ಶೂ ಮತ್ತು ಆತ್ಮಗೌರವ

ಶೂ ಮತ್ತು ಆತ್ಮಗೌರವ

“ನಿಮ್ಮಪ್ಪ ನಮ್ಮ ಕುಟುಂಬಕ್ಕೆ ಶೂ ಹೊಲಿದು ಕೊಡ್ತಿದ್ದ ಗೊತ್ತಾ?”

ವಿಶ್ವದ ಅಣ್ಣ ಎನಿಸಿಕೊಂಡಿರುವ ಅಮೇರಿಕಾಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅಬ್ರಹಾಂ ಲಿಂಕನ್ ಅವರಿಗೆ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೀಗೊಬ್ಬ ಕೇಳಿಬಿಟ್ಟ.

ಅದು ವಿಶ್ವದ ಗಣ್ಯಾತಿಗಣ್ಯರಿಂದಲೇ ತುಂಬಿದ್ದ ದೊಡ್ಡ ಸೆನೆಟ್ ಸಭಾಗೃಹ. ಆಗಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅಬ್ರಾಹಂ ಲಿಂಕನ್ ರಿಗೆ ಅಭಿನಂದನೆ ಸಲ್ಲಿಸಲು ಜಗತ್ತಿನ ಮೂಲೆ ಮೂಲೆಗಳಿಂದಲೂ ಬಂದಿದ್ದ ರಾಜಕಾರಣಿಗಳು, ವಿದ್ವಾಂಸರು, ಸಾಹಿತಿಗಳು, ಸೇನಾಧಿಕಾರಿಗಳು ಅಲ್ಲಿದ್ದರು.

ಇನ್ನೇನು ಅಭಿನಂದನಾ ಕಾರ್ಯಕ್ರಮ ಆರಂಭವಾಗುವುದರಲ್ಲಿತ್ತು. ಅಷ್ಟರಲ್ಲಿ ಬಿಳಿಯನೊಬ್ಬ ಎದ್ದು ನಿಂತು, “ಮಿಸ್ಟರ್ ಲಿಂಕನ್, ನಿಮ್ಮ ತಂದೆ ನಮ್ಮ ಕುಟುಂಬಕ್ಕೆ ಶೂ ಹೊಲಿದು ಕೊಡುತ್ತಿದ್ದರು. ಅದನ್ನು ನೀವು ಮರೆಯಬಾರದು” ಎಂದುಬಿಟ್ಟ.

ಶತಮಾನಗಳಿಂದಲೂ ತಮ್ಮ ಅಧೀನದಲ್ಲೇ ಇಟ್ಟುಕೊಂಡಿದ್ದ ಅಮೆರಿಕಾದ ಅಧ್ಯಕ್ಷೀಯ ಗಾದಿ ಒಬ್ಬ ಕರಿಯನ ಪಾಲಾಗಿದ್ದರಿಂದ ಬಿಳಿಯರಲ್ಲಿ ಸಹಜವಾಗಿಯೇ ಅಸೂಯೆ ಹುಟ್ಟಿಕೊಂಡಿತ್ತು. ಅಂಥವರ ಪ್ರತಿನಿಧಿಯಂತಿದ್ದ ಬಿಳಿಯನೊಬ್ಬ ಲಿಂಕನ್ ಅವರನ್ನು ಹಂಗಿಸಲು ಹೀಗೆ ಕೇಳಿಬಿಟ್ಟಿದ್ದ. ಅವನ ಮುಖದ ಮೇಲೆ ಕುಹಕ ನಗೆ ಲಾಸ್ಯವಾಡುತ್ತಿತ್ತು.

ಅವನ ಪ್ರಶ್ನೆಯಿಂದ ಸಭೆಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಗಣ್ಯರು ಏನೋ ತಪ್ಪು ಘಟಿಸಿದಂತೆ ಮುಖ ಮುಖ ನೋಡಿಕೊಂಡರು.

ಆದರೆ, ಲಿಂಕನ್ ವಿಚಲಿತರಾಗಲಿಲ್ಲ. ಕೇಳಿದವನ ಕಣ್ಣುಗಳನ್ನೇ ದಿಟ್ಟಿಸುತ್ತಾ ಮಾತನಾಡತೊಡಗಿದರು. ‘ಹೌದು ಸರ್, ಶೂ ಹೊಲಿಯುವ ಕುಶಲಕರ್ಮಿಯಾಗಿದ್ದ ನಮ್ಮಪ್ಪ ನಿಮ್ಮ ಕುಟುಂಬಕ್ಕೆ ಮತ್ತು ಇಲ್ಲಿನ ಅನೇಕ ಗಣ್ಯರ ಮನೆಗಳಿಗೆ ಶೂ ತಯಾರಿಸಿ ಸರಬರಾಜು ಮಾಡುತ್ತಿದ್ದುದು ನನಗೂ ಗೊತ್ತಿದೆ. ಆ ಕಾಲದಲ್ಲಿ ನಮ್ಮಪ್ಪನಷ್ಟು ಸುಂದರವಾಗಿ ಶೂ ಹೊಲಿಯುವವರು ನಮ್ಮ ಪ್ರಾಂತದಲ್ಲೇ ಇರಲಿಲ್ಲ. ಅವನು ತಯಾರಿಸುತ್ತಿದ್ದ ಶೂಗಳು ಕೇವಲ ಶೂಗಳಾಗಿರಲಿಲ್ಲ. ಅವು ಅಪ್ಪನ ಸೃಜನಶೀಲ ಪ್ರತಿಭೆಯನ್ನೆಲ್ಲ ಹೊತ್ತ ಕಲಾಕೃತಿಗಳಾಗಿರುತ್ತಿದ್ದವು. ನನಗೂ ಕೂಡ ನಮ್ಮಪ್ಪ ಸುಂದರವಾಗಿ ಶೂ ಹೊಲಿಯುವುದನ್ನು ಕಲಿಸಿಕೊಟ್ಟಿದ್ದಾರೆ. ನಮ್ಮಪ್ಪ ಮಾಡಿಕೊಟ್ಟ ಶೂಗಳಲ್ಲಿ ಏನಾದರೂ ದೋಷವಿದ್ದರೆ ದಯವಿಟ್ಟು ತಿಳಿಸಿ. ನಾನು ಮತ್ತೊಂದು ಜೊತೆ ಶೂ ತಯಾರಿಸಿ ಕೊಡುತ್ತೇನೆ. ಆದರೆ, ನನಗೆ ಗೊತ್ತಿರುವಂತೆ ಇದುವರೆಗೂ ಯಾವೊಬ್ಬ ಗ್ರಾಹಕನೂ ನಮ್ಮಪ್ಪನ ಚಮ್ಮಾರಿಕೆ ಕೌಶಲ್ಯದ ಬಗ್ಗೆ ಅನುಮಾನಪಟ್ಟಿಲ್ಲ. ಈ ಕುರಿತು ನನ್ನ ಅಪ್ಪನ ಬಗ್ಗೆ ನನಗೆ ಬೆಟ್ಟದಷ್ಟು ಹೆಮ್ಮೆ ಇದೆ’.

ಲಿಂಕನ್ ರ ಮಾತುಗಳನ್ನು ಕೇಳುತ್ತಿದ್ದ ಇಡೀ ಸಭಿಕರೆಲ್ಲ ಮೂಕವಿಸ್ಮಿತರಾದರು. ಲಿಂಕನ್ ರ ಮನಸ್ಸನ್ನು ಗಾಯಗೊಳಿಸುವ ಉದ್ದೇಶದಿಂದ ಕೇಳಿದ್ದ ಬಿಳಿಯನ ಕಣ್ಣುಗಳು ಸಹ ಪಶ್ಚಾತ್ತಾಪದಿಂದ ತೇವಗೊಂಡಿದ್ದವು.

ಲಿಂಕನ್ ರ ಈ ನಡೆಯಿಂದ ನಾವು ಕಲಿಯಬೇಕಾದುದಿಷ್ಟೇ; ನಮ್ಮನ್ನು ಘಾಸಿಗೊಳಿಸಲೆಂದೇ ಜನ ಕಾಯುತ್ತಿರುತ್ತಾರೆ. ಆದರೆ, ನಾವು ಮಾಡುವ ವೃತ್ತಿಯ ಬಗ್ಗೆ ನಮಗೆ ಆತ್ಮಾಭಿಮಾನವಿದ್ದರೆ ಅವರ ದುರುದ್ದೇಶ ಅವರಿಗೇ ತಿರುಗುಬಾಣವಾಗುತ್ತದೆ.

 

Don`t copy text!