. ವಿಪಕ್ಷಗಳು ಕೂಡ ಈ ವಿಚಾರದಲ್ಲಿ ನಕಾರಾತ್ಮಕವಾಗಿ ಸ್ಪಂದಿಸಿದ್ದವು.

Don`t copy text!