ಹೆಣ್ಣು ಮಕ್ಕಳೇ ಎಚ್ಚರವಾಗಿ
ಹಾಲಿವುಡ್ ನ ಅತೀ ಪ್ರಸಿದ್ಧ ಅಭಿನೇತ್ರಿ ಜೂಲಿಯಾ ರಾಬರ್ಟ್ ಅತ್ಯಂತ ಶಕ್ತಿಯುತವಾದ ಮತ್ತು ಅತಿ ವೈಯಕ್ತಿಕವಾದ ಒಂದು ಸಂದೇಶವನ್ನು ಎಲ್ಲ ಮಹಿಳೆಯರಿಗೂ ನೀಡಿದ್ದಾಳೆ.
ಆಕೆ ಈ ಸಂದೇಶವನ್ನು ತನ್ನ ಯಾವುದೇ ಚಲನಚಿತ್ರದ ಪ್ರಮೋಷನ್ ಗಾಗಿ ಅಥವಾ ಯಾವುದೇ ಜಾಹೀರಾತಿಗಾಗಿ ನೀಡಿಲ್ಲ, ಬದಲಾಗಿ ಹೆಣ್ಣು ಮಕ್ಕಳ ಬದುಕಿನ ವೈರುಧ್ಯಗಳ ಕುರಿತು ಅದಕ್ಕೆ ಹೆಣ್ಣು ಮಕ್ಕಳು ಪ್ರತಿಕ್ರಿಯಿಸುವ ರೀತಿಯ ಕುರಿತು ಆಕೆ ಮಾತನಾಡಿದ್ದಾಳೆ.
ಇಡೀ ಜಗತ್ತಿನ ಹೆಣ್ಣು ಮಕ್ಕಳು ಜಾಗತಿಕವಾಗಿ ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಆಕೆ ಅತ್ಯಂತ ಮಾರ್ಮಿಕವಾಗಿ ಮಾತನಾಡಿದ್ದು ಹೆಣ್ಣು ಮಕ್ಕಳಿಗೆ ಎಚ್ಚರಿಕೆಯ ಕರೆಗಂಟೆಯಾಗಿ ಪರಿಣಮಿಸಬೇಕಾಗಿರುವ ಈ ಮಾತುಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡೋಣ.
ಮುಖವಾಡವನ್ನು ಕಿತ್ತೆಸೆಯುವ ಸಮಯವಿದು….. ಪ್ರಸ್ತುತ ಇಡೀ ಜಗತ್ತನ್ನು ಆವರಿಸಿರುವ ಪರಿಪೂರ್ಣತೆ ಎನ್ನುವುದು ಒಂದು ರೀತಿಯ ಜಾಡ್ಯವಿದ್ದಂತೆ. ಹೆಣ್ಣು ಮಕ್ಕಳು ತಮ್ಮ ಮುಖವನ್ನು ಢಾಳಾದ ಮೇಕಪ್ ನ ಹಿಂದೆ ಮುಚ್ಚಿಟ್ಟುಬಿಟ್ಟಿದ್ದಾರೆ. ವಿಷದ ಸೂಜಿಗಳನ್ನು ತಮಗೆ ತಾವೇ ಚುಚ್ಚಿಕೊಂಡು ಏನು ಆಗುವುದಿಲ್ಲ ಎಂದು ಯೋಚಿಸುತ್ತಾರೆ.
ನಿಗದಿಪಡಿಸಿದ ಪ್ರಮಾಣದ ದೇಹದ ಆಕಾರ, ಅಳತೆ, ತೂಕವನ್ನು ಹೊಂದಲು ತಮ್ಮನ್ನು ತಾವು ದಂಡಿಸಿಕೊಳ್ಳುವ ಹೆಣ್ಣು ಮಕ್ಕಳು ನಮ್ಮಲ್ಲಿದ್ದಾರೆ.
ಪ್ರತಿಯೊಂದು ವಿಷಯವೂ ಸಮರ್ಪಕವಾಗಿ ಇರಲಿ ಎಂಬ ನಿಟ್ಟಿನಲ್ಲಿ ಹೊಂದಿಸುವ ಪ್ರಯತ್ನವನ್ನು ಮಾಡುತ್ತಾರೆ. ಮನೆ ಮತ್ತು ಮಕ್ಕಳಿಗಾಗಿ ಎಲ್ಲವನ್ನು ಮಾಡುತ್ತಾರೆ, ಆದರೆ ಒಂದು ವಿಷಯವನ್ನು ಮಾತ್ರ ಉದ್ದೇಶಪೂರ್ವಕವಾಗಿಯೋ ಇಲ್ಲವೇ ಅನಿವಾರ್ಯವಾಗಿಯೋ ಮರೆತಿರುತ್ತಾರೆ.
ಏನದು??
ತಮ್ಮ ಆತ್ಮಸಾಕ್ಷಿಯ ಕಿವಿ ಮಾತನ್ನು! ತಮ್ಮನ್ನು ತಾವು ಪ್ರೀತಿಸುವುದನ್ನು ಮರೆಯುತ್ತಾರೆ.
ಅರೆ! ಜೋರಾಗಿ ಹೇಳಿದರೆ ಕೇಳಿಸದ ಮಾತು ಪಿಸುಗುಟ್ಟಿದರೆ ಕೇಳುತ್ತದೆಯೇ? ಎಂದು ನೀವು ಕೇಳಬಹುದು.
ಬೇರೆಯವರು ನಿಮ್ಮನ್ನು ಪ್ರೀತಿಸಲಿ ಎಂದು ಆಶಿಸುವ ನೀವೇ ಖುದ್ದು ನಿಮ್ಮನ್ನು ಪ್ರೀತಿಸದೆ ಹೋದರೆ ಹೇಗೆ?
ನಿಮ್ಮ ಉಡುಗೆ, ತೊಡುಗೆ ಮತ್ತು ಅಲಂಕಾರಗಳಲ್ಲಿ ಬದಲಾವಣೆಯನ್ನು ತರುವ ಮೂಲಕ ಆತ್ಮವಿಶ್ವಾಸವನ್ನು ಹೊಂದಿರುವಂತೆ ನೀವು ತೋರಿಸಬಹುದು….. ಇದು ಒಂದು ರೀತಿಯ ಮುಖವಾಡವೇ ಸೈ. ಇಂತಹ ಮುಖವಾಡದ ಅವಶ್ಯಕತೆ ನಮಗೆ ಇಲ್ಲ.
ನಮ್ಮ ಮುಖದ ಮೇಲೆ ವಯೋ ಸಹಜವಾಗಿ ಬರುವ
ನೆರಿಗೆಗಳು ಖಂಡಿತವಾಗಿಯೂ ನಮ್ಮವೇ. ಅವುಗಳನ್ನು ನಾವು ನೋಡಲೇಬೇಕು. ಏನೂ ಆಗಿಲ್ಲ ಎಂಬಂತೆ ಅಲಂಕಾರದ ಮೂಲಕ ನಾವು ಮುಖವಾಡವನ್ನು ಹಾಕುವ ಅವಶ್ಯಕತೆ ಇಲ್ಲ.
ಜಗತ್ತು ನಮ್ಮನ್ನು ನಾವಿರುವಂತೆಯೇ ನೋಡಿ ಒಪ್ಪಿಕೊಳ್ಳಬೇಕು. ಸಹಜವಾಗಿ, ಶುದ್ಧವಾಗಿ ಮತ್ತು ಪ್ರಾಮಾಣಿಕವಾಗಿ ನಾವಿರುವಂತೆಯೇ ನಮ್ಮನ್ನು ಒಪ್ಪಿಕೊಳ್ಳುವಂತೆ ನಾವಿರಬೇಕು.
ಮುಖವಾಡಗಳು ಮತ್ತು ಫಿಲ್ಟರ್ ಗಳಿಲ್ಲದ ಬದುಕು ನಮ್ಮನ್ನು ಸಹಜವಾಗಿ ಉಸಿರಾಡುವಂತೆ ಮಾಡುತ್ತದೆ
ಸುಳ್ಳಿನ ಮುಖವಾಡವು ಸತ್ಯದ ಮುಖವನ್ನು ಮುಚ್ಚಿಹಾಕಿ ಉಸಿರುಗಟ್ಟಿಸುವಂತಹ ಸ್ಥಿತಿಯನ್ನು ಉಂಟುಮಾಡುತ್ತದೆ ಎಂದು ಆಕೆ ಹೇಳುತ್ತಾಳೆ.
ಹೌದಲ್ವೇ ಸ್ನೇಹಿತರೇ! ಜೂಲಿಯ ರಾಬರ್ಟ್ ಹೇಳುವುದು ನೂರಕ್ಕೆ ನೂರು ಸರಿ. ಬಹಳಷ್ಟು ಬಾರಿ ನಾವು ಬೇರೆಯವರನ್ನು ಅನುಕರಣೆ ಮಾಡಲು ಹೋಗಿ ನಮ್ಮತನವನ್ನು ಕಳೆದುಕೊಳ್ಳುತ್ತೇವೆ ಅಸ್ತಿತ್ವ ರಹಿತರಾಗುತ್ತೇವೆ..
ಸ್ವಚ್ಛವಾಗಿ ತೊಳೆದ ಮುಖಕ್ಕಿಂತ ಢಾಳಾಗಿ ಮೇಕಪ್ ಬಳಿದ ಮುಖ ನಮಗೆ ಸರಿ ಎನ್ನುವಷ್ಟರ ಮಟ್ಟಿಗೆ ನಾವು ಕೃತಕತೆಯ ಮೊರೆ ಹೋಗಿದ್ದೇವೆ. ಸಿದ್ದೇಶ್ವರ ಸ್ವಾಮೀಜಿಯವರು ಹೇಳುವಂತೆ ವಯೋ ಸಹಜವಾಗಿ ನಮ್ಮ ತಲೆಯಲ್ಲಿ ಬಿಳಿ ಕೂದಲು ಬೆಳೆಯುತ್ತವೆ. ಆದರೆ ನಾವು ನಮ್ಮ ತಲೆಯ ಬಿಳಿ ಕೂದಲನ್ನು ಮರೆಮಾಚಲು ಕಪ್ಪು ಬಣ್ಣವನ್ನು ಅದಕ್ಕೆ ಬಳಿಯುತ್ತೇವೆ. ನಾವು ಬಣ್ಣ ಹಚ್ಚಿಕೊಂಡಿದ್ದೇವೆ ಎಂಬುದು ನಮಗೆ ಗೊತ್ತಿದ್ದರೂ ಅದು ಬೇರೆಯವರಿಗೆ ಕಾಣುವಂತಿದ್ದರೂ ಕೂಡ ಆ ಕಪ್ಪು ಬಣ್ಣ ಹಚ್ಚುವ ಮೂಲಕ ನಮ್ಮ ತಲೆಯ ಬಿಳಿ ಕೂದಲನ್ನು ನಾವು ಮರೆಮಾಚುತ್ತೇವೆ….. ಇದು ಒಂದು ರೀತಿಯ ಮುಖವಾಡವೇ ಸರಿ.. ಪ್ರಸ್ತುತ ದಿನಗಳಲ್ಲಿ ಸೌಂದರ್ಯದ ವ್ಯಾಖ್ಯಾನವೇ ಬದಲಾಗಿದೆ. ಸೌಂದರ್ಯವೂ ಕೂಡ ಕೃತಕವಾದ,ಸ್ಟೆರಾಯ್ಡ್ನಿಂದ ತುಂಬಿದ ಔಷಧಿ ಚಿಕಿತ್ಸೆಯ, ಕಾಸ್ಮೆಟಿಕ್ ಸರ್ಜರಿಯ ಮೂಲಕ ಸುರೂಪ ಚಿಕಿತ್ಸೆ ಪಡೆದುಕೊಂಡ ಸೌಂದರ್ಯವೇ ನಿಜವಾದ ಸೌಂದರ್ಯ ಎಂಬಂತಾಗಿದೆ.
ಇನ್ನು ತಮ್ಮನ್ನು ಯಾರಾದರೂ ಭೇಟಿಯಾದಾಗ ಅವರೊಂದಿಗೆ ಸಕ್ಕರೆಯ ಸವಿ ಮಾತನಾಡುವ ಜನರು
ಅವರು ತಮ್ಮಿಂದ ತುಸು ಹೆಜ್ಜೆ ಮುಂದೆ ಹೋದರೆ ಸಾಕು ಅವರ ಕುರಿತು ಹೀಯಾಳಿಕೆಯ ಮಾತನಾಡುತ್ತಾರೆ. ಇನ್ನು ಕಾರ್ಪೊರೇಟ್ ವಲಯದಲ್ಲಂತೂ ಯಾರು ನಮ್ಮವರು ಯಾರು ಹೆರವರು ಎಂಬುದರ ಪರಿವೇ ಇಲ್ಲದ ಬದುಕು. ನಮ್ಮ ಜೊತೆಗಿದ್ದು ನಮ್ಮೊಂದಿಗೆ ಒಡನಾಡುವ ಜನರೇ ನಮ್ಮ ಬೆನ್ನಿಗೆ ಚೂರಿ ಹಾಕುತ್ತಾರೆ. ಅದು ವ್ಯಾಪಾರ ವರ್ತುಲ.
ಲಾಭ ನಷ್ಟಗಳದ್ದೇ ಅಲ್ಲಿ ಲೆಕ್ಕ.
ಆದ್ದರಿಂದ ಸ್ನೇಹಿತರೆ ನೆನಪಿಡಿ… ನೀವು ಯಾರು ಎಂಬುದು ನಿಮಗೆ ಗೊತ್ತಿರಲಿ,. ನಿಮ್ಮ ಅಸ್ತಿತ್ವದ ಅರಿವು ನಿಮಗಿರಲಿ. ನಿಮ್ಮ ಮುಖದ ಅಲಂಕಾರಕ್ಕಿಂತ ನೀವು ತುಟಿಗೆ ತೀಡುವ ಲಿಪ್ಸ್ಟಿಕ್ ಗಿಂತ ಹೆಚ್ಚು ನಿಮ್ಮ ವ್ಯಕ್ತಿತ್ವ ಮಿನುಗಲಿ.
ಯಾವುದೇ ಹೆಣ್ಣು ಮಕ್ಕಳಾಗಲಿ ಎಂದಿಗೂ ಸಮಾಜ ಬಯಸುವ ಎಲ್ಲವನ್ನು ತುಂಬಿ ಕೊಡುವ ಪರಿಪೂರ್ಣತೆಯನ್ನು ಹೊಂದಿರುವುದಿಲ್ಲ ಎಲ್ಲರಲ್ಲೂ ಒಂದಲ್ಲ ಒಂದು ಅರೆ ಕೊರೆಗಳು ಇದ್ದೇ ಇರುತ್ತವೆ. ಅಂತಹ ಎಲ್ಲ ಅಪರಿಪೂರ್ಣತೆಗಳನ್ನು ಒಪ್ಪಿಕೊಂಡು ಪರಿಪೂರ್ಣತೆಯತ್ತ…. ಅದೂ ನಮ್ಮಿಷ್ಟದ ರೀತಿಯಲ್ಲಿ
ಸಾಗುವುದು ನಮ್ಮ ಬದುಕಿನ ಧ್ಯೇಯವಾಗಲಿ.
ಜೀವನವೆಲ್ಲ ಎಲ್ಲರಿಗೂ ಎಲ್ಲವನ್ನು ಮಾಡಿ ತ್ಯಾಗವೀರರಾಗುವುದಕ್ಕಿಂತ ಬದುಕಿನ ಕೆಲವು ಘಳಿಗೆಗಳನ್ನು ನಮಗಾಗಿ ನಮ್ಮಿಷ್ಟದಂತೆ ಬದುಕೋಣ. ನಮ್ಮ ಪಾಲಕರ ಕನಸಿನ ಕೂಸಾಗಿ ಬೆಳೆದಿರುವ ನಾವು
ನಮ್ಮದೇ ಆದ ಆಶಯದ ಬದುಕನ್ನು ಕಟ್ಟಿಕೊಳ್ಳುವ ಮೂಲಕ ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳೋಣ.
–ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ, ಗದಗ್