ಪುಸ್ತಕ ಪರಿಚಯ
ಗಾಲಿಬ್ ಸ್ಮೃತಿ
ಲೇಖಕರು……. ಡಾ.ಮಲ್ಲಿನಾಥ. ಎಸ್ ತಳವಾರ
ಪ್ರಕಾಶಕರು… ಚಿರುಶ್ರೀ ಪ್ರಕಾಶನ ಗದಗ

ಡಾ.ಮಲ್ಲಿನಾಥ ಎಸ್ ತಳವಾರ ಅವರು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಈಗಾಗಲೇ ೧೨ ಕೃತಿಗಳನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಗಜಲ್ ಸಾಹಿತ್ಯಕ್ಕೆ ಮೋಹಿತರಾಗಿ ಗಜಲ್ ಸಾಹಿತ್ಯದ ಬಗ್ಗೆ ಆಳವಾಗಿ ಅಭ್ಯಾಸ ಮಾಡಿ, ಧ್ಯಾನಿಸಿ ಗಜಲ್ ರಚನೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಜಲ್ ಎಂದರೇನೆಂದು ತಮ್ಮದೇ ಒಂದು ವ್ಯಾಖ್ಯಾನದಲ್ಲಿ ಹೀಗೆ ಹೇಳುತ್ತಾರೆ. “ಗಜಲ್ ಉದು೯ ಕಾವ್ಯದ ಕೆನೆ, ಘನತೆ, ಗೌರವ, ಪ್ರತೀಕ್ಷೆಗಳ ಪ್ರತೀಕ. ಗಜಲ್ ಪ್ರೇಮ ಸಾಮ್ರಾಜ್ಞಿ, ರಸಜಲಧಿ, ಬದುಕಿನ ರುಚಿ, ಆತ್ಮಾನಂದದ ತಂಬೆಳಕು ,ಗಜಲ್ ಗಳೆಂದರೆ ಉದು೯ ಕಾವ್ಯದ ಕಂಬನಿಗಳು. ವಿಶ್ವದ ಎಲ್ಲ ಅಸಹಾಯಕ ಯಾತನೆಗಳ ಆರ್ತರೂಪವೇ ಇದರ ತಿರುಳು. ಈ ನೆಲೆಯಲ್ಲಿ ಗಜಲ್ ಗಳಲ್ಲಿ ಪ್ರೇಮ ಎನ್ನುವುದೇ ಒಂದು ಭಾಷೆ, ಪ್ರೇಮ ಭಂಗುರ, ಕ್ಷಣ ಭಂಗುರ ಗಜಲ್ ದ ನಾದ, ಬದುಕಿನ ನೋವುಗಳಿಗೆ ಸಾವೇ ಅಂತಿಮ ಸಾಂತ್ವನ, ಅಲ್ಲಿಯವರೆಗೆ ಹೃದಯ ಹೊತ್ತಿ ಉರಿಯ ಬೇಕು, ಆ ಜ್ವಾಲೆಯ ಕಂಪುನ್ನು ಉಣಬಡಿಸುವುದೇ ಈ ಗಜಲ್. ಈ ಹಿನ್ನೆಲೆಯಲ್ಲಿ ಸಾವಿಗೆ ಮರು ಹುಟ್ಟು ನೀಡಿರುವುದು ಕೂಡ ಇದೇ ಗಜಲ್ ,ಈ ಗಜಲ್ …!! ಅಂತೆಯೇ ಗಜಲ್ ಉದು೯ ಕಾವ್ಯದ ಮುಕಟವಾಗಿ ಪ್ರಜ್ವಲಿಸುತಿದೆ. ಗಜಲ್ ಸುಕೋಮಲ ಭಾವಗಳ ಅಭಿವ್ಯಕ್ತಿಗೆ ಉತ್ತಮ ಮಾಧ್ಯಮವಾಗಿದೆಂದು ಹೇಳುತ್ತಾರೆ. ಇದು ಮನು ಕುಲದ ಸಮಗ್ರ ವಿಷಯಗಳನ್ನು ತನ್ನ ಒಡಲೊಳಗೆ ಗಭಿ೯ಕರಸಿ ಕೊಂಡಿದೆ .ಗಜಲ್ ಬಾಹ್ಯ ಜಗತ್ತನ್ನು ಅತಿಕ್ರಮಿಸಿ ಅಲೌಕಿಕದ ಕಡೆಗೆ ನಮ್ಮನೊಯ್ಯುತ್ತದೆ.” ಡಾ.ಮಲ್ಲಿನಾಥ ತಳವಾರ ಅವರು ಗಜಲ್ ಬಗ್ಗೆ ಆಳವಾಗಿ ಅಭ್ಯಾಸಿಸಿ ಅದರ ನಿಯಮಗಳನ್ನು ತಿಳಿದುಕೊಂಡು ಗಜಲ್ ಗಳನ್ನು ರಚಿಸಿದ್ದಾರೆ.

(ಕೃತಿಕಾರ -ಡಾ.ಮಲ್ಲಿನಾಥ ತಳವಾರ)

ಗಾಲಿಬ್ ಸ್ಮೃತಿ ” ಸಂಕಲನದಲ್ಲಿ ತಳವಾರ ಅವರ ಒಟ್ಟು ೧೦೧ ಗಜಲ್ ಗಳ ಜೊತೆಗೆ *ಗಜಲ್ ಲೋಕದಲೊಂದು ಸುತ್ತು* ಎಂಬ ಸುದೀರ್ಘವಾದ ಲೇಖನ ಸುಮಾರು ೪೦ ಪುಟಗಳಷ್ಟು ಇದ್ದು ಈ ಲೇಖನ ದಲ್ಲಿ ಗಜಲ್ ದ ಇತಿಹಾಸ , ಗಜಲ್ ರಚನೆಯ ನಿಯಮಗಳು, ಗಜಲ್ ರಚನೆ ಮಾಡುವಾಗ ಗಮನಿಸಬೇಕಾದ ಅಂಶಗಳ ಬಗ್ಗೆ , ಗಜಲ್ದ ವಿವಿಧ ಪ್ರಕಾರಗಳ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ. ಈ ಸಂಕಲನವು ಗಜಲ್ ಬರೆಯಲು ಕಲಿಯುವವರಿಗೆ , ಗಜಲ್ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಚ್ಛಿಸುವವರಿಗೆ ಒಳ್ಳೆಯ ಮಾರ್ಗ ದರ್ಶನವನ್ನು ನೀಡುತ್ತದೆ. ಗಜಲ್ ರಚನೆಯಲ್ಲಿ ಎಷ್ಟು ವಿಧಗಳಿವೆ, ಅವುಗಳ ಗುಣಲಕ್ಷಣಗಳನ್ನು ತೋರಿಸುವಲ್ಲಿ ತಮ್ಮ ಗಜಲ್ ಗಳನ್ನು ಉದಾಹರಣೆಗೆ ತೋರಿಸಿದ್ದಾರೆ.
*ಗಾಲಿಬ್ ಸ್ಮೃತಿ* ಸಂಕಲನದಲ್ಲಿ ಮಲ್ಲಿನಾಥ ತಳವಾರ ಅವರು ಮುಸಲ್ ಸಲ್, ಗೈರ್ ಮುಸಲ್ ಸಲ್ ಗಜಲ್, ಮುರದ್ದಫ್ , ಗೈರ್ ಮುರದ್ದಫ್ ಗಜಲ್, ಜುಲ್ ಕಾಫಿಯಾ ಗಜಲ್, ಸಂಪೂರ್ಣ ಮತ್ಲಾ ಗಜಲ್, ಸೆಹ್ ಗಜಲ್ , ತರಹೀ ಗಜಲ್, ಸ್ವರ ಕಾಫಿಯಾ ಗಜಲ್ , ಝೆನ್ ಗಜಲ್… ಹೀಗೆ ಎಲ್ಲಾ ಪ್ರಕಾರದ ಗಜಲ್ ಗಳನ್ನು ಈ ಸಂಕಲನದಲ್ಲಿ ಓದುಗರಿಗೆ ನೀಡಿದ್ದಾರೆ. ಮಲ್ಲಿನಾಥ ಅವರಿಗೆ “ಗಾಲಿಬ್” ನೆಚ್ಚಿನ ಗಜಲ್ ಕವಿಯಾಗಿದ್ದು ಅನೇಕ ಗಜಲ್ ಗಳಿಗೆ ಗಾಲಿಬ್ ಎಂದು ರದೀಪ್ ಮಾಡಿಕೊಂಡು ತಮ್ಮ ನೋವು ನಲಿವುಗಳನ್ನು ಹಂಚಿ, ನೆಮ್ಮದಿಯಾಗಿ ಇದ್ದ ಇವರು “ಮಲ್ಲಿ” ಎಂಬ ತಖಲ್ಲುಸನಾಮದಿಂದ ಎಲ್ಲಾ ವಿಷಯದ ಮೇಲೆ ಗಜಲ್ ಗಳನ್ನು ರಚಿಸಿದ್ದಾರೆ. ಪ್ರೇಮ, ಪ್ರೀತಿ, ವಿರಹ, ಕಾಯುವಿಕೆ, ಸಮಾಜಿಕ ಕಳಕಳಿ, ಆಧ್ಯಾತ್ಮಿಕ, ಹುಡುಕಾಟ, ಎಲ್ಲವನ್ನು ನಾವು ಈ ಕೃತಿಯ ಗಜಲ್ ಗಳಲ್ಲಿ ಕಾಣಬಹುದು. ಮಾತ್ರ ಗಣ ಲೆಕ್ಕ ಇಟ್ಟುಕೊಂಡು ಛಂದೋಬದ್ಧ ವಾಗಿ ಗಜಲ್ ರಚಿಸಿದ್ದಾರೆ. ಆದರೆ ಕೆಲವೊಂದು ಕಡೆ ರದೀಪ್ ಗಳು ಪುರ್ನಬಳಿಕೆಯಾಗಿವೆ. ಅವುಗಳಿಗೆ ಹೊಸ ರದೀಫ್ ಹಾಕಿದ್ದರೆ ಚನ್ನಾಗಿತ್ತು, ಅಥವಾ ರದೀಫ್ ಬಿಟ್ಟರೂ ಬರುತ್ತಿತ್ತು. ಈ ಸಂಕಲನದ ಕೆಲವು ಗಜಲ್ ಗಳನ್ನು ವಾಟ್ಸಪ್ ದಲ್ಲಿ ಓದಿದ ನೆನಪು , ಪ್ರೌಢಿಮೆಯ ಗಜಲ್ ಗಳು, ಓದಿಸಿ ಕೊಂಡು ಹೋಗುತ್ತವೆ.

ಈ ಸಂಕಲನಕ್ಕೆ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಜಿ.ಸುಬ್ರಾಯಭಟ್ ಬಕ್ಕಳ ಅವರು ಮೌಲಿಕವಾದ ಮುನ್ನುಡಿ ಬರೆದಿದ್ದಾರೆ, ಮತ್ತು ಪ್ರೊ.ಡಿ ವಿ ಪರಮಶಿವಮೂತಿ೯, ಪ್ರಾಧ್ಯಾಪಕರು ಮತ್ತು ಡೀನ್ ತುಮಕೂರು ವಿಶ್ವವಿದ್ಯಾಲಯ ಇವರು ಬೆನ್ನುಡಿ ಬರೆದು ಬೆನ್ನು ಚಪ್ಪರಿಸಿದ್ದಾರೆ. ಮುಖ ಪುಟಕ್ಕೆ ಗಾಲಿಬ್ ಅವರ ಮುಖಚಿತ್ರ ಸೊಗಸಾಗಿ ಅರ್ಥ ಪೂರ್ಣವಾಗಿ ಬಂದಿದೆ.

*ನನಗೆ ಇಷ್ಟವಾದ ಕೆಲವು ಗಜಲ್ ಗಳ ಮಿಸ್ರಾಗಳು*

“ಹಸಿಮಾಂಸ ತಿನ್ನುವ ರಣ ಹದ್ದುಗಳ ಪರಪಂಚವಿದು
ಅನ್ನ ತಿನ್ನುವುದನ್ನು ಕಲಿತು ನೆಮ್ಮದಿಯಾಗಿ ಇದ್ದು ಬಿಡು”

“ಕತ್ತಲಾಯಿತೆಂದು ಕಳವಳ ಪಡದಿರು, ಬೆಳಕಾಗುವುದು ಸುಮ್ಮನಿರು
ನಕಾರಾತ್ಮಕ ಚಿಂತನೆ ಮಾಡದಿರು , ಬೆಳಕಾಗುವುದು ಸಮ್ಮನಿರು”

“ಊಸರವಳ್ಳಿಯ ಸಾಮಾಜಿಕ ವ್ಯವಸ್ಥೆ ಯನ್ನು ಧಿಕ್ಕರಿಸಬೇಕಾಗಿದೆ ದೋಸ್ತ
ಸಂಬಂಧಗಳಲ್ಲಿಯ ಹುಳುಕುಗಳನ್ನು ಕಿತ್ತೆಸೆಯಬೇಕಾಗಿದೆ ದೋಸ್ತ”

“ಜನರ ಅಪವಾದಗಳು”ಮಲ್ಲಿ”ಯ ಮನವನ್ನು ಘಾಸಿಗೊಳಿಸುತ್ತಿವೆ
ಸತ್ಯ-ಸುಳ್ಳಿನ ನಡುವಿನ ಕಂದಕ ಒಡೆಯುತ್ತದೆಂದು ಮನಸ್ಸು ಹೇಳುತ್ತಿದೆ”

“ವಿಹಾರಕ್ಕೆಂದು ಕೈ ಕೈ ಹಿಡಿದು ಹೋದದ್ದು ಮರೆತೆಯಾ
ನದಿಯ ದಡದಲ್ಲಿ ಭುಜಕ್ಕೆ ಭುಜ ಹಚ್ಚಿ ಕಲ್ಲೆಸೆದದ್ದು ಮರೆತೆಯಾ”

“ಒಂಟಿಯಾಗಿ ಬಂದ ಈ ದೇಹಕ್ಕೆ ಜಂಟಿಯಾಗುವ ಬಯಕೆಯೇಕೆ
ಬೆತ್ತಲಾಗಿ ಬಂದ ಈ ಶರೀರಕ್ಕೆ ರೇಷ್ಮೆಯ ವಸ್ತ್ರಗಳ ಹಂಗೇಕೆ”.

“ಅನುದಿನವೂ ನಗುತಿರುವೆ ನಾನು ಸಂತೋಷದಿಂದಲ್ಲ ನೋವು ಕಾಣದಿರಲೆಂದು
ಹಗಲಿರಳು ಅಳುತ್ತಿರುವೆನು ನಾನು ಸಂತೈಸಲಿಯೆಂದಲ್ಲ ನೆಮ್ಮದಿ ಕೆಡದಿರಲೆಂದು”

“ಕನಸುಗಳೆಲ್ಲ ಚದುರಿ ಹೋಗಿದ್ದವು ನನ್ನವಳು ಆಗಮಿಸುನತನಕ
ಹಕ್ಕಿಯಂತೆ ಹಾರಾಡುತಿರುವೆ ಅವಳ ಪ್ರೀತಿ ಇರುವ ತನಕ”

“ಭಾವನೆಗಳನ್ನು ಬೇಯಿಸುತಿರುವೆ ಅನುಭವದ ಕುಲುಮೆಯಲ್ಲಿ
ಸಂಬಂಧಗಳೇ ಸೌಧೆಗಳಾಗುತಿವೆ ನಮ್ಮ ಪಾಕ ಗೃಹಗಳಲ್ಲಿ”

“ಈ ದೇಹವನ್ನು ಎಸೆಯದಿರಿ ನೋವಾಗಬಹುದು
ಕಣ್ಣೀರು ಸುರಿಸುತ್ತ ಕೂಡದಿರಿ ನೋವಾಗಬಹುದು”

*ಗಾಲಿಬ್ ಸ್ಮೃತಿ* ಗಜಲ್ ಗುಲ್ದಸ್ಥ ಸಂಕಲನವು ಓದಲು ಮತ್ತು ಸಂಗ್ರಹಿಸಲು ಯೋಗ್ಯವಾಗಿದೆ. ಡಾ.ಮಲ್ಲಿನಾಥ ಎಸ್. ತಳವಾರ ಅವರ ಒಳ್ಳೆಯ ಗಜಲ್ ಸಂಕಲನಗಳು ಪ್ರಕಟವಾಗಿ ಕನ್ನಡಾಂಬೆ ಉಡಿ ತುಂಬಲೆಂದು ಹಾರೈಸುತಾ ನನ್ನ ಬರಹಕ್ಕೆ ವಿರಾಮ ಕೊಡುವೆ.

ಪ್ರಭಾವತಿ ಎಸ್ ದೇಸಾಯಿ ವಿಜಯಪುರ.

Don`t copy text!