ವಾರಂಗಲ್ಲದ ಕಾಕತೀಯರು
ವಾರಂಗಲ್ಲಿನ ಕಾಕತೀಯರು (ಕ್ರಿ. ಶ. 1083 – 1323) :
ದಕ್ಷಿಣ ಭಾರತದ ಇಂದಿನ ಆಂಧ್ರಪದೇಶ ಮತ್ತು ತೆಲಂಗಾಣ ಸೇರಿದಂತೆ ಹಲವು ತೆಲುಗು ಭಾಷಿಕ ಪ್ರಾಂತಗಳಲ್ಲಿ ಮೂರುವರೆ ಶತಮಾನಗಳ ಕಾಲ ಕಾಕತೀಯ ವಂಶದವರು ಕ್ರಿ. ಶ. 1083 ರಿಂದ ಕ್ರಿ. ಶ. 1323 ರವರೆಗೆ ವೈಭವದ ಸಾಮ್ರಾಜ್ಯವನ್ನು ಆಳಿದ ಕುರುಹುಗಳು ಇತಿಹಾಸದಲ್ಲಿ ದಾಖಲಾಗಿವೆ. ವಿಜಯನಗರದ ವೈಭವಯುತ ಸಾಮ್ರಾಜ್ಯವನ್ನು ಕರ್ನಾಟಕದವರು ಮತ್ತೆ ಮತ್ತೆ ಮೆಲುಕು ಹಾಕುವಂತೆ ತೆಲುಗು ಭಾಷಿಕರು ಕಾಕತೀಯ ಸಾಮ್ರಾಜ್ಯವನ್ನು ಮೆಲುಕು ಹಾಕುತ್ತಿರುತ್ತಾರೆ. “ಕಾಕತಿ” ಗ್ರಾಮ ಮತ್ತು ಗ್ರಾಮ ದೇವತೆ “ಕಾಕತೆಮ್ಮ” ಕಾಕತೀಯ ವಂಶದ ಮೂಲವೆಂದು ಹೇಳಲಾಗುತ್ತದೆ.
ಕ್ರಿ. ಶ. 950 ರಲ್ಲಿ “ವೆನ್ನಯ್ಯ ಗುಂಡ” ಎನ್ನುವವನಿಂದ ಕಾಕತೀಯರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿತು ಎಂದು ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ರಾಷ್ಟ್ರಕೂಟರ ಅರಸು ಇಮ್ಮಡಿ ಕೃಷ್ಣನೊಂದಿಗೆ ನಡೆದ ಯುದ್ಧದಲ್ಲಿ ಹತನಾದಾಗ ಈತನ ಮಗ ಈರೇಯ ಕಾಕತಿಯನ್ನು ರಾಜಧಾನಿಯನ್ನಾಗಿಸಿಕೊಂಡು ಸಿಂಹಾಸನ್ನು ಏರುತ್ತಾನೆ. ಬೇತಾರಾಜ, ಹನುಮಕೊಂಡ ಗ್ರಾಮವನ್ನು ಪಶ್ಚಿಮ ಚಾಲುಕ್ಯರ ಅರಸು ಒಂದನೆ ಸೋಮೇಶ್ವರನಿಂದ ದತ್ತಿಯಾಗಿ ಸ್ವೀಕರಿಸಿದ್ದ ಒಂದನೆಯ ಪ್ರೋಲ, ವಾರಂಗಲ್ಲನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡ ಇಮ್ಮಡಿ ಬೇತಾರಾಜ, ಪಶ್ಚಿಮ ಚಾಲುಕ್ಯರಿಂದ ಕಾಕತೀಯ ರಾಜ್ಯವನ್ನು ಸ್ವತಂತ್ರಗೊಳಸಿ ಕಾಕತೀಯ ಅರಸರಲ್ಲಿ ಉನ್ನತ ಸ್ಥಾನವನ್ನಲಂಕರಿಸಿದ್ದ ಇಮ್ಮಡಿ ಬೇತಾರಾಜನ ಕಿರಿಯ ಸಹೋದರ ಇಮ್ಮಡಿ ಪ್ರೋಲ, ಮುಂತಾದವರು ಕಾಕತೀಯರ ಸಾಮ್ರಾಜ್ಯದ ವೈಭವದ ದಿನಗಳನ್ನು ಕಟ್ಟಿ ಬೆಳೆಸಿದವರು. ಇವರ ಸಾಮ್ರಾಜ್ಯದಲ್ಲಿ ಇಷ್ಟೆಲ್ಲ ಪ್ರಸಿದ್ಧ ರಾಜರಿದ್ದರೂ ಅವರಲ್ಲಿ ರಾಣಿ ರುದ್ರಮ್ಮದೇವಿಗೆ ವಿಶೇಷ ಸ್ಥಾನಮಾನವಿದೆ.
ಕಾಕತೀಯ ಅರಸರ ಕಲೆ, ಸಾಹಿತ್ಯ ಮತ್ತು ವಾಸ್ತುಶಿಲ್ಪಕ್ಕೆ ಪ್ರೋತ್ಸಾಹ ಮತ್ತು ಆಶ್ರಯ ಅವಿಸ್ಮರಣೀಯ ಮತ್ತು ಅನುಪಮ. ಹನುಮಕೊಂಡದಲ್ಲಿ ನಿರ್ಮಾಣವಾಗಿರುವ “ವೆಯ್ಯಿ ಸ್ಥಂಬಾಲ ಗುಡಿ” ಅಂದರೆ ಸಾವಿರ ಕಂಭಗಳ ಶಿವನ ದೇವಾಲಯ ಅತ್ಯದ್ಭುತ ಶಿಲ್ಪಕಲೆಯ ಕಲಾಕೃತಿ. ಸುಪ್ರಸಿದ್ಧ ಕೊಹಿನೂರ ವಜ್ರ ಕೃಷ್ಣಾ ನದಿ ದಡದಲ್ಲಿರುವ ಕೋಲಗೂರು ಬಳಿ ಇವರ ಕಾಲಘಟ್ಟದಲ್ಲಿಯೇ ಪತ್ತೆ ಹಚ್ಚಲಾಗಿತ್ತು. ವಾರಂಗಲ್ ನಲ್ಲಿರುವ ಕಾಕತೀಯರ ಕೋಟೆಯಂತೂ ವಾಸ್ತುಶಿಲ್ಪದ ಮೇರು ಶಿಲ್ಪ ಕಲಾಕೃತಿ.
“ಏಕಶಿಲಾ ನಗರಂ” ಎಂದೇ ಪ್ರಖ್ಯಾತಿಯನ್ನು ಹೊಂದಿದ ಕಾಕತೀಯರ ರಾಜಧಾನಿ “ಒರುಗಲ್ಲು” (ಈಗಿನ ತೆಲಂಗಾಣ ರಾಜ್ಯದ ವಾರಂಗಲ್ ಜಿಲ್ಲಾ ಕೇಂದ್ರಸ್ಥಾನ) ಅತಿ ವಿಶಿಷ್ಠತೆಯಿಂದ ಕೂಡಿದ ಮತ್ತು ವೈಭವಯುತವಾಗಿ ಮೆರೆದ ಪಟ್ಟಣ. ಅಂತೆಯೆ ಕಾಕತೀಯರು ಅದ್ಭುತವಾಗಿ ನಿರ್ಮಿಸಿದ್ದಾರೆನ್ನಲಾಗುವ ಕೋಟೆಯನ್ನು ಇಂದಿಗೂ ಇಲ್ಲಿ ಕಾಣಬಹುದು. ಇದು “ವಾರಂಗಲ್ ಕೋಟೆ” ಎಂತಲೆ ಪ್ರಸಿದ್ಧವಾಗಿದ್ದು ನಗರದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ.
ಕಾಕತೀಯರ ಕೊಡುಗೆ ಎಷ್ಟು ಅನುಪಮ, ಐತಿಹಾಸಿಕ ಮತ್ತು ಅದ್ಭುತ ಎಂದರೆ “ಕಾಕತೀಯ ತೋರಣ” ಅಥವಾ ಇಲ್ಲಿರುವ “ಕಾಕತೀಯ ಕಮಾನು (ಆರ್ಚ)” ತೆಲಂಗಾಣ ಸರ್ಕಾರದ ಅಧಿಕೃತ ಸರ್ಕಾರಿ ಲಾಂಛನವಾಗಿದೆ. ಹಾಗಾಗಿ ತೆಲಂಗಾಣದ ಐತಿಹಾಸಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವ ತಾಣವಾಗಿ ವಾರಂಗಲ್ ನಗರ ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ. ಮೂಲತಃ ಶೈವರಾಗಿದ್ದ ಕಾಕತೀಯರು ಆಳಿದ ಈ ನಾಡಿನಲ್ಲಿ 9 ನೇ ಶತಮಾನದಲ್ಲಿ ಜೈನರ ಪ್ರಭಾವದಿಂದ ಪ್ರೇರಿತರಾಗಿದ್ದು ಕಾಲಕ್ರಮೇಣ ಜೈನರ ಪ್ರಭಾವ ಕಡಿಮೆಯಾಗಿ ಶಿವನ ಆರಾಧಕರಾದ ಶೈವರ ಪ್ರಭಾವ ಹೆಚ್ಚಾಯಿತು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಕ್ರಿ. ಶ. 1396 ರಲ್ಲಿ ದೆಹಲಿಯ ಸುಲ್ತಾನರು ವಾರಂಗಲ್ಲಿನ ಮೇಲೆ ಅಪ್ರಚೋದಿತ ದಾಳಿಯನ್ನು ಮಾಡಿ ಸೋಲನ್ನು ಅನುಭವಿಸುತ್ತಾರೆ.
ಕ್ರಿ. ಶ. 1175 ರಲ್ಲಿ ರುದ್ರದೇವನು ನಿರ್ಮಾಣ ಮಾಡಿದ್ದೆಂದು ಹೇಳಲಾದ ಸಾವಿರ ಸ್ಥಂಭಗಳ ಸುಂದರ ದೇವಾಲಯ ಯುನೆಸ್ಕೋದ ವಿಶ್ವ ಪರಂಪರೆಯ ಕಲಾಕೃತಿಗಳಿಗೆ ಸೇರ್ಪಡೆಯಾಗಿದೆ.
ವಾರಂಗಲ್ ನ ಕಾಕತೀಯರ ವಂಶಾವಳಿ :
ಕ್ರಿ. ಶ. 950 : ಒಂದನೆ ವೆನ್ನಯ್ಯ ಗುಂಡ
ಕ್ರಿ. ಶ. 950 – 956 : ಸಿಂಘಣ
: ಇಮ್ಮಡಿ ಗುಂಡ
: ಮೂರನೆ ಗುಂಡ
: ಈರೇಯ
ಕ್ರಿ. ಶ. 956 – 995 : ನಾಲ್ಕನೆ ಗುಂಡ
ಕ್ರಿ. ಶ. 995 – 1051 : ಒಂದನೆ ಬೇತ
ಕ್ರಿ. ಶ. 1052 – 1076 : ಪ್ರೋಳ
ಕ್ರಿ. ಶ. 1076 – 1108 : ಇಮ್ಮಡಿ ಬೇತ
ಕ್ರಿ. ಶ. 1108 – 1116 : ದುರ್ಗರಾಜ
ಕ್ರಿ. ಶ. 1116 – 1157 : ಇಮ್ಮಡಿ ಪ್ರೋಳ
ಕ್ರಿ. ಶ. 1158 – 1195 : ರುದ್ರದೇವ
ಕ್ರಿ. ಶ. 1195 – 1199 : ಮಹಾದೇವ
ಕ್ರಿ. ಶ. 1199 – 1262 : ಗಣಪತಿದೇವ
ಕ್ರಿ. ಶ. 1262 – 1289 : ರಾಣಿ ರುದ್ರಮ್ಮದೇವಿ
ಕ್ರಿ. ಶ. 1289 – 1323 : ಪ್ರತಾಪರುದ್ರ
ಕ್ರಿ. ಶ. 950 ರಲ್ಲಿ “ಒಂದನೆ ವೆನ್ನಯ್ಯ ಗುಂಡ” ಎನ್ನುವವನಿಂದ ಕಾಕತೀಯರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬಂದಿತು ಎಂದು ಐತಿಹಾಸಿಕ ದಾಖಲೆಗಳಲ್ಲಿ ಉಲ್ಲೇಖವಾಗಿದೆ. ರಾಷ್ಟ್ರಕೂಟರ ಅರಸು ಇಮ್ಮಡಿ ಕೃಷ್ಣನೊಂದಿಗೆ ನಡೆದ ಯುದ್ಧದಲ್ಲಿ ಹತನಾದಾಗ ಈತನ ಮಗ ಈರೇಯ ಕಾಕತಿಯನ್ನು ರಾಜಧಾನಿಯನ್ನಾಗಿಸಿಕೊಂಡು ಸಿಂಹಾಸನ್ನು ಏರುತ್ತಾನೆ. ಇನ್ನೂ ಒಂದು ಹೆಜ್ಜೆ ಹಿಂದೆ ಹೋದರೆ, ಸಿಂಘಣ, ಇಮ್ಮಡಿ ಗುಂಡ, ಮೂರನೇಯ ಗುಂಡ ಮತ್ತು ನಾಲ್ಕನೆ ಗುಂಡ ರಾಜರುಗಳ ಪ್ರಸ್ತಾಪ ಬರುತ್ತದೆ, ಆದರೆ ಇವರ ಆಡಳಿತದ ಬಗ್ಗೆ ಯಾವ ಕುರುಹುಗಳು ಸಿಕ್ಕ ಬಗ್ಗೆ ಇತಿಹಾಸದಲ್ಲಿ ನಮ್ಮಗೆ ಸಿಗುವುದಿಲ್ಲ. ಒಂದನೆ ಬೇತನಿಂದ ಕಾಕತೀಯರ ಆಡಳಿತದ ಕುರುಹುಗಳು ನಮಗೆ ಇತಿಹಾಸದಲ್ಲಿ ಲಭ್ಯವಾಗುತ್ತವೆ.
1. ಒಂದನೆ ಬೇತ (ಕ್ರಿ. ಶ. 995 – 1051) :
ಕ್ರಿ. ಶ. 995 ರಲ್ಲಿ ನಾಲ್ಕನೆ ಗುಂಡನ ನಂತರ ಪಟ್ಟಕ್ಕೆ ಬಂದವನು ಈತನ ಪುತ್ರ ಒಂದನೆ ಬೇತ. ಚಾಲುಕ್ಯ ಮತ್ತು ಚೋಳರಲ್ಲಿ ಅಂತಃಕಲಹವುಂಟಾದಾಗ ಅವರಿಂದ ಸ್ವತಂತ್ರನಾಗಿ ತನ್ನದೇ ಆದ ಸಂಸ್ಥಾನವನ್ನು ಸ್ಥಾಪಿಸಿದ ಎಂದು ತಿಳಿದುಬರುತ್ತದೆ.
2. ಒಂದನೆ ಪ್ರೋಳ (ಕ್ರಿ. ಶ. 1052 – 1076) :
ಒಂದನ ಬೇತನ ಮಗ ಒಂದನೆ ಪ್ರೋಳ ಕ್ರಿ.ಶ. 1052 ರಲ್ಲಿ ಸಿಂಹಾಸನವನ್ನೇರುತ್ತಾನೆ. ಕಲ್ಯಾಣ (ಪಶ್ಚಿಮ) ದ ಚಾಲುಕ್ಯರ ಅರಸ ಒಂದನೇ ಸೋಮೇಶ್ವರನಿಂದ ಪಡೆದ ಹನುಮಕೊಂಡವನ್ನು ರಾಜಧಾನಿಯನ್ನಾಗಿಸಿಕೊಂಡು ಆಡಳಿತ ನಡೆಸುತ್ತಾನೆ. ಸಣ್ಣ ವಯಸ್ಸಿನಲ್ಲಿಯೇ ದಂಡಯಾತ್ರೆ ಕೈಗೊಂಡಿದ್ದ ಕಲ್ಯಾಣ (ಪಶ್ಚಿಮ) ದ ಚಾಲುಕ್ಯರ ಯುವರಾಜ ಆರನೆ ವಿಕ್ರಮಾದಿತ್ಯನ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದ ಒಂದನೆ ಪ್ರೋಳ ಈತನೊಂದಿಗೆ ಕೊಂಕಣ, ಚೋಳ, ವೆಂಗಿ ಮತ್ತು ಚಿತ್ರಕೂಟರ ಯುದ್ಧಗಳಲ್ಲಿ ಭಾಗವಹಿಸಿ ಜಯಶಾಲಿಯಾಗಲು ಸಹಾಯ ಮಾಡಿದ್ದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಅತ್ಯುತ್ತಮ ಆಡಳಿತವನ್ನು ನೀಡಿದ ಒಂದನೆ ಪ್ರೋಳನಿಂದ ಕಾಕತೀಯ ಅರಸರ ವೈಭವದ ದಿನಗಳ ಆರಂಭಕ್ಕೆ ಚಾಲನೆ ಸಿಕ್ಕಿತೆಂದು ಹೇಳಬಹುದು.
3. ಇಮ್ಮಡಿ ಬೇತ (ಕ್ರಿ. ಶ. 1076 – 1108) :
ಪ್ರೋಳನ ನಂತರ ಈತನ ಮಗ ಇಮ್ಮಡಿ ಬೇತ ರಾಜನಾಗಿ ಕ್ರಿ. ಶ. 1076 – 1108 ಇಮ್ಮಡಿ ರವರೆಗೆ ಕಾಕತೀಯರ ರಾಜ್ಯವನ್ನು ಮುನ್ನಡೆಸುತ್ತಾನೆ. ಈತ ವಾರಂಗಲ್ಲನ್ನು ತನ್ನ ರಾಜಾಧಾನಿಯನ್ನಾಗಿಸಿಕೊಂಡಿದ್ದ. ಚಾಲುಕ್ಯರ ಅರಸು ವಿಕ್ರಮಾದಿತ್ಯನ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದ ಇಮ್ಮಡಿ ಬೇತ, ಚೋಳ ರಾಜ ಒಂದನೇ ಕುಲೊತ್ತುಂಗ ಚೋಳನೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಸಹಕಾರ ನೀಡದ್ದಕ್ಕಾಗಿ ನಬ್ಬಿಸಾಯಿಯ ಸಾವಿರ ಪ್ರಾಂತ್ಯಗಳನ್ನು ನೀಡಿದನೆಂದು ತಿಳಿದು ಬರುತ್ತದೆ. ಇಮ್ಮಡಿ ಬೇತನಿಗೆ “ತ್ರಿಭುವನ ಮಲ್ಲ” ಎನ್ನುವ ಬಿರುದನ್ನೂ ನೀಡಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ.
4. ದುರ್ಗರಾಜ (ಕ್ರಿ. ಶ. 1108 – 1116) :
5. ಇಮ್ಮಡಿ ಪ್ರೋಳ (ಕ್ರಿ. ಶ. 1116 – 1157) :
ಇಮ್ಮಡಿ ಪ್ರೋಳ ಅತ್ಯಂತ ಮಾಹತ್ವಾಕಾಂಕ್ಷಿ ಮತ್ತು ಯುದ್ಧಪ್ರೇಮಿ ದೊರೆಯಾಗಿದ್ದನು. ಈತನ ಕಾಲಘಟ್ಟದಲ್ಲಿ ಚೋಳರ ಪ್ರಾಬಲ್ಯವು ಕಡಿಮೆಯಾಗಿದ್ದಂತೆ ಇತಿಹಾಸದಿಂದ ಕಂಡುಬರುತ್ತದೆ. ಇಂಥ ಸನ್ನಿವೇಶದಲ್ಲಿ ಇಮ್ಮಡಿ ಪ್ರೋಳನು ತನ್ನ ಸಾಮ್ರಾಜ್ಯವನ್ನು ಗೋದಾವರೀ ಕೃಷ್ಣಾ ನದಿಗಳ ನಡುವಣ ಭೂಭಾಗದವರೆಗೂ ವಿಸ್ತಾರ ಮಾಡುವಲ್ಲಿ ಸಫಲತೆಯನ್ನು ಕಂಡುಕೊಂಡನು.
6. ರುದ್ರದೇವ (ಕ್ರಿ. ಶ. 1158 – 1195) :
12 ನೇ ಶತಮಾನದಲ್ಲಿ ನಡೆದ ಕಲ್ಯಾಣದ ಕ್ರಾಂತಿಯ ನಂತರ ಬಹುತೇಕ ಶರಣರಿಗೆ ಆಶ್ರಯ ನೀಡಿದ ಕಾಕತೀಯರ ಅರಸು ರುದ್ರದೇವ ಅತ್ಯಂತ ಮಹತ್ವದ ಸ್ಥಾನವನ್ನು ಪಡೆಯುತ್ತಾನೆ. ಕಲ್ಯಾಣದಿಂದ ಸಾಗಿಬಂದ ಸಾವಿರಾರು ಶರಣರಿಗಾಗಿಯೇ ಆಶ್ರಯ ತಾಣಗಳನ್ನು ನಿರ್ಮಿಸಿ ಊಟ ವಸತಿ ನೀಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.
ಇಮ್ಮಡಿ ಪ್ರೋಳನ ಪುತ್ರನಾದ ರುದ್ರದೇವ ಕ್ರಿ. ಶ. 1158 ಪಟ್ಟಾಧಿಕಾರಕ್ಕೆ ಬರುತ್ತಾನೆ. ರುದ್ರದೇವನು ತೋಟನಾಯಕರು, ತೆಲುಗು ಚೋಳರು ಮತ್ತು ಚಾಲುಕ್ಯ ಅರಸರನ್ನು ಸೋಲಿಸಿ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ಬಲಗೊಳಿಸಿದನು. ವಾರಂಗಲ್ಲನ್ನು ನೂತನವಾಗಿ ನಿರ್ಮಿಸಿ ರಾಜಧಾನಿಯಗಿದ್ದ ಹನುಮಕೊಂಡದಿಂದ ವಾರಂಗಲ್ಲಿಗೆ ವರ್ಗಾಯಸಿದನು.
ಈಗಿನ ತೆಲಂಗಾಣ ರಾಜ್ಯದ ಹನುಮಕೊಂಡದಲ್ಲಿ ಸಾವಿರ ಸ್ತಂಭಗಳ ದೇವಾಲಯವನ್ನು 1175 ರಿಂದ 1324 ರ ಕಾಲಘಟ್ಟದಲ್ಲಿ ರುದ್ರದೇವ ನಿರ್ಮಿಸಿರುವುದಾಗಿ ತಿಳಿದು ಬರುತ್ತದೆ. ಈ ಸುಂದರವಾದ ಸಾವಿರ ಸ್ತಂಭಗಳ ದೇವಾಲಯವು ಯುನೆಸ್ಕೋದ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಯಾಗಿದೆ. ತೆಲುಗಿನ ಭಾಷೆಯಲ್ಲಿ “ವೆಯ್ಯ ಸ್ತಂಭಾಲ ಗುಡಿ” ಎಂದೇ ಪ್ರಖ್ಯಾತವಾಗಿದೆ. ಸಾವಿರ ಸ್ತಂಭವನ್ನು ಹೊಂದಿರುವ ಶಿವ ಲಿಂಗ ದೇವಾಲಯವು ಒಂದು ಪವಿತ್ರವಾದ ಹಿಂದೂ ದೇವಾಲಯವಾಗಿದೆ.
7. ಮಹಾದೇವ (ಕ್ರಿ. ಶ. 1195 – 1199) :
ಸೇವುಣರು ಪ್ರಬಲರಾಗುತ್ತಿದ್ದ ಕಾಲಘಟ್ಟದಲ್ಲಿ ಅವರೊಂದಿಗೆ ಯುದ್ಧಕ್ಕಿಳಿದ ರುದ್ರದೇವನು ಯುದ್ಧದಲ್ಲಿ ಹತನಾದಾಗ ಆತನ ತಮ್ಮ ಮಹಾದೇವ ಪಟ್ಟಕ್ಕೇರುತ್ತಾನೆ. ಕೇವಲ 3 ವರ್ಷ ಕಾಕತೀಯರ ಸಾಮ್ರಾಜ್ಯವನ್ನು ಮುನ್ನಡೆಸಿದ ಮಹಾದೇವನೂ ಸಹ ಸೇವುಣರ ಜೊತೆ ನಡೆದ ಕದನದಲ್ಲಿ ಹತನಾಗುತ್ತಾನೆ.
8. ಗಣಪತಿದೇವ (ಕ್ರಿ. ಶ. 1199 – 1262) :
ಕೇವಲ 3 ವರ್ಷ ಕಾಕತೀಯರ ಸಾಮ್ರಾಜ್ಯವನ್ನು ಮುನ್ನಡೆಸಿದ ಮಹಾದೇವನೂ ಸಹ ಸೇವುಣರ ಜೊತೆ ನಡೆದ ಕದನದಲ್ಲಿ ಹತನಾದ. ಯುದ್ಧದಲ್ಲಿ ಮಹಾದೇವನ ಮಗ ಗಣಪತಿದೇವನನ್ನು ಶತ್ರುಗಳು ಬಂಧಿಸಿ ದೇವಗಿರಿಯ ಕಾರಾಗೃಹದಲ್ಲಿರಿಸಿದ್ದರೆಂದು ತಿಳಿದು ಬರುತ್ತದೆ. ನಂತರ ಬಿಡುಗಡೆಗೊಂಡ ಗಣಪತಿದೇವ ಮರಳಿ ತನ್ನ ರಾಜ್ಯಕ್ಕೆ ಬಂದಾಗ ಅಲ್ಲಿ ಅರಾಜಕತೆ ಉಂಟಾಗಿತ್ತು. ನೆರೆಯ ಅರಸರು ದಾಳಿ ಮಾಡಿದ್ದರು. ಈ ಅರಾಜಕತೆಯನ್ನು ಕೊನೆಗೊಳಿಸಿ. ಸೇನಾಪತಿ ರೇಚರ್ಲ ರುದ್ರನ ಸಹಕಾರದಿಂದ ಪುನಃ ಕಾಕತೀಯ ಪ್ರಭುತ್ವವನ್ನು ಸ್ಥಿರಗೊಳಿಸಿದ.
ಕಾಕತೀಯ ಅರಸರಲ್ಲಿಯೇ ಗಣಪತಿದೇವ (ಕ್ರಿ. ಶ. 1199 – 1262) ಸುಮಾರು 63 ವರ್ಷಗಳಷ್ಟು ದೀರ್ಘಕಾಲ ರಾಜ್ಯಭಾರ ಮಾಡಿದ ಅರಸ. ಕಲ್ಯಾಣದ ಚಾಲುಕ್ಯರು ಮತ್ತು ಚೋಳರ ಸಾಮ್ರಾಜ್ಯಗಳು ದುರ್ಬಲಗೊಂಡಿದ್ದ ಕಾಲದಲ್ಲಿ ರುದ್ರದೇವ ಪಟ್ಟಕ್ಕೆ ಬರುತ್ತಾನೆ. ಯುದ್ಧ ಪ್ರೇಮಿಯಾಗಿದ್ದ ರುದ್ರದೇವ ತನ್ನ ಸಾಮ್ರಾಜ್ಯವನ್ನು ಕರಾವಳಿಯ ಪೂರ್ವ ಸಾಗರದವರೆಗೂ ವಿಸ್ತರಿಸಿದನು. ದಕ್ಷಿಣದಲ್ಲಿ ನೆಲ್ಲೂರಿನ ತೆಲುಗು ಚೋಳನಾಯಕರ ಜೊತೆ ಸೌಹಾರ್ದತೆಯನ್ನು ಬೆಳೆಸಿದ ರುದ್ರದೇವ ಕಳಿಂಗದ ಪೂರ್ವ ಗಂಗರೊಡನೆ ಮತ್ತು ಮಧುರೆಯ ಪಾಂಡ್ಯರೊಡನೆ ಯುದ್ಧಮಾಡಿ ಅತ್ಯಂತ ಪ್ರಬಲ ಮತ್ತು ಸಮರ್ಥನೆಂಬ ಪ್ರಖ್ಯಾತಿಗೆ ಪಾತ್ರನಾದನು.
ಅತ್ಯಂತ ದಕ್ಷ ರಾಜನಾಗಿದ್ದ ಗಣಪತಿ ಕೃಷಿ ಮತ್ತು ವ್ಯಾಪಾರಗಳಿಗೆ ಪ್ರೋತ್ಸಾಹ ನೀಡಿ ರಾಜ್ಯವನ್ನು ಆರ್ಥಿಕ ದೃಷ್ಟಿಯಿಂದ ಸಮೃದ್ಧಗೊಳಿಸಿದನು. ಓರುಗಲ್ಲ (ವಾರಂಗಲ್) ನಲ್ಲಿ ಭದ್ರವಾದ ಕೋಟೆ ಕಟ್ಟಿಸಿದನೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಮುಖ್ಯವಾಗಿ ತೆಲುಗು ಭಾಷೆಯ ನೆಲವನ್ನೆಲ್ಲ ಒಂದೇ ರಾಜ್ಯ ಶಾಸನಕ್ಕೆ ಒಳಪಡಿಸಿದ ಕೀರ್ತಿ ಇವನದು.
ಗಣಪತಿಗೆ ಗಂಡು ಸಂತಾನವಿರಲಿಲ್ಲ. ರುದ್ರಾಂಬಾ (ರುದ್ರ ಮಹಾದೇವಿ/ರುದ್ರಮ್ಮ) ಮತ್ತು ಗಣಪಾಂಬಾ (ಗಣಪ ಮಹಾದೇವಿ) ಇವನ ಇಬ್ಬರು ಪುತ್ರಿಯರು. ರುದ್ರಾಂಬಾ ಪೂರ್ವ ಚಾಲುಕ್ಯರ ರಾಜಕುಮಾರ ವೀರಭದ್ರನನ್ನು ವಿವಾಹವಾಗಿದ್ದಳು. ಇಬ್ಬರು ಪುತ್ರಿಯರಲ್ಲಿ ರುದ್ರಾಂಬಾಳಿಗೆ ಗಣಪತಿದೇವ ರಾಜ್ಯಕ್ಕೆ ಉತ್ತರಾಧಿಕಾರಿಣಿಯಾಗಿ ನೇಮಿಸಿದನು. ಕ್ರಿ. ಶ. 1259 ರ ಹೊತ್ತಿಗೆ ರುದ್ರ ಮಹಾದೇವಿ ರಾಜ್ಯಭಾರದಲ್ಲಿ ಭಾಗ ವಹಿಸತೊಡಗಿದಳು. ಒಂದೆರಡು ವರ್ಷಗಳಲ್ಲಿ ಗಣಪತಿ ಅಧಿಕಾರದಿಂದ ವಿಶ್ರಮಿಸಿದಾಗ ರುದ್ರ ಮಹಾದೇವಿಯೇ ರಾಜ್ಯಭಾರವನ್ನು ಸ್ವತಂತ್ರವಾಗಿ ನಿರ್ವಹಿಸಿಕೊಂಡಳು.
9. ರಾಣಿ ರುದ್ರಮ್ಮದೇವಿ (ಕ್ರಿ. ಶ. 1262 – 1289) :
ಸರಿ ಸುಮಾರು 35 ವರ್ಷಗಳವರೆಗೆ ರಾಜ್ಯಭಾರ ಮಾಡಿದ ರಾಣಿ ರುದ್ರಮ್ಮದೇವಿ ಕಾಕತೀಯ ಅರಸರಲ್ಲಿ ಅನುಪಮ, ಅಪ್ರತಿಮ, ಛಲಗಾತಿ ಮತ್ತು ಸಾಹಸೀ ರಾಣಿ. ಪಟ್ಟಾಭಿಷೇಕದ ಸಮಯದಲ್ಲಿ ಕೆಲ ಸಾಮಂತ ರಾಜರು ಪ್ರತಿರೋಧ ತೋರಿದರೂ ಧೈರ್ಯ ಮತ್ತು ಸಾಹಸದಿಂದ ರಾಜ್ಯವನ್ನು ಮುನ್ನಡೆಸಿದ ಕೀರ್ತಿ ರಾಣಿ ರುದ್ರಮ್ಮದೇವಿಯದು. ಅಂದಿನ ಕಾಲಘಟ್ಟದಲ್ಲಿ ಪೂರ್ವದಲ್ಲಿ ಕಲಿಂಗ ರಾಜ್ಯದ ಗಜಪತಿ, ಪಶ್ಚಿಮದಲ್ಲಿ ಪ್ರಬಲ ಸೇವುಣರು ಮತ್ತು ದಕ್ಷಿಣದ ಅರಸರರಾದ ಪಾಂಡ್ಯರನ್ನು ಹದ್ದು ಬಸ್ತಿನಲ್ಲಿಡುವಲ್ಲಿ ಯಶಸ್ವಿಯಾಗಿದ್ದಳು. ಪೂರ್ವ ಭಾಗದಲ್ಲಿನ ಗೋದಾವರಿಯ ಮತ್ತು ವೆಂಗಿಯ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಳು. ಸೇವುಣರ ಆಕ್ರಮಣವನ್ನು ಶೌರ್ಯದಿಂದ ಬಗ್ಗು ಬಡಿದಳು. ಪಾಂಡ್ಯರು ಆಕ್ರಮಿಸಿದ್ದ ಕೆಲ ಪ್ರದೇಶಗಳನ್ನು ಗೆದ್ದುಕೊಂಡಳು. ಗಂಡು ಸಂತಾನವಿಲ್ಲದ್ದರಿಂದ ಮಗಳ ಮಗನಾದ ಕುಮಾರ ಪ್ರತಾಪ ರುದ್ರದೇವನನ್ನು ದತ್ತು ಪಡೆದಿದ್ದಳು. ದಕ್ಷಿಣ ಭಾರತದ ಅಪ್ರತಿಮ ಸಾಹಸೀ ರಾಣಿಯರಲ್ಲಿ ರಾಣಿ ರುದ್ರಮ್ಮದೇವಿಯೂ ಒಬ್ಬಳು. ಇತಿಹಾಸದ ಪುಟಗಳಲ್ಲಿ ದಾಖಲಿಸಿರುವಂತೆ ಬಂಡುಕೋರ ನಾಯಕ ಅಂಬಾದೇವನನ್ನು ಸೆದೆಬಡಿಯುವ ಯುದ್ಧದಲ್ಲಿ ಸುಮಾರು ಕ್ರಿ. ಶ. 1289 ರಲ್ಲಿ ಮಡಿದಳು ಎಂದು ತಿಳಿದು ಬರುತ್ತದೆ.
ಸುಮಾರು ಎರಡು ದಶಕಗಳ ಹಿಂದೆ ತೆಲಂಗಾಣ ರಾಜ್ಯದ ನಲಗೊಂಡಾ ಜಿಲ್ಲೆ ನರೇಕಲ್ ಮಂಡಲದ ಚಂದುಪಟ್ಲ ಗ್ರಾಮದಲ್ಲಿ ಸಿಕ್ಕಿರುವ ಎರಡು ಶಾಸನಗಳಲ್ಲಿ ರಾಣಿ ರುದ್ರಮ್ಮದೇವಿಯು ಕ್ರಿ. ಶ. 1289 ರ ನವಂಬರ್ 27 ರಂದು ನಿಧನರಾಗಿರುವುದನ್ನು ಧೃಢಪಡಿಸುತ್ತವೆ. ಈ ಗ್ರಾಮದಲ್ಲಿ ರಾಣಿ ರುದ್ರಮ್ಮದೇವಿಯ ನೆನಪಿಗಾಗಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿದೆ.
10. ಪ್ರತಾಪ ರುದ್ರ (ಕ್ರಿ. ಶ. 1289 – 1323) :
ರಾಣಿ ರುದ್ರಮ್ಮದೇವಿಯು ತನ್ನ ತಂದೆ ಗಣಪತಿದೇವನ ಸಲಹೆಯಂತೆ ತನ್ನ ಮೊಮ್ಮಗನಾದ ಪ್ರತಾಪ ರುದ್ರನನ್ನು ತನ್ನ ಮಗನಾಗಿ ದತ್ತು ಪಡೆದುಕೊಂಡಿದ್ದಳು. ಬಂಡುಕೋರ ನಾಯಕ ಅಂಬಾದೇವನನ್ನು ಸೆದೆಬಡಿಯುವ ಯುದ್ಧದಲ್ಲಿ ಹತಳಾದ ನಂತರ ಆ ಸಿಂಹಾಸನಕ್ಕೆ ವಾರಸುದಾರನಾಗಿದ್ದ ಪ್ರತಾಪ ರುದ್ರ ಅಧಿಕಾರಕ್ಕೆ ಬಂದನು. ತುಮಕೂರು ತಾಲೂಕು ಮುಳಕುಂಟೆ ಶಾಸನದಲ್ಲಿ ಪ್ರತಾಪ ರುದ್ರ ರಾಜನ ಉಲ್ಲೇಖವಿದೆ. ಈ ಶಾಸನದ ಮೂಲ ಯಾವುದೆಂದು ತಿಳಿದುಬಂದಿಲ್ಲ. (Epigraphica Karnataka. Vol XII 1921-22 No.14. Page 27).
ದೆಹಲಿಯ ಸುಲ್ತಾನರ ಕೆಟ್ಟ ಕಣ್ಣು ಕಾಕತೀಯರ ವೈಭವಯುತ ರಾಜ್ಯದ ಮೇಲೆ ಬಿದ್ದಿತ್ತು. ಕ್ರಿ. ಶ. 1296 ರಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮೊದಲ ಬಾರಿಗೆ ಆಕ್ರಮಣ ಮಾಡಿದಾಗ ತೀವ್ರ ಪ್ರತಿರೋಧ ಒಡ್ಡಿದ ಕಾಕತೀಯರು ಅವನನ್ನು ಸೋಲಿಸುವುದರಲ್ಲಿ ಯಶಸ್ವಿಯಾದರು. ವೈಭವದಿಂದ ಮಿನುಗುತ್ತಿದ್ದ ಕಾಕತೀಯರ ಸಾಮ್ರಾಜ್ಯದ ಸಿರಿ ಸಂಪತ್ತು ಖಿಲ್ಜಿಯ ಕಣ್ಣು ಕುಕ್ಕಿತ್ತು. ಈಗಿನ ಕರೀಂನಗರ ಜಿಲ್ಲೆಯ ಉಪ್ಪಾರಪಲ್ಲಿಯಲ್ಲಿ ಕ್ರಿ. ಶ. 1303 ರಲ್ಲಿ ಮಲ್ಲಿಕ್ ಫಕ್ರುದ್ದೀನ್ ನೇತೃತ್ವದಲ್ಲಿ ನಡೆದ ದಾಳಿ ಅತ್ಯಂತ ಭೀಕರವಾಗಿತ್ತೆಂದು ತಿಳಿದು ಬರುತ್ತದೆ. ಮಲ್ಲಿಕ್ ಕಾಫರ್ ನ ನೇತೃತ್ವದಲ್ಲಿ ಮತ್ತೊಮ್ಮೆ ಕ್ರಿ. ಶ. 1309 ರಲ್ಲಿ ದಾಳಿನಡೆಸಿ ಸಿರಿಪೂರ ಮತ್ತು ಹನುಮಕೊಂಡ ಕೋಟೆಗಳನ್ನು ವಶಪಡಿಸಿಕೊಂಡರು.
ಹೀಗೆ ಹಲವಾರು ಬಾರಿ ಭಗೀರಥ ಪ್ರಯತ್ನಗಳನ್ನು ಮಾಡಿ ಕೊನೆಗೆ ವಾರಂಗಲ್ ಕೋಟೆಯನ್ನ ಸುತ್ತುವರೆದಾಗ, ಆಗ ಚಿಕ್ಕ ಸೈನ್ಯ ಹೊಂದಿದ್ದ ಪ್ರತಾಪ ರುದ್ರ ಸ್ಥಿತಿಯನ್ನರಿತು ದೆಹಲಿ ಸುಲ್ತಾನನೊಂದಿಗೆ ರಾಜಿ ಮಾಡಿಕೊಂಡನು. ಆ ಒಪ್ಪಂದದ ಪ್ರಕಾರವಾಗಿ ಪ್ರತಾಪ ರುದ್ರ ಅಪಾರ ಪ್ರಮಾಣದ ಸಂಪತ್ತುಗಳನ್ನು, ಚಿನ್ನಾ ಭರಣಗಳನ್ನು ದೆಹಲಿ ಸುಲ್ತಾನನಿಗೆ ಕಪ್ಪು ಕಾಣಿಕೆಗಳನ್ನು ನೀಡಲು ಒಪ್ಪಿಕೊಂಡನು. ರುದ್ರಪ್ರತಾಪ ದೆಹಲಿ ಸುಲ್ತಾನನಿಗೆ ಕೊಟ್ಟ ಆಭರಣಗಳಲ್ಲಿ ಪ್ರಖ್ಯಾತ ವಜ್ರ ಕೋಹಿನೂರ್ ಸಹ ಸೇರಿತ್ತೆನ್ನಲಾಗಿದೆ. ಆದರೆ ಕೆಲವು ಸಮಯದ ನಂತರ ಪ್ರತಾಪರುದ್ರ ಕಪ್ಪು ಕಾಣಿಕೆ ಕೊಡುವುದನ್ನು ನಿಲ್ಲಿಸಿದಾಗ ಮತ್ತೆ ದೆಹಲಿ ಸುಲ್ತಾನರಿಂದ ದಾಳಿಗೊಳಗಾಗಬೇಕಾಯಿತು. ಕೊನೆಗೆ ದೆಹಲಿ ಸೈನ್ಯವು ವಾರಂಗಲ್ ನನ್ನು ಸುತ್ತುವರೆದು ರುದ್ರಪ್ರತಾಪನನ್ನು ಬಂಧಿಸಿ ದೆಹಲಿ ಕರೆದೊಯ್ಯಲಾರಂಭಿಸಿತು. ಈ ಸಂದರ್ಭದಲ್ಲಿ ರಾಜಾ ಪ್ರತಾಪರುದ್ರನು ಗೋದಾವರಿ ನದಿಯೊಂದರ ತಟದ ಮೇಲೆ ಕಾಯಿಲೆಗೆ ತುತ್ತಾಗಿ ಪ್ರಾಣ ಬಿಟ್ಟನು ಎಂದು ಹೇಳಲಾಗುತ್ತದಾದರೂ ಕೆಲವು ಮೂಲಗಳ ಪ್ರಕಾರ, ಅವಮಾನವನ್ನು ಸಹಿಸಲಾಗದ ಪ್ರತಾಪ ರುದ್ರ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಲಾಗುತ್ತದೆ.
ಬಸವಾದಿ ಶರಣರಿಗೆ ಆಶ್ರಯ ನೀಡಿದ್ದ ಕಾಕತೀಯರು ಶರಣ ಸಂಸ್ಕೃತಿ ಮತ್ತು ಇತಿಹಾಸವನ್ನು ತಿಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತೆ ವೈಭವದಿಂದ ಮೆರೆದ ದಕ್ಷಿಣ ಬಾರತದ ಸಾಮ್ರಾಜ್ಯಗಳಲ್ಲಿ ಒಂದು ಕಾಕತೀಯ ಸಾಮ್ರಾಜ್ಯ. ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪಕ್ಕೆ ವಿಶೇಷ ಪ್ರೋತ್ಸಾಹವನ್ನು ಕಾಕತೀಯ ಅರಸರು ನೀಡಿದ್ದರು.
–ವಿಜಯಕುಮಾರ ಕಮ್ಮಾರ
ತುಮಕೂರು
ಮೋಬೈಲ್ ನಂ: 9741 357 132
ಈ-ಮೇಲ್: vijikammar@gmail.com