ತುಳಸಿ ಪ್ರತಿ ಮನೆಯ ಕಲ್ಯಾಣದ ಅರಸಿ
ನವ್ಹಂಬರ 2 ರಂದು ತುಳಸಿ ವಿವಾಹ ಪೂಜೆ .
ಅರಮನೆ ಗುರುಮನೆ ಕಿರುಮನೆ ಭೇದವಿಲ್ಲದೇ ಬೆಳೆಯುವ ತುಳಸಿ ಸಾಕಷ್ಟು ವಿಶೇಷಗಳನ್ನು ಮಡಿಲಲ್ಲಿ ತುಂಬಿಕೊಂಡಿದ್ದಾಳೆ. ಹಾಗಾದರೆ ಸಾತ್ವಿಕ ಶಕ್ತಿ ತುಳಸಿ ಮಾತೆಯ ಬಗ್ಗೆ ಅರಿಯೋಣ.
:ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳಲ್ಲಿ ಉತ್ಥಾನ ದ್ವಾದಶಿ ಅಥವಾ ತುಳಸಿ ಕಲ್ಯಾಣ ಪ್ರಸಿದ್ಧ. ಕಾರ್ತಿಕ ಮಾಸದ ಕೃಷ್ಣ ಪಕ್ಷದ ಉತ್ಥಾನದ್ವಾದಶಿಯೆಂದು ನಾರಾಯಣ ಯೋಗನಿದ್ರೆಯಿಂದ ಏಳುವ ಪವಿತ್ರ ದಿನ. ಆಷಾಢ ಮಾಸದ ಶಯನೀ ಏಕಾದಶಿಯಂದು ನಿದ್ರಿಸಿದಂತೆ ನಟಿಸಿ, ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಏಳುವನು. ಅದಕ್ಕೆ ಇದನ್ನು ಉತ್ಥಾನ (ಏಳುವ) ದ್ವಾದಶಿಯಂದು ಹೇಳುವರು. ಇಂದು ಚಾತುರ್ಮಾಸ ವ್ರತದ ಸಮಾಪ್ತಿಯಾಗುತ್ತದೆ ಇದೇ ಸಾಯಂಕಾಲದ ಮುಹೂರ್ತದಲ್ಲಿ ತುಳಸಿಯಲ್ಲಿ ಸನ್ನಿಹಿತವಾಗಿರುವ ಕಾರ್ತಿಕ ಮಾಸದ ರಾಧಾ ಹಾಗೂ ದಾಮೋದರರ ರೂಪಿ ಪರಮಾತ್ಮನಿಗೆ ಲೋಕಕಲ್ಯಾಣಕ್ಕಾಗಿ ತುಳಸಿ ಕಲ್ಯಾಣ ಜರುಗುತ್ತದೆ.
ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಆಚರಿಸುವ ತುಳಸಿ ಪೂಜೆ ನಮ್ಮ ಸಂಸ್ಕೃತಿಯ ವಿಶಿಷ್ಟ ಆಚರಣೆ. ಕೃಷ್ಣನಮೂರ್ತಿ ಮತ್ತು ತುಳಸಿ ವಿವಾಹವನ್ನು ಮಾಡಿಸುವದು ಹಬ್ಬದ ವೈಶಿಷ್ಟ್ಯ.
ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲ ನಲ್ಲಿ ತನ್ನ ಸುಖ ಶಯನ ದಿಂದ ಮೇಲಕ್ಕೆದ್ದು, ತನ್ನ ನಿದ್ರಾ ಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ಈ ದಿನವನ್ನು ಕ್ಷೀರಾಭಿವೃತವೆಂದು ಎಂದು ಹಲವು ಕಡೆ ಆಚರಿಸುವರು. ತುಳಸಿ ಕಲ್ಯಾಣ ದೀಪಾವಳಿ ಸಂಭ್ರಮ ಮುಗಿಯುತ್ತಿರುವ ಬೆನ್ನಲ್ಲೆ ಕಾರ್ತಿಕ ಮಾಸದ ವೈಭವ.ಈ ಹಬ್ಬದ ಹಿಂದಿನ ದಿವಸ ತುಳಸಿ ಬೃಂದಾವನವನ್ನು ಸ್ವಚ್ಛಗೊಳಿಸಿ ಬಣ್ಣ ಹಚ್ಚಿ ಶೃಂಗರಿಸುತ್ತಾರೆ. ತುಳಸೀಕಟ್ಟೆ ಇಲ್ಲದ ಮನೆ ಅತಿವಿರಳ. ಕೃಷ್ಣ ತುಳಸಿ, ರಾಮ ತುಳಸಿ ಎಂದು ಪ್ರಭೇದಗಳಿವೆ. ಕೃಷ್ಣತುಳಸಿ ಕಪ್ಪಾಗಿಯೂ ರಾಮತುಳಸಿ ತಿಳಿ ಬಣ್ಣದ್ದಾಗಿರುತ್ತದೆ.
ಭಗವಂತನಿಗೆ ತುಳಸಿ ಅರ್ಪಿಸಿ ಪೂಜಿಸುವ ಪ್ರಾಮುಖ್ಯತೆ ಎಲ್ಲರಿಗೂ ಗೊತ್ತಿದೆ. ಸಾವಿರ ಪುಷ್ಪಗಳಿಗೆ ಒಂದು ತುಳಸಿ ಸಮವೆಂದು ನಂಬಿಕೆ.ಪ್ರತಿದಿನ ತುಳಸಿ ಪೂಜೆ ಮಾಡಿ ಅದರ ದಳದೊಂದಿಗೆ ತೀರ್ಥವನ್ನು ಸೇವಿಸುವರು.
ತುಳಸಿ ವಿವಾಹದ ಬಳಿಕ ಚಾತುರ್ಮಾಸದಲ್ಲಿ ಕೈಗೊಂಡ ಎಲ್ಲ ವ್ರತಗಳನ್ನು ಸಮಾಪ್ತ ಗೊಳಿಸುತ್ತಾರೆ. ಚಾತುರ್ಮಾಸದಲ್ಲಿ ಯಾವ ಪದಾರ್ಥಗಳನ್ನು ವರ್ಜ್ಯಮಾಡಿರುತ್ತಾರೆಯೋ,ಆ ಪದಾರ್ಥಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ನಂತರ ತಾವೂ ಸೇವಿಸುತ್ತಾರೆ.
ಪೌರಾಣಿಕ ಕಥೆ:- ತುಳಸಿ ವಿವಾಹ ಆಚರಣೆ ಹಿಂದೆ ಒಂದು ಪೌರಾಣಿಕ ಕಥೆಯಿದೆ.ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿ ಗಿಡವಾಗಿ ಪರವರ್ತನೆ ಆಗಿರುತ್ತಾಳೆ. ಈಕೆ ಜಲಂಧರ ಎಂಬ ಲೋಕಕಂಟಕ ರಾಜನ ಪತ್ನಿ ಆಗಿರುತ್ತಾಳೆ. ಮಹಾವಿಷ್ಣುವಿನ ಪರಮ ಭಕ್ತೆ ಆಗಿರುತ್ತಾಳೆ.ಈಕೆಯ ಪಾತಿವ್ರತ್ಯದ ಫಲವಾಗಿ ಯಾರೂ ಸೋಲಿಸಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾನೆ. ತನ್ನ ಯಾರೂ ಸೋಲಿಸಲಾರರು ಎಂಬ ಅಹಂನಿಂದ ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸುತ್ತಾನೆ.
ಈತನ ಉಪಟಳ ಎಲ್ಲೆ ಮೀರಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ವಿಷ್ಣುವಿನ ಬಳಿ ಹೋಗಿ ಸಮಸ್ಯೆಯನ್ನು ನೀಗಿಸುವಂತೆ ಹೇಳುತ್ತಾನೆ. ಆಗ ವಿಷ್ಣು ಜಲಂಧರನ ರೂಪತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ.ಇತ್ತ ತನ್ನ ಚಾರಿತ್ರಿಕಕ್ಕೆ ಧಕ್ಕೆ ಆಗಿದ್ದು ಗೊತ್ತಾಗಿ ವೃಂದಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಹಾಗೂ ನಿನಗೆ ಪತ್ನಿಯ ವಿರಹ ಉಂಟಾಗಲಿ ಎಂದು ಶಾಪ ನೀಡಿ ತನ್ನ ಪತಿಯ ಚಿತೆಯಲ್ಲಿ ಹಾರಿ ಪ್ರಾಣಬಿಡುವಳು.ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಬೋಧಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆ ಇದೆ. ಇದರ ಸಂಕೇತವೇ ವಿಷ್ಣು ತುಳಸಿ ವಿವಾಹ.
ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ಹಾಗೂ ದಾನವರ ನಡುವೆ ಸಮುದ್ರ ಮಂಥನ ನಡೆದು ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡು ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಆ ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿ ಎಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ತನ್ನ ಪತ್ನಿಯಾಗಿಸುತ್ತಾನೆ ಎಂಬ ಕಥೆ ಇದೆ.ಹಿಂದೂಗಳಲ್ಲಿ ತುಳಸಿ ಹಬ್ಬ ಮುಗಿದ ಬಳಿಕ ಮದುವೆ ಸಿದ್ಧತೆ ನಡೆಸುತ್ತಾರೆ.
ತುಳಸಿ ಹಬ್ಬದ ಆಚರಣೆಯ ಮಹತ್ವ:-ಮುತ್ತೈದೆಯರು ತುಳಸಿ ಹಬ್ಬ ಆಚರಣೆ ಮಾಡುವುದರಿಂದ ತನ್ನ ಗಂಡನ ಆರೋಗ್ಯ, ಆಯುಸ್ಸು ಹೆಚ್ಚಾಗುವುದು ಎಂದು ಹೇಳಲಾಗುವುದು. ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ಗಳಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂಬ ನಂಬಿಕೆ ಇದೆ. ಆದ್ದರಿಂದ ಉತ್ಥಾನ ದ್ವಾದಶಿ ದಿನ ನೆಲ್ಲಿಕಾಯಿಯ ಹಾಗೂ ತುಳಸಿ ಗಿಡಕ್ಕೆ ಪೂಜೆ ಮಾಡಿ ವಿವಾಹ ಆಚರಣೆ ಮಾಡುತ್ತಾರೆ. ಈ ಆಚರಣೆಯಿಂದ ಪತಿಗೆ ಒಳಿತಾಗುವುದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ವಿವಾಹ ಆಚರಣೆ:- ಹಿಂದೂಗಳ ಮನೆ ಮುಂದೆ ತುಳಸಿ ಗಿಡ ಇದ್ಯೆ ಇರುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ತೊಳೆದು ಅದಕ್ಕೆ ರಂಗೋಲಿ, ಚೆಂಡು ಹೂವುಗಳು, ಮಾವಿನ ಎಲೆಗಳಿಂದ ಅಲಂಕರಿಸಿ, ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನು ಇರಿಸಿ ಪೂಜೆ ಮಾಡುತ್ತಾರೆ.
ದೀಪಾವಳಿ ಸಮಯದಲ್ಲಿ ಇದ್ದಷ್ಟೆ ಸಂಭ್ರಮ ಈ ತುಳಸಿ ಹಬ್ಬದಲ್ಲೂ ಕೂಡ ಸಡಗರ ಎಲ್ಲರಲ್ಲಿಯೂ ಮನೆಮಾಡಿರುತ್ತದೆ. ಹೆಂಗಳೆಯರು ತುಳಸಿ ಗಿಡವನ್ನು ಮದುವನಗಿತ್ತಿಯಂತೆ ಸಿಂಗರಿಸುತ್ತಾರೆ.ವಿಷ್ಣುವಿನ ಅಥವಾ ಅವನ ಅವತಾರನಾದ ಕೃಷ್ಣ, ರಾಮನ ಫೋಟೋವನ್ನು ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು,ತುಳಸಿ ಪಕ್ಕ ಇಟ್ಟು ಇಬ್ಬರನ್ನು ಸ್ನಾನಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂ ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನುಹಾಕಿ ಮದುವೆ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು ಹಾಗೂ ತುಳಸಿ ವಿವಾಹವನ್ನು ಆಚರಿಸುತ್ತಾರೆ. ಸಿಹಿತಿಂಡಿಯನ್ನು ನೈವೇದ್ಯ ಮಾಡಲಾಗುತ್ತದೆ. ಮುತ್ತೈದೆಯರನ್ನು ಕರೆದು ತಿಂಡಿಗಳನ್ನು ಮತ್ತು ಮತ್ತು ನೆಲ್ಲಿಕಾಯಿಗಳನ್ನು ಬಾಗಿನದ ರೂಪದಲ್ಲಿ ನೀಡಲಾಗುತ್ತದೆ.
ತುಳಸಿವು ಸಾತ್ವಿಕ ವಾಗಿರುವುದರಿಂದ ತುಳಸಿ ಗಿಡದತ್ತ ಈಶ್ವರನ ಶಕ್ತಿಯು ಹೆಚ್ಚು ಪ್ರಮಾಣಗಳಲ್ಲಿ ಆಕರ್ಷಿತವಾಗುತ್ತದೆ. ತುಳಸಿ ಎಲೆಗಳನ್ನು ಕುಡಿಯುವ ನೀರಿನಲ್ಲಿ ಹಾಕಿದರೆ ಆ ನೀರು ಶುದ್ಧ ಮತ್ತು ಸಾತ್ವಿಕ ಮಾತ್ರವಲ್ಲದೆ ಅದರಲ್ಲಿ ಶಕ್ತಿಯೂ ಸಮ್ಮಿಲಿತವಾಗಿರುತ್ತದೆ.ಕರೋನಾ ಕಾಲಘಟ್ಟದಲ್ಲಿ ಸಂಜೀವಿನಿಯಾಗಿ ಪೊರೆದ ಮಾತೆ ತುಳಸಿ.
“ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೇ ಕ್ಷೀರೋದಮಥನೋದ್ಭೂತೆ ತುಳಸಿ ತ್ವಾಂ ನಮಾಮ್ಯಹಮ್” ತುಳಸಿ ಹಬ್ಬದ ಹಾರ್ದಿಕ ಶುಭಾಶಯಗಳು.
–ಜಯಶ್ರೀ.ಭ.ಭಂಡಾರಿ.
ಬಾದಾಮಿ.

