ತತ್ತ್ವಪದ ಸಾಹಿತ್ಯದಲ್ಲಿ ಡಂಗುರ ಪದಗಳು
ಡಂಗುರ ಪದವೆಂದರೆ ತಮಟೆ, ಡೋಲು ಮುಂತಾದ ವಾದ್ಯಗಳನ್ನು ಬಳಿಸಿ ಕಾಲಜ್ಞಾನದ ವಿಷಯಗಳನ್ನು ಬಹಿರಂಗ ಪಡಿಸುವುದು ಎಂದು ತಿಳಿದುಬರುತ್ತದೆ. ಇದಕ್ಕೂ ಮುಂಚೆ ಜನಪದರಲ್ಲಿ ಡಂಗುರ ಸಾರುವ ಬಳಕೆಯಿತ್ತು ಗ್ರಾಮೀಣ ಭಾಗದಲ್ಲಿ ಮಾಧ್ಯಮದ ಕೊರತೆಯಿಂದ ನಿರ್ದಿಷ್ಟವಾದ ದಿನ ಹಬ್ಬ ಆಚರಿಸಲು ಜನರಿಗೆ ಗೊಂದಲವಾಗುತ್ತದೆಂದು ಮನಗಂಡು ನಿಗದಿಪಡಿಸಿದ ದಿನವನ್ನು ಡಂಗುರದಿಂದ ಊರಿನ ಹಿರಿಯರು ಪ್ರಚಾರ ಮಾಡುತ್ತಿದ್ದರು. ಈಗಲೂ ಈ ಆಚರಣೆ ಗ್ರಾಮೀಣ ಭಾಗದಲ್ಲಿದೆ. ಊರಿನಲ್ಲಿ ಪ್ರಮುಖವಾದ ವಿಚಾರವನ್ನು ನ್ಯಾಯದ ಮುಖಾಂತರ ತೀರ್ಮಾನ ಮಾಡಲು ಛಾವಡಿ ಕಟ್ಟೆಯ ಹತ್ತಿರ ಬರುವಂತೆ ಊರಿನ ಸಮಸ್ತ ಜನರಿಗೆ ಆಹ್ವಾನ ತಿಳಿಸಲು ಡಂಗುರವನ್ನು ಬಳಸುತ್ತಾರೆ. ಇದೇ ಉದ್ದೇಶ ಮತ್ತು ಪ್ರೇರಣೆಯಿಂದ ಸಂವಹನದ ದೃಷ್ಟಿಯಿಂದ ಡಂಗುರ ಪದಗಳು ಕಾಲಜ್ಞಾನ ಭಾಷೆಯಲ್ಲಿ ಪ್ರಕಟವಾದವೆಂದು ಹೇಳಬಹುದು.
ಕಾಲಜ್ಞಾನ ಸಾರುವ ಡಂಗುರ ಪದಗಳು ವಾದ್ಯಪ್ರಧಾನ ನಿರೂಪಣೆಗಳಾಗಿವೆ. ಈ ಪದಗಳು ಜನರಲ್ಲಿ ತೀವ್ರ ಜಾಗೃತಿಯನ್ನುಂಟು ಮಾಡುವ ರಚನೆಗಳಾಗಿವೆ.
“ಹುಯ್ಯಲೊ ಡಂಗುರವ ಕೈಯೆತ್ತಿ ಲೋಕದೊಳು ಹುಯ್ಯಲೊ ಡಂಗುರವ
ಸೈಯೆಂದು ಸತ್ಪುರುಷರ ಉಡಿಗಟ್ಟಿ ತಿಳಿಯಲೆಂದು ಹುಯ್ಯಲೊ ಡಂಗುರವ
ಸುಳ್ಳಲ್ಲವೀ ಸಾಕ್ಷಿ ಎಲ್ಲರೂ ಕೇಳಿರೆಂದು ಹುಯ್ಯಲೊ ಡಂಗುರವ
ಜ್ಞಾನವಿಲ್ಲದ ಸ್ನಾನ ಮಾಡಿದರೇನು ಹುಯ್ಯಲೊ ಡಂಗುರವ”
ಮೀನು ನೀರೋಳಗಿರ್ದು ನೀರಿನ ಒಲವನರಿಯದೆಂದು ‘ಹುಯ್ಯಲೊ ಡಂಗುರವ’ ನೀರಲಕೇರಿ ಬಸವಲಿಂಗ ಶರಣರಿಂದ ರಚಿತವಾದ ಈ ಡಂಗುರಪದದ ಮಾದರಿಯನ್ನು ಗಮನಿಸಬೇಕು. ಸರಳವಾಗಿ ಬದುಕಿನ ತಾತ್ವಿಕ ನೆಲೆಗಳನ್ನು ಮನುಷ್ಯನ ನಡುವಳಿಕೆಯ ಸಂಬಂಧಗಳನ್ನು ಮಿಕ್ಷಿಸುವ ಈ ರಚನೆ ಹೇಳಬೇಕಾದ ವಿಷಯವನ್ನು ಸಾಕ್ಷೀಕರಿಸುತ್ತದೆ. ಕೈಯೆತ್ತಿ ಲೋಕದೊಳ ಹುಯ್ಯಲೊ ಡಂಗುರವ ಎನ್ನುವ ವಾಕ್ಯವೆ ಹೇಳುಗನ ಮಾತಿಗಿರುವ ಖಚಿತತೆಯನ್ನು, ಸ್ಪಷ್ಟತೆಯನ್ನು ಸಾರುವಂಥದ್ದಾಗಿದೆ. ಸಂಪ್ರದಾಯ ಬದುಕಿನಲ್ಲಿ ಕೈಯೆತ್ತಿ ಹೇಳುವ ಹಲವಾರು ಪ್ರಸಂಗಗಳು ಕಾಣುತ್ತೇವೆ. ಎರಡು ಕೈಗಳನ್ನು ಎತ್ತುವುದು ಸೋಲಿನ ಸಂಕೇತವಾದರೆ, ‘ಕೈ ಎತ್ತುವುದು’ ‘ಎತ್ತಿದ ಕೈ’ ಎನ್ನುವ ಪರಿಕಲ್ಪನೆಗಳು, ಮಾತಿಗಿರುವ ಗಾಢನಂಬಿಕೆಯನ್ನು, ಅದರ ಎಲ್ಲಾ ಅಂತಃಸ್ವಗಳೊಂದಿಗೆ ಪರಿಣಾಮಕಾರಿಯಾಗಿ ಹೇಳುವುದೇ ಆಗಿದೆ, ಪ್ರತಿ ಸಾಲಿನ ಕೊನೆಯಲ್ಲಿ ಕಾಣುವ ಹುಯ್ಯಲೊ ‘ಡಂಗುರವ’ ಎನ್ನುವ ಪದ ಸಮುಚ್ಛಯವೆ ಸಂದರ್ಭದ ಪರಿಣಾಮಕಾರಿ ಸಂವಹನವನ್ನು ಗಟ್ಟಿಗೊಳಿಸುವುದಾಗಿದೆ. ಇಂಥಹ ರಚನಾ ಕ್ರಮಗಳು ವ್ಯಕ್ತಿನಾದ ಅನಿಸಬಹುದು. ಆದರೆ ತತ್ವಪದಕಾರರೇ ವ್ಯಕ್ತಿವಾದಿ ಸಾಧಕರು, ಸಮೂಹವಾದಿ ಅನುಪಾಲಕರು, ಹೀಗಾಗಿ ವೈಯಕ್ತಿಕ ಅನ್ವೇಷಣೆ ಸಮೂಹವಾದ ಅನುಷ್ಟಾನವಾಗಿ ಸಾಮಾಜಿಕ ಬದುಕಿನ ಕ್ರಮವಗಳಾಗಿ ಪ್ರೇರಣೆ ನೀಡುತ್ತದೆ.
ಡಂಗುರ ಪದಗಳಲ್ಲಿ ಆಧ್ಯಾತ್ಮ ನೀತಿ, ಬೋಧನೆ ಪ್ರಧಾನವಾಗಿರುತ್ತವೆ. ಅಲ್ಲಿ ಬೆಡಗಿನ ಸಂಕೇತ ರೂಪಗಳಲ್ಲಿರುತ್ತವೆ. ಕೊಡೇಕಲ್ಲವರು ಕ್ರಿ.ಶ. ಹದಿನಾರು, ಹದಿನೇಳನೆಯ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯದ ಏಳು-ಬೀಳುಗಳನ್ನು ಕಾಲಜ್ಞಾನದ ಮೂಲಕ ಅರುಹಿದರು.
“ದೊಡ್ಡ ಗುಡ್ಡದ ಮ್ಯಾಲಿನ ದೊಡ್ಡ ಹುಲಿಯಾಗಿ |
ಗದ್ದರಿಸುತ್ತಿದ್ದ ಬೀರಪ್ಪನೂ | ಹುಲಿ ಅಲ್ಲ ನಮ್ಮ ಗುರು ಅಂತ
ಹ್ವಾದರೆ ರೆಕ್ಕಿ ಜೋಳಾಗಿ ಕಡದಾನೋ |”
ಇಂತ ಕಥನ ಮಾದರಿಯ ನಿರುಪಣೆಗಳನ್ನು ಡಂಗುರ ಪದಗಳಲ್ಲಿ ಕಾಣುತ್ತೇವೆ.
ಈ ಹಿನ್ನೆಲೆಯಿಂದ ನೋಡಿದರೆ ಡಂಗುರ ಪದಗಳು ಬಹುಮುಖಿ ಸಂವೇದನೆಗಳ ಜ್ಞಾನವನ್ನು ಧಾರ್ಮಿಕ ನೆಲೆಯಲ್ಲಿ ಬಿತ್ತರಿಸುತ್ತದೆ. ದೇವಾಲಯಗಳಲ್ಲಿ ಆಚರಣೆಗೊಳ್ಳುವ ಜಾಗಟೆಯ ನಾದವು ಡಂಗುರದ ಸಾಂಕೇತಿಕತೆಯ ಅಂಶವನ್ನು ಗರ್ಬೀಕರಿಸಿಕೊಂಡಿದೆ. ದೇವಾಲಯದ ಜಾಗಟೆ ನಾದವು ‘ಓಂ’ ಎಂಬ ಪ್ರಣವವು. ಅಂತರಂಗದ ಚಿತ್ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇಂಥಾ ಕೇಂದ್ರೀಕೃತ ನಾದದಿಂದ ಭಕ್ತರು ಏಕಾಗ್ರತೆಗೆ ಒಳಗಾಗುವರೆಂಬ ಧೋರಣೆಯು ನಮ್ಮ ಅಂತರಗದ ಮನೋಭೂಮಿಕೆಯಾಗಿದೆ.
ವಿಶೇಷವಾಗಿ ಡಂಗುರದ ಸಂಸ್ಕ್ರತಿಯು ನಮ್ಮ ಗ್ರಾಮಗಳಲ್ಲಿ ಕಾಯಕತತ್ವದಿಂದ ಜಂಗಮತತ್ವದ ಮೂಲಕ ರೂಪುಗೊಂಡಿದೆ. ಗ್ರಾಮದಲ್ಲಿ ಯಾವ ವ್ಯಕ್ತಿಯೇ ಆಗಲಿ ದುಶ್ಚಟಗಳಿಗೆ ಒಳಗಾದರೆ ಅವರ ಮನೆ ಮುಂದೆ ಜಾಗಟೆ ಬಾರಿಸುತ್ತಾ ಮುಳ್ಳಾವಿಗೆಯ ಮೇಲೆ ಎರಡು-ಮೂರು, ದಿನಗಳವರೆಗೆ ನಿಂತುಕೊಂಡು, ಧರಣಿ ಹೂಡಿದ ಜಂಗಮರುಂಟು. ವೈಯಕ್ತಿವಾಗಿ ತಮ್ಮ ದೇಹ ದಂಡನೆಯಿಂದ ಕಾಲಿಗೆ ರಕ್ತವಾದ ಸಂದರ್ಭದಲ್ಲಿ ಮನೆಯಾತ ತಪ್ಪೊಪ್ಪಿಗೆ ಕೇಳಿ ಕಾಣಿಕೆ ಅರ್ಪಿಸಿದ್ದಿದೆ.
ಡಂಗುರ ಹಾಡುಗಳ ಮತ್ತೊಂದು ವೈಶಿಷ್ಟ್ಯವೆಂದರೆ ಕರ್ನಾಟಕ ಚರಿತ್ರೆಯನ್ನು ಕಟ್ಟಿಕೊಡುವುದು.
“ಯಾತಗಿರಿಗಳು ಹತಗಳಾದವು ದಿಮ್ಮಿಸಾಲೆ
ರಾಯಚೂರು ಸೀಮೆಯಲ್ಲಿ ರಾಯಭಾರ ಆದೀತು ದಿಮ್ಮಿಸಾಲೆ
ಸಿಂಧನೂರು ಸೀಮೆಯಲಿ ಆನಂದವಾಡ್ಯಾರ ದಿಮ್ಮಿಸಾಲೆ
ಕವಿತಾಲ ಮಾನ್ವಿಯಲಿ ಕೈತಾಳ ಹೊಡೆದಾರು ದಿಮ್ಮಿಸಾಲೆ” 45
ಕನ್ನಡ ನಾಡಿನ ಚರಿತ್ರೆಯಲ್ಲಾದ ಸ್ಥಿತ್ಯಂತರಗಳನ್ನು ಕಟ್ಟಿಕೊಡುವ ಈ ಅಂಶವು ಗಮನಾಗರ್ಹವಾಗಿದೆ ಡಂಗುರ ಹಾಡುಗಾರನೊಬ್ಬ ಇತಿಹಾಸ ಬಗ್ಗೆ ಇದ್ದ ಪ್ರಾಮಾಣಿಕ ಕಾಳಜಿಯನ್ನು ತನ್ನ ಕಲ್ಪನಾಶಕ್ತಿಯ ಮೂಲಕ ಹೇಳುವ ಪ್ರಯತ್ನವಿದಾಗಿದೆ. ಯಾದಗಿಯವರೆಗೆ ಆದಿಲ್ಶಾಹಿಗಳ ಆಕ್ರಮಣದ ಅಧಿಕಾರವಿತ್ತು ‘ದೋ ಆಬ್’ ಪ್ರಾಂತವೆಂದು ಖ್ಯಾತವಾದ ಈ ನಾಡಿಗೆ ಧಮನಕಾರಿ ಶಕ್ತಿಗಳಾದ ಹೈದ್ರಾಬಾದ್ ನಿಜಾಮ, ಬಿಜಾಪುರದ ಆದಿಲ್ಶಾಹಿಗಳು ಕಿತ್ತಾಡಿದ್ದು ಪ್ರಶ್ನಾತೀತವಾಗಿದೆ, ವಿಜಯನಗರದ ಅರಸರು ಸಾಂಸ್ಕøತಿಕ ಧರ್ಮ, ಸಾಂಸ್ಥಿಕವಾಗಬೇಕೆಂದು ಬಯಸಿದ್ದು ಚರಿತ್ರೆಯಿಂದ ತಿಳಿದುಬರುತ್ತದೆ. ಸಿಂಧನೂರು ತಾಲೂಕು ಸಮೃದ್ಧಿ ಸಾರ್ಥಕತೆಯ ಸಂಕೇತವಾದರೆ ಕವಿತಾಳ ಮಾನ್ವಿಗಳು ಶಿಕ್ಷಣ ಪ್ರಗತಿಯಲ್ಲಿ ಕುಂಠಿತವಾಗಿವೆ. ಕೈತಾಳ ಹೊಡೆದಾರೆಂಬ ಅಂಶವನ್ನು ಡಂಗುರ ಹಾಡುಗಾರ ಡಂಗುರ ಬಿಟ್ಟು ಕರೆಪಲ್ಲವಾದ ಕೈತಾಳ ಕ್ರಿಯೆ ರೂಢಿಸಿಕೊಂಡ ನೃತ್ಯ, ಸಂಗೀತದಿಂದ “ಸುವ್ವಿ ಬಾ ಸಂಗಯ್ಯ ಸುವ್ವಿ ಬಾ ಚೆನ್ನಬಸವಯ್ಯಾ” ಎಂದು ಹಾಡುತ್ತಾ, ಚರಿತ್ರೆಯನ್ನು ಸಾಂಸ್ಕ್ರತಿಕ ಹಾಡಿನ ಮೂಲಕ ಕಟ್ಟುವುದು ಲಕ್ಷಿಸುವಂಥದ್ದಾಗಿದೆ.
ಮಧ್ಯಕಾಲೀನ ಅಧ್ಯಯನಗಳು ಜನಮುಖಿ ಪರಂಪರೆಯ ಕಾಲವೆಂದು ಗುರುತಿಸಿಕೊಂಡು ಕ್ರಿ.ಶ. ಹದಿನೇಳು-ಹದಿನೆಂಟನೆಯ ಶತಮಾನದ ಸಂದರ್ಭದಲ್ಲಿ ಲಕ್ಷ್ಮೀಶ, ರತ್ನಾಕರವರ್ಣಿಯಂಥಹ ಕಾವ್ಯ ಬರಹಗಾರರ (ಕವಿಗಳ) ಮುಂದುವರಿಕೆಯಾಗಬೇಕಾದ ಈ ಪರಂಪರೆಯಲ್ಲಿ ಜನಪದ ದೇಸಿ ಜ್ಞಾನ ಪರಂಪರೆಗಳವರು ಸಾಂಸ್ಕ್ರತಿಕವಾಗಿ ಗುರುತಿಸಿಕೊಂಡಿದ್ದಾರೆ. ಕಂಸಾಲೆಯವರು, ನೀಲಗಾರರು, ಚೌಡಕಿ ಮೇಳದವರು, ಡೊಳ್ಳು ಮೇಳದವರು, ಗೊಂದಲಿಗರು ಜೋಗಿಗಳು ಕರಪಾಲದವರು, ತಂಬೂರಿಯವರು, ಲಾವಣಿಯವರು, ದುಂಧುಮಿ ಕಾಲಜ್ಞಾನದ ಹಾಡುಗಾರರಂಥಹ ವೃತ್ತಿ ಹಾಗೂ ಹವ್ಯಾಸಿಕಲಾವಿದರು, ಈ ರೀತಿಯ ಸಾಹಿತ್ಯ ಪ್ರಸಾರವಾಗಲು ಬಹುದೊಡ್ಡ ಕೊಡಗೆ ನೀಡಿದ್ದಾರೆ. ಇಂಥಹ ದೇಸಿ ಪರಂಪರೆಯಲ್ಲಿ ಮೂಡಿಬಂದ ಡಂಗುರ ಪದಕಾರರು ಆ ಸಂಪ್ರದಾಯದ ಹಾಡುಗಾರರು ಕನ್ನಡ ಸಾಹಿತ್ಯಲೋಕದ ಹೊಸ ಅನುಭವದ ಅನಾವರಣಕ್ಕೆ ಕಾರಣರಾದರು. ಅನಕ್ಷರಸ್ಥ ಬದುಕನ್ನು ಜ್ಞಾನಮಯವಾಗಿಸುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.
“ಡಂಗುರ ಹೊಡೆಯಬೇಕಣ್ಣ | ಹಿಂಗದ ಈ ಭವಕಿದಣ್ಣ
ಸಂಗಮೇಶನ ಸೇವೆಯೊಳು ನೀನಿದ್ದರೆ | ಭಂಗವಾಗುವುದು
ಭವವಣ್ಣಾ | ವಾಸನತ್ರಗಳ ಅಳಿಯಣ್ಣಾ ಲಕ್ಷವು ಅವನೊಳಿರಲಣ್ಣಾ |”
ಸಂಸಾರದ ನೀತಿಯ ಸತ್ಯ ನಿನಗಿರದಿದ್ದರೆ ಬದುಕಿನಲ್ಲಿ ಕಿಂದರಜೋಗಿಗೆ ವಶವಾಗುವಿ ಮಾಯೆ, ಅಜ್ಞಾನ, ತಮೋಗುಣಗಳನ್ನು ತ್ಯಾಗಮಾಡು, ಸಂಗಮೇಶನ ಭಕ್ತನಾಗಿ, ಅಜ್ಞಾಪಾಲಕನಾಗಿ ಈ ಭವವನ್ನು ಗೆಲ್ಲೆಂದು ಹೇಳುವ ನೀತಿ ತತ್ವ ಗಮನಾರ್ಹವಾದುದು.
ಸ್ವಭಾವತಃ ತತ್ವ ಪದಕಾರ ತತ್ವವನ್ನು ಬೋಧಿಸುವವನಾಗಿದ್ದರಿಂದ, ತಾನು ನಿಂತ ನೆಲೆ ಅಥವಾ ತನ್ನ ವೃತ್ತಿಯ ಮೂಲಕ ಡಂಗುರ ಪದವನ್ನು ಕಟ್ಟಲು ಪ್ರಯತ್ನಿಸುತ್ತಾನೆ. ಕಾರಣ ತತ್ವಪದಕಾರನಿಗೆ ಪರಂಪರೆಯ ಆಶಯಗಳನ್ನು ಸಾರ್ಮತ್ರಿಕರಣಗೊಳಿಸಬೇಕೆಂಬ ಹಠ ಒಂದಾದರೆ, ಕಾಲಜ್ಞಾನದಂಥಹ ಭಾಷೆಯನ್ನು ರಸಮಯವಾಗಿ ಲಯ ಪ್ರಧಾನದಿಂದ ವ್ಯಾಖ್ಯಾನಿಸಬೇಕೆಂಬ ಹಠ ಇನ್ನೊಂದೆಡೆ ಇರುತ್ತದೆ. ಈ ಹೊಯ್ಧಾಟದಲ್ಲಿ ಡಂಗುರ ಪದಗಳು ಪುನರ್ ಸೃಷ್ಟಿಯಿಂದ ಶಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಡಂಗುರ ಪದಗಳು ಧಾರ್ಮಿಕ ಅನುಭವವನ್ನು ಜಾಹೀರಾತುಗೊಳಿಸುವ ಭಕ್ತಿಯ ಆರಾಧನಾ ವ್ಯವಸ್ಥೆಗೆ ಹುರಿಗೊಳ್ಳುವ ಹಾಡುಗಳಾಗಿ ಕಂಡುಬರುತ್ತವೆ.
ಡಂಗುರ ಪದಗಳನ್ನು ಸಮರ್ಥವಾಗಿ ದುಡಿಸಿಕೊಂಡ ತತ್ವಪದಕಾರರೆಂದರೆ ಕೂಡ್ಲೂರು ಬಸವಲಿಂಗಪ್ಪ ಮತ್ತು ನೀರಲಕೇರಿ ಬಸವಲಿಂಗಪ್ಪನವರೆಂದು ತಿಳಿಯಬಹುದು. ಪ್ರಾದೇಶಿಕತೆಯ ದೃಷ್ಟಿಯಿಂದ ಇವರು ನೆಲೆ ನಿಂತ ಸ್ಥಳಗಳೂ ಕಾರಣವಾಗಿ, ಕೊಡೆಕಲ್ಲ ಜ್ಞಾನಶಾಖೆಗಳ ಪ್ರೇರಣೆ ಈ ಇಬ್ಬರು ತತ್ವಪದಕಾರರಿಗಾಗಿದೆ.
ತತ್ವಪದ ಪರಂರೆಯಲ್ಲಿ ಸೈದ್ಧಾಂತಿಕವಾಗಿ ಸಾಮೂಹಿಕತೆಯನ್ನು ಗುರುತಿಸಬೇಕಾದರೆ, ತತ್ವಪದಗಳಲ್ಲಿ ಮಾತ್ರ ಸಾಧ್ಯವೆಂದು ಹೇಳಬಹುದು. ಆದರೆ ಡಂಗುರ ಪದಗಳಲ್ಲಿ ಇಂಥಹ ಸಾಮೂಹಿಕತೆ ಇಲ್ಲವೆಂಬ ಕೊರಗಿದೆ. ಕಾರಣ ಈ ಭಾಗದ ತತ್ವಪದಕಾರರು ಅಂದಿನ ಪ್ರಭುತ್ವದ ಇತಿಮಿತಿಗಳನ್ನು ಉಲ್ಲಂಘಿಸಿ ಡಂಗುರ ಪದಗಳ ರಚನೆಗಳನ್ನು ಸಾಂಸ್ಕøತಿಕ ಅನುಭವದ ಮೂಲಕ ಪಸರಿಸಲು ಸಾಧ್ಯವಿಲ್ಲವಾಗಿದೆ. ಅಂದಿನ ಸಮಾಜದಲ್ಲುಂಟಾದ ಅಸಮಾನತೆ ಕಾರಣವಾಗಿದೆ. ಮಠ-ಮಾನ್ಯಗಳಲ್ಲಿ ಸಾಮಾನ್ಯ ವರ್ಗದವರು ಕನ್ನಡ ಶಿಕ್ಷಣದಿಂದ ವಂಚಿತರಾದರರು. ಬರಹಗಾರರು ಶಿಕ್ಷಣದಲ್ಲಿ ಆಸಕ್ತಿವುಳ್ಳವರು ಉರ್ದು ಭಾಷೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇಂಥಹ ಗಂಭೀರ ಪರಿಸ್ಥಿತಿಯಲ್ಲಿ ರಾಯಚೂರು ಭಾಗದ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲವಾಗಿದ್ದರೂ, ಪ್ರೌಢಶಾಲಾ ಶಿಕ್ಷಣಕ್ಕಾಗಿ ಗುಲ್ಬರ್ಗ ಇಲ್ಲವೇ ಹೈದ್ರಾಬಾದಗೆ ಹೋಗಬೇಕಾಗಿತ್ತು. ಪರಿಸ್ಥಿತಿ ಹೀಗಿರುವಾಗ ಭಿನ್ನ ಸೃಜನ ಅನುಭವಗಳ ಡಂಗುರ ಪದಗಳನ್ನು ಹೇಗೆ ಬರೆಯಲು ಸಾಧ್ಯ ಅಧುನಿಕ ತತ್ವಪದಕಾರರಿಗೆ ಕನ್ನಡ ಶಿಕ್ಷಣವೇ ಒಂದು ಸಾಮಾಜಿಕ ಸಂಘರ್ಷವಾಗಬೇಕಾದರೆ ಡಂಗುರ ಪದಗಳ ರಚನೆಯ ಪರಿಸರ ಇವರಿಗೆ ಸಾಧ್ಯವಿಲ್ಲವಾಗಿದೆ. ತತ್ವಪದಕಾರನದ ರಾಂಪುರ ಭೀಮಣ್ಣ ತನ್ನ ಪ್ರಾರಂಭಿಕ ಶಿಕ್ಷಣ ಇಂಗ್ಲೀಷ್ ಮಾಧ್ಯಮದಲ್ಲಾಯಿತು ಎಂದು ಅಸಹಾಯಕ ಅನುಭವಗಳನ್ನು ಹೇಳಿದರೆ, ಮಾನಸಗಲ್ ವೆಂಕನಗೌಡರು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಇಂಗ್ಲೀಷ್ ಮಾಧ್ಯಮದಲ್ಲಿ ರೂಢಿಸಿಕೊಂಡೆ ಎಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ತತ್ವಪದಕಾರರ ಸೃಜನಕ್ರಿಯೆ ಈ ರೀತಿ ಕುಂಠಿತವಾದುದರಿಂದ ಡಂಗುರ ಪದಗಳಂಥಹ ಭಾಷಾಜ್ಞಾನ ತುಡಿತಗಳು ಕುಗ್ಗಿದಂತೆ ಕಂಡುಬರುತ್ತವೆ. ಆದರೂ ಈ ಭಾಗದ ತತ್ವಪದಕಾರರು ತಮ್ಮ ನೀತಿಯ ತರ್ಕದ ಮೂಲಕ ಪಾರಮಾರ್ಥಿಕ ನೆಲೆಯನ್ನು ಗಟ್ಟಿಗೊಳಿಸಿದ್ದಾರೆ.
ಡಂಗುರ ಪದಗಳು ಹುಯ್ಯಲೊ ಡಂಗುರವ ಎಂಬ ಎಚ್ಚರಿಕೆಯ ವೈವಿದ್ಯತೆಯನ್ನು ಮೈಗೂಡಿಸಿಕೊಂಡು ತತ್ವಪದ ಸಾಹಿತ್ಯದಲ್ಲಿ ಪ್ರಧಾನ ಸ್ಥಾನವನ್ನು ಗುರುತಿಸಿಕೊಂಡಿದೆ.
ನಾನು ನಿರೂಪಿಸಿದ ಎರಡೂ ಹಾಡುಗಳು ಪಲ್ಲವಿಯಿಂದ ಪ್ರಾರಂಭವಾಗುತ್ತವೆ. ಒಂದು ದ್ವಿಪದಿಯಲ್ಲಿರೆ, ಇನ್ನೊಂದು ತ್ರಿಪದಿಯಲ್ಲಿದೆ. ಈ ಲಕ್ಷಣದಿಂದ ಈ ಹಾಡುಗಳು ಛಂದನಿಯಮ ಅವಶ್ಯಬಯಸುತ್ತದೆ. ಆದ್ದರಿಂದ ಈ ಹಾಡುಗಳು ಅಂತರಂತಗವನ್ನು ಗೆಲ್ಲುವ ಲಯಪ್ರಧಾನತೆಯ ಉತ್ತಮ ಗುಣಗಳನ್ನು ಅಳವಡಿಸಿಕೊಂಡಿವೆ. ಹೀಗಾಗಿ ಸಮೂಹದ ಜನರು ಈ ಹಾಡುಗಳಿಗೆ ದೃಶ್ಯ, ಸಂಗೀತ ಮಾಧ್ಯಮವೆಂದು ಅರಿತು ಭೇಗೆ ಆಕರ್ಷಿತರಾಗುತ್ತಾರೆ. ಹೀಗಾಗಿ ಈ ಹಾಡುಗಳನ್ನು ತತ್ವಪದಕಾರರು ಪ್ರಯೋಗಶೀಲ ಶೋಧದಲ್ಲಿ ತಮ್ಮ ಪರಂಪರೆಗೆ ಹೊಸ ಆಯಾಮ ನಿರೂಪಿಸದರೆಂದು ಸ್ಪಷ್ಟಪಡಿಸಬಹುದು.
• ಡಾ.ಸರ್ವಮಂಗಳ ಸಕ್ರಿ
ಸಾಹಿತಿಗಳು, ರಾಯಚೂರು.