ಜೋಳಿಗೆಯ ಕರೆ
ಮಹಾಂತರು ಬಂದರು
ಎಲ್ಲರೂ ಕೇಳಿ,
ಜೋಳಿಗೆಯ ತಂದಿಹರು
ಎಲ್ಲರಿಗೂ ಹೊರ
ಬರಹೇಳಿ.
ಹೊಲೆ ಮಾದಿಗರೆಂಬ
ಹಲ ಜಾತಿ ಕುಲದ
ಹಗೇವಿನಲಿ ಇರಬೇಡಿ,
ಎಲ್ಲರೊಳಗೂ
ಲಿಂಗಯ್ಯನೇ ಇಹನು
ಸಂಗಯ್ಯನ ಮನೆಗೆ
ಬಂದು ಬಿಡಿ.
ಕಾಯಕ ಮಾಡುತ
ಎಲ್ಲರ ಸಲಹುತ
ಬಾಳುವ ಬಗೆಗೆ
ಬಣ್ಣ ಕೊಡಿ,
ದುಡಿಯದೆ ತಿನ್ನುತ
ಅನ್ಯರದನು ಕಸಿಯುತ
ಬದುಕುವ ಹೊಲೆತನಕೆ
ಬೆಂಕಿ ಇಡಿ.
ಜೂಜು-ಮೋಜು
ಕುಡಿತವು-ವ್ಯಸನವು
ಬಾಳಿನ ರೋಗವು
ಮರೆಯದಿರಿ,
ತಂದ ಜೋಳಿಗೆಗೆ
ಇವುಗಳ ಹಾಕಿರಿ
ಬಾಳಿನ ಹಸನನು
ತೊರೆಯದಿರಿ.
ಬಸವನ ಕರುಣೆಯೇ
ತಂದ ಜೋಳಿಗೆಯು
ಕಣ್ಣೀರನು ಒರೆಸುವ
ಸಾಧನವು,
ಹೆಂಡತಿ ಮಕ್ಕಳು
ನಗುತಲಿ ಬಾಳ್ವುದು
ಇದರೊಳು ಹಾಕುವ
ಕಾಣಿಕೆಯು.
ವಚನವ ಓದಿರಿ
ಬಸವನ ತಿಳಿಯಿರಿ
ಶರಣರ ಮನೆಗೆ
ಗುಡಿ ತೋರಣವ ಕಟ್ಟಿರಿ,
ಕಲ್ಯಾಣಕೆ ಕರೆಯಲು
ಮಹಾಂತನೇ ಬಂದನು
ನಿಲ್ಲದೇ ಒಡನೆ
ನಡೆಯಿರಿ,
ಮಹಾಮನೆಯಲಿ
ಸುಖದಿ ಬಾಳಿರಿ.
-ಕೆ.ಶಶಿಕಾಂತ
ಲಿಂಗಸೂಗೂರು.