ಶರಣರ ದೃಷ್ಟಿಯಲ್ಲಿ ಆಸೆ

 

ಶರಣರ ದೃಷ್ಟಿಯಲ್ಲಿ ಆಸೆ

ಸರ್ವಜ್ಞನ ಹೇಳದೆ ಇರುವ ವಿಷಯವೆ ಇಲ್ಲ ಎನ್ನುವಂತೆ, ನಮ್ಮಲ್ಲಿ ಉದ್ಭವವಾಗುವ ಪ್ರತಿ ಪ್ರಶ್ನೆಗೂ ಮತ್ತು ಪ್ರತಿ ಸಂದೇಹಕ್ಕೂ ವಚನ ಸಾಹಿತ್ಯದಲ್ಲಿ ಉತ್ತರವಿದೆ. ಸಮರ್ಪಕವಾದ ಮತ್ತು ನಮ್ಮನ್ನು ಚಿಂತನೆಗೆ ತೊಡಗಿಸುವ ಉನ್ನತ ವಿಚಾರಧಾರೆಗಳೆ ಶರಣರ ವಚನಗಳು.
“ಅತಿಯಾದರೆ ಅಮೃತವು ವಿಷ” ಎನ್ನುವಂತೆ ಯಾವುದೆ ವಿಷಯ ಅಥವಾ ವಸ್ತು ಅತಿಯಾದರು ಅದಕ್ಕೆ ಬೆಲೆ ಇರುವದಿಲ್ಲ. ಹಾಗೆ ಆಸೆಯು ಕೂಡಾ, “ಬುದ್ಧರ” ವಾಕ್ಯದಂತೆ “ಆಸೆಯೆ ದುಖಃಕ್ಕೆ ಮೂಲ” ಮಿತಿಮೀರಿದ ಆಸೆ ದುಖಃವನ್ನು ಕೊಡುತ್ತದೆ. ಹಾಗೆಯೆ “ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಖಃ ನೋಡಾ” ಎಂದು ಅಲ್ಲಮ ಪ್ರಭುಗಳು ಹೇಳುತ್ತಾರೆ. ಮಂಗ ಮನವು ನೋಡಿದನ್ನೆಲ್ಲಾ ಆಸೆ ಪಡುತ್ತದೆ. “ಆಸೆಗೆ ಅಳತೆ ಇಲ್ಲ” ಎನ್ನುವಂತೆ ಶರಣರ ನಿರ್ಭಾವ, ನಿರ್ಭಯಲಗಳ ಬಗ್ಗೆ ಓದಿ ಅರಿತರು, ಅವರು ಹಾಕಿಕೊಟ್ಟ ಮಾರ್ಗದಲ್ಲಿಯೆ ನಡೆಯೋಣ ಎಂದು ನಿರ್ಧರಿಸಿದರು, ಆಸೆಗಳನ್ನು ಅಳಿಯುವದು ಸ್ವಲ್ಪ ಕಷ್ಟಸಾಧ್ಯವಾದ ವಿಷಯ.
ಬಸವಣ್ಣನವರೆ ಹೇಳುವಂತೆ

ನೂರನೊದಿ ನೂರ ಕೇಳಿದರೇನು
ಆಸೆ ಅಳಿಯದು ರೋಷ ಬಿಡದು
ಮಜ್ಜನಕ್ಕೆರೆದು ಫಲವೇನು
ಮಾತಿನಂತೆ ಮನವಿಲ್ಲದಾ
ಜಾತಿಡೊಂಬರ ನೋಡಿ ನಗುವ ನಮ್ಮ
ಕೂಡಲ ಸಂಗಮ ದೇವಾ.
ಅಂದರೆ ಆಸೆ ಅಳಿಯದೆ. ರೋಷ ಬಿಡದೆ, ಮತ್ತು ನುಡಿದಂತೆ ನಡೆಯುವ ದೃಢ ಮನಸ್ಸನ್ನು ಮಾಡದೆ ನಾವು ಲಿಂಗ ಪೂಜೆ ಮಾಡಿದರೆ ವ್ಯರ್ಥ ಅನ್ನುವ ರೀತಿಯಲ್ಲಿ ಅಣ್ಣನವರು ಹೇಳುತ್ತಾರೆ.

ಆಸೆಗೆ ಸತ್ತುದು ಕೋಟಿ
ಆಮಿಷಕ್ಕೆ ಸತ್ತುದು ಕೋಟಿ
ಹೊನ್ನು,ಹೆಣ್ಣು, ಮಣ್ಣಿಂಗೆ
ಸತ್ತುದು ಕೋಟಿ,
ಗುಹೇಶ್ವರಾ ನಿಮಗಾಗಿ
ಸತ್ತವರನಾರನೂ ಕಾಣೆ.
ಈ ಜಡ ಜಗತ್ತಿನಲ್ಲಿ ಆಸೆಯ ಬೆನ್ನು ಹತ್ತಿ ವಿನಾಶದ ಕಡೆಗೆ ಸಾಗುತ್ತಿದ್ದೆವೆ. ನಿತ್ಯ ಸತ್ಯ ಶಾಶ್ವತನಾದ ಪರಮಾತ್ಮನ ಇರುವನ್ನು ಅರಸದೆ ಬೇರೆಲ್ಲದಕ್ಕಾಗಿ ಬಡಿದಾಡುತ್ತಿದ್ದೆವೆ. ಅದಕ್ಕಗಿಯೆ ಅನುಭಾವದ ಅಮೃತದ ಮೇರು ಶಿಖರದ ಅಲ್ಲಮಪ್ರಭುಗಳು ನಿನಗಾಗಿ ಸತ್ತವರನಾರನು ಕಾಣೆ ಎಂದು ಹೇಳಿದ್ದಾರೆ. “ಮನದ ಮುಂದಣ ಆಸೆಯೆ ಮಾಯೆ” ಯನ್ನುವಂತೆ ಮಾಯೆಯ ಬೆನ್ನೆರಿ ಶಾಶ್ವತವಲ್ಲದ ಸುಖವನ್ನು ಅರಸುತ್ತಿದ್ದೆವೆ.
ಆಸೆಯೆಂಬ ಪಾಶದಲ್ಲಿ ಭವ-ಬಂದನನಾಗಿರ್ದೆನಯ್ಯಾ,
ಸುಕೃತ ನಿಮ್ಮಯ ನೆನೆಯಲು ಎನಗೆ ತೆರಹಿಲ್ಲಯ್ಯ,
ಕರುಣಾಕರ, ಅಭಯಕರ, ವರದಾ ನೀ ಕರುಣಿಸಯ್ಯಾ,
ಸಂಸಾರ ಬಂಧನವನು ಮಾಣಿಸಿ, ಎನಗೆ ಕೃಪೆಯ ಮಾಡಿ
ನಿಮ್ಮ ಶ್ರೀಪಾದ – ಪದ್ಮದಲ್ಲಿ ಭ್ರಮರನಾಗಿರಿಸು,
ಭಕ್ತ-ಜನ ಮನೋವಲ್ಲಭಾ, ಕೂಡಲ ಸಂಗಮದೇವ
ಆಸೆಯ ಪಾಶದಲ್ಲಿ ಸಿಲುಕಿ ಭವಬಂಧನದಲ್ಲಿ ಸಿಲುಕಿಕೊಳ್ಳುತ್ತಿದ್ದೆವೆ. ಸಕೃತ ಫಲದಾಯಕನಾದ ಪರಮಾತ್ಮನನ್ನು ನೆನೆಯಲು ವೇಳೆಇಲ್ಲ. ಸಾಗರೊಪಾದಿಯಲ್ಲಿರುವ ಭವ ಸಾಗರದಲ್ಲಿ “ತೇಲಲಾರದು ಗುಂಡು ಮುಳುಗಲಾರದು ಬೆಂಡು ಇಂತಪ್ಪ ಸಂಸಾರ ಶರಧಿಯ ದಾಟಿಸು” ಎನ್ನುವ ಹಾಗೆ ಇಲ್ಲಿಯೂ ಕೂಡಾ ಸಂಸಾರ ಬಂಧನದಿಂದ ಬಿಡಿಸು ಎಂದು ಕೇಳಿದ್ದಾರೆ.
ಮತ್ತೊಂದು ವಚನದಲ್ಲಿ ಸಂಗ್ರಹ ಬುದ್ದಿ ಬೇಡ ಎನ್ನುವದಕ್ಕಾಗಿ

ಹೊನ್ನಿನೊಳಗೊಂದೊರೆಯ ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ನಿಮ್ಮ ಶರಣರಿಗಲ್ಲದೆ ಮತ್ತೊಂದನರಿಯೆ
ಕೂಡಲ ಸಂಗಮ ದೇವಾ.
ಬಂಗಾರ ಎಷ್ಟೆ ದುಬಾರಿಯಾದರು ಅದರ ಮೇಲಿನ ವ್ಯಾಮೋಹ ತೀರುತ್ತಿಲ್ಲ ನಮಗೆ. ಬಸವಣ್ಣನವರು ಭಂಡಾರದ ಮಂತ್ರಿಯೆ ಆಗಿದ್ದರು, ಬಂಗಾರದಲ್ಲಿ ಒಂದು ಎಳೆ, ಸೀರೆಯೊಳಗಿನ ಒಂದು ಎಳೆಯನ್ನು ಇಂದಿಗೆ ನಾಳೆಗೆ ಬೇಕೆಂದು ಬಯಸಲಾರೆ, ಎಂದು ಪ್ರಮಾಣ ಮಾಡಿ ಹೇಳುತ್ತಾರೆ.

ಹೀಗೆ ಆಸೆಯ ಕುರಿತು ಇನ್ನು ಹಲವಾರು ವಚನಗಳ ನಿವೇದನೆಯನ್ನು ಇಡಬಹುದು. ಅತಿಯಾದ ಆಸೆ ಆಮಿಷಕ್ಕೆ ಒಳಗಾದವರು ಎನೆಲ್ಲಾ ಅನಾಹುತಗಳಿಗೆ ಒಳಗಾಗಿದ್ದಾರೆ. ಎಂಬುದನ್ನು ಅರಿತರು ಮನುಜ ಆಸೆಯನ್ನು ತೋರೆಯಲಾರ. ಸತ್ಪತದ ದಾರಿ ತುಳಿಯಲಾರ. ಬಾಳಿನಲ್ಲಿ ಆಸೆ ಇರಲಿ ಅತಿಯಾಸೆ, ದುರಾಸೆ ಬೇಡಾ.

ಸವಿತಾ. ಎಮ್. ಮಾಟೂರ
ಇಲಕಲ್ಲ.

One thought on “ಶರಣರ ದೃಷ್ಟಿಯಲ್ಲಿ ಆಸೆ

Comments are closed.

Don`t copy text!