ಕಲ್ಯಾಣಿ (ಪಶ್ಚಿಮ) ಚಾಲುಕ್ಯರು

ಕಲ್ಯಾಣಿ (ಪಶ್ಚಿಮ) ಚಾಲುಕ್ಯರು

ಕಲ್ಯಾಣದ (ಪಶ್ಚಿಮ) ದ ಚಾಲುಕ್ಯರು (ಕ್ರಿ. ಶ. 973 – 1200) :
ರಾಷ್ಟ್ರಕೂಟರ ರಾಜ ಮೂರನೆ ಕೃಷ್ಣನನ್ನು ಕೆಳಗಿಳಿಸಿ ಇಮ್ಮಡಿ ತೈಲಪ ಕ್ರಿ. ಶ. 973 ರಲ್ಲಿ ಚಾಲುಕ್ಯರ ಸಾಮ್ರಾಜ್ಯವನ್ನು ಮರಳಿ ಸ್ಥಾಪಿಸುತ್ತಾನೆ. ಚಾಲುಕ್ಯರ ಕಳೆದು ಹೋದ ಪ್ರದೇಶಗಳನ್ನು ಮರಳಿ ಪಡೆಯುವಲ್ಲಿ ಇಮ್ಮಡಿ ತೈಲಪ ಯಶಸ್ವಿಯಾಗುತ್ತಾನೆ. ಈ ಅರಸರನ್ನು ಪಶ್ಚಿಮ ಚಾಲುಕ್ಯರೆಂದು ಕರೆದರು. ಪಶ್ಚಿಮ ಚಾಲುಕ್ಯರು ಸುಮಾರು 250 ವರ್ಷಗಳ ಕಾಲ ರಾಜ್ಯಭಾರ ನಡೆಸಿದರು. ಈ ಎಲ್ಲ ಕಾಲಘಟ್ಟದಲ್ಲಿ ಚೋಳರು ಮತ್ತು ಅವರ ದಾಯಾದಿಗಳಾದ ವೆಂಗಿಯ ಪೂರ್ವ ಚಾಲುಕ್ಯರ ಜೊತೆಗೆ ಸಂಘರ್ಷದಲ್ಲಿಯೆ ಕಳೆದರು. ಪಶ್ಚಿಮ ಚಾಲುಕ್ಯರ ಅರಸರಲ್ಲಿ ಸತ್ಯಾಶ್ರಯ (ಕ್ರಿ. ಶ. 997 – 1008), ಒಂದನೆ ಸೋಮೇಶ್ವರ (ಕ್ರಿ. ಶ. 1042 – 1068) ಮತ್ತು ನಾಲ್ಕನೆ ವಿಕ್ರಮಾದಿತ್ಯ (ಕ್ರಿ. ಶ. 1076 – 1126) ಅರಸರು ಪ್ರಸಿದ್ಧರಾಗಿದ್ದರು.

ಕಲ್ಯಾಣದ (ಪಶ್ಚಿಮ) ದ ಚಾಲುಕ್ಯರ ವಂಶಾವಳಿ :
ಕ್ರಿ. ಶ. 973 –997 : ಇಮ್ಮಡಿ ತೈಲಪ
ಕ್ರಿ. ಶ. 997 –1008 : ಸತ್ಯಾಶ್ರಯ
ಕ್ರಿ. ಶ. 1008 – 1015 : ಐದನೆ ವಿಕ್ರಮಾದಿತ್ಯ
ಕ್ರಿ. ಶ. 1015 – 1042 : ಇಮ್ಮಡಿ ಜಯಸಿಂಹ
ಕ್ರಿ. ಶ. 1042 – 1068 : ಒಂದನೆ ಸೋಮೇಶ್ವರ
ಕ್ರಿ. ಶ. 1068 – 1076 : ಇಮ್ಮಡಿ ಸೋಮೇಶ್ವರ
ಕ್ರಿ. ಶ. 1076 – 1126 : ಆರನೆ ವಿಕ್ರಮಾದಿತ್ಯ
ಕ್ರಿ. ಶ. 1126 – 1138 : ಮೂರನೆ ಸೋಮೇಶ್ವರ
ಕ್ರಿ. ಶ. 1138 – 1151 : ಇಮ್ಮಡಿ ಜಗದೇಕಮಲ್ಲ
ಕ್ರಿ. ಶ. 1150 – 1164 : ಮೂರನೆ ತೈಲಪ
ಕ್ರಿ. ಶ. 1163 – 1183 : ಮೂರನೆ ಜಗದೇಕಮಲ್ಲ
ಕ್ರಿ. ಶ. 1184 – 1200 : ನಾಲ್ಕನೆ ಸೋಮೇಶ್ವರ

1. ಇಮ್ಮಡಿ ತೈಲಪ (ಕ್ರಿ. ಶ. 973 –997) :
ಅಹಾವಮಲ್ಲ ಎನ್ನುವ ಹೆಸರನ್ನೂ ಹೊಂದಿದ್ದ ಇಮ್ಮಡಿ ತೈಲಪ ಚಾಲುಕ್ಯ ಸಾಮ್ರಾಜ್ಯವನ್ನು ಮರಳಿ ಸ್ಥಾಪನೆ ಮಾಡಿದ ದೊರೆ. ಈತನಿಗೆ “ನೂರ್ಮಡಿ ತೈಲಪ” ಮತ್ತು “ಸತ್ಯಾಶ್ರಯ ಕುಲತಿಲಕ” ಎಂದು ಬಿರುದುಗಳಿದ್ದವು. ಎರಡನೇ ಅಧ್ಯಾಯದ ಚಾಲುಕ್ಯರು ಕಲ್ಯಾಣವನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡು ಆಡಳಿತ ನಡೆಸಿದ್ದರಿಂದ ಇವರು ಕಲ್ಯಾಣದ ಚಾಲುಕ್ಯರೆಂದು ಪ್ರಸಿದ್ಧಿಯನ್ನು ಹೊಂದಿದರು. ಕನ್ನಡದ ಪ್ರಸಿದ್ಧ ಕವಿ “ರನ್ನ” ಈತನ ಆಸ್ಥಾನದಲ್ಲಿದ್ದನು.

2. ಸತ್ಯಾಶ್ರಯ (ಕ್ರಿ. ಶ. 997 –1008) :
“ಸತ್ತಿಗ” ಮತ್ತು “ಇರಿವಬೆಡಂಗ” ಎನ್ನುವ ಹೆಸರಿನಿಂದಲೂ ಕರೆಯಲ್ಪಡುತ್ತಿದ್ದ ಇಮ್ಮಡಿ ತೈಲಪನ ಜ್ಯೆಷ್ಠ ಪುತ್ರ ಸತ್ಯಾಶ್ರಯ ಕ್ರಿ. ಶ. 997 ಸಿಂಹಾಸನವನ್ನೇರುತ್ತಾನೆ. ಚೋಳರನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಸತ್ಯಾಶ್ರಯ ಕ್ರಿ. ಶ. 1006 ರಲ್ಲಿ ವೆಂಗಿ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಾನೆ. “ಅಜೀತ ಪುರಾಣ” ಮತ್ತು “ಗಧಾಯುದ್ಧ (ಸಾಹಸ ಭೀಮ ವಿಜಯ)” ದಂಥ ಅಮೋಘ ಕೃತಿಗಳನ್ನು ರಚಿಸಿದ “ರನ್ನ” ಈತನ ಆಸ್ಥಾನದಲ್ಲಿದ್ದ ಪ್ರಸಿದ್ಧ ಕವಿ. ತನ್ನ ಎರಡೂ ಕಾವ್ಯಗಳಲ್ಲಿ ಸತ್ಯಾಶ್ರಯನ ಉಲ್ಲೇಖವಿದೆ.

3. ಐದನೆ ವಿಕ್ರಮಾದಿತ್ಯ (ಕ್ರಿ. ಶ. 1008 – 1015) :
ಸತ್ಯಾಶ್ರಯನ ಸೋದರಳಿಯ ಐದನೆ ವಿಕ್ರಮಾದಿತ್ಯ ಕ್ರಿ. ಶ. 1008 ಸತ್ಯಾಶ್ರಯನ ನಂತರ ಪಟ್ಟಕ್ಕೆ ಬರುತ್ತಾನೆ.

4. ಇಮ್ಮಡಿ ಜಯಸಿಂಹ (ಕ್ರಿ. ಶ. 1015 – 1042) :
“ಜಗದೇಕಮಲ್ಲ” ಮತ್ತು “ಮಲ್ಲಿಕಾಮೋದ” ಎಂದು ಬಿರುದಾಂಕಿತನಾಗಿದ್ದ ಇಮ್ಮಡಿ ಜಯಸಿಂಹ ತನ್ನ ಅಣ್ಣ ಐದನೆ ವಿಕ್ರಮಾದಿತ್ಯನ ನಂತರ ಸಿಂಹಾಸನವನ್ನೇರುತ್ತಾನೆ. ಶೈವಧರ್ಮ ಪ್ರಚಾರಕನಾಗಿದ್ದ “ದೇವರ ದಾಸಿಮಯ್ಯ” ಈತನ ಕಾಲಘಟಗಟ್ಟದಲ್ಲಿ ಇದ್ದನೆಂದು ತಿಳಿದು ಬರುತ್ತದೆ. ಸುಪ್ರಸಿದ್ಧ ಸಂಸ್ಕೃತ ಕವಿ “ವಾದಿರಾಜ” ನೂ ಸಹ ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿದ್ದನು. ಇಮ್ಮಡಿ ಜಯಸಿಂಹನ ಪಟ್ಟದರಾಣಿ ಸುಗ್ಗಲಾದೇವಿ ದೇವರ ದಾಸಿಮಯ್ಯನವರ ಪರಮ ಭಕ್ತೆಯಾಗಿದ್ದಳು.

ಚೋಳರು ಆಕ್ರಮಣ ಮಾಡಿ ಸುಟ್ಟು ಹಾಕಿದ ರಾಜಧಾನಿ ಮಾನ್ಯಖೇಟವನ್ನು ಯೇತಗಿರಿ (ಕಲಬುರ್ಗಿ ಜಿಲ್ಲೆಯ ಇಂದಿನ ಯಾದಗಿರಿ) ಗೆ ಸ್ಥಳಾಂತರಿಸುತ್ತಾನೆ. ಕ್ರಿ. ಶ. 1042 ರಲ್ಲಿ ಮರಣ ಹೊಂದಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.

5. ಒಂದನೆ ಸೋಮೇಶ್ವರ (ಕ್ರಿ. ಶ. 1042 – 1068) :
“ಅಭಿನವಮಲ್ಲ” ಮತ್ತು “ತ್ರಿಲೋಕಮಲ್ಲ” ಎಂದು ಬಿರುದಾಂಕಿತನಾಗಿದ್ದ ಒಂದನೇ ಸೋಮೇಶ್ವರ ತನ್ನ ತಂದೆ ಇಮ್ಮಡಿ ಜಯಸಿಂಹನ ನಂತರ ಸಿಂಹಾಸನವನ್ನೇರುತ್ತಾನೆ. ಪಶ್ಚಿಮ ಚಾಲುಕ್ಯರಲ್ಲಿಯೇ ಅತ್ಯಂತ ಶ್ರೇಷ್ಠ ರಾಜನೆಂದು ಪ್ರಖ್ಯಾತಿಯನ್ನು ಪಡೆದವನು. ಹೊಯ್ಸಳ ವಂಶದ ರಾಜಕುಮಾರಿ “ಹೊಯ್ಸಳಾದೇವಿ” ಒಂದನೆ ಸೋಮೇಶ್ವರನ ಪಟ್ಟದ ರಾಣಿ. ಒಂದನೆ ಸೋಮೇಶ್ವರನು ಕಲ್ಯಾಣ (ಬೀದರ ಜಿಲ್ಲೆಯ ಇಂದಿನ ಬಸವ ಕಲ್ಯಾಣ) ವೆಂಬ ಪಟ್ಟಣವನ್ನು ನಿರ್ಮಿಸಿದನೆಂದು ತಿಳಿದು ಬರುತ್ತದೆ. ಈ ಕಲ್ಯಾಣವೇ ಪಶ್ಚಿಮ ಚಾಲುಕ್ಯರ ರಾಜಧಾನಿಯಾಗಿ ಮುಂದುವರೆಯಿತು. ಇದರಿಂದ ಪಶ್ಚಿಮದ ಚಾಲುಕ್ಯರಿಗೆ ಕಲ್ಯಾಣದ ಚಾಲುಕ್ಯರೆಂದೂ ಹೆಸರಾಯಿತು. ಇವನ ಆಡಳಿತದಲ್ಲಿ ಕಲ್ಯಾಣವೆಂಬ ಪಟ್ಟಣವು ಶಾಂತಿ, ಸಮೃದ್ಧಿ, ಸಂಪದ್ಭರಿತವಾಗಿ ವೈಭವದ ದಿನಗಳನ್ನು ಕಂಡಿತು. ಸಾಹಿತ್ಯ ಸಂಸ್ಕೃತಿ ಕಲೆಗಳ ಬೀಡಾಗಿ ಅನೇಕ ಕವಿಗಳಿಗೆ ಮತ್ತು ಕಲಾವಿದರಿಗೆ ಆಶ್ರಯವನ್ನು ನೀಡಿತು. ಸಾಮಾಜಿಕ ಮತ್ತು ಧಾರ್ಮಿಕ ಕ್ರಾಂತಿಯಿಂದ ಬಸವಾದಿ ಶರಣರು ಈ ನಾಡಿನಲ್ಲಿ ತಮ್ಮ ಅಸ್ತಿತ್ವವನ್ನು ಕಂಡುಕೊಂಡರು.

6. ಇಮ್ಮಡಿ ಸೋಮೇಶ್ವರ (ಕ್ರಿ. ಶ. 1068 – 1076) :
ಅಣ್ಣಿಗೇರಿ (ಈಗಿನ ಗದಗ ಜಿಲ್ಲೆಯ ಪ್ರದೇಶ) ಪ್ರಾಂತ್ಯದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಇಮ್ಮಡಿ ಸೋಮೇಶ್ವರ ತನ್ನ ತಂದೆ ಒಂದನೆ ಸೋಮೇಶ್ವರನ ನಂತರ ಪಟ್ಟಕ್ಕೆ ಬರುತ್ತಾನೆ.

7. ಆರನೆ ವಿಕ್ರಮಾದಿತ್ಯ (ಕ್ರಿ. ಶ. 1076 – 1126) :
ಕ್ರಿ. ಶ. 1076 ರಿಂದ 1126 ರ ವರೆಗೆ “ತ್ರಿಭುವನಮಲ್ಲ” ಎಂದು ಬಿರುದಾಂಕಿತನಾಗಿದ್ದ ಆರನೇ ವಿಕ್ರಮಾದಿತ್ಯ ಕಲ್ಯಾಣದ ಚಾಲುಕ್ಯರ ಅರಸರಲ್ಲಿಯೇ ಅತ್ಯಂತ ಪ್ರಭುದ್ಧ ಮತ್ತು ಬಲಶಾಲಿ ಅರಸ. ಸರಿ ಸುಮಾರು 50 ವರ್ಷ ರಾಜ್ಯಭಾರವನ್ನು ನಡೆಸಿದ ಆರನೇ ವಿಕ್ರಮಾದಿತ್ಯನ ಆಡಳಿತದಲ್ಲಿ ಶಾಂತಿ, ಸಹನೆ, ಪರಂಪರೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಅಭಿವೃದ್ಧಿಯಾದ ಐತಿಹಾಸಿಕವಾದ ಕಾಲಘಟ್ಟ. ಈತನ ಹೆಸರಿನಲ್ಲಿ “ವಿಕ್ರಮನಾಮ ಸಂವತ್ಸರ” ಎನ್ನುವ ಸಂವತ್ಸರವಿದೆ. ಪ್ರಜೆಗಳಿಂದ ಅತ್ಯಂತ ಗೌರವದಿಂದ ಪೂಜಿಸಲ್ಪಟ್ಟ ಆರನೇ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಬಿಲ್ಹಣ ಎಂಬ ಶ್ರೇಷ್ಠ ಕವಿಯಿದ್ದ. ಬಿಲ್ಹಣನ ಗ್ರಂಥಗಳಿಂದ ಆರನೇ ವಿಕ್ರಮಾದಿತ್ಯನ ರಾಜ್ಯದ ವೈಭವ, ಅವನ ಶೂರತ್ವ, ಸಂಸ್ಕೃತಿ ಪರಂಪರೆಗಳ ಚಿತ್ರಣ ಹೇರಳವಾಗಿ ದೊರೆಯುತ್ತದೆ.

ಜನೈರವಜ್ಞಾತ | ಕವಾಟಮುದ್ರಣೈಃ ||
ಕೃಪಾಸುರಕ್ಷಾ | ವಿಮುಖೈರುಸುಪ್ಯತ್ ||
ಕರಾವಿಶಂತಿಷ್ಮಗವಾಕ್ಷ | ಪಧೈರ್ನತಸ್ಕರಾ ||

ಪ್ರಜೆಗಳು ರಾತ್ರಿವೇಳೆಯಲ್ಲಿ ಮನೆಯ ಬಾಗಿಲುಗಳನ್ನು ಹಾಕೊಕೊಳ್ಳುತ್ತಿರಲಿಲ್ಲ ಯಾಕೆಂದರೆ ಕಳ್ಳ-ಕಾಕರ ಭಯ ಇರಲಿಲ್ಲ. ಚಂದ್ರನ ಬೆಳಕು ಮನೆಯನ್ನು ಪ್ರವೇಶಿಸುತ್ತಿತ್ತೇ ವಿನಃ ಕಳ್ಳರು ಮನೆಯನ್ನು ಪ್ರವೇಶ ಮಾಡುತ್ತಿರಲಿಲ್ಲ ಎಂದು ಬಿಲ್ಹಣ ವರ್ಣಿಸಿದ್ದಾನೆ. ಯುದ್ಧನಿರತನಾಗಿದ್ದಾಗಲೇ ತಂದೆಯ ನಿಧನದ ವಾರ್ತೆ ಕೇಳಿ ರಾಜಧಾನಿಯಾದ ಕಲ್ಯಾಣಕ್ಕೆ ಬರುವಷ್ಟರಲ್ಲಿ ಅವನ ಮಗ ಮೂರನೆ ಸೋಮೇಶ್ವರ ಸಿಂಹಾಸನವೇರಿದ್ದನು. ಸಂಬಂಧಗಳು ವಿಪರೀತಕ್ಕ ಹೋದಾಗ ಆರನೇ ವಿಕ್ರಮಾದಿತ್ಯನು ಕಂಚಿಯ ಕಡೆಗೆ ಹೋಗಿ ಮತ್ತೆ ತಿರುಗಿ ಬನವಾಸಿಗೆ ಬಂದು ನೆಲೆ ನಿಂತನೆಂದು ಇತಿಹಾಸದಿಂದ ತಿಳಿದು ಬರುತ್ತದೆ.

8. ಮೂರನೆ ಸೋಮೇಶ್ವರ (ಕ್ರಿ. ಶ. 1126 – 1138) :
“ಭೂಲೋಕಮಲ್ಲ” ಎಂದು ಬಿರುದಾಂಕಿತನಾಗಿದ್ದ ಮೂರನೇಯ ಸೋಮೇಶ್ವರನು ತನ್ನ ತಂದೆ ಆರನೇ ವಿಕ್ರಮಾದಿತ್ಯನನ್ನು ಬದಿಗೆ ಸರಿಸಿ ಕ್ರಿ. ಶ. 1126 ರಲ್ಲಿ ಸಿಂಹಾಸನವನ್ನೇರಿದನು. ಹೊಯ್ಸಳ ರಾಜ ವಿಷ್ಣುವರ್ಧನನು ದಾಳಿ ಮಾಡಿದಾಗ ಆತನನ್ನು ಯಶಸ್ವಿಯಾಗಿ ಹಿಮ್ಮಟ್ಟಿಸಿದನು.

ಮೂರನೇಯ ಸೋಮೇಶ್ವರನ ಆಳ್ವಿಕೆಯಲ್ಲಿ ಕಲೆ ಸಾಹಿತ್ಯ ಮತ್ತು ಸಾಮಾಜಿಕ ಬೆಳವಣಿಗೆಗೆ ಪ್ರಾಶಸ್ತ್ಯ ನೀಡಲಾಗಿತ್ತು. ಸ್ವತಃ ಮೂರನೇ ಸೋಮೇಶ್ವರನು ಕವಿಯಾಗಿದ್ದು “ಮನೋಲ್ಲಾಸ (ಅಭಿಲಾಷಿತಾರ್ಥ ಚಿಂತಾಮಣಿ)” ಎನ್ನುವ ಸಂಸ್ಕೃತದಲ್ಲಿ ಕೃತಿಯನ್ನು ರಚಿಸಿದ್ದಾನೆ. ಈ ಕೃತಿಯಲ್ಲಿ ವಿಜ್ಞಾನ, ರಾಜಕೀಯ, ಶಸ್ರಾತ್ರ ವಿದ್ಯೆ, ಕುದುರೆ ಸವಾರಿ, ಆನೆಗಳ ಸವಾರಿ, ಕವನ, ಸಂಗೀತ, ಜ್ಯೋತಿಷ್ಯಗಳ ಹೇರಳವಾದ ನಿರೂಪಣೆ ಇದೆ.

9. ಇಮ್ಮಡಿ ಜಗದೇಕಮಲ್ಲ (ಕ್ರಿ. ಶ. 1138 – 1151) :
ಮೂರನೆ ಸೋಮೇಶ್ವರನ ನಂತರ ಇಮ್ಮಡಿ ಜಗದೇಕಮಲ್ಲ ಪಟ್ಟಕ್ಕೆ ಬರುತ್ತಾನೆ. ಸುಸಂಸ್ಕೃತ ಕವಿಯಾಗಿದ್ದ ಇಮ್ಮಡಿ ಜಗದೇಕಮಲ್ಲನು “ಸಂಗೀತ ಚೂಡಾಮಣಿ” ಎನ್ನುವ ಸಂಗೀತವನ್ನು ಕುರಿತು ಬರೆದ ಸಂಸ್ಕೃತ ಕಾವ್ಯವನ್ನು ರಚಿಸಿದ್ದಾನೆ. ಆದರೆ ಈತನ ಕಾಲಾನಂತರದಲ್ಲಿ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯವು ಇಳಿಮುಖವನ್ನು ಕಾಣಲಾರಂಭಿಸಿತು.
10. ಮೂರನೆ ತೈಲಪ (ಕ್ರಿ. ಶ. 1150 – 1164) :
ಇಮ್ಮಡಿ ಜಗದೇಕಮಲ್ಲನ ನಂತರ ಮೂರನೆ ತೈಲಪನು ಸಿಂಹಾಸನವನ್ನೇರಿದನು. ಕಾಕತೀಯ ಅರಸ ಇಮ್ಮಡಿ ಪೊಲ್ಲನು ಈತನ ಮೇಲೆ ದಾಳಿ ಮಾಡಿ ಸೋಲಿಸಿ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯವನ್ನು ವಶಪಡಿಸಿಕೊಂಡನಲ್ಲದೆ ಈತನನ್ನು ಬಂಧಿಯಾಗಿರಿಸಿಕೊಂಡನು. ಆದರೆ ಮುಂದೆ ಬಿಡುಗಡೆಯಾದ ಮೂರನೆ ತೈಲಪ ಕಲ್ಯಾಣವನ್ನು ತೊರೆದು ಅಣ್ಣಿಗೇರಿಯಲ್ಲಿ ಆಶ್ರಯ ಪಡೆದನು. ಇದೇ ಸಮಯವನ್ನು ಕಾಯುತ್ತಿದ್ದ ಈತನ ದಂಡನಾಯಕ “ಕಳಚೂರಿ ಬಿಜ್ಜಳ” ಸ್ವತಂತ್ರನಾದನು ಮತ್ತುಅಣ್ಣಿಗೇರಿಗೆ ಬಂದು ದಾಳಿ ಮಡಿದಾಗ ಬನವಾಸಿಗೆ ಹೋಗಿ ಆಶ್ರಯವನ್ನು ಪಡೆಯುತ್ತಾನೆ. ಇಲ್ಲಿಂದ ಪಶ್ಚಿಮ ಚಾಲುಕ್ಯರ ಸಾಮ್ರಾಜ್ಯವು ಕೊನೆಗೊಳ್ಳಲು ಆರಂಭವಾಯಿತು. ಇದರಿಂದ ಪ್ರೇರಿತರಾದ ಮೂರನೇ ತೈಲಪನ ಸಾಮಂತ ರಾಜರಾದ ಸೇವುಣರು ಮತ್ತು ಹೊಯ್ಸಳರು ತಿರುಗಿ ಬಿದ್ದು ತಮ್ಮ ತಮ್ಮ ಪ್ರದೇಶಗಳನ್ನು ಹಿಂತಿರುಗಿ ವಶಪಡಿಸಿಕೊಂಡರು. ಮೂರನೆ ತೈಲಪನು ಯುದ್ಧದಲ್ಲಿ ಹೊಯ್ಸಳ ರಾಜ “ವೀರ ನರಸಿಂಹ” ನಿಂದ ಹತನಾಗುತ್ತಾನೆ.

11. ಮೂರನೆ ಜಗದೇಕಮಲ್ಲ (ಕ್ರಿ. ಶ. 1163 – 1183) :
ಮೂರನೆ ತೈಲಪನ ನಂತರ ಪಟ್ಟಕ್ಕೇರಿದವನು ಮೂರನೆ ಜಗದೇಕಮಲ್ಲ. ಅಷ್ಟೊತ್ತಿಗಾಗಲೆ ಪಶ್ಚಿಮ ಚಾಲುಕ್ಯರ ಆಡಳಿತ ಶಿಥಿಲಗೊಂಡು ಕಳಚೂರಿಯ ಬಿಜ್ಜಳ ಕಲ್ಯಾಣವನ್ನು ತನ್ನ ವಶಕ್ಕೆ ತೆಗೆದುಕೊಂಡಿದ್ದನು.

12. ನಾಲ್ಕನೆ ಸೋಮೇಶ್ವರ (ಕ್ರಿ. ಶ. 1184 – 1200) :
ನಾಲ್ಕನೆ ಸೋಮೇಶ್ವರ ಪಶ್ಚಿಮ ಚಾಲುಕ್ಯರ ಕೊನೆಯ ಅರಸ. ಕಲ್ಯಾಣವನ್ನು ಚಶಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾನೆ. ಆದರೆ ಇತರೆ ಸಾಮಂತ ಅರಸರನ್ನು ಕಟ್ಟಿ ಹಾಕಲು ವಿಫಲನಾಗುತ್ತಾನೆ. ಅಂತಿಮವಾಗಿ ಸೇವುಣರು, ಹೊಯ್ಸಳರು ಮತ್ತು ಕಾಕತೀಯ ರಾಜರು ಇಡೀ ಪಶ್ಚಿಮ ಚಾಲುಕ್ಯ ಸಾಮ್ರಾಜ್ಯವನ್ನು ಮೂರು ಭಾಗ ಮಾಡಿ ಹಂಚಿಕೊಳ್ಳುವುದರ ಮೂಲಕ ಪಶ್ಚಿಮ ಚಾಲುಕ್ಯರ ವೈಭವದ ಸಾಮ್ರಾಜ್ಯ ಕ್ರಿ. ಶ. 1180 ರಲ್ಲಿ ಅಂತ್ಯ ಕಂಡಿತು.

ವಿಜಯಕುಮಾರ ಕಮ್ಮಾರ
ತುಮಕೂರು – 
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com

Don`t copy text!