ಬಸವಣ್ಣನೆ ಶಿವಪಥಿಕನಯ್ಯ

ಬಸವಣ್ಣನೆ ಶಿವಪಥಿಕನಯ್ಯ

ಬಸವಾ ಬಸವಾ ನಿಮ್ಮಿಂದ
ಕಂಡೆನಯ್ಯಾ ಭಕ್ತಿಯ,
ಬಸವಾ ಬಸವಾ ನಿಮ್ಮಿಂದ
ಕಂಡೆನಯ್ಯಾ ಜ್ಞಾನವ,
ಬಸವಾ ಬಸವಾ ನಿಮ್ಮಿಂದ
ಕಂಡೆನಯ್ಯಾ ವೈರಾಗ್ಯವ ,
ಕರುಣಿ ಕಪಿಲ ಸಿದ್ಧಮಲ್ಲಿನಾಥಯ್ಯಾ ,
ನಿಮಗೂ ನಮಗೂ ಬಸವಣ್ಣನೆ ಶಿವಪಥಿಕನಯ್ಯ –

*ಸಿದ್ಧರಾಮೇಶ್ವರರು*

ವ .ಸ೦ , ೮೧೫ ಪುಟ ೨೩೦ ಸ ವ ಸ೦ -೪

ಸೊನ್ನಲಿಗೆಯ ಸಿದ್ಧರಾಮ ಶರಣರು ಸೊಲ್ಲಾಪುರದಲ್ಲಿ ಸ್ಥಾವರ ಸಿದ್ಧಪರ೦ಪರೆಯ ಸ್ಥಾವರ ಪೂಜಕರು ಮತ್ತು ಜನ ಹಿತಕ್ಕೆ ಕೆರೆ ಬಾವಿಗಳ ಕಟ್ಟಡಕ್ಕೆ ನಿಲ್ಲುವ ದಿಟ್ಟ ಸಾಧಕರು.ಇವರು ಕಲ್ಯಾಣಕ್ಕೆ ಅನುಭಾವಿ ಅಲ್ಲಮರಿಂದ ಪ್ರವೇಶಿಸುವಂತಾಯಿತು . ಆದರೆ ಅಲ್ಲಮರ ಆಗಮನಕ್ಕಿಂತಲೂ ಪೂರ್ವದಲ್ಲಿ ಅಪ್ಪ ಬಸವಣ್ಣ ಸಿದ್ಧರಾಮನವರನ್ನು ಕಲ್ಯಾಣಕ್ಕೆ ಕರೆತರುವ ಪ್ರಯತ್ನ ಮಾಡಿದ್ದಾರೆ,ಅವರನ್ನು ಕರೆಯುವ ನೆಪದಲ್ಲಿ ಜರೆದಿದ್ದಾರೆ.ಆದರೆ ಅವರಿಗೆ ಅರಿವಿನ ಜ್ಞಾನೋದಯವಾದಾಗ ,ಅವರು ಅನಿವಾರ್ಯವಾಗಿ ಅಲ್ಲಮರನ್ನು ಹಿಂಬಾಲಿಸುತ್ತಾರೆ . ಆದರೆ ಬಸವಣ್ಣ ಸಿದ್ದರಾಮರಿಗೆ ಪರಮಾರಾಧ್ಯ ದೈವ . ಅದನ್ನೆ ಈ ವಚನದಲ್ಲಿ ಅವರು ಹೇಳಿಕೊಂಡಿದ್ದಾರೆ.ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯಾ ಭಕ್ತಿಯ-ಭಕ್ತಿ ಎಂಬುದನ್ನು ನಾನು ಬಸವಣ್ಣನವರಿಂದಾ ಕಂಡೆ ,ಅವರ ಭಕ್ತಿಯ ಸರಳತೆ ,ಸಾಮಾಜಿಕ ಕಳಕಳಿ ,ಸಮಾಜವನ್ನೆ ಜಂಗಮವೆಂದು ಭಾವಿಸಿ ನಡೆದುಕೊಳ್ಳುವ ಆದರಣಿಯರು ಎಂದು ಸಿದ್ದರಾಮರ ಅಭಿಮತ . ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯಾ ಜ್ಞಾನವ -ಬಸವಣ್ಣ ಜ್ಞಾನವು ಅರ್ಥಪೂರ್ಣವಾದದ್ದು ,ಧರ್ಮದ ಪರಿಕಲ್ಪನೆಯನ್ನು ಶ್ರೀಸಾಮಾನ್ಯನಿಗೂ ಮುಟ್ಟಿಸುವ ಕಾರ್ಯ ದೊಡ್ಡದು.ಜ್ಯೋತಿಯಿಂದ ಜ್ಯೋತಿಗೆ ಜ್ಞಾನ ಹಚ್ಚಿದ ಅಪ್ಪ ಬಸವಣ್ಣನವರ ಜ್ಞಾನವೇ ನಿಜವಾದ ಜ್ಞಾನ . ಬಸವಾ ಬಸವಾ ನಿಮ್ಮಿಂದ ಕಂಡೆನಯ್ಯಾ ವೈರಾಗ್ಯವ ,-ಬಸವಣ್ಣ ಬಳಸಿ ಬ್ರಹ್ಮಚಾರಿ ಎಂಬ ವಿಚಾರವನ್ನು ಅಲ್ಲಮಾದಿ ಶರಣರು ಹೇಳುತ್ತಾರೆ.ಕಲ್ಯಾಣದ ಪ್ರಧಾನಿ ಅರ್ಥ ಸಚಿವ ,ರಾಜನ ಆಪ್ತ ಮಿತ್ರ ಆದರೂ ಶ್ರೀಸಾಮಾನ್ಯನ ಜೊತೆ ಬೆರೆತು ಕ್ರಾಂತಿಯ ಕಿಡಿ ಹಚ್ಚಿ ಸಮಾಜ ಪರಿವರ್ತನೆಗೆ ಮುಂದಾದ ಬಸವಣ್ಣನವರು ಶ್ರೇಷ್ಟ ಕುಲದಲ್ಲಿ ಹುಟ್ಟಿದ್ದರೂ ತೊರೆದು ದಲಿತರ ಸೇವೆಗೆ ನಿಂತ ವೈರಾಗ್ಯಿ -ಇಂತಹ ಶ್ರೇಷ್ಟ ದಿಮಂಥ ನಾಯಕ ಬಸವಣ್ಣ ತನಗೂ ತನ್ನ ಆರಾಧ್ಯ ದೈವಕ್ಕೂ ಶಿವಪಥಿಕ *path finder* ತನಗೂ ತನ್ನ ಆರಾಧ್ಯ ದೈವಕ್ಕೂ ಬಸವಣ್ಣನೆ ಮಾರ್ಗದರ್ಶಕ ಎಂದು ಹೆಮ್ಮೆಯ ನುಡಿ ಆಡಿದ್ದಾರೆ ಸಿದ್ಧರಾಮೇಶ್ವರರು.

-ಡಾ ಶಶಿಕಾಂತ .ಪಟ್ಟಣ-ರಾಮದುರ್ಗ -ಪೂನಾ

Don`t copy text!