ನಮ್ಮೂರು ಸಂಕೇಶ್ವರ.

ನಮ್ಮೂರು ಸಂಕೇಶ್ವರ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನಲ್ಲಿ ಬರುವ ನಮ್ಮೂರು ಸಂಕೇಶ್ವರ, ಬೆಳಗಾವಿಯಿಂದ ಉತ್ತರ ದಿಕ್ಕಿಗೆ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ (NH-4) ರಸ್ತೆಯ ಮೇಲೆ ಸುಮಾರು 48 ಕಿ.ಮೀ.ದೂರದಲ್ಲಿದೆ. ದಕ್ಷಿಣ ಕಾಶಿಯ ಮಹಿಮೆಯನ್ನು ಪಡೆದ ಹೆಗ್ಗಳಿಕೆ. ಯಜ್ಞ-ಯಾಗಾದಿಗಳ ಪವಿತ್ರ ಸ್ಥಳವಾಗಿ ಹಿರಣ್ಯಕೇಶಿ ನದಿಯ ದಡದಲ್ಲಿ ಶ್ರೀ ಶಂಕರಲಿಂಗೇಶ್ವರ ದೇವಸ್ಥಾನ ಹೊಂದಿದ ಪುಣ್ಯ ಸ್ಥಳ ಎಂದು ಸಾಂಖ್ಯೇಶ್ವರ ಮಹಾಪುರಾಣದಲ್ಲಿ ವರ್ಣಿತವಾಗಿದ್ದು, ಸಂಕೇಶ್ವರದ ಪ್ರಾಚೀನತೆಯ ಪ್ರಥಮ ಉಲ್ಲೇಖವಿದು. ಆ ಸಾಂಖ್ಯೇಶ್ಶರವೇ ಇಂದಿನ ಸಂಕೇಶ್ವರ.

ಬಾದಾಮಿ ಚಾಲುಕ್ಯರ ಮಾಂಡಲಿಕರಾದ ರಾಷ್ಟ್ರಕೂಟ ವಂಶದ ಸುಗಂಧವರ್ತಿ(ಸೇದತ್ತಿ) ಯ ರಟ್ಟರು ಈ ಭಾಗವನ್ನು ಆಳುತ್ತಿದ್ದರು. ಇವರ ಕಾಲದ ಮೂರು ಶಿಲಾಶಾಸನಗಳು ಸಂಕೇಶ್ವರದಲ್ಲಿಯೇ ದೊರೆತಿವೆ. ಮಹಮ್ಮದೀಯರ ಆಳ್ವಿಕೆಯಲ್ಲಿ ಬಹಮನಿ ಮುಹಮ್ಮದ್ ಷಹಾನ ಪ್ರತಿನಿಧಿ ಬಹಾದ್ದೂರ ಗಿಲಾನಿ ಕ್ರಿ.ಶ.1488 ರಿಂದ 1495 ರವರೆಗೆ ಸಂಕೇಶ್ವರವನ್ನೇ ರಾಜಧಾನಿಯನ್ನಾಗಿ ಮಾಡಿ ಆಳುತ್ತಿದ್ದನು. ನಂತರ ಮರಾಠಾ, ಮುಘಲರು, ಪೇಶ್ವೇ ಇವರ ಆಳ್ವಿಕೆಗೆ ಒಳಪಟ್ಟಿತು, ತದನಂತರ ಬ್ರಿಟಿಷ್ ಆಳ್ವಿಕೆಗೂ ಒಳಪಟ್ಟಿತು.

ಇಲ್ಲಿ ಎಲ್ಲಾ ಧರ್ಮ ಮತ ಪಂಗಡದವರು ಕೂಡಿಯೇ ಬಾಳಿ ಬೆಳೆದವರು. ರಟ್ಟರಾಜರುಗಳ ಸರ್ವಧರ್ಮ ಸಮನ್ವಯತಾ ದೃಷ್ಟಿಗೆ ಕುರುಹಾಗಿ ನಿಂತಿವೆ 1. ಶಂಕರಲಿಂಗ ದೇವಾಲಯ 2.ನಾರಾಯಣ ಮಂದಿರ 3.ಪಾರ್ಶ್ವನಾಥ ಬಸದಿ. ಸನಾತನ ವೈದಿಕ-ಆಗಮಾದಿಗಳ ಧರ್ಮದರ್ಶಿಯಾಗಿ ಈಗಲೂ ಶ್ರೀ ಶಂಕರಾಚಾರ್ಯ ಮಠವಿದೆ. ಇದು ಶೃಂಗೇರಿ ಮಠದ ಶಾಖೆ ಯಾಗಿದ್ದು, ನಮ್ಮ ಭಾಗಕ್ಕೆ ಶೃಂಗೇರಿಯೇ ಸರಿ. ಈ ಎಲ್ಲಾ ವಾಸ್ತುಗಳು ಪ್ರಾಚೀನ ವಾಸ್ತುಶಿಲ್ಪ ವೈಭವಗಳಿಂದ ಕಂಗೊಳಿಸುತಿವೆ.

ಕರ್ನಾಟಕದಲ್ಲಿ ಎರಡನೆಯದೆನ್ನಬಹುದಾದ, ಅಪೂರ್ವವಾದ ” ಬರೆಯುವ ಶಿಲಾಬಾಲಿಕೆಯ ಮೂರ್ತಿ ನಾರಾಯಣ ಮಂದಿರದಲ್ಲಿದೆ. ಕಡತವನ್ನು ಬಿಚ್ಚಿ ನಾಲ್ಕಾರು ಸಾಲುಗಳನ್ನು ಬರೆಯುತ್ತಿರುವ ಭಂಗಿ ಮನಮೋಹಕವಾಗಿದೆ.

ಪಾರ್ಶ್ವನಾಥ ಬಸದಿ ಉಳಿದ ಮಂದಿರಗಳಿಗಿಂತಲೂ ಪ್ರಾಚೀನವಾದುದು. ನವರಂಗದ ಭುವನೇಶ್ವರಿಯಲ್ಲಿ ಕಲ್ಲಲ್ಲಿ ಅರಳಿಸಿದ ಕಮಲವಿದೆ. ಗರ್ಭಗುಡಿಯಲ್ಲಿ ಪಾರ್ಶ್ವನಾಥ ಮೂರ್ತಿಯಿದೆ. ಶ್ರೀ ಶಂಕರಲಿಂಗ ದೇವಾಲಯವು ಕಲ್ಯಾಣ ಚಾಲುಕ್ಯರ ಶೈಲಿಯಲ್ಲಿದೆ. ಬಹಳ ಸುಂದರವಾದ ಕೆತ್ತನೆ ಕೆಲಸಗಳಿಂದ ಕೂಡಿದ ದೇವಾಲಯದಲ್ಲಿ ಪ್ರಾಚೀನತಮವಾದ ಲಿಂಗವಿದೆ. ಪ್ರತಿವರ್ಷ ರಥಸಪ್ತಮಿಯಂದು ಒಂದು ವಾರದವರೆಗೆ ಜಾತ್ರೆ ಸೇರುತ್ತದೆ. ಸುಂದರ ಕೆತ್ತನೆ ಕೆಲಸಗಳಿಂದ ಮಾಡಲ್ಪಟ್ಟ ರಥ ಎಳೆಯಲ್ಪಡುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ನಮ್ಮೂರು ಮುಂದುವರಿದಿದೆ. ಎಲ್ಲಾ ಪದವಿ ಕಾಲೇಜುಗಳು, ಫಾರ್ಮಸಿ, ಆಯುರ್ವೇದಿಕ್, ಹೋಮಿಯೋಪತಿ ಕಾಲೇಜುಗಳು ಉತ್ತಮ ಮಟ್ಟದಲ್ಲಿವೆ. ಗುಣಮಟ್ಟದ ಪ್ರಾಥಮಿಕ ಮತ್ತು ಹೈಸ್ಕೂಲ್ ಗಳೂ ಇವೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿವೆ. ಗಡಿಭಾಗದಲ್ಲಿದ್ದರೂ, ನಮ್ಮಲ್ಲಿ ಎಂದೂ ಭಾಷೆ ಗಡಿಗಳ ತಂಟೆ ಇಲ್ಲ. ಕನ್ನಡ ಮರಾಠಿ ಉರ್ದು ಭಾಷಿಕರು ಒಗ್ಗಟ್ಟಾಗಿ ಇರುವುದು ಹೆಮ್ಮೆಯ ವಿಷಯ.

ಭಾರತದಲ್ಲಿಯೇ ಅತಿ ಹೆಚ್ಚು ಕಬ್ಬಿನ ದರ ಕೊಡಲ್ಪಟ್ಟ ಹಿರಣ್ಯಕೇಶಿ ಸಕ್ಕರೆ ಕಾರಕಾನೆ ನಮ್ಮೂರಿನ ಹೆಗ್ಗಳಿಕೆ. ಸಹಕಾರ ಮಹರ್ಷಿ ದಿ.ಅಪ್ಪಣ್ಣಗಳಿದಾ ಪಾಟೀಲರ ಶ್ರಮ, ಸಮಾಜಸೇವೆ ಅವಿಸ್ಮರಣೀಯ. ಸಂಕೇಶ್ವರದ ಭಾಗಕ್ಕೆ ಅವರು ದೇವರೇ ಸರಿ. ರಾಜಕೀಯದ ಕ್ಷೇತ್ರದಲ್ಲೂ ಸಂಕೇಶ್ವರದ ಪಾಲು ಅನನ್ಯ. ನೀರಾವರಿ ಮಂತ್ರಿಗಳಾಗಿ ಸಂಕೇಶ್ವರದ ದಿ.ಮಲ್ಹಾರಿಗೌಡ ಪಾಟೀಲ, ದಿ.ಅಪ್ಪಣಗೌಡ ಪಾಟೀಲ, ಕಾರ್ಯ ಸ್ತುತ್ಯರ್ಹ. ಹಾಗೆಯೇ ಮಾನ್ಯ ಮಾಜಿ ಶಾಸಕರಾದ ಶ್ರೀ.ಎ.ಬಿ.ಪಾಟೀಲರು ನಮ್ಮ ಭಾಗದ ರಾಜಕೀಯ ಮಹನೀಯರು.

ನಮ್ಮೂರು ಸಂಕೇಶ್ವರದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಹಿಂದೂ-ಮುಸ್ಲಿಂ ಬಾಂಧವರು ಎಲ್ಲಾ ಹಬ್ಬಹರಿದಿನಗಳಲ್ಲಿ ಒಂದಾಗಿ ಪಾಲ್ಗೊಳ್ಳುವರು. ನೀವೂ ನಮ್ಮೂರಿಗೆ ಒಮ್ಮೆ ಬನ್ನಿ…. ನಮಸ್ಕಾರ.

ಹಮೀದಾ ಬೇಗಂ ದೇಸಾಯಿ, ಸಂಕೇಶ್ವರ

Don`t copy text!