ಶಿವಶರಣೆಯರ ವಚನಗಳಲ್ಲಿ ಪ್ರತಿಭಟನೆ  

ಶಿವಶರಣೆಯರ ವಚನಗಳಲ್ಲಿ ಪ್ರತಿಭಟನೆ  

ಪಾರಂಪರಿಕ ಸಮಾಜದಲ್ಲಿದ್ದ ವರ್ಣಾಶ್ರಮ ವ್ಯವಸ್ಥೆ ಮತ್ತು ಪಿತೃಪ್ರಧಾನ ಕುಟುಂಬ ಪದ್ಧತಿಯಿಂದಾಗಿ ಹೆಣ್ಣುಮಕ್ಕಳು ಆಧ್ಯಾತ್ಮಿಕ, ಸಾಮಾಜಿಕ, ಆರ್ಥಿಕ ,ರಾಜಕೀಯ,ಸಾಂಸ್ಕೃತಿಕ ಅಧಿಕಾರ, ಹಕ್ಕುಗಳನ್ನೆಲ್ಲ ಕಳೆದುಕೊಂಡಿದ್ದರು. ಅವರು ಸಮಾಜದಲ್ಲಿ ದನಿಯಿಲ್ಲದವರಾಗಿ ‘ಅಬಲೆ ‘ಎಂಬ ಕೀಳುರಿಮೆಯನ್ನು ಮೈಗೂಡಿಸಿಕೊಂಡು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದರು.ಇಂತಹ ಸಂದರ್ಭದಲ್ಲಿ ಬಂದ ಬಸವಾದಿ ಶರಣರು ಸಮಾಜದಲ್ಲಿನ ಶೋಷಣೆಗಳೆಲ್ಲವನ್ನು ಕಿತ್ತೊಗೆದು ಧಾರ್ಮಿಕ ,ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಂಗಗಳಲ್ಲಿ ಪರಿವರ್ತನೆಯನ್ನು ತಂದರು. ಅವರು ಸಮಾಜದಲ್ಲಿನ ಜಾತಿ, ಮತ,ವರ್ಣ,ವೃತ್ತಿ ಬೇಧಗಳನ್ನೆಲ್ಲ ಕಿತ್ತೊಗೆದು ಏಕತೆಯನ್ನು ಸ್ಥಾಪಿಸಲು ಪ್ರಯತ್ನಿಸಿದರು. ಶರಣರ ಇಂತಹ ಪ್ರಯತ್ನದ ಫಲವಾಗಿ ಶೋಷಿತವರ್ಗ ಶೋಷಣೆಗಳಿಂದ ಬಿಡುಗಡೆಯಾದಂತೆ, ಮಹಿಳೆಯರು ಸಹ ಅವರ ಸುತ್ತಲೂ ಸುತ್ತುವರೆದಿದ್ದ ಶೋಷಣೆಯ ಬಂಧನಗಳಿಂದ ಮುಕ್ತರಾದರು.ಶರಣರು ಅವರಿಗೂ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಕಲ್ಪಿಸಿದರು.

ಶರಣರ ಪ್ರಯತ್ನದ ಫಲವಾಗಿ ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸಮಾನವಾದ ಸ್ಥಾನಮಾನವನ್ನು ಹೊಂದಿದರು. ಇದರಿಂದಾಗಿ ಕೇವಲ ಗೃಹಕೃತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ತನ್ನ ಕಾರ್ಯಕ್ಷೇತ್ರವನ್ನು ಪಾರಮಾರ್ಥಿಕ ವಲಯದವರೆಗು ವಿಸ್ತರಿಸಿ ಕೊಂಡರು.ಪುರುಷರಿಗೆ ಸಮಾನವಾಗಿ ಅನುಭವ ಮಂಟಪದಲ್ಲಿ ಪ್ರವೇಶ ಪಡೆದರು. ವಚನಗಳ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಜೊತೆಗೆ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಅನುಭಾವ ಗೋಷ್ಠಿಗಳಲ್ಲಿ ಮುಕ್ತವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅನುಭವಿಸಿದರು. ಇಷ್ಟಲಿಂಗವನ್ನು ಪೂಜಿಸುವ, ಲಿಂಗಾಯತ ಧರ್ಮದ ಧರ್ಮಗ್ರಂಥಗಳಾದ ವಚನಗಳನ್ನು ಓದುವ, ಬರೆಯುವ, ಬಯಲಲ್ಲಿ ಬದಲಾಗುವ, ದೀಕ್ಷೆಯನ್ನು ಪಡೆಯುವ, ನೀಡುವ ಅಧಿಕಾರಿಗಳೆಲ್ಲವನ್ನು ಪಡೆದುಕೊಂಡರು. ಮಾಯೆ ಎಂಬ ಆಪಾದನೆಯಿಂದ ಮುಕ್ತರಾಗಿ ಶರಣೆಯರು ಎಂಬ ಅಭಿದಾನವನ್ನು ಪಡೆದರು.

‌ವಚನಗಳ ರಚನೆ, ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ್ದರ ಫಲವಾಗಿ ಶರಣೆಯರು ತಮ್ಮಲ್ಲಿದ್ದ ಮುಗ್ಧತೆ,ಮೌಡ್ಯಗಳನ್ನು ಕಳೆದುಕೊಂಡು ವೈಚಾರಿಕ ಮನೋಭಾವವನ್ನು ಬೆಳೆಸಿಕೊಂಡರು. ಶರಣರ ಸಂಗದಿಂದ,ಅವರ ವೈಚಾರಿಕ ಮನೋಭಾವದಿಂದ ಶರಣೆಯರು ಸಮಾಜದಲ್ಲಿನ ದೋಷಗಳನ್ನು ತೆರದ ಕಣ್ಣುಗಳಿಂದ ನೋಡಲು ಮುಂದಾದರು. ಆಗ ಸಮಾಜದಲ್ಲಿನ ಒರೆಕೊರೆಗಳನ್ನು ಕಣ್ಣುಮುಚ್ಚಿ ಸ್ವೀಕರಿಸದೆ ಅವನ್ನು ತಿದ್ದುವ,ಬದಲಾಯಿಸುವ, ಅವುಗಳ ವಿರುದ್ಧ ಪ್ರತಿಭಟಿಸುವ ಪ್ರಯತ್ನಕ್ಕೆ ಶರಣೆಯರು ಮುಂದಾದರು. ಅವರಲ್ಲಿ ಸೂಪ್ತವಾಗಿದ್ದ ಪ್ರತಿಭಟನೆ ಅವರ ವಚನಗಳಲ್ಲಿ ಸ್ಪೋಟಗೊಂಡಿತು.

‌‌  ಸಮಾಜದಲ್ಲಿ ಮನೆಮಾಡಿದ್ದ ಪ್ರಭುತ್ವಶಾಹಿಯನ್ನು,ಪುರುಷ ಕೇಂದ್ರಿತ ಮೌಲ್ಯಗಳನ್ನು, ಯಜಮಾನಿಕೆ ಸಂಸ್ಕೃತಿಯನ್ನು, ವರ್ಣವ್ಯವಸ್ಥೆಯನ್ನು,ಸನಾತನ ನಂಬಿಕೆಗಳನ್ನು, ಸಾಮಾಜಿಕ ಕಂದಾಚಾರಗಳನ್ನು ಮೋಸ,ವಂಚನೆ, ಕಪಟಗಳ ಮೂಲಕ ಜನರನ್ನು ವಂಚಿಸುತ್ತಿದ್ದವರನ್ನು ಶರಣೆಯರು ವಿರೋಧಿಸಿದರು. ಜೀವವಿರೋಧಿ ಮೌಲ್ಯಗಳ ವಿರುದ್ಧ ತಮ್ಮ ವಚನಗಳ ಮೂಲಕ ಪ್ರತಿಭಟನೆಗೆ ಇಳಿದರು. ಶರಣರು ಸಾಮಾಜಿಕ ಚಳುವಳಿಗೆ ವಚನಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡಂತೆ ಶರಣೆಯರು ಅವುಗಳ ಮೂಲಕವೇ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಪ್ರಯತ್ನದಲ್ಲಿ ತೊಡಗಿದರು.

೧೨ ನೆಯ ಶತಮಾನದಲ್ಲಿ ಸಮಾಜದಲ್ಲಿ ಪ್ರಭುತ್ವಶಾಹಿ ಆಳ್ವಿಕೆ ಮನೆಮಾಡಿದ್ದ ಸಂದರ್ಭ.ಪ್ರಜೆಗಳೆಲ್ಲರೂ ರಾಜರ ಅಣತಿಯಂತೆ ನಡೆಯುತ್ತಿದ್ದರು.ರಾಜರ ಅಣತಿಯನ್ನು ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆಗಳಿರುತ್ತಿದ್ದರಿಂದ ಜನತೆ ಶೋಷಣೆ ಇದ್ದರೂ ಸಹ ರಾಜರ ಆಜ್ಞೆಯನ್ನು ಪಾಲಿಸುತಿದ್ದರು.ಆದರೆ ನಮ್ಮ ಶಿವಶರಣೆರಯರು ಇಂತಹ ಪ್ರಭುತ್ವಶಾಹಿಯನ್ನು ಪ್ರತಿಭಟಿಸುತ್ತಾರೆ.ಸ್ತ್ರೀಪರ ಹೋರಾಟಕ್ಕೆ ನಾಂದಿ ಹಾಡಿದ ಅಕ್ಕಮಹಾದೇವಿ ತನ್ನ ಸ್ವಾತಂತ್ರ್ಯಕ್ಕೆ ಧಕ್ಕೆ ತಂದ ಪ್ರಭುವೂ,ಗಂಡನು ಆದ ಕೌಶಿಕನನ್ನು ಧಿಕ್ಕರಿಸಿ ನಡೆಯತ್ತಾಳೆ.ಅರಮನೆ, ಐಹಿಕ ಸುಖಭೋಗಗಳನ್ನೆಲ್ಲ ತೊರೆದು ಅರಮನೆಯಿಂದ ಹೊರಬರುವ ಮೂಲಕ ಇಡೀ ಪ್ರಭುತ್ವಶಾಹಿಗೆ ಸವಾಲು ಎಸೆಯುತ್ತಾಳೆ.ಕೌಶಿಕನನ್ನು ತೊರೆದು ಹೊರಟ ಮಗಳಿಗೆ ತಂದೆ ತಾಯಿ ಮನೆಗೆ ಹಿಂದಿರುಗಿ ಬಾ ಎಂದಾಗ ಅಕ್ಕ,

ಮನ ಮನ ತಾರ್ಕಣೆಗೊಂಡು ಅನುಭವಿಸಲು

      ನೆನಹೆ ಘನವಹುದಲ್ಲದೆ ಅದು ಹವಣದಲ್ಲಿ ನಿಲುವುದೆ?

      ಎಲೆ ಅವ್ವಾ,ನೀನು ಮರುಳವ್ವೆ

‌‌‌‌‌  ‌‌‌ ಎನ್ನ ಮನ ಚೆನ್ನಮಲ್ಲಿಕಾರ್ಜುನಯ್ಯಗೊಲಿದು

     ಸಲೆ ಮಾರುಹೋದೆನು

     ನಿನ್ನ ತಾಯಿತನವನೊಲ್ಲೆ ಹೋಗಾ

(ವ.ಸಂ-೫,ಪು-೮೪, ವ.ಸಂ-೨೬೮)

ಎನ್ನುವ ಮೂಲಕ ತಾನು ಚೆನ್ನಮಲ್ಲಿಕಾರ್ಜುನನಿಗೆ ಒಲಿದಿದ್ದನ್ನು ಹೇಳುವದರೊಂದಿಗೆ ಪ್ರಭುತ್ವಕ್ಕೆ ತಲೆಬಾಗಿ ತನ್ನನ್ನು ಅರಸನಿಗೆ ಧಾರೆಯೆರೆದ ತಂದೆ ತಾಯಿಗಳ ನಿಲುವನ್ನು ಖಂಡಿಸುತ್ತಾಳೆ.ಯಾವ ಪ್ರಭುತ್ವಶಾಹಿ ತನ್ನಲ್ಲಿರುವ ಹಣ,ಅಧಿಕಾರದಿಂದ ಜನತೆಯ ಮೇಲೆ ದೌರ್ಜನ್ಯ ಎಸಗಿತ್ತೊ ಅಂತಹ ರಾಜಸತ್ತೆಯನ್ನು ಸಾರಾಸಗಟಾಗಿ ತಿರಸ್ಕರಿಸುವ ಮೂಲಕ ಜನರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡುವ ಯಾವ ಸತ್ತೆಯೂ ಸ್ಥಿರವಲ್ಲ ಎಂಬುದನ್ನು ಸಾಬಿತುಗೊಳಿಸುತ್ತಾಳೆ.ಇಂತಹ ರಾಜಪ್ರಭುತ್ವದ ವಿರೋಧಿ ಧೋರಣೆಯನ್ನು ಆಯ್ದಕ್ಕಿ ಲಕ್ಕಮ್ಮನು ಸಹ ವ್ಯಕ್ತಪಡಿಸುತ್ತಾಳೆ.

ಆಸೆಯೆಂಬುದು ಅರಸಿಂಗಲ್ಲದೆ

      ಶಿವಭಕ್ತರಿಗುಂಟೆ ಅಯ್ಯಾ?

 ‌‌‌    ರೋಷವೆಂಬುದು ಯಮದೂತರಿಗಲ್ಲದೆ

‌ ‌‌    ಅಜಾತರಿಗುಂಟೆ ಅಯ್ಯಾ?

  ‌‌‌   ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ

‌‌‌     ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ (ವ.ಸಂ-೫,ಪು-೨೦೦,ವ.ಸಂ-೬೨೮)

ವಸ್ತು ವ್ಯಾಮೋಹ ಎಂಬುದು ಶ್ರೀಮಂತರ,ಬಲಾಢ್ಯರ,ಧನಾಢ್ಯರ,ಸಾಮ್ರಾಜ್ಯಶಾಹಿಗಳ ಸೊತ್ತು.ಅದು ನಮ್ಮಂತಹ ಬಡವರಿಗೆ, ಶರಣರಿಗೆ ಸಲ್ಲದು ಎಂದು ಪತಿಗೆ ಬುದ್ಧಿಮಾತು ಹೇಳುತ್ತಾಳೆ ಲಕ್ಕಮ್ಮ. ಶರಣರಿಗೆ ಅಸಂಗ್ರಹ ತತ್ವವೇ ಸೂಕ್ತ ಎಂದು ಪ್ರತಿಪಾದಿಸುದರೊಂದಿಗೆ ಪ್ರಭುಗಳು ಮತ್ತು ಶ್ರೀಮಂತ ವರ್ಗದವರ ಆಸೆ ಮತ್ತು ಅವರ ಸಂಗ್ರಹಣಾ ಬುದ್ಧಿಯನ್ನು ವಿರೋಧಿಸುವ ಎರಡು ಕಾರ್ಯಗಳನ್ನು ಏಕಕಾಲಕ್ಕೆ ನಿರ್ವಹಿಸುತ್ತಾಳೆ.ಆಹಾರ ಧಾನ್ಯಗಳು ಒಂದು ಕಡೆ ಶೇಖರಣೆ ಆದರೆ ಮತ್ತೊಂದು ಕಡೆ ಆಹಾರ ಧಾನ್ಯಗಳ ಅಭಾವ ತಲೆದೊರುತ್ತದೆ ಎಂಬ ಅರಿವು ಲಕ್ಕಮ್ಮನಿಗೆ ಇತ್ತು. ರಾಜರಾದವರು ಜನರಿಂದ ದವಸ ಧಾನ್ಯಗಳನ್ನು ತೆರಿಗೆ ನೆಪದಲ್ಲಿ ಅಪಾರ ಪ್ರಮಾಣದಲ್ಲಿ ಸಂಗ್ರಹಿಸಿ ಅವು ಗೋದಾಮಿನಲ್ಲಿ ಕೆಡುವ ಹಾಗೆ ಮಾಡಿದರೆ, ಮತ್ತೊಂದು ಕಡೆ ಬಡಜನರು ಆಹಾರವಿಲ್ಲದೆ ಉಪವಾಸದಿಂದ ಸಾಯುತ್ತಿದ್ದರು .ದುಡಿದಿದ್ದನ್ನು ಹಂಚಿ ಉಣ್ಣುವ ದಾಸೋಹ ಪ್ರತಿಪಾದಿಸುವ ಲಕ್ಕಮ್ಮ ತಮ್ಮ ಸಂಗ್ರಹಣಾ ಬುದ್ಧಿಯಿಂದ ಪ್ರಜೆಗಳ ಆಹಾರದ ಅಭಾವಕ್ಕೆ ಕಾರಣವಾದ ರಾಜ ವ್ಯವಸ್ಥೆಯನ್ನು ನಿರ್ಭಿಡೆಯಿಲ್ಲದೆ ಪ್ರತಿಭಟಿಸುತ್ತಾಳೆ.ಸಂಗ್ರಹಣಾ ತತ್ವದ ದುಷ್ಪರಿಣಾಮಗಳನ್ನು ಅರಿತಿದ್ದ ಲಕ್ಕಮ್ಮ ಒಬ್ಬ ಉತ್ಕೃಷ್ಟ ಆರ್ಥಿಕ ತಜ್ಞೆಯಾಗಿ ಗೋಚರಿಸುತ್ತಾಳೆ.

ರಾಜಸತ್ತೆಯನ್ನು ಧಿಕ್ಕರಿಸಿದ ಶರಣೆಯರು ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುತ್ತಿದ್ದ ಪುರುಷ ಪ್ರಾಬಲ್ಯವನ್ನು ಧಿಕ್ಕರಿಸುವಲ್ಲಿಯೂ ಹಿಂದೆ ಬೀಳಲಿಲ್ಲ.ಶರಣರು ಕೊಟ್ಟ ವೈಚಾರಿಕ ಪ್ರಜ್ಣೆಯಿಂದ ಜಾಗೃತಗೊಂಡಿದ್ದ ಶರಣೆಯರು ಸ್ತ್ರೀಪುರುಷರ ನಡುವೆ ಇದ್ದ ಜೈವಿಕ ವ್ಯತ್ಯಾಸವನ್ನು ಅಸಮಾನತೆ ಎಂದು ಬಿಂಬಿಸುವ ಸಾಮಾಜಿಕ ವ್ಯವಸ್ಥೆಯನ್ನು ನಿರಾಕರಿಸಿದರು. ಗೊಗ್ಗವ್ವೆ,

  ‌ಮೊಲೆ ಮುಡಿ ಬಂದಡೆ ಹೆಣ್ಣೆಂಬರು

‌‌‌  ‌‌ ಮೀಸೆಕಾಸೆ ಬಂದಡೆ ಗಂಡೆಂಬರು

‌    ಈ ಉಭಯದ ಜ್ಞಾನ

    ಹೆಣ್ಣೊ ಗಂಡೊ ನಾಸ್ತಿನಾಥಾ?

(ವ‌.ಸಂ-೫,ಪು-೨೨೭,ವ.ಸಂ-೬೯೬)

ಎಂದು, ಸ್ತ್ರೀಪುರುಷರ ನಡುವೆ ಇರುವುದು ಆಂಗೀಕ ವ್ಯತ್ಯಾಸಗಳೇ ಹೊರತು ಅದಕ್ಕಿಂತ ಮಿಗಿಲಾದುದು ಎನು ಇಲ್ಲ. ಪ್ರತಿಯೊಬ್ಬರಲ್ಲಯೂ ಜ್ಞಾನ ಇರುತ್ತದೆ. ಆ ಜ್ಞಾನಕ್ಕೆ ಹೆಣ್ಣು, ಗಂಡು ಎಂಬ ಭೇದ ಇದೆಯೇ? ಎಂದು ಭೇದ ಕಲ್ಪಿಸುವ ಸಮಾಜವನ್ನು ಪ್ರಶ್ನಿಸುತ್ತಾಳೆ. ಅಷ್ಟಕ್ಕೇ ತನ್ನ ವಾದವನ್ನು ನಿಲ್ಲಿಸದ  ಶರಣೆ ಗೊಗ್ಗವೆ ಮುಂದುವರೆದು,

ಗಂಡು ಮೋಹಿಸಿ ಹೆಣ್ಣ ಹಿಡಿದಡೆ

     ಅದು ಒಬ್ಬರ ಒಡವೆ ಎಂದು ಅರಿಯಬೇಕು

     ಹೆಣ್ಣು ಮೋಹಿಸಿ ಗಂಡ ಹಿಡಿದಡೆ 

‌‌     ಉತ್ತರವಾವುದೆಂದರಿಯಬೇಕು

     ಈ ಎರಡರ ಉಭಯವ ಕಳೆದು ಸುಖಿ ತಾನಾಗಬಲ್ಲಡೆ

   ‌ ನಾಸ್ತಿನಾಥನು ಪರಿಪೂರ್ಣನೆಂಬೆ

(ವ.ಸಂ-೫,ಪು- ೨೨೬,ವ.ಸಂ-೬೯೩)

‌ ಎಂದು ಇಡೀ ಸಮಾಜವನ್ನೆ ಬೆಚ್ಚಿಬಿಳಿಸುವ ಪ್ರಶ್ನೆಯನ್ನು ಸಮಾಜದ ಮುಂದೆ ಇಡುತ್ತಾಳೆ.ಸಮಾಜ ಹೆಣ್ಣನ್ನು ಜೀವಪರ ನಿಲುವಿನಿಂದ ಕಾಣದೆ ಅವಳನ್ನು ಒಂದು ವಸ್ತು ಎಂದು ಪರಿಭಾವಿಸಿತ್ತು.ಅರಸನ ಭಂಡಾರದ ನವರತ್ನಗಳಲ್ಲಿ ಒಂದು ಎಂದು ತಿಳಿದಿತ್ತು. ಜೀವವಿರುವ ಚೈತನ್ಯಯುತವಾದ ಮಹಿಳೆಯನ್ನು ಒಂದು ಜಡ ವಸ್ತುವಾಗಿ ಭಾವಿಸಿ ಅವಳನ್ನು ತನ್ನವಳನ್ನಾಗಿ ಮಾಡಿಕೊಂಡಾಗ ಅವಳ ಮೇಲೆ ಅಧಿಕಾರ ಚಲಾಯಿಸುವ ಹಕ್ಕು ಗಂಡಿಗಿದ್ದರೆ ಪುರುಷನನ್ನು ತನ್ನವನ್ನಾಗಿ ಮಾಡಿಕೊಂಡ ಹೆಣ್ಣು ಸಹ ಅವನನ್ನು ತನ್ನ ಒಡವೆ ಎಂದು ಭಾವಿಸಿ ಆತನ ಮೇಲೆ ಅಧಿಕಾರ ಚಲಾಯಿಸುವ ಹಕ್ಕನ್ನು ಆಕೆ ಹೊಂದಬಹುದಲ್ಲವೇ? ಎಂದು ಪುರುಷ ಪ್ರಾಬಲ್ಯ ಹೊಂದಿದ ಸಮಾಜವನ್ನು ಪ್ರಶ್ನಿಸುತ್ತಾಳೆ. ಹೆಣ್ಣು ಗಂಡಿನಲ್ಲಿ ನಿಜವಾಗಿಯೂ ಯಾವ ಭೇದ ಇಲ್ಲ. ಕಲ್ಪಿತ ಭೇದವನ್ನು ತೊರೆದು ಸಮಾನತೆಯಿಂದ ಬದುಕಿದಾಗ ಸುಖ ಸಂಸಾರ ಸಾಧ್ಯ ಎಂಬ ಸಂದೇಶವನ್ನು ಗೊಗ್ಗವ್ವೆ ಸಮಾಜಕ್ಕೆ ನೀಡುತ್ತಾಳೆ.

ಸನಾತನವಾದ ನಂಬಿಕೆಗಳು ಹೆಣ್ಣೆಂಬ ಕಾರಣದಿಂದ ಮಹಿಳೆಯರನ್ನು ಶೋಷಣೆ ಮಾಡುತ್ತಲೇ ಬಂದಿವೆ. ಹೆಣ್ಣನ್ನು ಮಾಯೆ ,ಮಿಥ್ಯೆ ಎಂದು ಬಿಂಬಿಸಿ,ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವ ಯೋಗ್ಯತೆ ಅವಳಿಗಿಲ್ಲ ಎಂದು ನಂಬಿಸಲಾಗಿತ್ತು.ಜೊತೆಗೆ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವವರಿಗೆ ಹೆಣ್ಣು ತೊಡಕು ಎಂಬ ಭಾವನೆಗಳನ್ನು ಸನಾತನವಾದಿಗಳು ಸಮಾಜದಲ್ಲಿ ಬಿತ್ತಿದ್ದರು.ಆದರೆ ಶರಣರಿಂದ ಲೌಕಿಕ, ಆಧ್ಯಾತ್ಮಿಕ ಹಕ್ಕು ಪಡೆದುಕೊಂಡ ಶರಣೆಯರು ತಮ್ಮ ಜ್ಞಾನದ ಅರಿವಿನ ಮೂಲಕ ಸತ್ಯವನ್ನು ತಿಳಿಯುತ್ತಾರೆ.ಸಮಾಜದಲ್ಲಿ ಮನೆಮಾಡಿದ್ದ ಇಂತಹ ಕೀಳು ನಂಬಿಕೆಗಳನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಾರೆ. ಇಂತಹ ನಂಬಿಕೆಯನ್ನು ಕುರಿತು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ,

ಹೊನ್ನ ಬಿಟ್ಟು ಲಿಂಗವನೊಲಿಸಬೇಕೆಂಬರು

‌ ‌   ಹೊನ್ನಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?

   ಹೆಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು

   ಹೆಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?

   ಮಣ್ಣು ಬಿಟ್ಟು ಲಿಂಗವನೊಲಿಸಬೇಕೆಂಬರು

 ‌ ಮಣ್ಣಿಂಗೆಯೂ ಲಿಂಗಕ್ಕೆಯೂ ವಿರುದ್ಧವೆ?

  ಅಂಗವ ಬಿಟ್ಟು ಲಿಂಗವನೊಲಿಸಬೇಕೆಂಬರು

  ಅಂಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?

  ಇಂದ್ರಿಯಗಳ ಬಿಟ್ಟು ಲಿಂಗವನೊಲಿಸಬೇಕೆಂಬರು

  ಇಂದ್ರಿಯಂಗಳಿಗೆಯೂ ಲಿಂಗಕ್ಕೆಯೂ ವಿರುದ್ಧವೆ?

  ಜಗವ ಬಿಟ್ಟು ಲಿಂಗವನೊಲಿಸಬೇಕೆಂಬರು

  ಜಗಕ್ಕೆಯೂ ಲಿಂಗಕ್ಕೆಯೂ ವಿರುದ್ಧವೆ?

  ಇದು ಕಾರಣ ಪರಂಜ್ಯೋತಿ ಪರಮಕರುಣಿ ಪರಮಶಾಂತನೆಂಬ ಲಿಂಗವು

  ಕೋಪದ ಮುನಿಸನರಿದಡೆ ಕಾಣಬಹುದು ಮರೆದಡೆ ಕಾಣಬಾರದು

  ಅರಿವಿಂದ ಕಂಡೊದಗಿದ ಸುಖವು ಮಸಣಯ್ಯಪ್ರಿಯ ಗಜೇಶ್ವರಾ

(ವ.ಸಂ-೫,ಪು-೨೨೩,ವ.ಸಂ- ೬೮೮)

‌  ಎಂಬ ವಚನದ ಮೂಲಕ ಹೆಣ್ಣು ಆಧ್ಯಾತ್ಮಿಕ ಸಾಧನೆಗೆ ತೊಡಕೆಂದು ಬಿಂಬಿಸುವ ಸನಾತನ ನಂಬಿಕೆಗಳನ್ನು ವಿರೋಧಿಸಿ ಹೆಣ್ಣು, ಹೊನ್ನು ,ಮಣ್ಣು, ಇಂದ್ರಿಯಗಳು,ಜಗತ್ತು ಯಾವುದು ನಮ್ಮ ಸಾಧನೆಗೆ ತೊಡಕಲ್ಲ. ನಮ್ಮಲ್ಲಿನ ಕೋಪ,ಮುನಿಸುಗಳನ್ನು ತೊರೆದು ಶಾಂತವಾಗಿದ್ದರೆ ಆತ್ಮಲಿಂಗದ ಸಾಕ್ಷಾತ್ಕಾರ ಸಾಧ್ಯವೆಂದು ಹೇಳುತ್ತಾಳೆ. ಅಕ್ಕನು ಸಹ ” ಚೆನ್ನಮಲ್ಲಿಕಾರ್ಜುನನೊಲಿದ ಶರಣರಿಗೆ ಮಾಯೆಯಿಲ್ಲ ಮರುಳಿಲ್ಲ” ಎನ್ನುತ್ತಾಳೆ.ಇಲ್ಲಿ ಯಾವ ಸನಾತನ ನಂಬಿಕೆಗಳು, ಪುರುಷ ಸಮಾಜ ಹೆಣ್ಣು ಸಾಧನೆಗೆ ತೊಡಕು ಎಂದು ಹೇಳಿತ್ತೊ ಆ ಸಮಾಜಕ್ಕೆ ” ಸ್ತ್ರೀಯರ ಮುಂದೆ ಮಾಯೆ ಪುರುಷನೆಂಬ ಅಭಿಮಾನವಾಗಿ ಕಾಡುವದು” ಎನ್ನುವ ಮೂಲಕ, ಪುರುಷರ ಸಾಧನೆಗೆ ಹೆಣ್ಣು ಅಡ್ಡಿಯಾದರೆ,ಹೆಣ್ಣಿನ ಸಾಧನೆಗೆ ಪುರುಷ ಅಡ್ಡಿಯಲ್ಲವೇ? ಎಂದು ಅಕ್ಕ ಪ್ರಶ್ನಿಸಿ ಇಂತಹ ನಂಬಿಕೆಗಳಿಗೆ ದೊಡ್ಡ ಕೊಡಲಿ ಪೆಟ್ಟನ್ನು ನೀಡುತ್ತಾಳೆ.

‌‌‌ ‌‌ಶರಣ ಸಂಸ್ಕೃತಿ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಗೌರವದ ಸ್ಥಾನ ಕಲ್ಪಿಸುವದರೊಂದಿಗೆ ಅವರಿಗೆ ಗೌರವಾದರಗಳನ್ನು ನೀಡಿತು. ಶರಣೆಯರನ್ನು ಅವ್ವ,ಅಕ್ಕ, ತಾಯಿ ಮುಂತಾದ ಸಂಬಂಧವಾಚಕಗಳಿಂದ ಗೌರವಿಸಿತು. ಹೀಗೆ ಗೌರವವನ್ನು ಪಡೆದ ಶರಣೆಯರು ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ,ಕಾಮುಕ ದೃಷ್ಟಿಯಿಂದ ನೋಡುವ ಜನತೆಯ ನಡುವಳಿಕೆಯನ್ನು ಸಹಿಸಲಿಲ್ಲ. ಅಂತಹ ದುಷ್ಟ ಜನರ ನಡುವಳಿಕೆಯನ್ನು ವಿರೋಧಿಸಿ, ಅವರನ್ನು ತಿದ್ದುವ ಪ್ರಯತ್ನಕ್ಕೆ ಮುಂದಾದರು. ಶರಣೆ ಅಕ್ಕಮ್ಮ ಅಂತಹ ಕಾಮುಕರನ್ನು ಕುರಿತು

ಆಚೆಯ ನೀರ ಈಚೆಯಲ್ಲಿ ತೆಗೆವುದು ಚಿಲುಮೆಯಲ್ಲ

  ಆಚೆಯಲ್ಲಿ ಕೇಳಿದ ಮಾತ ಈಚೆಯಲ್ಲಿ ನುಡಿದು

  ಮತ್ತಾಚೆಯಲ್ಲಿ ಬೆರೆಸುವವನು ಭಕ್ತನಲ್ಲ

  ಆತನ ಇದಿರಿನಲ್ಲಿ ಆತನ ಸತಿಯ ಅವ್ವಾ ಎಂದು

  ಆತ ಸಂದಲ್ಲಿ ಸತಿ ಎಂಬ ಭಂಡರಿಗೇಕೆ ವ್ರತ ನಿಯಮ ನಿತ್ಯ?

  ಇಂತಿವರಲ್ಲಿ ಕಳೆದುಲಿಯಬೇಕು

  ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವನರಿವುದಕ್ಕೆ

(ವ.ಸಂ-೫,ಪು-೧೧೬,ವ.ಸಂ- ೩೬೯)

ಅವರು ಭಂಡರು ಎಂದು ಜರಿಯುತ್ತಾಳೆ.ಅಂತವರ ನಂಬಲಾಗದು ಅವರು ಭಕ್ತರು ಅಲ್ಲ,ಅವರಿಗೆ ಜ್ಞಾನದ ಅರಿವು ಆಗುವುದಿಲ್ಲ ಎಂದು ಕಠೋರವಾಗಿ ಅವರ ನಡುವಳಿಕೆಯನ್ನು ಖಂಡಿಸುತ್ತಾಳೆ.ಶರಣೆ ಸತ್ಯಕ್ಕ ಸಹ “ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ” ಎಂದು ಶರಣ,ಭಕ್ತನಾದವ ಪರಸ್ತ್ರೀಯರನ್ನು ಗೌರವದಿಂದ ಕಾಣಬೇಕೆಂದು ತಿಳಿಸುತ್ತಾಳೆ.ಹೀಗೆ ಶರಣೆಯರು ಹೆಣ್ಣುಮಕ್ಕಳನ್ನು ಆಸೆಯ ಭಾವನೆಯಿಂದ ನೋಡುವವರನ್ನು ವಿರೋಧಿಸುತ್ತಾರೆ.

ಶರಣರು ಜಾತಿ ವ್ಯವಸ್ಥೆಯ ಬೇರನ್ನು ಕಿತ್ತೊಗೆದು ಸಮಾಜದಲ್ಲಿ ಸಮಾನತೆಯನ್ನು ತಂದರು. ಇವರ ಪ್ರಭಾವಕ್ಕೊಳಗಾದ ಶರಣೆಯರು ಸಮಾಜದಲ್ಲಿನ ಜಾತಿ ಪದ್ದತಿಯ ಆಚರಣೆಗಳನ್ನು ಕಟುವಾಗಿ ವಿರೋಧಿಸಿದರು. ಅದರಲ್ಲೂ ಶರಣೆಯರಾಗುವ ಪೂರ್ವದಲ್ಲಿ ಶೂದ್ರ ಕುಲಕ್ಕೆ ಸೇರಿದ್ದು, ಆಗ ಜಾತಿ ಪದ್ದತಿಯ ಕಾರಣದಿಂದ ಸಮಾಜದಿಂದ ಶೋಷಣೆ, ನೋವನ್ನು ಅನುಭವಿಸಿದ್ದ ಶರಣೆಯರು ಇಂತಹ ಅಮಾನುಷ ವ್ಯವಸ್ಥೆಯ ವಿರುದ್ಧ ಕಿಡಿಕಾರಿದರು.ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಇಂತಹ ನೋವನ್ನು ಅನುಭವಿಸಿದ ಕಾರಣದಿಂದ ಇದನ್ನು ಕಟುವಾಗಿ ಟೀಕಿಸುತ್ತಾಳೆ.

ಕುರಿ ಕೋಳಿ ಕಿರಿಮೀನು ತಿಂಬವರಿಗೆಲ್ಲ ಕುಲಜ ಕುಲಜರೆಂದೆಂಬರು

  ಶಿವಗೆ ಪಂಚಾಮೃತವ ಕರೆವ ಪಶುವ ತಿಂಬ ಮಾದಿಗ ಕೀಳುಜಾತಿಯೆಂಬರು

  ಅವರೆಂತು ಕೀಳುಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ?

  ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು

   ಮಾದಿಗರುಂಡುದು ಪುಲ್ಲಿಗೆ  ಬ್ರಾಹ್ಮಣಂಗೆ ಶೋಭಿತವಾಯಿತು

  ಅದೆಂತೆಂದಡೆ ಸಿದ್ದಲಿಕೆಯಾಯಿತು,ಸಗ್ಗಳೆಯಾಯಿತು

 ಸಿದ್ದಲಿಕೆಯ ತುಪ್ಪವನ್ನು, ಸಗ್ಗಳೆಯ ನೀರನು

 ‌ಶುದ್ದವೆಂದು ಕುಡಿದ ಬುದ್ದಿಗೇಡಿ ವಿಪ್ರರಿಗೆ ನಾಯಕನರಕ ತಪ್ಪದಯ್ಯಾ

   ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ

(ವ.ಸಂ-೫,ಪು-೨೦೬,ವ.ಸಂ- ೬೫೨)

ಜನರ ವ್ಯಕ್ತಿತ್ವ,ನಡುವಳಿಕೆಯನ್ನು ಅರಿಯದೆ ಅವರು ಸೇವಿಸುವ ಆಹಾರವನ್ನು ಅವಲಂಬಿಸಿ ಕೀಳಾಗಿ ಕಾಣುವುದನ್ನು ಕಾಳವ್ವೆ ವಿರೋಧಿಸುತ್ತಾಳೆ‌. ತಾನು ಅನುಭವಿಸಿದ ಒಡಲುರಿಯಿಂದ ಜಾತಿಗಳನ್ನೆ ‘ನೀವೇಕೆ ಕಿಳಾದಿರಿ’ ಎಂದು ಪ್ರಶ್ನಿಸುತ್ತಾಳೆ. ಮೇಲ್ವರ್ಗದಿಂದ ತನ್ನ ಜನಾಂಗಕ್ಕೆ ಆದ ಅನ್ಯಾಯ,ಅನುಭವಿಸಿದ ನೋವು, ದೌರ್ಜನ್ಯಗಳು ಅವಳ ವಚನಗಳಲ್ಲಿ ಪ್ರತಿಭಟನೆಯ ರೂಪವನ್ನು ಪಡೆದಿವೆ. ಬೊಂತಾದೇವಿಯೂ ಸಹ ” ಊರೊಳಗೆ ಬ್ರಾಹ್ಮಣ ಬಯಲು ಊರ ಹೊರಗೆ ಹೊಲೆಬಯಲೆಂದುಂಟೆ? ” ಎಂದು ಕೆಳಜಾತಿಯವರು ಊರ ಹೊರಗೆ ಇರಬೇಕೆಂದು ಮಾಡಿದ್ದ ಪದ್ಧತಿಯನ್ನು ನಿರಾಕರಿಸುತ್ತಾಳೆ.ಬಯಲಿಗೆ ಇಲ್ಲದ ಜಾತಿ ಬಯಲಲ್ಲಿ ಬಯಲಾಗಿ  ಹೋಗುವ ಮನುಷ್ಯನಿಗೇಕೆ ಎಂಬ ವಾದ ಬೊಂತಾದೇವಿಯದು.

ಶರಣರಿಂದ ಕಾಯಕದ ಮಹತ್ವವನ್ನು ಅರಿತು ಕಾಯಕ ನಿಷ್ಠೆಯನ್ನು ರೂಢಿಸಿಕೊಂಡವರು ಶರಣೆಯರು. ಕಾಯಕದಿಂದಲೇ ಬದುಕು ನಡೆಸಬೇಕೆಂಬ ಸಂಕಲ್ಪ ಹೊಂದಿದವರು.ಕಾಯಕ ಮಾಡದೆ ಬಂದ ಹಣ,ವಸ್ತು, ಸಂಪತ್ತು ಯಾವುದನ್ನು ಅವರು ಸ್ವೀಕರಿಸುವವರಲ್ಲ‌.ಜೊತೆಗೆ ಅಂತಹ ಅನ್ಯಾಯದ ಮೂಲಕ ಹಣ ಸಂಗ್ರಹಿಸುವವರು,ಮತ್ತೊಬ್ಬರಿಗೆ ಮೋಸ ಮಾಡುವವರನ್ನು ನಮ್ಮ ಶರಣೆಯರು ಸಹಿಸುವುದಿಲ್ಲ. ತಾವು ಆ ಮಾರ್ಗದಲ್ಲಿ ನಡೆಯಲಾರೆವು ಎನ್ನುವ ಮೂಲಕ ಆ ಮಾರ್ಗದಲ್ಲಿ ನಡೆಯುವವರನ್ನು ತಿದ್ದುವ ಪ್ರಯತ್ನ ಮಾಡಿದರು. ಶರಣೆ ಸತ್ಯಕ್ಕ,

ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ

   ನಾನು ಕೈಮುಟ್ಟಿ ಎತ್ತಿದೆನಾದರೆ

 ‌‌‌ ನಿಮ್ಮಾಣೆ ನಿಮ್ಮ ಪ್ರಮಥರಾಣೆ 

 ‌ಅದೇನು ಕಾರಣವೆಂದರೆ ನಿವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ

  ಪರದ್ರವ್ಯಕ್ಕೆ ಆಸೆ ಮಾಡಿದನಾದರೆ

  ನೀನಾಗಲೆ ಎನ್ನ ನರಕದಲ್ಲಿ ಅದ್ದಿ

  ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ

ಹೀಗೆ ಅನ್ಯಾಯದಿಂದ ಬಂದದ್ದನ್ನು ಬಯಸಬಾರದು ,ಯಾರನ್ನು ಮೋಸಗೊಳಿಸ ಸಂಪಾದಿಸಬಾರದೆಂದು ತೀಳಿಸುತ್ತಾಳೆ.ಶರಣೆ ಅಕ್ಕಮ್ಮ

ವೇಷ ಎಲ್ಲಿರದು 

     ಸೂಳೆಯಲ್ಲಿ ಡೊಂಬನಲ್ಲಿ ಭೈರೂಪನಲ್ಲಿರದೆ?

   ವೇಷವ ತೋರಿ ಒಡಲ ಹೊರೆವ 

  ‌ ದಾಸಿ ವೇಶಿಯ ಮಕ್ಕಳಿಗೆ ನಿಜಭಕ್ತಿ ಎಲ್ಲಿಯದು

   ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ?

‌ (ವ.ಸಂ-೫,ಪು- ೧೫೪,ವ.ಸಂ- ೪೭೭)

‌ ದುಡಿಯದೆ ಮೈಗಳತನವನ್ನು ರೂಢಿಸಿಕೊಂಡು ನಾನಾ ವೇಷವನ್ನು ಹಾಕಿ ಶಾಸ್ತ್ರ ಶಕುನ ಎಂದು ಜನರನ್ನು ನಂಬಿಸಿ ಜನರಿಗೆ ಮೋಸ ,ಅನ್ಯಾಯ ಮಾಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ನಯವಂಚಕರನ್ನು ವಿರೋಧಿಸುತ್ತಾಳೆ.ಅವಳ ಕೃತ್ಯಗಳನ್ನು ನಯವಾಗಿ ಪ್ರತಿಭಟಿಸುತ್ತಾಳೆ.

ಶರಣರು ಕಲ್ಪಿಸಿದ ಲಿಂಗ ಸಮಾನತೆಯ ವ್ಯವಸ್ಥೆಯಿಂದ ಶರಣೆಯರು ,ಮಹಿಳೆಯರಿಗೆ ಅಗೋಚರ ಎಂಬ ಕಲ್ಪನೆಯನ್ನು ಬಿತ್ತಿದ್ದ ಅರವಿನ ಜ್ಞಾನವನ್ನು ತಮ್ಮ ಕೈವಶ ಮಾಡಿಕೊಂಡರು. ಅದರಿಂದ ತಮ್ಮ ಸುತ್ತಮುತ್ತಲೂ ನಡೆಯುತ್ತಿದ್ದ ಶೋಷಣೆ, ಅನ್ಯಾಯ, ದೌರ್ಜನ್ಯ, ಅಕ್ರಮ,ಮೋಸ, ವಂಚನೆಗಳನ್ನು ಅರಿತುಕೊಂಡರು. ಅವುಗಳ ವಿರೋಧಿಸುವ ಮನಸ್ಥಿತಿಯನ್ನು ಬೆಳೆಸಿಕೊಂಡರು. ತಮ್ಮ ವಚನಗಳ ಮೂಲಕ ಅವುಗಳನ್ನು ಪ್ರತಿಭಟಿಸಿದರು. ಅದರ ಮೂಲಕ ನಾಡನ್ನು ಕಲ್ಯಾಣ ರಾಜ್ಯ ಮಾಡುವ ಶರಣರ ಸಂಕಲ್ಪಕ್ಕೆ ಶರಣೆಯರು ಕೈ ಜೋಡಿಸಿದರು.

 

 ಡಾ.ರಾಜೇಶ್ವರಿ ವೀ.ಶೀಲವಂತ, ಬೀಳಗಿ

 

One thought on “ಶಿವಶರಣೆಯರ ವಚನಗಳಲ್ಲಿ ಪ್ರತಿಭಟನೆ  

Comments are closed.

Don`t copy text!