ಪೋತ್ನಾಳ: ಕೃಷಿ ವಿಸ್ತರಣಾ ಕೇಂದ್ರ ಸ್ಥಾಪನೆ

ರಾಯಚೂರು ಕೃಷಿ ವಿಶ್ವವಿದ್ಯಾಲಯದಿಂದ ಪರಿಶೀಲನಾ ಸಮಿತಿ ರಚನೆ
ಪೋತ್ನಾಳ: ಕೃಷಿ ವಿಸ್ತರಣಾ ಕೇಂದ್ರ ಸ್ಥಾಪನೆ

e-ಸುದ್ದಿ, ಮಾನ್ವಿ:
ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಾಪನೆಗೆ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದೆ. ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯ ಕೊಟ್ರೇಶಪ್ಪ ಬಿ.ಕೋರಿ ಮನವಿ ಮೇರೆಗೆ ವಿಶ್ವವಿದ್ಯಾಲಯದ ಕುಲಸಚಿವರು ನಾಲ್ವರು ತಜ್ಞರ ಪರಿಶೀಲನಾ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ.ಡಿ.ಎಂ.ಚಂದರಗಿ ನೇತೃತ್ವದ ತಜ್ಞರ ಸಮಿತಿ ಶೀಘ್ರದಲ್ಲಿ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ತಿಳಿದು ಬಂದಿದೆ. ಇದುವರೆಗೆ ಜಿಲ್ಲೆಯ ದೇವದುರ್ಗ, ಲಿಂಗಸುಗೂರು ಮತ್ತು ಸಿಂಧನೂರುಗಳಲ್ಲಿ ಮಾತ್ರ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಮತ್ತು ಸಂಶೋಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಮಾನ್ವಿ ತಾಲ್ಲೂಕಿನ ಪೋತ್ನಾಳದಲ್ಲಿ ಕೃಷಿ ವಿಸ್ತರಣಾ ಕೇಂದ್ರ ಸ್ಥಾಪನೆಯನ್ನು ಸ್ಥಳೀಯ ರೈತರು ಸ್ವಾಗತಿಸಿದ್ದಾರೆ. ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಪೋತ್ನಾಳ ಗ್ರಾಮವು ಮಾನ್ವಿ ಹಾಗೂ ಸಿಂಧನೂರು ತಾಲ್ಲೂಕುಗಳ ಸುಮಾರು 30ಕ್ಕೂ ಅಧಿಕ ಗ್ರಾಮಗಳಿಗೆ ಕೇಂದ್ರ ಸ್ಥಾನದಲ್ಲಿದೆ.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸ್ಥಾಪನೆಯಿಂದ ತಾಲ್ಲೂಕಿನ ರೈತರಿಗೆ ವೈಜಾನಿಕ ಕೃಷಿ ಪದ್ಧತಿ ಕುರಿತು ತಜ್ಞರಿಂದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆಯಲು ಅನುಕೂಲವಾಗಲಿದೆ. ರೈತರು ಅನುಸರಿಸಬೇಕಾದ ಬೆಳೆ ಪದ್ಧತಿ, ಕೃಷಿ ವಿಧಾನಗಳ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿ ಸಿಗಲಿದೆ. ತಜ್ಷರ ಸಮಿತಿಯು ವಿಸ್ತರಣಾ ಕೇಂದ್ರಕ್ಕೆ ಸೂಕ್ತವಾದ ಸ್ಥಳ ಮತ್ತಿತರ ಸೌಕರ್ಯಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರ ವ್ಯವಸ್ಥಾಪನಾ ಮಂಡಳಿಯಲ್ಲಿ ಅನುಮೋದನೆ ಪಡೆಯಲಾಗುವುದು. ನಂತರ ಈ ಕುರಿತು ಮಂಜೂರಾತಿಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಲಿದೆ. ರಾಜ್ಯ ಸರ್ಕಾರವು ವಿಶ್ವವಿದ್ಯಾಲಯದ ಈ ಪ್ರಸ್ತಾವಕ್ಕೆ ಮಂಜೂರಾತಿ ನೀಡಿದರೆ ಪೋತ್ನಾಳದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ತಾಲ್ಲೂಕಿನಲ್ಲಿ ಕೃಷಿ ವಿಸ್ತರಣಾ ಕೇಂದ್ರ ಸ್ಥಾಪನೆಗೆ ಮಂಜೂರಾತಿ ಪಡೆಯುವ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

———————–

ಪೋತ್ನಾಳದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಸ್ಥಾಪನೆಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ.


ಕೊಟ್ರೇಶಪ್ಪ ಬಿ.ಕೋರಿ
ವ್ಯವಸ್ಥಾಪನಾ ಮಂಡಳಿ ಸದಸ್ಯ,
ರಾಯಚೂರು ಕೃಷಿ ವಿಶ್ವವಿದ್ಯಾಲಯ

————————–

ಕೃಷಿ ವಿಸ್ತರಣಾ ಕೇಂದ್ರ ಸ್ಥಾಪನೆಯಿಂದ ತಾಲ್ಲೂಕಿನ ರೈತರಿಗೆ ಕೃಷಿ ವಿಧಾನಗಳ ಕುರಿತು ತಜ್ಞರಿಂದ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ಸಿಗಲಿದೆ.


ಬಿ.ಲಿಂಗಾರೆಡ್ಡಿ ಪಾಟೀಲ್
ಜಿಲ್ಲಾ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

Don`t copy text!