ಅನ್ನ ಕೊಟ್ಟ ರಂಗಭೂಮಿ ಬದುಕಲು ಕಲಿಸಿತು…

ಅನ್ನ ಕೊಟ್ಟ ರಂಗಭೂಮಿ ಬದುಕಲು ಕಲಿಸಿತು…

ಅಂದು ಗೋಡೆಗೆ ಸುಣ್ಣ ಹಚ್ಚುವ ಕಾಯಕ
ಇಂದು ಮುಖಕ್ಕೆ ಬಣ್ಣ ಹಚ್ಚಿಕೊಂಡು ರಂಗಕಲೆ ಸೇವಕ..

ರಂಗಭೂಮಿ ಕಲೆಯು ಇಂದು ಎಲ್ಲೆಡೆ ಸವಿಸ್ತಾರವಾಗಿ ಹರಡಿದೆ. ತನ್ನ ವೈವಿಧ್ಯಮಯ ಕಲಾತ್ಮಕ ಬಾಹುಗಳು ಗಟ್ಟಿ ಬೇರುಗಳಾಗಿ ವಿವಿಧ ಆಯಾಮಗಳಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ‘ಹಳೆ ಬೇರು ಹೊಸ ಚಿಗುರು’ಗಳ ಸಮ್ಮಿಲನದಲ್ಲಿ ಮೂಡಿ ಬರುವ ವಿನೂತನ ಕಲೆ ರಂಗಭೂಮಿಯ ಮೆರಗು ಮತ್ತಷ್ಟು ಹೆಚ್ಚಿಸುತ್ತಿದೆ. ಹಳ್ಳಿಯ ಸೊಗಡು, ಜಾನಪದ ವಿಭಿನ್ನತೆಯ ಜೊತೆಗೆ ಬಡವರ ಬವಣೆ, ತಳ ಸಮುದಾಯದ ಅಸಹಾಯಕತೆ ಬದುಕು, ಶೋಷಿತರ ನೋವು. ಹೀಗೆ ಎಲ್ಲವನ್ನೂ ಗಟ್ಟಿಯಾಗಿ ಸಮಾಜದ ಎದುರಿಗೆ ಬಿಚ್ಚಿಡುವ ತಾಕತ್ತು ರಂಗಭೂಮಿಗೆ ಮಾಡುತ್ತದೆ. ಕಾಲ ಬದಲಾದಂತೆ ರಂಗಭೂಮಿಯೂ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆ ಪಡೆದುಕೊಂಡು ಸಾಗುತ್ತಿದೆ.

ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರೂ ತನ್ನ ಮೂಲ ಸೊಗಡನ್ನು ಕಳೆದುಕೊಳ್ಳದೆ ರಂಗಭೂಮಿಯನ್ನು ಬೆಳೆಸುತ್ತಿರುವ ಅನೇಕ ಹವ್ಯಾಸಿ ರಂಗಭೂಮಿ ಕಲಾವಿದರು ನಮ್ಮ ನಡುವೆ ಇದ್ದಾರೆ. ಇಂತಹ ಕಲೆಯ ಜೊತೆ ನಂಟು ಹೊಂದಿ ಎಲೆಮರೆ ಕಾಯಿಯಂತೆ ರಂಗಸೇವೆ ಸಲ್ಲಿಸುತ್ತಿರುವ ರಾಯಚೂರಿನ ಕಲಾವಿದ ಡಿಂಗ್ರಿ ನರೇಶ್ ಒಬ್ಬರಾಗಿದ್ದಾರೆ.

ಕಲಾವಿದ ಡಿಂಗ್ರಿ ನರೇಶ ಅವರು ಮೂಲತಃ ರಾಯಚೂರು ಜಿಲ್ಲೆಯ ಆಶಾಪೂರ ಎನ್ನುವ ಪುಟ್ಟ ಗ್ರಾಮದವರು. ಡಿಂಗ್ರಿ ನರೇಶ್ ಅವರಿಗೆ ಅವರ ತಂದಯೇ ‘ರೊಲ್ ಮಾಡೆಲ್’ ಆಗಿದ್ದಾರೆ. “ರಂಗಭೂಮಿ ಬದುಕಿನ ಪಯಣಕ್ಕೆ ನನ್ನ ಅಪ್ಪನೇ ನನಗೆ ‘ಬೆಸ್ಟ್ ಡೈರೆಕ್ಟರ್’, ನನ್ನೊಳಗೆ ಆಸೆ, ಕನಸು, ಆಕಾಂಕ್ಷಿಗಳನ್ನು ಬಿತ್ತಿದ ಅಪ್ಪ ನನಗೆ ಸದಾ ಸ್ಪೂರ್ತಿಯಾಗಿದ್ದಾರೆ” ಎನ್ನುತ್ತಾರೆ ನರೇಶ್ ಅವರು.

ನರೇಶ್ ಅವರು ಓದಿದ್ದು ಬರೀ ಹತ್ತನೇ ತರಗತಿ, ಮುಂದೆ ಓದುವ ಆಸಕ್ತಿ ತೋರಲಿಲ್ಲ. ತಂದೆಯ ಜನಪರ ಹೋರಾಟಗಳು, ಟಮಟೆ ಚಳವಳಿ, ಜಾನಪದ ಗಾಯನಗಳಿಗೆ ಜೊತೆಯಾಗಿ ಸಾಮಾಜಿಕ ಬದ್ಧತೆ ಮೈಗೂಡಿಸಿಕೊಂಡು ಬೆಳೆದರು. ಅವರ ತಂದೆ ಡಿಂಗ್ರಿ ನರಸಪ್ಪಾ ಅವರು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು. ಅಪ್ಪನ ಹಾದಿ ಹಿಡಿದು ರಾಜ್ಯಾದ್ಯಂತ 1000ಕ್ಕೂ ಅಧಿಕ ಬೀದಿನಾಟಕಗಳನ್ನು ಪ್ರದರ್ಶಿಸಿದ್ದಾರೆ. ಬಾಲಕಾರ್ಮಿಕ ಪದ್ಧತಿ, ಅಸ್ಪೃಶ್ಯತೆ, ಬಾಲ್ಯ ವಿವಾಹ ಸೇರಿದಂತೆ ಹಲವು ಸಾಮಾಜಿಕ ನಾಟಕಗಳನ್ನು ಪ್ರದರ್ಶಿಸಿ ಜನಮೆಚ್ಚುಗೆ ಗಳಿಸಿದ್ದಾರೆ.

ಡಿಂಗ್ರಿ ನರೇಶವರು ಕೆಲದಿನಗಳ ಕಾಲ ಗೋಡೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡಿದರು. ಆದರೆ ತಮ್ಮ ಪ್ರವೃತ್ತಿ ಮಾತ್ರ ಬಿಡಲಿಲ್ಲ. ‘ರಂಗಭೂಮಿ ಕ್ಷೇತ್ರದಲ್ಲಿ ಹೊಸತನ ಬಯಸಿದ ಮಗನನ್ನು ‘ನೀನಾಸಂ’ ರಂಗ ಶಿಕ್ಷಣ ಕೇಂದ್ರದಲ್ಲಿ ತರಬೇತಿಗೆ ಸೇರಿಸಿದರು.
ಗೋಡೆಗೆ ಬಣ್ಣ ಹಚ್ಚುವ ಕೈಗಳು ಮುಖಕ್ಕೆ ಬಣ್ಣ ಹಚ್ಚಿಕೊಂಡು ಬಣ್ಣದ ಲೋಕಕ್ಕೆ ಪ್ರವೇಶ ಪಡೆದರು.
ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಕೈ ಬೀಸಿ ಕರೆಯುವ ಅತ್ಯುತ್ತಮ ರಂಗಕಲೆ, ಕೇವಲ ಬಣ್ಣದ ಜಗತ್ತಲ್ಲ, ಜಗತ್ತನ್ನೇ ಅರಿಯಲು ಇರುವ ಒಂದು ಪಾಠಶಾಲೆ ಎಂದರೆ ಅತಿಶಯೋಕ್ತಿಯಲ್ಲ.

ರಂಗಭೂಮಿ ಒಂದು ಮನರಂಜನಾ ಮಾಧ್ಯಮವಾಗಿದೆ. ಆದರೆ ಈ ನಾಟಕಗಳು ಹಲವರಿಗೆ ಅನ್ನ, ಆಶ್ರಯ ಒದಗಿಸಿ ಕೊಡುವುದರ ಜೊತೆಗೆ ಬದುಕನ್ನೂ ಕಟ್ಟಿಕೊಟ್ಟಿದೆ ಎಂಬುದರಲ್ಲಿ ಅನುಮಾನವಿಲ್ಲ. ರಂಗಭೂಮಿ ಕಲೆಯಿಂದಲೇ ಬದುಕು ಕಟ್ಟಿಕೊಂಡು ನೆಮ್ಮದಿಯ ಬದುಕು ನಡೆಸುತ್ತಿರುವ ಕಲಾವಿದ ನರೇಶರವರು ಉತ್ತಮ ಉದಾಹರಣೆ.

ರಂಗಶಿಕ್ಷಣ ಕಲಿಕೆ ಮತ್ತು ಸೇವೆ :

ನೀನಾಸಂ ರಂಗಶಿಕ್ಷಣ ಕೆಂದ್ರದಲ್ಲಿ ಪದವಿ ಪಡೆದು ಕೋಲಾರದ ಆದಿಮ ಸಂಸ್ಥೆಯಲ್ಲಿ ಸೇರಿದರು, ‘ಏಕಲವ್ಯ’ ನಾಟಕದಲ್ಲಿ ಏಕಲವ್ಯ ಪಾತ್ರ ನಿರ್ವಹಣೆ,
‘ಜನಮನದಾಟ’ ‘ಊರುಕೇರಿ’ 118 ಪ್ರದರ್ಶನ, ‘ಬದುಕು ಬಯಲು’ 92 ಪ್ರದರ್ಶನ, ‘ಗಾಂಧಿ ಅಂಬೇಡ್ಕರ್’ ನಾಟಕ 80 ಪ್ರದರ್ಶನ, ‘ಜ್ಯೋತಿಬಾ ಫುಲೆ’ ಅವರ ಸತ್ಯ ಶೋದಕ ನಾಟಕ 77 ಪ್ರದರ್ಶನ, ‘ಪ್ರವಾದಿ ಮುಹಮ್ಮದ್ ಪೈಗಂಬರರ’ ಜೀವನಾಧಾರಿತ ನಾಟಕ 33 ಪ್ರದರ್ಶನ, ‘ನೇಗಿಲ ನೆತ್ತರು’ ನಾಟಕ 60 ಪ್ರದರ್ಶನ ….ಹೀಗೆ ಹಲವು ನಾಟಕಗಳಲ್ಲಿ ನಟ, ಸಂಗೀತಗಾರ ಮತ್ತು ತಂಡದ ಜವಾಬ್ದಾರಿ ಹೊತ್ತುಕೊಂಡು ಉತ್ತಮವಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ.

ಸಿನಿಮಾ ರಂಗ ಪ್ರವೇಶ:

ಡಿಂಗ್ರಿ ನರೇಶ್ ಅವರು ನಾಟಕಗಳು ಅಷ್ಟೇ ಮಾಡಲಿಲ್ಲ, ಅಲ್ಲಿಂದ ಸಿನಿಮಾ ಜಗತ್ತಿಗೆ ಕಾಲಿಟ್ಟು ಅಲ್ಲಿಯೂ ಭೇಷ್ ಎನಿಸಿಕೊಂಡು ಸಿನಿಪ್ರಿಯರ ಮನಗೆದ್ದಿದ್ದಾರೆ. ಕೃಷಿ ವಿಶ್ವವಿದ್ಯಾಲಯ,ತೋಟಗಾರಿಕೆ ಮಹಾವಿದ್ಯಾಲಯ, ಪಶು ವೈದ್ಯಕೀಯ ಕಾಲೇಜು, ಫಾರೆಸ್ಟ್ರಿ ಕಾಲೆಜುಗಳಲ್ಲಿ ಇವರ ನಿರ್ದೇಶನದ ಹಲವು ನಾಟಕಗಳನ್ನು ಪ್ರದರ್ಶಿಸಿ ಪ್ರಥಮ ಬಹುಮಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಸಿನಿಮಾ ರಂಗ ಪ್ರವೇಶಿಸಿದ ಇವರಿಗೆ ಕನ್ನಡದ ಮೊಟ್ಟ ಮೊದಲ ಆಸ್ಕರ್ ನಾಮನಿರ್ದೇಶನದ ಸಿನಿಮಾ ಕೇರ್ ಆಫ್ ಫುಟಪಾತ್- 2 ರಲ್ಲಿ ಎರಡನೇ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಮುಂದೆ ಆ ಸಿನಿಮಾ ಮೂರು ಭಾಷೆಗಳಲ್ಲಿ ತೆರೆಕಂಡು ಯಶಸ್ವಿಯಾಗಿತ್ತು. ನಂತರ ‘ಗುರ್ಬಿ’, ‘ಪುಟ್ಟರಾಜು ಲವರ್ ಆಫ್ ಶಶಿಕಲಾ’,
‘ಪೂರ್ಣ ಸತ್ಯ’ , ‘ಬೆಲ್ ಬಾಟಮ್’ ಸಿನಿಮಾಗಳಲ್ಲಿ ಅಭಿನಯಿಸಿ ಜನಮನ್ನಣೆ ಗಳಿಸಿದ್ದಾರೆ. ಈಗ ತಮ್ಮ ನಿರ್ದೇಶನದಲ್ಲಿ ‘ತಪಸ್ವಿ’ ಎನ್ನುವ ಕಿರುಚಿತ್ರ ನಿರ್ಮಿಸುತ್ತಿದ್ದಾರೆ.

‘ಏಕಲವ್ಯ’ ನಾಟಕದಲ್ಲಿ ಏಕಲವ್ಯ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿ “(META) ಮಹೀಂದ್ರ ಎಕ್ಸೆಲೆನ್ಸ್ ಇನ್ ಥಿಯೆಟರ್ ಅವಾರ್ಡ್” ಕೊಡುಮಾಡುವ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಈ ಪ್ರಶಸ್ತಿಯನ್ನು ಪಡೆದಿರುವ ಕರ್ನಾಟಕದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಗ್ರಿಕಲ್ಚರ್ ಇಂಟರ್ ಯುನಿವರ್ಸಿಟಿ ಕಾಂಪಿಟೇಶನ್ ನಲ್ಲಿ “ನೇಗಿಲ ನೆತ್ತರು” ನಾಟಕಕ್ಕೆ ಪ್ರಥಮ ಪ್ರಶಸ್ತಿ ಪಡೆದು ಕರ್ನಾಟಕ ಕೀರ್ತಿ ಹೆಚ್ವಿಸಿದ್ದಾರೆ.

ನಾಟಕ ನಿರ್ದೇಶನ ಮತ್ತು ಪ್ರಶಸ್ತಿ:

ಇವರು ‘ಬೆಂದು ಬೂದಿಯಾದವರು’, ‘ಅಂಬೇಡ್ಕರ್ ಕಣ್ಣೀರಿಟ್ಟ ಕ್ಷಣಗಳು’, ‘ಬುದ್ಧನ ಬೆಳಕು’,
‘ಸಂಗೊಳ್ಳಿ ರಾಯಣ್ಣ’, ‘ಮಳೆ ಬೇಕ್ರಿ ಮಳೆ’,
‘ಚಿಕ್ಕದೇವಭೂಪ’, “ನೇಗಿಲ ನೆತ್ತರು”, ‘ನೇಗಿಲೊತ್ತ ಆಘೋರಿ’, ‘ಧರೆ ಹತ್ತಿ ಉರಿದೊಡೆ’, ‘ಗೋರುಕನ 1974’ ಸೇರಿದಂತೆ ಮುಂತಾದ ನಾಟಕಗಳನ್ನ ನಿರ್ದೇಶನ ಮಾಡಿದ್ದಾರೆ.

ಊರೂರು ತಿರುಗಿ ಜನರಿಗೆ ನಾಟಕದ ರಸದೌತಣ ಉಣಬಡಿಸಿ ಸ್ವಸ್ಥ ಸಮಾಜ ಕಟ್ಟುವ ಕೆಲಸ ಮಾಡುತ್ತಿರುವ ನಾಟಕ ಕಲಾವಿದರಿಗೆ ಇಂದು ಸಮಾಜದಲ್ಲಿ ಗೌರವ ದಕ್ಕುತ್ತಿಲ್ಲ. ನಾಟಕ ಎಂದರೆ ಅದೊಂದು ಅರೆಬೆತ್ತಲೆ ಕಲೆ, ನಗ್ನ ನೃತ್ಯ, ಹೊಟ್ಟೆಪಾಡು ಕಲೆ ಎನ್ನುವ ಹೀನ ಭಾವನೆ ಹಲವಾರು ಜನರಲ್ಲಿ ಮೂಡುತ್ತದೆ. ಸಿನಿಮಾ ಕಲಾವಿದರಿಗೆ ದೊರಕುವ ಮರ್ಯಾದೆ ನಾಟಕ ಕಲಾವಿದರಿಗೂ ಸಿಗುವಂತಾಗಬೇಕು.ಬದುಕಿನ ಭಾಗವಾದ ರಂಗಕಲೆಯನ್ನು ಜನರು ಹೆಚ್ಚೆಚ್ಚು ಗೌರವಿಸುವ ಮನೋಭಾವ ಎಲ್ಲರಲ್ಲೂ ಬರಬೇಕು. ಈ ದಿಸೆಯಲ್ಲಿ ನನ್ನ ಪ್ರಯತ್ನ ಎಂದು ಹೇಳುತ್ತಾರೆ ಡಿಂಗ್ರಿ ನರೇಶ್.

ನಾಟಕ ಕಲೆ ನಶಿಸಿಹೋಗದಂತೆ ಇಂದಿನ ಯುವ ಪೀಳಿಗೆ ನಾಟಕರಂಗದತ್ತ ಹೆಚ್ಚು ಆಸಕ್ತಿ ತೋರುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ. ಸಾಮಾಜಿಕ ಹಾಗೂ ಪೌರಾಣಿಕಕ್ಕೆ ಮಾತ್ರ ಸೀಮಿತವಾಗಿದ್ದ ರಂಗಭೂಮಿ ಇಂದು ಹೊಸ ಪ್ರಯೋಗಗಳ, ಹೊಸ ತಂತ್ರಜ್ಞಾನದ ಅಳವಡಿಕೆಯಲ್ಲೂ ಮೇಲುಗೈ ಸಾಧಿಸುತ್ತಿರುವುದು ಹವ್ಯಾಸಿ ರಂಗಭೂಮಿಗಳ ಬೇಡಿಕೆಯನ್ನೂ ಹೆಚ್ಚಿಸಿದೆ.
ಹೀಗೆ ತಮ್ಮ ಹೆಗ್ಗುರುತಾಗಿಸಿಕೊಂಡ ತಲೆಮಾರುಗಳು, ಪೀಳಿಗೆಗಳು ಸಾಗುತ್ತಲೇ ಬರುತ್ತಿರುವುದು ರಂಗಕಲೆ ಜೀವಂತವಿರುವುದಕ್ಕೆ ಸಾಕ್ಷಿ.

ಡಿಂಗ್ರಿ ಅವರು ನಾಟಕ , ಸಿನಿಮಾ ಬದುಕಿನ ಜೊತೆಗೆ ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಶೋಷಿತರ ನೋವಿಗೆ ದನಿಯಾಗಿ ಜನರ ಸಂಕಷ್ಟಗಳನ್ನು ಸರಕಾರಗಳಿಗೆ ತಲುಪಿಸುವ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರದು ಬಹುಮುಖ ಪ್ರತಿಭೆ, ‘ಸಾಧನೆಯ ಶಿಖರ ಮುಟ್ಟಲು ನೂರಾರು ದಾರಿಗಳು’ ಎನ್ನುವುದನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡು ‘ಸಮಾನತೆ ಸಮಾಜ’ದಲ್ಲಿ ಎಲ್ಲರೂ ಸೌಹಾರ್ದತೆಯ ಬದುಕು ನಡೆಸುವಂತೆ ಈ ಸಮಾಜ ಬದಲಾವಣೆ ಮಾಡುವ ಇವರ ಧಾವಂತ ನಿಜಕ್ಕೂ ಶ್ಲಾಘನೀಯ.

ಬಡತನದಲ್ಲಿ ಹುಟ್ಟಿದರೂ ವಿಶಾಲ ಹೃದಯ ಶ್ರೀಮಂತಿಕೆ ಇವರ ಆತ್ಮವಿಶ್ವಾಸ ಇಮ್ಮಡಿಗೊಳಿಸಿತ್ತು, ನಾಟಕ ಮಾಡುವ ಸಂದರ್ಭದಲ್ಲಿ ಅನೇಕ ಕಡೆಗಳಲ್ಲಿ ಪರ – ವಿರೋಧಗಳೂ ವ್ಯಕ್ತವಾಗಿ, ಕೆಲವೊಮ್ಮೆ ಪೆಟ್ಟು ತಿಂದಿದ್ದು ಉಂಟು, ಆದರೂ ತಮ್ಮ ಶ್ರದ್ಧೆ, ನಿರ್ಧಾರ ಬಿಡಲಿಲ್ಲ, ಎಲ್ಲವನ್ನೂ ಮೀರಿ ಸಿನಿಲೋಕವನ್ನು ಪ್ರವೇಶಿಸಿ ಇಂದು ಹಲವಾರು ಅಭಿಮಾನಿ ಬಳಗವನ್ನು ಹೊಂದಿದ್ದೇನೆ. ಸಿನಿಮಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಗುರಿ ನನ್ನದು ಎನ್ನುವ ಡಿಂಗ್ರಿ ನರೇಶ್ ಅವರು ಭಾವುಕರಾಗಿ ತಮ ಕಲಾ ಬದುಕಿನ ಯಶೋಗಾಥೆ ಹೇಳುತ್ತಾರೆ.

ಬಾಲಾಜಿ ಕುಂಬಾರ, ಚಟ್ನಾಳ
ಮೋ : 9739756216

Don`t copy text!