ಪುಸ್ತಕ ಪರಿಚಯ
ಅವ್ವ ಹಾಡಿದ ಕಾಳಿಂಗರಾಯನ ಹಾಡು
ಅವ್ವ ಹಾಡಿದ ಕಾಳಿಂಗರಾಯನ ಹಾಡು ಎಂಬ ಕೃತಿಯನ್ನು ಡಾ.ಶಶಿಕಾಂತ ಕಾಡ್ಲೂರ ಸಂಪಾದಿಸಿದ್ದಾರೆ. ಇದು ಜನಪದ ಕಥನ ಕಾವ್ಯ. ಮೂಲ ಆದವಾನಿಯ ಕೋರಿಶೆಟ್ಟರ ಮನೆತನದಿಂದ ಬಂದಿದೆ. ಇದರ ಬೇರೆ ಹಾಡುಗಳನ್ನು ಪ್ರೊ. ಎಂ.ಎಸ್ ಸುಂಕಾಪೂರ ಡಾ.ಬಿಬಿ.ಹೆಂಡಿ ಅವರು ಸಂಪಾದಿಸಿದ್ದಾರೆ. ಇವರ ಪಾಠಗಳಲ್ಲಿ ವಿವರ ಕಡಿಮೆ ಇದೆ.
ಕಾಳಿಂಗರಾಯನ ಹಾಡು, ಕಲ್ಲೂರಿನ ಶಾಂತಮ್ಮ ಶೆಟ್ಟಿ ಹಾಗೂ ಅವರ ತಂಗಿ ಸೂಗಮ್ಮ ಕಾಡ್ಲೂರ ಸೇರಿ ಹಾಡುತ್ತಿದ್ದರಂತೆ. ಅವರಿಂದ ಕಲಿತು ಡಾ.ಶಶಿಕಾಂತ ಕಾಡ್ಲೂರ ಅವರ ತಾಯಿ ಲಿಂ.ವೀರಮ್ಮ ಕಾಡ್ಲೂರು ಹಾಡುತ್ತಿದ್ದರಂತೆ.
ಇಂತಹ ಸುದೀರ್ಘ ಕಥನ ಕಾವ್ಯವನ್ನು ಶ್ರೀಮತಿ ವೀರಮ್ಮ ತಾಯಿಯವರು ನೆನಪಿನಿಂದ ಹಾಡುತ್ತಿದ್ದರೆಂಬುದು ಆಶ್ಚರ್ಯದ ಸಂಗತಿ ಆಗಿದೆ.
ಬರವಣಿಗೆಯಲ್ಲಿ 70 ಪುಟಗಳಾಗುವ ಈ ಕಥನವನ್ನು ಬಾಯಿಪಾಠ ಮಾಡಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆಂದರೆ ಸಣ್ಣ ಮಾತಲ್ಲ.
ಇವನ ಕಾವ್ಯಗಳಲ್ಲಿ ಸ್ಥಳೀಯವಾಗಿ ಬಳಸುವ ಭಾಷೆ, ಶಬ್ದಗಳು ಅರ್ಥವಾಗದೆ ಓದಲು ಕಷ್ಟವಾಗುತ್ತದೆ.
ಆದರೆ ಡಾ.ಶಶಿಕಾಂತ ಅವರು ಕಥಾ ಸಾರಾಂಶವನ್ನು ಬರೆದು ಓದಲು ತುಂಬಾ ಅನಕೂಲ ಮಾಡಿಕೊಟ್ಟಿದ್ದಾರೆ. ಅಲ್ಲದೆ ಕಠಿಣ ಪದಗಳ ಅರ್ಥ ಒದಗಿಸಿದ್ದಾರೆ.
ಕಾಳಿಂಗರಾಯನ ಕಥೆ ಅನೇಕ ವಿಚಿತ್ರಗಳಿಂದ ಕೂಡಿದೆ. ಹುಲಿ ಬೇಟೆಯಾಡುವ ಕಾಳಿಂಗರಾಯ ಚಿತ್ರದ ಹುಲಿಗಂಜುವುದು, ಮದರಂಗಿ ಹೆರಿಗೆಗೆ ಬರಲು ಹೇಳಿ ಕಳುಹಿಸಿದ ಸೂಲಗಿತ್ತಿ ನಾನು ಬಜಾರದಲ್ಲಿ ಬರುವುದಿಲ್ಲವೆಂದು ಹೇಳಿ ಪಲ್ಲಕ್ಕಿಯಲ್ಲಿ ಬರುವುದು ಅಲ್ಲದೆ ಸಿಂಗಾರ ಮಾಡಿಕೊಂಡು ಬರಲು ತಡಮಾಡುವುದು, ಸತ್ತಮಗನ ಜೊತೆ ಲಗ್ನ ಮಾಡಿದ ನಂತರ ಅವರ ಅಪ್ಪ ಕತ್ತಲರಾಯ(ಕೊತ್ತಲ ರಾಯ) ಮಗನಿಗೆ ಅಂತ್ಯ ಸಂಸ್ಕಾರ ಮಾಡಬೇಕೆಂದು ಬಯಸುವುದು. ಅದೇ ರೀತಿ ಸತ್ತ ಹೆಣದೊಂದಿಗೆ ಒಂದು ಕನ್ಯೆ ತಂದು ಲಗ್ನ ಮಾಡುವುದು , ಇಬ್ಬರೂ ಚಿತೆ ಏರುವುದು ವಿಚಿತ್ರವೆನಿಸುತ್ತಿದೆ. ಆಗ ಮಳೆ ಬಂದು ಊರಿ ಆರಿ ನಿನಗೇನುಬೇಕೆಂದು ಶಿವ ಕೇಳುವುದು “ನನ್ನ ಗಂಡನನ್ನ ಬದುಕಿಸಿಕೊಡು ಎಂದು ಕೇಳುವುದು, ಶಿವ ತಥಾಸ್ತು ಅನ್ನುವುದು, ಮತ್ತೆ ಗಂಡ ಹೆಂಡತಿ ರಾಜ್ಯ ಆಳುವುದು ಈ ಕಥನದಲ್ಲಿ ಮುಗಿಯುತ್ತದೆ.
ಕತ್ತಲೆರಾಯ ಹಾಗೂ ಮದರಂಗಿ ಮುದುಕ ಗಂಡ ಹೆಂಡತಿಯರು ಶಿವನ ಕರುಣೆಯಿಂದ ಮದರಂಗಿ ಮುದಿ ವಯಸ್ಸಿನಲ್ಲಿ ಮಗನನ್ನು ಹಡೆಯುತ್ತಾಳೆ. ಆ ಕಾಲದ ಪದ್ದತಿಯಂತೆ ಕತ್ತಲೆರಾಯ ಜ್ಯೋತಿಷಿಯನ್ನು ಕರೆಯಿಸಿ ಮಗನ ಜಾತಕ ಬರೆಸುತ್ತಾನೆ. ನಿಮ್ಮ ಮಗನ ಚಿತ್ರದ ಹುಲಿಗಂಜಿ ಸಾಯುತ್ತಾನೆ ಎಂದು ಹೇಳುತ್ತಾನೆ. ಇದನ್ನು ಕೇಳಿ ಜೋಯಿಸನಿಗೆ ಚಿತ್ರಹಿಂಸೆ ನೀಡಲಾಗುತ್ತದೆ. ಜಾತಕದಂತೆ ಹೇಳಿದ್ದೆನೆಂದು ಜೋಯಿಸರು ಹೇಳಿ ತಪ್ಪಿಸಿಕೊಂಡು ಮನೆಗೆ ಬರುತ್ತಾನೆ.
ಮನೆಗೆ ಬಂದ ನಂತರ ಚಿನ್ನಿ ದಾಂಡು ಆಡುತ್ತಿದ್ದ ಕಾಳಿಂಗನಿಗೆ ವಿಧಿಮಾಯೆ (ಇದಿಮಾಯೆ) ಹುಲಿ ಬೇಟೆ ಆಡಲು ಪ್ರಚೋದಿಸುತ್ತಾಳೆ.
ಕಾಳಿಂಗರಾಯ ಸೈನ್ಯದೊಂದಿಗೆ ಹೋಗಿ ಹುಲಿ ಜೊತೆಗೆ ಅನೇಕ ಪ್ರಾಣಿಗಳನ್ನು ಬೇಟೆಯಾಡುತ್ತಾನೆ. ಅವೆಲ್ಲವುಗಳನ್ನು ಬಂಡಿಯಲ್ಲಿ ಹಾಕಿ ಊರಿಗೆ ಕಳುಹಿಸುತ್ತಾನೆ. ಇದನ್ನು ಕಂಡ ತಂದೆ ತಾಯಿಗಳು ಹರ್ಷಿಸುತ್ತಾರೆ.
ಊಟಕ್ಕೆ ಕುಳಿತಾಗ ಇದಿಮಾಯಿ ಕಳುಹಿಸಿದ ನಿಂಬೆಹಣ್ಣಿನ ಗಾತ್ರದ ಹುಲಿ ನೋಡಿ ಖಡ್ಗದ ಒರೆ ತೆಗೆಯುತ್ತಾನೆ. ಆ ಹುಲಿಗೆ ಜೀವ ಬಂದು ಗರ್ಜಿಸಿದಾಗ ಕಾಳಿಂಗರಾಯ ಪ್ರಾಣ ಬೀಡುತ್ತಾನೆ.
ಎಷ್ಟು ಹೇಳಿ ಕಳುಹಿಸಿದರೂ ನೀನು ಮಗನನ್ನು ರಕ್ಷಿಸಲಿಲ್ಲ ಎಂದು ಕಾಳಿಂಗನ ತಂದೆತಾಯಿಗಳು ಪ್ರಧಾನಿ ಮೇಲೆ ಸಿಟ್ಟಿಗೇಳುತ್ತಾರೆ. ಅನಿವಾರ್ಯವಾಗಿ ಮಗನ ಹೆಣದೊಂದಿಗೆ ಮನಗೆ ಬರುತ್ತಾರೆ. ಮಗ ಮದುವೆ ಇಲ್ಲದೆ ಸತ್ತನೆಂದು ಕತ್ತಲೆಯ ರಾಯ ಪ್ರಧಾನಿಗೆ ಒಂದು ಹೆಣ್ಣು ತರಲು ಹೇಳುತ್ತಾನೆ. ಲಗ್ನವಾದ ನಂತರ ಆ ಹೆಣ್ಣು ಮತ್ತೆ ಅವರ ಮನೆಗೆ ಹೋಗಲಿ ಎಂದು ಹೇಳುತ್ತಾರೆ. ಹೆಣದೊಂದಿಗೆ ಲಗ್ನ ಮಾಡಲು ಯಾರು ತಯಾರಾಗುತ್ತಾರೆ? ಆದರೆ ಮದಿರೇಶನೆಂಬ ಕುಡುಕ ಮಗಳಿಗೆ ನೀಡುವ ಹಣದಿಂದ ನನ್ನ ಸಾಲ ತೀರುತ್ತದೆ ಎಂದು ಹೆಂಡತಿ ಬಯಲಮ್ಮನಿಗೆ ಹೇಳುತ್ತಾನೆ. ಯಾವ ಹೆತ್ತಕರಳು ತನ್ನ ಮಗಳನ್ನು ಹೆಣದೊಂದಿಗೆ ಲಗ್ನ ಮಾಡಲು ಬಿಡುತ್ತಾಳೆ. ಮದೀರೇಶ ಹೆಂಡತಿಯನ್ನು ಹೊಡೆಯುತ್ತಾನೆ. ತಾಯಿಗೆ ತನ್ನ ತಂದೆ ಬಡಿಯುವುದನ್ನು ನೋಡಿ ಚೆನ್ನಮ್ಮ ಲಗ್ನವಾಗಲು ಒಪ್ಪುತ್ತಾಳೆ. ಆಕೆಯನ್ನು ಮದುವಣಗಿತ್ತಿಯನ್ನಾಗಿ ಶೃಂಗರಿಸುತ್ತಾರೆ.
ಚೆನ್ನಮ್ಮ ತುಪ್ಪ ಅನ್ನ ಉಣಿಸಲು ತರುತ್ತಾಳೆ. ಊಟ ಮಾಡೆನ್ನುತ್ತಾಳೆ. ಹೆಣ ಹೇಗೆ ಉಂಡಿತು? ನಾನು ನಿನ್ನ ಜೊತೆಗೆ ಚಿತೆಗೆ ಬರುತ್ತೇನೆ ಎನ್ನುತ್ತಾಳೆ.
ಬಡಿಗೇರಣ್ಣ ಇಮಾನ ಮಾಡುತ್ತಾನೆ. ಶವದೊಂದಿಗೆ ಚೆನ್ನಮ್ಮ ಕುಳಿತುಕೊಳ್ಳುತ್ತಾಳೆ. ಶವಕ್ಕೆ ಬೆಂಕಿ ಹಚ್ಚಿದಾಗ ಚೆನ್ನಮ್ಮ ಹಾಗೆ ಕುಳಿತುಕೊಳ್ಳುತ್ತಾಳೆ. ಆಗ ಮಳೆ ಆಗುತ್ತದೆ. ಶವ ಸುಡುವುದಿಲ್ಲ. ಗಂಡನ ಮೈಯಿಂದ ಮಣ್ಣು ತೆಗೆದು ಆಕೆ ನಂದಿಯನ್ನು ಮಾಡಿ ಪೂಜಿಸುತ್ತಾಳೆ. ಶಿವನಲ್ಲಿಗೆ ಬಂದು ವಿಷಯ ತಿಳಿಸುತ್ತಾನೆ. ಈಕೆಯನ್ನು ಪರೀಕ್ಷಿಸಲು ಶಿವ ಹುಲಿಕರಡಿಗಳನ್ನು ಕಳಿಸುತ್ತಾನೆ. ಇವುಗಳಿಗೆ ಆಕೆ ಜಗ್ಗದೆ ಇದ್ದಾಗ ಶಿವ ಪ್ರತ್ಯಕ್ಷನಾಗಿ ನಿನಗೇನು ಬೇಕೆಂದು ಕೇಳುತ್ತಾನೆ. ಆಗ ಆಕೆ ಗಂಡನನ್ನು ಬದುಕಿಸು ಎನ್ನುತ್ತಾಳೆ. ಕಾಳಿಂಗ ಎದ್ದು ಕುಳಿತು ಇದು ತನ್ನ ಗಿದ್ದ ಇದಿಮಾಯೆ ಎಂದು ಕತ್ತಿನಿಂದ ಕೊಲ್ಲಲು ಹೋಗುತ್ತಾನೆ. ಆದರೆ ಶಿವ ಶಿವೆಯರು ಇಕೆ ನಿನ್ನ ಹೆಂಡತಿ ಎಂದು ನಿನ್ನನ್ನು ಆಕೆ ಬದುಕಿಸಿದಳೆಂದು ಹೇಳುತ್ತಾರೆ. ಆಮೇಲೆ ಇವರನ್ನು ಆನೆಯ ಮೇಲೆ ಮೆರೆಸಿ ಪಟ್ಟ ಕಟ್ಟುತ್ತಾರೆ. ಕಾಳಿಂಗರಾಯ ಹಾಗೂ ಚೆನ್ನಮ್ಮ ರಾಜರಾಣಿಯಾಗಿ ಬಾಳುತ್ತಾರೆ.
ಈ ಕಥೆಯಲ್ಲಿ ಕೆಲವು ವಿರೋಧಾಭಾಸಗಳಿಗೆ ಚೆನ್ನಮ್ಮ ನಂದಿ ಪೂಜಿಸುವುದು ಇಮಾನದಲ್ಲಿ ಗಂಡನೊಂದಿಗೆ ಶವಯಾತ್ರೆಯಲ್ಲಿ ಬರುವುದು ವಿಚಿತ್ರವೆನಿಸುತ್ತದೆ. ಬ್ರಾಹ್ಮಣರ ಕುಲದಲ್ಲಿ ಹರಿಯನ್ನು ನೆನಸುವುದು ಸಹಜ. ಆದರೆ ಇಲ್ಲಿ ಆಕೆ ನಂದಿಯನ್ನು ಪೂಜಿಸುತ್ತಾಳೆ. ಮತ್ತು ಚಟ್ಟದ ಮೇಲೆ ಹೆಣ ಒಯ್ಯುತ್ತಾರೆ ಆದರೆ ಇಲ್ಲಿ ಇಮಾನದಲ್ಲಿ ಹೋಗುವ ವರ್ಣನೆ ಇದೆ. ಇದು ಆಂದ್ರ ಮೂಲದಿಂದ ಬಂದು ಕನ್ನಡಿಗರ ಕೈಯಿಂದ ಮಾರ್ಪಾಟದಂತೆ ಕಂಡುಬರುತ್ತದೆ. ಪುರಾಣ ಪ್ರಸಿದ್ಧರಾದ ಸಾವಿತ್ರಿ, ಅನಸೂಯ, ಸೀತೆ ಹಾಗೂ ಅನಲಾಯಿ ಯಂತೆ ಚೆನ್ನಮ್ಮ ತನ್ನ ಮುತೈದೆತನ ಮರಳಿ ಪಡೆದಾಕೆ. ಇದಿಮಾಯೆಯನ್ನು ಗೆದ್ದಾಕೆ.
ವಿಚಿತ್ರ ಪ್ರಸಂಗಗಳು: ಸೂಲಗಿತ್ತಿ ಸಂಗವ್ವನನ್ನು ಕರೆಯಲು ಪ್ರಧಾನಿ ಹೋದಾಗ ಬಾಜಾರದಾಗ ಹಾದು ನಾನೆಂದು ಬರಲಪ್ಪಂತಾಳ. ಮುತ್ತಿನ ಪಲ್ಲಕ್ಕಿ ಕಳಿಸೆಂದು ಹೇಳುತ್ತಾಳೆ. ತಾನು ಭರ್ಜರಿ ಸೀರೆ ಉಟ್ಟು ಶೃಂಗಾರಗೊಂಡು ಭಕ್ಷ ಭೋಜನವನ್ನು ಸವಿದು ಪಲ್ಲಕ್ಕಿಯಲ್ಲಿ ಬರುತ್ತಾಳೆ. ಆಕೆಗಿದ್ದ ಗತ್ತು ಆಶ್ಚರ್ಯ ತರಿಸುತ್ತದೆ. ಅಲ್ಲಿ ಮದರಂಗಿ ಹೆರಿಗೆ ಬೇನೆ ತಿನ್ನುತ್ತಿದ್ದಾಳೆಂಬ ಅರಿವಿಲ್ಲ. ನಿಧನಾವಾಗಿ ಬರುತ್ತಾಳೆ. ಅಂದರೆ ಆಕೆಯದು ಎಷ್ಟು ನಡೆಯುತ್ತಿತ್ತು ನೋಡಿರಿ.
ಮಗು ಹುಟ್ಟಿದ ಮೇಲೆ ಜೋಶೇರಣ್ಣನ ಕರೆಸುತ್ತಾರೆ. ಜಾತಕ ಬರೆಸಲು ಜೋಶೇರಣ್ಣ ಎಂದರೆ ಜೋಯಿಸರು. ಜೋಯಿಸರು ಜಾತಕ ಬರೆದು ಇತನಿಗೆ ಕಾಳಿಂಗರಾಯ ಎಂದು ಹೆಸರಿಸಿ ಅಲ್ಲದೆ ಇತ ಚಿತ್ರದ ಹುಲಿಗಂಜಿ ಸಾಯುತ್ತಾನೆ ಅನ್ನುತ್ತಾನೆ. ಈ ಜೋಯಿಸನನ್ನು ಕೂದಲ ಕಿತ್ತಿ ನೆಲಕ್ಕೆ ಬಡಿಯಿರಿ, ಆನೆ ಕಾಲಿಂದ ತುಳಿಸಿರಿ ಎಂದೆಲ್ಲ ಬೈದಾಗ ‘ನನ್ನ ಯಾಕೆ ಬೈತಿರಿ ನಾನು ಇದ್ದುದ್ದು ಹೇಳಿದೆ ಎಂದು ಓಡಿ ಹೋಗುತ್ತಾನೆ. ಕಾಳಿಂಗರಾಯ ಸಾಲಿ ಕಲಿಯುವುದು, ಶಸ್ತ್ರ ವಿದ್ಯೆ ಕಲಿಯುವ ವರ್ಣನೆ , ಚೆನ್ನಮ್ಮ ಗಂಡನಿಗಾಗಿ ತಪಸ್ಸು ಮಾಡುವ ಛಲಗಳ ವರ್ಣನೆ ತುಂಬಾ ಸುಂದರವಾಗಿ ಮೂಡಿ ಬಂದಿದೆ.
ಹುಲಿ ಬೇಟೆ ಆಡುವ ಕಾಳಿಂಗರಾಯ ಚಿತ್ರದ ಲಿಂಬೆಹಣ್ಣಿನ ಗಾತ್ರದ ಹುಲಿಗೆ ಅಂಜುತ್ತಾನೆ. ಅದರರ್ಥ ಕೆಲವೊಮ್ಮೆ ಹೆದರಿಕೆ ಪ್ರಾಣ ತೆಗೆಯ ಬಲ್ಲದು ಎಂಬುದಾಗಿದೆ. ಆದರೆ ಕಾಳಿಂಗರಾಯ ಚಿತ್ರದ ಹುಲಿಗೆ ಅಂಜುವುದು ತೋರಿಕೆಗೆ ಅದರ ಹಿಂದೆ ವಿಧಿಯಾಟವಿದೆ.
ಒಬ್ಬ ರಾಜಕುಮಾರನ ಹುಟ್ಟು ಸಾವು ಮರುಹುಟ್ಟುವಿನ ಸುತ್ತ ಹೆಣೆದಿರುವ ಈ ಕಥನ ಕಾವ್ಯಯ ತುಂಬಾ ಸುಂದರವಾಗಿದೆ. ಹಾಡಿದಾಗಲಂತೂ ಇನ್ನೂ ಚೆನ್ನಾಗಿ ಧ್ವನಿಸುತ್ತದೆ. ಜಪದದ ಹಾಡು ಪಾಡುಗಳನ್ನು ಅವರ ದೃಷ್ಟಿಯಿಂದಲೆ ನೋಡಬೇಕಲ್ಲದೆ ಆಧುನಿಕ ವಿಮರ್ಶೆಗೆ ಒಡ್ಡಬಾರದು.
ಡಾ.ಶಶಿಕಾಂತ ಕಾಡ್ಲೂರರಿಗೆ ಇಂತಹ ಕೃತಿ ನೀಡಿದ್ದಕ್ಕಾಗಿ ಧನ್ಯವಾದಗಳು
ಡಾ.ಬಸವಪ್ರಭು ಬೆಟ್ಟದೂರು,ಮಾನ್ವಿ
ಜಿಲ್ಲಾ ಕಸಾಪ ಅಧ್ಯಕ್ಷರು, ರಾಯಚೂರು
————————————–
ಡಾ. ಶಶಿಕಾಂತ ಕಾಡ್ಲೂರು ರಚಿಸಿದ ಅವ್ವ ಹಾಡಿದ ಕಾಳಿಂಗರಾಯ ಕೃತಿಗೆ ಗಂಗಮ್ಮ ಬೊಮ್ಮಾಯಿ ಟ್ರಸ್ಟ ವತಿಯಿಂದ ನೀಡುವ ಜಾನಪದ ಸಿರಿ ಪ್ರಶಸ್ತಿ ಲಭಿಸಿದೆ. ಇಂದು ೧೦-೦೧-೨೦೨೧ ಭಾನುವಾರ ಲೇಖಕರು ಪ್ರಶಸ್ತಿ ಸ್ವಿಕರಿಸುವರು
ಈ ” ಅವ್ವ ಹಾಡಿದ ಕಾಳಿಂಗರಾಯನ ಹಾಡು ” ಒಂದುಪ್ರತಿಯನ್ನು ಎಂ. ಕೆ. ಶಿವಪ್ಪ, ಮನೆ ನಂ 277 ರೇಣುಕಾನಗರ , ಗೋಕುಲರಸ್ತೆ, ಹುಬ್ಬಳ್ಳಿ 580030 । ಮೊ 8762200698 ಗೆ ಕಳಿಸಿ। ಎಷ್ಟು ಹಣ ನಿಮಗೆ ಫೋನ್ ಪೆ/ ಗೂಗಲ್ ಪೆ ಮುಖಾಂತರ ಯಾರ ಹಸರಿಗೆ ಕಳಿಸಬೇಕೆಂದೂ ತಿಳಿಸಿ, ಉಪಕರಿಸಿ।
ಒಂದು ಪ್ರತಿ ಬೇಕು 8762200698
ಒಂದುಪ್ರತಿ ಬೇಕು 8762200698