ಸಂಸ್ಮರಣೆ
ಅಕ್ಷರದ ಅವ್ವ” ನಿಗೊಂದು ಅಕ್ಷರದ ನಮನ

ಪ್ರಾಚೀನ ಕಾಲದಂತೆ ೧೯ ನೆಯ ಶತಮಾನದ ಆರಂಭದ ಕಾಲವು ಮಹಿಳೆಯರ ಪಾಲಿಗೆ ಕತ್ತಲೆಯ ಯುಗವಾಗಿತ್ತು.ಮಹಿಳೆಯರನ್ನು ನಿರ್ಜೀವ ವಸ್ತುವಿನಂತೆ ಪರಿಭಾವಿಸಲಾಗುತಿತ್ತು.ಸ್ತ್ರೀಯರಿಗೆ ಶಿಕ್ಷಣ ನೀಡುವದು ಅಪರಾಧ. ಸ್ತ್ರೀಯರಿಗೆ ಶಿಕ್ಷಣ ನೀಡಿದರೆ, ಸಮಾಜಕ್ಕೆ, ಧರ್ಮಕ್ಕೆ ದ್ರೋಹ ಬಗೆದಂತೆ ಎಂಬ ಭಾವನೆ ಸಮಾಜದಲ್ಲಿ ಮನೆಮಾಡಿತ್ತು.ಅಂತಹ ಸಂದಿಗ್ಧ ಸಮಯದಲ್ಲಿ ಸ್ತ್ರೀ ಶಿಕ್ಷಣ, ಸಮಾನತೆಯ ಬಗ್ಗೆ ಧ್ವನಿ ಎತ್ತಿದವರು ಸಾವಿತ್ರಿಬಾಯಿ ಪುಲೆ.ರೂಢಿಗತ ಸಾಂಪ್ರದಾಯಿಕ ಶಕ್ತಿಗಳನ್ನು ಎದುರು ಹಾಕಿಕೊಂಡು ಸಮಾಜದ ಕಟ್ಟಳೆಗಳನ್ನು ಮುರಿದು ಮಹಿಳೆಯರಿಗೆ ಶಿಕ್ಷಣ ನೀಡುವ ಸಂಕಲ್ಪ ಮಾಡಿದರು. ಆ ಮೂಲಕ ಮನುಕುಲದ ಮಹಿಳಾ ವಿಮೋಚಕಿ,ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಸಮಾಜ ಸುಧಾರಕಿ ಎನಿಸಿಕೊಂಡರು.ಇಂತಹ ಜಗತ್ತಿನ ಮಹಾ ಮಾನವತಾವಾದಿ, ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಆದವರು ಸಾವಿತ್ರಿಬಾಯಿ ಪುಲೆ.
ಸಾವಿತ್ರಿಬಾಯಿ ಪುಲೆ ಅವರ ಜೀವನ
ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಪುಲೆ ಅವರು ಜನಿಸಿದ್ದು ೩ ಜನೆವರಿ ೧೮೩೧ ರಂದು, ಮಹಾರಾಷ್ಟ್ರದ ಸಾತಾರ ಜಿಲ್ಲೆಯ ನೈಂಗಾನ್ ಎಂಬ ಪುಣೆ ಇಂದ ೫೦ ಕಿಮೀ ದೂರದ ಹಳ್ಳಿಯಲ್ಲಿ. ಮಾಲಿ ಎಂಬ ಕೆಳಜಾತಿಗೆ ಸೇರಿದ್ದ ಖಂಡೋಬಾ ನವಸೆ ಪಾಟೀಲ ಮತ್ತು ಲಕ್ಷ್ಮೀಬಾಯಿ ಅವರಿಗೆ ಮಗಳಾಗಿ ಜನಿಸುತ್ತಾರೆ.
ಆಗ ಬಾಲ್ಯವಿವಾಹ ಪ್ರಚಲಿತವಾಗಿದ್ದ ಕಾಲ. ಸಾವಿತ್ರಿಬಾಯಿ ಅವರಿಗೆ ಅವರ ೮ ನೆಯ ವಯಸ್ಸಿನಲ್ಲಿ ವಿವಾಹ ನಿಶ್ಚಯಿಸುತ್ತಾರೆ. ಸಾತಾರ ಹತ್ತಿರದ ಕಟಗುಣದ ಗೋವಿಂದರಾವ್ ಪುಲೆ ಮತ್ತು ಜಿಮಣಾಬಾಯಿ ಅವರ ಮಗ ೧೩ ವರ್ಷದ ಬಾಲಕ ಜ್ಯೋತಿಬಾ ಫುಲೆ ಅವರೊಂದಿಗೆ ವಿವಾಹವಾಗುತ್ತದೆ.
ಬಾಲ್ಯವಿವಾಹ ಆದ ಸಾವಿತ್ರಿಬಾಯಿ ಅವರಿಗೆ ದೊರೆತದ್ದು ಶಿಕ್ಷಣ ಪ್ರೇಮಿಯಾದ ಪತಿ.ಶಿಕ್ಷಣದ ಮಹತ್ವ ಅರಿತಿದ್ದ ಜ್ಯೋತಿಬಾ ಅವರು ಪತ್ನಿಗೆ ಶಿಕ್ಷಣ ನೀಡುತ್ತಾರೆ. ಪತಿಯ ಸಹಕಾರದಿಂದ ಸಾವಿತ್ರಿ ಅವರು ೧೮೪೭ ರಲ್ಲಿ ಶ್ರೀಮತಿ ವಿಂಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಾರೆ.ಆ ಮೂಲಕ ಶಿಕ್ಷಕ ತರಬೇತಿ ಪಡೆದ ಮಹಾರಾಷ್ಟ್ರದ ಮೊಟ್ಟಮೊದಲ ಮಹಿಳೆ ಎನಿಸಿಕೊಳ್ಳುತ್ತಾರೆ.ನಂತರ ಶ್ರೀಭಿಡೆ ಅವರ ಮನೆಯಲ್ಲಿ ಆರಂಭಗೊಂಡ ಕನ್ಯಾ ಶಾಲೆಯ ಪ್ರಥಮ ಶಿಕ್ಷಕಿ ಆಗುತ್ತಾರೆ.
ಸಾವಿತ್ರಿಬಾಯಿ ಪುಲೆ ಅವರ ಸಾಮಾಜಿಕ ಸುಧಾರಣೆಗಳು
ಮಹಿಳೆಯರಿಗೆ ಶಿಕ್ಷಣ ನೀಡುವದು ಸಾವಿತ್ರಿಬಾಯಿ ಪುಲೆ ಅವರ ಜೀವನದ ಮೂಲ ಉದ್ದೇಶ ಆಗಿತ್ತು. ಆದರೆ ಅವರಿಗೆ ಕೇವಲ ಮಹಿಳೆಯರಿಗೆ ಶಿಕ್ಷಣ ನೀಡುವುದಷ್ಟೆ ಅವರ ಮುಖ್ಯ ಗುರಿ ಆಗಿರಲಿಲ್ಲ. ಸಮಾಜದಲ್ಲಿ ಮಹಿಳೆಯರ ಮೇಲೆ ಆಗುತ್ತಿದ್ದ ದೌರ್ಜನ್ಯಗಳ ತಡೆಯುವಿಕೆ,ಅನಿಷ್ಟ ಪದ್ಧತಿಗಳ ನಿರ್ಮೂಲನೆ, ಬಾಲ್ಯವಿವಾಹ ನಿವಾರಣೆ, ಜಾತಿ ಪದ್ದತಿ ನಿರ್ಮೂಲನೆ ಸಮಾಜದ ಕಂದಾಚಾರಗಳ ತೊಲಗಿಸುವಿಕೆ ಮುಂತಾದವುಗಳು ಸಹ ಇವರ ಮುಖ್ಯ ಧ್ಯೇಯವಾಗಿದ್ದವು.ಅದಕ್ಕಾಗಿ ಇವರು ಸಮಾಜದಲ್ಲಿ ಇಂತಹ ಸಾಮಾಜಿಕ ಪರಿವರ್ತನೆಯ ವಿಷಯಗಳನ್ನು, ಅನಿಷ್ಟ ಪದ್ಧತಿಗಳ ದೋಷಗಳನ್ನು ತಿಳಿಸುತ್ತಾ ಸಮಾಜದ ಬದಲಾವಣೆಗೆ ಪ್ರಯತ್ನಿಸಿದರು.ಆ ಮೂಲಕ ಸಮಾಜ ಸುಧಾರಣಾ ಕಾರ್ಯಗಳನ್ನು ಮಾಡಿದರು.
೧)ಬ್ರಿಟಿಷರ ವಿರೋಧದ ನಡುವೆ ಶಾಲೆ ಪ್ರಾರಂಭ:-– ಅದು ಬ್ರಿಟಿಷ್ ರ ಆಳ್ವಿಕೆ ನಡೆಯುತ್ತಿದ್ದ ಕಾಲ.ಬ್ರಿಟಿಷರು ಸ್ವಂತ ಶಾಲೆಗಳ ಪ್ರಾರಂಭಕ್ಕೆ ವಿರೋಧ ಒಡ್ಡುತ್ತಿದ್ದರು.ಆದರೆ ಸಾವಿತ್ರಿಬಾಯಿ ಅವರು ತಳಸಮುದಾಯದ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಬೇಕು ಎಂಬ ಉದ್ದೇಶ ಇಟ್ಟುಕೊಂಡು ಕನ್ಯಾಶಾಲೆ ತೆರೆಯಲು ನಿರ್ಧರಿಸುತ್ತಾರೆ.ಅದರಲ್ಲೂ ಮಹಾರ್ ಮತ್ತು ಮಾಂಗ್ ಎಂಬ ಅತಿಶೂದ್ರ ವರ್ಗದ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವದು ಇವರ ಮೂಲ ಉದ್ದೇಶವಾಗಿತ್ತು.ಈ ಉದ್ದೇಶದಿಂದ ಬ್ರಿಟಿಷರ ವಿರೋಧ ಕಟ್ಟಿಕೊಂಡೆ ಜ್ಯೋತಿಬಾ ಫುಲೆ ಅವರ ಮಾರ್ಗದರ್ಶಕರಾದ ಸಗುನಬಾಯ್ ಅವರೊಂದಿಗೆ ಸೇರಿ ದಂಪತಿಗಳು ೧೮೪೮ ರಲ್ಲಿ ಪುಣೆಯ ನಾರಾಯಣ ಪೇಟೆಯ ಭೀಡೆ ವಾಡಾದಲ್ಲಿನ ತಾತ್ಯಾಸಾಹೆಬ್ ಭೀಡೆ ಅವರ ಮನೆಯಲ್ಲಿ ಶಾಲೆ ಪ್ರಾರಂಭಿಸುತ್ತಾರೆ. ಆ ಶಾಲೆಗೆ ಮೇಲ್ವರ್ಗದವರು ಉಪಾಧ್ಯಾಯರಾಗಿ ಬರಲು ಒಪ್ಪದಾಗ ಸಾವಿತ್ರಿಬಾಯಿ ಅವರು ತಾವೇ ಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿ ಕರ್ತವ್ಯ ನಿರ್ವಹಿಸುವ ಮೂಲಕ ಭಾರತದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎನಿಸಿಕೊಳ್ಳುತ್ತಾರೆ. ತಳಸಮುದಾಯದ ಹೆಣ್ಣುಮಕ್ಕಳಿಗಾಗಿಯೇ ಶಾಲೆ ತೆರೆದಾಗ ಕ್ರೋದಗೊಂಡ ಜ್ಯೋತಿಬಾ ಅವರ ತಂದೆ ದಂಪತಿಗಳನ್ನು ಮನೆಯಿಂದ ಹೊರಗೆ ಹಾಕುತ್ತಾರೆ.ಸಾವಿತ್ರಿಬಾಯಿ ಅವರು ಶಾಲೆಗೆ ಹೊರಟ ಸಂದರ್ಭದಲ್ಲಿ ಸಮಾಜದ ಜನ ಹೆಣ್ಣು ಶಿಕ್ಷಕಿ ಆಗುವುದು ಧರ್ಮದ್ರೋಹ,ಸಮಾಜದ್ರೋಹ ಎಂದು ಬಗೆದು ಅವರ ಮೇಲೆ ಕೆಸರು,ಸೆಗಣಿ ಎರಚುತ್ತಾರೆ. ಆದರೆ ಇದಾವುದಕ್ಕು ಪತಿ ಪತ್ನಿ ಧೃತಿಗೆಡಲಿಲ್ಲ.ಬದಲಾಗಿ ಇಬ್ಬರೂ ಸೇರಿ ೧೮೪೮ ರಿಂದ ೧೮೫೨ ರ ಅವಧಿಯಲ್ಲಿ ಸುಮಾರು ೧೮ ಶಾಲೆಗಳನ್ನು ಪ್ರಾರಂಭಿಸಿದರು. ೧೮೪೯ ರಲ್ಲಿ ಕೇವಲ ೨೫ ಇದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಿತು.ಈ ಎಲ್ಲಾ ಶಾಲೆಗಳ ಆಡಳಿತ ನಿರ್ವಹಣೆ, ಮುಖ್ಯೋಪಾಧ್ಯಾಯಿಣಿ ಕೆಲಸವನ್ನು ಸಾವಿತ್ರಿಬಾಯಿ ಅವರು ನಿರ್ವಹಿಸಿದರು.ಇವರು ಶಾಲೆಗಳನ್ನು ತೆರೆಯುವಾಗ ವಿರೋಧ ಒಡ್ಡಿದ್ದ ಅದೇ ಬ್ರಿಟಿಷ್ ಸರ್ಕಾರ ಇವರ ಸಾಧನೆಗಯನ್ನು ನೋಡಿ ತಾನೇ ಇವರಿಗೆ ” ಇಂಡಿಯನ್ ಪಸ್ಟ್ ಲೇಡಿ ಟೀಚರ್’ ಎಂಬ ಬಿರುದನ್ನು ನೀಡಿತು.
೨)ಕೂಲಿ ಕಾರ್ಮಿಕರಿಗಾಗಿಯೇ ರಾತ್ರಿ ಶಾಲೆ ಪ್ರಾರಂಭ:– ಕೂಲಿ ಕಾರ್ಮಿಕರು,ಕೂಲಿ ಕಾರ್ಮಿಕರ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದರು.ಅವರಿಗೆ ಅಕ್ಷರ ಜ್ಞಾನ ಗಗನ ಕುಸುಮ ಆಗಿತ್ತು.ಇದನ್ನು ನಿವಾರಿಸಿ ಅವರಿಗೆ ಅಕ್ಷರ ಜ್ಞಾನ ನೀಡುವುದಕ್ಕಾಗಿ ೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿ ಶಾಲೆಯನ್ನು ದಂಪತಿಗಳು ಪ್ರಾರಂಭಿಸಿದರು.
೩) ಶಾಲೆ ತೊರೆಯದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ಪ್ರಾರಂಭ:-– ಸಾಮಾಜಿಕ ವ್ಯವಸ್ಥೆ ಕಾರಣಕ್ಕೊ ,ಆರ್ಥಿಕ ವ್ಯವಸ್ಥೆ ಕಾರಣಕ್ಕಾಗಿಯೋ ಬಹುತೇಕ ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವ, ಶಾಲೆ ತಪ್ಪಿಸುವ ಪ್ರಕರಣಗಳು ಅಧಿಕವಾಗಿದ್ದವು.ಅದನ್ನು ತಡೆಯಲು ಸಾವಿತ್ರಿಬಾಯಿ ಅವರು ಶಾಲೆ ತೊರೆಯದ ಮಕ್ಕಳಿಗೆ ವಿದ್ಯಾರ್ಥಿ ವೇತನ ಪದ್ಧತಿಯನ್ನು ಜಾರಿಗೆ ತಂದು,ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವದನ್ನು ತಪ್ಪಿಸಿದರು.ಸರ್ಕಾರ ಇಂದು ಮಾಡುತ್ತಿರುವ ಕೆಲಸವನ್ನು ಅವರು ಅಂದೇ ಮಾಡಿದರು.
೪)ಗ್ರಂಥಾಲಯ ಸ್ಥಾಪನೆ:– ಓದುವ ಮಕ್ಕಳಿಗೆ ಪುಸ್ತಕಗಳ ಅವಶ್ಯಕತೆ ನಿವಾರಿಸಲು ಗ್ರಂಥಾಲಯ ಸ್ಥಾಪಿಸಲು ಯೋಚಿಸಿದರು.ಅದಕ್ಕಾಗಿ ಪುಸ್ತಕಗಳನ್ನು ಸಂಗ್ರಹಿಸಲು ನಿರ್ಧರಿಸಿ ,ತಾವು ಯಾವುದೇ ಸಭೆ,ಸಮಾರಂಭಕ್ಕೆ ಹೋದಾಗ ಅಲ್ಲಿ ಗೌರವ ಸನ್ಮಾನಗಳನ್ನು ಮಾಡಿದಾಗ ಸಂಘಟಕರಿಗೆ ವಸ್ತುಗಳ ಬದಲಾಗಿ ಪುಸ್ತಕಗಳನ್ನು ನೀಡಿರೆಂದು ಬೇಡಿ ಪಡೆದರು. ಅವುಗಳ ಮೂಲಕ ಗ್ರಂಥಾಲಯ ಸ್ಥಾಪಿಸಿದರು.ಇವರ ಈ ಕಾರ್ಯವನ್ನು ನಂತರ ಶಿಷ್ಯರು ಮುಂದುವರೆಸಿದರು.
೫) ವಿಧವೆಯರ ತಲೆ ಬೋಳಿಸುವದಕ್ಕೆ ವಿರೋಧ:— ಚಿಕ್ಕ ಹೆಣ್ಣಮಕ್ಕಳನ್ನು ವಯಸ್ಸಾದವರಿಗೆ ಕೊಟ್ಟು ಮದುವೆ ಮಾಡುವುದು ಮಹಾರಾಷ್ಟ್ರದಲ್ಲಿ ಅಧಿಕವಾಗಿತ್ತು. ಗಂಡ ಸತ್ತು ಹೆಣ್ಣುಮಗಳು ವಿಧವೆಯಾದಾಗ ಅವಳ ತಲೆ ಬೊಳಿಸುವ ಅನಿಷ್ಟ ಸಂಪ್ರದಾಯ ಸಮಾಜದಲ್ಲಿ ಮನೆಮಾಡಿತ್ತು.ಇದನ್ನು ನಿವಾರಿಸಲು ಪ್ರಯತ್ನಿಸಿದ ಸಾವಿತ್ರಿಬಾಯಿ ಅವರು ಅದಕ್ಕಾಗಿ ಕ್ಷೌರಿಕರನ್ನು ಸಂಘಟಿಸಿ ,ಕ್ಷೌರಿಕರಿಗೆ ವಿಧವೆಯರ ತಲೆ ಬೊಳಿಸುವದನ್ನು ನಿರಾಕರಿಸಲು ಪ್ರಚೋದನೆ ನೀಡಿದರು.
೬) ಬಾಲ್ಯಹತ್ಯಾ ಪ್ರತಿಬಂಧಕ ಗೃಹ:– ವಿಧವೆಯರು,ದೌರ್ಜನ್ಯಕ್ಕೆ,ಅತ್ಯಾಚಾರಕ್ಕೆ ಒಳಗಾಗಿ ಗರ್ಭಿಣಿಯಾದ ಹೆಣ್ಣುಮಕ್ಕಳು ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಅಂತಹ ವಿವಾಹ ಬಾಹಿರ್ ಸಂಬಂಧದಿಂದ ತಾಯಿಯಾಗುತ್ತಿರುವ ಹೆಣ್ಣುಮಕ್ಕಳ ಆತ್ಮಹತ್ಯೆ ತಪ್ಪಿಸಲು ತಮ್ಮ ಮನೆಯಲ್ಲಿಯೇ ” ಬಾಲ್ಯಹತ್ಯಾ ಪ್ರತಿಬಂಧಕ ಗೃಹ ” ಎಂಬ ಆಶ್ರಮ ಸ್ಥಾಪಿಸಿದರು.ಅಲ್ಲಿ ಅಂತಹ ಹೆಣ್ಣುಮಕ್ಕಳಿಗೆ ಆಶ್ರಯ ನೀಡಿ ನೆಲೆ ಕಲ್ಪಿಸಿದರು. ೧೮೭೩ ರಲ್ಲಿ ಇಲ್ಲಿ ಸುಮಾರು ೬೬ ಬ್ರಾಹ್ಮಣ ಮಹಿಳೆಯರು ಆಶ್ರಯ ಪಡೆದಿದ್ದರು.
೭)ವಿಕ್ಟೋರಿಯಾ ಅನಾಥಾಶ್ರಮ ಸ್ಥಾಪನೆ:– ವಿವಾಹ ಬಾಹಿರ್ ಸಂಬಂಧದಿಂದ ಹುಟ್ಟಿದ ಮಕ್ಕಳು ಅನಾಥರಾಗಬಾರದೆಂಬ ಉದ್ದೇಶದಿಂದ ಸಾವಿತ್ರಿಬಾಯಿ ಅವರು ಶಿಶುಪಾಲನಾ ಕೇಂದ್ರವನ್ನು ಸ್ಥಾಪನೆ ಮಾಡಿದರು. ಬ್ರಾಹ್ಮಣ ವಿಧವೆಯೊಬ್ಬಳು ಬ್ರಾಹ್ಮಣ ವ್ಯಕ್ತಿಯಿಂದ ಮೋಸಕ್ಕೊಳಗಾಗಿ ಆತ್ಮಹತ್ಯೆಗೆ ಹೊರಟಾಗ ಅವಳನ್ನು ತಡೆದು ಆಶ್ರಯ ನೀಡಿ ರಕ್ಷಿಸುತ್ತಾರೆ.ನಂತರ ಅವಳಿಗೆ ಹುಟ್ಟಿದ ಮಗು ಯಶವಂತ ನನ್ನು ದತ್ತು ತೆಗೆದುಕೊಂಡು ಸಾಕಿ ಬೆಳಸಿ ವೈದ್ಯ ನನ್ನಾಗಿ ಮಾಡುತ್ತಾರೆ. ಅದೇ ರೀತಿ ಒಬ್ಬ ವಿಧವೆಯ ಮಗಳು ಕಾಶೀಬಾಯಿ ಯನ್ನು ದತ್ತು ತೆಗೆದುಕೊಳ್ಳುತ್ತಾರೆ. ನಂತರ ಅದೇ ಕಾಶೀಬಾಯಿ ಇವರು ಸ್ಥಾಪಿಸಿದ ವಿಕ್ಟೋರಿಯಾ ಅನಾಥಾಶ್ರಮದ ಧ್ಯೇಯವನ್ನು ಮುಂದುವರೆಸುತ್ತಾಳೆ.
೮) ಸತ್ಯಶೋಧಕ ಸಮಾಜದ ಅಧ್ಯಕ್ಷೆ:-– ಚಾತುರ್ವರ್ಣ ಧಿಕ್ಕಾರ,ಬಾಲ್ಯವಿವಾಹ ನಿಷೇಧ, ಮೂರ್ತಿಪೂಜೆ ವಿರೋಧ, ಬ್ರಾಹ್ಮಣರ ಪೌರೋಹಿತ್ಯ ವಿರೋಧ, ವೇದವಿಷಯಗಳ ವಿರೋಧ, ವಿಧವೆಯರ, ವಿಧುರರ ಪುನರ್ವಿವಾಹ ಉತ್ತೇಜನ ನೀಡುವಿಕೆ ಮುಂತಾದ ಉದ್ದೇಶಗಳನ್ನು ಇಟ್ಟುಕೊಂಡು ೧೮೭೩ ರಲ್ಲಿ ಸತ್ಯಶೋಧಕ ಸಮಾಜ ಸ್ಥಾಪಿಸುತ್ತಾರೆ.ಇವರೇ ಸತ್ಯಶೋಧಕ ಸಮಾಜದ ಅಧ್ಯಕ್ಷ ರಾಗುತ್ತಾರೆ.ಜ್ಯೋತಿಬಾ ಪುಲೆ ಅವರು ಬ್ರಾಹ್ಮಣ ಮಿತ್ರನ ಮದುವೆಯ ಮೆರವಣಿಗೆಯಲ್ಲಿ ಭಾಗವಹಿಸಿದಕ್ಕೆ ಕೆಳಜಾತಿಯವರು ಭಾಗವಹಿಸಿದರೆಂದು ಅವರನ್ನು ಅಲ್ಲಿಂದ ಹೊರತಳುತ್ತಾರೆ.ಇದರಿಂದ ಬ್ರಾಹ್ಮಣ ಪುರೋಹಿತರಿಲ್ಲದೆ ಮದುವೆ ಮಾಡಲು ನಿರ್ಧರಿಸಿ,ಸತ್ಯಶೋಧಕ ಸಮಾಜದ ಮೂಲಕ ೧೯ ನೆಯ ಶತಮಾನದಲ್ಲಿ ಪುರೋಹಿತರ ಮಧ್ಯಸ್ಥಿಕೆ ಇಲ್ಲದೆ ಮೊಟ್ಟಮೊದಲ ಬಾರಿಗೆ ಕಾನೂನಿನ ನೆರವಿನಿಂದ ವಿವಾಹ ಮಾಡಿಸುತ್ತಾರೆ. ಕಾನೂನಿನ ನೆರವಿನಿಂದ ಮೊಟ್ಟಮೊದಲ ವಿವಾಹ ಮಾಡಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.
೯) ಜಾತಿಪದ್ಧತಿ ವಿರೋಧ:–ಸಮಾಜದಲ್ಲಿನ ಜಾತಿ ಪದ್ದತಿಯನ್ನು ವಿರೋಧಿಸುತ್ತಾರೆ. ಎಲ್ಲರಿಗೂ ಸಮಾನವಾಗಿ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.ದಲಿತರಿಗೆ ಕುಡಿಯುವ ನೀರು ಸಿಗದಾಗ ತಾವು ಉಪಯೋಗಿಸುವ ಬಾವಿಯನ್ನು ಅವರಿಗೆ ಬಿಟ್ಟು ಕೊಡುತ್ತಾರೆ.
೧೦)ಕ್ಷಾಮ ಪ್ರದೇಶದಲ್ಲಿ ಸೇವೆ:– ಮಹಾರಾಷ್ಟ್ರದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ಎರಡು ವರ್ಷಗಳ ಕಾಲ ಸಂಚರಿಸಿ ತೊಂದರೆಯಲ್ಲಿರುವವರ ಸೇವೆ ಮಾಡುತ್ತಾರೆ.
೧೧) ಪ್ಲೇಗ್ ರೋಗಿಗಳ ಸೇವೆ:– ಮಹಾರಾಷ್ಟ್ರದಲ್ಲಿ ಪ್ಲೇಗ್ ರೋಗ ಆವರಿಸಿದಾಗ ಪ್ಲೇಗ್ ರೋಗಿಗಳ ಸೇವೆ ಮಾಡುತ್ತಾರೆ. ಅವರ ಸೇವೆ ಮಾಡುವಾಗಲೆ ರೋಗ ತಾಗಿ ಅದರಿಂದ ಮಾರ್ಚ್ ೧೦ ೧೮೯೭ ರಲ್ಲಿ ಮರಣ ಹೊಂದುತ್ತಾರೆ.
೧೨)ಸಾಹಿತ್ಯ ಸೇವೆ:– ಸಾವಿತ್ರಿಬಾಯಿ ಅವರು ಸಾಹಿತ್ಯ ಕ್ಷೇತ್ರಕ್ಕೂ ವಿಪುಲವಾದ ಸೇವೆಯನ್ನು ಸಲ್ಲಿಸಿದ್ದಾರೆ.
ಸಾಹಿತ್ಯ ಕೃತಿಗಳು-
೧) ಕಾವ್ಯಫೂಲೆ (ಕಾವ್ಯ ಅರಳಿದೆ) ಕವನಸಂಕಲನ (೧೮೫೪ ). ಇದು ೧೯ ನೆಯ ಶತಮಾನದ ಸಮಾಜದ ವ್ಯವಸ್ಥೆಯನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ.
೨) ಭವನಕಾಶಿ ಸುಭೋದ ರತ್ನಾಕರಿ(ಅಪ್ಪಟ ಮುತ್ತುಗಳ ಸಾಗರ) ವು ಸಾವಿತ್ರಿಬಾಯಿ ಅವರ ಆತ್ಮಕಥೆ (೧೮೯೧)
೩) ಜ್ಯೋತಿಬಾ ಅವರ ಭಾಷಣಗಳ ಸಂಗ್ರಹ (೧೮೯೨)
೪) ಕರ್ಚಿ(ಸಾಲ) ಸಾಮಾಜಿಕ ಕಳಕಳಿ ವಸ್ತುವಾಗುಳ್ಳ ಕೃತಿ.
ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದು ಇಂದೇ ದುಸ್ತರವಾಗಿರುವಾಗ ೧೯ ನೆಯ ಶತಮಾನದಲ್ಲಿ ಅದು ಕನಸಿನ ಮಾತಾಗಿತ್ತು .ಅಂತಹ ಸಂದರ್ಭದಲ್ಲಿ ಕೇವಲ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಇಡೀ ಸಮಾಜವನ್ನೆ ಎದುರು ಹಾಕಿಕೊಂಡು ಸಾವಿತ್ರಿಬಾಯಿ ಪುಲೆ ಅವರು ಕನ್ಯಾ ಶಾಲೆಗಳನ್ನು ತೆರೆಯುತ್ತಾರೆ.ಆ ಮೂಲಕ ಶೋಷಿತ ಸಮುದಾಯದ ಶಿಕ್ಷಣ ಕ್ರಾಂತಿಗೆ ಕಾರಣರಾಗುತ್ತಾರೆ.ಸಮಾಜದ ಎಲ್ಲಾ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತಾರೆ.ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಜಾತಿ ಪದ್ದತಿಯನ್ನು ಮೀರಿ ಹೊಸ ಆಚರಣೆಗೆ ನಾಂದಿ ಹಾಡುತ್ತಾರೆ.ಮಹಿಳೆಯರ ಶಿಕ್ಷಣ ಮತ್ತು ಉನ್ನತಿಗಾಗಿ ಸಾವಿತ್ರಿಬಾಯಿ ಅವರು ನೀಡಿದ ಕೊಡುಗೆ ಅಜರಾಮರವಾದದ್ದು.ಅಂತಹ ಆಧುನಿಕ ಶಿಕ್ಷಣದ ತಾಯಿಯ ಜನ್ಮದಿನವನ್ನು ಶಿಕ್ಷಕಿಯರ ದಿನವನ್ನಾಗಿ ಆಚರಿಸುತ್ತಿರುವದು ಮಾತ್ರ ಹೆಮ್ಮೆಯ ಸಂಗತಿ.
–ಡಾ.ರಾಜೇಶ್ವರಿ ವೀ ಶೀಲವಂತ
ಬೀಳಗಿ-