ಶ್ರೀ ಚನ್ನಬಸವಣ್ಣನವರ ಮಹಾರಥೋತ್ಸವ
e-ಸುದ್ದಿ, ಜೋಯಿಡಾ
(ಇಂದು ಶನಿವಾರ ಫೆ.೨೭ ರಂದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿ ಕ್ಷೇತ್ರದಲ್ಲಿ ಶ್ರೀ ಚನ್ನಬಸವೇಶ್ವರರ ಮಹಾರಥೋತ್ಸವ ತನ್ನಿಮಿತ್ತ ವಿಶೇಷ ಲೇಖನ)
ಚಿನ್ಮಯ ಜ್ಞಾನಿ ಶ್ರೀ ಚನ್ನಬಸವೇಶ್ವರರು…………. “ಉಳವಿ ” ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಮಧ್ಯದಲ್ಲಿರುವ ನಿಸರ್ಗ ರಮಣೀಯ ತಾಣ……. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಪಾವನ ಕ್ಷೇತ್ರದಲ್ಲಿ ಶನಿವಾರ ಸಂಜೆ ಶ್ರೀ ಚೆನ್ನಬಸವೇಶ್ವರರು ಮಹಾರಥದಲ್ಲಿ ಸಾಗಿ ಬರುತ್ತಿದ್ದಂತೆ ಸಹ್ಯಾದ್ರಿಯ ಶಿಖರಗಳಲ್ಲಿ ‘ಹರ ಹರ ಮಹಾದೇವ’ ಜಯಘೋಷ ಪ್ರತಿಧ್ವನಿಸುತ್ತದೆ…….ಈ ಉಳವಿ ಯಾತ್ರೆ ಇಂದು ನಿನ್ನೆಯದಲ್ಲ ಇದಕ್ಕೆ 850 ವರ್ಷಗಳ ಸುಧೀರ್ಘ ಇತಿಹಾಸವಿದೆ, ಸಾರಿಗೆ ಸಂಪರ್ಕ ಸಾಧ್ಯವಾಗುವ ಮೊದಲು ಕಾಲ್ನಡಿಗೆಯಲ್ಲಿಯೇ ಲಕ್ಷಾಂತರ ಜನರು ಉಳವಿಯಾತ್ರೆಗೆ ಸಾಗುತ್ತಿದ್ದರು, ಈಗೆಲ್ಲ ಸಾಕಷ್ಟು ಸಾರಿಗೆ ಸೌಲಭ್ಯ ಇದ್ದಾಗಲೂ ಸಹ ಬಹುತೇಕ ಭಕ್ತರು ನಡೆದುಕೊಂಡೆ ಉಳವಿಯಾತ್ರೆ ಮಾಡುವದು ಈ ಕ್ಷೇತ್ರದ ವೈಶಿಷ್ಟತೆ,,,,ಉಳವಿಗೆ ಬಂದು ಜಂಗಮದಾಸೋಹಗೈದು ಶ್ರೀ ಚೆನ್ನಬಸವಣ್ಣನವರ ದರ್ಶನ ಮಾಡಿದಾಗಲೇ ಜೀವನ ಧನ್ಯಗೊಂಡ ಅನುಭವ….. ಹನ್ನೆರಡನೆಯ ಶತಮಾನದಲ್ಲಿ ವಿಶ್ವಗುರು ಶ್ರೀ ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾನತಾ ಕ್ರಾಂತಿ ಅಂದಿನ ವಿಷಮ ವ್ಯವಸ್ಥೆಯನ್ನು ನಡುಗಿಸಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿತು……..ಸರ್ವರಿಗೂ “ಸಮಪಾಲು, ಸರ್ವರಿಗೂ ಸಮಬಾಳು” ಎಂಬ ಸರ್ವೋದಯ ಸಿದ್ದಾಂತದ ಅನುಷ್ಠಾನಕ್ಕೆ ಶ್ರಮಿಸಿದ ಬಸವಾದಿ ಪ್ರಮಥರಿಗೆ ಪಟ್ಟಭದ್ರರು ಕೊಟ್ಟ ಕಷ್ಟ ಅಷ್ಟಿಷ್ಟಲ್ಲ……..ಸಮ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದ ಗುರು ಬಸವಣ್ಣನವರು ರೂಪಿಸಿದ ಅನುಭವ ಮಂಟಪವು ವಿಶ್ವದ ಮೊದಲ ಸಂಸತ್ ಆಗಿ ಕಾರ್ಯ ನಿರ್ವಹಿಸಿದ್ದು ಕನ್ನಡಿಗರ ಪಾಲಿನ ಹೆಮ್ಮೆ, ಭಾರತೀಯ ಸಂವಿಧಾನದ ಎಲ್ಲ ಆಶಯಗಳನ್ನು ಅಂದೇ ಧ್ವನಿಸಿತ್ತು ವಚನಸಾಹಿತ್ಯ,ವಿಶ್ವ ಸಾಹಿತ್ಯಕ್ಕೆ ಕನ್ನಡಿಗರ ಕೊಡುಗೆಯೇ ವಚನಗಳು, ಸಮತೆಯ ಸಾರಲಿಕ್ಕೆ ರೂಪುಗೊಂಡ ವಚನ ಸಾಹಿತ್ಯಕ್ಕೆ ಕಲ್ಯಾಣ ಕ್ರಾಂತಿಯ ತರುವಾಯ ಕುತ್ತು ಬಂದಾಗ ಗುರು ಬಸವಣ್ಣನವರ ಸೋದರಳಿಯ ಅಂದರೆ ಅಕ್ಕ ನಾಗಮ್ಮ ಮತ್ತು ಶಿವದೇವ ದಂಪತಿಗಳ ಪುತ್ರ ಶ್ರೀ ಚನ್ನಬಸವಣ್ಣನವರು ಸಾವಿರಾರು ಶರಣರೊಂದಿಗೆ ಕಲ್ಯಾಣ ತೊರೆದು ಗೋವಾ ಕದಂಬರ ಆಡಳಿತ ವ್ಯಾಪ್ತಿಯಲ್ಲಿದ್ದ ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿರುವ ದಟ್ಟ ಅರಣ್ಯ ಮಧ್ಯದ ಪ್ರಶಾಂತ ವಾತಾವರಣದಲ್ಲಿ ಸಾಹಿತ್ಯ ರಕ್ಷಿಸಿ ತಮ್ಮ ಅನುಭಾವ ಮುಂದುವರೆಸುತ್ತಾರೆ ಅವರು ಉಳಿದ ತಾಣವೇ ಮುಂದೆ ಉಳವಿ ಎಂದು ಪ್ರಸಿದ್ಧ ವಾಗುತ್ತದೆ, ಅವರು ಸಾಗಿದ ಮಾರ್ಗದುದ್ದಕ್ಕೂ ಜನರು ಅವರ ಸ್ಮಾರಕ ರೂಪಿಸಿ ಇಂದಿಗೂ ಭಕ್ತಿ ಶೃದ್ದೆಯಿಂದ ನಡೆದುಕೊಳ್ಳುತ್ತಾರೆ ಉಳವಿಯಲ್ಲಿ ಭಾರತ ಹುಣ್ಣಿಮೆಯ ಮಘ ನಕ್ಷತ್ರದಂದು ಸಂಜೆ ಮಹಾರಥೋತ್ಸವ ಸಾಂಗವಾಗಿ ನೆರವೇರುತ್ತಿದ್ದಂತೆ ಬಸವ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟುತ್ತದೆ, ಚೆನ್ನಬಸವಣ್ಣನವರು ಮಹಾರಥದಲ್ಲಿ ಸಾಗಿ ಬರುತ್ತಿದ್ದಂತೆ ಸಹ್ಯಾದ್ರಿಯ ಶಿಖರಗಳಲ್ಲಿ ಹರಹರ ಮಹಾದೇವ ಜಯಘೋಷ ಪ್ರತಿದ್ವನಿಸುತ್ತದೆ.
-ಕೆ, ಎಸ್, ಕೋರಿಶೆಟ್ಟರ್ ಬೆಳಗಾಲಪೇಟೆ