ಕತ್ತಲೆ ಮತ್ತು ಬೆಳಕು

ಕತ್ತಲೆ ಮತ್ತು ಬೆಳಕು

ಹುಡುಕಿದೆ ಬೆಳಕು ಭೂಷಣನೇ
ನಿನ್ನನ್ನು ಸಂಧ್ಯೆ ನುಸುಳಿದರೂ
ಆರುವ ನಸು ಬೆಳಕಿನಲ್ಲೂ..!!

ಆಗಸದ ಅಜ್ಜ ಜ್ಞಾನ ಸೂರ್ಯನಿಗೂ
ಅಡರಿದ ಮುದಿತನದಿಂದ
ತಮಕ್ಕೆ ಮತ್ತಿಷ್ಟು ಬಲಬಂದು
ಅದು ಆಕಾಶ ಅಡರಿನಿಂತು
ವಿಶ್ವವನ್ನೇ
ತೆಕ್ಕೆಗೆ ಉರುಳಿಸಿಕೊಂಡು ಆಳುತ್ತಿದೆ ಅರಸಾಗಿ…!!

ಆಗಸದಲ್ಲೇನೋ ಹೊತ್ತುತ್ತವೆ
ಅಗಣಿತ ನಕ್ಷತ್ರ ದೀವಿಗೆಗಳು..
ಹೊಳೆಯುತ್ತವೆ ಮಿಣುಕು ಹುಳುಗಳಂತೆ
ಆದರೂ ಸಾಗುವ ದಾರಿಯಲ್ಲಿ ಹರಡುವುದೇ ಇಲ್ಲ ಬೆಳಕು..

ಆದರೂ ನಾವೆಲ್ಲ ಪೂರ್ವಜರಾದಿಯಾಗಿ
ಆ ಮಿಣುಕು ಬೆಳಕಿನ ಭರವಸೆಯ ಮೇಲೆಯೆ
ಕ್ರಮಿಸುತ್ತಿದ್ದೇವೆ ಬಾಳ ದಾರಿಯ

ಸ್ವಾರ್ಥ ದುರಾಶೆಕ್ಕಿಳಿದರೆ
ಜ್ಞಾನವೆನ್ನುವುದೂ ಹಲವು ಬಾರಿ
ತೋರುಂಬ ಲಾಭವೇ ಆಗುತ್ತದೆ
ದುಡಿಯುವವರಿಗೆ ಎಂದೂ ತಪ್ಪದ ದುಡಿತ,
ಶ್ರಮದ ಎಲ್ಲ ಫಲ ನಿಸ್ಫಲವಾಗಿ
ವಿರಾಮಿಗಳ ಮಡಿಲು ತುಂಬುತ್ತದೆ,
ಅವರ ಹಸಿವು ನೀಗಿಸಿ ವಸ್ತ್ರ ಆಭೂಷಣ
ಆಲಯ ನಿಲಯ ದೇವಾಲಯ
ಕೋಟೆ ಕೊತ್ತಲುಗಳು ಉದಿಸುತ್ತವೆ..!!

ಕಾದಿದ್ದೇವೆ ಶತ ಸಹಸ್ರಮಾನಗಳಿಂದ
ನನ್ನಂಥ ಅದೆಷ್ಟೋ ಮಕ್ಕಳೂ
ಸತ್ಯ ಹೇಳಿದರೂ,
ನಮ್ಮ ಹೆತ್ತವರು ಪಾಲಕ ಪೋಷಕರು
ತೆರಳುತ್ತಾರೆ ಪಂಚಾಂಗದವರ ಅಂಗಡಿಗೇ..!!
ಮಠ ಮಂದಿರ ಮಂಡಿಗಳ ಮಂದಿಯ ಮುಂದೆಯೇ
ಮಂಡಿಯೂರುತ್ತಾರೆ..!!

ಅವರಾವ ನಿವೇದನೆಗಳೂ
ವೇದನೆಗಳು ಕರಗುವುದೇ ಇಲ್ಲ,
ಹಾಲು ತುಪ್ಪ ಕಾಳು ಕಡಿ ಎಣ್ಣೆ ಸಕ್ಕರೆ ಹಸು ಪಶು
ಏನೇನೋ ಇದ್ದುದರಲ್ಲಿಯೇ ಧರ್ಮಾರ್ಥದ ಪಾಲಾಗುತ್ತದೆ
ಕಷ್ಟ ಸಂಕಷ್ಟಗಳು ಮಾತ್ರ
ಇವರ ಪದರಿನ ನಂಟು ಬಿಡುವುದೇ ಇಲ್ಲ…!!

ಎಂಥ ವಿಚಿತ್ರವಲ್ಲವೆ ಇದು..!!
ಮಡಿಲ ಮಕ್ಕಳ ಜಾಣ ನುಡಿಯೂ ಕುರುಡಾಗಿ
ಆಸರೆ ಎಂದು ಭಾವಿಸಿದ ಸಂಚಿನ
ಊರುಗೋಲುಗಳ ಮಾತೇ ವೇದ ವಾಕ್ಯವಾಗುತ್ತವೆ..!!

ಆಗಸದ ತಮ ಘನ ತಿಳಿಗೊಳಿಸಲು
ಆಗಾಗ ಬರುತ್ತಾನೆ ಪಕ್ಷಕ್ಕೊಮ್ಮೆ ತಿಂಗಳನೂ..!
ಅವನ ತಂಗುಳ ಬೆಳಕಿಗೂ
ನಿಶಾದೇವಿಯ ಆಲಿಂಗನದಲ್ಲಿರುವ
ನಮ್ಮವರು ಎಚ್ಚರಿಸಲಾಗುವುದೇ ಇಲ್ಲ..

ಪ್ರಥಮೆಯಿಂದಲೇ
ಬೆಳಕು ಹೆಚ್ಚಿಸಿಕೊಳ್ಳುತ್ತ ಹೊರಟು ಚಂದಿರ
ಬೆಳ್ಳನೆ ಬೆಳಗಿದರೂ
ಪಕ್ಷಕಾಲ ಮುಗಿಯುವುದರಲ್ಲಿಯೇ
ಅವನಾದರೂ ಸೋತು ಸುಣ್ಣವಾಗುತ್ತ
ಕರಗುತ್ತ ಕೊನೆಗೊಮ್ಮೆ
ಇಹದ ಕತ್ತಲಿನಲ್ಲಿ ಕರಗಿ ಮಾಯವಾಗುತ್ತಾನೆ;
ಬುದ್ಧ ಬಸವ ಅಂಬೇಡ್ಕರ್ ಮೊದಲಾದ ದೀವಿಗೆಗೆಳಂತೆ…!!

ಕತ್ತಲೆಯೇನೋ ಹರಿಯುತ್ತದೆ
ಮುಂಜಾವಿನ ಕುರುಹಾಗಿ
ನಿಶೆಯ ಮೊಗದಲ್ಲಿ ಸೂರ್ಯದೇವ ಅರುಣರಾಗ ಅರಳಿಸುತ್ತಾನೆ
ಮತ್ತೆ ನಿಶೆಯ ಮಡಿಲಿಗೆ ಉರುಳಿ ಮರೆಯಾಗುತ್ತಾನೆ,
ಅವನಿಂದಲೂ ಕತ್ತಲೆಯ ಮಾತ್ರ ಶಾಶ್ವತವಾಗಿ ಚದುರಿಸಲಾಗುವುದೇ ಇಲ್ಲ…!!

ಇನ್ನೂ ಕಾಯಬೇಕೆನೋ..!!
ವಿಜ್ಞಾನ ಯುಗದಲ್ಲೂ
ಕಂಪ್ಯೂಟರ್ ಟಿವಿ ಮೊಬೈಲ್ ಇತ್ಯಾದಿಗಳಲ್ಲೂ
ಹಣೆಗೆ ಅರಸಿನ ಚಂದನ ಕುಂಕುಮಾದಿ
ಬಳಿದುಕೊಂಡು ಕುಳಿತವರು
ಅಂತರ್ಧಾನವಾಗುವವರೆಗೂ.!!
ಅವರೊಳಗೂ ನಿಜದರಿವು ಮೂಡಿ
ಕೈಗೆ ಗುದ್ದಲಿ ಪಿಕಾಸಾದಿಗಳನ್ನು ಹೊಂದಿಸಿಕೊಳ್ಳುವವರೆಗೂ…!!

ಆತನಕವೂ ನಾವು ಪಡು-ಮೂಡು ಮಕ್ಕಳು
ಬೊಬ್ಬೆ ಹೊಡೆಯುವುತ್ತಲೇ ಇರುವುದು,
ನಮ್ಮವರ ದುಡಿಮೆಯ ನೈವೇದ್ಯ
ಅಪರ ಬ್ರಹ್ಮರ ಸೇರುತ್ತಲೇ ಇರುವುದು…!!

ಡಾ. ಲಕ್ಷ್ಮಣ ಕೌಂಟೆ

Don`t copy text!