ನನಗೊಂದು ಕನಸಿದೆ…..

ಜನ್ಮದಿನದ ವಿಶೇಷತೆ

ನನಗೊಂದು ಕನಸಿದೆ…..

“ಒಂದು ದಿನ ನನ್ನ ನಾಲ್ಕು ಪುಟ್ಟ ಮಕ್ಕಳು,
ಚರ್ಮದ ಬಣ್ಣಕ್ಕೆ ಬದಲಾಗಿ ವ್ಯಕ್ತಿತ್ವದ ಮೇಲೆ ಚಾರಿತ್ರ್ಯ ಅಳೆಯುವಂತಹ ರಾಷ್ಟ್ರದಲ್ಲಿ ಬದುಕುತ್ತಾರೆ ಎಂಬ ಕನಸಿದೆ. ಜಾರ್ಜಿಯಾದ ಕೆಂಪು ಪರ್ವತಗಳ ಮೇಲೆ, ಗುಲಾಮರ ಹಾಗೂ ಮಾಲೀಕರ ಮಕ್ಕಳ ಸಹೋದರತೆಯ ಮೇಜಿನ ಮೇಲೆ ಒಟ್ಟೊಟ್ಟಿಗೆ
ಕುಳಿತು ಮಾತನಾಡುತ್ತಾರೆ ಎಂಬ ಕನಸು ನನ್ನಲ್ಲಿದೆ.”

ಈ ಮೇಲಿನ ದೂರದೃಷ್ಟಿ ಚಿಂತನೆಯ ಮಾತುಗಳನ್ನು ಹೇಳಿದವರು ಯಾರು ಗೊತ್ತೇ..?

ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್..!

ಇಂದು ಮಾರ್ಟಿನ್ ಲೂಥರ್ ಕಿಂಗ್ ಜನ್ಮದಿನ
ಜನವರಿ 15, 1929 ರಲ್ಲಿ ಜನಿಸಿದ ಕಿಂಗ್ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿಗೆ ಹೆಸರಾಗಿದ್ದವನು. ಅಮೇರಿಕನ್ ಕರಿಯರ ಪಾಲಿಗೆ ಭರವಸೆಯ ನಾಯಕನಾಗಿ ಕ್ರಾಂತಿಯ ಚೇತನವಾಗಿ ಆಗಮಿಸಿದ ಕಿಂಗ್ ವರ್ಣಭೇದ ನೀತಿ ವಿರುದ್ಧ ಧ್ವನಿಯೆತ್ತಿದನು.

ಬಿಳಿಯರ ಕಿರುಕುಳಕ್ಕೆ, ಅಸ್ಪ್ರಶ್ಯತೆಗೆ ಒಳಗಾಗಿರುವ ಕರಿಯರನ್ನು ಅಪ್ಪಿಕೊಂಡು ಕರಿಯ ಜನಾಂಗದವರ ಪರ ಹೋರಾಟಕ್ಕೆ‌ ಸಜ್ಜಾಗಿ ಕರಿಯರ ನಾಯಕನಾಗಿ ಕಿಂಗ್ ಹೊರಹೊಮ್ಮಿದನು. ಬಿಳಿಯರು ಹಿಂಸಾತ್ಮಕ ಚಟುವಟಿಕೆಗಳು ನಡೆಸಿ ಎಷ್ಟೇ ಕಿರುಕುಳ ನೀಡಿದರೂ ಲೂಥರ್ ಕಿಂಗ್ ಹಿಂಸಾತ್ಮಕ ಮಾರ್ಗ ಹಿಡಿಯಲಿಲ್ಲ. ಅದಕ್ಕೆ ಬಲವಾದ ಕಾರಣ ಒಂದಿತ್ತು. ಅದೇನೆಂದರೆ ಭಾರತದ ಅಹಿಂಸಾತ್ಮಕ ಹೋರಾಟಗಾರ ಮಹಾತ್ಮ ಗಾಂಧೀಜಿಯವರು ಮಾರ್ಟಿನ್ ಲೂಥರ್ ಕಿಂಗ್ ಗೆ ಪ್ರೇರಣೆಯಾಗಿದ್ದು, ಗಾಂಧೀಜಿಯವರ ತತ್ವವನ್ನೇ ಕಿಂಗ್ ಅನುಕರಣೆ ಮಾಡಿದರು.

ಅಮೇರಿಕಾದಿಂದ ಭಾರತಕ್ಕೂ ಆಗಮಿಸಿದ ಕಿಂಗ್ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದನು.
ಎಲ್ಲಾ ಕ್ಷೇತ್ರಗಳಲ್ಲೂ ಬಿಳಿಯರಿಗೆ ಮಾತ್ರ ಅವಕಾಶಗಳಿದ್ದವು, ಆದರೆ ಕರಿಯರು ಮಾತ್ರ ಯಾವುದೇ ಸೌಲಭ್ಯ, ಹಕ್ಕುಗಳು ದಕ್ಕಿಸಿಕೊಳ್ಳಲು ಸಾಧ್ಯವಾಗದೇ ವಂಚಿತರಾಗಿ ಬದುಕುತ್ತಿದ್ದರು. ಕರಿಯರಿಗೆ ಮತ್ತು ಬಿಳಿಯರಿಗೆ ಪ್ರತ್ಯೇಕತೆ ಮಾಡುವ ಮೂಲಕ ಅಸಮಾನ ವ್ಯವಸ್ಥೆ ಜಾರಿಯಲ್ಲಿತ್ತು. ಇಂತಹ ಅನೇಕ ಸಂಕಷ್ಟ, ಅವಮಾನಗಳನ್ನು ಎದುರಿಸಿದ ಲೂಥರ್ ಕಿಂಗ್ ಮುಂದೆ ದೊಡ್ಡ ಮಟ್ಟದಲ್ಲಿ ಅಹಿಂಸಾತ್ಮಕ ಪ್ರತಿಭಟನೆಗೆ ಸಜ್ಜಾಗಿದನು‌.
ಲಕ್ಷ – ಲಕ್ಷ ಕರಿಯ ಜನಾಂಗದವರನ್ನು ಒಂದೆಡೆ ಸೇರಿಸಿದ ಕಿಂಗ್ ವೇದಿಕೆ ಮೇಲೆ ಆಗಮಿಸಿ ತನ್ನ ಭಾವುಕತೆಯ ನುಡಿಗಳು ‘ನನಗೆ ಒಂದು ಇಂದು ಕನಸಿದೆ’ ಎನ್ನುವ ಪ್ರಸಿದ್ಧ ಭಾಷಣದಲ್ಲಿ ಜನಾಂಗೀಯ ಕೇಂದ್ರಿತ ನಿಂದನೆ, ಕರಿಯರ ಕಿರುಕುಳ ಮತ್ತು ಶೋಷಣೆಯ ಸಾಮಾಜಿಕ ಅನುಭವಗಳನ್ನು ಪ್ರತಿಬಿಂಬಿಸುತ್ತವೆ.

ಕೊನೆಗೂ ಕಿಂಗ್ ಹೋರಾಟದ ಫಲವಾಗಿ 1964 ರಲ್ಲಿ ಅಮೇರಿಕ ಅಧ್ಯಕ್ಷ ನಾಗರೀಕ ಹಕ್ಕುಗಳ‌ ಕಾಯಿದೆ ಜಾರಿಗೊಂಡು, ಒಪ್ಪಂದಕ್ಕೆ ಸಹಿ ಹಾಕಿದರು. ನೂರಾರು ವರ್ಷಗಳ ಕಾಲ ಬಿಳಿಯರ‌ ಅಟ್ಟಹಾಸ, ಹಿಂಸೆ, ದೌರ್ಜನ್ಯಕ್ಕೆ ಒಳಗಾಗಿದ್ದ ಲಕ್ಷಾಂತರ ಕರಿಯರು ಮಾರ್ಟಿನ್ ಲೂಥರ್ ಕಿಂಗ್ ಎಂಬ ಚೈತನ್ಯ ಶಕ್ತಿಯಿಂದ ನಿಟ್ಟುಸಿರು ಬಿಡುವಂತಾಗಿತ್ತು.

ಸಾಮಾಜಿಕ ಕ್ರಾಂತಿಗೆ ಹೆಸರಾದ ಮಾರ್ಟಿನ್ ಲೂಥರ್ ಕಿಂಗ್ ಗೆ ‘ನೊಬೆಲ್ ಶಾಂತಿ’ ಪ್ರಶಸ್ತಿ ಕೂಡ ಒಲಿದಿತ್ತು. ‘ಅಮೇರಿಕದ ಗಾಂಧಿ’ ಎಂದೇ ಪ್ರಖ್ಯಾತಿ ಪಡೆದಿರುವ ಕಿಂಗ್ ಅಹಿಂಸಾತ್ಮಕ ತತ್ವಗಳಿಂದಲೇ ಗೆಲುವು ಸಾಧಿಸಿದ ಜನಮನ ನೇತಾರ. ಆದರೆ ಕೊನೆಗೆ ಎಪ್ರಿಲ್ 4, 1968 ರಲ್ಲಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿ ಅಂದು ಅಮೇರಿಕಾ ಚರಿತ್ರೆಯಲ್ಲಿ ದುರಂತದ ದಿನವಾಗಿ ದಾಖಲಾಗಿದ್ದು ಸುಳ್ಳಲ್ಲ.

ಮಾರ್ಟಿನ್ ಕಿಂಗ್ ದೈಹಿಕವಾಗಿ ಮರೆಯಾದರೂ ಲಕ್ಷಾಂತರ ಹೃದಯಗಳಲ್ಲಿ ಇಂದಿಗೂ ನೆಲೆಸಿದ್ದಾನೆ, ಮಾರ್ಟಿನ್ ಒಬ್ಬ ಛಲಗಾರ, ಹೋರಾಟಗಾರ ಅಷ್ಟೇ ಅಲ್ಲದೇ ಸಾಮಾಜಿಕ ಸುಧಾರಣೆಗಾಗಿ ಪ್ರಾಣತ್ಯಾಗ ಮಾಡಿದ ಅದಮ್ಯ ಚೇತನ ಕೂಡ ಹೌದು. ಇಂಥ ಕ್ರಾಂತಿಕಾರಿ ನಾಯಕರ ಆದರ್ಶಗಳು ನಮ್ಮಂತಹ ಲಕ್ಷಾಂತರ ಮನಸ್ಸುಗಳಿಗೆ ಸ್ಫೂರ್ತಿದಾಯಕವಾಗಬೇಕಾಗಿದೆ.

ಅಸಮಾನತೆ, ಅಸ್ಪೃಶ್ಯತೆ, ಅಶಾಂತಿ, ಹಿಂಸಾಚಾರ ತಾಂಡವವಾಡುತ್ತಿರುವ ದುರಿತ ಕಾಲ‌ದಲ್ಲಿ ‘ಮಾರ್ಟಿನ್ ಲೂಥರ್ ಕಿಂಗ್’ ಎನ್ನುವ ಕ್ರಾಂತಿಯ ಚಿಲುಮೆಗಳು ಮತ್ತೆ ಮತ್ತೆ ಹುಟ್ಟು ಪಡೆದು ಪುಟಿದೇಳಬೇಕು ಎಂದೆನಿಸುತ್ತದೆ.

ಬಾಲಾಜಿ ಕುಂಬಾರ, ಚಟ್ನಾಳ

Don`t copy text!