ಜನಪದರ ಪ್ರಕೃತಿ ಆರಾಧನೆಯ ಹಬ್ಬ ಭಾರತ ಹುಣ್ಣಿಮೆ

ಜನಪದ

ಜನಪದರ ಪ್ರಕೃತಿ ಆರಾಧನೆಯ ಹಬ್ಬ ಭಾರತ ಹುಣ್ಣಿಮೆ

ಮಾನವನಿಗೂ ಪ್ರಕೃತಿಗೂ ಅವಿನಾಭಾವ ಸಂಬಂಧ. ಮಾನವನ ಬದುಕು ಅವಲಂಬಿತವಾಗಿರುವುದೆ ಪ್ರಕೃತಿಯ ಮೇಲೆ. ಪ್ರಕೃತಿ ನೀಡುವ ಗಾಳಿ, ಬೆಳಕು, ಅಗ್ನಿ, ಮಳೆ, ಬೆಳೆಯಿಂದ ಮನುಷ್ಯ ತನ್ನ ಹಸಿವು ,ನೀರಡಿಕೆಗಳನ್ನು ನಿಗಿಸಿಕೊಳ್ಳುತ್ತಾನೆ.ತನ್ನ ಬದುಕನ್ನು ಕಟ್ಟಿಕೊಳ್ಳುತ್ತಾನೆ.ತಮ್ಮ ಬದುಕಿನ ಮೂಲವಾದ ಇಂತಹ ಪ್ರಕೃತಿಯನ್ನು ನೆನೆಯುವದು ತಮ್ಮ ಆದ್ಯ ಕರ್ತವ್ಯ ಎಂದು ನಂಬಿಕೊಂಡು ಬಂದವರು ಜನಪದರು.ಅವರು ನಿಸರ್ಗದಲ್ಲಿ ತಾಯಿಯನ್ನು ಕಾಣುವವರು.ಜಗದ ಜೀವಿಗಳಿಗೆಲ್ಲ ಅನ್ನ,ನೀರು, ಗಾಳಿ ಬೆಳಕು ನೀಡಿ ಸಂರಕ್ಷಿಸುವ, ಪಾಲನೆ,ಪೋಷಣೆ ಮಾಡುವ ನಿಸರ್ಗ ಅವರ ಪಾಲಿಗೆ ತಾಯಿಯಂತೆ.ಅವರ ದೃಷ್ಟಿಯಲ್ಲಿ ಪ್ರಕೃತಿ ಬೇರೆಯಲ್ಲ ತಮ್ಮ ಹೆತ್ತ ತಾಯಿ ಬೇರೆಯಲ್ಲ.ಹಾಗಾಗಿ ಜನಪದರು ತಾಯಿಯಂತೆ ಪ್ರಕೃತಿಯನ್ನು ಪ್ರೀತಿಸುವವರು,ಗೌರವಿಸುವವರು,ಆರಾಧಿಸುವವರು. ನಿಸರ್ಗದಲ್ಲಿರುವ ಪ್ರತಿಯೊಂದು ವಸ್ತುವನ್ನು ಪೂಜಿಸುವವರು.ನಿಸರ್ಗದ ಆರಾಧನೆಯನ್ನು ತಮ್ಮ ಸಂಸ್ಕೃತಿಯ ಒಂದು ಭಾಗವನ್ನಾಗಿ ಮಾಡಿಕೊಂಡವರು.ಜನಪದರು ಪ್ರಕೃತಿಯ ಆರಾಧನೆಗೆ ಮೀಸಲಾಗಿಟ್ಟ ಹಬ್ಬಗಳಲ್ಲಿ ಭಾರತ ಹುಣ್ಣಿಮೆ ಒಂದು.

‌   ಮಾಘ ಮಾಸದಲ್ಲಿ ಬರುವ ಪೂರ್ಣಿಮೆಯನ್ನು ಭಾರತ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ಹಬ್ಬವನ್ನು ಜನಪದರು ‘ ತೆನೆ ಕಟ್ಟುವ ಹಬ್ಬ’, ‘ ದೇವರ ಕರೆದುಕೊಳ್ಳುವ ಹಬ್ಬ’,’ಬೆಳದಿಂಗಳ ಹಬ್ಬ’ ‘ ಬಡವಿ ಭಾರತ ಹುಣ್ಣಿಮೆ’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.ಇದು ಹಿಂಗಾರು ಬೆಳೆಗಳ ರಾಶಿಯ ಸಂದರ್ಭದಲ್ಲಿ ಬರುವ ಹಬ್ಬ. ಈ ಹೊತ್ತಿಗೆ ಹಿಂಗಾರು ಬೆಳೆಗಳಾದ ಬಿಳಿಜೋಳ,ಗೋಧಿ,ಅಗಸೆ,ಕಡಲೆ, ಕುಸುಬೆ ಕೊಯ್ಲಿಗೆ ಬಂದು ಹೆಚ್ಚು ಕಡಿಮೆ ರಾಶಿ ಮಾಡುವ ಕಾರ್ಯ ಮುಗಿಯುತ್ತಾ ಬಂದಿರುತ್ತದೆ.ಹೀಗಾಗಿ ಇದು ಕೃಷಿಕರ ಪಾಲಿಗೆ ಸುಗ್ಗಿ ಹಬ್ಬ ಸಹ ಹೌದು.

ಈ ಹಬ್ಬದ ಆಚರಣೆ ಹುಣ್ಣಿಮೆ ಐದು ದಿನಗಳು ಇರುವಾಗಲೇ ಪ್ರಾರಂಭವಾಗುತ್ತದೆ.ಅಂದಿನಿಂದ ಹುಣ್ಣಿಮೆ ಐದು ದಿನಗಳು ಇರುವಂತೆ ಹೆಣ್ಣುಮಕ್ಕಳು ಮನೆಯ ಮುಂದೆ ‘ಬೆಳದಿಂಗಳು ‘ ಹಾಕುವ ಮೂಲಕ ಹಬ್ಬವನ್ನು ಪ್ರಾರಂಭಿಸುತ್ತಾರೆ. ಬೆಳದಿಂಗಳು ಹಾಕುವದೆಂದರೆ ಮನೆಯ ಮುಂದೆ ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಅಂಗಳದಲ್ಲಿ ಆಕಳ ಸೆಗಣಿಯಿಂದ ಸಾರಿಸಿ (ಇಂದು ಬಹುತೇಕ ಸೆಗಣಿ ನೀಡುವ ಆಕಳುಗಳ ಪ್ರಮಾಣವು ಕಡಿಮೆ ಜೊತೆಗೆ ನಾಡೆಲ್ಲ ಕಾಂಕ್ರೀಟ್ ಕಾಡಾಗಿ ಸಾರಿಸುವ ಕ್ರಿಯೆಯು ನಿಂತು ಆಧುನಿಕ ಮಹಿಳೆಯರು ಅಂಗಳಿಗೆ ನೀರು ಹೊಡೆದು ಈ ಕಾರ್ಯ ಜರುಗಿಸುತ್ತಿದ್ದಾರೆ ) ಅಲ್ಲಿ ರಂಗೋಲಿಯಿಂದ ವಿವಿಧ ಬಗೆಯ ಚಿತ್ರಗಳನ್ನು ಬಿಡಿಸುತ್ತಾರೆ. ಈ ಕಾರ್ಯ ನಿರಂತರವಾಗಿ ಐದು ದಿನಗಳವರೆಗೆ ನಡೆಯುತ್ತದೆ. ನಾಲ್ಕು ದಿನ ವಿವಿಧ ಬಗೆಯ ಚಿತ್ರಗಳನ್ನು ಬಿಡಿಸುತ್ತಾರೆ. ಯಾವುದೇ ಚಿತ್ರ ಬಿಡಿಸಿದರೂ ಆ ರಂಗೋಲಿಯ ಪಕ್ಕದಲ್ಲಿ ಸೂರ್ಯ, ಚಂದ್ರ, ನಕ್ಷತ್ರ, ಹಾವು, ಚೇಳು,ಪಾದ (ಒಂದು ಜೊತೆ ಹೆಜ್ಜೆ ಗುರುತುಗಳು ) ಕಡ್ಡಾಯವಾಗಿ ಇರಲೇಬೇಕು.

ಈ ಆಚರಣೆ ಅವರು ಪ್ರಕೃತಿಯ ಮೇಲಿಟ್ಟಿರುವ ಅನನ್ಯವಾದ ಭಕ್ತಿಯನ್ನು ತೋರಿಸುತ್ತದೆ.ಇದು ಅವರು ಭೂಮಿಗೆ ಬಿಸಿಲು ಬೆಳದಿಂಗಳನ್ನು ನೀಡಿ ತಮ್ಮ  ಬೆಳೆಗಳ ಬೆಳವಣಿಗೆಗೆ ಸಹಾಯಕರಾದ ಸೂರ್ಯ ಚಂದ್ರ ನಕ್ಷತ್ರ ಗಳನ್ನು ಜೊತೆಗೆ ತಾವು ಹಗಲು ಇರುಳಿನಲ್ಲಿ ಭೂಮಿಯಲ್ಲಿ ದುಡಿಯುವಾಗ ತಮಗೆ ಯಾವುದೇ ರೀತಿಯಲ್ಲಿ ಅಪಾಯ ಮಾಡದ,ತಾವು ಹಾಕಿದ ಬೀಜಗಳನ್ನು ತಿನ್ನುವ ಇಲಿಗಳನ್ನು ನಾಶಪಡಿಸುವ ಮೂಲಕ ತಮ್ಮ ಬೆಳೆಗಳ ಪಾಲನೆ ಮಾಡುವ ವಿಷಜಂತುಗಳನ್ನು ರಂಗೋಲಿಯಲ್ಲಿ ಚಿತ್ರಿಸಿ ಅವುಗಳಿಗೆ ಕೃತಜ್ಞತೆಯನ್ನು ಸಲ್ಲಿಸುವ ಪರಿ. ಇಲ್ಲಿರುವ ಜೊತೆ ಪಾದಗಳು ತಮ್ಮ ಊರಿನಲ್ಲಿ ಆಗಿ ಹೋದ ಸತ್ಪುರುಷರ ಪಾದಗಳಾಗಿದ್ದು ಅವುಗಳನ್ನು ಚಿತ್ರಿಸುವ ಮೂಲಕ ತಮ್ಮನ್ನು ಉತ್ತಮ ದಾರಿಯಲ್ಲಿ ನಡೆಸಿರೆಂದು ಅವರನ್ನು ಸ್ಮರಿಸುತ್ತಾರೆ. ತಮ್ಮ ಬದುಕು ಕಟ್ಟಿಕೊಳ್ಳಲು ಸಹಾಯಕವಾದ ಪ್ರತಿಯೊಂದು ವಸ್ತುವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತಾರೆ.ನಿತ್ಯ ಹಾಕಿದ ಆ ರಂಗೋಲಿ ಬೆಳದಿಂಗಳಿಗೆ ಮತ್ತು ಹುಣ್ಣಿಮೆ ಬೆಳದಿಂಗಳು ಸೂಸುವ ಚಂದ್ರನಿಗೆ ಪೂಜೆ ನಡೆಯುತ್ತದೆ.

ನಾಲ್ಕನೆಯ ದಿನ  (ಹುಣ್ಣಿಮೆ ಹಿಂದಿನ ದಿನ ) ವನ್ನು ದೇವರನ್ನು ಕರೆದುಕೊಳ್ಳುವ ಹಬ್ಬ ಅಥವಾ ತೆನೆ ಕಟ್ಟುವ ಹಬ್ಬ ಎಂದು ಕರೆಯುತ್ತಾರೆ. ಈ ದಿನ ಅವರಿಗೆ ಸರ್ವಕಾರ್ಯಗಳಿಗೂ ಅತ್ಯಂತ ಪ್ರಶಸ್ತವಾದ ದಿನ.ಏನೇ ಶುಭ ಕಾರ್ಯಗಳನ್ನು ಪ್ರಾರಂಭಿಸುವದಿದ್ದರೂ ಈ ದಿನವೇ ಪ್ರಾರಂಭಿಸುತ್ತಾರೆ. ಅಂದು ತಮ್ಮ ಹೊಲದಲ್ಲಿ ಬೆಳೆದ ಮುಂಗಾರಿನ ಬೆಳೆಗಳಾದ ಜೋಳ, ಗೋಧಿ, ಅಗಸಿ,ಕಡಲೆ, ಕುಸುಬೆ ಹೀಗೆ ಎಲ್ಲ ಧಾನ್ಯಗಳ ತೆನೆಗಳನ್ನು ತಂದು ಅವೆಲ್ಲವನ್ನೂ ತಮ್ಮ ಮನೆಯ ಸಂಪ್ರದಾಯದಂತೆ ತೋರಣ ಮಾಡಿಯೋ ಅಥವಾ ಗುಚ್ಛವನ್ನಾಗಿಯೂ ಮಾಡಿ ಕಟ್ಟುತ್ತಾರೆ.ಈ ತೆನೆಗಳ ಜೊತೆಗೆ ಶಕ್ತಿ ಮಾತೆಯ ಸಂಕೇತವಾದ ಬನ್ನಿ ಪತ್ರಿ ಮತ್ತು ಗಣಪತಿಗೆ ಪ್ರಿಯವಾದ ಬಿಳಿ ಎಕ್ಕೆಯನ್ನು ಕಟ್ಟುತ್ತಾರೆ. ನಂತರ ಅವನ್ನು ದೇವರ ಜಗಲಿಯ ಮೇಲಿಟ್ಟು ವಿಭೂತಿ ಕುಂಕುಮ ಗಳಿಂದ ಪೂಜಿಸಿ ನಂತರ ಅವನ್ನು ದೇವರ ಜಗಲಿಯ ಮೇಲೆ ಮತ್ತು ಮನೆಯ ತೊಲಬಾಗಿಲಿಗೆ ಕಟ್ಟುತ್ತಾರೆ.ಹೀಗೆ ಬೆಳೆಗಳ ತೆನೆಗಳನ್ನು ಬಾಗಿಲಿಗೆ ಕಟ್ಟುವದರಿಂದ ಇದಕ್ಕೆ ತೆನೆ ಕಟ್ಟುವ ಹಬ್ಬ ಎನ್ನುತ್ತಾರೆ.

ಇದರ ತರುವಾಯ ನಡೆಯುವುದೆ ದೇವರನ್ನು ಕರೆದುಕೊಳ್ಳುವ ಸಂಭ್ರಮ. ತೆನೆಗಳಿಗೆ ಪೂಜೆ ಸಲ್ಲಿಸಿದ ನಂತರ ಮನೆಯ ಮಗನು ಕೈಯಲ್ಲಿ ಒಂದು ಗಂಗಾಳ (ತಾಟು ಅಥವಾ ತಟ್ಟೆ ) ಹಿಡಿದುಕೊಂಡು ಅದಕ್ಕೆ ಚಮಚ ಅಥವಾ ಲಟ್ಟಣಿಗೆ ಇಂದ ಬಾರಿಸುತ್ತಾ ‘ ಒಳಗಿನ ದೇವರು ಹೊರಗೆ, ಹೊರಗಿನ ದೇವರು ಒಳಗೆ ‘ ಎನ್ನುತ್ತಾ ದೇವರ ಜಗಲಿಯಿಂದ ಮನೆಯ ತೊಲಬಾಗಿಲಿನವರೆಗೆ ಹೋಗಿ ಮತ್ತೆ ಜಗುಲಿಯವರೆಗೆ ಮರಳಿ ಬರುತ್ತಾನೆ.ಆಗ ಹೊಸ ದೇವರು ಬಂದಂತೆ. ನಂತರ ಕರೆದುಕೊಂಡ ಹೊಸ ದೇವರಿಗೆ ಉದಿನಕಡ್ಡಿ ಬೆಳಗಿ,ಗಂಟೆ ಬಾರಿಸಿ ಪೂಜೆ ಸಲ್ಲಿಸುತ್ತಾರೆ.ನಂತರ ಕಡ್ಡಾಯವಾಗಿ ಕುದಿಸಿದ ಗಜ್ಜರಿ ಮತ್ತು ಗೆಣಸನ್ನು ಕರೆದುಕೊಂಡ ಹೊಸ ದೇವರಿಗೆ ಎಡೆ  ಮಾಡುತ್ತಾರೆ.ಕೆಲವರು ಗಜ್ಜರಿ, ಗೆಣಸಿನೊಂದಿಗೆ ಚುರಮರಿಯನ್ನು ಸಹ ನೈವೇದ್ಯಕ್ಕೆ ಇಡುತ್ತಾರೆ.

ವರ್ಷಪೂರ್ತಿ ಹೊಲದಲ್ಲಿ ದುಡಿದ ರೈತ ಮಕ್ಕಳು ಈಗ ಫಸಲನ್ನು ಪಡೆಯುವ ಸಂದರ್ಭ.ತಮಗೆ ಫಸಲನ್ನು ಕರುಣಿಸಿದ ಭೂತಾಯಿಯನ್ನು ಜೊತೆಗೆ ತಮ್ಮ ಬದುಕಿಗೆ ಆಸರೆಯಾದ ಬೆಳೆಯನ್ನು ಅವರು ದೇವರು ಎಂದು ಭಾವಿಸಿದವರು.ಹಾಗಾಗಿ ಅವುಗಳಿಗೆ ಪೂಜಿಸಿ ಕೃತಜ್ಞತೆ ಸಲ್ಲಿಸುತ್ತಾರೆ. ತಾವು ಬೆಳೆದ ಬೆಳೆಯನ್ನು ತೋರಣ ಕಟ್ಟಿ ಸಂಭ್ರಮಿಸುತ್ತಾರೆ.ಜೊತೆಗೆ ಆಗ ಬಹುತೇಕ ರಾಶಿ ಕಾರ್ಯ ಮುಗಿದಿದ್ದು ರೈತರು ಬೆಳೆದ ಹೊಸ ಧಾನ್ಯಗಳ ಸಂಗ್ರಹಣೆಗೆ ತೊಡಗಬೇಕು.ಬಂದ ಹೊಸ ಬೆಳೆಗಳನ್ನು ಮೊದಲು ಕಣಜ,ಹಗೆವು ,ಬಳತ ಗಳಲ್ಲಿ ಸಂಗ್ರಹಿಸಿಟ್ಟ ಹೋದ ವರ್ಷದ ಹಳೆಯ ಧಾನ್ಯಗಳೊಂದಿಗೆ ಸೇರಿಸುವಂತಿಲ್ಲ.ಹಾಗೆ ಹಳೆಯ ಧಾನ್ಯಗಳೊಡನೆ ಹೊಸ ಧಾನ್ಯಗಳನ್ನು ಸೇರಿಸಿದರೆ ಎರಡು ಧಾನ್ಯಗಳು ಕೆಡುವ ಸಾಧ್ಯತೆ ಇದೆ.ಇದರ ಅರಿವು ನಮ್ಮ ಹಿರಿಯರಿಗಿತ್ತು.ಹಾಗಾಗಿ ಹಳೆಯ ಧಾನ್ಯಗಳನ್ನು ಹೊರತೆಗೆದು ಅವನ್ನು ದಿನ ನಿತ್ಯದ ಬಳಕೆಗೊ,ಆಯಗಾರರಿಗೆ ಕೊಡಲು,ದಾನ ಧರ್ಮ ಮಾಡಲೊ ಇನ್ನೂ ಹೆಚ್ಚಿದ್ದರೆ ಮಾರಾಟ ಮಾಡಲು ಬಳಸುವದು ಅನಿವಾರ್ಯ. ಹಾಗೆ ಹಗೆದ ಒಳಗಿದ್ದ ಧಾನ್ಯಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ನಮ್ಮ ಜನಪದರು ‘ಒಳಗಿನ ದೇವರು ಹೊರಗೆ’ ಎಂದು ಕರೆದರು. ಈ ವರ್ಷ ಹೊಲದಿಂದ ಮನೆಯೊಳಗೆ ಪ್ರವೇಶಿಸುವ ಹೊಸ ಧಾನ್ಯಗಳು ಹೊರಗಿನ ದೇವರು. ಅವನ್ನು ಸ್ವಾಗತಿಸುವುದೆ ‘ಹೊರಗಿನ ದೇವರು ಒಳಗೆ’ .ಹೀಗೆ ತಾವು ಬೆಳೆದ ಬೆಳೆಗಳನ್ನು ದೇವರು ಎಂದು ಭಾವಿಸಿ ಅವನ್ನು ವಿಶಿಷ್ಟವಾಗಿ ಸ್ವಾಗತಿಸುವ ಅವರ ಪ್ರಕೃತಿ ಮೇಲಿನ ಭಕ್ತಿ, ಪ್ರೇಮ ಅನನ್ಯವಾದದ್ದು.

ಐದನೆಯ ದಿನ ಹುಣ್ಣಿಮೆ.ಅಂದು ಪ್ರತಿಯೊಬ್ಬರೂ ಈ ವರ್ಷ ಬಂದ ಹೊಸ ಕಡಲೆ,ಗೋಧಿ ಗಳಿಂದ ಹೋಳಿಗೆ ಮಾಡಿ ದೇವರಿಗೆ ನೈವೇದ್ಯ ಮಾಡುತ್ತಾರೆ. ( ವಿಶ್ವಕರ್ಮರು ಮಾತ್ರ ಯುಗಾದಿ ಪಾಡ್ಯದ ದಿನ ಕಾಳಮ್ಮನಿಗೆ ನಿಧಿ ಅರ್ಪಿಸುವವರೆಗೆ ಹೊಸ ಬೆಳೆಗಳನ್ನು ಬಳಸುವದಿಲ್ಲವಾದ್ದರಿಂದ ಅವರು ಹೊಸ ಧಾನ್ಯಗಳನ್ನು ಬಳಸುವುದಿಲ್ಲ). ಇಂದಿನ ದಿನ ಎಷ್ಟೇ ಬಡವರಿದ್ದರೂ ಹೋಳಿಗೆ ಮಾಡುವದು ಕಡ್ಡಾಯ.ಹೊಲ ಬೆಳೆ ಇಲ್ಲದ ಅಕ್ಕಪಕ್ಕದವರಿಗೆ ಬೆಳೆದವರು ಧಾನ್ಯಗಳನ್ನು ಕೊಡುತ್ತಾರೆ. ಸುಗ್ಗಿ ಹಬ್ಬವಾದ ಇದನ್ನು ಪ್ರತಿಯೊಬ್ಬರೂ ಸಂತೋಷದಿಂದ ಆಚರಿಸಬೇಕೆಂಬ ಕಾಳಜಿ ಇಲ್ಲಿದೆ.ಎಷ್ಟೇ ಬಡವರಾದರೂ ಈ ಹಬ್ಬವನ್ನು ಸಂತೋಷದಿಂದ ಅಚರಿಸುವದರಿಂದಲೇ ಇದನ್ನು ‘ ಬಡವಿ ಭಾರತ ಹುಣ್ಣಿಮೆ’ ಎನ್ನುತ್ತಾರೆ.ಜೊತೆಗೆ ಸವದತ್ತಿ ಯಲ್ಲಮ್ಮನನ್ನು ಮನೆದೇವರಾಗಿ ಹೊಂದಿದವರು ,ಮನೆಯಲ್ಲಿ ಪರಂಪರೆ ಹೊಂದಿದವರು ಅಂದು ಯಲ್ಲಮ್ಮನ ಗುಡ್ಡಕ್ಕೆ ಹೋಗಿಯೋ ಅಥವಾ ಮನೆಗೆ ಯಲ್ಲಮ್ಮನ ಜೋಗತಿಯರನ್ನು ಕರೆದು ಪಡ್ಡಲಿಗೆ ತುಂಬುತ್ತಾರೆ.

ಅಂದು ಸಾಯಂಕಾಲ ಮಣ್ಣಿನ ಗೋಡೆ ಇದ್ದಲ್ಲಿ ಸುಣ್ಣದಿಂದ,ಸುಣ್ಣದ ಗೋಡೆ ಇದ್ದಲ್ಲಿ ಕೆಮ್ಮಣ್ಣಿನಿಂದ ಚುಕ್ಕೆಗಳನ್ನಿಟ್ಟು ಮನೆಯ ಗೋಡೆಯ ಮೇಲೆ ತೇರಿನ ಚಿತ್ರ ಬಿಡಿಸುತ್ತಾರೆ. ಆದರೆ ಇಂದು ಬಹುತೇಕ ಮಣ್ಣಿನ,ಸುಣ್ಣದ ಗೋಡೆಗಳ ಸ್ಥಾನವನ್ನು ಪೆಂಟ್,ಡಿಸ್ಟಂಪರ್ ಅವರಿಸಿರುವದರಿಂದ ಹೆಣ್ಣುಮಕ್ಕಳು ಮನೆ ಅಂಗಳದಲ್ಲಿ ರಂಗೋಲಿ ಇಂದಲೇ ತೇರನ್ನು ಬಿಡಿಸುತ್ತಾರೆ.ತೇರಿನಲ್ಲಿ ಪ್ರಕೃತಿ ಪುರುಷನ ಸಂಕೇತವಾದ ಈಶ್ವರನನ್ನು ಪ್ರತಿಷ್ಠಾಪಿಸಿರುತ್ತಾರೆ.ಪ್ರಕೃತಿಯಲ್ಲಿ ಸೃಷ್ಟಿಕ್ರಿಯೆ ನಡೆಯಬೇಕಾದರೆ ಪ್ರಕೃತಿ ಪುರುಷರಿಬ್ಬರೂ ಬೇಕು. ಅದರ ಸಂಕೇತವಾಗಿ ಇಲ್ಲಿ ಪ್ರಕೃತಿ ಪುರುಷರಿಬ್ಬರ ಆರಾಧನೆಯು ನಡೆಯುತ್ತದೆ.ಈ ಮೂಲಕ ಸುಗ್ಗಿಯ ತೇರನ್ನು ಎಳೆದು ಸಂಭ್ರಮ ಪಡುತ್ತಾರೆ. ಅಂದು ಸಹ ದೇವರ ತೇರಿನ (ರಥ )ಜೊತೆಗೆ ನಿತ್ಯದಂತೆ ಸೂರ್ಯ,ಚಂದ್ರ, ನಕ್ಷತ್ರ, ಹಾವು,ಚೇಳು, ಪಾದಗಳ ಚಿತ್ರಗಳನ್ನು ಬಿಡಿಸುತ್ತಾರೆ.ತೇರಿನ ಜೊತೆಗೆ ಬಿಡಿಸಿದ ಎಲ್ಲಾ ಬೆಳದಿಂಗಳ ಚಿತ್ರಗಳಿಗೆ ಪೂಜೆ ಸಲ್ಲಿಸಿ ,ಹೊಸ ಧಾನ್ಯಗಳಿಂದ ತಯಾರಿಸಿದ ಎಡೆಯನ್ನು ಹಿಡಿಯುತ್ತಾರೆ.

ಇಂದು ನಾಗರಿಕರು ಎನಿಸಿಕೊಂಡ ಜನರು ತಮಗೆ ಉಸಿರು ಕೊಡುವ ಈ ಪ್ರಕೃತಿಯನ್ನು ನಾಶ ಮಾಡುತ್ತಾ ತಮ್ಮ ಅಂತ್ಯಕ್ಕೆ ತಾವೇ ಕಾರಣರಾಗುತ್ತಿದ್ದಾರೆ.ಹಣದ ಹಿಂದೆ ಬಿದ್ದು ತಮ್ಮ ಆರೋಗ್ಯಕರ ನೆಮ್ಮದಿಯ ಬದುಕಿಗೆ ತಾವೇ ಸಮಾಧಿ ತೊಡುತ್ತಿದ್ದಾರೆ.ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಹೆಸರಿನಲ್ಲಿ ಕೊಳ್ಳಬಾಕುತನದ ಸಂಸ್ಕೃತಿಯನ್ನು ರೂಢಿಸಿಕೊಂಡು ವಿನಾಶದತ್ತ ದಾಪುಗಾಲು ಹಾಕುತ್ತಿದ್ದಾರೆ.ಆದರೆ ಇಂತಹ ವಾತಾವರಣದ ಮಧ್ಯೆಯೂ ನಮ್ಮ ಜನಪದರು ಇವುಗಳತ್ತ ಮುಖ ಮಾಡದೆ ಪ್ರಕೃತಿಯಲ್ಲಿ ದೇವರನ್ನು ಕಾಣುತ್ತಿದ್ದಾರೆ.ತಮ್ಮ ಪ್ರಕೃತಿ ಆರಾಧನೆಯ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.ಇವರ ಈ ಪ್ರಕೃತಿಯನ್ನು ಗೌರವಿಸುವ, ಪ್ರೀತಿಸುವ ಆರಾಧಿಸುವ ಸಂಸ್ಕೃತಿಯನ್ನು ಎಲ್ಲರೂ ಅನುಸರಿಸಿದಾಗ ಮಾತ್ರ ನಮ್ಮೆಲ್ಲರ ಬದುಕು ಆರೋಗ್ಯಯುತವಾಗಿರಲು ಸಾಧ್ಯ.


ಡಾ.ರಾಜೇಶ್ವರಿ ವೀ.ಶೀಲವಂತ, ಬೀಳಗಿ

 

Don`t copy text!