ಶರಣ ಕಿನ್ನರಿ ಬ್ರಹ್ಮಯ್ಯನವರು

ಶರಣ ಕಿನ್ನರಿ ಬ್ರಹ್ಮಯ್ಯನವರು

ಶರಣಾರ್ಥಿ ಶರಣಾರ್ಥಿ | ಎಲೆ ನಮ್ಮವ್ವ ||
ಶರಣಾರ್ಥಿ ಶರಣಾರ್ಥಿ ಕರುಣಾ ಸಾಗರ ನಿಧಿಯೆ ||
ದಾಯಾಮೂರ್ತಿ ತಾಯೆ | ಶರಣಾರ್ಥಿ ||
ಮಾಹಾಲಿಂಗ ತ್ರಿಪುರಾಂತಕ | ನೊಡ್ಡಿದ ತೊಡಕು ||
ನೀವು ಬಿಡಿದರಾಗಿ | ನಿಮ್ಮ ದಯದಿಂದ ||
ನಾನು ಹುಲಿನೆಕ್ಕಿ ಬದಿಕಿದೆನು | ಶರಣಾರ್ಥಿ ಶರಣಾರ್ಥಿ ತಾಯೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1203 / ವಚನ ಸಂಖ್ಯೆ-64)

ವಚನಾಂಕಿತ : ತ್ರಿಪುರಾಂತಕ ಲಿಂಗ.
ಜನ್ಮಸ್ಥಳ : ಪುದೂರು : ಆಂಧ್ರಪ್ರದೇಶ.
ಕಾಯಕ : ಅಕ್ಕಸಾಲಿಗ / ಕಿನ್ನರಿ ನುಡಿಸುವದು.
ಐಕ್ಯಸ್ಥಳ : ಉಳುವಿ : ಜೊಯಿಡಾ (ಸುಪಾ) ತಾಲೂಕ, ಉತ್ತರ ಕನ್ನಡ ಜಿಲ್ಲೆ.

ಬಸವಣ್ಣನವರ ಸಮಕಾಲೀನರಾದ ಕಿನ್ನರಿ ಬ್ರಹ್ಮಯ್ಯನವರು ಆಂಧ್ರಪ್ರದೇಶದ ಪೋಡೂರು ಎನ್ನುವ ಗ್ರಾಮದವರು. ಪೋಡೂರು ಗ್ರಾಮವನ್ನು ಪೂದೂರು, ಊಡೂರು ಎಂದೂ ಕರೆಯಲಾಗುತ್ತಿತ್ತು. ಅಪ್ರತಿಮ ಶಿವಭಕ್ತರಾಗಿದ್ದ ಕಿನ್ನರಿ ಬ್ರಹ್ಮಯ್ಯನವರು ವೃತಿಯಿಂದ ಅಕ್ಕಸಾಲಿಗರು. ವಂಶಪಾರಂಪರ್ಯವಾಗಿದ್ದ ಅಕ್ಕಸಾಲಿಗ ವೃತ್ತಿಯೊಂದಿಗೆ ಕಿನ್ನರಿ ನುಡಿಸುವ ಹವ್ಯಾಸ ಇಟ್ಟುಕೊಂಡಿದ್ದರು ಎಂದು ತಿಳಿದು ಬರುತ್ತದೆ. ಹಾಗಾಗಿಯೇ ಅವರನ್ನು ಕಿನ್ನರಿ ಬ್ರಹ್ಮಯ್ಯನವರೆಂದು ಶರಣ ಸಮೂಹದಲ್ಲಿ ಗುರುತಿಸಲಾಗುತ್ತಿತ್ತು.
ಕಲ್ಯಾಣದಲ್ಲಿ ನಡೆಯುತ್ತಿದ್ದ ಸಾಮಾಜಿಕ ಮತ್ತು ಕಾಯಕ ಚಳುವಳಿಯ ಮತ್ತು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಕಲ್ಯಾಣಕ್ಕೆ ಬಂದರು. ಕಲ್ಯಾಣದಲ್ಲಿದ್ದ ತ್ರಿಪುರಾಂತಕೇಶ್ವರ ದೇವಸ್ಥಾನದಲ್ಲಿ ಕಿನ್ನರಿ ಬಾರಿಸುವ ಕಾಯಕ ಮಾಡುತ್ತಿದ್ದರು. ಜನರು ನೀಡಿದ ಹಣದಿಂದ ದಾಸೋಹವನ್ನು ಮಾಡುತ್ತಿದ್ದರು ಎನ್ನುವ ವಿಷಯ ತಿಳಿದು ಬಸವಣ್ಣನವರು ಮಹಾಮನೆಗೆ ಕರೆದೊಯ್ಯುತ್ತಾರೆ. ಅನುಭವ ಮಂಟಪದ 770 ಅಮರ ಗಣಂಗಳಲ್ಲಿ ಕಿನ್ನರಿ ಬ್ರಹ್ಮಯ್ಯನವರೂ ಒಬ್ಬರು. “ಮಹಾಲಿಂಗ ತ್ರಿಪುರಾಂತಕ” ಎಂಬ ವಚನಾಂಕಿತದಿಂದ ರಚಿಸಿರುವ 18 ವಚನಗಳು ಲಭ್ಯವಾಗಿವೆ. ಅಕ್ಕ ಮಹಾದೇವಿಯ ಜೊತೆಗೆ ನಡೆಸಿದ ಸಂವಾದ, ಶಿವಭಕ್ತಿ ಮತ್ತು ಬಸವಾದಿ ಶರಣರ ವರ್ಣನೆ ಈ ವಚನಗಳಲ್ಲಿ ಕಾಣಬಹುದು.

ವೈರಾಗ್ಯ ನಿಧಿ ಅಕ್ಕ ಮಹಾದೇವಿಯವರು ಕಲ್ಯಾಣಕ್ಕೆ ಬಂದಾಗ ಅವಳ ವೈರಾಗ್ಯವನ್ನು ಪರೀಕ್ಷಿಸುವ ನೆಪದಲ್ಲಿ ಅನುಚಿತ ವರ್ತನೆ ಮಾಡುತ್ತಾರೆ ಅನ್ನುವ ವಿಷಯ ಶೂನ್ಯ ಸಂಪಾದನೆಗಳಲ್ಲಿ ಮತ್ತು ಬಸವ ಪುರಾಣಗಳಲ್ಲಿ ಬರುತ್ತದೆ. ಆದರೆ ಕಿನ್ನರಿ ಬ್ರಹ್ಮಯ್ಯನವರ ಸದ್ಗುಣ ಸಂಪನ್ನ ವ್ಯಕ್ತಿತ್ವವನ್ನು ತೂಗಿ ನೋಡಿದಾಗ ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ಅವರ ವಚನಗಳಲ್ಲಿ ಅಕ್ಕ ಮಹಾದೇವಿಯ ವೈರಾಗ್ಯದ ಬಗ್ಗೆ ಸಂದೇಹ ವ್ಯಕ್ತ ಮಾಡಿದ್ದು ಒಪ್ಪತಕ್ಕಂಥ ವಿಷಯ. “ಹುಲಿ ನೆಕ್ಕಿ ಬದುಕಿದೆನು” ಎಂದು ವಚನದಲ್ಲಿ ಹೇಳಿರುವುದು ಈ ವಿಷಯಕ್ಕೆ ಪುಷ್ಟಿ ಕೊಡತಕ್ಕಂಥ ಪ್ರಮಾಣ ಎನ್ನಬಹುದು.

ಕಿನ್ನರಿ ಬ್ರಹ್ಮಯ್ಯನವರ ಇನ್ನೊಂದು ವಚನದಲ್ಲಿ “ತ್ರಿಪುರಾಂತಕದೇವಾ ಮಹಾದೇವಿಯಕ್ಕನ ನಿಲುವನ್ನರಿಯದೇ ಅಳುಪಿ ಕೆಟ್ಟೆನು” ಎಂದು ಪ್ರಸ್ತಾಪ ಬರುತ್ತದೆ.

ಮಸ್ತಕವ ಮುಟ್ಟಿ ನೋಡಿದಡೆ | ಮನೋಹರದಳಿವು ಕಾಣಬಂದಿತ್ತು ||
ಮುಖಮಂಡಲವ ಮುಟ್ಟಿ ನೋಡಿದಡೆ | ಮೂರ್ತಿಯ ಅಳಿವು ಕಾಣಬಂದಿತ್ತು ||
ಕೊರಳ ಮುಟ್ಟಿ ನೋಡಿದಡೆ | ಗರಳಧರನ ಇರವು ಕಾಣಬಂದಿತ್ತು ||
ತೋಳುಗಳ ಮುಟ್ಟಿ ನೋಡಿದಡೆ | ಶಿವನ ಘನವು ಕಾಣಬಂದಿತ್ತು ||
ಉರಸ್ಥಲ ಮುಟ್ಟಿ ನೋಡಿದಡೆ | ಪರಸ್ಥಲದಂಗಲೇಪ ಕಾಣಬಂದಿತ್ತು ||
ಬಸಿರ ಮುಟ್ಟಿ ನೋಡಿದಡೆ | ಬ್ರಹ್ಮಾಂಡವ ಕಾಣಬಂದಿತ್ತು ||
ಗುಹ್ಯವ ಮುಟ್ಟಿ ನೋಡಿದಡೆ | ಕಾಮದಹನ ಕಾಣಬಂದಿತ್ತು ||
ಮಾಹಾಲಿಂಗ | ತ್ರಿಪುರಾಂತಕದೇವಾ ||
ಮಹಾದೇವಿಯಕ್ಕನ ನಿಲುವನರಿಯದೆ | ಅಳುಪಿ ಕೆಟ್ಟೆನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1205 / ವಚನ ಸಂಖ್ಯೆ-62)

ಆದರೆ ಈ ವಚನದ ವಿಸ್ತಾರವನ್ನು ನೋಡಿದರೆ ಕಿನ್ನರಿ ಬ್ರಹ್ಮಯ್ಯನವರು ಅಕ್ಕ ಮಾಹಾದೇವಿಯವರ ವೈರಾಗ್ಯವನ್ನು ಪರೀಕ್ಷಿಸಲು ಹಾಗೆ ಹೇಳಿದ್ದಾರೆ ಎನ್ನಬಹುದು. ಇದನ್ನು ಅರಿತ ಅಕ್ಕ ಮಹಾದೇವಿ “ಲೋಕದ ಮಾತು ನಮಗೇಕಣ್ಣಾ” ಎನ್ನುವ ಸಹೋದರತ್ವ ಭಾವನೆಯ ಮೂಲಕ ಕಿನ್ನರಿ ಬ್ರಹ್ಮಯ್ಯನವರ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ಈ ಕೆಳಗಿನ ವಚನದಲ್ಲಿ.

ನಮಗೆ ನಮ್ಮ ಲಿಂಗದ ಚಿಂತೆ | ನಮಗೆ ನಮ್ಮ ಭಕ್ತರ ಚಿಂತೆ ||
ನಮಗೆ ನಮ್ಮ | ಆದ್ಯರ ಚಿಂತೆ ||
ನಮಗೆ ನಮ್ಮ | ಚೆನ್ನಮಲ್ಲಿಕಾರ್ಜುನಯ್ಯನ ||
ಚಿಂತೆಯಲ್ಲದೆ ಲೋಕದ | ಮಾತು ನಮಗೇಕಣ್ಣಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-811 / ವಚನ ಸಂಖ್ಯೆ-245)

ಆವ ಮಡಕೆಯಾಗಲಿ | ಸ್ವಾದ ಸಾಕಾರದಲ್ಲಿ ಭೇದವಿಲ್ಲ ||
ಮಣ್ಣ ಮಡಕೆ ಒಕ್ಕಲಿಗನಲ್ಲಿ | ಚಿನ್ನದ ಮಡಕೆ ಅರಮನೆಯಲ್ಲಿ ||
ಅರಮನೆ ಗುರುಮನೆ | ಹಿರಿದಾದ ಕಾರಣ ||
ಹಾದರ ಸಲ್ಲದು ಕಾಣಾ | ತ್ರಿಪುರಾಂತಕಲಿಂಗವೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1203 / ವಚನ ಸಂಖ್ಯೆ-50)

ಕಿನ್ನರಿ ಬ್ರಹ್ಮಯ್ಯನವರು ಈ ಬೆಡಗಿನ ವಚನದಲ್ಲಿ ಮಡಕೆಯನ್ನು ಪಂಚಭೂತಗಳಿಂದಾದ ತನುವಿಗೆ ಹೋಲಿಸಿ ರಚಿಸಿದ್ದಾರೆ. ಪಂಚಭೂತಗಳು ಅಂದರೆ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿ. ಪಂಚಭೂತಗಳಿಂದಾದ ಈ ದೇಹದಲ್ಲಿ ಸ್ವಾದ ಆಕಾರಗಳು ಅಂದರೆ ಪಂಚೇಂದ್ರಿಯಗಳೂ ಸಹ ಎಲ್ಲರಲ್ಲಿಯೂ ಜಾಗೃತವಾಗಿರುತ್ತವೆ. ಪಂಚೇಂದ್ರಿಯಗಳು ಅಂದರೆ ಶ್ರೋತೃ (ಕಿವಿ), ತ್ವಕ್ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು). ಎಲ್ಲರಲ್ಲೂ ಇವು ಹೆಚ್ಚೂ ಕಡಿಮೆ ಸಮಾನವಾಗಿರುತ್ತವೆ. ಪಂಚೇಂದ್ರಿಯಗಳನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಸರಳ ಮತ್ತು ಸನ್ನಡತೆಯಿಂದ ಜೀವನದ ನಡೆಸುವುದು ಕ್ರಮ. ಇದನ್ನೇ ಶರಣ ವೈದ್ಯ ಸಂಗಣ್ಣನವರು ಒಂದು ವಚನದಲ್ಲಿ ನಿರೂಪಿಸಿದ್ದಾರೆ.

ಅಷ್ಠೋತ್ತರ ಶತವ್ಯಾಧಿಗಳ | ಧರಿಸಿಕೊಂಡಿಪ್ಪುದು ಆತ್ಮನೋ? ಘಟನೋ? || ಆತ್ಮನೆಂದಡೆ | ಸಾಯದ ಚಿತ್ತು ||
ಘಟವೆಂದಡೆ ಆತ್ಮನಿಲ್ಲದ | ಅರಿಯದು ದೇಹ ||
ಇಂತಿ ಒಂದ ಕಳೆದು ಒಂದಕ್ಕೆ | ಔಷಧಿಯ ಕೊಟ್ಟಿಹನೆಂದಡೆ ಆಗದು ||
ಈ ಎರಡರ ಸಂಗದಿಂದ | ರುಜೆ ಪ್ರಮಾಣು ||
ಇಂತಿ ಶರೀರಾತ್ಮ | ಆದಿಯಾಗಿ ಬಂದ ವ್ಯಾಧಿಗೆ ||
ನಾನೊಂದ ಔಷಧಿಯ | ಭೇದವ ಹೇಳಿಹೆ ||
ಆಧಾರದಲ್ಲಿಪ್ಪ | ಮೂಲಿಕೆಯ ಬೇರನರದು ||
ಐದಿಂದ್ರಿಯವ | ಕೂಡಿಕೊಂಡು ||
ಮೂರು ಮುಟ್ಟದ ತಟ್ಟೆಯಲ್ಲಿ | ಬೇಗ ತೆಗೆದುಕೊಳ್ಳಿ ||
ಆ ಮದ್ದು ವಾಂತಿಗೆ ಸಲ್ಲ | ವಿರೋಚನವಿಲ್ಲ ||
ನಾನಾ ವೈದ್ಯರ | ಭೇದಗ್ರಾಹಿನ ಕ್ರಮವಲ್ಲ ||
ಇದು ಸಿದ್ಧಾಂತ ಮೂಲಿಕೆ | ಇದ ಸಾಧಿಸಿಕೊಳ್ಳಿ ||
ಎಂದೆಂದಿಗೂ ರುಜೆಯಿಲ್ಲ | ಸಂದು ಸಂಶಯವಿಲ್ಲ ||
ಮರುಳ ಶಂಕರಪ್ರಿಯ | ಸಿದ್ಧರಾಮೇಶ್ವಲಿಂಗದಲ್ಲಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1629 / ವಚನ ಸಂಖ್ಯೆ-110)

ನಮ್ಮ ದೇಹದಲ್ಲಿ ಮೂಲಾಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ ಮತ್ತು ಆಜ್ಞಾ ಎನ್ನುವ ಆರು ಚಕ್ರ ಅಂದರೆ Power Center ಗಳಿವೆ. ಆಧಾರ ಚಕ್ರದಲ್ಲಿ ಆಚಾರಲಿಂಗ ಸ್ವಾಯುತ್ತ, ಸ್ವಾಧಿಷ್ಠಾನ ಚಕ್ರದಲ್ಲಿ ಗುರುಲಿಂಗ ಸ್ವಾಯುತ್ತ, ಮಣಿಪೂರಕ ಚಕ್ರದಲ್ಲಿ ಶಿವಲಿಂಗ ಸ್ವಾಯುತ್ತ, ಅನಾಹತ ಚಕ್ರದಲ್ಲಿ ಜಂಗಮಲಿಂಗ ಸ್ವಾಯುತ್ತ, ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗ ಸ್ವಾಯುತ್ತ ಮತ್ತು ಆಜ್ಞಾ ಚಕ್ರದಲ್ಲಿ ಮಹಾಲಿಂಗ ಸ್ವಾಯುತ್ತವಾಗಿರುತ್ತವೆ. ಹೀಗೆ ಒಂದೊಂದು ಚಕ್ರಕ್ಕೂ ಒಂದೊಂದು ಲಿಂಗದ ಮಹತ್ವವಿದೆ.

ಎಲ್ಲ ಚಕ್ರಗಳಿಗೂ ಮೂಲ ಅಂದರೆ ಆಧಾರ ಚಕ್ರ. ಐದೂ ಇಂದ್ರಿಯಗಳು, ಶ್ರೋತೃ (ಕಿವಿ), ತ್ವಕ್ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು) ಗಳನ್ನು ತನ್ನ ವಶಕ್ಕೆ ತೆಗೆದುಕೊಂಡು, ತನ್ನ ಹಿಡಿತದಲ್ಲಿಟ್ಟುಕೊಂಡು, ಮೂರೂ ಮಲಗಳು ಮುಟ್ಟದ ಮುನ್ನ ಬೇಗನೇ ತೆಗೆದುಕೊಳ್ಳಿ ಅಂತ ಸಲಹೆ ಸೂಚನೆ ನೀಡತಾರೆ ವೈದ್ಯ ಸಂಗಣ್ಣನವರು. “ವಾಂತಿಯಾಗೋದಿಲ್ಲ” ಅಂದರೆ ಈ ಮದ್ದಿನಿಂದ ಬರುವ ರೋಗಗಳು ಮತ್ತೆ ಹಿಂತಿರುಗಿ ಬರುವುದಿಲ್ಲ. “ವೀರೋಚನವಿಲ್ಲ” ಅಂದರೆ ಅಡ್ಡ ಪರಿಣಾಮ (Side Effects) ಗಳು ಇಲ್ಲವೇ ಇಲ್ಲ. ಇದನ್ನು ಪ್ರಯೋಗದಲ್ಲಿ ಮತ್ತು ಆಚರಣೆಯಲ್ಲಿ ತಂದದ್ದೇ ಆದರೆ ಆತ್ಮಸಾಕ್ಷಿಯನ್ನು ಜಾಗೃತಿ ಮಾಡಿಕೊಂಡದ್ದೇ ಆದರೆ ಯಾವ ಮಾಯೆಗಳೂ ಹತ್ತಿರ ಸುಳಿಯೋದಿಲ್ಲ. ಇದಕ್ಕೆ ಸಂಶಯವೇ ಬೇಡ ಮತ್ತು ಇದು ಸಿದ್ಧಾಂತ ಅಂತಾರೆ ವೈದ್ಯ ಸಂಗಣ್ಣನವರು.

ಮೂರು ಲಿಂಗಗಳ ಪ್ರಸ್ತಾಪ ದೀಕ್ಷೆಯನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಬರುತ್ತವೆ. ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗ. ಸ್ಥೂಲ ಶರೀರ, ಸೂಕ್ಷ್ಮ ಶರೀರ ಮತ್ತು ಕಾರಣ ಶರೀರ ಎನ್ನುವ ಮೂರು ಶರೀರಗಳ ಪ್ರಸ್ತಾಪ ಬರುತ್ತದೆ. ಸ್ಥೂಲ ಶರೀರ ಅಂದರೆ ಕಣ್ಣಿಗೆ ಗೋಚರವಾಗುವ ನಮ್ಮ ದೇಹ. ಸೂಕ್ಷ್ಮ ಶರೀರ ಅಂದರೆ ಪಂಚೇಂದ್ರಿಯಗಳು. ಪಂಚೇಂದ್ರಿಯಗಳು ಅಂದರೆ ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ನೀರು ಮತ್ತು ಪೃಥ್ವಿಯಿಂದ ಹುಟ್ಟಿದ ಶ್ರೋತೃ (ಕಿವಿ), ತ್ವಕ್ (ಚರ್ಮ), ಚಕ್ಷು (ಕಣ್ಣು), ಜಿಹ್ವಾ (ನಾಲಿಗೆ) ಮತ್ತು ಘ್ರಾಣ (ಮೂಗು) ಎನ್ನುವ ಸಮಷ್ಠಿ ಅಹಂಕಾರದಿಂದ ಹುಟ್ಟಿದ ಗುಣಗಳು. ನಾವು ನಿಧನರಾದಾಗ ಸ್ಥೂಲ ಶರೀರ ಮಣ್ಣಾಗುತ್ತದೆ. ಸೂಕ್ಷ್ಮ ಶರೀರ ಅಗ್ನಿ, ವಾಯು ಮತ್ತು ಪೃಥ್ವಿಯನ್ನು ಸೇರುತ್ತದೆ. ಕಾರಣ ಶರೀರ ಮುಂದೆ ಪ್ರಯಾಣ ಬೆಳೆಸುತ್ತದೆ.

ಇದಕ್ಕೆ ಒಂದು ಉಪಮೆಯನ್ನು ನೀಡುವುದರ ಮೂಲಕ ನಿರೂಪಿಸುವ ಪ್ರಯತ್ನ ಮಾಡುತ್ತೇನೆ. ಟೇಪ್ ರೆಕಾರ್ಡರ್ ಅದು ಸ್ಥೂಲ ಶರೀರ ಕಣ್ಣಿಗೆ ಕಾಣುವಂಥಾದ್ದು. ಅದಕ್ಕೆ ಧ್ವನಿ ನೀಡಲು ಉಪಯೋಗಿಸುವ ಕ್ಯಾಸೆಟ್ ಅದು ಸೂಕ್ಷ್ಮ ಶರೀರ. ಅದರಿಂದ ಹೊರಡುವ ನಾದಬಿಂದು, ಅದು ಕಾರಣ ಶರೀರ, ನಮ್ಮ ಕಣ್ಣಿಗೆ ಕಾಣಲಾರದು. ಆದರೆ ಅದರಿಂದ ಹೊರಡುವ ಧ್ವನಿ ಅಥವಾ sub conscious mind ಮೂಲಕ ನಾವು ಅನುಭವಿಸಬಹುದು.

ಸ್ಥೂಲ ಶರೀರಕ್ಕೆ ಕಾರ್ಮಿಕ ಮಲ, ಸೂಕ್ಷ್ಮ ಶರೀರಕ್ಕೆ ಮಾಯಾ ಮಲ ಮತ್ತು ಕಾರಣ ಶರೀರಕ್ಕೆ ಆಣವ ಮಲ. ರಸನೇಂದ್ರಿಯಗಳ ವಶಕ್ಕೆ ಒಳಪಟ್ಟು ಇಲ್ಲ ಸಲ್ಲದ ಊಟೋಪಚಾರಗಳನ್ನು ತೀರಿಸಿಕೊಂಡಾಗ ಕಾರ್ಮಿಕ ಮಲದಿಂದ ಸ್ಥೂಲ ಶರೀರಕ್ಕೆ ಅಂದರೆ ದೇಹಕ್ಕೆ ರೋಗ ಬರುತ್ತದೆ. ಪಂಚೇಂದ್ರಿಯಗಳ ವಾಸನೆಗೆ ಒಳಪಟ್ಟು ಅನಾಚಾರದಿಂದ ವರ್ತಿಸಿದರೆ ಸೂಕ್ಷ್ಮ ಶರೀರ ಗಸಣಿಗೆ ಅಂದರೆ ಮನಸ್ಸು ಘಾಸಿಗೆ ಒಳಪಡುತ್ತದೆ. ಕಾರಣ ಶರೀರದ ಅನುಭೂತಿ ಕೆಟ್ಟ ವಿಚಾರದ ಮತ್ತು ಗೊಂದಲದ ಗೂಡಾಗುತ್ತದೆ.

ಇಂಥ ಒಂದು ವಿಶ್ಲೇಷಣೆಯನ್ನು ಕಿನ್ನರಿ ಬ್ರಹ್ಮಯ್ಯನವರು ವಚನದ ಮೂಲಕ ತಿಳಿಸಿದ್ದಾರೆ. ಒಕ್ಕಲಿಗ ಹೊಲವನ್ನು ಸ್ವಚ್ಛವಾಗಿಟ್ಟುಕೊಂಡು ಕಾಲಕಾಲಕ್ಕೆ ನೀರು ಗೊಬ್ಬರವನ್ನು ನೀಡುವ ಹಾಗೆ, ಮಣ್ಣ ಮಡಕೆ ಅಂದರೆ ತನುವನ್ನು ಉತ್ತಮವಾಗಿ ನೋಡಿಕೊಳ್ಳಬೇಕು. ಘಾಸಿಗೊಳ್ಳದಂತೆ ನೋಡಿಕೊಳ್ಳಬೇಕು. ಈ ವಚನದ ಮುಂದಿನ ವಾಕ್ಯಗಳು ಅನುಭಾವ ಸಾಹಿತ್ಯದ ಅದ್ಭುತ ಕಥಾನಕ. ಪಂಚೇಂದ್ರಿಯಗಳ ಮಾಯೆಯನ್ನು ಕಿನ್ನರಿ ಬ್ರಹ್ಮಯ್ಯನವರು ಅರಮನೆಯಲ್ಲಿರುವ ಚಿನ್ನದ ಮಡಕೆಗೆ ಹೋಲಿಸಿದ್ದಾರೆ. ಅರಮನೆ ಎನ್ನುವುದು ಪ್ರಭಾವಶಾಲಿಯಾದ, ಗೌರವದ ಮತ್ತು ಸಿರಿಸಂಪತ್ತಿನ ಸಂಕೇತ. ಅಂಥ ಅರಮನೆಯಲ್ಲಿರುವ ಚಿನ್ನದ ಮಡಕೆಯ ಮಾಯೆಗೆ ಮರುಳಾಗಿ ಅಹಂಕಾರದಿಂದ, ಮದೋನ್ನತೆಯಿಂದ ವರ್ತಿಸಿದಲ್ಲಿ ಜೀವನ ಸಾಫಲ್ಯವನ್ನು ಕಾಣುವುದಿಲ್ಲ ಎನ್ನುವುದರ ಸಂಕೇತ. ಅರಮನೆ ಗುರುಮನೆ ಎನ್ನುವ ಶಬ್ದಗಳು ಬಹಿರಂಗ ಮತ್ತು ಅಂತರಂಗದ ಕುರುಹುಗಳು. ಅಂತರಂಗದ ಅರಿವು ಮತ್ತು ಬಹಿರಂಗದ ಆಚರಣೆಯಲ್ಲಿ ಹಾದರ ಸಲ್ಲದು. ಅಂದರೆ ನಡೆ, ನುಡಿ, ಆಚಾರ ಮತ್ತು ವಿಚಾರಗಳು ಶುದ್ಧವಾಗಿರಬೇಕು.

ನಿನ್ನ ಹರೆಯದ ರೂಹಿನ | ಚೆಲುವಿನ ನುಡಿಯ ಜಾಣಿನ ||
ಸಿರಿಯ | ಸಂತೋಷದ ||
ಕರಿ ತುರಗ ರಥ | ಪದಾತಿಯ ನೆರವಿಯ ||
ಸತಿ ಸುತರ | ಬಂಧುಗಳ ಸಮೂಹದ ||
ನಿನ್ನ ಕುಲದಭಿಮಾನದ | ಗರ್ವವ ಬಿಡು ಮರುಳಾಗದಿರು ||
ಅಕಟಕಟಾ | ರೋಮಜನಿಂದ ಹಿರಿಯನೆ? ||
ಮದನನಿಂ ಚೆಲುವನೆ? | ಸುರಪತಿಯಿಂದ ಸಂಪನ್ನನೆ? ||
ವಾಮದೇವ ವಶಿಷ್ಠರಿಂದ | ಕುಲಜನೆ? ||
ಅಂತಕನ ದೂತರು ಬಂದು | ಕೈವಿಡಿದೆಳದೊಯ್ಯುವಾಗ ||
ನುಡಿತಡವಿಲ್ಲ | ಕೇಳೋ ನರನೆ ||
ಎನ್ನ ಮಹಾಲಿಂಗ | ತ್ರಿಪುರಾಂತಕದೇವರ ಪೂಜಿಸಿಯಾದರೆ ||
ಕೇಡಿಲ್ಲದ ಪದ | ದೊರಕೊಂಬುದು ಮರುಳೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1204 / ವಚನ ಸಂಖ್ಯೆ-59)

“ಜಾತಸ್ಯ ಮರಣಂ ಧ್ರುವಂ” ಎನ್ನುವಂತೆ ಒಂದಲ್ಲ ಒಂದು ದಿನ ಎಲ್ಲರೂ ನಿರ್ಗಮಿಸುವವರೇ. ಆದರೆ ಹುಟ್ಟು ಸಾವಿನ ನಡುವೆ ಬರುವ ಬಾಲ್ಯ, ಹರೆಯ ಮತ್ತು ಮುಪ್ಪು ಯಾವುವೂ ಶಾಶ್ವತವಲ್ಲ ಎನ್ನುವುದನ್ನು ಕಿನ್ನರಿ ಬ್ರಹ್ಮಯ್ಯನವರು ಈ ವಚನದಲ್ಲಿ ತಿಳಿಸುತ್ತಿದ್ದಾರೆ. ಹರೆಯ ಬಂದಾಗ ಸುಂದರವಾಗಿಯೇ ಕಾಣುವುದು ಸಹಜ. ನಾವಾಡುವಾಗ ಸಿಹಿ ಮಾತುಗಳು ಬರುವುದು ಸಾಮಾನ್ಯ. ಸಿರಿ ಸಂಪತ್ತು ಬಂದಾಗ ಬಂಧು ಬಳಗ ಎನ್ನುವ ವರ್ತುಲ ನಿರ್ಮಾಣವಾಗಿ ಬಿಡುತ್ತದೆ, ನಾನೇ ಶ್ರೇಷ್ಠ ಎನ್ನುವ ಗರ್ವಕ್ಕೆ ಒಳಗಾಗಬಹುದು. ಇಂಥ ಯಾವ ಮಾಯೆ ಆಮಿಷಕ್ಕೆ ಒಳಗಾಗಬಾರದು ಎನ್ನುವುದು ಈ ವಚನದ ಆಶಯ ಮತ್ತು ನಿರೂಪಣೆ. ಇಹಲೋಕದ ವ್ಯಾಪಾರ ಮುಗಿಸಿದಾಗ ಈ ಎಲ್ಲ ಶ್ರೇಷ್ಠ ಎನ್ನುವ ಅಹಂಕಾರ ಎನ್ನುವ ಕಲ್ಪನಾ ಲೋಕವನ್ನಳಿಯಬೇಕು. ಇದನ್ನೇ ಶರಣ ವೈದ್ಯ ಸಂಗಣ್ಣನವರು ವಚನದ ಮೂಲಕ ವಿವರಿಸಿದ್ದಾರೆ.

ತ್ರಿದೋಷದ ಗುಣದಿಂದ | ನಾನಾ ಬಹುತಾಪತ್ರಯದ ||
ವ್ಯಾಧಿಯ ಚಿಕಿತ್ಸೆಯನಾರೂ | ಅರಿಯರಲ್ಲಾ ||
ತನುವಿಂಗೆ | ವಾತ ಪೈತ್ಯ ಶ್ಲೇಷ್ಮ ||
ಆತ್ಮಂಗೆ | ಆಣವ ಮಾಯಾ ಕಾರ್ಮಿಕ ||
ಇಂತೀ ತ್ರಿವಿಧ ಮಲತ್ರಯದ | ರೋಗರುಜೆಯಡಸಿ ||
ಬಂಧನದಲ್ಲಿ | ಸಾವುತ್ತಿದೆ ಅಂಗ ||
ಈ ರೋಗ ನಿರೋಗವಹುದಕ್ಕೆ | ನಾ ಮೂರು ಬೇರ ತಂದೆ ||
ಒಂದ ಅಂಗದಲ್ಲಿ | ಮರ್ಧಿಸಿ ||
ಒಂದ ಆತ್ಮನಲ್ಲಿ | ಮಥನಿಸಿ ||
ಒಂದ ಅರಿವಿನಲ್ಲಿ | ಪಾಕವ ಮಾಡಿ ||
ಈ ರೋಗ | ಹರಿವುದು ||
ಇದಕ್ಕನುಪಾನ | ಇದಿರೆಡೆಯಿಲ್ಲ ||
ಮರುಳ ಶಂಕರಪ್ರಿಯ | ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1630 / ವಚನ ಸಂಖ್ಯೆ-119)

ದೇಹಕ್ಕೆ ಇಷ್ಟಲಿಂಗ, ಮನಸ್ಸಿಗೆ ಪ್ರಾಣಲಿಂಗ ಮತ್ತು ಭಾವಕ್ಕೆ ಭಾವಲಿಂಗವೆಂಬ ಮೂರು ಬೇರು ಅಂದರೆ ಔಷಧಿಗಳನ್ನು ಸಲಹೆ ಮಾಡತಾರೆ ವೈದ್ಯ ಸಂಗಣ್ಣನವರು. “ಒಂದ ಅಂಗದಲ್ಲಿ ಮರ್ಧಿಸಿ” ಅಂದರೆ ಅಂಗದ ಮೇಲೆ ಲಿಂಗವನು ಕಟ್ಟಿಕೊಳ್ಳಬೇಕು. “ಒಂದ ಆತ್ಮನಲ್ಲಿ ಮಥನಿಸಿ” ಅಂದರೆ ಪ್ರಾಣಲಿಂಗವನ್ನು ಅಂತರಂಗದಲ್ಲಿ ಅರಳಿಸಿ ಮನಸ್ಸನ್ನು ಆಚಾರ ವಿಚಾರ ಮತ್ತು ನಡೆ ನುಡಿಗಳಲ್ಲಿ ಹದಗೊಳಿಸಬೇಕು. “ಒಂದ ಅರಿವಿನಲ್ಲಿ ಪಾಕವ ಮಾಡಿ” ಅಂದರೆ ನಮ್ಮ ಭಾವವನ್ನು ಶುದ್ಧ ಮಾಡಿ ಪಾಕದಂತೆ ಹದಗೊಳಿಸಿ ಕುಡಿಯಬೇಕು. ಅಂದರೆ ಜಂಗಮದ ಸಮಷ್ಠಿಯ ಅರಿವನ ಪ್ರಜ್ಞೆಯೊಂದಿಗೆ ನಡೆದುಕೊಳ್ಳಬೇಕು.

ಕಿನ್ನರಿ ಬ್ರಹ್ಮಯ್ಯನವರ ಈ ಬೆಡಗಿನ ವಚನಗಳ ಪರಿಪೂರ್ಣ ಆಶಯವನ್ನು ತಿಳಿಸಲು ಪೂರಕವಾಗಿ ವೈದ್ಯ ಸಂಗಣ್ಣನವರ ಎರಡು ವಚನಗಳನ್ನು ಬಳಸಿಕೊಂಡಿದ್ದೇನೆ. ಒಟ್ಟಾರೆ ಈ ನಾಲ್ಕು ವಚನಗಳ ಮೂಲಕ ನಮ್ಮ ನಡೆ, ನುಡಿ, ಆಚಾರ ಮತ್ತು ವಿಚಾರಗಳು ವ್ಯಷ್ಠಿ ಮತ್ತು ಸಮಷ್ಠಿಯ ಸಕಾರಾತ್ಮಕ ಚಿಂತನೆಯನ್ನೇ ಒಳಗೊಂಡಿರಬೇಕೆಂಬುದನ್ನು ಬೆಡಗಿನ ರೂಪದಲ್ಲಿ ನಿರೂಪಣೆ ಮಾಡಿದ್ದಾರೆ ಕಿನ್ನರಿ ಬ್ರಹ್ಮಯ್ಯನವರು ಮತ್ತು ವೈದ್ಯ ಸಂಗಣ್ಣನವರು.

ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಶಿವ ಶರಣರೆಲ್ಲ ಕಲ್ಯಾಣವನ್ನು ಬಿಟ್ಟು ಹೋಗುವಾಗ ದಣ್ಣಾಯಕರಾಗಿದ್ದ ಚೆನ್ನಬಸವಣ್ಣನವರ ಜೊತೆಗೆ ಕಿನ್ನರಿ ಬ್ರಹ್ಮಯ್ಯನವರು ಇರುತ್ತಾರೆ. ಬಿಜ್ಜಳನ ಸೈನ್ಯದೊಂದಿಗೆ ಹೋರಾಡುವ ಸಂದರ್ಭದಲ್ಲಿ ಉಳುವಿಯ ಮಹಾಮನೆಯ ಮುಂದಿನ ಹೊಳೆಯ ದಿಕ್ಕನ್ನು ಶರಣರ ನೆರವಿನಿಂದ ಬದಲಾಯಿಸಿದ್ದಕ್ಕಾಗಿ ಆ ಹೊಳೆಯನ್ನು “ಬೊಮ್ಮಯ್ಯನ ಹೊಳೆ” ಎಂದು ಕರೆಯಲಾಗುತ್ತದೆ. ಚೆನ್ನಬಸವಣ್ಣನವರ ಜೊತೆಯಿದ್ದು ಕಿನ್ನರಿ ಬ್ರಹ್ಮಯ್ಯನವರು ಉಳುವಿಯಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಅವರ ಸಮಾಧಿಯನ್ನು ನಾವು ಉಳುವಿಯಲ್ಲಿ ಕಾಣಬಹುದು.

ಇಂಥ ಅನುಪಮ ಮತ್ತು ಅಪ್ರತಿಮ ಶರಣ ಶರಣೆಯರ ಗಣಿ ನಮ್ಮ ಕರ್ನಾಟಕದ 12 ನೇ ಶತಮಾನ. ಕಲ್ಯಾಣದ ಶರಣರು ನುಡಿದಂತೆ ನಡೆದರು. ನಡೆದಂತೆ ನುಡಿದರು ಎನ್ನುವುದಕ್ಕೆ ಕಿನ್ನರಿ ಬ್ರಹ್ಮಯ್ಯನವರು ಒಂದು ಅತ್ಯುತ್ತಮ ಉದಾಹರಣೆ.

-ವಿಜಯಕುಮಾರ ಕಮ್ಮಾರ ತುಮಕೂರು

ಮೋಬೈಲ್ ನಂ : 9741 357 132

ಈ-ಮೇಲ್ : vijikammar@gmail.

Don`t copy text!