ಹಸಿರಲ್ಲಿ ಒಂದಾದ ಸಾಲುಮರದ ತಿಮ್ಮಕ್ಕ….
ಆ ದಂಪತಿಗಳಿಗೆ ಮಕ್ಕಳಿರಲಿಲ್ಲ… ಬಹಳಷ್ಟು ವರ್ಷಗಳ ಕಾಲ ಮಕ್ಕಳಿಗಾಗಿ ಹಾತೊರೆದ ಆ ದಂಪತಿಗಳು ತಮ್ಮ ನೋವನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಅದೊಂದು ದಿನ ಕಾರ್ಯನಿಮಿತ್ತ ತಮ್ಮ ಊರಿನಿಂದ ಮತ್ತೊಂದು ಊರಿಗೆ ತೆರಳಿದಾಗ ದಾರಿಯಲ್ಲಿ ದಣಿವನ್ನು ಆರಿಸಿಕೊಳ್ಳಲು ಕುಳಿತುಕೊಳ್ಳಬೇಕೆಂದರೆ ಒಂದೇ ಒಂದು ಮರ ಇಲ್ಲದೆ ಇರುವುದು ಗಮನಕ್ಕೆ ಬಂತು. ಕೂಡಲೇ ಕಾರ್ಯ ಪ್ರವೃತ್ತರಾದ ದಂಪತಿಗಳು ಸುಮಾರು ನಾಲ್ಕೈದು( 2.8 ಮೈಲಿ ) ಕಿಲೋಮೀಟರ್ ದೂರದವರೆಗಿನ ರಸ್ತೆಯಲ್ಲಿ ತಾವೇ ಗುಂಡಿಗಳನ್ನು ತೋಡಿ ಸಸಿಗಳನ್ನು ನೆಟ್ಟು ಪ್ರತಿದಿನ ಅವುಗಳಿಗೆ ನೀರುಣಿಸತೊಡಗಿದರು.
ಮೊದಮೊದಲು ಈ ದಂಪತಿಗಳ ಕೃತ್ಯವನ್ನು ನೋಡಿ ಜನ ತಮಾಷೆ ಮಾಡಿ ನಗುತ್ತಿದ್ದರು. ಬೇರೆ ಕೆಲಸ ಇಲ್ಲ ಇವರಿಗೆ ಎಂದು ಹೀಯಾಳಿಸುತ್ತಿದ್ದರು ಮುಂದಿನ ಕೆಲವೇ ವರ್ಷಗಳಲ್ಲಿ ಆ ಮರಗಳು ಬೆಳೆದು ನಿಂತು ಆ ಹಾದಿಯಲ್ಲಿ ಹೋಗುವ ಜನರಿಗೆ ನೆರಳನ್ನು ನೀಡತೊಡಗಿದವು.
ಸಾವಿರಾರು ಪಕ್ಷಿಗಳಿಗೆ ಆಶ್ರಯ ತಾಣವಾಗಿ ಆ ದಾರಿಯಲ್ಲಿ ಹಾದು ಹೋಗುವ ಜನರಿಗೆ, ಜಾನುವಾರುಗಳಿಗೆ ನೆರಳನ್ನು ನೀಡುವ ಮರಗಳ ಅಡಿಯಲ್ಲಿ ವಿಶ್ರಾಂತಿ ಪಡೆದು ನೆಮ್ಮದಿಯಿಂದ ಮುಂದೆ ಸಾಗಿದಾಗ ಆ ದಂಪತಿಗಳ ಶ್ರಮ ಸಾರ್ಥಕವಾಯಿತು ಎಂಬ ಭಾವ ಅವರಲ್ಲಿ.
385 ಮರಗಳನ್ನು ನೆಟ್ಟ ದಂಪತಿಗಳು ಅವುಗಳನ್ನು ತಮ್ಮ ಮಕ್ಕಳಂತೆ ಪೋಷಿಸಿದರು. ಒಟ್ಟು 80,00ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಕುವೆಂಪು ಅವರ ಪಕ್ಷಿಕಾಶಿ ಕವನ ಸಂಕಲನದ ನುಡಿಯಂತೆ
ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !
ಈ ದಂಪತಿಗಳು ರಸ್ತೆಯ ಬದಿಗಳನ್ನು ಹಸಿರಾಗಿಸಿದರು.ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರವಾದಿಗಳಾದರು. ಅವರೇ ನಮ್ಮ ಸಾಲುಮರದ ತಿಮ್ಮಕ್ಕ ಮತ್ತು ಚಿಕ್ಕಯ್ಯ ದಂಪತಿಗಳು.
ತಮ್ಮ ಪರಿಸರದ ಕಾಳಜಿಯಿಂದಾಗಿ ಅವರು ರಾಷ್ಟ್ರದ
“ಭಾರತೀಯ ಪೌರ ಪ್ರಶಸ್ತಿ” ಹಾಗೂ ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಯನ್ನು 2019ರಲ್ಲಿ ಪಡೆದರು.
ಕೇವಲ ಭಾರತದಲ್ಲಿ ಮಾತ್ರವಲ್ಲ ಅಮೆರಿಕಾ ಸಂಯುಕ್ತ ಸಂಸ್ಥಾನದ ಓಕ ಲ್ಯಾಂಡ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ಸಾಲುಮರದ ತಿಮ್ಮಕ್ಕನವರ ಹೆಸರಿನಲ್ಲಿ “ತಿಮ್ಮಕ್ಕನ ಪರಿಸರ ಶಿಕ್ಷಣ ಸಂಪನ್ಮೂಲಗಳು” ಎಂಬ ಹೆಸರಿನ ಪರಿಸರ ಸಂಘಟನೆಗಳನ್ನು ಹುಟ್ಟು ಹಾಕಲಾಗಿದೆ.
ಅಂದಿನ ಮೈಸೂರು ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ಎಂಬ ಊರಿನಲ್ಲಿ ಹುಟ್ಟಿದ ತಿಮ್ಮಕ್ಕನವರು ಅನಕ್ಷರಸ್ಥ ಹೆಣ್ಣು ಮಗಳು. ರಾಮನಗರ ಜಿಲ್ಲೆಯ ಹುಲಿಕಲ್ ತಾಲೂಕಿನ ಮಾಗಡಿ ಗ್ರಾಮದ ಚಿಕ್ಕಯ್ಯನವರನ್ನು ವಿವಾಹವಾಗಿ ಪತಿಯ ಮನೆಗೆ ತಿಮ್ಮಕ್ಕ ಬಂದರು. ಹತ್ತಿರದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಕೂಲಿ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದ ದಂಪತಿಗಳಿಗೆ ವರ್ಷಗಳು ಕಳೆದರೂ ಮಕ್ಕಳಾಗಲಿಲ್ಲ. ಮಕ್ಕಳಾಗಲಿಲ್ಲ ಎಂಬ ಚಿಂತೆಯಲ್ಲಿ ದಂಪತಿಗಳು ನೊಂದರು. ಅದೊಂದು ದಿನ ಕೆಲಸದ ನಿಮಿತ್ತ ಹೊರಟಾಗ ಮೇಲಿನ ಘಟನೆ ನಡೆಯಿತು. ಅದೊಂದು ಯಜ್ಞವೆಂಬಂತೆ ದಂಪತಿಗಳು
ತಮ್ಮ ಊರಿನ ಬಳಿ ದೊರೆಯುತ್ತಿದ್ದ ಫಿಕಸ್ ಎಂಬ ಆಲದ ಮರಗಳನ್ನು ಕಸಿ ಮಾಡಲು ಆರಂಭಿಸಿದರು. ಹೀಗೆ ಕಸಿ ಮಾಡಿದ ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿ 94ರ ಬದಿಯಲ್ಲಿ ವ್ಯವಸ್ಥಿತವಾಗಿ ನೆಟ್ಟರು. ಮೊದಲ ವರ್ಷ ಐದು, ಎರಡನೇ ವರ್ಷ ಹತ್ತು, ಮೂರನೇ ವರ್ಷ ಹದಿನೈದು ಹೀಗೆ ಪ್ರತಿ ವರ್ಷವೂ ಸಸಿಗಳನ್ನು ಕಸಿ ಮಾಡಿ ನೆಡುವ ಮೂಲಕ ರಸ್ತೆಯುದ್ದಕ್ಕೂ ಹಸಿರಿನ ಸಿರಿಯನ್ನು ಹಾಸಿದರು. ಸುಮಾರು ನಾಲ್ಕೂವರೆ ಕಿಲೋಮೀಟರ ಉದ್ದದವರೆಗೆ ಈ ಮರಗಳನ್ನು ನೆಡುವುದರ ಜೊತೆಗೆ ಅವುಗಳಿಗೆ ನೀರನ್ನು ಹೊತ್ತು ತಂದು ಹಾಕಿ ಪೋಷಿಸಿದ ದಂಪತಿಗಳು ಅವುಗಳಲ್ಲೇ ತಮ್ಮ ಮಕ್ಕಳನ್ನು ಕಂಡುಕೊಂಡರು. ‘ಹಸಿರೇ ಉಸಿರು’ ಎಂದು ಹೇಳದೆಯೂ ಹಸಿರಿನ ನೇತಾರರಾದರು…. ಬಣ್ಣದ ಮಾತಿನ ಮಂಟಪ ಕಟ್ಟದೆ ಗೋಚರಿಸುವ ದೂರದವರೆಗೂ ಹಸಿರನ್ನೇ ಬಿತ್ತಿ ಬೆಳೆದರು. ಇದೀಗ ಸುಮಾರು ಒಂದುವರೆ ಮಿಲಿಯನ್ ಕಿಮ್ಮತ್ತಿನ ಈ ಹಸಿರಿನ ಆಲದ ಮರಗಳು ತಿಮ್ಮಕ್ಕನಿಗೆ ಸಾಲುಮರದ ತಿಮ್ಮಕ್ಕ, ಆಲದ ಮರದ ತಿಮ್ಮಕ್ಕ ಎಂದು ನಾಮಕರಣವಾಗಲು ಕಾರಣವಾದವು.
1991ರಲ್ಲಿ ಪತಿ ಚಿಕ್ಕಯ್ಯನವರು ತೀರಿದ ನಂತರವೂ ಕೂಡ ತನ್ನ ಈ ಕಾಯಕವನ್ನು ಮುಂದುವರೆಸಿದ ತಿಮ್ಮಕ್ಕನನ್ನು ಹಲವಾರು ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದವು. ಜನರಿಂದ ನಿರ್ಮಿಸಲ್ಪಟ್ಟ ಕರ್ನಾಟಕದ ಬಹುತೇಕ ಎಲ್ಲ ಉದ್ಯಾನಗಳಿಗೆ ಸಾಲುಮರದ ತಿಮ್ಮಕ್ಕನ ಹೆಸರೇ ಕಾಯಂ ಆಯಿತು. ಪರಿಸರ ಸಂಬಂಧಿ ಎಲ್ಲ ಕಾರ್ಯಕ್ರಮಗಳಿಗೆ ತಿಮ್ಮಕ್ಕನಿಗೆ ಆಹ್ವಾನ, ಗೌರವ ಸನ್ಮಾನಗಳು ದೊರೆತವು.
ಸಾಲುಮರದ ತಿಮ್ಮಕ್ಕ ನೆಟ್ಟು ಪೋಷಿಸಿ ಬೆಳೆಸಿದ ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಸಂದರ್ಭ ಕೂಡ ಎದುರಾಯಿತು. ಬಾಗೇಪಲ್ಲಿ-ಹಲಗೂರು ರಾಷ್ಟ್ರೀಯ ಹೆದ್ದಾರಿಯ ಅಗಲೀಕರಣ ಕಾಮಗಾರಿಗೆ ಮರಗಳು ಬಲಿಯಾಗುವ ಸಾಧ್ಯತೆಗಳನ್ನು ಅರಿತ ತಿಮ್ಮಕ್ಕ ಅಂದಿನ ಮುಖ್ಯಮಂತ್ರಿಗಳಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಗಳಾಗಿದ್ದ
ಜಿ ಪರಮೇಶ್ವರ್ ಅವರನ್ನು ಭೇಟಿಯಾಗಿ ಯೋಜನೆಯನ್ನು ಮರುಪರಿಶೀಲಿಸಲು ಕೋರಿಕೊಂಡರು. ಪರಿಣಾಮವಾಗಿ 2019 ರಲ್ಲಿ 70 ವರ್ಷ ಮೇಲ್ಪಟ್ಟ ಆಲದ ಮರಗಳನ್ನು ಸುರಕ್ಷಿತವಾಗಿ ಬೇರೆಡೆ ಸ್ಥಳಾಂತರಿಸಲಾಯಿತು.
1995ರಲ್ಲಿ ತಿಮ್ಮಕ್ಕ ಅವರಿಗೆ ರಾಷ್ಟ್ರೀಯ ಪೌರ ಪ್ರಶಸ್ತಿ ದೊರೆಯಿತು.
1997ರಲ್ಲಿ ‘ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ’ ಗೌರವ ಪುರಸ್ಕಾರ ನೀಡಲಾಯಿತು. ಅದೇ ವರ್ಷ
‘ವೀರ ಚಕ್ರ’ ಗೌರವ ಪ್ರಶಸ್ತಿಯು ಅವರಿಗೆ ಸಂದಿತು.
2000 ಇಸವಿಯಲ್ಲಿ ‘ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿ, ‘ಗಾಡ ಫ್ರೆ ಫಿಲಿಪ್ಸ್’ ಗೌರವ,
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ‘ವಿಶಾಲಾಕ್ಷಿ’ ಪ್ರಶಸ್ತಿ
2010ರಲ್ಲಿ ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿಗೆ ತಿಮ್ಮಕ್ಕ ಪಾತ್ರರಾಗಿದ್ದಾರೆ.
2019ರ ಮಾರ್ಚ್ 16ರಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಶತಾಯುಷಿ ಸಾಲುಮರದ ತಿಮ್ಮಕ್ಕ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ತಲೆಯ ಮೇಲೆ ಕೈ ಇಟ್ಟು ಹಾರೈಸಿದರು.
ಜಗತ್ತಿನ ನೂರು ಜನ ಪ್ರಭಾವಿ ಮಹಿಳೆಯರಲ್ಲಿ ಒಬ್ಬರಾಗಿ ಸಾಲುಮರದ ತಿಮ್ಮಕ್ಕನವರನ್ನು 2016ರಲ್ಲಿ ಬಿ ಬಿ ಸಿ
( ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ )ಗುರುತಿಸಿ ಗೌರವಿಸಿದೆ.
ಹೀಗೆ ನೂರಾರು ಪ್ರಶಸ್ತಿ ಗೌರವಗಳಿಗೆ ಪಾತ್ರರಾದ ಸಾಲುಮರದ ತಿಮ್ಮಕ್ಕನವರು ಹಲವಾರು ಪರಿಸರ ಸಂಬಂಧಿ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ತಮ್ಮ ಊರಿನಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳ ಸಹಾಯ ಹಸ್ತದ ಜೊತೆಗೆ ತಮಗೆ ಬಂದ ಪ್ರಶಸ್ತಿಯ ಹಣದಲ್ಲಿ ಮಳೆ ನೀರನ್ನು ಸಂಗ್ರಹಿಸಲು ಬೃಹತ್ತಾದ ಟ್ಯಾಂಕ್ ಒಂದನ್ನು ಕಟ್ಟಿಸಿದರು. ತನ್ನ ಪತಿಯ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟುವ ಆಶಯವನ್ನು ಹೊತ್ತು ತಿಮ್ಮಕ್ಕ ಅದಕ್ಕಾಗಿ ಟ್ರಸ್ಟ್ ಒಂದನ್ನು ರಚಿಸಿದ್ದರು. ವಯೋ ಸಹಜವಾಗಿ ನಿಶಕ್ತಗೊಂಡಿರುವ ತಿಮ್ಮಕ್ಕ ಒಂದೊಮ್ಮೆ ಬಿದ್ದು ಪೃಷ್ಟದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಒಳಗಾಗದ ತಿಮ್ಮಕ್ಕನವರನ್ನು ಅವರ ದತ್ತು ಪುತ್ರ ಉಮೇಶ್ ಅವರು ಇಲ್ಲಿಯವರೆಗೂ ನೋಡಿಕೊಂಡಿದ್ದಾರೆ. ‘ಪರಿಸರ ಮಾತೆ’ ಎಂದು ಹೆಸರಾಗಿರುವ ತಿಮ್ಮಕ್ಕನವರಿಗೆ ಈ ಟಿ ವಿಯ ರಂಗನಾಥ್ ಅವರ ಸಹಕಾರದಿಂದ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಬೊಮ್ಮಾಯಿ ಅವರು ಸ್ವಂತ ಮನೆಯನ್ನು ಸರ್ಕಾರದಿಂದ ಕೊಡ ಮಾಡಿದ್ದಾರೆ.
ತಿಮ್ಮಕ್ಕನವರ ಹೆಸರನ್ನು ಬಳಸಿಕೊಂಡು ಸಂಘಟನೆಯೊಂದು ಹಣ ವಸೂಲಿ ಮಾಡುತ್ತಿದ್ದಾಗ ಇದರ ವಿರುದ್ಧ ತಿರುಗಿಬಿದ್ದ ತಿಮ್ಮಕ್ಕನವರು ನ್ಯಾಯಾಲಯದ ಬಾಗಿಲು ತಟ್ಟಿದರು. ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ನ್ಯಾಯ ಕೇಳಿದ ತಿಮ್ಮಕ್ಕ ಅಲ್ಲೂ ಕೂಡ ಜಯಶಾಲಿಯಾಗಿದ್ದರು.
ಹಲವಾರು ಬಾರಿ ವಯೋ ಸಹಜ ತೊಂದರೆಗಳಿಂದ ಆಸ್ಪತ್ರೆ ಸೇರಿದ ತಿಮ್ಮಕ್ಕನವರ ಚಿಕಿತ್ಸೆಗೆ ಸರ್ಕಾರ ಸಹಾಯ ಹಸ್ತವನ್ನು ನೀಡಿದೆ. ಹಲವಾರು ಬಾರಿ ಯಮ ಸದನದ ಬಾಗಿಲು ತಟ್ಟಿದ ತಿಮ್ಮಕ್ಕನವರು ಕೆಲ ದಿನಗಳ ಹಿಂದೆ ಬಿದ್ದು ಆಸ್ಪತ್ರೆ ಸೇರಿದ್ದರು. ಮಕ್ಕಳ ದಿನಾಚರಣೆಯ ಈ ದಿನ ತಿಮ್ಮಕ್ಕ ಎಂಬ ಪರಿಸರ ಜ್ಯೋತಿ ತನ್ನ ವಯೋ ಸಹಜ ತೊಂದರೆಗಳಿಂದ ಹೊರಬರಲು ಸಾಧ್ಯವಾಗದೆ ಇದೀಗ ಕೊನೆಯುಸಿರೆಳೆದಿದ್ದಾರೆ.
ಮನುಷ್ಯ ಹುಟ್ಟಿದಾಗ ಆತನಿಗೆ ಕೇವಲ ಉಸಿರಿರುತ್ತದೆ ಹೆಸರಿರುವುದಿಲ್ಲ. ಆದರೆ ಆತ ಸತ್ತಾಗ ಉಸಿರು ಇರುವುದಿಲ್ಲ ನಿಜ… ಆದರೆ ಹೆಸರು ಇರುತ್ತದೆ.
ತಿಮ್ಮಕ್ಕನವರು ನಮ್ಮನ್ನು ಅಗಲಿರುವ ಈ ಕ್ಷಣದಲ್ಲಿ ಮನಸ್ಸಿಗೆ ತೋಚಿದ್ದು ಅವರ ಭೌತಿಕ ದೇಹ ನಮ್ಮೊಡನೆ ಇರದೆ ಹೋದರೂ ಅವರ ಆತ್ಮಿಕ ದೇಹದ ಉಸಿರು ನಮ್ಮ ಸುತ್ತಲೂ ನಾವು ಬೆಳೆಸುವ ಹಸಿರಿನಲ್ಲಿರುತ್ತದೆ. ಆ ಹಸಿರನ್ನು ಸದಾ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರದ್ದು ಹಾಗೂ ಆ ಜವಾಬ್ದಾರಿಯನ್ನು ಬದ್ಧತೆಯಿಂದ ನಾವೆಲ್ಲರೂ ನಿರ್ವಹಿಸೋಣ ಎಂಬ ಆಶಯದೊಂದಿಗೆ ಸಾಲುಮರದ ತಿಮ್ಮಕ್ಕನವರನ್ನು ಗೌರವ ಪೂರ್ವಕವಾಗಿ ಬೀಳ್ಕೊಡುವ.
–ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

