ಬಿಕ್ಕುತಿಹಳು ರಾಧೆ

ಬಿಕ್ಕುತಿಹಳು ರಾಧೆ

ರಾಧೆಯಿಲ್ಲದ
ಆ ಒಂದು ತಿಂಗಳನು
ಯುಗವೆನ್ನುತಿಹನು ದೊರೆ
ಬರೀ ಕನವರಿಕೆ ಚಡಪಡಿಕೆ
ಬೇಗ ದಿನಗಳುರುಳಿಸಲು
ನಿತ್ಯ ಇಡುತಿಹನು
ತಾ ನಂಬದ ದೇವರಲ್ಲಿ ಮೊರೆ ||

ದೊರೆ ಕಣ್ಮುಚ್ಚಿದೊಡೆನೆ
ಅವಳ ಕಂಗಳದೇ ಹೊಳಪು
ಮೃದು ಅಧರಗಳ
ನಗೆ ಮಿಂಚು
ಹರವಿದ ಹೆರಳ ಘಮ
ಬಂಗಾರದ ಬೆರಳುಗಳ
ಮಧುರ ಮುತ್ತಿನ ಕನಸು ||

ದುರ್ದಿನವು ದೂರಾಗೆ
ದೊರೆಯದೇ ಸಾಮ್ರಾಜ್ಯ
ಅವಳ ಕೊರಳೂ ಅವನದೇ
ಹೆರಳ ಹರವೂ ಅವನದೇ
ನಲ್ಲೆಯನ್ನೇ ಮೆಲ್ಲುವ
ನೋಯದಂತೆ ಕಚ್ಚುವ
ತಣಿಯುವರೆಗೆ ದಣಿಯುವ
ಬೆವರು ಬಸಿಯೆ ಸರಿಯುವ
ನಿಲುಕೆ ಇಲ್ಲ ದೊರೆಯ ಭ್ರಮೆಗೆ
ಮಿತಿಯು ಇಲ್ಲ ಕನಸಿಗೆ ||

ಕನವರಿಸುತಲೆ ಕಳೆದನೊಂದು
ತಿಂಗಳನ್ನು ನಮ್ಮ ನಲ್ಮೆಯಾ ದೊರೆ
ಕನಸು ಕಂಡ ಹರುಷದಿಂದ ತಾನು ರಾಧೆಯಾ ತೋಳ್ ಸೆರೆ
ಇವನಿಗಿದ್ದ ದೇಹ ದಾಹ
ಎನಿತೂ ರಾಧೆಗಿಲ್ಲ
ಯಾವ ಚಿಂತೆ ಬಾಧಿಸಿದೆಯೋ
ಆ ದೇವರೆ ಬಲ್ಲ
ಮಾತಿಲ್ಲದೆ ಮೋಹದರಸಿ
ಮೌನಿಯಾದಳಲ್ಲ
ಗಲ್ಲ ಹಿಡಿದು ಕತ್ತನೆತ್ತಿ
ಅವಳ ನೋಡಿದ ನಲ್ಲ
ಕಣ್ಣ ಬಿಂದು ಹನಿಯುತಿಹುದು
ಬೇರೆ ಮಾತೆ ಇಲ್ಲ
ಕಣ್ಣ ಒರೆಸಿ ಕೆನ್ನೆ ಸವರಿ
ಸಾಕು ಮೌನ ನಗುವೆ ಚಿನ್ನ
ನಾನು ಬಂದೆನಲ್ಲ ?
ಎಂದ ದೊರೆಯ ಎದೆಯ ಸೇರಿದ
ರಾಧೆಯ ಕಂಗಳಿಗಂದು ನಿದ್ದೆ ಅಂತೂ ಇಲ್ಲ

✍️ ಆದಪ್ಪ ಹೆಂಬಾ ಮಸ್ಕಿ

Don`t copy text!